ನ್ಯಾಯಾಧೀಶರು ನಿವೃತ್ತರಾದ ಕೂಡಲೇ ಸರ್ಕಾರ ಕೊಟ್ಟ ಹುದ್ದೆ ಏರುವುದು ಎಷ್ಟು ಸರಿ?

ನ್ಯಾಯಾಧೀಶರು ನಿವೃತ್ತರಾದ ಮೇಲೆ ಸರ್ಕಾರ ನೀಡುವ ಹುದ್ದೆಗಳನ್ನು ಅಲಂಕರಿಸುವ ಕುರಿತ ಚರ್ಚೆಯನ್ನು ಇತ್ತೀಚಿನ ಮೂರು ನೇಮಕ ಮತ್ತೆ ಮುನ್ನೆಲೆಗೆ ತಂದಿವೆ. ಈ ಬಗೆಯ ನೇಮಕಾತಿಯ ಪರಿಣಾಮ ಕುರಿತು ಮನು ಸೆಬಾಸ್ಟಿಯನ್ ‘ದಿ ವೈರ್’ನಲ್ಲಿ ಬರೆದ ವಿಶ್ಲೇಷಣೆಯ ಭಾವಾನುವಾದ ಇಲ್ಲಿದೆ

“ನಿವೃತ್ತಿಪೂರ್ವ ತೀರ್ಪುಗಳು ನಿವೃತ್ತಿ ನಂತರದ ಹುದ್ದೆಯಿಂದ ಪ್ರಭಾವಿಸಲ್ಪಡುತ್ತವೆ. ನ್ಯಾಯಾಧೀಶರಿಗೆ ನಿವೃತ್ತಿಯ ನಂತರ (ಹುದ್ದೆಯನ್ನು ವಹಿಸಿಕೊಳ್ಳುವ ಮುನ್ನ) ಎರಡು ವರ್ಷಗಳ ಅಂತರವಿರಬೇಕು ಎಂಬುದು ನನ್ನ ಸಲಹೆ. ಇಲ್ಲದಿದ್ದರೆ ಸರ್ಕಾರವು ನೇರವಾಗಿಯೋ ಅಥವಾ ಪರೋಕ್ಷವಾಗಿಯೋ ನ್ಯಾಯಾಲಯಗಳ ಮೇಲೆ ಪ್ರಭಾವ ಬೀರುವುದಕ್ಕೆ ಅವಕಾಶವಾಗುತ್ತದೆ ಮತ್ತು ದೇಶದಲ್ಲಿ ಸ್ವತಂತ್ರ, ನಿಷ್ಪಕ್ಷಪಾತಿ ಮತ್ತು ನ್ಯಾಯಸಮ್ಮತ ನ್ಯಾಯಾಂಗವನ್ನು ಹೊಂದುವ ಕನಸು ಎಂದಿಗೂ ನನಸಾಗುವುದಿಲ್ಲ...” -2012ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗ ಅರುಣ್ ಜೇಟ್ಲಿ ಹೇಳಿದ ಮಾತಿದು.

ನ್ಯಾಯಾಧೀಶರು ನಿವೃತ್ತರಾದ ಮೇಲೆ ಸರ್ಕಾರ ನೀಡುವ ಹುದ್ದೆಗಳನ್ನು ಅಲಂಕರಿಸುವುದರ ಔಚಿತ್ಯತೆಯ ಕುರಿತಾದ ಚರ್ಚೆಯನ್ನು ಇತ್ತೀಚಿನ ಮೂರು ನೇಮಕಾತಿಗಳು ಮತ್ತೆ ಮುನ್ನೆಲೆಗೆ ತಂದಿವೆ.

ಜುಲೈ 6ರಂದು ನ್ಯಾಯಮೂರ್ತಿ ಎ ಕೆ ಗೋಯೆಲ್ ಅವರು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಯಾಗಿ ನಿವೃತ್ತಿಯಾದ ದಿನದಂದೇ ಅವರನ್ನು ‘ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ’ದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ನ್ಯಾಯಮೂರ್ತಿ ಆರ್ ಕೆ ಅಗರ್‌ವಾಲ್ ಅವರು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಯಾಗಿ ನಿವೃತ್ತರಾದ ಕೆಲವೇ ವಾರಗಳಲ್ಲಿ ಅವರನ್ನು ಕಳೆದ ಮೇ ತಿಂಗಳಿನಲ್ಲಿ ರಾಷ್ಟ್ರೀಯ ಗ್ರಾಹಕ ಕುಂದುಕೊರತೆ ನಿವಾರಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ನ್ಯಾಯಮೂರ್ತಿ ಆ್ಯಂಟನಿ ಡೊಮಿನಿಕ್ ಅವರು ಕೇರಳ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಕಳೆದ ಮೇ ತಿಂಗಳ ಕೊನೆಯಲ್ಲಿ ನಿವೃತ್ತರಾದ ಒಂದು ವಾರದೊಳಗೆ ಕೇರಳ ಸರ್ಕಾರವು ಅವರನ್ನು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿತು.

ಈ ಮೂವರು ನ್ಯಾಯಾಧೀಶರು ನಿವೃತ್ತರಾದ ಅಲ್ಪಾವಧಿಯಲ್ಲೇ ಅವರನ್ನು ವಿವಿಧ ಹುದ್ದೆಗಳಿಗೆ ನೇಮಕ ಮಾಡಿರುವುದು ಹಲವರ ಹುಬ್ಬೇರಿಸಿದೆ. ಈ ನ್ಯಾಯಾಧೀಶರು ಸೇವೆಯಲ್ಲಿದ್ದಾಗಲೇ ಅವರಿಗೆ ನಿವೃತ್ತಿ ನಂತರದಲ್ಲಿ ನೀಡಬೇಕಾದ ಹುದ್ದೆಯ ಬಗ್ಗೆ ತೀರ್ಮಾನ ಮಾಡಲಾಗಿತ್ತು ಎಂಬುದನ್ನು ನಿವೃತ್ತಿಯ ತಕ್ಷಣವೇ ಮಾಡಲಾದ ಈ ನೇಮಕಗಳು ಸ್ಪಷ್ಟವಾಗಿ ಸೂಚಿಸುತ್ತವೆ. ಈ ನ್ಯಾಯಾಧೀಶರು ನಿವೃತ್ತರಾಗುವ ಮುನ್ನವೇ ಅವರಿಗೆ ನೀಡಲಾಗುವ ಹುದ್ದೆಗಳನ್ನು ಅಂತಿಮಗೊಳಿಸಲಾಗಿತ್ತು ಎಂಬುದರ ಬಗ್ಗೆ ವಕೀಲರ ಸಂಘದಲ್ಲಿ ಊಹಾಪೋಹಗಳು ವ್ಯಾಪಕವಾಗಿ ಹಬ್ಬಿದ್ದವು.

ಅರೆ-ನ್ಯಾಯಾಂಗ ಸಂಸ್ಥೆಗಳ ಹುದ್ದೆಗಳಿಗೆ ನೇಮಕ ಮಾಡುವಲ್ಲಿ ಕಾರ್ಯಾಂಗವು ನಿರ್ಣಾಯಕ ಪಾತ್ರ ನಿರ್ವಹಿಸುವುದರಿಂದ ಈ ನ್ಯಾಯಾಧೀಶರು ಸೇವೆಯಲ್ಲಿದ್ದಾಗ ಸಂಬಂಧಪಟ್ಟ ಸರ್ಕಾರಗಳು ಭಾಗಿಯಾಗಿರುವ ಪ್ರಕರಣಗಳಲ್ಲಿ ನೀಡಿದ ತೀರ್ಪುಗಳ ಮೇಲೆ ಇದು ಪರಿಣಾಮ ಬೀರಿರುತ್ತದೆ.

ಹಾಸ್ಯಾಸ್ಪದ ವಿಷಯ ಏನೆಂದರೆ, ನಿವೃತ್ತರಾದ ದಿನದಂದೇ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ನ್ಯಾಯಮೂರ್ತಿ ಎ ಕೆ ಗೋಯೆಲ್ ಅವರು, ರೋಜರ್ ಮ್ಯಾಥ್ಯೂ ಮತ್ತು ಸೌಥ್ ಇಂಡಿಯನ್ ಬ್ಯಾಂಕ್ ಲಿಮಿಟೆಡ್ ನಡುವಿನ ಪ್ರಕರಣದಲ್ಲಿ ವಿವಿಧ ನ್ಯಾಯಾಧಿಕರಣಗಳನ್ನು ಪುನರ್ರಚಿಸುವ ವಿಷಯದ ಬಗ್ಗೆ ವಿಚಾರಣೆ ನಡೆಸುತ್ತಿದ್ದ ನ್ಯಾಯಪೀಠದ ನೇತೃತ್ವ ವಹಿಸಿದ್ದರು. ಈ ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿದ್ದ ಹಿರಿಯ ನ್ಯಾಯವಾದಿ ಅರವಿಂದ್ ಪಿ ದತಾರ್ ಅವರು ಹೀಗೆ ಸಲಹೆ ನೀಡಿದ್ದರು: “ನ್ಯಾಯಾಧಿಕರಣಗಳು ನಿವೃತ್ತರ ಸ್ವರ್ಗವಾಗಬಾರದಿತ್ತು ಹಾಗೂ ಸರ್ಕಾರವೇ ಏಕಕಾಲದಲ್ಲಿ ಕಕ್ಷಿದಾರನೂ ಮತ್ತು ನ್ಯಾಯಾಧಿಕರಣ ನೇಮಕಾತಿ ಪ್ರಾಧಿಕಾರವೂ ಆಗಿದ್ದರೆ ನೇಮಕಾತಿ ಪ್ರಕ್ರಿಯೆಯು ನ್ಯಾಯಾಧಿಕರಣದ ತೀರ್ಮಾನಗಳ ಮೇಲೆ ಪ್ರಭಾವ ಬೀರಬಾರದು. ನಿವೃತ್ತರಾದ ಮೇಲೆ ಯಾವುದೇ ನೇಮಕಾತಿಯನ್ನು ಅಲಂಕರಿಸುವುದಕ್ಕೆ ನಿರ್ಬಂಧವಿರಬೇಕು.”

ನ್ಯಾಯಾಧಿಕರಣ ವ್ಯವಸ್ಥೆಯನ್ನು ಪುನರ್ರೂಪಿಸುವ ಅಗತ್ಯದ ಬಗ್ಗೆ ಮಾತಾಡುತ್ತ ನ್ಯಾಯಪೀಠವು ಈ ತತ್ವವನ್ನು ‘ವಿಶಾಲವಾಗಿ ಒಪ್ಪಿಕೊಂಡಿರುವುದಾಗಿ’ ಹೇಳಿತ್ತು.

ನ್ಯಾಯಾಧೀಶರು ನಿವೃತ್ತಿಯ ಅಂಚಿನಲ್ಲಿದ್ದಾಗ ಅನೇಕ ಸೂಕ್ಷ್ಮ ವಿಷಯಗಳ ವಿಚಾರಣೆ ನಡೆಸುತ್ತಾರೆ ಎಂಬ ಅಂಶವನ್ನು ಗಮನಿಸಿದಾಗ ಈ ಚರ್ಚೆಗೆ ಇನ್ನಷ್ಟು ತೂಕ ಬರುತ್ತದೆ. ಆರ್ ಕೆ ಅಸ್ತಾನಾ ಅವರನ್ನು ಸಿಬಿಐ ವಿಶೇಷ ನಿರ್ದೇಶಕರನ್ನಾಗಿ ನೇಮಕ ಮಾಡಿದ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಹೂಡಲಾದ ಮೊಕದ್ದಮೆಯನ್ನು ನ್ಯಾಯಮೂರ್ತಿ ಆರ್ ಕೆ ಅಗರ್‌ವಾಲ್ ಅವರು ರದ್ದುಗೊಳಿಸಿದ್ದರು. ಅಲ್ಲದೆ, ವೈದ್ಯಕೀಯ ಕಾಲೇಜಿನ ಲಂಚ ಪ್ರಕರಣದ ಕುರಿತಂತೆ ವಿಶೇಷ ತನಿಖೆ ನಡೆಸಬೇಕೆಂದು ನ್ಯಾಯಮೂರ್ತಿ ಚೆಲಮೇಶ್ವರ್ ನೀಡಿದ ಆದೇಶವನ್ನು ನ್ಯಾಯಮೂರ್ತಿ ಆರ್ ಕೆ ಅಗರ್‌ವಾಲ್ ನೇತೃತ್ವದ ವಿಶೇಷ ನ್ಯಾಯಪೀಠವು ರದ್ದುಗೊಳಿಸಿತ್ತು. ನ್ಯಾಯಮೂರ್ತಿ ಅಗರ್‌ವಾಲ್ ಅವರು ಕೇಂದ್ರ ಸರ್ಕಾರ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಸಂಬಂಧಪಟ್ಟ ಪ್ರಕರಣಗಳ ವಿಚಾರಣೆ ನಡೆಸಿದ್ದರು. ಕೇಂದ್ರ ಸರ್ಕಾರವು ಭಾರತದ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಸಮಾಲೋಚಿಸಿ ರಾಷ್ಟ್ರೀಯ ಗ್ರಾಹಕ ಕುಂದುಕೊರತೆ ನಿವಾರಣಾ ಆಯೋಗದ ಅಧ್ಯಕ್ಷರ ನೇಮಕವನ್ನು ಮಾಡುತ್ತದೆ. ಈ ಹಿನ್ನೆಲೆಯಲ್ಲಿ, ಈ ನ್ಯಾಯಾಧೀಶರು ನಿವೃತ್ತಿಯಾದ ತಕ್ಷಣವೇ ಅವರನ್ನು ಈ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿದ್ದನ್ನು ಗಮನಿಸಿದರೆ, ಅವರು ಸೇವೆಯಂಚಿನಲ್ಲಿದ್ದಾಗ ನೀಡಿದ ತೀರ್ಪುಗಳ ಸ್ಫುಟತ್ವದ ಬಗ್ಗೆ ಯಾರಿಗಾದರೂ ಅನುಮಾನವೆದ್ದರೆ ಅದು ತಪ್ಪೆಂದು ಹೇಳಲಾಗದು.

ಆ್ಯಂಟನಿ ಡೊಮಿನಿಕ್ ಬಗ್ಗೆ ಹೇಳುವುದಾದರೆ, ಅವರು ಕೇರಳ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿದ್ದಾಗ ಕೇರಳದಲ್ಲಿ ಆಡಳಿತರೂಢ ಪಕ್ಷವನ್ನು ರಾಜಕೀಯವಾಗಿ ಪ್ರಭಾವಿಸುವ ಸಾಧ್ಯತೆಯಿದ್ದ ಪ್ರಕರಣಗಳನ್ನು ವಿಚಾರಣೆ ಮಾಡಿದ್ದರು. ಕಾಂಗ್ರೆಸ್ ಕಾರ್ಯಕರ್ತ ಶುಕೂರ್ ಕೊಲೆ ಪ್ರಕರಣದಲ್ಲಿ ಸಿಪಿಐ(ಎಂ) ಪಕ್ಷದ ಬೆಂಬಲಿಗರು ಶಂಕಿತ ಕೊಲೆಗಾರಾಗಿದ್ದರು. ಈ ಪ್ರಕರಣವನ್ನು ವಿಚಾರಣೆ ನಡೆಸಿದ ಏಕಸದಸ್ಯ ಪೀಠವೊಂದು ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಯಬೇಕೆಂದು ಆದೇಶಿಸಿತು. ಆದರೆ, ನ್ಯಾಯಮೂರ್ತಿ ಡೊಮಿನಿಕ್ ನೇತೃತ್ವದ ನ್ಯಾಯಪೀಠವು ಈ ಆದೇಶ ಜಾರಿಯಾಗದಂತೆ ತಡೆಯಿತು. ಸಿಪಿಐ(ಎಂ) ಕಾರ್ಯಕರ್ತರ ಅಣತಿಯಂತೆ ಮಾಡಲಾಗಿದೆ ಎನ್ನಲಾದ ಬಿಜೆಪಿ ಮತ್ತು ಆರೆಸ್ಸೆಸ್ ಸದಸ್ಯರ ರಾಜಕೀಯ ಕೊಲೆಗಳ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ಆಗ್ರಹಿಸಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ನ್ಯಾಯಮೂರ್ತಿ ಡೊಮಿನಿಕ್ ನೇತೃತ್ವದ ವಿಭಾಗೀಯ ಪೀಠ ರದ್ದುಗೊಳಿಸಿತ್ತು.

ಅಂದಮಾತ್ರಕ್ಕೆ ಅವರು ನೀಡಿದ ತೀರ್ಪುಗಳು ತಪ್ಪಾಗಿದ್ದವು ಅಥವಾ ಪಕ್ಷಪಾತದಿಂದ ಕೂಡಿದ್ದವು ಎಂಬುದು ಈ ವಿವರಣೆಯ ಅರ್ಥವಲ್ಲ. ನ್ಯಾಯಾಧೀಶರು ನಿವೃತ್ತರಾದ ತಕ್ಷಣವೇ ಯಾವುದಾದರೊಂದು ಮುಖ್ಯ ಹುದ್ದೆಗೆ ನೇಮಕವಾಗುವುದು ಅವರು ನಿವೃತ್ತಿಯಾಗುವ ಮುನ್ನ ಸೇವೆಯಲ್ಲಿದ್ದಾಗ ನೀಡಿದ ತೀರ್ಪುಗಳು ಪಾವಿತ್ರ್ಯದ ಬಗ್ಗೆ ಅನುಮಾನಗಳನ್ನು ಹುಟ್ಟಿಸುತ್ತವೆ ಎಂಬುದನ್ನು ಒತ್ತಿಹೇಳುವುದಕ್ಕಷ್ಟೇ ಈ ವಿವರಣೆ.

ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಪಿ ಸದಾಶಿವಂ ಅವರನ್ನು 2014ರ ನವೆಂಬರ್‌ನಲ್ಲಿ ಕೇರಳದ ರಾಜ್ಯಪಾಲರನ್ನಾಗಿ ನೇಮಿಸಿದ್ದು ಕೂಡ ಇದೇ ತೆರನಾದ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅವರು ಸೇವೆಯಲ್ಲಿದ್ದಾಗ ಆಡಳಿತಾರೂಢ ಪಕ್ಷಕ್ಕೆ ಮಾಡಿದ ಉಪಕಾರದ ಪ್ರತಿಫಲವಾಗಿ ಅವರಿಗೆ ಈ ಹುದ್ದೆ ಸಿಕ್ಕಿತು ಎಂಬ ಟೀಕೆ ಬಹಳ ದೊಡ್ಡಮಟ್ಟದಲ್ಲಿ ಬಂದಿತ್ತು. “ತುಳಸಿರಾಮ್ ಪ್ರಜಾಪತಿ ಪ್ರಕರಣದಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ದಾಖಲಾದ ಎರಡನೇ ಎಫ್‍ಐಆರ್ ಅನ್ನು ರದ್ದುಗೊಳಿಸಿ ನೀಡಿದ ತೀರ್ಪಿಗೂ ಹಾಗೂ ಕೇರಳದ ರಾಜ್ಯಪಾಲರನ್ನಾಗಿ ನೇಮಿಸಿದ್ದಕ್ಕೂ ಯಾವುದೇ ಸಂಬಂಧ ಇಲ್ಲ,” ಎಂದು ಹೇಳುವ ಮೂಲಕ ನ್ಯಾಯಮೂರ್ತಿ ಸದಾಶಿವಂ ಅವರು ತಮ್ಮ ನೇಮಕದ ವಿರುದ್ಧ ಬಂದ ಟೀಕೆಗಳನ್ನು ಅಲ್ಲಗಳೆದಿದ್ದರು. ಕೇರಳದ ರಾಜ್ಯಪಾಲರಾಗಿ ನ್ಯಾಯಮೂರ್ತಿ ಸದಾಶಿವಂ ಅವರು ಇರುಸುಮುರುಸಾಗುವ ಪ್ರಸಂಗಗಳನ್ನು ಎದುರಿಸಬೇಕಾಯಿತು: ಸುಪ್ರೀಂ ಕೋರ್ಟಿನ ತೀರ್ಮಾನಕ್ಕೆ ವಿರುದ್ಧವಾಗಿ ಸರ್ಕಾರ ರೂಪಿಸಿದ ಸುಗ್ರೀವಾಜ್ಞೆಗೆ ರಾಜ್ಯಪಾಲರಾಗಿ ಅವರು ಸಹಿ ಮಾಡಬೇಕಾಯಿತು ಮತ್ತು ಆ ಸುಗ್ರೀವಾಜ್ಞೆಗೆ ಸುಪ್ರೀಂ ಕೋರ್ಟು ನಂತರದಲ್ಲಿ ತಡೆಯಾಜ್ಞೆಯನ್ನೂ ನೀಡಿತು.

ನ್ಯಾಯಾಧೀಶರು ಕಾರ್ಯಾಂಗದ ಅಡಿಯಲ್ಲಿ ಹುದ್ದೆಗಳನ್ನು ಅಲಂಕರಿಸುವುದು ಹಿತಾಸಕ್ತಿಗಳ ಸಂಘರ್ಷಕ್ಕೆ ಕಾರಣವಾಗುತ್ತದೆ. ಇದರಿಂದ ನ್ಯಾಯಿಕ ಸ್ವಾತಂತ್ರ್ಯದ ಬಗ್ಗೆ ಜನರಲ್ಲಿರುವ ನಂಬಿಕೆಯ ಬುಡ ಅಲ್ಲಾಡುತ್ತದೆ. ಸಾರ್ವಜನಿಕ ವಿಶ್ವಾಸವೇ ನ್ಯಾಯಾಂಗದ ಅತಿದೊಡ್ಡ ಆಸ್ತಿ ಎಂದು ಸುಪ್ರೀಂ ಕೋರ್ಟು ತನ್ನ ಇತ್ತೀಚಿನ ‘ಮಾಸ್ಟರ್ ಆಫ್ ದ ರೋಸ್ಟರ್’ ಪ್ರಕರಣದಲ್ಲಿ ಪುನರುಚ್ಛರಿಸುತ್ತ ಹೀಗೆ ಅಭಿಪ್ರಾಯಪಟ್ಟಿದೆ: “ಜನರ ವಿಶ್ವಾಸವು ನೆಲಹಾಸು ಬಂಡೆಯಂತಿದ್ದು, ಅದರ ಮೇಲೆ ನ್ಯಾಯಿಕ ಪರಾಮರ್ಶೆಯ ಸೌಧ ಮತ್ತು ನ್ಯಾಯನಿರ್ಣಯದ ಫಲಪ್ರದತೆ ನಿಂತಿರುತ್ತವೆ. ಯಾವುದೇ ಕಾರಣದಿಂದಾದರೂ ಸರಿ, ಜನರ ಮನಸ್ಸಿನಲ್ಲಿ ನ್ಯಾಯಾಂಗದ ವಿಶ್ವಾಸಾರ್ಹತೆ ಕುಸಿದರೆ ಅದು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಬಹುದೊಡ್ಡ ಅಪಾಯವಾಗುತ್ತದೆ.”

“ನಿವೃತ್ತಿಯಾದ ತಕ್ಷಣವೇ ಸರ್ಕಾರ ನೀಡುವ ಹುದ್ದೆಯನ್ನು ಅಲಂಕರಿಸುವುದರಿಂದ ಖಂಡಿತವಾಗಿಯೂ ನ್ಯಾಯಿಕ ಸ್ವಾತಂತ್ರ್ಯದ ಮೇಲೆ ಜನರಿಗಿರುವ ವಿಶ್ವಾಸಕ್ಕೆ ಧಕ್ಕೆ ಬರುತ್ತದೆ. ನಾನು ನಿವೃತ್ತಿಯಾದ ಮೇಲೆ ಸರ್ಕಾರ ನೀಡುವ ಯಾವುದೇ ಹುದ್ದೆಯನ್ನು ಅಲಂಕರಿಸುವುದಿಲ್ಲ,” ಎಂದು ನ್ಯಾಯಮೂರ್ತಿ ಚಲಮೇಶ್ವರ್ ಅವರು ಮೊದಲೇ ಘೋಷಿಸಿದ್ದರು. ಸರ್ಕಾರ ನೀಡುವ ಹುದ್ದೆಗಳನ್ನು ಅಲಂಕರಿಸುವುದಕ್ಕೆ ತಮಗೆ ಆಸಕ್ತಿ ಇಲ್ಲ ಎಂಬುದನ್ನು ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರೂ ಸ್ಪಷ್ಟಪಡಿಸಿದ್ದಾರೆ. ಈ ನ್ಯಾಯಮೂರ್ತಿಗಳ ಪ್ರಕಾರ, ನ್ಯಾಯಾಂಗ ಮತ್ತು ಕಾರ್ಯಾಂಗಗಳು ಒಬ್ಬರ ಮೇಲೆ ಮತ್ತೊಬ್ಬರು ಕಣ್ಣಿಡುವ ಕಾವಲುನಾಯಿಗಳಾಗಿರಬೇಕೇ ಹೊರತು ಒಬ್ಬರನ್ನು ಮತ್ತೊಬ್ಬರು ಹೊಗಳುವವರಾಗಬಾರದು. ನಿವೃತ್ತಿ ನಂತರ ಸರ್ಕಾರ ದಯಪಾಲಿಸುವ ಹುದ್ದೆಗಳನ್ನು ಅಲಂಕರಿಸುವುದು ನ್ಯಾಯಾಂಗದ ಸ್ವಾತಂತ್ರ್ಯ ಕುಸಿಯುವುದಕ್ಕೆ ಹಾದಿಮಾಡಿಕೊಡುತ್ತದೆ.

ಕೇರಳ ಹೈಕೋರ್ಟಿನ ನ್ಯಾಯಾಧೀಶರಾಗಿ ನಿವೃತ್ತರಾದ ನ್ಯಾಯಮೂರ್ತಿ ಬಿ ಕೆಮಲ್ ಪಾಷಾ ಅವರು ಈ ವರ್ಷದ ಆರಂಭದಲ್ಲಿ ತಮ್ಮ ಬೀಳ್ಕೊಡಿಗೆ ಸಮಾರಂಭದಲ್ಲಿ ಮಾತಾಡುತ್ತ, ನ್ಯಾಯಾಧೀಶರನ್ನು ನಿವೃತ್ತಿ ನಂತರ ವಿವಿಧ ಹುದ್ದೆಗಳಿಗೆ ನೇಮಿಸುವ ಪರಿಪಾಠದ ವಿರುದ್ಧ ವಿವಾದಾತ್ಮಕ ಮಾತುಗಳನ್ನಾಡುವ ಮೂಲಕ ತೀವ್ರ ಚರ್ಚೆಗೆ ಕಾರಣರಾಗಿದ್ದರು. ಅವರ ಆಡಿದ್ದ ಮಾತುಗಳಿವು: “ನಿವೃತ್ತನಾದ ಮೇಲೆ ಸರ್ಕಾರಿಂದ ಯಾವುದಾದರೂ ಹುದ್ದೆಯನ್ನು ನಿರೀಕ್ಷಿಸುವ ನ್ಯಾಯಾಧೀಶ ಸಾಮಾನ್ಯವಾಗಿ ತನ್ನ ನಿವೃತ್ತಿ ಕನಿಷ್ಠ ಇನ್ನೂ ಒಂದು ವರ್ಷ ಇರುವಾಗಲೇ ಸರ್ಕಾರದ ಮನನೋಯಿಸುವುದಕ್ಕೆ ಇಷ್ಟಪಡುವುದಿಲ್ಲ. ಇಂತಹ ನ್ಯಾಯಾಧೀಶರು ಸರ್ಕಾರದಿಂದ ನಿವೃತ್ತಿ ನಂತರದ ಹುದ್ದೆಗಳನ್ನು ಅಪೇಕ್ಷಿಸುವ ಮೂಲಕ ಸರ್ಕಾರಕ್ಕೆ ಅಪ್ರಿಯವಾಗುವಂತೆ ನಡೆದುಕೊಳ್ಳುವ ಧೈರ್ಯ ತೋರುವುದಿಲ್ಲ ಎಂಬ ದೂರು ಸರ್ವೇಸಾಮಾನ್ಯವಾಗಿದೆ.”

ಮುಂದುವರಿದು ಅವರು, “ಯಾವ ನ್ಯಾಯಾಧೀಶರೂ ನಿವೃತ್ತರಾದ ಮೇಲೆ ಕನಿಷ್ಠ ಮೂರು ವರ್ಷಗಳ ತಣ್ಣಗಾಗುವ ಅವಧಿ ಮುಗಿಯುವ ತನಕ ಯಾವುದೇ ಸರ್ಕಾರದಡಿಯಲ್ಲಿ ಸಂಬಳದ ಹುದ್ದೆಯನ್ನು ಅಲಂಕರಿಸಬಾರದು,” ಎಂಬ ನ್ಯಾಯಮೂರ್ತಿ ಎಸ್ ಎಚ್ ಕಪಾಡಿಯ ಮತ್ತು ನ್ಯಾಯಮೂರ್ತಿ ಟಿ ಎಸ್ ಠಾಕೂರ್ ಅವರ ಮಾತುಗಳನ್ನೂ ಪುನರುಚ್ಛರಿಸಿದರು.

ಅದೇ ವೇಳೆಯಲ್ಲಿ, ನಿವೃತ್ತ ನ್ಯಾಯಾಧೀಶರ ಅನುಭವ ಮತ್ತು ಒಳನೋಟಗಳ ಶ್ರೀಮಂತಿಕೆ ವ್ಯರ್ಥವಾಗುವುದೂ ಆದರ್ಶವಲ್ಲ. ಅಂತಃಸಾಮರ್ಥ್ಯವುಳ್ಳ ನಿವೃತ್ತ ನ್ಯಾಯಾಧೀಶರನ್ನು ಮರಳಿ ವ್ಯವಸ್ಥೆಗೆ ಕರೆತರುವ ಯಂತ್ರಾಂಗವೊಂದು ಇರಬೇಕು. ಸದ್ಯಕ್ಕೆ, ಶಾಸನಾತ್ಮಕ ಆಯೋಗಗಳು, ನ್ಯಾಯಾಧೀಕರಣಗಳಿಗೆ ಸುಪ್ರೀಂ ಕೋರ್ಟಿನ ಅಥವಾ ಹೈಕೋರ್ಟಿನ ನ್ಯಾಯಾಧೀಶರೇ ನೇತೃತ್ವ ವಹಿಸಬೇಕಾದ ಅಗತ್ಯವಿದೆ.

ಈ ನಿಟ್ಟಿನಲ್ಲಿ, ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿಗಳಾದ ಕಪಾಡಿಯ, ಲೋಧಾ ಮತ್ತು ಠಾಕೂರ್ ಅವರು ಹೇಳಿದಂತಹ ನಿವೃತ್ತ ನ್ಯಾಯಾಧೀಶರ ‘ತಣ್ಣಗಾಗುವ ಸಮಯ’ಕ್ಕೆ ಮಹತ್ವ ಬರುತ್ತದೆ. “ನಿವೃತ್ತಿಯಾದ ಮೇಲೆ ಎರಡು ವರ್ಷಗಳಾಗುವ ತನಕ ತಾವು ಯಾವುದೇ ಹುದ್ದೆ ಅಲಂಕರಿಸುವುದಿಲ್ಲ,” ಎಂದು ನ್ಯಾಯಮೂರ್ತಿ ಲೋಧಾ ಅವರು ಬಹಿರಂಗವಾಗಿಯೇ ಹೇಳಿದ್ದರು.

2012ರಲ್ಲಿ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಅರುಣ್ ಜೇಟ್ಲಿಯವರು ಹೇಳಿದ ಮಾತನ್ನು ಮತ್ತೆ ನೆನಪಿಸಿಕೊಳ್ಳೋಣ: “ನಿವೃತ್ತಿಪೂರ್ವ ತೀರ್ಪುಗಳು ನಿವೃತ್ತಿ ನಂತರದ ಹುದ್ದೆಯಿಂದ ಪ್ರಭಾವಿಸಲ್ಪಡುತ್ತವೆ. ನ್ಯಾಯಾಧೀಶರಿಗೆ ನಿವೃತ್ತಿಯ ನಂತರ (ಹುದ್ದೆಯನ್ನು ವಹಿಸಿಕೊಳ್ಳುವ ಮುನ್ನ) ಎರಡು ವರ್ಷಗಳ ಅಂತರವಿರಬೇಕು ಎಂಬುದು ನನ್ನ ಸಲಹೆ. ಇಲ್ಲದಿದ್ದರೆ ಸರ್ಕಾರವು ನೇರವಾಗಿಯೋ ಅಥವಾ ಪರೋಕ್ಷವಾಗಿಯೋ ನ್ಯಾಯಾಲಯಗಳ ಮೇಲೆ ಪ್ರಭಾವ ಬೀರುವುದಕ್ಕೆ ಅವಕಾಶವಾಗುತ್ತದೆ ಮತ್ತು ದೇಶದಲ್ಲಿ ಸ್ವತಂತ್ರ, ನಿಸ್ಪಕ್ಷಪಾತಿ ಮತ್ತು ನ್ಯಾಯಸಮ್ಮತ ನ್ಯಾಯಾಂಗವನ್ನು ಹೊಂದುವ ಕನಸು ಎಂದಿಗೂ ನನಸಾಗುವುದಿಲ್ಲ.”

ಆದರೆ, ಹಾಸ್ಯಾಸ್ಪದ ವಿಷಯ ಏನೆಂದರೆ, ಅರುಣ್ ಜೇಟ್ಲಿಯವರ ಪಕ್ಷವೇ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಮೇಲೆ ನ್ಯಾಯಮೂರ್ತಿ ಸದಾಶಿವಂ, ನ್ಯಾಯಮೂರ್ತಿ ಅಗರ್‌ವಾಲ್ ಮತ್ತು ನ್ಯಾಯಮೂರ್ತಿ ಗೋಯೆಲ್ ಅವರಿಗೆ ನಿವೃತ್ತಿಯಾದ ತಕ್ಷಣವೇ ವಿವಿಧ ಹುದ್ದೆಗಳನ್ನು ದಯಪಾಲಿಸಿತು. ಅಲ್ಲದೆ, ಪ್ರಸ್ತುತ ಸರ್ಕಾರವು ನ್ಯಾಯಾಂಗದ ಸ್ವಾತಂತ್ರ್ಯವನ್ನು ಬುಡದಲ್ಲೇ ಕತ್ತರಿಸುವಂತಹ ಅನೇಕ ಅಂಶಗಳನ್ನು 2017ರ ಹಣಕಾಸು ಕಾಯ್ದೆಯಲ್ಲಿ ಸೇರಿಸಿದೆ. ಈ ಅಂಶಗಳು, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ, ರಾಷ್ಟ್ರೀಯ ಗ್ರಾಹಕ ಕುಂದುಕೊರತೆ ನಿವಾರಣಾ ಆಯೋಗ ಮುಂತಾದ ಅನೇಕ ಅರೆನ್ಯಾಯಾಂಗ ಸಂಸ್ಥೆಗಳ ಸ್ವತಂತ್ರ ಕಾರ್ಯನಿರ್ವಹಣೆಗೆ ಭಂಗ ತರುವಂಥವೇ ಆಗಿವೆ.

ಇದನ್ನೂ ಓದಿ : ನ್ಯಾಯಮೂರ್ತಿಗಳ ಜಗಳದಲ್ಲಿ ಕೇಳಿಬರುತ್ತಿರುವ ನ್ಯಾಯಾಧೀಶ ಲೋಯಾ ಯಾರು?

ಈ ಅಂಶಗಳು ಅಧಿಕಾರಗಳ ಪ್ರತ್ಯೇಕತೆಯನ್ನು ಮುರಿಯುತ್ತವೆಯಲ್ಲದೆ, ಸಂಸ್ಥೆಗಳ ಸ್ವಾಯತ್ತ ಮತ್ತು ಸ್ವತಂತ್ರ ಕಾರ್ಯನಿರ್ವಹಣೆಗೆ ಭಂಗ ತರುತ್ತವೆ ಎಂಬ ಆಧಾರದಲ್ಲಿ ಅವುಗಳನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಗಿದೆ. ಈ ವಿಷಯದ ಬಗ್ಗೆ ವಿಚಾರಣೆ ನಡೆಸುತ್ತ ಮದ್ರಾಸ್ ಹೈಕೋರ್ಟು, “2017ರ ತಿದ್ದುಪಡಿಯ ಪ್ರಕಾರ ನ್ಯಾಯಾಧಿಕರಣಗಳಿಗೆ ಮಾಡಲಾದ ನೇಮಕಗಳು ಈ ತಿದ್ದುಪಡಿಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಕುರಿತ ಅಂತಿಮ ತೀರ್ಪುಗಳಿಗೆ ಒಳಪಟ್ಟಿರುತ್ತವೆ,” ಎಂದು ಆದೇಶಿಸಿದೆ.

“ನ್ಯಾಯಾಂಗ ಸ್ವಾತಂತ್ರ್ಯ ಮತ್ತು ಅಧಿಕಾರಗಳ ಪ್ರತ್ಯೇಕತೆಗಳು ಸಂವಿಧಾನದ ಮೂಲ ಗುಣಲಕ್ಷಣಗಳಾಗಿದ್ದು, ಅವುಗಳನ್ನು ‘ರಾಷ್ಟ್ರೀಯ ತೆರಿಗೆ ನ್ಯಾಯಾಧಿಕರಣ’ದ ಸಂಯೋಜನೆಯು ಉಲ್ಲಂಘಿಸಿದ್ದರಿಂದ ಈ ನ್ಯಾಯಾಧಿಕರಣವು ಅಸಾಂವಿಧಾನಿಕವಾಗಿದೆ,” ಎಂದು ಮದ್ರಾಸ್ ವಕೀಲರ ಸಂಘ ಮತ್ತು ಭಾರತ ಒಕ್ಕೂಟದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ಅಭಿಪ್ರಾಯಪಟ್ಟಿದೆ.

ಈ ಅಭಿಪ್ರಾಯ ಸಂಬಂಧಪಟ್ಟ ಎಲ್ಲರನ್ನೂ ಪುನಃ ಎಚ್ಚರಿಸುತ್ತದೆ ಎಂಬ ಆಶಯವಿದೆ. ಸರ್ಕಾರದ ಒಂದು ಅಂಗದಿಂದ ಇನ್ನೊಂದು ಅಂಗಕ್ಕೆ ತ್ವರಿತವಾಗಿ ಹಾರುವುದು ಚೆನ್ನಾಗಿ ಕಾಣಿಸುವುದಿಲ್ಲ.

ಮನು ಸೆಬಾಸ್ಟಿಯನ್ ಅವರು ಕೇರಳ ಹೈಕೋರ್ಟಿನಲ್ಲಿ ವಕೀಲರು

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More