ಸಾಲ ವಸೂಲಾತಿ, ಬಡ್ಡಿ ಪಾವತಿ ಮನ್ನಾ ಮಾಡುವ ಪದ್ಧತಿಗೆ ಸಿಎಜಿ ಆಕ್ಷೇಪ

ರೈತರ ಸಾಲ ಮನ್ನಾ ಘೋಷಣೆ ಸಾಕಷ್ಟು ಚರ್ಚೆಗೊಳಗಾಗಿದೆ. ೫೩,೦೦೦ ಕೋಟಿ ರು. ಸಾಲ ಮನ್ನಾ ಮಾಡದ ಸಮ್ಮಿಶ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದಿದ್ದವು. ಈ ಬೆಳವಣಿಗೆ ನಡುವೆ, ಸಹಕಾರಿ ಸಾಲ ವ್ಯವಸ್ಥೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವುದನ್ನು ಸಿಎಜಿ ಬಹಿರಂಗಪಡಿಸಿದೆ

ಸಹಕಾರಿ ಸಾಲ ವ್ಯವಸ್ಥೆಯು ಕ್ಷೀಣಿಸುವುದನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಲ ವಸೂಲಾತಿ ಮತ್ತು ಬಡ್ಡಿ ಪಾವತಿಯನ್ನು ಮನ್ನಾ ಮಾಡುವ ಪದ್ಧತಿಯನ್ನು ನಿಲ್ಲಿಸಬೇಕು ಎಂದು ಪ್ರಧಾನ ಮಹಾಲೇಖಪಾಲರು ಶಿಫಾರಸು ಮಾಡಿದ್ದಾರೆ.

ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಪರಿಷ್ಕೃತ ಬಜೆಟ್‌ ಅನ್ನು ಮಂಡಿಸಿದ ಬೆನ್ನಲ್ಲೇ, ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳ ಕುರಿತು ಸಲ್ಲಿಕೆಯಾಗಿರುವ ಸಿಎಜಿ ವರದಿ ಪ್ರಾಮುಖ್ಯತೆ ಪಡೆದುಕೊಂಡಿದೆ.

ಸಹಕಾರ ವಲಯದಲ್ಲಿ ರೈತರಿಗೆ ಪ್ರಧಾನವಾಗಿ ಕಾಲಮೀರಿದ ಸಾಲವನ್ನು ನೀಡಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ರೈತರಿಗೆ ನೀಡಲಾಗಿದ್ದ ಸಾಲ ಹಾಗೂ ಬಡ್ಡಿ ಮನ್ನಾ ಮಾಡಿರುವ ಮೊತ್ತ ೬,೨೩೪ ಕೋಟಿ ರೂ.ಗಳಾಗಿವೆ. ೨೦೧೨-೧೩ರಲ್ಲಿ ೧,೩೨೩ ಕೋಟಿ, ೨೦೧೩-೧೪ರಲ್ಲಿ ೨,೭೦೪ ಕೋಟಿ, ೨೦೧೪-೧೫ರಲ್ಲಿ ೬೨೪ ಕೋಟಿ, ೨೦೧೫-೧೬ರಲ್ಲಿ ೭೬೫ ಕೋಟಿ, ೨೦೧೫-೧೬ರಲ್ಲಿ ೮೧೮ ಕೋಟಿ ರೂ.ಗಳು ಎಂದು ಸಿಎಜಿ ವರದಿಯಲ್ಲಿ ವಿವರಿಸಿದೆ.

ಶಾಸಕಾಂಗದ ಅನುಮೋದನೆ ಇಲ್ಲದೆಯೇ ೬,೦೫೭.೧೧ ಕೋಟಿ ರೂ.ಗಳನ್ನು ಕಾರ್ಯನಿರ್ವಾಹಕ ಆದೇಶಗಳ ಮೂಲಕ ಬಿಡುಗಡೆ ಮಾಡಿದೆ. ಇದು ಪೂರಕ ಅಂದಾಜಿನ ಶೇ.೪೩ರಷ್ಟಿದೆ. ೧೫ ವಿವಿಧ ಸ್ವರೂಪದ ಅನುದಾನಗಳಲ್ಲಿ ೧,೭೮೯ ಕೋಟಿ ರೂ.ಗಳನ್ನು ಆರ್ಥಿಕ ವರ್ಷದ ಕೊನೆಯ ಎರಡು ಕೆಲಸ ದಿನಗಳಂದು ಸರ್ಕಾರಕ್ಕೆ ಹಿಂದಿರುಗಿಸಲಾಗಿದೆ. ಹೀಗಾಗಿ ರಾಜ್ಯ ಸರ್ಕಾರ ವಿವೇಚನಾಯುಕ್ತವಾಗಿ ಹಣಕಾಸು ನಿರ್ವಹಣೆ ಮಾಡಬೇಕಲ್ಲದೆ ಆಯವ್ಯಯ ತಯಾರಿಕೆ, ವೆಚ್ಚ ನಿಯಂತ್ರಣದ ಮೇಲೆ ಬಿಗಿ ನಿಯಂತ್ರಣ ಸಾಧಿಸಬೇಕು ಎಂದು ಸಿಎಜಿ ಶಿಫಾರಸು ಮಾಡಿದೆ.

೨೦೧೬-೧೭ನೇ ಸಾಲಿನಲ್ಲಿ ಆಯವ್ಯಯದಲ್ಲಿ ೧,೮೬,೦೫೨ ಕೋಟಿ ರೂ.ಗಳಿಗೆ ಪ್ರತಿಯಾಗಿ ೧,೭೩,೦೪೫ ಕೋಟ ರೂ.ವೆಚ್ಚವಾಗಿದೆ. ಬಾಕಿ ೧೩,೦೦೭ ಕೋಟಿ ರೂ. ಬಳಕೆಯಾಗದೇ ಉಳಿದಿತ್ತು.ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗಳಿಗೆ ಬಿಡುಗಡೆ ಮಾಡಿದ ಮೊತ್ತಗಳಲ್ಲಿ ೧,೩೮೧ ಕೋಟಿ ರೂ.ಬಳಕೆಯಾಗಿರಲಿಲ್ಲ ಎಂಬುದನ್ನು ಸಿಎಜಿ ಪತ್ತೆ ಹಚ್ಚಿದೆ. “ಅನೇಕ ಅನುದಾನಗಳಲ್ಲಿ ಭಾರೀ ಪ್ರಮಾಣದ ಅವಕಾಶಗಳು ಬಳಕೆಯಾಗದೇ ಉಳಿದಿದೆ. ಬಳಕೆಯಾಗದೇ ಉಳಿದಿರುವುದನ್ನು ತಪ್ಪಿಸಲು ಎಲ್ಲಾ ಇಲಾಖೆಗಳಲ್ಲೂ ಆಯವ್ಯಯ ನಿಯಂತ್ರಣವನ್ನು ಬಲಪಡಿಸಬೇಕು. ಅಧಿಕ ವೆಚ್ಚವಾಗುತ್ತಿರುವ ಕಾರಣ ಆಯವ್ಯಯ ಕಸರತ್ತು ಹೆಚ್ಚು ವಾಸ್ತವಿಕತೆಯಿಂದ ಕೂಡಿರಬೇಕು,” ಎಂದು ಸಿಎಜಿ ಸಲಹೆ ನೀಡಿದೆ.

ಹಾಗೆಯೇ, ಮಾರ್ಚ್ ೨೦೧೭ರ ಅಂತ್ಯಕ್ಕೆ ರೋಗಗ್ರಸ್ತ, ಸಾರ್ವಜನಿಕ ವಲಯದ ಸಂಸ್ಥೆ ಮತ್ತು ಸರ್ಕಾರಿ ನಿರ್ವಹಣಾ ಸಂಸ್ಥೆಗಳಲ್ಲಿ ೬೩,೧೧೫ ಕೋಟಿ ರೂ.ಗಳಷ್ಟು ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದರೂ ಇದರಿಂದ ಬಂದ ಪ್ರತಿಫಲ ನಗಣ್ಯವಾಗಿದೆ. ಇಂತಹ ಹೂಡಿಕೆಗಳಿಂದ ಪ್ರತಿಫಲ ನಗಣ್ಯವೆಂಬ ಸತ್ಯಾಂಶವನ್ನು ಒಪ್ಪಿಕೊಂಡಿದ್ದರೂ ಹೂಡಿಕೆ ಮಾಡಲು ಹಿಂಜರಿಯುವುದಿಲ್ಲ ಎಂಬ ಸರ್ಕಾರದ ಹೇಳಿಕೆಯನ್ನು ಆಕ್ಷೇಪಿಸಿದೆ.

ಒಟ್ಟು ಹೂಡಿಕೆಯಲ್ಲಿ ೬೦,೧೩೯ ಕೋಟಿ ರೂ.ಗಳನ್ನು(ಶೇ.೯೫) ನೀರಾವರಿ ವಿಭಾಗದಡಿ ಬರುವ ೭೭ ಸರ್ಕಾರಿ ಕಂಪನಿಗಳಲ್ಲಿ ಹೂಡಿಕೆಯಾಗಿದೆ. ಅದೇ ರೀತಿ ನಿಗಮಗಳಲ್ಲಿ ೩೬,೭೭೯ ಕೋಟಿ, ಸಾರಿಗೆ ವಿಭಾಗಗಳಲ್ಲಿ ೨,೩೯೯ ಕೋಟಿ, ಮೂಲ ಸೌಕರ್ಯ ವಿಭಾಗದಲ್ಲಿ ೪,೨೫೧ ಕೋಟಿ, ವಿದ್ಯುಚ್ಛಕ್ತಿ ವಿಭಾಗದಲ್ಲಿ ೧೦,೧೨೦ ಕೋಟಿ, ಕೈಗಾರಿಕೆ ವಿಭಾಗದಲ್ಲಿ ೮೫೦ ಕೋಟಿ, ವಸತಿ ವಿಭಾಗದಲ್ಲಿ ೧,೪೫೧ ಕೋಟಿ, ಹಣಕಾಸು ವಿಭಾಗದಲ್ಲಿ ೨,೯೩೨ ಕೋಟಿ, ಸಾಮಾಜಿಕ ವಿಭಾಗಗಳಲ್ಲಿ ೧,೨೬೭ ಕೋಟಿ ರೂ.ಗಳನ್ನು ಹೂಡಿಕೆ ಮಾಡಿದೆ.

ಸತತ ನಷ್ಟದಲ್ಲಿರುವ ನಿಗಮದಲ್ಲಿ ಹೂಡಿಕೆ: ವಿಶೇಷವೆಂದರೆ, ಸತತ ನಷ್ಟದಲ್ಲಿರುವ ವಾಯುವ್ಯ, ಈಶಾನ್ಯ ಕರ್ನಾಟಕ ಸಾರಿಗೆ, ಕೃಷ್ಣಭಾಗ್ಯ ಜಲ ನಿಗಮ, ಮೈಸೂರು ಸಕ್ಕರೆ ಕಂಪನಿಯಲ್ಲಿ ೨೪,೪೭೪ ಕೋಟಿ ರೂ.ಗಳನ್ನು ಹೂಡಿಕೆ ಮಾಡಿದೆ. ಹಾಗೆಯೇ ೨೦೧೬-೧೭ರ ಅಂತ್ಯಕ್ಕೆ ೨,೦೨೭ ಕೋಟಿ ರೂ.ಗಳನ್ನು ಅಪೂರ್ಣ ಕಾಮಗಾರಿಗಳಲ್ಲಿ ತೊಡಗಿಸಿತ್ತು. ಹೀಗಾಗಿ ರಾಜ್ಯ ಸರ್ಕಾರವು ಅಧಿಕ ನಷ್ಟ ಅನುಭವಿಸುತ್ತಿರುವ ಸಾರ್ವಜನಿಕ ವಲಯದ ಉದ್ದಿಮೆಗಳ ಕಾರ್ಯವೈಖರಿಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More