ಮೆಗಾ ಬಿಟ್ ಕಾಯಿನ್ ಹಗರಣದಲ್ಲಿ ಗುಜರಾತ್ ಬಿಜೆಪಿ ನಾಯಕರು ಭಾಗಿ ಆಗಿದ್ದಾರೆಯೇ?

ಅಮಿತ್ ಶಾ ನಿರ್ದೇಶಕರಾಗಿದ್ದ ಅಹ್ಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕ್ ನಲ್ಲಿ ಅಪನಗದೀಕರಣದ ವೇಳೆ ಐದೇ ದಿನದಲ್ಲಿ 746 ಕೋಟಿ ಸಂಗ್ರಹವಾಗಿದ್ದು ಸುದ್ದಿಯಾಗಿತ್ತು. ಇದೀಗ ಗುಜರಾತ್ ಬಿಜೆಪಿ ನಾಯಕರು ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾರೆ 

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿರ್ದೇಶಕರಾಗಿದ್ದ ಅಹ್ಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕಿನಲ್ಲಿ ಅಪನಗದೀಕರಣದ ವೇಳೆ ಐದೇ ದಿನದಲ್ಲಿ 746 ಕೋಟಿ ರುಪಾಯಿ ಸಂಗ್ರಹವಾಗಿದ್ದು ಮತ್ತು ಬಿಜೆಪಿ ನಾಯಕರು ನಿರ್ದೇಶಕರು ಮತ್ತು ಅಧ್ಯಕ್ಷರಾಗಿರುವ ಇತರ 11 ಗುಜರಾತ್ ಜಿಲ್ಲಾ ಸಹಕಾರಿ ಬ್ಯಾಂಕುಗಳಲ್ಲಿ 3118 ಕೋಟಿ ರುಪಾಯಿ ಜಮೆಯಾಗಿದ್ದು ಸುದ್ದಿಯಾಗಿತ್ತು. ಈಗ ಅದೇ ಗುಜರಾತ್ ಬಿಜೆಪಿ ನಾಯಕರ ವಿರುದ್ಧ ಕಪ್ಪುಹಣವನ್ನು ಬಿಟ್ ಕಾಯಿನ್‌ನಲ್ಲಿ ತೊಡಗಿಸಿರುವ, ಹವಾಲಾ ಮೂಲಕ ಮೂಲಕ ಸಾಗಿಸಿರುವ, ಪರಿವರ್ತಿಸಿರುವ, ಸುಲಿಗೆ ಮಾಡುತ್ತಿರುವ ಆರೋಪ ಕೇಳಿಬಂದಿದೆ.

ಅಮ್ರೇಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಗದೀಶ್ ಪಟೇಲ್ ಮತ್ತು ಇನ್ಸ್‌ಪೆಕ್ಟರ್ ಅನಂತ್ ಪಟೇಲ್ ಮತ್ತು ಇತರ ಹತ್ತು ಪೇದೆಗಳನ್ನು ಬಿಟ್ ಕಾಯಿನ್ ವ್ಯವಹಾರದಲ್ಲಿ ಸುಲಿಗೆ ಮಾಡುತ್ತಿದ್ದ ಆರೋಪದ ಮೇಲೆ ಬಂಧಿಸಿರುವುದು ಬಿಜೆಪಿ ನಾಯಕರು ಭಾಗಿಯಾಗಿದ್ದಾರೆನ್ನಲಾದ ಬಿಟ್ ಕಾಯಿನ್ ಹಗರಣಕ್ಕೆ ಹೊಸ ಆಯಾಮ ಬಂದಿದೆ. ಅಮ್ರೇಲಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್ ಪಟೇಲ್, ಇನ್ಸ್‌ಪೆಕ್ಟರ್ ಅನಂತ್ ಪಟೇಲ್ ಸೇರಿಕೊಂಡು ಶೈಲೇಶ್ ಭಟ್ ಎಂಬವವರಿಂದ ಸುಮಾರು 10 ಕೋಟಿ ಮೌಲ್ಯದ 200 ಬಿಟ್ ಕಾಯಿನ್ ಸುಲಿಗೆ ಮಾಡಿದ್ದಾರೆ. ಜೊತೆಗೆ 32 ಕೋಟಿ ರುಪಾಯಿ ನಗದು ನೀಡುವಂತೆ ಬೆದರಿಕೆ ಹಾಕಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಭ್ಯವಿದ್ದ ಸಿಸಿಟಿವಿ ದೃಶ್ಯಾವಳಿಗಳ ಸಾಕ್ಷ್ಯ ಆಧರಿಸಿ ಅವರನ್ನು ಬಂಧಿಸಲಾಗಿದೆ.

ಈ ಹಗರಣಕ್ಕೂ ಬಿಜೆಪಿ ನಾಯಕರಿಗೂ ಸಂಬಂಧ ಇದೆ ಎಂಬುದು ಕಾಂಗ್ರೆಸ್ ಮಾಡುತ್ತಿರುವ ಆರೋಪ. “ಕೆಲ ಬಿಜೆಪಿ ನಾಯಕರು ಕಪ್ಪುಹಣವನ್ನು ಬಿಟ್ ಕಾಯಿನ್ ಆಗಿ ಪರಿವರ್ತಿಸುತ್ತಿದ್ದಾರೆ. ಈ ಹಂತದಲ್ಲಿ ಶೈಲೇಶ್ ಸುಲಿಗೆ ಹಗರಣವು ಬೆಳಕಿಗೆ ಬಂದಿದೆ. ಆದ್ದರಿಂದ ಗುಜರಾತಿನಲ್ಲಿ ನಡೆದಿರುವ, ಕಪ್ಪುಹಣವನ್ನು ಬಿಟ್ ಕಾಯಿನ್ ಆಗಿ ಪರಿವರ್ತಿಸಿರುವ ಈ ಹಗರಣ ಕುರಿತಂತೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕು,” ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ. ಕಾಂಗ್ರೆಸ್ ವಕ್ತಾರ ಶಕ್ತಿಸಿಂಹ ಗೋಹಿಲ್, “ಬಿಟ್ ಕಾಯಿನ್ ಹಗರಣವು 5,000 ಕೋಟಿ ಮೀರಿದೆ. ಕೆಲವರು 88,000 ಕೋಟಿ ರುಪಾಯಿಯಷ್ಟಾಗಬಹುದು ಎಂದು ಅಂದಾಜಿಸಿದ್ದಾರೆ, ರಾಜ್ಯ ಬಿಜೆಪಿ ನಾಯಕರು ಕಪ್ಪುಹಣವನ್ನು ಹವಾಲಾ ವಹಿವಾಟಿನ ಮೂಲಕ ಪರಿವರ್ತಿಸುತ್ತಿದ್ದಾರೆ,” ಎಂದು ದೂರಿದ್ದಾರೆ.

“ಸೂರತ್‌ನ ಹಲವು ವ್ಯಾಪಾರಿಗಳನ್ನು ಪೊಲೀಸರು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಈ ಬ್ಲಾಕ್‌ಮೇಲ್ ಪ್ರಕರಣಗಳಲ್ಲಿ ಬಿಜೆಪಿ ಮಾಜಿ ಶಾಸಕನ ಹೆಸರು ಕೇಳಿಬಂದಿದೆ,” ಎಂದು ‘ಅಹ್ಮದಾಬಾದ್ ಮಿರರ್’ ವರದಿ ಮಾಡಿದೆ. “ಬಿಟ್ ಕಾಯಿನ್ ಹಗರಣವನ್ನು ರಾಜ್ಯ ಪೋಲೀಸರು ಭೇದಿಸಿದ್ದರೂ ಯಾವುದೇ ಬಿಜೆಪಿ ನಾಯಕರನ್ನು ಬಂಧಿಸಿಲ್ಲ, ಯಾರ ವಿರುದ್ಧವೂ ಕ್ರಮ ಗೊಂಡಿಲ್ಲ. ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ಅಗತ್ಯ. ಅದ್ಕಕಾಗಿ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಡಿ ಉನ್ನತ ತನಿಖೆ ನಡೆಯಬೇಕು,” ಎಂದು ಕಾಂಗ್ರೆಸ್ ಒತ್ತಾಯಿಸಿದೆ.

“ಬಿಜೆಪಿ ತನ್ನ ಕಪ್ಪುಹಣವನ್ನು ಬಿಳಿ ಹಣವನ್ನಾಗಿ ಮಾಡಿಕೊಳ್ಳಲು ಅಪನಗದೀಕರಣವನ್ನು ಸಮರ್ಥವಾಗಿ ಬಳಸಿಕೊಂಡಿತು. ಈಗ ತಮ್ಮ ಬಳಿ ಉಳಿದ ಕಪ್ಪುಹಣವನ್ನು ಪರಿವರ್ತಿಸಿಕೊಳ್ಳಲು ಬಿಟ್ ಕಾಯಿನ್ ಅನ್ನು ಬಳಸಿಕೊಳ್ಳಲಾಗುತ್ತಿದೆ. ವ್ಯಾಪಾರಿಗಳನ್ನು ಸುಲಿಗೆ ಮಾಡಲಾಗುತ್ತಿದೆ. ಅಹ್ಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕಿನಲ್ಲಿ ಅಪನಗದೀಕರಣವಾದ ಐದೇ ದಿನದಲ್ಲಿ 746 ಕೋಟಿ ರುಪಾಯಿ, ಇತರ ಹನ್ನೊಂದು ಜಿಲ್ಲಾ ಸಹಕಾರಿ ಬ್ಯಾಂಕುಗಳಲ್ಲಿ 3,118 ಕೋಟಿ ರುಪಾಯಿ ಹಳೆ ನೋಟುಗಳು ಹೇಗೆ ಸಂಗ್ರಹವಾದವು ಎಂಬ ಬಗ್ಗೆ ಉತ್ತರ ನೀಡಲು ಬಿಜೆಪಿ ತಡವರಿಸುತ್ತಿದೆ. ಈಗ ಅದೇ ಬಿಜೆಪಿ ನಾಯಕರು 5,000 ಕೋಟಿ ಮೊತ್ತದ ಮೆಗಾ ಬಿಟ್ ಕಾಯಿನಲ್ ಹಗರಣದಲ್ಲಿ ಭಾಗಿಯಾಗಿರುವುದು ಬಹಿರಂಗವಾಗಿದೆ. ಇದು ಬಹು ಹಂತದ ಹಗರಣ. ಅಕ್ರಮ ಹವಾಲಾ ವಹಿವಾಟು, ಅಪಹರಣ, ಸರ್ಕಾರಿ ಆಡಳಿತ ಯಂತ್ರ ಬಳಸಿಕೊಂಡು ಕ್ರಿಪ್ಟೊ ಕರೆನ್ಸಿ ಸುಲಿಗೆಯನ್ನು ಬಿಜೆಪಿ ನಾಯಕರ ಅಣತಿಯಂತೆ ಮಾಡಲಾಗುತ್ತಿದೆ,” ಎಂದು ಕಾಂಗ್ರೆಸ್ ವಕ್ತಾರ ಶಕ್ತಿಸಿಂಹ ಗೋಹಿಲ್ ಆರೋಪಿಸಿದ್ದಾರೆ.

ಇದನ್ನೂ ಓದಿ : ಏರಿದಷ್ಟೇ ಕ್ಷಿಪ್ರವಾಗಿ ಪಾತಾಳಕ್ಕಿಳಿದು ಆತಂಕ ಹುಟ್ಟಿಸಿದ ಬಿಟ್ ಕಾಯಿನ್ 

ಬಿಟ್ ಕಾಯಿನ್ ಹಗರಣದ ತನಿಖೆ ನಡೆಸಿದ ಸಿಐಡಿ, ಈ ಹಗರಣದ ಕೇಂದ್ರಬಿಂದು ಮಾಜಿ ಶಾಸಕನಾಗಿರುವ ಬಿಜೆಪಿ ನಾಯಕ ಎಂದು ಪತ್ತೆಹಚ್ಚಿದೆ. ಆದರೆ, ಆರೋಪಿ ತಲೆಮರೆಸಿಕೊಂಡಿದ್ದಾನೆ. ಅಲ್ಲದೆ, ತನ್ನನ್ನು ಬಂಧಿಸಿದರೆ ಹಗರಣದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಬಯಲಿಗೆಳೆಯುವುದಾಗಿ ವಿಡಿಯೋ ಮೂಲಕ ಬೆದರಿಕೆ ಹಾಕಿದ್ದಾನೆ. ಗುಜರಾತ್ ಸಿಐಡಿ ಕ್ರೈಮ್ ವಿಭಾಗವು ರಾಜಕೀಯ ಕಾರಣಗಳಿಗಾಗಿ ಹಗರಣದ ಪ್ರಮುಖ ಸಾಕ್ಷಿಗಳ ವಿರುದ್ಧ ಒತ್ತಡ ಹೇರುತ್ತಿದೆ. ಮತ್ತೊಂದು ಎಫ್ಐಆರ್‌ನಲ್ಲಿ, ಈಗ ಸುಲಿಗೆಗೆ ಒಳಗಾಗಿ ದೂರು ನೀಡಿರುವ ಭಟ್ ಅವರನ್ನೇ ಮುಖ್ಯ ಆರೋಪಿಯನ್ನಾಗಿ ನಮೂದಿಸಿದರೂ ಅಚ್ಚರಿ ಇಲ್ಲ ಎಂಬ ದೂರು ಕೇಳಿಬಂದಿದೆ.

“ಕೇಂದ್ರದ ನರೇಂದ್ರ ಮೋದಿ ಸರ್ಕಾರ ಜಾರಿ ನಿರ್ದೇಶನಾಲಯ, ಸಿಬಿಐ ಮತ್ತಿತರ ತನಿಖಾ ಸಂಸ್ಥೆಗಳನ್ನು ಬಿಟ್ಟು ಗುಜರಾತ್ ಕಾಂಗ್ರೆಸ್ ಶಾಸಕರನ್ನು ತನಿಖೆಗೆ ಒಳಪಡಿಸುತ್ತದೆ. ಕರ್ನಾಟಕದಲ್ಲಿ ಚುನಾವಣೆ ನಡೆಯುವಾಗ, ನೀತಿಸಂಹಿತೆ ಜಾರಿಯಿದ್ದರೂ ಕಾಂಗ್ರೆಸ್ ಅಭ್ಯರ್ಥಿಗಳ ಮೇಲೆ ದಾಳಿ ಮಾಡಿ ತನಿಖೆ ನಡೆಸಲಾಗುತ್ತದೆ. ಆದರೆ, ಮೋದಿ ಸರ್ಕಾರವು ಮೆಗಾ ಬಿಟ್ ಕಾಯಿನ್ ಹಗರಣದ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ತಲೆಮರೆಸಿಕೊಂಡಿರುವ ಬಿಜೆಪಿ ನಾಯಕ ಇಡೀ ಹಗರಣದಲ್ಲಿ ಹಿರಿಯ ಬಿಜೆಪಿ ನಾಯಕರು ಭಾಗಿಯಾಗಿರುವುದನ್ನು ಬಹಿರಂಗಪಡಿಸಿದ್ದಾನೆ. ಆದರೂ ತನಿಖಾ ಸಂಸ್ಥೆಗಳು ಶೈಲೇಶ್ ಭಟ್ ಅವರನ್ನು ದೂರುದಾರ ಎಂದು ಎಫ್ಐಆರ್‌ನಲ್ಲಿ ನಮೂದಿಸಿಲ್ಲ? ಕೇಂದ್ರದ ಜಾರಿ ನಿರ್ದೇಶನಾಲಯ, ಸಿಬಿಐ ಯಾಕೆ ಇನ್ನೂ ಮೆಗಾ ಬಿಟ್ ಕಾಯಿನ್ ಹಗರಣದ ಬಗ್ಗೆ ತನಿಖೆ ಆರಂಭಿಸಿಲ್ಲ?” ಎಂಬುದು ಪ್ರಶ್ನೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More