ನಿಮ್ಮ ಎಲೆಕ್ಟ್ರಾನಿಕ್ ಪಾವತಿ ವಹಿವಾಟಿನ ಮೇಲೆ ಸರ್ಕಾರದ ಹದ್ದಿನ ಕಣ್ಣು!

ಕಪ್ಪುಹಣದ ವಹಿವಾಟು ನಿಗ್ರಹಿಸಲು ವಿಫಲವಾಗಿರುವ ಕೇಂದ್ರ ಸರ್ಕಾರ ಈಗ ದೇಶದ ನಾಗರಿಕರ ಎಲ್ಲ ಎಲೆಕ್ಟ್ರಾನಿಕ್ ಪಾವತಿ ವಹಿವಾಟಿನ ಮೇಲೆ ಹದ್ದಿನ ಕಣ್ಣಿಡಲು ಚಿಂತಿಸುತ್ತಿದೆ. ಅಕ್ರಮ ಹಣಸಾಗಣೆ ಮಾಡುವವರ ವಿರುದ್ಧ ಸಾಕ್ಷ್ಯಕ್ಕಾಗಿ ಕೇಂದ್ರ ಸರ್ಕಾರ ಆರ್‌ಬಿಐ ಜೊತೆ ಕಾರ್ಯತಂತ್ರ ರೂಪಿಸಲಿದೆ

ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ದೇಶದಲ್ಲಿ ನಡೆಯುವ ಎಲ್ಲ ಎಲೆಕ್ಟ್ರಾನಿಕ್ ವಹಿವಾಟಿನ ಮೇಲೆ ನಿಗಾ ಇಡಲು ಮುಂದಾಗುತ್ತಿವೆ. ಅದಕ್ಕಾಗಿ ಸರ್ಚ್ ಎಂಜಿನ್ ರೂಪಿಸುವುದು ಅಥವಾ ಸಂಪೂರ್ಣ ಡೇಟಾ ಸಂಗ್ರಹಿಸಿ ವಿಶ್ಲೇಷಿಸುವ ವ್ಯವಸ್ಥೆ ರೂಪಿಸುವುದು ಸೇರಿದಂತೆ ವಿವಿಧ ಸಾಧ್ಯತೆಗಳ ಬಗ್ಗೆ ಚರ್ಚಿಸುತ್ತಿವೆ.

ಕಪ್ಪುಹಣದ ವಹಿವಾಟಿನಲ್ಲಿ ಆರೋಪಿಗಳನ್ನು ಶಿಕ್ಷೆಗೆ ಒಳಪಡಿಸಲು ಈಗಿರುವ ವ್ಯವಸ್ಥೆಯಲ್ಲಿ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಾಗುತ್ತಿಲ್ಲ. ಆರೋಪಿಗಳು ಶಿಕ್ಷೆಯಿಲ್ಲದೆ ತಪ್ಪಿಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಸಾಕ್ಷ್ಯಗಳನ್ನು ಪಡೆಯುವ ಸಲುವಾಗಿ ದೇಶದಲ್ಲಿ ನಡೆಯುವ ಪ್ರತಿಯೊಂದು ಎಲೆಕ್ಟ್ರಾನಿಕ್ ಪಾವತಿ ವಹಿವಾಟಿನ ಮೇಲೆ ನಿಗಾ ಇಡುವ ಅಥವಾ ಡೇಟಾ ಸಂಗ್ರಹಿಸುವ ವ್ಯವಸ್ಥೆಯೊಂದನ್ನು ರೂಪಿಸಲು ಕೇಂದ್ರ ಮತ್ತು ಆರ್‌ಬಿಐ ಚಿಂತಿಸುತ್ತಿವೆ.

ಕಪ್ಪುಹಣವನ್ನು ಅಕ್ರಮವಾಗಿ ಸಾಗಾಣಿಕೆ ಮಾಡಲೆಂದೇ ಸ್ಥಾಪಿಸಿದ್ದ ನಕಲಿ ಕಂಪನಿಗಳ ಮೇಲೆ ನಿಯಂತ್ರಣ ಸಾಧಿಸಿರುವ ಕೇಂದ್ರ ಸರ್ಕಾರ, ಅಂತಹ ಕಂಪನಿಗಳ ಪರವಾನಗಿ ರದ್ದು ಮಾಡಿದೆ. ಆದರೆ, ಅಕ್ರಮ ಹಣ ವಹಿವಾಟು ನಡೆಸಿರುವ ಬಗ್ಗೆ ನಿಖರ ದಾಖಲೆ ಇಲ್ಲದಿರುವ ಕಾರಣ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲಾ ಎಲೆಕ್ಟ್ರಾನಿಕ್ ಪಾವತಿ ವಹಿವಾಟಿನ ಮಾಹಿತಿ ಸಂಗ್ರಹಿಸಲು ಸರ್ಚ್ ಇಂಜಿನ್ ರೂಪಿಸುವ ಅಥವಾ ಡೇಟಾ ಸಂಗ್ರಹಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ಆರ್‌ಬಿಐ ಸಮಾಲೋಚನೆ ನಡೆಸಿವೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿಯನ್ನು ಉಲ್ಲೇಖಿಸಿ ‘ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ. ಉದ್ದೇಶಿತ ತಾಂತ್ರಿಕ ವ್ಯವಸ್ಥೆಯು ಕಾರ್ಪೋರೆಟ್ ವಲಯದತ್ತ ಕೇಂದ್ರೀಕೃತವಾಗಿದ್ದರೂ, ವೈಯಕ್ತಿಕ ವಹಿವಾಟುಗಳ ದಾಖಲೆಗಳನ್ನು ಸಂಗ್ರಹಿಸುವ ಉದ್ದೇಶವನ್ನೂ ಹೊಂದಿದೆ. ಆರ್‌ಬಿಐ ನಗದೇತರ ವಹಿವಾಟಿನ ಮಾಹಿತಿಯನ್ನು ಸಂಗ್ರಹಿಸಿಡುತ್ತದೆ. ಅಗತ್ಯಬಿದ್ದಾಗ ತನಿಖಾ ಸಂಸ್ಥೆಗಳ ಜೊತೆ ವಿನಿಮಯ ಮಾಡಿಕೊಳ್ಳುವ ಪ್ರಸ್ತಾಪ ಇದೆ.

ಈಗಾಗಲೇ ಕೇಂದ್ರ ಸರ್ಕಾರವು ನಗದು ವಹಿವಾಟಿನ ಮೇಲೆ ಮಿತಿ ಹೇರಿದೆ. 2 ಲಕ್ಷ ರುಪಾಯಿ ಮಿತಿಮೀರಿದ ನಗದು ವಹಿವಾಟಿನ ಮೇಲೆ ಶೇ.100ರಷ್ಟು ದಂಡ ವಿಧಿಸುತ್ತದೆ. ಅಂದರೆ, ಒಂದೇ ವಹಿವಾಟಿನಲ್ಲಿ 2 ಲಕ್ಷ ರುಪಾಯಿ ಮೀರಿ ನಗದು ಪಾವತಿ ಮಾಡಿದ್ದೇ ಆದರೆ, ಆದಾಯ ತೆರಿಗೆ ಇಲಾಖೆಯು ಶೇ.100ರಷ್ಟು ಅಂದರೆ, 2 ಲಕ್ಷ ದಂಡ ವಿಧಿಸುತ್ತದೆ. ಒಂದು ವೇಳೆ, ಒಂದೇ ವಹಿವಾಟಿನಲ್ಲಿ 4 ಲಕ್ಷ ನಗದು ಪಾವತಿಸಿದರೆ 4 ಲಕ್ಷ ದಂಡ ವಿಧಿಸಲಾಗುತ್ತದೆ.

ಇದನ್ನೂ ಓದಿ : ಆರ್‌ಬಿಐ, ವಿತ್ತ ಸಚಿವಾಲಯ ಏನೇ ಹೇಳಿದರೂ ರಾಜ್ಯದಲ್ಲಿ ನಗದು ಕೊರತೆ ಇರೋದು ನಿಜ!

ನಗದು ವಹಿವಾಟಿನ ಮೇಲೆ ಮಿತಿ ಹೇರುವ ಉದ್ದೇಶವೇ ನಗದು ವಹಿವಾಟಿನ ಮೇಲೆ ನಿಗಾ ಇಡುವುದಾಗಿತ್ತು. ಆದರೆ, ದೇಶದಲ್ಲಿ ನಿತ್ಯವೂ ನಡೆಯುವ ಬೃಹತ್ ವಹಿವಾಟಿನ ಮೇಲೆ ನಿಗಾ ಇಡುವುದು ಈಗಿರುವ ವ್ಯವಸ್ಥೆಯಲ್ಲಿ ಸಾಧ್ಯವಾಗುತ್ತಿಲ್ಲ. ಹಾಗಾಗಿ, ಹೊಸ ಸುಧಾರಿತ ನಿಗಾ ವ್ಯವಸ್ಥೆ ರೂಪಿಸಲು ಆರ್‌ಬಿಐ ಮತ್ತು ಕೇಂದ್ರ ಸರ್ಕಾರ ಸಮಾಲೋಚಿಸುತ್ತಿವೆ.

ಈಗಿರುವ ಎಲೆಕ್ಟ್ರಾನಿಕ್ ಪಾವತಿ ವ್ಯವಸ್ಥೆ ಅತ್ಯಂತ ಸುರಕ್ಷಿತವಾಗಿದೆ. ಆದರೆ, ನಿತ್ಯದ ವಹಿವಾಟುಗಳು ಬೃಹತ್ ಪ್ರಮಾಣದಲ್ಲಿ ಇರುವುದರಿಂದ ಶಂಕಿತ ವಹಿವಾಟುಗಳನ್ನು ಪತ್ತೆಹಚ್ಚುವುದು ಕಷ್ಟವಾಗುತ್ತಿದೆ. ಆರ್‌ಬಿಐ ಮತ್ತು ಕೇಂದ್ರ ಸರ್ಕಾರ ಇಂತಹ ಶಂಕಿತ ವಹಿವಾಟುಗಳನ್ನು ಪತ್ತೆಹಚ್ಚುವ ಕಾರ್ಯತಂತ್ರವನ್ನು ರೂಪಿಸಲಿವೆ. ಶಂಕಿತ ವಹಿವಾಟುಗಳು ನಡೆದಾಗಲೆಲ್ಲ ಎಚ್ಚರಿಸುವ ವ್ಯವಸ್ಥೆಯುು ನೂತನ ಕಾರ್ಯತಂತ್ರದ ಭಾಗವಾಗಲಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More