ಇಂದಿನ ಡೈಜೆಸ್ಟ್ | ನೀವು ಗಮನಿಸಬೇಕಾದ 10 ಪ್ರಮುಖ ಸುದ್ದಿಗಳು

ನೀವು ತಪ್ಪಿಸಿಕೊಂಡಿರಬಹುದಾದ ಮತ್ತು ಗಮನಿಸಲೇಬೇಕಾದ ಇಂದಿನ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ  

ಹಜ್ ಭವನಕ್ಕೆ ಎಪಿಜೆ ಅಬ್ದುಲ್ ಕಲಾಂ ಹೆಸರಿಡಿ: ಬಿಎಸ್‌ವೈ

ಹಜ್‌ ಭವನಕ್ಕೆ ಟಿಪ್ಪು ಹೆಸರಿಡಲು ನಮ್ಮ ವಿರೋಧವಿದ್ದು, ಸಚಿವ ಜಮೀರ್‌ ಅಹಮದ್‌ ಖಾನ್‌ ಅನಗತ್ಯ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಹಜ್ ಭವನಕ್ಕೆ ಮಾಜಿ ರಾಷ್ಟ್ರಪತಿ ದಿವಂಗತ ಡಾ ಎ ಪಿ ಜೆ ಅಬ್ದುಲ್ ಕಲಾಂ ಹೆಸರಿಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದರು. ಬಿಜೆಪಿ ನೇತೃತ್ವದ ಕೇಂದ್ರ ದ ಎನ್‌ಡಿಎ ಸರ್ಕಾರದ ನಾಲ್ಕು ವರ್ಷಗಳ ಸಾಧನೆಯ ಕನ್ನಡ ಅವತರಣಿಕೆಯನ್ನು ಬಿಡುಗಡೆ ಮಾಡಿದ ಬಳಿಕ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಕರ್ನಾಟಕವನ್ನು ಹೊರಗಿಟ್ಟು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ಮಾಡುವ ವಿಚಾರದಲ್ಲಿ ಈ ಹಿಂದಿನ ಸರ್ಕಾರವೂ ಸರಿಯಾದ ಕ್ರಮ ಕೈಗೊಂಡಿಲ್ಲ, ಈಗಿನ ಸಮ್ಮಿಶ್ರ ಸರ್ಕಾರವೂ ಎಚ್ಚರವಹಿಸಿಲ್ಲ ಎಂದರು.

ಪುನರ್ವಸತಿ ಕೇಂದ್ರದ ಅವ್ಯವಸ್ಥೆ ನೋಡಿ ಬೇಸರಿಸಿದ ಸಚಿವ ಡಿಕೆಶಿ

“ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಭೂಮಿ ನೀಡಿ ಸಂತ್ರಸ್ಥರಾದವರಿಗಾಗಿ ನಿರ್ಮಿಸಲಾಗಿರುವ ಪುನರ್ವಸತಿ ಕೇಂದ್ರದಲ್ಲಿನ ಅವ್ಯವಸ್ಥೆಯಿಂದ ನನಗೆ ನಾಚಿಕೆಯಾಯಿತು,” ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ ಕೆ ಶಿವಕುಮಾರ್‌ ಹೇಳಿದ್ದಾರೆ. ‘ಪುನರ್ವಸತಿ ಕೇಂದ್ರಗಳಲ್ಲಿನ ಸ್ಥಿತಿಯನ್ನು ಕಣ್ಣಾರೆ ಕಂಡಿದ್ದೇನೆ. ಇಲ್ಲಿನ ಸ್ಥಿತಿಗತಿ ಅರಿಯಲು ಒಂದು ತಂಡ ರಚಿಸಿ ಎರಡು-ಮೂರು ತಿಂಗಳಲ್ಲಿ ವರದಿ ಪಡೆದುಕೊಳ್ಳುತ್ತೇನೆ. ಆನಂತರ ಅಲ್ಲಿನ ಪರಿಸ್ಥಿತಿ ಸರಿಪಡಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಎನ್‌ಕೌಂಟರ್: ಇಬ್ಬರು ಉಗ್ರರ ಹತ್ಯೆ

ಕುಲ್‌ಗಾಮ್ ಜಿಲ್ಲೆಯಲ್ಲಿ ಭಾನುವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರ್ ಇ-ತೊಯ್ಬಾ ಸಂಘಟನೆಯ ಇಬ್ಬರು ಉಗ್ರರು ಹತರಾಗಿದ್ದಾರೆ. ಕುಲ್ ಗಾಮ್ ಬಳಿಯ ಹಳ್ಳಿಯೊಂದರಲ್ಲಿ ಜಮ್ಮು ಕಾಶ್ಮೀರ ಪೊಲೀಸರು, ಸೇನೆ ಹಾಗೂ ಸಿಆರ್ ಪಿಎಫ್ ಯೋಧರು ನಡೆಸಿದ ಜಂಟಿಕಾರ್ಯಾಚರಣೆ ನಡೆಸಿ, ಇಬ್ಬರು ಉಗ್ರರನ್ನು ಹತ್ಯೆಗೈದಿದ್ದಾರೆ. ಕಾರ್ಯಾಚರಣೆ ವೇಳೆ ಓರ್ವ ಉಗ್ರ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೈತ್ರಿ ಮುರಿಯಲು ಬಿಜೆಪಿ ಕಾರಣ: ಮೆಹಬೂಬ ಮುಫ್ತಿ

ಮೈತ್ರಿಯಿಂದ ಹಿಂದೆ ಸರಿಯುವ ಮೂಲಕ ಬಿಜೆಪಿಯು ತನ್ನ ಒಪ್ಪಂದವನ್ನು ತಾನೇ ಮುರಿದಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. “ಬಿಜೆಪಿಯು ಪಿಡಿಪಿ ವಿರುದ್ಧ ಹಲವು ಸುಳ್ಳು ಆರೋಪಗಳನ್ನು ಮಾಡಿದೆ. ಜಮ್ಮು ಮತ್ತು ಕಾಶ್ಮೀರದ ಉಸ್ತುವಾರಿಯಾದ ರಾಮ್‌ ಮಾಧವ್‌ ಹಾಗೂ ಗೃಹ ಸಚಿವ ರಾಜನಾಥ್‌ ಸಿಂಗ್ ಅವರ ರೂಪಿಸಿದ ಸಮ್ಮಿಶ್ರ ಸರ್ಕಾರದ ಅಜೆಂಡಾವನ್ನು ಬಿಜೆಪಿ ಮುರಿದಿದೆ,” ಎಂದು ಅವರು ಆರೋಪಿಸಿದ್ದಾರೆ.

ಕ್ರಿಕೆಟ್‌ ರಾಜತಾಂತ್ರಿಕತೆಗೆ ಪ್ರಧಾನಿ ಮೋದಿ ಮೆಚ್ಚುಗೆ

ಭಾರತ ಮತ್ತು ಆಫ್ಘಾನಿಸ್ತಾನದ ನಡುವಿನ ಕ್ರಿಕೆಟ್‌ ಪಂದ್ಯವನ್ನು ಉಲ್ಲೇಖಿಸಿ ಉಭಯ ರಾಷ್ಟ್ರಗಳ ಕ್ರಿಕೆಟ್‌ ರಾಜತಾಂತ್ರಿಕತೆಗೆ ಮೆಚ್ಚುಗೆ ಸೂಚಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಯಶಸ್ವಿ ಜಾರಿಗೆ ರಾಜ್ಯಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ. ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ ಮನ್‌ ಕಿ ಬಾತ್‌ನಲ್ಲಿ ಮಾತನಾಡಿದ ಅವರು ಮುಂದಿನ ವರ್ಷ ನಡೆಯಲಿರುವ ಗುರು ನಾನಕ್‌ ಅವರ ೫೫೦ನೇ ವರ್ಷದ ಪ್ರಕಾಶ್‌ ಪರ್ವ ಆಚರಿಸಲು ಜನರಿಂದ ನೂತನ ಐಡಿಯಾಗಳನ್ನು ಆಹ್ವಾನಿಸಿದ್ದಾರೆ.

ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಉಸ್ತುವಾರಿ ನೇಮಿಸಲಿದೆ ಬಿಜೆಪಿ

ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಜನತಾ ಪಕ್ಷವೂ ದೇಶದ ಎಲ್ಲಾ ೫೪೩ ಲೋಕಸಭಾ ಕ್ಷೇತ್ರಗಳಿಗೆ ಒಬ್ಬೊಬ್ಬ ಉಸ್ತುವಾರಿಯನ್ನು ನೇಮಕ ಮಾಡಲು ನಿರ್ಧರಿಸಿದೆ. ಇದರ ಜೊತೆಗೆ ಪ್ರತಿ ರಾಜ್ಯಕ್ಕೆ ಚುನಾವಣಾ ತಯಾರಿ ನಡೆಸಲು ೧೧ ಸದಸ್ಯರ ಸಮಿತಿ ರಚಿಸಲಿದೆ ಎನ್ನಲಾಗಿದೆ. ವಿರೋಧ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸಲು ಸಜ್ಜಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪಕ್ಷದ ರಣನೀತಿ ತಂತ್ರಜ್ಞರು ಈ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.

ಮೆಸ್ಸಿ ೩೧ನೇ ವಸಂತಕ್ಕೆ ಆಳೆತ್ತರದ ಕೇಕ್ ಕೊಡುಗೆ!

ರಷ್ಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಇಪ್ಪತ್ತೊಂದನೇ ಫಿಫಾ ವಿಶ್ವಕಪ್ ಪಂದ್ಯಾವಳಿ ಅರ್ಜೆಂಟೀನಾ ಹಾಗೂ ಅದನ್ನು ಮುನ್ನಡೆಸುತ್ತಿರುವ ಲಯೋನೆಲ್ ಮೆಸ್ಸಿ ಪಾಲಿಗೆ ನಿರಾಸೆ ತರಿಸಿರಬಹುದು. ಆದರೆ, ವಿಶ್ವ ಕಂಡ ಪ್ರತಿಭಾನ್ವಿತ ಆಟಗಾರ ಮೆಸ್ಸಿ ಒಲ್ಲದ ಮನಸ್ಸಿನಿಂದಲೇ ೩೧ನೇ ಹುಟ್ಟುಹಬ್ಬ ಆಚರಿಸಿಕೊಳ್ಳುವಂತಾಗಿದೆ. ಮೆಸ್ಸಿಯ ಮನಮೋಹಕ ಆಟಕ್ಕೆ ಜಗತ್ತೇ ಮರುಳಾಗಿರುವುದ್ದು, ರಷ್ಯಾ ಅದರಿಂದ ಹೊರತಲ್ಲ. ಇಂದು ಅವರ ಹುಟ್ಟುಹಬ್ಬವಾಗಿದ್ದರಿಂದ ಮಾಸ್ಕೊದ ಆಲ್ಪ್‌ಫೈವೊ, ಮೆಸ್ಸಿ ಆಳೆತ್ತರದ ಅಂದರೆ ೬೦ ಕೆಜಿ ತೂಕದ ಚಾಕೊಲೇಟ್ ಕೇಕ್ ಅನ್ನು ಅವರ ಪ್ರತಿಕೃತಿಯಲ್ಲಿ ತಯಾರಿಸುವ ಮೂಲಕ ಮೆಸ್ಸಿ ಹುಟ್ಟುಹಬ್ಬಕ್ಕೆ ವಿಶೇಷ ಕೊಡುಗೆ ನೀಡಿತು. "ಮೆಸ್ಸಿ ಹುಟ್ಟುಹಬ್ಬಕ್ಕೆ ಮೆಸ್ಸಿಯನ್ನೇ ಕೊಡಬೇಕೆಂಬ ನಮ್ಮ ಬಯಕೆ ಇದಕ್ಕೆ ಸ್ಫೂರ್ತಿ ನೀಡಿತು,'' ಎಂದು ಆಲ್ಟ್‌ಫೈವೋದ ಪ್ರಧಾನ ಬಾಣಸಿಗರಾದ ಡರಿಯಾ ಮಾಲ್ಕಿನಾ ತಿಳಿಸಿದ್ದಾರೆ.

ಆರ್ಚರಿ ವಿಶ್ವಕಪ್‌ನಲ್ಲಿ ಅಭಿಷೇಕ್‌ಗೆ ಬೆಳ್ಳಿ

ಅಮೆರಿಕದ ಸಾಲ್ಟ್‌ ಲೇಕ್‌ ಸಿಟಿಯಲ್ಲಿ ನಡೆದ ಆರ್ಚರಿ ವಿಶ್ವಕಪ್ ಸ್ಪರ್ಧೆಯಲ್ಲಿ ಭಾರತದ ಬಿಲ್ಲುಗಾರ ಅಭಿಷೇಕ್ ವರ್ಮಾ ರಜತ ಪದಕ ಜಯಿಸಿದರು. ಕಾಂಪೌಂಡ್ ವಿಭಾಗದ ಸ್ಟೇಜ್ ಮೂರನೇ ಸ್ಪರ್ಧೆಯಲ್ಲಿ ವೈಯಕ್ತಿಕ ವಿಭಾದಲ್ಲಿ ಬೆಳ್ಳಿ ಪಡೆದ ಅಭಿಷೇಕ್, ಮಿಶ್ರ ಟೀಂ ವಿಭಾಗದಲ್ಲಿ ಕಂಚು ಗೆದ್ದರು. ಸೆಮಿಫೈನಲ್‌ನಲ್ಲಿ ರಷ್ಯಾದ ಆಂಟನ್ ಬುಲಯೇವ್ ಎದುರು ನಿಖರ ಪ್ರದರ್ಶನ ನೀಡಿದ ಅಭಿಷೇಕ್ ೧೫೦ ಪಾಯಿಂಟ್ಸ್ ಗಳಿಸಿದರು. ಆದರೆ, ಫೈನಲ್‌ನಲ್ಲಿ ೨೦೧೫ರ ವಿಶ್ವ ಚಾಂಪಿಯನ್ ಮತ್ತು ೨೦೧೭ರ ವಿಶ್ವ ಬೆಳ್ಳಿ ಪದಕ ವಿಜೇತ ಹಾನ್ಸೆನ್ ಎದುರು ೧೨೩-೧೪೦ರಿಂದ ಹಿನ್ನಡೆ ಅನುಭವಿಸಿದರು. ಇದಕ್ಕೂ ಮುನ್ನ ಜ್ಯೋತಿ ಸುರೇಖಾ ವೆನ್ನಂ ಅವರೊಂದಿಗೆ ಮಿಶ್ರ ಟೀಂ ವಿಭಾಗದಲ್ಲಿ ವರ್ಮಾ ಅಮೆರಿಕ ಜೋಡಿಯನ್ನು ೧೪೭-೧೪೦ರಿಂದ ಮಣಿಸಿ ತೃತೀಯ ಸ್ಥಾನ ಗಳಿಸಿದರು.

ಸೌದಿ ಮಹಿಳೆಯ ಸಾಹಸ

ಕರ್ಮಠಶಾಹಿ ಕಟುನಿಯಮಗಳಿಂದ ಮಹಿಳೆಯರನ್ನು ಕಟ್ಟಿಹಾಕಿರುವ ಸೌದಿ ಅರೇಬಿಯಾದಲ್ಲಿ ಮತ್ತೊಂದು ಆಶಾವಾದದ ಉದಯಕ್ಕೆ ಅಸೀಲ್ ಅಲ್-ಹಮದ್ ಕಾರಣವಾಗಿದ್ದಾರೆ. ಇಂದು ನಡೆದ ಫ್ರೆಂಚ್ ಓಪನ್ ಗ್ರ್ಯಾನ್ ಪ್ರೀ ರೇಸ್‌ಗೂ ಮುನ್ನ ಫಾರ್ಮುಲಾ ಒನ್ ಕಾರನ್ನು ಚಲಾಯಿಸಿದ ಅಸೀಲ್ ಸೌದಿ ಮಹಿಳೆಯರ ಬದುಕಿನಲ್ಲಿ ಇನ್ನೊಂದು ಹೊಸಬಗೆಯ ಮನ್ವಂತರಕ್ಕೆ ನಾಂದಿ ಹಾಡಿದರು. ಗಲ್ಫ್‌ ಸಾಮ್ರಾಜ್ಯದ ದಾರಿಗಳಲ್ಲಿ ಮಹಿಳೆಯರ ವಾಹನ ಚಲಾಯಿಸುವ ನಿರ್ಬಂಧದ ಗೋಡೆಯನ್ನು ಲೀ ಕ್ಯಾಸ್ಲೆಟ್ ಸರ್ಕೀಟ್‌ನಲ್ಲಿ ಅಸೀಲ್ ಉರುಳಿಸಿದರು. ಅಂದಹಾಗೆ, ಸೌದಿ ಅರೇಬಿಯನ್ ಮೋಟರ್‌ಸ್ಪೋರ್ಟ್ಸ್ ಫೆಡರೇಷನ್‌ನ ಪ್ರಪ್ರಥಮ ಮಹಿಳಾ ಸದಸ್ಯೆ ಎನಿಸಿರುವ ಅಸೀಲ್, ಈ ಮೊದಲು ಇ೨೦ ಪಾರ್ಮುಲಾ ಕಾರನ್ನು ಜೂನ್ ೫ರ ತರಬೇತಿ ದಿನದಂದು ಚಲಾಯಿಸಿದ್ದರು

ವಿಶ್ವ ನಂ.೧ ಪಟ್ಟ ಕಳೆದುಕೊಂಡ ಫೆಡರರ್!

೧೦ನೇ ಹ್ಯಾಲೆ ಓಪನ್ ಪ್ರಶಸ್ತಿ ಗೆಲ್ಲಲು ವಿಫಲವಾದ ೨೦ ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಳ ಒಡೆಯ ರೋಜರ್ ಫೆಡರರ್ ಎಟಿಪಿ ರ್ಯಾಂಕಿಂಗ್‌ನಲ್ಲಿ ನಂ ೧ ಸ್ಥಾನವನ್ನೂ ಕಳೆದುಕೊಂಡರು. ಗ್ಯಾರಿ ವೆಬರ್ ಓಪನ್‌ ಎಂತಲೂ ಕರೆಯಲಾಗುವ ಹ್ಯಾಲೆಯಲ್ಲಿ ಇಂದು ನಡೆದ ಪ್ರಶಸ್ತಿ ಸುತ್ತಿನ ಪಂದ್ಯ ಫೆಡರರ್‌ಗೆ ಮುಳುವಾಯಿತು. ೨೧ರ ಹರೆಯದ ಕ್ರೊವೇಷಿಯಾ ಆಟಗಾರ ಬೊರ್ನಾ ಕೊರಿಕ್ ಎದುರು ತಡಬಡಾಯಿಸಿದ ಸ್ವಿಸ್ ಮಾಸ್ಟರ್, ೬-೭ (೬-೮), ೬-೩, ೨-೬ ಸೆಟ್‌ಗಳಲ್ಲಿ ಪರಾಜಿತರಾದರು. ಪಂದ್ಯಾವಳಿಯಾದ್ಯಂತ ಯಾವುದೇ ಸೆಟ್ ಹಿನ್ನಡೆಯಿಲ್ಲದೆ ಅಜೇಯವಾಗಿದ್ದ ಕೊರಿಕ್, ಎಂಟು ವಿಂಬಲ್ಡನ್ ಚಾಂಪಿಯನ್ ಆಗಿರುವ ಫೆಡರರ್‌ಗೆ ಆಘಾತ ಮೂಡಿಸಿದರು. ಒಟ್ಟಾರೆ ಈ ಸೋಲು ಜುಲೈ ೨ರಿಂದ ಶುರುವಾಗುತ್ತಿರುವ ವಿಂಬಲ್ಡನ್‌ನಲ್ಲಿ ಫೆಡರರ್‌ಗೆ ಎಚ್ಚರಿಕೆಯ ಗಂಟೆಯಾಗಿದೆ

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More