ನೀರವ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಯಾದರೆ ಏನಾಗಬಹುದು?

ವಜ್ರ ಉದ್ಯಮಿ ಹಲವು ಪಾಸ್‌ಪೋರ್ಟ್‌ ಬಳಸಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸಂಚರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ಹಾಗೂ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ಈ ಕುರಿತು ‘ದಿ ಕ್ವಿಂಟ್’ ಪ್ರಕಟಿಸಿರುವ ವರದಿಯ ಭಾವಾನುವಾದ

ರದ್ದಾದ ಪಾಸ್‌ಪೋರ್ಟ್ ಬಳಸಿ ವಜ್ರ ಉದ್ಯಮಿ ನೀರವ್ ಮೋದಿ ಹಲವು ದೇಶಗಳಿಗೆ ಪಯಣಿಸಿದ್ದು ಹೇಗೆ ಎಂಬುದನ್ನು ಚರ್ಚಿಸಲು ಶುಕ್ರವಾರ ವಿದೇಶಾಂಗ ಸಚಿವಾಲಯದ ನೇತೃತ್ವದಲ್ಲಿ ಜಾರಿ ನಿರ್ದೇಶನಾಲಯ, ಸಿಬಿಐ ಹಾಗೂ ವಲಸೆ ಅಧಿಕಾರಿಗಳ ಸಭೆ ಕರೆಯಲಾಗಿತ್ತು. ಇಂಟರ್ ಪೋಲ್ ಅನ್ನು ಪ್ರತಿನಿಧಿಸುತ್ತಿರುವ ಭಾರತೀಯ ಸಂಸ್ಥೆ ಸಿಬಿಐ. ಪಾಸ್‌ಪೋರ್ಟ್ ರದ್ದಾದ ಬಳಿಕ ಮೋದಿ ಎಲ್ಲಿದ್ದಾರೆ ಎಂಬುದನ್ನು ಪತ್ತೆ ಮಾಡಲು ಸ್ಟಾಂಡರ್ಡ್ ಆಪರೇಟಿಂಗ್ ವ್ಯವಸ್ಥೆಯನ್ನು (ಎಸ್ ಒಪಿ) ಬಳಸಿಕೊಳ್ಳಲಾಯಿತು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮನಪ್ರೀತ್ ವೋಹ್ರಾ ಅವರಿಗೆ ಸಿಬಿಐನ ಇಂಟರ್ ಪೋಲ್ ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟರು.

ಸಭೆ ಕುರಿತು ‘ದಿ ಕ್ವಿಂಟ್’ ಜಾಲತಾಣದೊಂದಿಗೆ ಅನಿಸಿಕೆ ಹಂಚಿಕೊಂಡಿರುವ ಮಾಜಿ ರಾಯಭಾರಿ ಅನಿಲ್ ತ್ರಿಗುಣಯತ್, “ಎಲ್ಲಿ ಮೋದಿ ಅಡಗಿರಬಹುದೆಂದು ತನಿಖಾ ಸಂಸ್ಥೆ ಶಂಕೆ ವ್ಯಕ್ತಪಡಿಸುತ್ತದೆಯೋ ಆ ದೇಶಗಳಿಗೆ ರಾಜತಾಂತ್ರಿಕ ಮಾರ್ಗದ ಮೂಲಕ ತಿಳಿಸುವುದು ವಿದೇಶಾಂಗ ಸಚಿವಾಲಯದ ಜವಾಬ್ದಾರಿ,” ಎಂದು ಹೇಳಿದ್ದಾರೆ. (ಮೋದಿ ಅಡಗಿರಬಹುದು ಎಂದು ಸಿಬಿಐ ಅನುಮಾನ ವ್ಯಕ್ತಪಡಿಸಿರುವ ಆರು ದೇಶಗಳ ರಾಯಭಾರಿ ಕಚೇರಿಗಳಿಗೆ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆಯೇ ಎಂದು ದಿ ಕ್ವಿಂಟ್ ಸಚಿವಾಲಯದ ಅಧಿಕಾರಿಯೊಬ್ಬರನ್ನು ಪ್ರಶ್ನಿಸಿದ್ದು ಈ ಬಗ್ಗೆ ಇನ್ನೂ ಪ್ರತಿಕ್ರಿಯೆ ಲಭಿಸಿಲ್ಲ.)

“ಪಾಸ್‌ಪೋರ್ಟ್ ರದ್ದತಿ ಕುರಿತಂತೆ ನಮ್ಮ ಅಧಿಕಾರಿಗಳು ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ಮಾಹಿತಿ ವಿನಿಮಯ ಮಾಡಿಕೊಂಡಿದ್ದಾರೆ. ಮೋದಿ ಅವಿತುಕೊಂಡಿರಬಹುದಾದ ಆರು ದೇಶಗಳಿಗೆ ಅನೇಕ ಬಾರಿ ಪತ್ರ ಬರೆದಿರುವುದನ್ನು ಸಚಿವಾಲಯದ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಸಚಿವಾಲಯದ ಶುಕ್ರವಾರದ ಸಭೆಯಲ್ಲಿ ಸಿಬಿಐ ಏನೇನು ಕ್ರಮ ಕೈಗೊಂಡಿದೆ ಎಂಬುದಷ್ಟೇ ಚರ್ಚೆಯಾಯಿತು. ಆದರೆ ಈ ನಿಟ್ಟಿನಲ್ಲಿ ಸಚಿವಾಲಯ ಏನು ಮಾಡಿದೆ ಎಂದು ಸಿಬಿಐ ಪ್ರಶ್ನಿಸಿದಾಗ ಸಚಿವಾಲಯದ ಅಧಿಕಾರಿಗಳು ನುಣುಚಿಕೊಂಡರು,” ಎಂದು ಸಿಬಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೋದಿಯನ್ನು ವಾಪಸ್ ಕರೆಸಿಕೊಳ್ಳಲು ಏನು ಮಾಡಬೇಕಿತ್ತೋ ಅದನ್ನು ಮಾಡದೆ ಸಿಬಿಐ ಮತ್ತು ವಿದೇಶಾಂಗ ಸಚಿವಾಲಯ ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿವೆ ಎಂಬುದಂತೂ ಇದರಿಂದ ಸ್ಪಷ್ಟ. “ಸಂಬಂಧಪಟ್ಟ ದೇಶಗಳ ಇಂಟರ್ ಪೋಲ್ ಅಧಿಕಾರಿಗಳೊಂದಿಗೆ ಸಿಬಿಐ ಅಗತ್ಯ ಸಹಕಾರ ನೀಡಬಹುದಷ್ಟೇ. ಅದರಾಚೆಗೆ ಏನೂ ಸಾಧ್ಯವಿಲ್ಲ. ವಿದೇಶಾಂಗ ಸಚಿವಾಲಯ ರಾಜತಾಂತ್ರಿಕವಾಗಿ ಒತ್ತಡ ಹೇರಿದರಷ್ಟೇ ಮೋದಿಯನ್ನು ಹುಡುಕಲು ಸಾಧ್ಯ,” ಎಂದು ಆ ಅಧಿಕಾರಿ ಹೇಳಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಪಾಸ್‌ಪೋರ್ಟ್ ನೀತಿಯಲ್ಲಿ ಬದಲಾವಣೆ ತರಲು ಕೂಡ ಸಭೆ ನಿರ್ಧರಿಸಿತು.

ಮೋದಿ ಅಡಗಿರುವುದೆಲ್ಲಿ ಎಂಬುದರ ಬಗ್ಗೆ ಈವರೆಗೆ ಯಾವ ಸಂಸ್ಥೆಗಳಿಗೂ ಸುಳಿವು ದೊರೆತಿಲ್ಲ. ಇಂಟರ್ ಪೋಲ್ ಇನ್ನಷ್ಟೇ ಜಾರಿ ಮಾಡಬೇಕಿರುವ ರೆಡ್ ಕಾರ್ನರ್ ನೋಟಿಸನ್ನೇ (ಆರ್‌ಸಿಎನ್) ಈ ಸಂಸ್ಥೆಗಳು ನೆಚ್ಚಿಕೊಂಡಿರುವಂತಿದೆ. ಒಂದು ವೇಳೆ ಆರ್‌ಸಿಎನ್ ಜಾರಿಯಾದರೆ ಎಂತಹ ಬೆಳವಣಿಗೆಗಳು ನಡೆಯಬಹುದು ಎಂಬುದರ ಬಗ್ಗೆ ಚರ್ಚೆ ಇಲ್ಲಿದೆ:

ಇದನ್ನೂ ಓದಿ : ಬಯಲಾಗುತ್ತಿವೆ ಮತ್ತಷ್ಟು ‘ನೀರವ್ ಮೋದಿ- ಚೊಕ್ಸಿ ಮಾದರಿ’ ವಂಚನೆಗಳು! 

ಮೋದಿ ವಿರುದ್ಧ ಇನ್ನೂ ಆರ್‌ಸಿಎನ್ ಯಾಕೆ ಜಾರಿ ಮಾಡಿಲ್ಲ?

ಆರೋಪಿ ವಿರುದ್ಧ ತನಿಖಾ ಸಂಸ್ಥೆ ಆರೋಪಪಟ್ಟಿ ಸಲ್ಲಿಸಿದ ಬಳಿಕವಷ್ಟೇ ಆರ್ ಸಿ ಎನ್ ಜಾರಿ ಮಾಡುವುದು ಸಾಧ್ಯ. 2017ರ ಮೇ ತಿಂಗಳಿನಲ್ಲೇ ಸಿಬಿಐ ಆರೋಪಪಟ್ಟಿ ಸಲ್ಲಿಸಿದೆ. ಈ ಬಗ್ಗೆ ಇಂಟರ್ ಪೋಲ್ ಗೆ ಕೂಡ ಮಾಹಿತಿ ನೀಡಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಆರ್ ಸಿ ಎನ್ ಜಾರಿಯಾಗಬಹುದು ಎಂಬ ನಂಬಿಕೆ ಸಿಬಿಐ ಅಧಿಕಾರಿಗಳದು.

ಆರ್‌ಸಿಎನ್ ಜಾರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಿಬಿಐ ಯಾಕೆ ಈ ಮೊದಲೇ ಆರೋಪಪಟ್ಟಿ ಸಲ್ಲಿಸಲಿಲ್ಲ?

ಸಿಬಿಐಗೆ ಆರೋಪಪಟ್ಟಿ ಸಲ್ಲಿಸಲು ಮೂರೂವರೆ ತಿಂಗಳು ಹಿಡಿಯಿತು. ಕ್ವಿಂಟ್ ನೊಂದಿಗೆ ಮಾತನಾಡಿದ ತನಿಖಾ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದಂತೆ, “ಸಾಕ್ಷಿಗಳು ನೀಡುವ ಹೇಳಿಕೆ, ಆರೋಪಿಗಳ ಹೇಳಿಕೆಗಳನ್ನು ದಾಖಲಿಸಲು, ಸಂಬಂಧ ಪುಟ್ಟ ಪುರಾವೆಗಳನ್ನು, ದಾಖಲೆಗಳನ್ನು ಸಂಗ್ರಹಿಸಲು ಕಾಲಾವಕಾಶದ ಅಗತ್ಯವಿರುವುದರಿಂದ ಆರೋಪಪಟ್ಟಿ ಸಲ್ಲಿಸಲು ದೀರ್ಘ ಸಮಯ ಹಿಡಿಯುತ್ತದೆ. ಪ್ರಕರಣದ ತನಿಖೆ ನಡೆಸುತ್ತಿರುವವರು ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದು ಎಷ್ಟು ಸಾಧ್ಯವೋ ಅಷ್ಟು ಬೇಗ ಆರೋಪಪಟ್ಟಿ ಸಲ್ಲಿಸಿದ್ದಾರೆ.”

ಆರ್‌ಸಿಎನ್ ಜಾರಿಯಾದ ಮೇಲೆ ಏನಾಗುತ್ತದೆ?

ರೆಡ್ ಕಾರ್ನರ್ ನೋಟಿಸ್ ಜಾರಿಯಾಗುತ್ತಿದ್ದಂತೆ ಸಂಬಂಧಿತ ದೇಶಗಳ ಪ್ರತಿನಿಧಿ ಸಂಸ್ಥೆಗಳಿಗೆ ಇಂಟರ್ ಪೋಲ್ ಸಂದೇಶ ರವಾನಿಸುತ್ತದೆ. ಪ್ರತಿನಿಧಿ ತನಿಖಾ ಸಂಸ್ಥೆಗಳು ವಲಸೆ ಅಧಿಕಾರಿಗಳಿಗೆ ಮಾಹಿತಿ ನೀಡುತ್ತವೆ. ವಲಸೆ ಅಧಿಕಾರಿಗಳು ಮೋದಿ ಮತ್ತು ಸಂಬಂಧಿ ಮೆಹುಲ್ ಚೋಕ್ಸಿಯ ಪ್ರಯಾಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ದಾಖಲಾಗಿರುವ ಪಾಸ್ಪೋರ್ಟ್ ಮಾಹಿತಿಯನ್ನು ಪಡೆಯುತ್ತಾರೆ. ಉದಾ: ಮೋದಿ ಇಂಗ್ಲೆಂಡಿನಲ್ಲಿದ್ದರೆ ಪಾಸ್ಪೋರ್ಟ್ ಆಧರಿಸಿ ವಲಸೆ ಅಧಿಕಾರಿಗಳು ಮೋದಿಯ ಸ್ಥಳೀಯ ವಿಳಾಸವನ್ನು ಪತ್ತೆ ಹಚ್ಚುತ್ತಾರೆ. ನಂತರ ಆತನನ್ನು ವಶಪಡಿಸಿಕೊಳ್ಳುವುದು ಸುಲಭವಾಗುತ್ತದೆ. ಇದೇ ಹೊತ್ತಿನಲ್ಲಿ ಮೋದಿ ಕಡೆಯ ಬಾರಿ ತಂಗಿದ್ದೆಲ್ಲಿ ಎಂಬ ವಿಚಾರವನ್ನೂ ವಲಸೆ ಅಧಿಕಾರಿಗಳು ಭಾರತದೊಂದಿಗೆ ಹಂಚಿಕೊಳ್ಳುತ್ತಾರೆ.

ಮೋದಿ ಮತ್ತು ಚೋಕ್ಸಿ ಯಾವುದಾದರೂ ದೇಶದಲ್ಲಿ ಪತ್ತೆಯಾಗುತ್ತಿದ್ದಂತೆ ಏನಾಗುತ್ತದೆ?

ಹಾಗಾಗುತ್ತಿದ್ದಂತೆ ಇಬ್ಬರನ್ನೂ ಬಂಧಿಸಿದ 24 ಗಂಟೆಯೊಳಗೆ ಕೋರ್ಟಿಗೆ ಹಾಜರುಪಡಿಸಲಾಗುತ್ತದೆ. ಕೋರ್ಟ್ ಅವರಿಗೆ ಜಾಮೀನು ಕೂಡ ನೀಡಬಹುದು. ನಂತರ ಭಾರತಕ್ಕೆ ಪತ್ರ ಬರೆದು 30 ದಿನದೊಳಗೆ ಹಸ್ತಾಂತರ ಕುರಿತು ಅರ್ಜಿ ಸಲ್ಲಿಸುವಂತೆ ಕೋರ್ಟ್ ಸೂಚಿಸುತ್ತದೆ. ಮೋದಿ ಮತ್ತು ಚೋಕ್ಸಿ ಹಸ್ತಾಂತರಕ್ಕೆ ಕಾರಣವೇನು ಎಂಬುದನ್ನು ಭಾರತ ನ್ಯಾಯಾಲಯದ ಮುಂದೆ ಬಲವಾಗಿ ಪ್ರತಿಪಾದಿಸಬೇಕು. ಅಗತ್ಯವಾದ ದಾಖಲೆಗಳನ್ನು ನೀಡಬೇಕು.

ಹಸ್ತಾಂತರ ಪ್ರಕ್ರಿಯೆಗೆ ಎಷ್ಟು ಸಮಯ ಹಿಡಿಯುತ್ತದೆ?

ಎರಡೂ ಕಡೆಯ ವಾದಗಳನ್ನು ಆಲಿಸಿದ ಬಳಿಕ ಆ ದೇಶದ ಕೋರ್ಟ್ ಹಸ್ತಾಂತರಿಸುವುದೇ ಬೇಡವೇ ಎಂಬುದರ ಬಗ್ಗೆ ತೀರ್ಪು ನೀಡುತ್ತದೆ. ವಿಚಾರಣೆ ತಿಂಗಳುಗಳ ಕಾಲ ಕೆಲವೊಮ್ಮೆ ವರ್ಷಗಳ ಕಾಲ ಹಿಡಿಯಬಹುದು. ಮಾರ್ಚ್ 2016ರಲ್ಲಿ ಪಲಾಯನ ಮಾಡಿದ ಉದ್ಯಮಿ ವಿಜಯ್ ಮಲ್ಯ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಕಳೆದ ಎರಡು ವರ್ಷಗಳಿಂದ ಇಂಗ್ಲೆಂಡ್ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More