ಈ ಬಾರಿಯಾದರೂ ರಾಮನಗರ ಕೋರ್ಟ್‌ಗೆ ಹಾಜರಾಗುತ್ತಾರೆಯೇ ನಿತ್ಯಾನಂದ ಸ್ವಾಮೀಜಿ?

ನಿತ್ಯಾನಂದ ಆಶ್ರಮ ಮತ್ತೊಮ್ಮೆ ಸುದ್ದಿಯಲ್ಲಿದೆ. ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಾಗಿರುವ ನಿತ್ಯಾನಂದ ಸ್ವಾಮೀಜಿ ಮತ್ತು ಇತರ ಆರೋಪಿಗಳು ಇದೇ ಜು.೧೬ರಂದು ರಾಮನಗರ ಜಿಲ್ಲಾ ನ್ಯಾಯಾಲಯಕ್ಕೆ ಕಡ್ಡಾಯವಾಗಿ ಹಾಜರಾಗಬೇಕಿದೆ. ಆದರೆ ಹಾಜರಾಗುವುದಿಲ್ಲ ಎಂಬ ವದಂತಿ ಇದೆ

ಬಿಡದಿಯ ನಿತ್ಯಾನಂದ ಆಶ್ರಮದ ನಿತ್ಯಾನಂದ ಸ್ವಾಮೀಜಿ ಸೇರಿದಂತೆ ಒಟ್ಟು ೬ ಮಂದಿ ಆರೋಪಿಗಳ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ತ್ವರಿತಗತಿಯಲ್ಲಿ ವಿಚಾರಣೆ ನಡೆಸುತ್ತಿರುವ ರಾಮನಗರದ ಅಧೀನ ನ್ಯಾಯಾಲಯ ಇದೇ ಜು.೧೬ರಂದು ವಿಚಾರಣೆ ಮುಂದುವರಿಸಿದೆ. ಆರೋಪಿಗಳೆಲ್ಲರೂ ನ್ಯಾಯಾಲಯದ ಮುಂದೆ ಈ ಬಾರಿ ಕಡ್ಡಾಯವಾಗಿ ಹಾಜರಾಗಲೇಬೇಕಾದ ಅನಿವಾರ್ಯತೆಯೂ ಇದೆ. ಆದರೆ, ನಿತ್ಯಾನಂದ ಸ್ವಾಮೀಜಿ ಸೇರಿದಂತೆ ಉಳಿದ ೬ ಮಂದಿ ಆರೋಪಿಗಳು ಈ ಹಿಂದೆ ನ್ಯಾಯಾಲಯಕ್ಕೆ ಗೈರುಹಾಜರಾಗಿದ್ದು, ಈ ಬಾರಿ ಹಾಜರಾಗುತ್ತಾರೆಯೇ ಅಥವಾ ಇಲ್ಲವೇ ಎಂಬುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಈ ನಡುವೆ, ಆರೋಪಿಗಳೆಲ್ಲರೂ ಜು.೧೬ರಂದು ನಡೆಯಲಿರುವ ವಿಚಾರಣೆಗೆ ಹಾಜರಾಗದೆ ಇರಬಹುದೆಂಬ ದಟ್ಟ ವದಂತಿಯೂ ಹರಿದಾಡುತ್ತಿದೆ. ಜೊತೆಗೆ, ಸ್ವಾಮೀಜಿ ದೇಶ ತೊರೆದಿರಬಹುದು ಎಂಬ ಮಾತು ಕೂಡ ಕೇಳಿಬರುತ್ತಿದೆ. ಅಲ್ಲದೆ, ಕೆಲ ದಿನಗಳಿಂದ ಆಶ್ರಮದ ಚಟುವಟಿಕೆಗಳು ಸ್ಥಗಿತಗೊಂಡಿವೆ ಎಂದೂ ಹೇಳಲಾಗುತ್ತಿದೆ. ಆದರೆ ಈ ಯಾವುದೇ ಮಾತನ್ನು ‘ದಿ ಸ್ಟೇಟ್’ ಖಚಿತಪಡಿಸಿಕೊಂಡಿಲ್ಲ.

ಈ ಕುರಿತು ಅವರನ್ನು ಪ್ರತಿನಿಧಿಸಿರುವ ವಕೀಲರನ್ನು ಸಂಪರ್ಕಿಸಲು ‘ದಿ ಸ್ಟೇಟ್’ ಯತ್ನಿಸಲಾಯಿತಾದರೂ ಅವರು ಸಂಪರ್ಕಕ್ಕೆ ಲಭ್ಯರಾಗಲಿಲ್ಲ. ಅವರ ಅಭಿಪ್ರಾಯ ಸಿಕ್ಕ ಕೂಡಲೇ ಈ ಲೇಖನವನ್ನು ಅಪ್‌ಡೇಟ್‌ ಮಾಡಲಾಗುವುದು. ಇನ್ನು, ಅದೇ ರೀತಿ, ರಾಮನಗರ ಜಿಲ್ಲಾ ರಕ್ಷಣಾಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು, “ಈ ಬಗ್ಗೆ ಮಾಹಿತಿ ಇಲ್ಲ, ಸ್ಥಳೀಯ ಇನ್ಸ್‌ಪೆಕ್ಟರ್ ಅವರನ್ನು ಸಂಪರ್ಕಿಸಿ,” ಎಂದು ಸಲಹೆ ನೀಡಿದರು. ಇನ್ಸ್‌ಪೆಕ್ಟರ್ ಅವರನ್ನು ಸಂಪರ್ಕಿಸಲು ಯತ್ನಿಸಲಾಯಿತಾದರೂ ಕರೆ ಸ್ವೀಕರಿಸಲಿಲ್ಲ.

ಇದನ್ನೂ ಓದಿ : ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ಮೇಲೆ ಸ್ವಹಿತಾಸಕ್ತಿ ರಾಜಕಾರಣದ ಕರಿನೆರಳು

ಒಂದು ತಿಂಗಳ ಹಿಂದೆ (ಜೂ.೨೮, ೨೦೧೮) ನಡೆದಿದ್ದ ವಿಚಾರಣೆಯೂ ಸೇರಿದಂತೆ ಈ ಹಿಂದಿನ ಎರಡು ವಿಚಾರಣೆಗಳಿಗೆ ನಿತ್ಯಾನಂದ ಸ್ವಾಮೀಜಿ ಸೇರಿ ಇತರ ಆರೋಪಿಗಳು ಹಾಜರಿರಲಿಲ್ಲ. ನ್ಯಾಯಾಲಯ ಇದನ್ನು ಗಂಭೀರವಾಗಿ ಪರಿಗಣಿಸಿತ್ತಲ್ಲದೆ, ಈ ಬಾರಿ ಕಡ್ಡಾಯವಾಗಿ ಹಾಜರಾಗಲೇಬೇಕು ಎಂದು ಕಠಿಣ ಆದೇಶ ಹೊರಡಿಸಿತ್ತು. ಹೀಗಾಗಿಯೇ ನಿತ್ಯಾನಂದ ಮತ್ತು ಸಹಚರರ ಹಾಜರಾತಿ ಗಮನ ಸೆಳೆದಿದೆ.

ಎಂಟು ವರ್ಷಗಳಷ್ಟು ಹಳೆಯದಾದ ತಮ್ಮ ವಿರುದ್ಧದ ಅತ್ಯಾಚಾರ ಆರೋಪಗಳನ್ನು ಕೈಬಿಡುವ ಸಂಬಂಧ ಸ್ವಾಮೀಜಿ, ಸಿವ ವಲ್ಲಭನೇನಿ, ರಾಗಿಣಿ ವಲ್ಲಭನೇನಿ, ಧನಶೇಖರ್‌ ಮತ್ತು ಜಮುನಾರಾಣಿ ಸಲ್ಲಿಸಿದ್ದ ಅರ್ಜಿಯನ್ನು ಫೆ.೧೯, 2018ರಂದು ರಾಮನಗರ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ವಜಾಗೊಳಿಸಿತ್ತಲ್ಲದೆ, ಆರೋಪ ನಿಗದಿ ಮಾಡಲು ಆದೇಶಿಸಿತ್ತು. ಅದರಂತೆ ಆರೋಪವೂ ನಿಗದಿಯಾಗಿದೆ.

ತಮಿಳುನಾಡಿನ ಪೊಲೀಸರು ೨೦೧೦ರ ಮಾರ್ಚ್‌ ೧೧ರಂದು ಈ ಪ್ರಕರಣದಲ್ಲಿ ನಿತ್ಯಾನಂದ ಸ್ವಾಮೀಜಿ ಮತ್ತು ಸಹಚರರ ವಿರುದ್ಧ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ಆ ನಂತರ ಮಾರ್ಚ್‌ ೧೬ರಂದು ಪ್ರಕರಣವನ್ನು ಕರ್ನಾಟಕಕ್ಕೆ ಹಸ್ತಾಂತರಿಸಲಾಗಿತ್ತು. ಇದಾದ ನಂತರ ರಾಮನಗರದ ಅಧೀನ ನ್ಯಾಯಾಲಯ ೨೦೧೪ರ ಆಗಸ್ಟ್ ೨೭ರಂದು ವಿಚಾರಣೆ ಕೈಗೆತ್ತಿಕೊಂಡು ಆ ವರ್ಷದಲ್ಲಿ ೬ ಬಾರಿ ವಿಚಾರಣೆ ನಡೆಸಿತ್ತು. ಹಾಗೆಯೇ, ೨೦೧೫ರಲ್ಲಿ ೨೧, ೨೦೧೬ರಲ್ಲಿ ೧೮, ೨೦೧೭ರಲ್ಲಿ ೧೩ ಮತ್ತು ೨೦೧೮ರ ಈವರೆಗೆ ೧೨ ವಿಚಾರಣೆ ನಡೆಸಿದೆ. ಪ್ರಕರಣದ ವಿಚಾರಣೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಇತ್ಯರ್ಥಗೊಳಿಸಲು ನ್ಯಾಯಾಲಯ ಮುಂದಾಗಿದೆ.

2010ರಲ್ಲಿ ನಿತ್ಯಾನಂದ ಸ್ವಾಮೀಜಿಯ ಕಾರು ಚಾಲಕನಾಗಿದ್ದ ಲೆನಿನ್‌ ಕುರುಪ್ಪನ್‌, ಆಶ್ರಮದಲ್ಲಿ ಅತ್ಯಾಚಾರ ನಡೆದಿವೆ ಎಂದು ಚೆನ್ನೈನ ಕೇಂದ್ರ ಅಪರಾಧ ತನಿಖಾ ವಿಭಾಗಕ್ಕೆ ದೂರು ನೀಡಿದ್ದರು. ಆ ನಂತರ ಆರತಿ ರಾವ್‌ ಎಂಬುವವರು ತಮ್ಮ ಮೇಲೆ ನಿತ್ಯಾನಂದ ಸ್ವಾಮೀಜಿ ನಿರಂತರ ಅತ್ಯಾಚಾರ ಎಸಗಿದ್ದಾಗಿ ದೂರು ನೀಡಿದ್ದರು. ಆ ನಂತರ ದೂರನ್ನು ರಾಮನಗರಕ್ಕೆ ವರ್ಗಾಯಿಸಲಾಯಿತು. ಸಿಐಡಿ ಪೊಲೀಸರು 2010ರ ಅ.27ರಂದು ಸ್ವಾಮೀಜಿ ಮತ್ತಿತರರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದನ್ನು ಸ್ಮರಿಸಿಕೊಳ್ಳಬಹುದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More