ಪೊಲೀಸರ ಬಳಿ ಅವಧಿ ಮೀರಿದ ಶಸ್ತ್ರಾಸ್ತ್ರ, ಮದ್ದುಗುಂಡು ಖಾಲಿ: ಸಿಎಜಿ ವರದಿ

ರಾಜ್ಯ ಪೊಲೀಸ್‌ ಪಡೆ ಅಧುನಿಕವಾಗಿ ಸಜ್ಜುಗೊಳ್ಳುವುದರಲ್ಲಿ ತೀವ್ರ ಹಿನ್ನೆಡೆ ಸಾಧಿಸಿದೆ. ಪೊಲೀಸ್‌ ಇಲಾಖೆಯನ್ನು ಆಧುನಿಕ ತಂತ್ರಜ್ಞಾದಿಂದ ಬಲಪಡಿಸಲು ರೂಪಿಸಿದ್ದ ಯೋಜನೆಗಳು ನಿರೀಕ್ಷಿತ ಯಶಸ್ಸು ಕಂಡಿಲ್ಲ. ಮುಖ್ಯವಾಗಿ, ಪೊಲೀಸ್‌ ಠಾಣೆಗಳಲ್ಲಿ ಶಸ್ತ್ರಾಸ್ತ್ರ ಕೊರತೆ ಇರುವುದನ್ನು ಸಿಎಜಿ ಪತ್ತೆಹಚ್ಚಿದೆ

ರಾಜ್ಯದಲ್ಲಿರುವ ಬಹುತೇಕ ಪೊಲೀಸ್‌ ಠಾಣೆಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಶಸ್ತ್ರಾಸ್ತ್ರಗಳೇ ಇಲ್ಲ. ಶಸ್ತ್ರಾಸ್ತ್ರಗಳು ಇದ್ದರೂ ಅವನ್ನು ದಾಸ್ತಾನು ಮಾಡಲು ಕೊಠಡಿಗಳೂ ಇಲ್ಲ. ಶಸ್ತ್ರಾಸ್ತ್ರಗಳು ಇದ್ದರೂ ಅವಧಿ ಮೀರಿಹೋಗಿವೆ. ವಿವಿಧ ಪೊಲೀಸ್‌ ಘಟಕಗಳಿಗೆ ಮದ್ದುಗುಂಡುಗಳು ಸರಬರಾಜು ಮಾಡಿದ್ದರೂ ೧೮ ಪೊಲೀಸ್‌ ಠಾಣೆಗಳಲ್ಲಿ ಸೂಕ್ತ ಮದ್ದುಗುಂಡುಗಳಿಲ್ಲ. ಪೊಲೀಸ್‌ ಠಾಣೆಗಳಲ್ಲೇ ಶಸ್ತ್ರಾಸ್ತ್ರಗಳನ್ನು ಇಟ್ಟಿರುವುದು ಅವುಗಳ ದುರ್ಬಳಕೆ ಆಗುವುದಕ್ಕೆ ಅನುಕೂಲ ಮಾಡಿಕೊಟ್ಟಂತಾಗಿದೆ. ಇನ್ನು, ಪೊಲೀಸ್‌ ಪಡೆಯ ಆಧುನೀಕರಣಕ್ಕೆ ನೀಡಲಾಗಿದ್ದ ಕೋಟ್ಯಂತರ ಮೊತ್ತದ ಅನುದಾನವನ್ನು ಆಧುನಿಕ ಶಸ್ತ್ರಾಸ್ತ್ರಗಳಿಂದ ಸಜ್ಜುಗೊಳಿಸಬೇಕಿದ್ದ ಗೃಹ ಇಲಾಖೆ ಗಮನಹರಿಸಿಲ್ಲ.

ರಾಜ್ಯದ ಪೊಲೀಸ್‌ ವ್ಯವಸ್ಥೆ ಹೇಗಿದೆ ಎಂಬುದನ್ನು ಪ್ರಧಾನ ಮಹಾಲೇಖಪಾಲರ ವರದಿ ತೆರೆದಿಟ್ಟಿದೆ. ೨೦೧೭ರ ಮಾರ್ಚ್ ಅಂತ್ಯಕ್ಕೆ ಗೃಹ ಸಚಿವಾಲಯಕ್ಕೆ ಸಂಬಂಧಿಸಿದಂತೆ ಸಿಎಜಿ ಸಲ್ಲಿಸಿರುವ ವರದಿ, ಪೊಲೀಸ್‌ ಠಾಣೆಗಳಲ್ಲಿನ ಮೂಲಸೌಕರ್ಯ, ಅನುದಾನ ಬಳಕೆ, ನಕ್ಸಲ್‌ ನಿಗ್ರಹ ಪಡೆ ಸೇರಿದಂತೆ ವಿಶೇಷ ತಂಡಗಳ ಕಾರ್ಯವಿಧಾನದ ಕುರಿತು ಬೆಳಕು ಚೆಲ್ಲಿದೆ.

ರಾಜ್ಯದ ೬೦ ಪೊಲೀಸ್‌ ಠಾಣೆಗಳಲ್ಲಿ ಬ್ಯಾರಕ್‌ಗಳು, ಶೌಚಾಲಯಗಳು, ಸಾಕ್ಷಿ ವಿಚಾರಣೆ ಕೊಠಡಿಗಳು, ಆಯುಧಗಳಿಗಾಗಿ ಸುಭದ್ರವಾದ ಕೊಠಡಿಗಳು ಸೇರಿದಂತೆ ಭೌತಿಕ ಮೂಲಸೌಕರ್ಯಗಳು ನಿರೀಕ್ಷಿತ ಪ್ರಮಾಣದಲ್ಲಿ ಇರಲಿಲ್ಲ. ಪೊಲೀಸ್‌ ಸಂಶೋಧನೆ ಮತ್ತು ಅಭಿವೃದ್ಧಿ ಮಾನದಂಡಗಳಿಗೆ ಹೋಲಿಸಿದರೆ ಆಧುನಿಕ ಶಸ್ತ್ರಾಸ್ತ್ರಗಳ ಕೊರತೆ ಇರುವುದನ್ನು ಸಿಎಜಿ ವರದಿ ಬಹಿರಂಗಪಡಿಸಿದೆ.

“ಶಸ್ತ್ರಾಸ್ತ್ರಗಳು ಮತ್ತು ಸಂಪರ್ಕ ಉಪಕರಣಗಳ ಖರೀದಿಯಲ್ಲಿನ ಕೊರತೆ ಹಾಗೂ ಪೊಲೀಸ್‌ ಪಡೆಗಳ ತರಬೇತಿಯಲ್ಲಿನ ಕೊರತೆಯಿಂದ ಪೊಲೀಸ್‌ ಪಡೆಯ ಅಧುನೀಕರಣದ ಉದ್ದೇಶಿತ ಗುರಿಯನ್ನು ಪೂರ್ಣವಾಗಿ ಸಾಧಿಸಲಾಗಲಿಲ್ಲ,” ಎಂದು ಸಿಎಜಿ ವರದಿ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ : ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸುವ ಎಸಿಬಿಗೆ ಕನಿಷ್ಠ ನಿಯಮಾವಳಿ ಬೇಡವೇ?

ಶಸ್ತ್ರಾಸ್ತ್ರಗಳನ್ನು (೨೦೧೨-೧೩ರಿಂದ ೨೦೧೬-೧೭) ಖರೀದಿಸಿದ್ದರೂ ಅದು ಅವಶ್ಯಕತೆ ಇರುವಷ್ಟು ಪ್ರಮಾಣದಲ್ಲಿ ಇರಲಿಲ್ಲ. ಪ್ರತಿ ಪೊಲೀಸ್‌ ಠಾಣೆಗೂ ಅತ್ಯಂತ ಅವಶ್ಯಕವಿದ್ದ ೦.೩೦೩ ಟ್ರಂಕೇಟೆಡ್‌ ರೈಫಲ್‌ಗಳ ಗರಿಷ್ಠ ಪ್ರಮಾಣದಲ್ಲಿ ಕೊರತೆ ಅನುಭವಿಸಿದೆ. ಹಾಗೆಯೇ ೩,೨೫೫ ಸಂಖ್ಯೆಯಲ್ಲಿ ಎಕೆ ೪೭ ಅಸಾಲ್ಟ್‌ ರೈಫಲ್‌ಗಳ ಖರೀದಿಗೆ ೭.೩೦ ಕೋಟಿ ರೂ.ಗಳನ್ನು ಸಿಆರ್‌ಪಿಎಫ್‌ಗೆ ೨೦೧೫ರಲ್ಲೇ ಪಾವತಿಸಿದೆಯಾದರೂ, ಇಲಾಖೆಗೆ ರೈಫಲ್‌ಗಳು ಇನ್ನೂ ಸರಬರಾಜು ಆಗಿಲ್ಲ. ಅಲ್ಲದೆ, ಅಸಾಲ್ಟ್‌ ರೈಫಲ್‌ಗಳು ಬೇಕಿದ್ದಿದ್ದು ೪೦೦. ಆದರೆ ೧,೨೦೦ ರೈಫಲ್‌ಗಳನ್ನು ಅಧಿಕವಾಗಿ ಖರೀದಿಸಿರುವುದಕ್ಕೆ ಸಿಎಜಿ ಅಕ್ಷೇಪ ವ್ಯಕ್ತಪಡಿಸಿದೆ.

ಇನ್ನು, ಇತರ ವರ್ಗಗಳ ಶಸ್ತ್ರಾಸ್ತ್ರಗಳು, ಬಿಡಿಭಾಗಗಳು ಅದರಲ್ಲೂ ವಿಶೇಷವಾಗಿ ಲೇಸರ್‌ ಸೈಟ್‌ ಡಿವೈಸ್‌, ಕಾರ್ನರ್‌ ಶಾರ್ಟ್‌ ವಿಶನ್‌ ಸೈಟ್‌ ಅಂಡ್‌ ಜಂಪ್‌ ಗ್ರೇನೇಡ್‌ಗಳನ್ನು ಇಲಾಖೆ ಖರೀದಿಸಲಿಲ್ಲ. ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ಗಳಿಗೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಉಪಯೋಗಿಸಲು ತರಬೇತಿಯನ್ನೇ ನೀಡಿರಲಿಲ್ಲ. ಎಕೆ೪೭ ರೈಫಲ್‌ಗಳು ಲಭ್ಯವಿದ್ದರೂ ಎಸ್‌ಎಲ್‌ಆರ್‌ ಪಿಸ್ತೂಲುಗಳಿಂದಲೇ ಫೈರಿಂಗ್‌ ಅಭ್ಯಾಸ ನಡೆಸಿದೆ. ಹೀಗಾಗಿ ಆಧುನಿಕ ಶಸ್ತ್ರಾಸ್ತ್ರಗಳನ್ನು ನಿಭಾಯಿಸಲು ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ಗಳಿಗೆ ಅವಕಾಶ ಸಿಗಲಿಲ್ಲ.

ಮದ್ದುಗುಂಡುಗಳಿಲ್ಲ: ರಾಜ್ಯದ ೧೮ ಪೊಲೀಸ್‌ ಠಾಣೆಗಳಲ್ಲಿ ಸೂಕ್ತ ಮದ್ದುಗುಂಡುಗಳಿಲ್ಲ. ಹೀಗಾಗಿ, ಶಸ್ತ್ರಾಸ್ತ್ರಗಳನ್ನು ಠಾಣೆಗಳಲ್ಲಿಡಲಾಗಿದೆ. ಕೆಲ ಠಾಣೆಗಳಲ್ಲಿ ಶಸ್ತ್ರಾಸ್ತ್ರಗಳಿದ್ದರೂ ಮದ್ದುಗುಂಡುಗಳಿರಲಿಲ್ಲ. ಮದ್ದುಗುಂಡುಗಳು ಮತ್ತು ಶಸ್ತ್ರಾಸ್ತ್ರಗಳಿದ್ದರೂ ಅವೆಲ್ಲವೂ ನಿರರ್ಥಕವಾಗಿವೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.

ವಿಧಿವಿಜ್ಞಾನ ಪ್ರಯೋಗಾಲಯಗಳಲ್ಲಿ (ಎಫ್‌ಎಸ್‌ಎಲ್‌) ಅರ್ಹತೆ ಹೊಂದಿರುವ ತಾಂತ್ರಿಕ ಸಿಬ್ಬಂದಿಗಳಿಲ್ಲ. ತರಬೇತಿ ಶಾಲೆಗಳಲ್ಲಿ ಪ್ರಮುಖ ಶಸ್ತ್ರಾಸ್ತ್ರ ಕಡಿಮೆ ಸಂಖ್ಯೆಯಲ್ಲಿದ್ದರೂ ಪರೇಡ್‌ಗೆ ಅವಶ್ಯವಿದ್ದ ಡಿಪಿ ರೈಫಲ್‌ಗಳು ಯಾವುದೇ ತರಬೇತಿ ಕೇಂದ್ರಗಳಲ್ಲಿ ಲಭ್ಯವಿರಲಿಲ್ಲ. ಬೆಳಗಾವಿ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಫೈರಿಂಗ್‌ ಅಭ್ಯಾಸ ನಡೆಸಲು ತಮ್ಮದೇ ಆದ ಫೈರಿಂಗ್‌ ವಲಯ ಇರಲಿಲ್ಲ. ತುಮಕೂರು ಜಿಲ್ಲೆಯಲ್ಲಿ ಫೈರಿಂಗ್‌ ಅಭ್ಯಾಸ ನಡೆಸಲು ೫ ಎಕರೆ ಸರ್ಕಾರಿ ಭೂಮಿ ಹಂಚಿಕೆ ಮಾಡಿದ್ದರೂ ಖಾಸಗಿ ಭೂಮಿಯಲ್ಲೇ ಅಭ್ಯಾಸ ನಡೆಸಲಾಗುತ್ತಿತ್ತು ವರದಿ ತಿಳಿಸಿದೆ.

ಅದೇ ರೀತಿ, ನಕ್ಸಲ್‌ ನಿಗ್ರಹ ಪಡೆ, ವಿಶೇ‍ಷ ಶಸ್ತ್ರಾಸ್ತ್ರ ಕಾರ್ಯತಂತ್ರ ಪಡೆಗಳ ಕಾರ್ಯನಿರ್ವಹಣೆ ಕುರಿತು ಸಿಎಜಿ ವಿವರಿಸಿದೆ. ರಾಜ್ಯದಲ್ಲಿ ೧೪ ನಕ್ಸಲ್‌ ನಿಗ್ರಹ ಪಡೆಗಳಿದ್ದರೂ ಶೇ.೫೦ರಷ್ಟು ಸಿಬ್ಬಂದಿಗೆ ವಿಶೇಷ ತರಬೇತಿಯನ್ನೇ ನೀಡಿರಲಿಲ್ಲ. ಕಾರ್ಕಳದಲ್ಲಿ ೨.೦೨ ಕೋಟಿ ರೂ. ವೆಚ್ಚದಲ್ಲಿ ಜಂಗಲ್‌ ಕ್ಯಾಂಪ್‌ ಅನ್ನು ನಿಗದಿತ ಅವಧಿಯೊಳಗೆ ಸ್ಥಾಪಿಸಲಿಲ್ಲ ಎಂಬುದರತ್ತ ಸಿಎಜಿ ಗಮನ ಸೆಳೆದಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More