ಕೇಂದ್ರ ಯುವ ಪುರಸ್ಕಾರ ವಿವಾದ | ಆಯ್ಕೆ ಸಮಿತಿಯ ಮಾನದಂಡಗಳಾದರೂ ಏನು?

ಪ್ರಸಕ್ತ ಸಾಲಿನ ಕೇಂದ್ರ ಯುವ ಪುರಸ್ಕಾರದ ಬಗ್ಗೆ ತಕರಾರು ಕೇಳಿಬಂದಿವೆ. ಒಂದೇ ಪ್ರಕಾಶನದ ಲೇಖಕರಿಗೆ ಪ್ರಶಸ್ತಿ ಬರುತ್ತಿರುವುದು ಇದಕ್ಕೆ ಕಾರಣ. ಆಯ್ಕೆ ಸಮಿತಿ ಯಾವ ಮಾನದಂಡ ಅನುಸರಿಸಿ ಆಯ್ಕೆ ಮಾಡಿದೆ ಎಂಬ ಪ್ರಶ್ನೆಯನ್ನು ವಿಮರ್ಶಕ ಸುರೇಶ್ ನಾಗಲಮಡಿಕೆ ಎತ್ತಿದ್ದಾರೆ

ಕೇಂದ್ರ ಸಾಹಿತ್ಯ ಅಕಾಡೆಮಿಯು ಮೂವತೈದು ವರ್ಷದೊಳಗಿನ ಲೇಖಕರಿಗೆ ನೀಡುವ ‘ಯುವ ಪುರಸ್ಕಾರ’ ಪ್ರಶಸ್ತಿ ಈಚೆಗೆ ಅನೇಕ ಪ್ರಶ್ನೆಗಳನ್ನು ಎದುರಿಸುತ್ತಿರುವುದು ಸರಿಯಷ್ಟೆ. ಇದಕ್ಕೆ ಕಾರಣಗಳು ಸಾರ್ವಜನಿಕ ವಲಯಗಳಲ್ಲಿ ಒಂದು ಬಗೆಯಲ್ಲಿ ಒಂದು ತೆರನಾದರೆ, ಸಾರ್ವಜನಿಕ ಜಾಗದಂತೆ ಇರುವ ‘ಫೇಸ್ಬುಕ್’ನಂತಹ ಸಾಮಾಜಿಕ ಜಾಲಗಳಲ್ಲಿ ಮತ್ತೊಂದು ತೆರನಾಗಿರುತ್ತದೆ.

ವಾಸ್ತವವಾಗಿ ಈ ವಯಸ್ಸಿನ ಲೇಖಕರಿಗೆ ಈ ಬಗೆಯ ಪ್ರಶಸ್ತಿಗಳು ಯಾಕಾಗಿ ನೀಡುತ್ತಾರೆ ಎಂಬುದು ಮುಖ್ಯ. ಇವರ ಮುಂದಿನ ಬರೆಹ ಇನ್ನೂ ಗಟ್ಟಿಯಾಗಲೆಂದು ಇರಬಹುದು. ಇದುವರೆಗೆ ಈ ಪ್ರಶಸ್ತಿಯನ್ನು ಸ್ವೀಕರಿಸಿದ ಯುವ ಲೇಖಕರು ಎರಡು ಒಳ್ಳೆಯ ಕವಿತೆಗಳನ್ನೋ, ಎರಡು ಕತೆಗಳನ್ನು ಬರೆದಿರುವುದು ಸರಿಯಷ್ಟೇ. ಮತ್ತೂ ಕೆಲವರು ಇದನ್ನು ಜೀವಮಾನದ ಶ್ರೇಷ್ಠ ಪದವಿಯಂತೆ ಬಿಂಬಿಸಿಕೊಂಡಿದ್ದಾರೆ. ನಮ್ಮ ಹಿರಿಯ ವಿದ್ವಾಂಸರು ಇವರನ್ನೇ ಮುಖ್ಯವೆಂದು ಭಾವಿಸಿ, ಇವರಿಗೆ ಮತ್ತು ಇವರ ಕೃತಿಗಳಿಗೆ ‘ಹೊಸ ತಲೆಮಾರಿನ ಪ್ರಾತಿನಿಧ್ಯವನ್ನು’ ನೀಡಿ ಉಳಿದ ಶಕ್ತಿಯುತ ಅನೇಕ ಲೇಖಕರನ್ನು ಉಪೇಕ್ಷಿಸಲಾಗಿದೆ. ಇದು ಇಂದು ತಾರಕಕ್ಕೆ ಮುಟ್ಟಿದೆ.

ಇಷ್ಟಕ್ಕೂ ಈ ಕೇಂದ್ರ ಯುವ ಪುರಸ್ಕಾರ ಪಡೆದಿರುವ ಲೇಖಕರು ಉಳಿದ ಯುವ ಲೇಖಕರಿಗಿಂತ ಯಾವುದರಲ್ಲೂ ಮೇಲಲ್ಲ. ಹಾಗಂತ ಬಿಂಬಿಸಲಾಗುತ್ತಿದೆ ಅಷ್ಟೇ. ಇತ್ತೀಚೆಗೆ ಈ ಯುವ ಪುರಸ್ಕಾರವೂ ಪ್ರತಿವರ್ಷ ಅನೇಕ ವಿವಾದಗಳಿಗೆ ಒಳಗಾಗಲು ಕಾರಣಗಳೇನು? ಈ ಪ್ರಶಸ್ತಿಯನ್ನು ಕಳೆದ ನಾಲ್ಕು ವರ್ಷಗಳಿಂದ ಒಂದೇ ಮೂಲದ, ಗುಂಪಿನ ಅಥವಾ ಒಂದೇ ವಲಯದ ಲೇಖಕರಿಗೆ ನೀಡಲಾಗುತ್ತಿದೆ ಎಂಬುದು ದೊಡ್ಡ ಪ್ರಶ್ನೆ. ಇದು ಕೇವಲ ಆರೋಪವಲ್ಲ. ಈ ಬಗೆಯ ಪ್ರಶ್ನೆಗಳನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯೂ ಪ್ರತಿವರ್ಷ ಗೌಣಗೊಳಿಸಿದೆ.

ಇಷ್ಟಕ್ಕೂ ಈ ಪ್ರಶಸ್ತಿ ಪಡೆದಿರುವ ಲೇಖಕರು ಕೆಟ್ಟ ಲೇಖಕರು ಎಂದು ಹೇಳುವುದಕ್ಕೆ ಆಗುವುದಿಲ್ಲ. ಆದರೆ, ಆಯ್ಕೆದಾರರು ಉಳಿದ ಲೇಖಕರಿಗಿಂತ ಇವರ ಬರೆಹಗಳು ಯಾವ ನಿಟ್ಟಿನಲ್ಲಿ ಭಿನ್ನವೆಂದು ಹೇಳಬೇಕಾಗುತ್ತದೆ. ಇದು ಮಾನದಂಡಗಳ ಡೆಮಾಕ್ರಸಿಯೂ ಆಗಿರುತ್ತದೆ. ಇಲ್ಲದಿದ್ದರೆ, ಇಲ್ಲಿ ಸರಾಗವಾಗಿ ‘ಸಾಂಸ್ಕೃತಿಕ ಯಾಜಮಾನ್ಯ’ ಕೆಲಸ ಮಾಡಿರುತ್ತದೆ.

ಮತ್ತೊಂದು ಪ್ರಶ್ನೆ ಎಂದರೆ, ಈ ಪ್ರಶಸ್ತಿ ‘ಹೊಸ ತಲೆಮಾರಿಗೆ’ ನೀಡುತ್ತಿರುವುದರಿಂದ ಕಳೆದ ಹತ್ತು ವರ್ಷಗಳಿಂದಲೂ ಹೊಸ ತಲೆಮಾರಿನ ಬರೆಹಗಳನ್ನು ಗಂಭೀರವಾಗಿ ಓದುವ ಜೂರಿಗಳನ್ನು (ಇದರಲ್ಲಿ ಹೊಸ ತಲೆಮಾರಿನವರು ಇದ್ದರೂ ಸರಿಯೇ) ಆಯ್ಕೆ ಮಾಡಬೇಕಾಗುತ್ತದೆ. ಆದರೆ, ಎಂದಿಗೂ ಇದಾಗುತ್ತಿಲ್ಲ. ಕನಿಷ್ಠ ಹೊಸ ತಲೆಮಾರಿನ ಹತ್ತು ಪುಸ್ತಕಗಳನ್ನು ಓದಲಾರದ ಹಿರಿಯರನ್ನು ಆಯ್ಕೆ ಸಮಿತಿಗೆ ಸೇರಿಸಲಾಗುತ್ತಿದೆ. ಇವರು ತಮ್ಮ ಅಪ್‌ಡೇಟ್ ಆಗದ ಆಲೋಚನೆಗಳು ಮತ್ತು ಹೊರಗಡೆಯಿಂದ ಬರುವ ಶಿಫಾರಸುಗಳಿಗೆ ಒಳಗಾಗಿ ಗಟ್ಟಿ ಲೇಖಕರಿಗೆ ಅನ್ಯಾಯ ಮಾಡುತ್ತಿರುತ್ತಾರೆ.

ಇದನ್ನೂ ಓದಿ : ಒಂದೇ ಪ್ರಕಾಶನದ ಲೇಖಕರಿಗೆ ಸತತ 3 ವರ್ಷ ಕೇಂದ್ರ ಯುವ ಪುರಸ್ಕಾರ, ವಿವಾದ

ಇಷ್ಟಕ್ಕೂ ಈ ಯುವ ಪುರಸ್ಕಾರ ನೀಡುವ ಉದ್ದೇಶ ಆರಂಭದಲ್ಲಿ ಚೆನ್ನಾಗಿಯೇ ಇತ್ತು. ಆದರೆ, ಇಂದು ಕೆಲ ಯುವ ಲೇಖಕರು ಗಟ್ಟಿಯಾದ ಬರೆಹದ ಬದಲು ಒಂದು ವರ್ಷದಿಂದಲೇ ಇದಕ್ಕೆ ಲಾಭಿ ಮಾಡುತ್ತಿರುವುದು ಕಂಡುಬರುತ್ತದೆ. ಜೀವಂತ ಬರೆಹಕ್ಕಿಂತ ಕಟೌಟ್ ರಾಜಕಾರಣ ಮೆರೆಯುತ್ತಿರುವುದು ಈ ಕಾಲದ ದುರಂತ. ಇದರಾಚೆಯೂ ಹೊಸ ತಲೆಮಾರಿನ ಅನೇಕ ಲೇಖಕರು ತಮ್ಮ ಪಾಡಿಗೆ ತಾವು ಒಳ್ಳೆಯ ಸಾಹಿತ್ಯವನ್ನೇ ನೀಡುತ್ತಿದ್ದಾರೆ. ಬಹುತ್ವದ ಆಯಾಮಗಳನ್ನು ಯಾವುದೇ ಬಹುಮಾನಗಳ ಆಯ್ಕೆದಾರರು ಒಪ್ಪಿಕೊಳ್ಳಬೇಕಾಗುತ್ತದೆ. ಅದಾಗದಿದ್ದಾಗ ಈ ಬಗೆಯ ಏಕತ್ವದ ನಿಲುವುಗಳು ಮುನ್ನೆಲೆಗೆ ಬರುತ್ತವೆ.

ಮೊದಲು ಆಯ್ಕೆಯ ವ್ಯವಸ್ಥೆಯೇ ಹಲವು ಗೊಂದಲಗಳಿಂದ, ಪ್ರಜಾಸತ್ತಾತ್ಮಕವಲ್ಲದ ಸರ್ವಾಧಿಕಾರದತನದಿಂದ ಕೂಡಿದೆಯೇ ಎಂಬ ಪ್ರಶ್ನೆ ಕಾಡುತ್ತದೆ. ಆಯ್ಕೆದಾರರು ಅಥವಾ ಯಾರೇ ಆಗಲೀ, ಭಾರತದ, ಕರ್ನಾಟಕದ ಬಹುತ್ವದ ಅನುಭವಗಳನ್ನು, ಅದರ ವೈವಿಧ್ಯತೆಯನ್ನು ಅರಿಯಬೇಕಾಗುತ್ತದೆ. ಕಳೆದ ಒಂದು ಶತಮಾನದಿಂದ ಈ ಬಗೆಯ ಹಲ ಬಗೆಯ ಅನುಭವಗಳ ಬರೆಹಗಳು ಬರುತ್ತಿವೆ. ಅವುಗಳನ್ನು ಅರ್ಥೈಸಿಕೊಳ್ಳುವ, ಸಮಚಿತ್ತದಿಂದ ಆಲೋಚಿಸುವ ವ್ಯವಧಾನವೂ ಇರಬೇಕಾಗುತ್ತದೆ. ಇಷ್ಟಕ್ಕೂ ಈ ಬಗೆಯ ಬಹುಮಾನಗಳನ್ನು ಪಡೆದ ಕೃತಿಗಳೇ ಶ್ರೇಷ್ಠವೆಂಬ ಕಾಲಮಾನ ನಶಿಸಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More