ಟೈಗರ್ ಗ್ಯಾಂಗ್‌| ಕಂತು 2| ಪೊಲೀಸರು ಬೆನ್ನತ್ತಿದ್ದು ಒಂದು ಕೊಲೆ, ತೆರೆದುಕೊಂಡದ್ದು 7 ಕೊಲೆ!

ಉತ್ತರ ಕರ್ನಾಟಕದಲ್ಲಿ ಈವರೆಗೂ ನಡೆದ ನಿರ್ದಯ ಅಪರಾಧಗಳಿಗೆ ಬಡತನ, ನಿರುದ್ಯೋಗ ಹಾಗೂ ರಾಜಕೀಯ ದ್ವೇಷದ ಹಿನ್ನೆಲೆ ಇರುತ್ತಿತ್ತು. ಆದರೆ, ಟೈಗರ್‌ ಗ್ಯಾಂಗ್‌ ಎಸಗಿದ ಅಪರಾಧಗಳ ಹಿಂದೆ ಕೆಲಸ ಮಾಡಿದ್ದು ತೀವ್ರಗಾಮಿ ಮತೀಯವಾದ. ಇದು ಪೋಲಿಸರನ್ನು ಬೆಚ್ಚಿಬೀಳುವಂತೆ ಮಾಡಿತ್ತು

2008ರ ಅ.‌29; ದೀಪಾವಳಿ ದಿನದಂದು ಶ್ರೀಮಂತ ವ್ಯಾಪಾರಿ ಕಿರಣ್ ಕುಮಟಗಿ ಹತ್ಯೆಯಿಂದ ಬಾಗಲಕೋಟೆ ಪೋಲಿಸರು ತೀವ್ರ ಒತ್ತಡಕ್ಕೆ ಒಳಗಾದರು. ಪಾತಕಿಗಳ ಜಾಡು ಹಿಡಿದು ಹೊರಟ ರವೀಂದ್ರ ಶಿರೂರ್‌ ಹಾಗೂ ಮಲ್ಲಿಕಾರ್ಜುನ‌ ತುಳಸಿಗೇರಿ ನೇತೃತ್ವದ ತಂಡ ಒಂಬತ್ತು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು. ಡಿವೈಎಸ್ಪಿ ರವೀಂದ್ರ ಶಿರೂರ್‌ ನೇತೃತ್ವದಲ್ಲಿ ಆರೋಪಿಗಳ ತನಿಖೆ ಆರಂಭಿಸಲಾಯಿತು. ಸೆರೆ ಸಿಕ್ಕವರೆಲ್ಲರೂ 25ರ ಆಸುಪಾಸಿನ ಯುವಕರು. ದುಡ್ಡು ಮಾಡುವ ಇರಾದೆಯಿಂದ ಆ ಯುವಕರು ಉದ್ಯಮಿಯ ಕೊಲೆ ಮಾಡಿರಬಹುದೆಂದು ತನಿಖಾ ತಂಡ ಊಹಿಸಿತ್ತು. ತನಿಖೆ ಮುಂದೆ ಸಾಗುತ್ತಿದ್ದಂತೆ ಪೋಲಿಸರ ಊಹೆಗೂ ನಿಲುಕದ ಸತ್ಯಗಳು ಬಯಲಾಗತೊಡಗಿದವು. ಉತ್ತರ ಕರ್ನಾಟಕದಲ್ಲಿ ಈವರೆಗೂ ನಡೆದ ನಿರ್ದಯ ಅಪರಾಧಗಳಿಗೆ ಬಡತನ, ನಿರುದ್ಯೋಗ ಹಾಗೂ ರಾಜಕಾರಣದ ಹಿನ್ನೆಲೆ ಇರುತ್ತಿತ್ತು. ಆದರೆ, ಈ ಯುವಕರು ಎಸಗಿದ ಅಪರಾಧಗಳ ಹಿಂದೆ ಕೆಲಸ ಮಾಡಿದ್ದು ತೀವ್ರಗಾಮಿ ಮತೀಯವಾದ. ಇದು ಪೋಲಿಸರನ್ನು ಬೆಚ್ಚಿಬೀಳುವಂತೆ ಮಾಡಿತು.

“ಉದ್ಯಮಿ ಕುಮಟಗಿ ಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಯುವಕರು ಬಡ ಕುಟುಂಬದಿಂದ ಬಂದವರು. ಮೇಲಾಗಿ ನಿರುದ್ಯೋಗಿಗಳು. ಹೆಚ್ಚು ಓದಿಕೊಂಡವರಲ್ಲ. ಗೋಕಾಕ, ಬಾಗಲಕೋಟೆ, ಇಂಡಿ ಮೂಲದ ಹುಡುಗರು ತಂಡವೊಂದನ್ನು ರಚಿಸಿಕೊಂಡಿದ್ದರು. ಅದಕ್ಕೆ ‘ಟೈಗರ್‌ ಗ್ಯಾಂಗ್’‌ ಎಂದು ಹೆಸರಿಟ್ಟಿದ್ದರು,” ಎಂದು ಆ ಸಂದರ್ಭವನ್ನು ನೆನೆಯುತ್ತ ಮಾತು ಆರಂಭಿಸಿದವರು ತನಿಖಾ ತಂಡದ ಮುಖ್ಯಸ್ಥ ರವೀಂದ್ರ ಶಿರೂರ್‌.

ಟೈಗರ್‌ ಗ್ಯಾಂಗ್…‌! ಏನಿದು? ಇದೊಂದು ಪ್ರಶ್ನೆ ಪೋಲಿಸರ ತನಿಖೆಯ ದಿಕ್ಕನ್ನೇ ಬದಲಿಸಿತು. ತನಿಖೆಯನ್ನು ತೀವ್ರಗೊಳಿಸಿದ ಪೋಲಿಸರಿಗೆ ಆರೋಪಿಗಳಿಂದ ಪದೇಪದೇ ಕೇಳಿಬಂದಿದ್ದು ಹಿಂದೂ ರಾಷ್ಟ್ರ, ಹಿಂದುತ್ವ ಮತ್ತು ಶಂಕಿತ ಸಿಮಿ ಉಗ್ರರ ಹತ್ಯೆ.

“ಹಿಂದೂ ರಾಷ್ಟ್ರ ಆ ಹುಡುಗರ ಮೂಲ ಉದ್ದೇಶವಾಗಿತ್ತು. ಬೀಳಗಿ ಮೂಲದ ನಾಗರಾಜ ಜಂಬಗಿ ಆ ಹಿಂದೆ ಶ್ರೀರಾಮ ಸೇನೆಯ ಕಾರ್ಯಕರ್ತನಾಗಿದ್ದವನು. ಅವನು ಟೈಗರ್‌ ಗ್ಯಾಂಗ್‌ ಲೀಡರ್‌. ಇವನಿಗೆ ಜೊತೆಯಾದವನು ಬೀಳಗಿಯ ಶ್ರೀರಾಮ ಸೇನೆಯ ಮತ್ತೊಬ್ಬ ಕಾರ್ಯಕರ್ತ ಲಿಂಗರಾಜ ಜಲಗಾರ. ಕೆಲವೇ ದಿನಗಳಲ್ಲಿ ಬಜರಂಗದಳ ಹಾಗೂ ಶ್ರೀರಾಮ ಸೇನೆಯಲ್ಲಿ ಕ್ರಿಯಾಶೀಲರಾಗಿದ್ದ ಮರಾಠ ಸಮುದಾಯಕ್ಕೆ ಸೇರಿದ ಬಾಗಲಕೋಟೆ ಮೂಲದ ರಮೇಶ್‌ ಪವಾರ್‌, ದೀಪಕ್ ಗೋವಿಂದಕರ್‌, ಬಸವರಾಜ್‌ ಡಿಗ್ಗಿ ಎಂಬುವವರು ನಾಗರಾಜ ಜಂಬಗಿಯನ್ನು ಸೇರಿಕೊಂಡರು. ಆ ಗುಂಪಿಗೆ ಸೇರ್ಪಡೆಯಾದ ಮತ್ತೊಬ್ಬನ ಹೆಸರು ಬಸವರಾಜ ರೂಗಿ, ಗೋಕಾಕ ಮೂಲದವನು. ಟೈಗರ್‌ ಗ್ಯಾಂಗ್‌ ಹೆಸರಿನ ಗುಂಪು ಹುಟ್ಟುಕೊಂಡಿದ್ದು ಗೋಕಾಕದಲ್ಲಿ. ಆ ಗುಂಪಿನ ಅವತ್ತಿನ ಉದ್ದೇಶ ಹುಬ್ಬಳ್ಳಿಯಲ್ಲಿ ನ್ಯಾಯಾಲದದಲ್ಲಿ ವಿಚಾರಣೆಗೆ ಒಳಪಡಬೇಕಿದ್ದ ಶಂಕಿತ ಸಿಮಿ ಉಗ್ರರನ್ನು ಕೊಲ್ಲುವುದಾಗಿತ್ತು,” ಎಂದು ಹೇಳಿ ದಶಕದ ಹಿಂದಿನ ನೆನಪುಗಳನ್ನು ಮತ್ತೆ ಮೆಲುಕು ಹಾಕಿದ್ದು ತನಿಖಾಧಿಕಾರಿ ರವೀಂದ್ರ ಶಿರೂರ್‌.

ಒಂದು ಕೊಲೆಯಿಂದ ಶುರುವಾದ ತನಿಖೆ ಮತ್ತೆರಡು ಕೊಲೆಗಳತ್ತ ಹೊರಳಿತು. ಹಿಂದೆ, ಬಾಗಲಕೋಟೆಯಲ್ಲಿ ರಾಟೆ ದಂಪತಿಗಳ ಹತ್ಯೆಗೈದು, ಮನೆ ದರೋಡೆ ಮಾಡಿತ್ತು ಟೈಗರ್‌ ಗ್ಯಾಂಗ್‌. ತನಿಖೆ ಬೇರೆ-ಬೇರೆ ದಿಕ್ಕುಗಳಿಗೆ ತೆರೆದುಕೊಳ್ಳುತ್ತಲೇ ಸಾಗಿತು. ನಾಗರಾಜ ಜಂಬಗಿಗೆ ಜೊತೆಯಾದ ಗೋಕಾಕದ ಬಸವರಾಜ್‌ ರೂಗಿ ಈ ಹಿಂದೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದ್ದ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದವನು. ಟೈಗರ್‌ ಗ್ಯಾಂಗ್‌ ತನಿಖೆಯಿಂದ ಬಯಲಾಗಿದ್ದು ಏಳು ಕೊಲೆ ಮತ್ತು ಹಲವು ದರೋಡೆ ಪ್ರಕರಣಗಳು.

“ಶಂಕಿತ ಸಿಮಿ ಉಗ್ರರನ್ನು ಕೊಲ್ಲಲು ಬಾಂಬ್‌ ಖರೀದಿಸಬೇಕು. ಅದಕ್ಕೆ ಹಣ ಹೊಂದಿಸಬೇಕು. ಇಂತಹ ಕೃತ್ಯಕ್ಕೆ ಹಣ ಬೇಕೆಂದು ಯಾರನ್ನು ಕೇಳಿದರೂ ಪ್ರಯೋಜನವಿಲ್ಲವೆಂದು ಹುಡುಗರಿಗೆ ಮನವರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಆರಿಸಿಕೊಂಡಿದ್ದು ಪಾತಕದ ಹಾದಿಯನ್ನು. ತೀರಾ ವೃದ್ಧ ದಂಪತಿಗಳನ್ನು ಕೊಂದು ಹಣ, ಒಡವೆಗಳನ್ನು ಕದ್ದರು. ವಿಜಯಪುರದಿಂದ ತನ್ನ ಕಾರಿನಲ್ಲಿ ಬಾಗಲಕೋಟೆಗೆ ಬರುತ್ತಿದ್ದ ಉದ್ಯಮಿಯನ್ನು ಬೆನ್ನಟ್ಟಿ ನಡುರಸ್ತೆಯಲ್ಲೇ ಹತ್ಯೆಗೈದು ದುಡ್ಡು ದೋಚಿದರು. ಬಾಂಬ್‌ ಖರೀದಿಸಲು ಇಂಡಿಗೆ ಹೋದಾಗ, ನಾಗರಾಜ ಜಂಬಗಿಗೆ ಸಿಕ್ಕವನು ಹನುಮಂತ ಸೈನಸಾಕಳಿ. ಡಿಪ್ಲೊಮಾ ಓದಿಕೊಂಡಿದ್ದ ಹುಡುಗ. ಹಿಂದೂಪರ ನಿಲುವು ಹೊಂದಿದ್ದವನು. ಬಾಂಬ್‌ ತಯಾರಿಕೆಯಲ್ಲಿ ಪರಿಣತಿ ಹೊಂದಿದವನು,” ಎಂದು ಪೋಲಿಸ್‌ ಅಧಿಕಾರಿ ರವೀಂದ್ರ ಶಿರೂರ್ ವಿವರಿಸಿದರು‌.

ಇವತ್ತು ಗೌರಿ ಹತ್ಯೆಯಲ್ಲಿ ಸೆರೆಸಿಕ್ಕ ಪ್ರಮುಖ ಆರೋಪಿ ಪರುಶುರಾಮ ವಾಗ್ಮೋರೆ ಭೀಮಾ ತೀರದವನು. ಅವತ್ತು ಟೈಗರ್‌ ಗ್ಯಾಂಗ್‌ಗೆ ಜೊತೆಯಾದ ಹನುಮಂತ ಸೈನಸಾಕಳಿ ಎಂಬ ಇಪ್ಪತ್ತೆರಡು ವರ್ಷದ ಹುಡುಗ ಸಹ ಅಲ್ಲಿಯವನೇ ಎಂಬುದನ್ನು ಇಲ್ಲಿ ಗಮನಿಸಿಬಹುದು.

ಟೈಗರ್‌ ಗ್ಯಾಂಗ್‌ ಈ ಹಿಂದೆ ಎಸಗಿದ ಅಪರಾಧ ಕೃತ್ಯಗಳು ಮತ್ತು ಅವುಗಳ ಹಿಂದಿನ ಉದ್ದೇಶ ಹೊರಬೀಳುತ್ತಿದ್ದಂತೆ ಡಿವೈಎಸ್‌ಪಿ ರವೀಂದ್ರ ಶಿರೂರ್‌ ಹಾಗೂ ಮಂಜುನಾಥ ತುಳಿಸಿಗೇರಿಯವರಿಗೆ ತನಿಖೆ ತೀವ್ರಗೊಳಿಸಲು ಆದೇಶಿಸಿದ್ದು ಐಜಿಪಿ ರಾಘವೇಂದ್ರ ಔರಾದ್‌ಕರ್‌.

ರಾಘವೇಂದ್ರ ಔರಾದ್ಕರ್‌ ಅವರ ಪ್ರಕಾರ, “ಟೈಗರ್‌ ಗ್ಯಾಂಗ್‌ ಸದಸ್ಯರು ಶ್ರೀರಾಮ ಸೇನೆಯಲ್ಲಿ ಸಕ್ರಿಯರಾಗಿದ್ದವರು. ಅವರಿಗೂ ಮತ್ತು ಶ್ರೀರಾಮ ಸೇನೆ ಮುಖಂಡರ ನಡುವೆ ಬಿನ್ನಾಭಿಪ್ರಾಯಗಳು ಹುಟ್ಟಿಕೊಂಡವು. ಮುಂದೆ ಅವರು ಗುಂಪೊಂದನ್ನು ಕಟ್ಟಿಕೊಂಡು ಅಪರಾಧಗಳನ್ನು ಎಸಗತೊಡಗಿದರು. ಈ ಮೂಲಕ ಹಣ ಸಂಗ್ರಹಿಸಿ ಶಂಕಿತ ಸಿಮಿ ಉಗ್ರರನ್ನು ಕೊಲ್ಲಬೇಕೆನ್ನುವುದು ಅವರ ಉದ್ದೇಶವಾಗಿತ್ತೆಂದು ತಪ್ಪೊಪ್ಪಿಕೊಂಡರು. ಸಿಮಿ ಸದಸ್ಯರು ರಾಷ್ಟ್ರದ್ರೋಹಿಗಳೆಂಬುದು ಟೈಗರ್‌ ಗ್ಯಾಂಗಿನ ಅಭಿಪ್ರಾಯವಾಗಿತ್ತು. ನಮ್ಮ ಪೋಲಿಸರಿಂದ ಉಗ್ರರಿಗೆ ಯಾವುದೇ ಶಿಕ್ಷೆಯಾಗುವುದಿಲ್ಲ. ಹೀಗಾಗಿ, ಶಂಕಿತ ಉಗ್ರರನ್ನು ನಾವೇ ಹತ್ಯೆಗೈಯಬೇಕು ಎಂಬ ಗುರಿಯನ್ನು ಟೈಗರ್‌ ಗ್ಯಾಂಗ್‌ ಹೊಂದಿತ್ತು. ಅವರಲ್ಲಿ ಅತಿರೇಕದ, ಭಾವನಾತ್ಮಕ ಹಾಗೂ ಅಪ್ರಬುದ್ಧ ಯೋಚನೆಗಳಿದ್ದವು,” ಎನ್ನುತ್ತಾರೆ ಔರಾದ್ಕರ್‌.

‌ಹುಬ್ಬಳ್ಳಿ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಬಾಂಬ್‌ ಸ್ಪೋಟ ಹಾಗೂ ಧಾರವಾಡ ಸಮೀಪದ ಸೇತುವೆ ಕೆಳಗೆ ಶಕ್ತಿಶಾಲಿ ಬಾಂಬ್‌ಗಳನ್ನು ಅಡಗಿಸಿಟ್ಟ ಕೃತ್ಯಗಳ ಹಿಂದೆ ತಾವಿರುವುದನ್ನು ಟೈಗರ್‌ ಗ್ಯಾಂಗ್ ಸದಸ್ಯರು ತನಿಖಾ ತಂಡದ ಮುಂದೆ ಒಪ್ಪಿಕೊಂಡರು. ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಇನ್ನಷ್ಟು ರಾಜಕಾರಣಿಗಳ, ಶ್ರೀಮಂತರ ಮಕ್ಕಳ ಹತ್ಯೆಗೆ ಸಂಚು ರೂಪಿಸಿದ್ದನ್ನು ನಾಗರಾಜ ಜಂಬಗಿ ಪೋಲಿಸರ ಮುಂದೆ ಹೇಳಿಕೊಂಡಿದ್ದ. ಈ ಮೂಲಕ ಟೈಗರ್‌ ಗ್ಯಾಂಗ್‌ನ ಹಿಂದಿನ ಅಪರಾಧಗಳೆಲ್ಲವೂ ಒಂದು ಕೊಲೆಯ ತನಿಖೆಯಿಂದ ಬಯಲಾಗಿದ್ದವು.

“ಸಿಕ್ಕುಬಿದ್ದ ಯುವಕರು ಸ್ಥಿತಿವಂತ ಕುಟುಂಬದಿಂದ ಬಂದವರಲ್ಲ. ಇದರಲ್ಲಿ ಹೆಚ್ಚಿನವರು ಮರಾಠ ಸಮುದಾಯಕ್ಕೆ ಸೇರಿದ ಹಿಂದುಳಿದ ವರ್ಗದವರು. ಹಿಂದುತ್ವವನ್ನು ತಲೆಗೆ ಹಚ್ಚಿಕೊಂಡಿದ್ದರು. ಈ ತನಿಖೆಯಿಂದ ಒಂದು ವಿಚಾರ ನನಗೆ ತಿಳಿಯಿತು. ಇವರು ತಾವಾಗಿಯೇ ತಲೆಕೆಡಿಸಿಕೊಂಡವರಲ್ಲ. ಇವರ ತಲೆಯನ್ನು ಯಾರೋ ಕೆಡಿಸಿದ್ದಾರೆ. ಇವತ್ತು ಗೌರಿ ಹತ್ಯೆಯ ಪ್ರಮುಖ ಆರೋಪಿಯೂ ಅಂತಹುದೇ ಹಿನ್ನೆಲೆಯಿಂದ ಬಂದವನು. ಆದರೆ, ಗೌರಿ ಹತ್ಯೆಗೂ ಟೈಗರ್‌ ಗ್ಯಾಂಗಿಗೂ ಯಾವುದೇ ಸಂಬಂಧವಿಲ್ಲ,” ಎನ್ನುತ್ತಾರೆ ರವೀಂದ್ರ ಶಿರೂರ್‌.

ವಿಪರ್ಯಾಸವೆಂದರೆ, ಸೆರೆಸಿಕ್ಕ ಕೆಲವೇ ತಿಂಗಳಲ್ಲಿ ಟೈಗರ್‌ ಗ್ಯಾಂಗ್‌ ಸ್ಥಾಪಕ ನಾಗರಾಜ ಜಂಬಗಿ ತನ್ನ ಸಹಚರ ಬಸವರಾಜ ರೂಗಿಯಿಂದಲೇ ಹತ್ಯೆಯಾದ. ಒಂದೇ ಜೈಲಿನಲ್ಲಿದ್ದ ನಾಗರಾಜ ಜಂಬಗಿ ಹಾಗೂ ಬಸವರಾಜ ರೂಗಿ ನಡುವೆ ಹಣದ ವಿಚಾರದಲ್ಲಿ ಬಿನ್ನಾಭಿಪ್ರಾಯ ಕಾಣಿಸಿಕೊಂಡವು. ತನಗೆ ಜಾಮೀನು ಕೊಡಿಸಬೇಕೆಂದು ಬಸವರಾಜ ರೂಗಿ ಒತ್ತಾಯಿಸತೊಡಗಿದ. “ನಾನು ಜಾಮೀನು ನಿನಗೆ ಕೊಡಿಸುತ್ತೇನೆ. ನೀನು ಜೈಲಿನಿಂದ ಹೊರಹೋದ ನಂತರ ತನಿಖಾಧಿಕಾರಿಗಳಾದ ರವೀಂದ್ರ ಶಿರೂರ್‌ ಹಾಗೂ ಮಲ್ಲಿಕಾರ್ಜುನ ತುಳಸಿಗೇರಿ ಅವರನ್ನು ಕೊಲ್ಲಬೇಕು,” ಎಂದು ಬಸವರಾಜ ರೂಗಿಗೆ ನಾಗರಾಜ ಜಂಬಗಿ ಬೇಡಿಕೆ ಇಟ್ಟ. ಅಷ್ಟೊತ್ತಿಗಾಗಲೇ ಹೈರಾಣವಾಗಿದ್ದ ರೂಗಿ, ಈಗ ತಾನು ಅನುಭವಿಸುತ್ತಿರುವ ನರಕಯಾತನೆಯೇ ಸಾಕೆಂದು ಹೇಳಿದ. ಇದು ಅವರಿಬ್ಬರ ನಡುವಿನ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿತು.

2009ರ ಜುಲೈ18ರಂದು ನಾಗರಾಜ ಜಂಬಗಿಯ ತಲೆಯ ಮೇಲೆ ಬಸವರಾಜ ರೂಗಿ ಬೃಹತ್‌ ಗಾತ್ರದ ಕಲ್ಲೊಂದನ್ನು ಎತ್ತಿ ಹಾಕಿದ. ನಾಗರಾಜ ಜಂಬಗಿಯ ತಲೆ ಸಿಡಿಯಿತು. ಕೋಮಾಸ್ಥಿತಿಗೆ ಹೋದ ಜಂಬಗಿಯನ್ನು ಜೈಲು ಅಧಿಕಾರಿಗಳು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ಸಾಗಿಸಿದರು. ಒಂದೂವರೆ ತಿಂಗಳು ಕೋಮಾದಲ್ಲಿದ್ದ ಟೈಗರ್‌ ಗ್ಯಾಂಗ್‌ ಮುಖ್ಯಸ್ಥ ನಾಗರಾಜ ಜಂಬಗಿ ಉಸಿರು ಚೆಲ್ಲಿದ. ಹುಬ್ಬಳ್ಳಿ ಬಾಂಬ್‌ ಸ್ಪೋಟಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಟೈಗರ್‌ ಗ್ಯಾಂಗಿನ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯಾಗಿದೆ. ಉಳಿದವರು ಜೈಲಿನಲ್ಲೇ ಇದ್ದಾರೆ. ಹಲವು ಪ್ರಕರಣಗಳ ವಿಚಾರಣೆ ಎದುರಿಸುತ್ತಿದ್ದಾರೆ.

ಇದನ್ನೂ ಓದಿ : ಮತಾಂಧ ಸಂಘಟನೆ ‘ಟೈಗರ್‌ ಗ್ಯಾಂಗ್‌’ ನೆನಪಿಸಿದ ಗೌರಿ ಹತ್ಯೆ ತನಿಖೆ | ಕಂತು 1

ಎಲ್ಲರೂ ಬಡವರ ಮಕ್ಕಳು. ಮತಾಂಧರ ಮಾತು ಕೇಳಿ ದಾರಿ ತಪ್ಪಿದವರು. ತೀವ್ರಗಾಮಿ ಮತೀಯವಾದವನ್ನು ತಲೆಗೆ ಹಚ್ಚಿಕೊಂಡವರು. ಕೊನೆಗೆ ದುರಂತ ಅಂತ್ಯ ಕಂಡರು. ಇವತ್ತು ಗೌರಿ ಪ್ರಕರಣದಲ್ಲಿ ಸೆರೆಸಿಕ್ಕಿರುವ ಪರಶುರಾಮ ವಾಗ್ಮೋರೆಯಂತವರನ್ನು ನೋಡಿದಾಗ ಒಂದು ವಿಷಯ ಸ್ಪಷ್ಟವಾಗುತ್ತದೆ. ಟೈಗರ್‌ ಗ್ಯಾಂಗ್‌ ನಿರ್ಮೂಲವಾದರೂ ಅಂತಹದೊಂದು ಸಂಘಟನೆಯ ಹುಟ್ಟಿಗೆ ಕಾರಣವಾಗುವಂತಹ ಉಗ್ರ ಹಿಂದುತ್ವವಾದವನ್ನು ಬಿತ್ತಿ ಬೆಳೆಯಲು ಹೊರಟಿರುವ ಸಂಘಟನೆಗಳು ಹಿಂದೆಂದಿಗಿಂತಲೂ ಇಂದು ತೀವ್ರವಾಗಿ ಕಾರ್ಯಾಚರಣೆ ನಡೆಸುತ್ತಿವೆ. ಇದರ ಫಲವೇ ಕಲಬುರ್ಗಿ ಹಾಗೂ ಗೌರಿಯಂತವರ ಹತ್ಯೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More