ಸಿಎಂ ಎಚ್‌ಡಿಕೆ ಅವರ ಎಲಿವೇಟೆಡ್‌ ಕಾರಿಡಾರ್‌ ಪ್ರಸ್ತಾಪ ಸ್ಟೀಲ್ ಬ್ರಿಡ್ಜ್‌ನ ಪ್ರತಿರೂಪವೇ?‌

ವಿವಾದಿತ ಸ್ಟೀಲ್‌ ಬ್ರಿಡ್ಜ್‌ನಂಥ ಮತ್ತೊಂದು ಯೋಜನೆಯನ್ನು ಎಚ್‌ಡಿಕೆ ನೇತೃತ್ವದ ಸರ್ಕಾರ ಅನುಷ್ಠಾನಗೊಳಿಸಲು ಮುಂದಾಗಿದೆ; ಅದುವೇ ಎಲಿವೇಟೆಡ್‌ ರಸ್ತೆಗಳ ನಿರ್ಮಾಣ. ಇದಕ್ಕಾಗಿ ೧೫,೮೨೫ ಕೋಟಿ ಮೊತ್ತ ನಿಗದಿಪಡಿಸಿದ್ದು, ಬೃಹತ್ ಮೊತ್ತದ ಕಾರಣಕ್ಕೆ ಗಮನ ಸೆಳೆದಿದೆ

ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಮಂಡಿಸಿದ ಚೊಚ್ಚಲ ಬಜೆಟ್‌ನಲ್ಲಿ ಬೆಂಗಳೂರಿನಲ್ಲಿ ಸುಗಮ ಸಂಚಾರಕ್ಕಾಗಿ ಆರು ಎಲಿವೇಟೆಡ್‌ ರಸ್ತೆಗಳನ್ನು ನಿರ್ಮಿಸುವುದಾಗಿ ಘೋಷಿಸಿದ್ದಾರೆ. ‘”ಭಾರತದ ಮಹಾನಗರಗಳಲ್ಲೊಂದಾದ ಬೆಂಗಳೂರಿನಲ್ಲಿ ಟ್ರಾಫಿಕ್‌ ಸೇರಿದಂತೆ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ. ಎಲಿವೇಟೆಡ್‌‌ ರಸ್ತೆ ನಿರ್ಮಾಣ ಮಾಡುವುದರಿಂದ ಟ್ರಾಫಿಕ್‌, ಸಂಚಾರ ಸಮಯ, ವಾಹನ ನಿರ್ವಹಣಾ ವೆಚ್ಚದ ಉಳಿತಾಯ, ರಸ್ತೆ ಸಂಚಾರ ಸುರಕ್ಷತೆ ಕಾಪಾಡಬಹುದು,” ಎಂಬುದು ಕುಮಾರಸ್ವಾಮಿ ಅವರ ವಿವರಣೆ. ಒಟ್ಟಾರೆ ೯೫ ಕಿ ಮೀ ಎಲಿವೇಟೆಡ್ ರಸ್ತೆ ನಿರ್ಮಾಣ ಮಾಡಲು ಸರ್ಕಾರ ಉದ್ದೇಶಿಸಿದ್ದು, ಇದಕ್ಕಾಗಿ ಬಜೆಟ್‌ನಲ್ಲಿ ೧೫,೮೨೫ ಕೋಟಿ ರುಪಾಯಿ ಮೀಸಲಿಟ್ಟಿದೆ. ಐದು ಹಂತಗಳಲ್ಲಿ ಎಲಿವೇಟೆಡ್ ರಸ್ತೆಗಳನ್ನು ನಿರ್ಮಿಸುವ ಪ್ರಸ್ತಾವವಿದ್ದು, ಪ್ರಸಕ್ತ ವರ್ಷದಲ್ಲಿ ಇದಕ್ಕಾಗಿ ೧,೦೦೦ ಕೋಟಿ ರುಪಾಯಿ ಹಂಚಿಕೆ ಮಾಡುವುದಾಗಿ ಹೇಳಲಾಗಿದೆ.

ಹಾಲಿ ಇರುವ ರಸ್ತೆಗಳ ಮೇಲೆ ಪಿಲ್ಲರ್ ನಿರ್ಮಿಸಿ ಅದರ ಮೇಲೆ ರಸ್ತೆ ನಿರ್ಮಾಣ ಮಾಡುವ ಯೋಜನೆಯೇ ಎಲಿವೇಟೆಡ್‌ ರಸ್ತೆ. ವಾಸ್ತವದಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಎಲಿವೇಟೆಡ್‌ ರಸ್ತೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ದೂರದೃಷ್ಟಿಯಿಲ್ಲದ ಈ ಯೋಜನೆ ಜಾರಿಗೊಳಿಸುವುದರಿಂದ ನಗರದ ಸೊಬಗಿಗೆ ಧಕ್ಕೆಯಾಗುತ್ತದೆ. ಹೀಗಾದರೆ ನಗರಕ್ಕೆ ಜೀವವೇ ಇರುವುದಿಲ್ಲ. ಇದರ ಬದಲಿಗೆ ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಬೇಕು. ಹಾಲಿ ಇರುವ ವ್ಯವಸ್ಥೆ ಸುಧಾರಣೆಗೆ ಒತ್ತು ನೀಡಬೇಕು. ಎಲ್ಲಕ್ಕಿಂತ ಮಿಗಿಲಾಗಿ ಖಾಸಗಿ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಿ, ಜನರು ಹೆಚ್ಚು ಹೆಚ್ಚು ಸಾರ್ವಜನಿಕ ಸಾರಿಗೆ ಬಳಕೆ ಮಾಡಲು ಮುಂದಾಗುವಂತೆ ಮಾಡಬೇಕು ಎಂಬ ಕೂಗು ಕೇಳಿಬಂದಿದೆ.

ಸದ್ಯ ಬೆಂಗಳೂರಿನಲ್ಲಿ ೭೪ ಲಕ್ಷ ವಾಹನಗಳಿದ್ದು, ಪ್ರತಿದಿನ ಅಂದಾಜು ೪ ಸಾವಿರ ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ಎಲಿವೇಟೆಡ್‌ ರಸ್ತೆ ನಿರ್ಮಾಣ ಮಾಡುವುದರಿಂದ ಖಾಸಗಿ ವಾಹನಗಳಿಗೆ ಅನುಕೂಲವಾಗುತ್ತದೆ. ಹೀಗೆ ಮಾಡುವುದರಿಂದ ಸಾರ್ವಜನಿಕ ಸಾರಿಗೆಯನ್ನು ಹಾಳು ಮಾಡಲು ಸರ್ಕಾರವೇ ಪೌರೋಹಿತ್ಯ ವಹಿಸಿದಂತಾಗುತ್ತದೆ. ಕೈರೊ ಸೇರಿದಂತೆ ಹಲವು ಪಟ್ಟಣಗಳಲ್ಲಿ ಈ ಯೋಜನೆ ವಿಫಲವಾಗಿದೆ. ಯಾವುದೇ ಮುಂದಾಲೋಚನೆ ಮಾಡದೆ ಎಲಿವೇಟೆಡ್‌ ರಸ್ತೆ ನಿರ್ಮಿಸುವ ಉದ್ದೇಶವು ರಾಜಕಾರಣಿಗಳಿಗೆ ಹಣ ಮಾಡುವ ಯೋಜನೆಯಾಗಿದ್ದು, ದೀರ್ಘಾವಧಿಯಲ್ಲಿ ಯಾವುದೇ ಲಾಭವಾಗುವುದಿಲ್ಲ. ಹೆಬ್ಬಾಳ ಪ್ಲೈಓವರ್ ನಿರ್ಮಾಣ ಮಾಡಿದ ಉದ್ದೇಶ ಮತ್ತು ಸದ್ಯ ಅಲ್ಲಿನ ಪರಿಸ್ಥಿತಿಯಿಂದಲೂ ಆಡಳಿತಗಾರರು ಪಾಠ ಕಲಿತಂತಿಲ್ಲ ಎಂದು ತಜ್ಞರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ನಗರದ ಸಾರಿಗೆ ಸಮಸ್ಯೆಗೆ ಜಗತ್ತಿನಲ್ಲೇ ಅತ್ಯುತ್ತಮ ಪರಿಹಾರ ಮೆಟ್ರೊ. ಫ್ಲೈಓವರ್, ಎಲಿವೇಟೆಡ್‌ ರಸ್ತೆ ನಿರ್ಮಾಣಕ್ಕೆ ಬದಲಾಗಿ ನಗರದ ಪೂರ್ತಿ ಮೆಟ್ರೊ ವ್ಯವಸ್ಥೆ ಶೀಘ್ರದಲ್ಲಿ ಪೂರ್ಣಗೊಳ್ಳುವಂತೆ ಮಾಡಬೇಕು. ಎಲಿವೇಟೆಡ್‌ ರಸ್ತೆ ಕಾಮಗಾರಿಗಾಗಿ ಮೀಸಲಿಟ್ಟಿರುವ ಹಣವನ್ನು ಮೆಟ್ರೊ ಅಥವಾ ಈಗಿರುವ ವ್ಯವಸ್ಥೆ ಅಭಿವೃದ್ಧಿಪಡಿಸಲು ವಿನಿಯೋಗಿಸುವುದು ಉತ್ತಮ. ಪಾದಚಾರಿ ಮಾರ್ಗ, ಸೈಕಲ್‌ ಟ್ರ್ಯಾಕ್ ಮಾಡುವುದು ಸರ್ಕಾರದ ಆದ್ಯತೆಯಾಗಬೇಕು. ಸರ್ಕಾರ ಇರುವುದು ಜನ ಸಾಮಾನ್ಯರಿಗಾಗಿ ಎಂಬುದನ್ನು ಆಡಳಿತಗಾರರು ಅರಿಯಬೇಕು. ಯೋಜನೆ ರೂಪಿಸುವಾಗ ಮುಂದಿನ ತಲೆಮಾರಿನ ಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು,” ಎನ್ನುತ್ತಾರೆ ನಗರ ತಜ್ಞ ಶ್ರೀಹರಿ.

ಈ ಮಧ್ಯೆ, ಸರ್ಕಾರವು ಮೊದಲ ಹಂತದಲ್ಲಿ ಸಿಲ್ಕ್‌ ಬೋರ್ಡ್‌ನಿಂದ-ಹೆಬ್ಬಾಳ ಎಸ್ಟೀಮ್‌ ಮಾಲ್‌ (೨೩ ಕಿಮೀ), ಎರಡನೇ ಹಂತದಲ್ಲಿ ಕೆ ಆರ್‌ ಪುರಂನಿಂದ-ಗೊರೆಗುಂಟೇಪಾಳ್ಯ (೩೬.೭ ಕಿ ಮೀ), ಮೂರನೇ ಹಂತ ಹಡ್ಸನ್‌ ವೃತ್ತದಿಂದ-ಶಾಂತಿನಗರ (೬.೬ ಕಿಮೀ) ಮತ್ತು ನಾಲ್ಕನೇ ಹಂತದಲ್ಲಿ ಮಿನರ್ವ ವೃತ್ತದಿಂದ-ನೈಸ್‌ ರಸ್ತೆ ಜಂಕ್ಷನ್‌ (೬.೬ ಕಿಮೀ) ಮತ್ತು ಐದನೇ ಹಂತದಲ್ಲಿ ವರ್ತೂರು ಕೋಡಿಯಿಂದ-ರಿಚ್‌ಮಂಡ್‌ ರಸ್ತೆವರೆಗೆ (೧೭.೧೦ ಕಿ ಮೀ) ಎಲೆವೇಟೆಡ್‌ ರಸ್ತೆ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿಕೊಂಡಿದೆ.

ಇದನ್ನೂ ಓದಿ : ಸ್ಟೇಟ್‌ಮೆಂಟ್‌ | ಕುಮಾರಸ್ವಾಮಿ ಬಜೆಟ್‌ ಮಂಡನೆ ಎಂಬ ಪ್ರದರ್ಶನ ಮಾಡುವ ಅಗತ್ಯವಿದೆಯೇ?

“ಸದ್ಯ ಸುಮಾರು ೪೨ ಕಿಮೀ ವ್ಯಾಪ್ತಿಯಲ್ಲಿ ಮೆಟ್ರೊ ಸಂಚಾರ ವ್ಯವಸ್ಥೆಯಿದೆ. ಕೆಲವೇ ಕೆಲವು ಕಡೆ ಮಾತ್ರ ಮೆಟ್ರೊ ಸುರಂಗ ಮಾರ್ಗವಿದೆ. ಸಂಪೂರ್ಣವಾಗಿ ಮೆಟ್ರೊವನ್ನು ಸುರಂಗ ಮಾರ್ಗದಲ್ಲೇ ನಿರ್ವಹಿಸಿದ್ದರೆ ನಗರದ ಸೊಬಗಿಗೆ ಸಮಸ್ಯೆಯಾಗುತ್ತಿರಲಿಲ್ಲ, ಈಗ ಎಲಿವೇಟೆಡ್‌ ರಸ್ತೆ ನಿರ್ಮಾಣವಾದರೆ ಬೆಂಗಳೂರಿನ ಸ್ಥಿತಿ ಮತ್ತಷ್ಟು ಹಾಳಾಗಲಿದೆ. ಜನರು ಫ್ಲೈಓವರ್, ಕಟ್ಟಡಗಳನ್ನೇ ನೋಡುವುದಾದರೆ ಆ ನಗರಕ್ಕೆ ಜೀವಂತಿಕೆ ಎಲ್ಲಿ ಇಳಿಯುತ್ತದೆ? ಮುಂದುವರಿದ ನಗರವಾದ ಲಂಡನ್‌ನಲ್ಲಿ ಸುರಂಗದಲ್ಲಿ ರೈಲು ಸಂಚಾರ ವ್ಯವಸ್ಥೆಯಿದೆ. ಮೆಟ್ರೊ ಯೋಜಿಸುವಾಗ ಈ ಬಗ್ಗೆ ಯೋಚಿಸಬೇಕಿತ್ತು. ಈಗ ಎಲಿವೇಟೆಡ್‌ ರಸ್ತೆ ನಿರ್ಮಾಣದ ಹೆಸರಿನಲ್ಲಿ ಮತ್ತದೇ ತಪ್ಪು ಮಾಡಲಾಗುತ್ತಿದೆ,” ಎಂಬುದು ನಗರ ತಜ್ಞ ವಿ ರವಿಚಂದರ್‌ ಅವರ ವಿವರಣೆ.

ಹಿಂದಿನ ಸಿದ್ದರಾಮಯ್ಯ ಅವರ ಸರ್ಕಾರವು ಸಂಚಾರ ದಟ್ಟಣೆ ತಡೆಯಲು ಸ್ಟೀಲ್‌ ಬ್ರಿಡ್ಜ್‌ ನಿರ್ಮಿಸುವ ಪ್ರಸ್ತಾವ ಮಾಡಿತ್ತು. ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದರಿಂದ ಸರ್ಕಾರ ಅದನ್ನು ಕೈಬಿಟ್ಟಿತ್ತು. ನಗರ, ಪರಿಸರ ಮತ್ತು ಮುಂದಿನ ತಲೆಮಾರಿನ ದೃಷ್ಟಿಯಿಂದ ಅವೈಜ್ಞಾನಿಕವಾದ ಜಗತ್ತಿನ ವಿವಿಧೆಡೆ ವಿಫಲವಾಗಿರುವ ಎಲಿವೇಟೆಡ್‌ ರಸ್ತೆ ನಿರ್ಮಾಣವೂ ಮುಂದಿನ ದಿನಗಳಲ್ಲಿ ವಿವಾದದ ಸ್ವರೂಪ ಪಡೆದರೆ ಆಶ್ವರ್ಯವಿಲ್ಲ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More