ಇಂದಿನ ಡೈಜೆಸ್ಟ್ | ನೀವು ಓದಲೇಬೇಕಾದ ಇತರ 10 ಪ್ರಮುಖ ಸುದ್ದಿಗಳು

ನೀವು ತಪ್ಪಿಸಿಕೊಂಡಿರಬಹುದಾದ ಹಾಗೂ ಗಮನಿಸಲೇಬೇಕಾದ ಇಂದಿನ ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ

ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್‌ಗೆ 10 ವರ್ಷ ಜೈಲುಶಿಕ್ಷೆ

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ಅವರು ಭ್ರಷ್ಟಾಚಾರ ಪ್ರಕರಣದಲ್ಲಿ ಹತ್ತು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಅವರ ಪುತ್ರಿ ಮರ್ಯಾಮ್ ಮತ್ತು ಪತಿ ಕ್ಯಾಪ್ಟನ್ ಸಫ್ದರ್ ಅವರಿಗೆ ಅನುಕ್ರಮವಾಗಿ ಏಳು ವರ್ಷ ಮತ್ತು ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಪಾಕಿಸ್ತಾನ ನ್ಯಾಯಾಲಯ ತೀರ್ಪು ನೀಡಿದೆ‌. ಪ್ರಕರಣವು ಲಂಡನ್‌ನಲ್ಲಿ ನಿವೇಶನ ಖರೀದಿಗೆ ಸಂಬಂಧಿಸಿಟ್ಟಿದ್ದು, 2016 ರಲ್ಲಿ ಪನಾಮ ಪೇಪರ್ಸ್ ಸೋರಿಕೆಯಾದ ನಂತರ ಬೆಳಕಿಗೆ ಬಂದಿತು.

ಆರೋಪಿ ಬಂಧನ ದಾಖಲೆಯಲ್ಲಿ ಜಾತಿ ನಮೂದು ಬೇಡ: ರಾಜಸ್ಥಾನ ಹೈಕೋರ್ಟ್‌

ಆರೋಪಿಯ ಬಂಧನ ದಾಖಲೆ ಹಾಗೂ ಜಾಮೀನು ಅರ್ಜಿಯಲ್ಲಿ ಜಾತಿಯ ಹೆಸರು ನಮೂದಿಸಬಾರದು ಎಂದು ರಾಜಸ್ಥಾನ ಹೈಕೋರ್ಟ್‌ ಪೊಲೀಸರಿಗೆ ಸೂಚಿಸಿದೆ. ಈ ಮೂಲಕ ಜಾತಿರಹಿತ ಸಮಾಜ ನಿರ್ಮಾಣ ಮಾಡಲು ಸರ್ಕಾರ ಮುಂದಾಗಬೇಕು ಎಂದು ಕೋರ್ಟ್‌‌ ಹೇಳಿದ್ದು, ಎಸ್‌ಸಿ ಮತ್ತು ಎಸ್‌ಟಿಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಜಾತಿ ನಮೂದಿಸುವುದು ಕಡ್ಡಾಯ ಎಂದಿದೆ. ಬಂಧಿತ ವ್ಯಕ್ತಿಯೋರ್ವನಿಗೆ ಜಾಮೀನು ದೊರೆತು ಐದು ದಿನಗಳಾದರೂ ಆತ ಬಿಡುಗಡೆಯಾಗಿರಲಿಲ್ಲ; ದಾಖಲೆಗಳಲ್ಲಿ ಭಿನ್ನ ಜಾತಿ ನಮೂದಾಗಿದ್ದರಿಂದ ಈ ಸಮಸ್ಯೆಯಾಗಿತ್ತು.

ಕೇಜ್ರಿವಾಲ್‌ಗೆ ಸಹಕಾರ ನೀಡುವಂತೆ ಕೇಂದ್ರಕ್ಕೆ ಶಿವಸೇನೆ ಮನವಿ

ದೆಹಲಿ ಸರ್ಕಾರ ಮತ್ತು ಕೇಂದ್ರದ ನಡುವಿನ ಜಟಾಪಟಿಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ, ಆಮ್ ಆದ್ಮಿ ಪಕ್ಷದೊಂದಿಗೆ ಸಹಕರಿಸಿ, ಕೇಜ್ರಿವಾಲ್ ಅವರಿಗೆ ಕೆಲಸ ಮಾಡಲು ಅನುವು ಮಾಡಿಕೊಡಬೇಕು ಎಂದು ಅಭಿಪ್ರಾಯಪಟ್ಟಿದೆ. ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ಮತ್ತು ಆಪ್‌ ಸರಕಾರದ ನಡುವಿನ ಹಗ್ಗಜಗ್ಗಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಯಸಿದ್ದರೆ ಎಲ್‌ಜಿ ಅವರನ್ನು ನಿಯಂತ್ರಿಸಬಹುದಾಗಿತ್ತು. ಆದರೆ ಅವರು ಹಾಗೆ ಮಾಡದಿದ್ದುದು ದುರದೃಷ್ಟಕರ ಎಂದು ಶಿವಸೇನೆ ಟೀಕಿಸಿದೆ.

ಮಲ್ಯ ಆಸ್ತಿಯಿಂದ ೯೬೩ ಕೋಟಿ ರು. ವಶಪಡಿಸಿಕೊಂಡ ಎಸ್‌ಬಿಐ

ಮದ್ಯದ ದೊರೆ ವಿಜಯ್ ಮಲ್ಯ ಅವರ ಭಾರತೀಯ ಆಸ್ತಿ ಹರಾಜು ಹಾಕುವ ಮೂಲಕ 963 ಕೋಟಿ ರೂ. ಮರುಪಡೆಯಲಾಗಿದೆ ಎಂದು ಎಸ್ ಬಿಐ ವ್ಯವಸ್ಥಾಪಕ ನಿರ್ದೇಶಕ ಅರ್ಜಿತ್ ಬಸು ಶುಕ್ರವಾರ ತಿಳಿಸಿದ್ದಾರೆ. ಲಂಡನ್ ನಲ್ಲಿರುವ ವಿಜಯ್‌ ಮಲ್ಯ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಲು ಬ್ರಿಟನ್ ಕೋರ್ಟ್ ಭಾರತೀಯ ಬ್ಯಾಂಕ್ ಗಳಿಗೆ ಅನುಮತಿ ನೀಡಿದೆ. ಈ ಆದೇಶದಿಂದಾಗಿ ಮಲ್ಯ ಅವರ ವಿದೇಶಿ ಆಸ್ತಿ ಜಪ್ತಿ ಮಾಡಲು ಅನುಕೂಲವಾಗಲಿದೆ ಎಂದಿದ್ದಾರೆ. ವಿವಿಧ ರಾಷ್ಟ್ರೀಯ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ಮರುಪಾವತಿಸದೆ ಮಲ್ಯ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದರು.

ಇನ್‌ಸ್ಟಾಗ್ರಾಮ್‌ನಲ್ಲಿ ದೀಪಿಕಾಗೆ 25 ಮಿಲಿಯನ್‌ ಫಾಲೋವರ್ಸ್‌

ಬಾಲಿವುಡ್‌ ತಾರೆ ದೀಪಿಕಾ ಪಡುಕೋಣೆ ಅವರ ಇನ್‌ಸ್ಟಾಗ್ರಾಮ್ ಫಾಲೋಯರ್ಸ್‌ ಸಂಖ್ಯೆ 25 ಮಿಲಿಯನ್‌ ಮುಟ್ಟಿದೆ. ದೀಪಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ‘ಫ್ಲೈಯಿಂಗ್‌ ಕಿಸ್’‌ ವಿಡಿಯೋ ಪೋಸ್ಟ್‌ ಮಾಡುವುದರೊಂದಿಗೆ ಅಭಿಮಾನಿಗಳೊಂದಿಗೆ ಈ ಸಂಭ್ರಮ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯವಾಗಿರುವ ಪ್ರಧಾನಿ ಮೋದಿ ಮತ್ತು ನಟ ಅಮಿತಾಭ್‌ ಬಚ್ಚನ್‌ರನ್ನೂ ಅವರು ಹಿಂದಿಕ್ಕಿದ್ದಾರೆ. ಮೋದಿ 13.5 ಮಿಲಿಯನ್‌ ಹಾಗೂ ಅಮಿತಾಭ್‌ 9.5 ಮಿಲಿಯನ್ ಫಾಲೋಯರ್ಸ್ ಹೊಂದಿದ್ದಾರೆ. ವಿರಾಟ್ ಕೊಹ್ಲಿ (22.7 ಮಿಲಿಯನ್‌), ಶಾರುಖ್ ಖಾನ್‌ (13.3), ಸಲ್ಮಾನ್ ಖಾನ್‌ (17.3), ಅಮೀರ್ ಖಾನ್‌ (1.2), ರಣವೀರ್ ಸಿಂಗ್‌ (13.3) ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋಯರ್ಸ್ ಹೊಂದಿರುವ ಇತರೆ ಪ್ರಮುಖ ಸೆಲೆಬ್ರಿಟಿಗಳು.

ಸುಪ್ರೀಂ ಆದೇಶಕ್ಕೆ ಕೇಂದ್ರ ವಿರೋಧ: ಸಿಎಂ ಕೇಜ್ರಿವಾಲ್ ಆರೋಪ

ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಹಾಗೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಧ್ಯೆ ಅಧಿಕಾರಕ್ಕಾಗಿ ನಡೆಯುತ್ತಿದ್ದ ಸಂಘರ್ಷಕ್ಕೆ ಇತ್ತೀಚೆಗೆ ಸುಪ್ರೀಂ ಕೋರ್ಟ್‌ ತೆರೆ ಎಳೆದಿದ್ದರೂ ಅಧಿಕಾರದ ಮುಸುಕಿನ ಗುದ್ದಾಟ ಮುಂದುವರಿದಿದೆ. ಕೇಜ್ರಿವಾಲ್ ಈ ಕುರಿತು ಸುದ್ದಿಗೋಷ್ಠಿ ನಡೆಸಿ, “ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಬಹಿರಂಗವಾಗಿ ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೊಳಿಸಲು ನಿರಾಕರಿಸಿದೆ. ಇದು ಅರಾಜಕತೆಗೆ ಕಾರಣವಾಗಲಿದೆ. ಲೆಫ್ಟಿನೆಂಟ್ ಗವರ್ನರ್ ಬೈಜಾಲ್ ಅವರು ಸೇವಾ ಇಲಾಖೆಗಳನ್ನು ಚುನಾಯಿತ ಸರ್ಕಾರದ ಅಧಿನಕ್ಕೆ ಕೊಡಲು ಒಪ್ಪುತ್ತಿಲ್ಲ ಮತ್ತು ಈ ಸಂಬಂಧ ಕೇಂದ್ರ ಗೃಹ ಸಚಿವಾಲಯದ ಸಲಹೆ ಪಡೆದಿದ್ದಾರೆ,” ಎಂದು ಆರೋಪಿಸಿದ್ದಾರೆ.

ಏಷ್ಯಾಡ್ ಹಾಕಿ: ಭಾರತ ವನಿತಾ ತಂಡಕ್ಕೆ ರಾಣಿ ಸಾರಥ್ಯ

ಮುಂಬರಲಿರುವ ಪ್ರತಿಷ್ಠಿತ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ವನಿತಾ ಹಾಕಿ ತಂಡವನ್ನು ರಾಣಿ ರಾಂಪಾಲ್ ಮುನ್ನಡೆಸಲಿದ್ದಾರೆ. ಕಳೆದ ವರ್ಷ ನಡೆದ ೯ನೇ ಮಹಿಳಾ ಏಷ್ಯಾ ಕಪ್‌ನಲ್ಲಿ ಭಾರತ ತಂಡವನ್ನು ರಾಣಿ ಯಶಸ್ವಿಯಾಗಿ ಮುನ್ನಡೆಸಿದ್ದರು. ಇದೇ ಆಗಸ್ಟ್ ೧೮ರಿಂದ ಜಕಾರ್ತಾ ಮತ್ತು ಪಲೇಮ್‌ಬ್ಯಾಂಗ್‌ನಲ್ಲಿ ಶುರುವಾಗಲಿರುವ ಏಷ್ಯಾಡ್ ಕೂಟಕ್ಕೆ ಭಾರತ ವನಿತಾ ತಂಡವನ್ನು ಹಾಕಿ ಇಂಡಿಯಾ ಪ್ರಕಟಿಸಿದ್ದು ತಂಡ ಇಂತಿದೆ: ರಾಣಿ (ನಾಯಕಿ), ಸವಿತಾ (ಉಪನಾಯಕಿ), ರಜನಿ ಎಟಿಮರ್ಪು, ಡೀಪ್ ಗ್ರೇಸ್ ಎಕ್ಕಾ, ಸುನಿತಾ ಲಾಕ್ರಾ, ದೀಪಿಕಾ, ಗುರ್ಜೀತ್ ಕೌರ್, ರೀನಾ ಖೋಖರ್, ನಮಿತಾ ಟೊಪ್ಪೊ, ಲಿಲಿಮಾ ಮಿಂಜ್, ಮೋನಿಕಾ, ಉದಿತಾ, ನಿಕ್ಕಿ ಪ್ರಧಾನ್, ನೇಹಾ ಗೋಯಲ್, ವಂದನಾ ಕಟಾರಿಯಾ, ಲಾಲ್ರೆಮ್‌ಸಿಯಾಮಿ, ನವನೀತ್ ಕೌರ್ ಹಾಗೂ ನವ್ಜೋತ್ ಕೌರ್.

ಇಂಡೋನೇಷಿಯಾ ಬ್ಯಾಡ್ಮಿಂಟನ್‌: ಸಿಂಧು-ಪ್ರಣಯ್ ಸವಾಲಿಗೆ ತೆರೆ

ಇಂಡೋನೇಷಿಯಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಸವಾಲಿಗೆ ತೆರೆ ಬಿದ್ದಿದೆ. ಇಂದು ನಡೆದ ಕ್ವಾರ್ಟರ್‌ಫೈನಲ್ ಸೆಣಸಾಟದಲ್ಲಿ ಪಿ ವಿ ಸಿಂಧು ಮತ್ತು ಎಚ್ ಎಚ್ ಪ್ರಣಯ್ ಕ್ರಮವಾಗಿ ವನಿತೆಯರ ಮತ್ತು ಪುರುಷರ ವಿಭಾಗದಲ್ಲಿ ಸೋಲನಭವಿಸಿದರು. ಮೊದಲಿಗೆ, ಪುರುಷರ ವಿಭಾಗದಲ್ಲಿ ಎಚ್ ಎಸ್ ಪ್ರಣಯ್, ಚೀನಿ ಆಟಗಾರ ಶಿ ಯುಕಿ ಎದುರು ೧೭-೨೧, ೧೮-೨೧ರ ಎರಡು ನೇರ ಗೇಮ್‌ಗಳಲ್ಲಿ ಮಣಿದರು. ಅವರ ಸೋಲಿನೊಂದಿಗೆ ಭಾರತದ ಏಕಾಂಗಿ ಸ್ಪರ್ಧಿಯಾಗಿ ಸಿಂಧು ಉಳಿದುಕೊಂಡಿದ್ದರಾದರೂ, ಇದೇ ಚೀನಾದ ಹೀ ಬಿಂಗ್ಜಿಯಾವೊ ಎದುರಿನ ಹಣಾಹಣಿಯಲ್ಲಿ ೧೪-೨೧, ೧೫-೨೧ರಿಂದ ಸೋತು ತಲ್ಲಣಿಸಿದರು. ವಿಶ್ವದ ಮೂರನೇ ಶ್ರೇಯಾಂಕಿತೆ ಸಿಂಧು ವಿರುದ್ಧ ೮ನೇ ಶ್ರೇಯಾಂಕಿತೆ ಬಿಂಗ್ಜಿಯಾವೊ ಆಕ್ರಮಣಕಾರಿ ಆಟದೊಂದಿಗೆ ಸೆಮಿಫೈನಲ್‌ಗೆ ಅರ್ಹತೆ ಪಡೆದರು.

ಹಂತಹಂತವಾಗಿ ಪೆಟ್ರೋಲ್, ಡೀಸೆಲ್ ಜಿಎಸ್ಟಿ ವ್ಯಾಪ್ತಿಗೆ: ಹಸ್ಮುಖ್ ಹಾದಿಯಾ

ಈಗ ಜಿಎಸ್ಟಿ ವ್ಯಾಪ್ತಿಯಿಂದ ಹೊರಗಿರುವ ಪೆಟ್ರೋಲ್, ಡೀಸೆಲ್, ಎಟಿಎಫ್, ನೈಸರ್ಗಿಕ ಅನಿಲವನ್ನು ಹಂತ ಹಂತವಾಗಿ ಜಿಎಸ್ಟಿ ವ್ಯಾಪ್ತಿಗೆ ತರಲಾಗುತ್ತದೆ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ಹಸ್ಮುಖ್ ಹಾದಿಯಾ ಹೇಳಿದ್ದಾರೆ. ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಮಂಡಳದಲ್ಲಿ (ಫಿಕ್ಕಿ) ಜಿಎಸ್ಟಿ ಒಂದು ವರ್ಷದ ಪಯಣ ಕುರಿತು ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ಜಿಎಸ್ಟಿ ವ್ಯಾಪ್ತಿಗೆ ತರಬೇಕೆಂಬ ಬೇಡಿಕೆ ನಮ್ಮ ಮುಂದಿದೆ. ಅದನ್ನು ಹಂತಹಂತವಾಗಿ ಈಡೇರಿಸಲಾಗುತ್ತದೆ ಎಂದಿದ್ದಾರೆ. ಪ್ರಸ್ತುತ ಪೆಟ್ರೋಲ್, ಡೀಸೆಲ್‌, ನೈಸರ್ಗಿಕ ಅನಿಲ, ಎಟಿಎಫ್, ಕಚ್ಚಾ ತೈಲಗಳ ಮೇಲೆ ಜಿಎಸ್ಟಿ ಪೂರ್ವದಲ್ಲಿದ್ದ ಮೌಲ್ಯವರ್ಧಿತ ತೆರಿಗೆ ಹಾಕಲಾಗುತ್ತಿದೆ. ಜಿಎಸ್ಟಿ ತೆರಿಗೆ ವ್ಯಾಪ್ತಿಗೆ ಬಂದರೆ ದರ ಗಣನೀಯವಾಗಿ ಇಳಿಯುತ್ತದೆ.

ಮೈತ್ರಿ ಸರ್ಕಾರದ ಶಾಸಕರಿಂದ ಮುಂದುವರಿದ ಅಸಮಾಧಾನ

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಆಯವ್ಯಯಕ್ಕೆ ಶಾಸಕಾಂಗ ಪಕ್ಷದ ಸದಸ್ಯರಿಂದಲೇ ಟೀಕೆ ಹಾಗೂ ಅಸಮಾಧಾನ ವ್ಯಕ್ತವಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ಮೊದಲ ಬಜೆಟ್ ನ ಅಂಶಗಳು ಮೈತ್ರಿ ಸರ್ಕಾರದ ಶಾಸಕರಿಗೆ ಅಸಮಾಧಾನ ತಂದಿದೆ. ಹಾಸನ-ರಾಮನಗರ ಅಣ್ತಮ್ಮ ಬಜೆಟ್ ಎಂಬ ಹಣೆಪಟ್ಟಿ ಮೈತ್ರಿ ಸರ್ಕಾರಕ್ಕೆ ಒಳ್ಳೆಯದಲ್ಲ. ಅಷ್ಟೇ ಅಲ್ಲದೆ, ಉತ್ತರ ಕರ್ನಾಟಕ, ಮಲೆನಾಡು ಪ್ರದೇಶಗಳ ನಿರ್ಲಕ್ಷ್ಯ ಜೆಡಿಎಸ್ ಬೆಳವಣಿಗೆಗೆ ಪೂರಕವಾಗುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ಸುಧಾಕರ್, ಸಚಿವ ಶಿವಾನಂದ ಪಾಟೀಲ್ ಅವರು ಅಸಮಾಧಾನ ಹೊರಹಾಕಿದ್ದಾರೆ. ಎಚ್‌ಡಿಕೆ ಬಜೆಟ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಉತ್ತರ ಕರ್ನಾಟಕದ ಕೆಲವು ಕಡೆಗಳಲ್ಲಿ ಪ್ರತಿಭಟನೆಗಳು ನಡೆದಿವೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More