ಒಂದೇ ಪ್ರಕಾಶನದ ಲೇಖಕರಿಗೆ ಸತತ 3 ವರ್ಷ ಕೇಂದ್ರ ಯುವ ಪುರಸ್ಕಾರ, ವಿವಾದ

ಯುವ, ಹೊಸ ತಲೆಮಾರಿನ ಲೇಖಕರನ್ನು ಪೋಷಿಸುವುದಕ್ಕಾಗಿ ಆರಂಭಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಇದೀಗ ವಿವಾದಕ್ಕೆ ಗುರಿಯಾಗಿದೆ. ಒಂದೇ ಪ್ರಕಾಶನದ ಲೇಖಕರಿಗೆ ಸತತ 3 ವರ್ಷ ಈ ಪ್ರಶಸ್ತಿ ಬಂದಿರುವುದು ಅನುಮಾನಕ್ಕೆ, ಪಕ್ಷಪಾತದ ಆರೋಪಗಳಿಗೆ ಕಾರಣವಾಗಿದೆ

ಪತ್ರಕರ್ತ ಹಾಗೂ ಯುವ ಕತೆಗಾರ ಪದ್ಮನಾಭ ಭಟ್‍ ಶೇವ್ಕಾರ ಅವರ ‘ಕೇಪಿನ ಡಬ್ಬ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ನೀಡುವ ಯುವ ಪುರಸ್ಕಾರ ಲಭಿಸಿದೆ. ಬೆನ್ನಿಗೇ, ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಶಸ್ತಿ ಕುರಿತು ಅನುಮಾನ ಮತ್ತು ತಕರಾರುಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣ, ಕಳೆದ ಮೂರು ವರ್ಷಗಳಲ್ಲಿ ಒಂದೇ ಪ್ರಕಾಶನಕ್ಕೆ ಸೇರಿದ ಲೇಖಕರು ಈ ಯುವ ಪುರಸ್ಕಾರಕ್ಕೆ ಭಾಜನರಾಗಿರುವುದು.

ಭಾರತದ 24 ಭಾಷೆಗಳಿಗೆ ನೀಡಲಾಗುವ ಈ ಪುರಸ್ಕಾರದಲ್ಲಿ ಕನ್ನಡಕ್ಕೂ ಪ್ರತಿವರ್ಷ ಪ್ರಶಸ್ತಿ ಮೀಸಲಿರುತ್ತದೆ. ವೀರಣ್ಣ ಮಡಿವಾಳ, ಆರಿಫ್‌ ರಾಜಾ, ಲಕ್ಕೂರು ಸಿ ಆನಂದ್, ಕಾವ್ಯಾ ಕಡಮೆ, ಮೌನೇಶ್‌ ಬಡಿಗೇರ್, ಶಾಂತಿ ಕೆ ಅಪ್ಪಣ್ಣ, ವಿಕ್ರಮ್‌ ಹತ್ವಾರ್ ಇದುವರೆಗೂ ಈ ವಿಭಾಗದಲ್ಲಿ ಪ್ರಶಸ್ತಿ ಪಡೆದವರು.

ಮೌನೇಶ್‍ ಬಡಿಗೇರ್‌ (ಮಾಯಾ ಕೋಲಾಹಲ, 2016), ಶಾಂತಿ ಕೆ ಅಪ್ಪಣ್ಣ (ಮನಸು ಅಭಿಸಾರಿಕೆ, 2017) ಮತ್ತು ಈಗ ಪದ್ಮನಾಭ ಭಟ್‍ ಅವರ ಪುಸ್ತಕಗಳನ್ನು ಛಂದ ಪ್ರಕಾಶನವೇ ಪ್ರಕಟಿಸಿದೆ. ಈಗ ಅನುಮಾನಗಳಿಗೆ ಕಾರಣವಾಗಿರುವ ಸಂಗತಿ ಕೂಡ ಇದೇ ಆಗಿದೆ.

ಈ ಬಗ್ಗೆ ಸಂಶೋಧಕ, ಕವಿ ಅರುಣ್‌ ಜೋಳದಕೂಡ್ಲಿಗಿ ತಮ್ಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಕೆಲ ಪ್ರಶ್ನೆಗಳನ್ನು ಎತ್ತಿದ್ದಾರೆ. “ಹೊಸ ತಲೆಮಾರಿನ ಕರ್ನಾಟಕದ ಬೇರೆ ಬೇರೆ ಪ್ರದೇಶಗಳ, ಪುಟ್ಟಪುಟ್ಟ ಸಮುದಾಯಗಳ ಅನೇಕ ಯುವ ಲೇಖಕರು ತೀರಾ ಭಿನ್ನ‌ ಸಂವೇದನೆಗಳಿಂದ ಬರೆಯುತ್ತಿದ್ದಾರೆ. ಅವರ ಕೃತಿಗಳನ್ನು ಸ್ಥಳೀಯ ಪ್ರಕಾಶನಗಳು ಮುದ್ರಿಸುತ್ತಿವೆ. ಎಷ್ಟೋ ಬಾರಿ ಸಣ್ಣ ವಿಮರ್ಶೆಯೂ ಪತ್ರಿಕೆಯಲ್ಲಿ ಬರದಿರುವ ಸಾಧ್ಯತೆ ಇರುವಾಗ ಕೇಂದ್ರ ಸಾಹಿತ್ಯ ಅಕಾಡೆಮಿಯ ಕದ ತಟ್ಟುವುದು ದೂರವೇ ಉಳಿಯಿತು. ಆದರೆ, ಈಚಿನ ವರ್ಷಗಳ ಆಯ್ಕೆಗಳನ್ನು ಗಮನಿಸಿದರೆ, ನಿಚ್ಚಳವಾಗಿ ಯುವ ಪುರಸ್ಕಾರವು ಕೆಲವು ಪ್ರಭಾವಗಳಲ್ಲಿ ಅಡಗಿ ದ್ವೀಪದಂತೆ ಕೇಂದ್ರೀಕೃತವಾಗುತ್ತಿದೆಯಾ ಎನ್ನುವ ಆತಂಕ ನನ್ನದು,’’ ಎಂದು ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.

ಇನ್ನೂ ಕೆಲವರು ಈ ತಕರಾರಿಗೆ ಫೇಸ್‌ಬುಕ್‌ನಲ್ಲಿ ಸ್ಪಂದಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಬೇಸರಗಳನ್ನು ಹಂಚಿಕೊಂಡಿದ್ದಾರೆ. ಹಿಂದಿನ ವರ್ಷದ ಪ್ರಶಸ್ತಿ ಘೋಷಣೆಯ ಸಂದರ್ಭದಲ್ಲಿ ಕತೆಗಾರ ಹನುಮಂತ ಹಾಲಿಗೇರಿ, ಕವಿ ವೀರಣ್ಣ ಅವರು ಪುರಸ್ಕಾರದ ಆಯ್ಕೆ ಪ್ರಕ್ರಿಯೆ ಬಗ್ಗೆ ತಕರಾರು ಎತ್ತಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಅಂದ ಹಾಗೆ ಆಯ್ಕೆ ಸಮಿತಿಯಲ್ಲಿ ಈ ಬಾರಿ ಇದ್ದವರು ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದ ಪದ್ಮರಾಜ ದಂಡಾವತಿ, ಹಿರಿಯ ವಿಮರ್ಶಕರಾದ ಟಿ ಪಿ ಅಶೋಕ್ ಮತ್ತು ಪಿ ವಿ ನಾರಾಯಣ ಅವರು. ಈ ಬಾರಿ ಪ್ರಶಸ್ತಿ ಪುರಸ್ಕೃತ ಲೇಖಕರು ಪ್ರಜಾವಾಣಿ ಸಂಸ್ಥೆಯ ಉದ್ಯೋಗಿಯಾಗಿರುವುದೂ ಕೇವಲ ಕಾಕತಾಳಿಯವೇ ಎಂಬ ಪ್ರಶ್ನೆ ಮೂಡಿದೆ. ಪತ್ರಕರ್ತರಾಗಿ, ಅಂಕಣಕಾರರಾಗಿ ಪರಿಚಿತರಿರುವ ಪದ್ಮರಾಜ ದಂಡಾವತಿಯವರು ಸಾಹಿತ್ಯ ಪ್ರಶಸ್ತಿ ಆಯ್ಕೆ ಸಮಿತಿಗೆ ಸದಸ್ಯರಾದದ್ದು ಹೇಗೆ ಎಂಬ ಅನುಮಾನಗಳನ್ನು ಯುವ ಬರಹಗಾರರು ಪ್ರಶ್ನಿಸಿದ್ದಾರೆ. ಸೃಜನಶೀಲ ಸಾಹಿತ್ಯವನ್ನು ಪ್ರಕಟಿಸದ ಯಾರನ್ನಾದರೂ ಪ್ರಶಸ್ತಿ ಆಯ್ಕೆಗೆ ಕೂರಿಸಬಹುದೆ ಎಂಬ ಚರ್ಚೆಗೂ ಇದು ಕಾರಣವಾಗಿದೆ.

ಈ ಕುರಿತು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಚಂದ್ರಶೇಖರ ಕಂಬಾರರನ್ನು ಸಂಪರ್ಕಿಸಿದಾಗ, “ನನ್ನ ಮಟ್ಟಿಗೆ ಇಲ್ಲಿನಷ್ಟು ಶುದ್ಧವಾಗಿ ಮತ್ತು ವಸ್ತುನಿಷ್ಠವಾಗಿ ಪ್ರಶಸ್ತಿ ಆಯ್ಕೆ ನಡೆದಿದ್ದು ಇನ್ನೆಲ್ಲೂ ನೋಡಿಲ್ಲ. ಯಾವುದೇ ಪ್ರಕಾಶನವನ್ನು ನೋಡಿ ಪ್ರಶಸ್ತಿ ಕೊಡುವುದಿಲ್ಲ. ಪ್ರತಿ ವರ್ಷವೂ ಆಯ್ಕೆ ಸಮಿತಿ ಸದಸ್ಯರು ಬೇರೆ ಇರುತ್ತಾರೆ. ಅಂತಿಮ ಹಂತದ ಹೆಸರುಗಳನ್ನು ಆಯ್ಕೆ ಮಾಡುವುದಕ್ಕೆ ಒಂದು ಸಮಿತಿ ಇರುತ್ತದೆ. ಜ್ಯೂರಿ ಕಮಿಟಿ ಪ್ರತ್ಯೇಕವಾಗಿರುತ್ತದೆ. ಅಂತಿಮ ಹೆಸರನ್ನು ಆಯ್ಕೆ ಮಾಡುವುದು ಈ ಸಮಿತಿ. ಇದೆಲ್ಲವೂ ಗೌಪ್ಯವಾಗಿರುತ್ತದೆ,’’ ಎಂದು ಹೇಳಿದರು.

ಹಾಗಾದರೆ, ಆಯ್ಕೆ ಸಮಿತಿ ಸದಸ್ಯರು ಹಿಂದಿನ ವರ್ಷದ ಆಯ್ಕೆಗಳನ್ನು ಗಮನಿಸಿ, ಮುಕ್ತ, ನಿಷ್ಪಕ್ಷಪಾತ ಆಯ್ಕೆಗಳಿಗೆ ಒತ್ತುಕೊಡಲು ಯಾವುದೇ ಮಾನದಂಡಗಳನ್ನು ಅನುಸರಿಸುವುದಿಲ್ಲವೇ ಎಂಬುದು ಪ್ರಶ್ನೆ.

ಛಂದ ಪ್ರಕಾಶನದ ಮಾಲೀಕರಾದ ವಸುಧೇಂದ್ರ ಸ್ವತಃ ಕತೆಗಾರರು. ಹೊಸ ತಲೆಮಾರಿನ ಲೇಖಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೃತಿಗಳನ್ನು ಹೊರತರುತ್ತಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ. ಅವರ ಕಾಳಜಿ ಎಷ್ಟರ ಮಟ್ಟಿನದು ಎಂದರೆ, ಯಾವುದೇ ಸ್ಪರ್ಧೆಗೆ ಹೋದ ತಮ್ಮ ಪ್ರಕಾಶನದ ಕೃತಿ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯದ್ದಿದರೆ, ಸಮಿತಿ ಸದಸ್ಯರನ್ನು ಹುಡುಕಿ, ಅದು ಯಾಕೆ ಆಯ್ಕೆಯಾಗಲಿಲ್ಲ ಎಂಬ ತಕರಾರನ್ನು ತೆಗೆಯುವಷ್ಟರ ಮಟ್ಟಿಗೆ ಇರುತ್ತದೆ. ಇದು ಕೇವಲ ಲೇಖಕರ ಮೇಲಿನ ಆಸ್ಥೆಯಷ್ಟೆಯೇ? ತಮ್ಮ ಪ್ರಕಾಶನದ ಕೃತಿಗೆ ಪ್ರಶಸ್ತಿ ಪಡೆಯಲಿ ಎಂಬ ಕಾರಣಕ್ಕೆ ನಡೆಸುವ ಲಾಬಿಯೇ? ಅಥವಾ ಮಾರುಕಟ್ಟೆ ಉದ್ದೇಶವೇ? ಎಂದು ಹೆಸರು ಹೇಳಲಿಚ್ಛಿಸದ ತರುಣ ಲೇಖಕರೊಬ್ಬರು ಕೇಳುತ್ತಾರೆ.

ಕವಿ ಕೈದಾಳೆ ಕೃಷ್ಣಮೂರ್ತಿಯವರು ಈ ಇಡೀ ಬೆಳವಣಿಗೆ ಕುರಿತು, “ಛಂದ ಪ್ರಕಾಶನದ ಛಾತಿಯೆಂದರೆ ತಮ್ಮ ಪುಸ್ತಕಗಳನ್ನು ಆ ಮಟ್ಟಿಗೆ ಬಿಂಬಿಸುವುದು ಮತ್ತು ಆಯ್ಕೆ ಸಮಿತಿಯವರ ಮಿತಿಯೆಂದರೆ ಅದರಾಚೆಗೆ ಯಾವುದನ್ನೂ ಗಮನಿಸದಿರುವುದು,’’ ಎಂದು ಅಭಿಪ್ರಾಯಪಡುತ್ತಾರೆ.

ಇದನ್ನೂ ಓದಿ : ಕೇಂದ್ರ ಯುವ ಪುರಸ್ಕಾರ ವಿವಾದ | ಆಯ್ಕೆ ಸಮಿತಿಯ ಮಾನದಂಡಗಳಾದರೂ ಏನು?

ವಿವೇಕ ಶಾನಭಾಗ್‌ ಅವರ ನೇತೃತ್ವದಲ್ಲಿ ಹೊರಬರುತ್ತಿದ್ದ ‘ದೇಶ ಕಾಲ’ ಪತ್ರಿಕೆ ಹೊಸ ತಲೆಮಾರಿನ ಲೇಖಕರೆಂದು ಬಿಂಬಿಸಿದ ವಿಷಯದಲ್ಲೂ ಈ ಹಿಂದೆ ವಿವಾದ ಸೃಷ್ಟಿಯಾಗಿತ್ತು. ಸಾಹಿತ್ಯ ವಲಯದಲ್ಲೂ ಪ್ರಶಸ್ತಿ, ಗೌರವ ಸಂದರ್ಭಗಳಲ್ಲಿ ಜಾತಿ, ಧರ್ಮ, ಪ್ರಭಾವಗಳು ಕೆಲಸ ಮಾಡುವುದು, ಇವುಗಳಿಗೆ ಟೀಕೆ ವ್ಯಕ್ತವಾಗುವುದನ್ನು ನೋಡುತ್ತಲೇ ಬಂದಿದ್ದೇವೆ. ಆದರೆ ಇತ್ತೀಚೆಗೆ ಧರ್ಮದ ಕಾರಣಕ್ಕೆ ಗುರುತಿಸಿ ಕೊಡುತ್ತಿರುವ ಪ್ರಶಸ್ತಿಯನ್ನು ಕವಿ ಆರಿಫ್‌ ರಾಜಾ ನಿರಾಕರಿಸಿದ್ದರು. ಸಾಹಿತ್ಯದ ನಿಜವಾದ ಘನತೆ ಮರಳಬೇಕಾದರೆ ಇಂಥ ಪ್ರತಿರೋಧ ಅಥವಾ ಬಂಡಾಯವನ್ನು ಗೌರವಿಸುವಂತಾಗಬೇಕು. ಗುಂಪುಗಾರಿಕೆ ಆಗಬಾರದು. ಪ್ರತಿರೋಧಕ್ಕೆ , ಭಿನ್ನಾಭಿಪ್ರಾಯಕ್ಕೆ ಅವಕಾಶವಿಲ್ಲದ, ಮುಕ್ತ ವಾತಾವರಣದ ಕೊರತೆಯೇ ಇಂದು ವಿಶಾಲ ಮನಸ್ಸು ಮತ್ತು ಆಲೋಚನೆಗಳು ಉಗ್ರ ನಿಲುವುಗಳಿಗೆ ಮುಖಾಮುಖಿಯಾಗುವಂತೆ ಮಾಡಿದೆ.

(ಈ ಹಿಂದೆ ಈ ಲೇಖನದಲ್ಲಿ ಪದ್ಮನಾಭ ಭಟ್ ಅವರನ್ನು ವಿವೇಕ ಶಾನಭಾಗ್ ಅವರ ಸಂಬಂಧಿ ಎಂದು ಪ್ರಕಟಿಸಲಾಗಿತ್ತು. ಆದರೆ ವಿವೇಕ ಶಾನಭಾಗ ಅವರು ಅದು ನಿಜವಲ್ಲ ಎಂದು ತಿಳಿಸಿದ್ದಾರೆ. ಹಾಗಾಗಿ ಲೇಖನದಿಂದ ಆ ಸಾಲನ್ನು ತೆಗೆಯಲಾಗಿದೆ.)

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More