ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ ಪ್ರಮುಖ ೫ ಸುದ್ದಿಗಳು

ಇಂದು ನೀವು ಗಮನಿಸಲೇಬೇಕಾದ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ, ಕ್ರೀಡಾ ವಿದ್ಯಮಾನಗಳು  

ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್-ಕೇಜ್ರಿವಾಲ್ ಭೇಟಿ?

ಸುಪ್ರೀಂ ಕೋರ್ಟ್ ಬುಧವಾರ ನೀಡಿದ ಮಹತ್ವದ ತೀರ್ಪಿನ ಕುರಿತು ಚರ್ಚಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಶುಕ್ರವಾರ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರನ್ನು ಶುಕ್ರವಾರ ಭೇಟಿ ಮಾಡುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಸಲಹೆಯಂತೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ನಡೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ಆದೇಶ ನೀಡಿತ್ತು. ಇದರೊಂದಿಗೆ ಬೈಜಾಲ್ ಮತ್ತು ರಾಜ್ಯ ಸರ್ಕಾರದ ನಡುವಿನ ಹೋರಾಟಕ್ಕೆ ತೆರೆಬಿದ್ದಿತು. ಸುಪ್ರೀಂ ತೀರ್ಪಿನ ನಂತರ ಮೊದಲ ಬಾರಿಗೆ ಬೈಜಾಲ್ ಹಾಗೂ ಕೇಜ್ರಿವಾಲ್ ಭೇಟಿ ಕುತೂಹಲ ಮೂಡಿಸಿದೆ.

ಪಶ್ಚಿಮ ಬಂಗಾಳದ ಕಾಂಗ್ರೆಸ್ ನಾಯಕರೊಂದಿಗೆ ರಾಹುಲ್ ಗಾಂಧಿ ಸಭೆ

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಆದ್ಯತೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಶುಕ್ರವಾರ ಪಶ್ಚಿಮ ಬಂಗಾಳ ರಾಜ್ಯ ಘಟಕದ ಮುಖಂಡರೊಂದಿಗೆ ದೆಹಲಿಯಲ್ಲಿ ಸಭೆ ನಡೆಸಲಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಟಿಎಂಸಿ, ಎಡಪಕ್ಷಗಳ ಜೊತೆ ಹೊಂದಾಣಿಕೆ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಆದರೆ, ರಾಜ್ಯ ಕಾಂಗ್ರೆಸ್ ನಾಯಕರು ಹೊಂದಾಣಿಕೆ ಕುರಿತು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಅಮೆರಿಕ ವಸ್ತುಗಳ ಮೇಲೆ ಚೀನಾ ವಿಧಿಸಿರುವ ಹೆಚ್ಚುವರಿ ಸುಂಕ ಇಂದಿನಿಂದ ಜಾರಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾದ ಸರಕಿನ ಮೇಲೆ ಶೇ.25ರಷ್ಟು ತೆರಿಗೆ ಹೆಚ್ಚಿಸಿದ ನಂತರ ಚೀನಾ ಕೂಡ ಅಮೆರಿಕದ 50 ಬಿಲಿಯನ್ ಡಾಲರ್ ಮೊತ್ತದ ವಸ್ತುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಿದ್ದು, ವಿಶ್ವದ ಎರಡು ಬಲಿಷ್ಠ ಆರ್ಥಿಕ ಶಕ್ತಿಗಳ ನಡುವೆ ಸಮರ ಆರಂಭವಾಗಿದೆ. ಚೀನಾ ಅಸಮರ್ಪಕ ವ್ಯಾಪಾರ ಪದ್ಧತಿಯನ್ನು ಅನುಸರಿಸುತ್ತಿದೆ ಎಂದು ಈ ಹಿಂದೆ ಆರೋಪಿಸಿದ ಟ್ರಂಪ್, ಚೀನಾದ ವಸ್ತುಗಳ ಮೇಲೆ ಶೇ. 25ರಷ್ಟು ಸುಂಕವನ್ನು ಹೆಚ್ಚಿಸಿದ್ದರು. ಇದರಿಂದಾಗಿ ಚೀನಾ ಕೂಡ ಈಗ ಅಮೆರಿಕದ ಸುಮಾರು 50 ಬಿಲಿಯನ್ ಡಾಲರ್ ಮೊತ್ತದ 659 ವಸ್ತುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಿದೆ. ಅಮೆರಿಕ ವಸ್ತುಗಳ ಮೇಲೆ ವಿಧಿಸಲಾಗಿರುವ ಹೆಚ್ಚುವರಿ ಸುಂಕದ ಪಟ್ಟಿಯಲ್ಲಿರುವ ವಸ್ತುಗಳನ್ನು ಚೀನಾ ಬಿಡುಗಡೆ ಮಾಡಿದೆ. ಜುಲೈ 6, 2018ರಿಂದ ಜಾರಿಗೆ ಬರುವಂತೆ ಕೃಷಿ ಉತ್ಪನ್ನ, ವಾಹನಗಳು, ಸಾಗರೋತ್ಪನ್ನ ವಸ್ತುಗಳು ಸೇರಿದಂತೆ 34 ಬಿಲಿಯನ್ ಡಾಲರ್ ಮೊತ್ತದ 545 ವಸ್ತುಗಳ  ಹೆಚ್ಚುವರಿ ಸುಂಕ ವಿಧಿಸಿರುವುದಾಗಿ ಚೀನಾ ಕಸ್ಟಮ್ಸ್ ಸುಂಕ ಆಯೋಗ ತಿಳಿಸಿದೆ.

ಫಿಫಾ ವಿಶ್ವಕಪ್: ಎಂಟರ ಘಟ್ಟದ ಕದನ ಕೌತುಕ

ಪ್ರತಿಷ್ಠಿತ ಫಿಫಾ ವಿಶ್ವಕಪ್ ಪಂದ್ಯಾವಳಿಯ ಕ್ವಾರ್ಟರ್‌ಫೈನಲ್ ಹಂತದ ಪಂದ್ಯಗಳು ಇಂದಿನಿಂದ ಆರಂಭವಾಗಲಿವೆ. ರಾತ್ರಿ ೭.೩೦ರಿಂದ ಆರಂಭವಾಗಲಿರುವ ಮೊದಲ ಪಂದ್ಯದಲ್ಲಿ ಉರುಗ್ವೆ ಮತ್ತು ಫ್ರಾನ್ಸ್ ಹಣಾಹಣಿ ನಡೆಯಲಿದ್ದು, ಪಾಲ್ ಪೋಗ್ಬಾ, ಆಂಟನಿ ಗ್ರೀಜ್‌ಮನ್‌ ಫ್ರಾನ್ಸ್ ಪಾಳೆಯದಲ್ಲಿರುವ ಸ್ಟಾರ್ ಆಟಗಾರರು. ಅಂತೆಯೇ, ಉರುಗ್ವೆಯಲ್ಲಿ ಲೂಯಿಸ್ ಸ್ವಾರೆಜ್, ಕವಾನಿಯಂಥ ಅಪಾಯಕಾರಿಗಳು ಪಂದ್ಯದ ಕೌತುಕ ಹೆಚ್ಚಿಸಿದ್ದಾರೆ. ಏತನ್ಮಧ್ಯೆ, ರಾತ್ರಿ ೧೧.೩೦ಕ್ಕೆ ಆರಂಭವಾಗಲಿರುವ ದಿನದ ಎರಡನೇ ಪಂದ್ಯದಲ್ಲಿ ಬಲಿಷ್ಠ ಬ್ರೆಜಿಲ್ ಮತ್ತು ಬೆಲ್ಜಿಯಂ ಸ್ಪರ್ಧೆಗಿಳಿಯಲಿವೆ. ರೊಮೆಲು ಲುಕಾಕು ಮತ್ತು ನೇಮಾರ್ ಈ ಪಂದ್ಯದ ಪ್ರಮುಖ ಆಕರ್ಷಣೆ.

ಅಯೋಧ್ಯಾ ವಿವಾದ; ಸುಪ್ರೀಂ ಕೋರ್ಟ್ ವಿಚಾರಣೆ ಇಂದು

ಬಾಬ್ರಿ ಮಸೀದಿ-ರಾಮ ಮಂದಿರ ಭೂವಿವಾದ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಇಂದು ನಡೆಯಲಿದೆ. ಮೇ 17ರಂದು ವಿಚಾರಣೆ ಮುಂದೂಡಿದ್ದ ಕೋರ್ಟ್, ಬೇಸಿಗೆ ರಜೆ ಕಳೆದ ಬಳಿಕ ಮುಂದಿನ ವಿಚಾರಣೆ ಆರಂಭಿಸುವುದಾಗಿ ಹೇಳಿತ್ತು. ಅಯೋಧ್ಯೆಯ ವಿವಾದಿತ ಜಾಗವನ್ನು ಮೂರು ವಿಭಾಗಗಳಾಗಿ ವಿಂಗಡಿಸಿ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ 13 ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿದ್ದವು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More