ಟ್ವಿಟರ್ ಸ್ಟೇಟ್ | ಇನ್ನೂ ಕಣ್ಣು ಬಿಡದ ಜಿಯೋ ಶಿಕ್ಷಣ ಸಂಸ್ಥೆಗೆ ಅತ್ಯುತ್ಕೃಷ್ಟ ದರ್ಜೆಯ ಮನ್ನಣೆ!

ಮೋದಿ ಸರ್ಕಾರ ಅತ್ಯುತ್ಕೃಷ್ಟ ದರ್ಜೆಯ ಮನ್ನಣೆ ನೀಡಲು ಆರಿಸಿಕೊಂಡಿರುವ ಶಿಕ್ಷಣ ಸಂಸ್ಥೆಗಳು ಆ ದರ್ಜೆ ಪಡೆಯುವ ಅರ್ಹತೆ ಹೊಂದಿವೆಯೇ ಎಂದು ಟ್ವಿಟರ್‌ನಲ್ಲಿ ಚರ್ಚೆಯಾಗಿದೆ. ಅಸ್ತಿತ್ವದಲ್ಲೇ ಇಲ್ಲದ ಜಿಯೋ ಶಿಕ್ಷಣ ಸಂಸ್ಥೆಗೆ ನೀಡಿರುವ ಮಾನ್ಯತೆ ಬಗ್ಗೆ ಗಂಭೀರ ಪ್ರಶ್ನೆಗಳು ಕೂಡ ಎದ್ದಿವೆ

ದೇಶದ ಆರು ಉನ್ನತ ವ್ಯಾಸಂಗ ಶಿಕ್ಷಣ ಸಂಸ್ಥೆಗಳಿಗೆ ಅತ್ಯುತ್ಕೃಷ್ಣ ದರ್ಜೆಯ ಶಿಕ್ಷಣ ಸಂಸ್ಥೆಗಳೆನ್ನುವ ಮಾನ್ಯತೆ ನೀಡಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ತೀರ್ಮಾನಿಸಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಮಾಡಲಾಗಿರುವ ಈ ತೀರ್ಮಾನವನ್ನು ಯಾರಾದರೂ ಸ್ವಾಗತಿಸಲೇಬೇಕು. ಆದರೆ, ಮೋದಿ ಸರ್ಕಾರ ಹೀಗೆ ‘ಅತ್ಯುತ್ಕೃಷ್ಟ ದರ್ಜೆ’ ಎನ್ನುವ ಮನ್ನಣೆ ನೀಡಲು ಆರಿಸಿಕೊಂಡಿರುವ ಶಿಕ್ಷಣ ಸಂಸ್ಥೆಗಳು ಆ ದರ್ಜೆಯನ್ನು ಪಡೆಯುವ ಅರ್ಹತೆ ಹೊಂದಿವೆಯೇ ಎನ್ನುವ ವಿಷಯ ಈಗ ಚರ್ಚೆಗೆ ಕಾರಣವಾಗಿದೆ.

ಮುಖ್ಯವಾಗಿ ಈ ಆರು ಶಿಕ್ಷಣ ಸಂಸ್ಥೆಗಳಲ್ಲಿ ಮೂರು ಖಾಸಗಿ ಶಿಕ್ಷಣ ಸಂಸ್ಥೆಗಳೂ ಇವೆ. ದೆಹಲಿ ಹಾಗೂ ಮುಂಬೈ ಐಐಟಿ, ಬೆಂಗಳೂರಿನ ಐಐಎಸ್ಸಿ ಜೊತೆಗೆ ರಾಜಸ್ಥಾನದ ಬಿರ್ಲಾ ಇನ್‌ಸ್ಟಿಟ್ಯೂಟ್ ಆಯ್ಕೆ ಆಗಿದೆ. ಆದರೆ, ದೇಶದಲ್ಲಿ ಈಗಾಗಲೇ ಇರುವ ಹಲವು ಉತ್ತಮ ಖಾಸಗಿ ಸಂಸ್ಥೆಗಳ ನಡುವೆ ಮಣಿಪಾಲ್ ಸಂಸ್ಥೆಯನ್ನು ಆರಿಸಿಕೊಂಡಿರುವ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಜೊತೆಗೆ, ಇನ್ನೂ ಅಸ್ತಿತ್ವದಲ್ಲಿಯೇ ಇಲ್ಲದ ಜಿಯೋ ಇನ್‌ಸ್ಟಿಟ್ಯೂಟ್ ಅನ್ನೂ ಶ್ರೇಷ್ಠ ದರ್ಜೆಯ ಮಾನ್ಯತೆ ನೀಡುವ ಸಂಸ್ಥೆಗಳ ಸಾಲಿಗೆ ಸೇರಿದ್ದು ಟ್ವಿಟರ್‌ನಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದೆ.

ಅಧ್ಯಾಪಕರಾದ ಆರ್ ಕೆ ರಾಧಕೃಷ್ಣನ್ ಟ್ವೀಟ್ ಮಾಡಿ, “ಜಿಯೋ ಇನ್‌ಸ್ಟಿಟ್ಯೂಟ್ ಹೇಗೆ ದೆಹಲಿ ಹಾಗೂ ಮುಂಬೈ ಐಐಟಿ, ಬೆಂಗಳೂರಿನ ಐಐಎಸ್ಸಿ, ರಾಜಸ್ಥಾನದ ಬಿರ್ಲಾ ಇನ್‌ಸ್ಟಿಟ್ಯೂಟ್ ಮತ್ತು ಮಣಿಪಾಲ್ ಸಂಸ್ಥೆಗಳ ಸಮಕ್ಕೆ ಬಂದಿದೆ? ಈವರೆಗೂ ಪತ್ರಕರ್ತರಿಗೆ ಯಾವುದೇ ಉತ್ತರ ನೀಡುವ ಗೋಜಿಗೆ ಹೋಗದ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಜಿಯೋ ಇನ್‌ಸ್ಟಿಟ್ಯೂಟ್‌ಗೆ ಮಾನ್ಯತೆ ನೀಡಲು ಕಾರಣ ಕೇಳಬೇಕಿದೆ,” ಎಂದು ಹೇಳಿದ್ದಾರೆ. ಸಿಪಿಎಂ ಮುಖಂಡ ಸೀತಾರಾಂ ಯಚೂರಿ ಟ್ವೀಟ್ ಮಾಡಿ, “ಹೀಗೆ ಅಸ್ತಿತ್ವವೇ ಇಲ್ಲದ ಶಿಕ್ಷಣ ಸಂಸ್ಥೆಗೆ ‘ಶ್ರೇಷ್ಠತೆ’ಯ ಮಾನ್ಯತೆ ನೀಡುವುದು ಕಳೆದ ನಾಲ್ಕು ವರ್ಷಗಳಿಂದ ಮೋದಿ ಸರ್ಕಾರ ಅನುಸರಿಸಿಕೊಂಡು ಬಂದಿರುವ ‘ಉದ್ಯಮಸ್ನೇಹಿ’ ಆಡಳಿತಕ್ಕೆ ಉತ್ತಮ ಉದಾಹರಣೆಯಾಗಿದೆ,” ಎಂದು ಹೇಳಿದ್ದಾರೆ.

ಇನ್ನೂ ಅಸ್ತಿತ್ವದಲ್ಲಿಯೇ ಇಲ್ಲದ ಜಿಯೋ ಇನ್‌ಸ್ಟಿಟ್ಯೂಟ್‌ಗೆ ಶ್ರೇಷ್ಠತೆಯ ಮಾನ್ಯತೆ ನೀಡಲು ಯೋಜಿಸಿರುವುದು ಬಿಜೆಪಿ ನಾಯಕರ ನಡುವೆಯೂ ಚರ್ಚೆಯ ವಸ್ತುವಾಗಿದೆ. “ಜಿಯೋ ಇನ್‌ಸ್ಟಿಟ್ಯೂಟ್‌ ಇನ್ನೂ ಅಸ್ತಿತ್ವಕ್ಕೆ ಎಂದಿಲ್ಲ. ಹಾಗಿದ್ದರೂ ಅದಕ್ಕೆ ಶ್ರೇಷ್ಠತೆಯ ಮಾನ್ಯತೆ ನೀಡಲಾಗುತ್ತಿದೆ. ಮುಖೇಶ್ ಅಂಬಾನಿಗೆ ನೀಡುವ ಪ್ರಾಶಸ್ತ್ಯವಿದು,” ಎಂದು ಬಿಜೆಪಿಗೆ ಇತ್ತೀಚೆಗೆ ರಾಜೀನಾಮೆ ನೀಡಿರುವ ಯಶವಂತ್ ಸಿನ್ಹಾ ಟ್ವೀಟ್ ಮಾಡಿದ್ದಾರೆ. ಇತಿಹಾಸಕಾರ ರಾಮಚಂದ್ರ ಗುಹಾ ಟ್ವೀಟ್ ಮಾಡಿ, “ಅಂಬಾನಿ ವಿಶ್ವವಿದ್ಯಾಲಯಕ್ಕೆ ಸರ್ಕಾರ ನೀಡುವ ಆದ್ಯತೆ ಆಘಾತಕಾರಿಯೇನಲ್ಲ. ಮುಖ್ಯವಾಗಿ ಹಲವಾರು ಪ್ರಥಮ ದರ್ಜೆಯ ವಿಶ್ವವಿದ್ಯಾಲಯಗಳನ್ನು ಬದಿಗೆ ತಳ್ಳಿ ಜಿಯೋ ಇನ್‌ಸ್ಟಿಟ್ಯೂಟ್‌ ಆಯ್ಕೆಯಾಗಿದೆ. ಆ ವಿಶ್ವವಿದ್ಯಾಲಯಗಳಲ್ಲಿರುವ ಬುದ್ಧಿವಂತ ಅಧ್ಯಾಪಕರು ಸ್ವತಂತ್ರ ಚಿಂತಕರನ್ನು ಶಿಕ್ಷಿಸಲಾಗಿದೆಯೇ? ಸರ್ಕಾರ ಈಗ ಜಿಯೋ ಇನ್‌ಸ್ಟಿಟ್ಯೂಟ್‌ ಅನ್ನು ‘ಗ್ರೀನ್‌ ಫೀಲ್ಡ್’ ವಿಭಾಗದಲ್ಲಿ ಇಡಲಾಗಿದೆ ಎನ್ನುತ್ತಿದೆ. ಆದರೆ, ಚೆನ್ನೈ ಹೊರಭಾಗದಲ್ಲಿರುವ ರಘುರಾಂ ರಾಜನ್‌ರಂಥವರು ಪರಿಣಿತರು ಬೋಧಿಸುತ್ತಿರುವ ಗ್ರೀನ್‌ಫೀಲ್ಡ್ ವಿಶ್ವವಿದ್ಯಾಲಯವು ಇನ್ನೂ ಅಸ್ತಿತ್ವಕ್ಕೆ ಬಾರದೆ ಇರುವ ಅಂಬಾನಿ ವಿಶ್ವವಿದ್ಯಾಲಯಕ್ಕಿಂತ ಉತ್ತಮವಾಗಿದೆ. ಅದನ್ನು ಏಕೆ ಆರಿಸಿಲ್ಲ?” ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಂದು ವಿಶ್ವವಿದ್ಯಾಲಯಕ್ಕೆ ಶ್ರೇಷ್ಠತೆಯ ಮಾನ್ಯತೆ ನೀಡಲು ಶಿಕ್ಷಣದ ಗುಣಮಟ್ಟ, ಕಟ್ಟಡ, ಕ್ಯಾಂಪಸ್, ವೆಬ್‌ಸೈಟ್‌ ಅಥವಾ ಇನ್ಯಾವುದೇ ಮೂಲ ಸೌಕರ್ಯಗಳನ್ನು ಪರಿಗಣಿಸಲಾಗುವುದಿಲ್ಲ ಎನ್ನುವ ವಿಚಾರವೂ ಬಹಳ ಚರ್ಚೆಗೆ ಬಂದಿದೆ. ಇನ್ನೂ ಅಸ್ತಿತ್ವಕ್ಕೆ ಬಾರದೆ ಇರುವ ಜಿಯೋ ಇನ್‌ಸ್ಟಿಟ್ಯೂಟ್‌ನ ಶೈಕ್ಷಣಿಕ ಗುಣಮಟ್ಟವನ್ನು ಅಂದಾಜು ಮಾಡಿ ಅದಕ್ಕೆ ಶ್ರೇಷ್ಠತೆಯ ಮಾನ್ಯತೆ ನೀಡಲು ಮೋದಿ ಸರ್ಕಾರ ಮುಂದಾಗಿರುವುದು ಟೀಕೆಗೆ ಕಾರಣವಾಗಿದೆ. ವಕೀಲ ಸಿದ್ ಟ್ವೀಟ್ ಮಾಡಿ, “ಜಿಯೋ ಇನ್‌ಸ್ಟಿಟ್ಯೂಟ್‌ಗೆ ಕಟ್ಟಡವಿದೆಯೆ? ವೆಬ್‌ಸೈಟ್‌ ಇದೆಯೆ? ಅಲ್ಲಿಂದ ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆಯೆ? ಹಾಗಿದ್ದರೆ ಆ ಸಂಸ್ಥೆಯ ಶ್ರೇಷ್ಠತೆಯನ್ನು ಸರ್ಕಾರ ಹೇಗೆ ಅಂದಾಜಿಸಿದೆ,” ಎಂದು ಪ್ರಶ್ನಿಸಿದ್ದಾರೆ. ಸಿಪಿಐ(ಎಂ) ಪಕ್ಷದ ಅಧಿಕೃತ ಟ್ವಿಟರ್ ಖಾತೆಯೂ ಇದೇ ರೀತಿಯ ಅಭಿಪ್ರಾಯವನ್ನು ಟ್ವೀಟ್ ಮಾಡಿದೆ. “ಒಂದು ಸಂಸ್ಥೆಗೆ ಶ್ರೇಷ್ಠತೆಯ ಮಾನದಂಡ ನೀಡಲು ಕ್ಯಾಂಪಸ್, ವೆಬ್‌ಸೈಟ್‌, ಅಧ್ಯಾಪಕರು, ವಿದ್ಯಾರ್ಥಿಗಳು, ಪಠ್ಯಗಳು ಅಥವಾ ಹಿಂದಿನ ದಾಖಲೆಗಳ ಅಗತ್ಯವೇ ಇಲ್ಲ. ನಿಮ್ಮ ಜೇಬಿನ ಒಳಗೆ ಸೂಕ್ತ ರಾಜಕಾರಣಿಗಳು ಇರಬೇಕು,” ಎಂದು ಟ್ವೀಟ್ ಮಾಡಿದೆ. “ಹುಟ್ಟುವ ಮೊದಲೇ ಶ್ರೇಷ್ಠತೆಯ ಮಾನದಂಡ ಗಳಿಸುವುದೆಂದರೆ ಆ ಸಂಸ್ಥೆಯ ಮಾಲೀಕರನ್ನು ಓಲೈಸುವ ಪ್ರಯತ್ನವಷ್ಟೆ,” ಎಂದು ಪತ್ರಕರ್ತೆ ಆರತಿ ಟ್ವೀಟ್ ಮಾಡಿದ್ದಾರೆ. ಪತ್ರಕರ್ತರಾದ ಶೇಖರ್ ಗುಪ್ತಾ, ಕೃಷ್ಣಪ್ರತಾಪ್ ಸಿಂಗ್, ಎಂ ಕೆ ವೇಣು, ಪ್ರೊಫೆಸರ್ ಅಶೋಕ್ ಸ್ವೇನ್, ನ್ಯಾಯವಾದಿ ಪ್ರಶಾಂತ್ ಭೂಷಣ್ ಮೊದಲಾದವರು ಇದೇ ರೀತಿ ಟೀಕಿಸಿದ್ದಾರೆ.

ಇದನ್ನೂ ಓದಿ : ₹399 ರಿಚಾರ್ಜ್ ಮಾಡಿದರೆ ₹3300 ಕ್ಯಾಶ್ ಬ್ಯಾಕ್, ರಿಯಲನ್ಸ್ ಜಿಯೋ ಹೊಸ ಆಫರ್

ಶಿಕ್ಷಣ ಸಂಸ್ಥೆಗಳಿಗೆ ಶ್ರೇಷ್ಟತೆಯ ಮಾನ್ಯತೆ ನೀಡುವ ವಿಚಾರದಲ್ಲಿ ಹಣ ಮತ್ತು ಪ್ರಭಾವವೇ ಮುಖ್ಯವಾಗಿ ಕೆಲಸ ಮಾಡಿದೆ ಎಂದು ಬಹಳಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. “ಹಣ ಮತ್ತು ಪ್ರಭಾವ ಬಳಸಿದಲ್ಲಿ ಎಲ್ಲ ಬಾಗಿಲುಗಳೂ ನಿಮಗಾಗಿ ತೆರೆಯಲಿವೆ,” ಎಂದು ನಟ ಆಕಾಶ್ ಬ್ಯಾನರ್ಜೀ ಟ್ವೀಟ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಮಣಿಪಾಲ್ ಶಿಕ್ಷಣ ಸಂಸ್ಥೆಯ ಆಯ್ಕೆಯನ್ನೂ ಟ್ವೀಟಿಗರು ಪ್ರಶ್ನಿಸಿದ್ದಾರೆ. ಲೇಖಕ ಸುವೋಜಿತ್ ಟ್ವೀಟ್ ಮಾಡಿ, “ಜಿಯೋ ವಿಶ್ವವಿದ್ಯಾಲಯದ ಚರ್ಚೆಯ ನಡುವೆ ಒಂದು ಪ್ರಶ್ನೆಯನ್ನು ಎಲ್ಲರೂ ಮರೆತಿದ್ದಾರೆ. ‘ಮಣಿಪಾಲ್’ ಆಯ್ಕೆ ಹೇಗೆ?” ಎಂದು ಪ್ರಶ್ನಿಸಿದ್ದಾರೆ. “ಜಿಯೋ ವಿಶ್ವವಿದ್ಯಾಲಯ ವಿಚಾರದ ಎಲ್ಲಾ ಉತ್ಸಾಹದ ನಡುವೆ ನಾವು ಮಣಿಪಾಲ ಸಂಸ್ಥೆ ಆಯ್ಕೆಯಾಗಿರುವುದಕ್ಕಾಗಿ ಟಿವಿ ಮೋಹನ್‌ದಾಸ್ ಪೈ ಅವರನ್ನು ಮೆಚ್ಚಿಕೊಳ್ಳಲು ಮರೆತಿದ್ದೇವೆ. ನಿಮಗೆ ಸಿಕ್ಕಿರುವುದು ಅರ್ಹವಾದ ಮಾನ್ಯತೆ ಅಲ್ಲವೆ? ಅತೀ ಧೀರ್ಘ ಆಟ,” ಎಂದು ಪರ್ತಕರ್ತರಾದ ಪ್ರಸಾಂತೋ ಕೆ ರಾಯ್ ಟ್ವೀಟ್ ಮಾಡಿದ್ದಾರೆ. ಅವರಿಗೆ ಉತ್ತರಿಸಿದ ಪತ್ರಕರ್ತರಾದ ಮಹೀಮ್ ಪ್ರತಾಪ್ ಸಿಂಗ್, “ಇದು ಹಾಸ್ಯದ ವಿಷಯವಲ್ಲ. ಹಳೇ ಹಣ್ಣುಗಳಿಂದ ತಯಾರಿಸಿದ ರುಚಿ ಇದು. ದೊಡ್ಡ ದುರಂತ,” ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ, ಮಣಿಪಾಲ್ ಸಂಸ್ಥೆ ಪ್ರಭಾವ ನೀಡಿರುವ ಬಗ್ಗೆ ಇಬ್ಬರು ಪತ್ರಕರ್ತರ ನಡುವೆ ಚರ್ಚೆಯಾಗಿದೆ. ಹೀಗೆ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಂತಹ ಉತ್ತಮ ಶಿಕ್ಷಣ ಸಂಸ್ಥೆಗೆ ಅನುದಾನ ಕಡಿತಗೊಳಿಸಿ ಮಣಿಪಾಲ್ ಸಂಸ್ಥೆಯನ್ನು ಪ್ರೋತ್ಸಾಹಿಸುತ್ತಿರುವ ಕೇಂದ್ರ ಸರ್ಕಾರವನ್ನು ಪತ್ರಕರ್ತರು ಟೀಕಿಸಿದ್ದಾರೆ. ಅಮೃತ ಶಿಕ್ಷಣ ಸಂಸ್ಥೆಗೆ ಮಣಿಪಾಲ್ ಶಿಕ್ಷಣ ಸಂಸ್ಥೆಗಿಂತಲೂ ಉತ್ತಮ ಗುಣಮಟ್ಟದ ಶ್ರೇಯಾಂಕವಿದೆ ಎನ್ನುವ ವಿಚಾರವೂ ಚರ್ಚೆಗೆ ಒಳಗಾಗಿದೆ.

ಈ ನಡುವೆ, ಸರ್ಕಾರ ಮತ್ತು ಅಂಬಾನಿ ಪರವಾಗಿರುವ ವ್ಯಕ್ತಿಗಳು ಜಿಯೋ ಶಿಕ್ಷಣ ಸಂಸ್ಥೆಗೆ ನೀಡಲಾಗುತ್ತಿರುವ ಮಾನ್ಯತೆಯನ್ನು ಬೆಂಬಲಿಸಲು ಪ್ರಯತ್ನಿಸಿದ್ದಾರೆ. ರವಿ ನಾಯರ್ ಟ್ವೀಟ್ ಮಾಡಿ, “ಕೇಂದ್ರ ಸರ್ಕಾರ ವಿಶ್ವದರ್ಜೆಯ ಸಂಸ್ಥೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ,” ಎಂದು ಹೇಳಿದ್ದಾರೆ. ಸರ್ಕಾರ ಧೀರ್ಘಾವಧಿಯಲ್ಲಿ ಈ ಸಂಸ್ಥೆಗಳಿಗೆ ಶ್ರೇಷ್ಠತೆಯ ಮಾನ್ಯತೆ ನೀಡಲು ನಿರ್ಧರಿಸಿದೆಯೇ ವಿನಾ ಇದು ತಕ್ಷಣದ ಕ್ರಮವಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಪರ ನಕಲಿ ಟ್ವೀಟ್‌ಗಳ ಮೂಲಕ ಮಾನ್ಯತೆಯ ನಿರ್ಧಾರವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನವೂ ಬಹಿರಂಗವಾಗಿದೆ.

#DivyaLiability ಎನ್ನುವ ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗುತ್ತಿರುವುದು ಕುತೂಹಲಕರ. ಜಿಯೋ ಇನ್‌ಸ್ಟಿಟ್ಯೂಟ್ ಕುರಿತ ನಿರ್ಧಾರವನ್ನು ಸಮರ್ಥಿಸುವ ಹಲವು ಟ್ವೀಟ್‌ಗಳು ನಕಲಿ ಹ್ಯಾಂಡಲ್‌ಗಳಿಂದ ಟ್ವೀಟ್ ಆಗಿವೆ,” ಎಂದು ಪತ್ರಕರ್ತ ಶ್ರೀನಿವಾಸ್ ಜೈನ್ ಟ್ವೀಟ್ ಮಾಡಿದ್ದಾರೆ. ಫೇಕ್ ಟ್ರೆಂಡ್ ಅಲರ್ಟ್‌ ಎನ್ನುವ ಹ್ಯಾಂಡಲ್ ಕೂಡ ಈ ವಿಚಾರವನ್ನು ಟ್ವೀಟ್ ಮಾಡಿ, “೫೦೦ ಟ್ವೀಟ್‌ಗಳ ಮೂಲಕ #DivyaLiability ೨ನೇ ಸ್ಥಾನದಲ್ಲಿ ಟ್ರೆಂಡ್ ಆಗುತ್ತಿದೆ. ಆದರೆ, ಇದರಲ್ಲಿ ಶೇ.೫೦ರಷ್ಟು ಟ್ವೀಟ್‌ಗಳನ್ನು ಕಾಪಿ ಮಾಡಿ ಪೇಸ್ಟ್ ಮಾಡಲಾಗಿದೆ. ಎಲ್ಲ ವಿಷಯಗಳೂ ಜಿಯೋ ಇನ್‌ಸ್ಟಿಟ್ಯೂಟ್ ಅನ್ನೇ ಬೆಂಬಲಿಸುತ್ತಿವೆ. ಆದರೆ, ಹ್ಯಾಷ್‌ಟ್ಯಾಗ್ ಮಾತ್ರ ಒಬ್ಬ ವ್ಯಕ್ತಿಯನ್ನು ಗುರಿ ಮಾಡಿದೆ. ದಿವ್ಯಾ ಸ್ಪಂದನಳನ್ನು ಟೀಕಿಸುವ ಹ್ಯಾಂಡಲ್ ಇದು,” ಎಂದು ಹೇಳಿದೆ. ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥರಾದ ರಮ್ಯ/ ದಿವ್ಯ ಸ್ಪಂದನ ಇದಕ್ಕೆ ಪ್ರತಿಕ್ರಿಯೆ ನೀಡಿ, “ಜಿಯೋ ಇನ್‌ಸ್ಟಿಟ್ಯೂಟ್ ಪರವಾಗಿ ಮತ್ತು ನನ್ನ ವಿರುದ್ಧ ಪ್ರತ್ಯೇಕ ಟ್ವೀಟ್‌ಗಳನ್ನು ಟ್ರೆಂಡ್ ಮಾಡುವ ಸೂಚನೆ ಬಂದಿತ್ತು. ಆದರೆ ಎರಡನ್ನೂ ಒಂದರಲ್ಲೇ ಮುಗಿಸುವ ಪ್ರಯತ್ನದಲ್ಲಿ ಸಿಕ್ಕಿಬಿದ್ದಿದ್ದಾರೆ,” ಎಂದು ಹೇಳಿದ್ದಾರೆ.

ಜಿಯೋ ಇನ್‌ಸ್ಟಿಟ್ಯೂಟ್‌ಗೆ ಶ್ರೇಷ್ಠತೆಯ ಮಾನ್ಯತೆ ನೀಡುವ ಬಗ್ಗೆ ಟ್ವಿಟರ್‌ನಲ್ಲಿ ಹಲವು ತಮಾಷೆಗಳೂ ಹರಿದಾಡಿವೆ. ಅಂತಹ ಕೆಲವು ಜೋಕ್‌ಗಳು ಹೀಗಿವೆ:

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More