14 ಬೆಳೆಗಳ ಪರಿಷ್ಕೃತ ಬೆಂಬಲ ಬೆಲೆ ಕುರಿತು ರೈತರು ತಿಳಿಯಲೇಬೇಕಾದ 4 ಅಂಶಗಳಿವು

14 ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಿರುವುದಾಗಿ ಆರ್ಥಿಕ ವ್ಯವಹಾರಗಳ ಸಂಸದೀಯ ಸಮಿತಿ ಘೋಷಿಸಿದೆ. ರೈತರ ಆದಾಯ ಹೆಚ್ಚಿಸುವುದಾಗಿ ಪ್ರಧಾನಿ ನೀಡಿದ ಆಶ್ವಾಸನೆ ಹಿನ್ನೆಲೆಯಲ್ಲಿ ಇದು ಮಹತ್ವದ ಹೆಜ್ಜೆ. ಈ ಕುರಿತು ‘ಸ್ಕ್ರಾಲ್’ ಜಾಲತಾಣದಲ್ಲಿ ಮೃದುಲಾಚಾರಿ ಬರೆದ ಲೇಖನದ ಭಾವಾನುವಾದವಿದು

ಭತ್ತ, ಹತ್ತಿ, ಸೋಯಾಬೀನ್, ದ್ವಿದಳಧಾನ್ಯ ಮತ್ತು ಕಿರುಧಾನ್ಯಗಳನ್ನೂ ಒಳಗೊಂಡಂತೆ ಮುಂಗಾರು ಹಂಗಾಮಿನ 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆಗಳನ್ನು ಹೆಚ್ಚಿಸಿರುವುದಾಗಿ ಆರ್ಥಿಕ ವ್ಯವಹಾರಗಳ ಸಂಸದೀಯ ಸಮಿತಿಯು ಮಂಗಳವಾರ ಘೋಷಿಸಿದೆ.

ಇದನ್ನು 'ಆಮೂಲಾಗ್ರ ಬದಲಾವಣೆ' ಹಾಗೂ 'ಚಾರಿತ್ರಿಕ' ನಡೆ ಎಂದು ಕೇಂದ್ರದ ಕೃಷಿ ಸಚಿವಾಲಯ ಪತ್ರಿಕಾ ಹೇಳಿಕೆಯಲ್ಲಿ ಬರ್ಣಣಿಸಿದೆ. ಬೆಳೆಯನ್ನು ಬೆಳೆಯುವುದಕ್ಕೆ ತಗುಲಿದ ವೆಚ್ಚಕ್ಕೆ ಅದರ ಅರ್ಧದಷ್ಟನ್ನು ಸೇರಿಸಿ ಕನಿಷ್ಠ ಬೆಂಬಲ ಬೆಲೆ ನೀಡುವುದಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ತಮ್ಮ ಇತ್ತೀಚಿನ ಬಜೆಟ್‍ನಲ್ಲಿ ಮಾಡಿದ ವಾಗ್ದಾನವನ್ನೂ ಈ ಘೋಷಣೆ ಈಡೇರಿಸಿದೆ ಎಂದು ಹೇಳಲಾಗಿದೆ. ಕೃಷಿ ಸಚಿವಾಲಯದ ಪ್ರಕಾರ, 2022ರ ಹೊತ್ತಿಗೆ ರೈತರ ಆದಾಯವನ್ನು ದ್ವಿಗುಣ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಹಾಗೂ ಕಳೆದ ನಾಲ್ಕು ವರ್ಷಗಳಲ್ಲಿ ಅನೇಕ ಸಲ ಪುನರಾವರ್ತನೆ ಮಾಡಿದ ಆಶ್ವಾಸನೆಯನ್ನು ಈಡೇರಿಸಲು ಈ ಕ್ರಮ ನೆರವಾಗಲಿದೆ. ಈ ಕುರಿತು ನೀವು ತಿಳಿದುಕೊಳ್ಳಬೇಕಾದ ನಾಲ್ಕು ಪ್ರಮುಖ ಸಂಗತಿಗಳು ಇಲ್ಲಿವೆ.

1. ಕನಿಷ್ಠ ಬೆಂಬಲ ಬೆಲೆ ಎಂದರೇನು ಮತ್ತು ಅದನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

ಸರ್ಕಾರವು 23 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವುದಾಗಿ ಘೋಷಿಸಿದೆ. ಅಂದರೆ, ಈ ಬೆಳೆಗಳ ಬೆಲೆ ಮುಕ್ತ ಮಾರುಕಟ್ಟೆಯಲ್ಲಿ ಒಂದು ಹಂತಕ್ಕಿಂತ ಕೆಳಗೆ ಕುಸಿದಾಗ ಸರ್ಕಾರವೇ ನೇರವಾಗಿ ರೈತರಿಂದ ನಿಗದಿತ ಬೆಲೆಯಲ್ಲಿ ಈ ಬೆಳೆಗಳನ್ನು ಖರೀದಿಸುತ್ತದೆ ಎಂದರ್ಥ. ಈ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿ ಮಾಡುವಾಗ ಆ ಬೆಳೆ ಬೆಳೆಯುವುದಕ್ಕೆ ತಗುಲಿದ ಖರ್ಚನ್ನು ಪ್ರಧಾನವಾಗಿ ಲೆಕ್ಕ ಹಾಕಲಾಗುತ್ತದೆ.

‘ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗ’ವು ಮೂರು ಮಾನದಂಡಗಳನ್ನು ಬಳಸಿ ಒಂದೊಂದು ಬೆಳೆಯನ್ನು ಬೆಳೆಯುವುದಕ್ಕೆ ತಗುಲಿದ ಖರ್ಚನ್ನು ಅಂದಾಜಿಸುತ್ತದೆ. ಅದರಲ್ಲಿ ಮೊದಲನೆಯದು ಎ2. ಇದು ರೈತರು ಒಂದು ಹಂಗಾಮಿನಲ್ಲಿ ಒಂದು ಬೆಳೆ ಬೆಳೆಯುವುದಕ್ಕಾಗಿ ಆದ ಖರ್ಚು. ಇದು ಬೀಜ, ಗೊಬ್ಬರ, ಕ್ರಿಮಿನಾಶಕ ಮತ್ತು ಕೃಷಿಕೂಲಿಕಾರರಿಗೆ ಕೊಟ್ಟ ಕೂಲಿ ಮುಂತಾದವುಗಳನ್ನು ಒಳಗೊಂಡಿರುತ್ತದೆ.

ಎರಡನೆಯದು ಎ2+ಎಫ್‍ಎಲ್. ಇದರಲ್ಲಿ ಬೆಳೆ ಬೆಳೆಯುವುದಕ್ಕೋಸ್ಕರ ಮಾಡಿದ ಖರ್ಚಿನ ಜೊತೆಗೆ ಕುಟುಂಬದ ಸದಸ್ಯರು ಜಮೀನಿನಲ್ಲಿ ಮಾಡಿದ ಕೆಲದ ಆರ್ಥಿಕ ಮೌಲ್ಯವೂ ಸೇರಿರುತ್ತದೆ. ಏಕೆಂದರೆ, ಕುಟುಂಬದ ಸದಸ್ಯರು ತಾವೇ ಕೆಲಸ ಮಾಡದೆ ಅದಕ್ಕೆ ಕೂಲಿಕಾರರನ್ನು ತೆಗೆದುಕೊಂಡಿದ್ದರೆ ಅವರಿಗೆ ಕೂಲಿ ಕೊಡಬೇಕಾಗುತ್ತಿತ್ತು. ಹೀಗಾಗಿ, ಮನೆಯವರೇ ಕೆಲಸ ಮಾಡಿದ್ದರೂ ಆ ಕೂಲಿಯ ವೆಚ್ಚವನ್ನು ಇಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ.

ಮೂರನೆಯದು ಸಿ3. ಇದರಲ್ಲಿ ಎ2+ಎಫ್‍ಎಲ್ ಮೊತ್ತಕ್ಕೆ ಭೂಮಿಯ ಬಾಡಿಗೆ ಮತ್ತು ಬಡ್ಡಿಯನ್ನೂ ಒಳಗೊಂಡಂತೆ ಒಟ್ಟಾರೆಯಾಗಿ ಹೂಡಲಾದ ಬಂಡವಾಳ ಆಸ್ತಿಯ ಮೌಲ್ಯವನ್ನು ಸೇರಿಸಲಾಗುತ್ತದೆ.

ಈ ವರ್ಷ ಸರ್ಕಾರ ಎ2+ಎಫ್‍ಎಲ್ ಮೊತ್ತಕ್ಕೆ ಕನಿಷ್ಠ ಅದರ ಅರ್ಧದಷ್ಟನ್ನು ಸೇರಿಸಿ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿದೆ.

2. ಉತ್ಪಾದನಾ ವೆಚ್ಚಕ್ಕೆ ಅದರ ಅರ್ಧದಷ್ಟನ್ನು ಸೇರಿಸಿ ಬೆಂಬಲ ಬೆಲೆ ನಿಗದಿ ಮಾಡುವುದು ಏಕೆ ಮುಖ್ಯ?

2014ರ ಸಾರ್ವತ್ರಿಕ ಚುನಾವಣೆಯ ಪ್ರಚಾರಾಭಿಯಾನದ ಸಂದರ್ಭದಲ್ಲಿ ಮೋದಿಯವರು ನೀಡಿದ ಪ್ರಮುಖ ಆಶ್ವಾಸನೆಗಳಲ್ಲಿ ಇದೂ ಒಂದಾಗಿತ್ತು. ಆದರೆ, ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಭಾರತೀಯ ಜನತಾ ಪಕ್ಷದ ನೇತೃತ್ವದಲ್ಲಿದ್ದ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚು ಬೋನಸ್ ನೀಡುವ ರಾಜ್ಯಗಳ ನೀತಿಯನ್ನೇ ರದ್ದುಗೊಳಿಸಿತು.

2017ನೇ ಸಾಲಿನಲ್ಲಿ ದೇಶಾದ್ಯಂತ ನಡೆದ ರೈತರ ಪ್ರತಿಭಟನೆಗಳಲ್ಲಿ ಉತ್ಪಾದನಾ ವೆಚ್ಚಕ್ಕೆ ಅದರ ಅರ್ಧದಷ್ಟನ್ನು ಸೇರಿಸಿ ಕನಿಷ್ಠ ಬೆಂಬಲ ಬೆಲೆ ನೀಡಬೇಕು ಎಂಬುದು ಒಂದು ಪ್ರಮುಖ ಹಕ್ಕೊತ್ತಾಯವಾಗಿತ್ತು. ಏಕೆಂದರೆ, ಉತ್ಪಾದನಾ ವೆಚ್ಚ ಮತ್ತು ಅದಕ್ಕೆ ಶೇ.50ರಷ್ಟನ್ನು ಸೇರಿಸುವುದು ಎಂದರೆ, ಸಿ2 ಮೊತ್ತಕ್ಕೆ ಶೇ.50ರನ್ನು ಸೇರಿಸುವುದು ಎಂದರ್ಥವೇ ಹೊರತು ಕೇವಲ ಎ2+ಎಫ್‍ಎಲ್ ಮೊತ್ತಕ್ಕೆ ಅದರ ಶೇಕಡ 50ರಷ್ಟನ್ನು ಸೇರಿಸುವುದಲ್ಲ ಎಂದು ರೈತರು ನಂಬಿದ್ದರು.

ಆದರೆ, ಈಗ ಸರ್ಕಾರ ಏರಿಕೆ ಮಾಡಿರುವ ಕನಿಷ್ಠ ಬೆಂಬಲ ಬೆಲೆಗಳಲ್ಲಿ ಕೇವಲ ಸಜ್ಜೆಯ ಬೆಲೆ ಮಾತ್ರ ಸಿ2 ಮೊತ್ತಕ್ಕಿಂತ ಶೇ.50ರಷ್ಟು ಹೆಚ್ಚಿದೆ; ಉಳಿದ ಬಹುತೇಕ ಬೆಳೆಗಳ ಬೆಂಬಲ ಬೆಲೆ ಸಿ2 ಮೊತ್ತದ ಶೇ.14ರಷ್ಟು ಮಾತ್ರ ಹೆಚ್ಚಿದೆ. ಎಳ್ಳಿನ ಕನಿಷ್ಠ ಬೆಂಬಲ ಬೆಲೆಯಂತೂ ಸಿ2 ಮೊತ್ತಕ್ಕಿಂತ ಶೇ.3ರಷ್ಟು ಮಾತ್ರ ಹೆಚ್ಚಿದೆ. ಉತ್ತರ ಭಾರತದ ಬಹುಮುಖ್ಯ ಬೆಳೆಯಾಗಿರುವ ಭತ್ತದ ಕನಿಷ್ಠ ಬೆಂಬಲ ಬೆಲೆ ಸಿ2 ಮೊತ್ತಕ್ಕಿಂತ ಕೇವಲ ಶೇ.12ರಷ್ಟು ಹೆಚ್ಚಿದೆಯಷ್ಟೆ.

ಸಿ2 ಉತ್ಪಾದನಾ ವೆಚ್ಛಕ್ಕೆ ಹೋಲಿಸಿ ವಿವಿಧ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯ ಪಟ್ಟಿ
ಇದನ್ನೂ ಓದಿ : ರೈತರ ಸಾಲಮನ್ನಾಕ್ಕೆ ಅಸ್ತು, ಹಿಂದಿನ ಸರ್ಕಾರಗಳ ಯೋಜನೆಗಳು ಅಬಾಧಿತ

ಕೃಷಿ ವಿಜ್ಞಾನಿ ಎಂ ಎಸ್ ಸ್ವಾಮಿನಾಥನ್ ಅವರ ನೇತೃತ್ವದ ರಾಷ್ಟ್ರೀಯ ರೈತರ ಆಯೋಗವು 2006ರಲ್ಲಿ ಸಲ್ಲಿಸಿದ ವರದಿಯಿಂದಲೇ ವಾಸ್ತವದಲ್ಲಿ ಈ ಬೇಡಿಕೆ ಹುಟ್ಟಿಕೊಂಡಿದ್ದು. ಈ ವರದಿ ಮಾಡಿದ ಅನೇಕ ಶಿಫಾರಸುಗಳ ಪೈಕಿ, ಬೆಳೆ ಬೆಳೆಯುವುದಕ್ಕೆ ಮಾಡಲಾದ ಸಿ2 ಉತ್ಪಾದನಾ ವೆಚ್ಛದ ಕನಿಷ್ಠ ಒಂದೂವರೆ ಪಟ್ಟನ್ನು ಕನಿಷ್ಠ ಬೆಂಬಲ ಬೆಲೆಯಾಗಿ ನೀಡಬೇಕು ಎಂಬುದೂ ಒಂದಾಗಿತ್ತು. ಕಳೆದ ಒಂದು ದಶಕದ ಬಹುತೇಕ ಅವಧಿಯಲ್ಲಿ ಬಹಳಷ್ಟು ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಎ2+ಎಫ್‍ಎಲ್ ಉತ್ಪಾದನಾ ವೆಚ್ಚಕ್ಕಿಂತ ಶೇ.50ರಷ್ಟು ಹೆಚ್ಚಿತ್ತು.

3. ಇದು ನಿಜಕ್ಕೂ ಕನಿಷ್ಠ ಬೆಂಬಲ ಬೆಲೆಯಲ್ಲಿ ಇದುವರೆಗಿನ ಅತ್ಯಂತ ಹೆಚ್ಚಿನ ಹೆಚ್ಚಳವೇ?

2012-13ರಲ್ಲಿ ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಇಷ್ಟೇ ಪ್ರಮಾಣದ ಕನಿಷ್ಠ ಬೆಂಬಲ ಬೆಲೆ ಏರಿಕೆಯಾಗಿತ್ತು. ಆಗ ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆಯನ್ನು ಭತ್ತಕ್ಕೆ ಶೇ.15ರಷ್ಟು ಹಾಗೂ ಜೋಳಕ್ಕೆ ಶೇ.53ರಷ್ಟು ಹೆಚ್ಚಿಸಿತ್ತು. ಅದಕ್ಕಿಂತ ಮುಂಚೆ ಮತ್ತು ಅದರ ನಂತರದಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿನ ಏರಿಕೆಯು ಶೇ.1 ಮತ್ತು ಶೇ.10 ನಡುವೆ ಹೊಯ್ದಾಡುತ್ತ ನಗಣ್ಯವಾಗಿತ್ತು.

ಈ ವರ್ಷ ಕನಿಷ್ಠ ಬೆಂಬಲ ಬೆಲೆಯು ತೊಗರಿ ಮತ್ತು ಹೆಸರುಕಾಳಿಗೆ (ಇವುಗಳ ಬೆಲೆ ಯಾವಾಗಲೂ ಏರುಪೇರಾಗುತ್ತಿರುತ್ತವೆ) ಶೇ.4ರಷ್ಟು ಏರಿಕೆಯಾಗಿದ್ದರೆ, ರಾಗಿಗೆ ಶೇ.52ರಷ್ಟು ಏರಿಕೆಯಾಗಿದೆ. ಕುರುಶಣಯ (ಹುಚ್ಚೆಳ್ಳು) ಕನಿಷ್ಠ ಬೆಂಬಲ ಬೆಲೆಯು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.45ರಷ್ಟು ಏರಿಕೆಯಾಗಿದ್ದು, 2009-10ರ ನಂತರದಲ್ಲಿ ಇದೇ ಅತಿ ಹೆಚ್ಚಿನ ಹೆಚ್ಚಳವಾಗಿದೆ ಎಂದು ಕೃಷಿ ಇಲಾಖೆ ಹೇಳಿಕೊಂಡಿದೆ.

4. ಕನಿಷ್ಠ ಬೆಂಬಲ ಬೆಲೆಗಳು ರೈತರಿಗೆ ನೆರವಾಗುತ್ತವೆಯೇ?

ಸರ್ಕಾರವು 23 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಿದೆಯಾದರೂ ವಾಸ್ತವದಲ್ಲಿ ಅದು ಹೆಚ್ಚಾಗಿ ಖರೀದಿಸುವುದು ಭತ್ತ, ಗೋದಿ ಮತ್ತು ಕೆಲವು ಬೇಳೆಕಾಳುಗಳನ್ನು ಮಾತ್ರ. ಭತ್ತ ಮತ್ತು ಗೋದಿಗಳೆರಡೂ ಜನರ ಮೂಲ ಆಹಾರವಾಗಿದ್ದರಿಂದ ಅವುಗಳನ್ನು ಖರೀದಿಸಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಆರ್ಥಿಕವಾಗಿ ದುರ್ಬಲರಾದ ಜನರಿಗೆ ಹಂಚಬಹುದು. ಭತ್ತ ಮತ್ತು ಕಾಳುಗಳ ವಿಷಯದಲ್ಲೂ ಸರ್ಕಾರ ಬಹುಪಾಲನ್ನು ಉತ್ತರ ಭಾರತದ ರಾಜ್ಯಗಳಾದ ಪಂಜಾಬ್ ಮತ್ತು ಹರ್ಯಾಣಗಳಿಂದಲೇ ಖರೀದಿಸುತ್ತದೆ. ತಾವು ಬೆಳೆದ ಬೆಳೆಗಳನ್ನು ಸರ್ಕಾರ ಖರೀದಿಸುತ್ತೋ ಇಲ್ಲವೋ ಎಂಬ ಅನಿಶ್ಚಿತತೆ ಉಳಿದ ರಾಜ್ಯಗಳ ರೈತರಿಗೆ ಯಾವಾಗಲೂ ಇದ್ದೇ ಇರುತ್ತದೆ.

ಇನ್ನು, ಉಳಿದ ಬೆಳೆಗಳ ವಿಷಯಕ್ಕೆ ಬರುವುದಾದರೆ, ಕನಿಷ್ಠ ಬೆಂಬಲ ಬೆಲೆ ಎಂಬುದು ಬಹುತೇಕ ಕಾಗದದ ಮೇಲಷ್ಟೇ ಇರುತ್ತದೆ. ಮಾರುಕಟ್ಟೆಯಲ್ಲಿ ಬೆಳೆಗಳ ಬೆಲೆಗಳು ಕುಸಿದಾಗ ಇತರ ಕೆಲವು ಯೋಜನೆಗಳ ಮೂಲಕ ರೈತರನ್ನು ರಕ್ಷಿಸುವ ಪ್ರಯೋಗಗಳನ್ನು ಸರ್ಕಾರ ಮಾಡುತ್ತಿದೆ. ಉದಾಹರಣೆಗೆ, ಮಾರುಕಟ್ಟೆಯಲ್ಲಿ ಬೆಲೆ ಕುಸಿದಾಗ ಕೆಲವು ಬೆಳೆಗಳಿಗೆ ಅವುಗಳ ಉತ್ಪಾದನಾ ವೆಚ್ಛ ಮತ್ತು ಮಾರುಕಟ್ಟೆಯಲ್ಲಿನ ದರದ ನಡುವಿನ ಅಂತರವನ್ನು ತುಂಬಿಕೊಡುವುದಾಗಿ ಕಳೆದ ವರ್ಷ ಬಿಜೆಪಿ ಆಡಳಿತದ ಮಧ್ಯಪ್ರದೇಶ ಮತ್ತು ಹರ್ಯಾಣ ಸರ್ಕಾರಗಳು ಆಶ್ವಾಸನೆ ನೀಡಿದ್ದವು. ಆದರೆ, ಈ ಯೋಜನೆಗಳು ಇಲ್ಲಿಯತನಕ ಅಷ್ಟೇನೂ ಯಶಸ್ವಿಯಾಗಿಲ್ಲ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More