1 ಕಿಮೀ ಆಳದ ಗುಹೆಯಲ್ಲಿ 15 ದಿನ ಸಿಲುಕಿದ್ದ ಬಾಲಕರ ರಕ್ಷಣಾ ಕಾರ್ಯ ಹೇಗಿದೆ?

ಥಾಯ್‌ಲ್ಯಾಂಡಿನ ಚಿಯಾಂಗ್‌ ರೈ ಎಂಬಲ್ಲಿರುವ ಕಿಲೋಮೀಟರ್‌ ಆಳದ, 4 ಕಿಮೀ ಉದ್ದದ ದುರ್ಗಮ ಗುಹೆಯಲ್ಲಿ 12 ಹುಡುಗರು ಸಿಲುಕಿದ್ದು, ಇದರಲ್ಲಿ 8 ಮಕ್ಕಳ ರಕ್ಷಣೆಯಾಗಿದೆ. 15 ದಿನಗಳ ಕಾಲ ಕತ್ತಲು, ಕೊರೆವ ಚಳಿಯಲ್ಲಿ ಆಹಾರವಿಲ್ಲದ ಕಳೆದ ಕ್ಷಣಗಳ ಬಗ್ಗೆ ಜಗತ್ತೇ ಬೆರಗಿನಿಂದ ನೋಡುತ್ತಿದೆ

ಕಳೆದ ಜೂನ್‌ ೨೩ರಂದು ೧೨ ಮಂದಿ ಹರೆಯದ ಹುಡುಗರು ಕಾಣೆಯಾದರು. ಹನ್ನೊಂದರಿಂದ ಹದಿನೇಳು ವಯೋಮಾನದ ಈ ಹುಡುಗರು ತಮ್ಮ ಕೋಚ್‌ನೊಂದಿಗಿದ್ದರು. ದಿನಗಳು ಉರುಳಿದರೂ ಎಲ್ಲಿದ್ದಾರೆಂದು ತಿಳಿಯಲಿಲ್ಲ. ಒಂದು ವಾರದ ಬಳಿಕ ಬ್ರಿಟನ್‌ನ ಡೈವರ್‌ಗಳು ಅವರನ್ನು ಪತ್ತೆಹಚ್ಚಿದರು. ಆದರೆ ಅವರಿದ್ದ ತಾಣವೇ ನಮ್ಮ ಕಲ್ಪನೆಗೆ ಮೀರಿದ್ದು!

ಥಾಯ್‌ಲ್ಯಾಂಡ್‌ನ ಚಿಯಾಂಗ್‌ ರೈ ಪ್ರಾಂತದಲ್ಲಿ ಥಾಮ್‌ ಲುವಾಂಗ್ ಹೆಸರಿನ ಗುಹೆ ಇದೆ. ಬೆಟ್ಟದಿಂದ ೧ ಕಿಮೀ ಆಳದ್ದು, ೪ ಕಿಮೀ ಉದ್ದದ್ದು. ಗುಹೆ ಹೊಕ್ಕು ನಾಲ್ಕು ಕಿಮೀ ಸಾಗಿದರೆ ಸಿಗುವ ಜಾಗದಲ್ಲಿ ಈ ಹನ್ನೆರಡು ಮಂದಿ ಕೂತಿದ್ದರು. ಈ ನಾಲ್ಕು ಕಿಮೀ ಸಾಗುವುದು ಸುಲಭದ ಮಾತಲ್ಲ. ಏಕೆಂದರೆ, ಮಳೆಯಿಂದಾಗಿ ಪ್ರವಾಹ ರೂಪದಲ್ಲಿ ಹರಿದ ನೀರು ಗುಹೆಯಲ್ಲಿ ತುಂಬಿಕೊಂಡಿದೆ. ಗುಹೆಯಲ್ಲಿ ನಡೆಯುವ, ಬಂಡೆಗಳನ್ನು ಹತ್ತುವ ಹಾಗೂ ನೀರಿನಲ್ಲಿ ಈಜುವ ಮೂಲಕ ಸಾಗಬೇಕು. ಹಗ್ಗಗಳ ನೆರವಿಲ್ಲದೆ ಸಾಗುವುದು ಸುಲಭವೇನಲ್ಲ. ಇಂಥ ಗುಹೆಯೊಳಗೆ ಅನ್ವೇಷಣೆ, ಡೈವಿಂಗ್‌ ಆಸಕ್ತಿಯಿಂದ ಅಲ್ಲಿಗೆ ತೆರಳಿದ್ದ ಬ್ರಿಟನ್‌ನ ಈಜುಗಾರರು ಆಕಸ್ಮಿಕವಾಗಿ ಈ ಗುಂಪನ್ನು ಗುರುತಿಸಿದ್ದರು. ಇದಾಗಿ ಒಂದು ವಾರವೇ ಆಗಿದೆ.

ಭಾನುವಾರದಿಂದ ಭಾರಿ ಭರದಲ್ಲಿ ರಕ್ಷಣೆ ಕಾರ್ಯ ನಡೆಯುತ್ತಿದೆ. ಥಾಯ್‌ಲ್ಯಾಂಡಿನ ೪೦, ವಿದೇಶದ ೫೦ ಮಂದಿ ನುರಿತ ಡೈವರ್‌ಗಳು ರಕ್ಷಣಾ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಭಾರಿ ಮಳೆ ಸುರಿಯುತ್ತಿರುವುದು, ನೀರು ಗುಹೆಯೊಳಗೆ ಹರಿಯುತ್ತಿರುವುದು, ಕತ್ತಲು, ಆಮ್ಲಜನಕದ ಕೊರತೆ ರಕ್ಷಣಾ ಕಾರ್ಯಕ್ಕೆ ಭಾರಿ ಸವಾಲಾಗಿದೆ. ಇದುವರೆಗೂ 8 ಹುಡುಗರನ್ನು ರಕ್ಷಿಸಲಾಗಿದ್ದು, ಉಳಿದವರನ್ನೂ ರಕ್ಷಿಸುವ ಭರವಸೆಯನ್ನು ತಂಡ ನೀಡಿದೆ.

ಈ ನಡುವೆ, ಈ ವಿದ್ಯಮಾನವನ್ನು ಕಂಡ ಟೆಕ್‌ ಉದ್ಯಮಿ ಎಲಾನ್‌ ಮಸ್ಕ್‌, ಸಣ್ಣ ಗಾತ್ರದ ಸಬ್‌ಮೆರೀನ್‌ವೊಂದನ್ನು ಕಳಿಸಿಕೊಟ್ಟಿದ್ದಾರೆ. ರಕ್ಷಣಾ ಕಾರ್ಯದಲ್ಲಿ ಇದು ನೆರವಾಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಥಾಯ್‌ಲೆಂಡಿನ ರಕ್ಷಣಾ ಪಡೆ, ಪೊಲೀಸರು, ಭಾರಿ ಪ್ರಮಾಣದ ಆಮ್ಲಜನಕ, ನಾಲ್ಕು ಅಂಬುಲೆನ್ಸ್‌ ಸೇರಿ ವೈದ್ಯಕೀಯ ನೆರವಿನೊಂದಿಗೆ ಗುಹೆ ಸುತ್ತಲ ಸಕಲ ವ್ಯವಸ್ಥೆ ಮಾಡಿಕೊಂಡಿದೆ.

ಗುಹೆಯ ಒಳಗೆ ಮಕ್ಕಳೊಂದಿಗೆ ನೌಕಾಪಡೆಯ ಸಿಬ್ಬಂದಿ ಇದ್ದು, ಅವರ ಚಿತ್ರಗಳನ್ನು ಪೋಷಕರಿಗೆ ರವಾನಿಸುತ್ತಿದೆ. ಮಕ್ಕಳು ಬರೆದ ಪತ್ರಗಳನ್ನು ತಲುಪಿಸುತ್ತಿದೆ. ಗುಹೆಯ ವಾತಾವರಣದಿಂದ ಹೊರಬರುತ್ತಿದ್ದಂತೆ ಮಕ್ಕಳ ದೇಹದಲ್ಲಿ ಆಗುವ ವೈಪರೀತ್ಯ ನಿಯಂತ್ರಿಸಲು, ಸೋಂಕು ಮುಕ್ತಗೊಳಿಸಲು ಸ್ಥಳೀಯ ಆಸ್ಪತ್ರೆಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ರಕ್ಷಣೆಯ ನಂತರ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ತೀವ್ರ ನಿಗಾದಲ್ಲಿ ಇಡಲಾಗುವುದು ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ರಕ್ಷಣಾ ಕಾರ್ಯದ ಬಗ್ಗೆ ಅಪಾರ ಮೆಚ್ಚುಗೆ, ಬೆಂಬಲ ಹಾಗೂ ಹಾರೈಕೆಗಳು ಎಲ್ಲೆಡೆ ವ್ಯಕ್ತವಾಗುತ್ತಿವೆ. ಈ ನಡುವೆ, ಮಕ್ಕಳಿಗೆ ಆಮ್ಲಜನಕ ಪೂರೈಸಲೆಂದು ಕೊರೆಯುವ ನೀರಿನಲ್ಲಿ ಈಜಿ, ಆಮ್ಲಜನಕದ ಸಿಲಿಂಡರ್ ತಲುಪಿಸಿದ್ದ ನೌಕಾಪಡೆಯ ಮಾಜಿ ಯೋಧ ಸುಮನ್‌ ಗುನಾನ್‌, ಅತ್ತಲಿಂದ ಮರಳುವಾಗ ಆಮ್ಲಜನಕದ ಕೊರತೆಯಿಂದ ಅಸುನೀಗಿದ್ದಾರೆ. ಮಕ್ಕಳ ಜೀವ ಉಳಿಸಲು ತಮ್ಮ ಜೀವವನ್ನೇ ಕಳೆದುಕೊಂಡ ಗುನಾನ್‌ ಅವರಿಗೆ ರಾಷ್ಟ್ರವೇ ಗೌರವ ಸಲ್ಲಿಸಿದೆ.

ಇದುವರೆಗೂ 8 ಮಕ್ಕಳ ರಕ್ಷಣೆಯಾಗಿದ್ದು ಕೋಚ್‌ ಸೇರಿದಂತೆ ಉಳಿದ ಎಂಟು ಮಂದಿಯ ರಕ್ಷಣೆ ಕಾರ್ಯ ತೀವ್ರವಾಗಿ ನಡೆಯುತ್ತಿದೆ. ನಾರೋಂಗ್ಸಕ್‌ ರಕ್ಷಣಾ ಕಾರ್ಯದ ನೇತೃತ್ವ ವಹಿಸಿದ್ದು, ಎಲ್ಲ ಮಕ್ಕಳು ಸುರಕ್ಷಿತವಾಗಿ ಮರಳುವ ಭರವಸೆಯನ್ನು ನೀಡಿದ್ದಾರೆ.

ರಕ್ಷಣಾ ಕಾರ್ಯಾಚರಣೆಯ ಕೆಲವು ದೃಶ್ಯಗಳು

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More