ಸಕ್ಕರೆ ಉತ್ಪಾದನೆ ಹೆಚ್ಚಳ; ಜಾಗತಿಕ ಮಟ್ಟಕ್ಕೂ ವಿಸ್ತರಿಸಿದ ದಾಸ್ತಾನು ಸಮಸ್ಯೆ

ರಾಜ್ಯದ ಕಬ್ಬು ಬೆಳೆಗಾರರಿಗೆ ಕಹಿ ಮತ್ತು ಗ್ರಾಹಕರಿಗೆ ಸಿಹಿ ಸುದ್ದಿಯೊಂದಿದೆ. ಅದೆಂದರೆ, 2018ರಲ್ಲಿ ಸಕ್ಕರೆ ಉತ್ಪಾದನೆ ಗುರಿ ಮೀರಿ ಹೆಚ್ಚಳವಾಗಲಿದೆ. ಇದು ಬರೀ ರಾಜ್ಯದ ವಿದ್ಯಮಾನವಷ್ಟೇ ಅಲ್ಲ, ಜಾಗತಿಕ ವಿದ್ಯಮಾನ. ಸಕ್ಕರೆ ಬಳಕೆ ತಗ್ಗಿದ್ದು, ದಾಸ್ತಾನು ಮಾಡುವುದೇ ಈಗ ದೊಡ್ಡ ಸವಾಲಾಗಿದೆ!

ಸಕ್ಕರೆ ಎಂಬುದು ಗ್ರಾಹಕರು ಮತ್ತು ಬೆಳೆಗಾರರಿಗೆ ಏಕಕಾಲಕ್ಕೆ ಸಿಹಿಯಾಗಿರುವುದಿಲ್ಲ. ಕಬ್ಬು ಬೆಳೆ ಚೆನ್ನಾಗಿ ಬಂದು ಸಕ್ಕರೆ ಉತ್ಪಾದನೆ ಹೆಚ್ಚಿದರೆ ಗ್ರಾಹಕರಿಗೆ ಸಿಹಿ; ಆದರೆ, ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಉತ್ಪಾದಕರಿಗೆ ಕಹಿ. ಈಗ ಗ್ರಾಹಕರು ಸಿಹಿ ಅನುಭವಿಸುವ ಮತ್ತು ಬೆಳೆಗಾರರು ಕಹಿ ಅನುಭವಿಸುವ ಹಂತದಲ್ಲಿ ನಾವಿದ್ದೇವೆ. ಇದು ಕೇವಲ ಕರ್ನಾಟಕ, ಭಾರತದ ವಿದ್ಯಮಾನ ಅಲ್ಲ, ಇಡೀ ಜಗತ್ತಿನಲ್ಲೇ ಈ ವಿದ್ಯಮಾನ ಇದೆ.

ಭಾರತವು ವಿಶ್ವದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ಎರಡನೇ ರಾಷ್ಟ್ರ. 2018-19ನೇ ಸಾಲಿನಲ್ಲಿ ಭಾರತ ದಾಖಲೆ ಪ್ರಮಾಣದ 30 ದಶಲಕ್ಷ ಟನ್ ಸಕ್ಕರೆ ಉತ್ಪಾದನೆ ಮಾಡಲಿದೆ. ಇದರಲ್ಲಿ ಕರ್ನಾಟಕದ ಪಾಲು 3.54 ದಶಲಕ್ಷ ಟನ್. ದೇಶದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ಮೂರನೇ ರಾಜ್ಯ ಕರ್ನಾಟಕ. ಮೊದಲೆರಡು ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ತಲಾ ಹತ್ತು ದಶಲಕ್ಷ ಟನ್ ಸಕ್ಕರೆ ಉತ್ಪಾದನೆ ಮಾಡುತ್ತಿವೆ. 2017-18ರಲ್ಲಿ ಸುಮಾರು 29 ದಶಲಕ್ಷ ಟನ್ ಸಕ್ಕರೆ ಉತ್ಪಾದಿಸಲಾಗಿದೆ. ನಮ್ಮ ದೇಶದ ಗೃಹೋಪಯೋಗಿ ಮತ್ತು ಕೈಗಾರಿಕಾ ಬಳಕೆ ಸೇರಿದಂತೆ 26 ದಶಲಕ್ಷ ಟನ್. ಶೇ.18ರಷ್ಟು ಉತ್ಪಾದನೆ ಹೆಚ್ಚಿದೆ. ಈ ಸಕ್ಕರೆ ವರ್ಷದಲ್ಲೂ ಹೆಚ್ಚೂಕಡಿಮೆ ಶೇ.20ರಷ್ಟು ಹೆಚ್ಚು ಉತ್ಪಾದನೆ ನಿರೀಕ್ಷಿಸಲಾಗಿದೆ.

ಸಮಸ್ಯೆ ಮೂಲ ಇರುವುದು ಬೇರೆ ಕೃಷಿ ಉತ್ಪನ್ನಗಳು, ಸಿದ್ಧ ಪದಾರ್ಥಗಳ ಬಳಕೆ ಹೆಚ್ಚುತ್ತಿರುವ ಪ್ರಮಾಣದಲ್ಲಿ ಸಕ್ಕರೆ ಬಳಕೆ ಪ್ರಮಾಣ ಹೆಚ್ಚುತ್ತಿಲ್ಲ. ‘ಬ್ಲೂಮ್‌ಬರ್ಗ್’ ವರದಿ ಪ್ರಕಾರ, ಜನರು ಆರೋಗ್ಯದ ಬಗ್ಗೆ ಹೆಚ್ಚೆಚ್ಚು ಕಾಳಜಿ ವಹಿಸುತ್ತಿದ್ದಂತೆ ಸಕ್ಕರೆ ಬಳಕೆ ಪ್ರಮಾಣ ತಗ್ಗುತ್ತಿದೆ. ಹೀಗಾಗಿ, ಸಕ್ಕರೆ ಬಳಕೆಯ ಸರಾಸರಿ ಪ್ರಮಾಣವು ನಿರೀಕ್ಷಿತ ಮಟ್ಟದಲ್ಲಿ ಹೆಚ್ಚುತ್ತಿಲ್ಲ.

ಇದೇ ವೇಳೆ, ಉತ್ತಮ ಮತ್ತು ಸಕಾಲಿಕ ಮಳೆಯಿಂದಾಗಿ ಕಬ್ಬು ಬೆಳೆ ಉತ್ತಮವಾಗಿದ್ದು, ಇಳುವರಿ ಸಹ ನಿರೀಕ್ಷೆ ಮೀರಿದೆ. ಹೀಗಾಗಿ, ಸಕ್ಕರೆ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿದೆ. ಪರಿಣಾಮವಾಗಿ, ಬಳಕೆಗೆ ಸಿದ್ಧವಾದ ಸಕ್ಕರೆ ಕಾರ್ಖಾನೆಗಳ ಗೋದಾಮುಗಳಲ್ಲಿ ಸಂಗ್ರವಾಗಿದೆ. ಸಕ್ಕರೆ ಉತ್ಪಾದನೆ ಹೆಚ್ಚುತ್ತಿದ್ದು, ಮತ್ತಷ್ಟು ಸಂಗ್ರಹಿಸುವುದೇ ದೊಡ್ಡ ಸವಾಲಾಗಿದೆ. ಅಮೆರಿಕದ ಕೃಷಿ ಇಲಾಖೆ ಅಂಕಿ-ಅಂಶಗಳ ಪ್ರಕಾರ, 2017-18 ಮತ್ತು 2018-19ನೇ ಸಾಲಿನಲ್ಲಿ ಸಕ್ಕರೆ ದಾಸ್ತಾನು ದಾಖಲೆ ಪ್ರಮಾಣದಲ್ಲಿ ಹೆಚ್ಚಿದೆ. ಸಕ್ಕರೆ ದಾಸ್ತಾನು 50 ದಶಲಕ್ಷ ಟನ್‌ಗೆ ಏರಿದೆ.

ಮಳೆ ಕೈ ಕೊಟ್ಟು ಬೆಳೆ ನಷ್ಟವಾಗದ ಹೊರತು ಸದ್ಯಕ್ಕೆ ಸಕ್ಕರೆಗೆ ಉತ್ತಮ ದರ ಬರುವ ನಿರೀಕ್ಷೆ ಇಲ್ಲ. ದೇಶೀಯ ಸಕ್ಕರೆ ದರ ಗಣನೀಯವಾಗಿ ಕುಸಿದಿದೆ. ಕುಸಿತದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸಕ್ಕರೆ ಧಾರಣೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಕಾರ್ಖಾನೆಯಿಂದ ಹೊರಹೋಗುವ ಕನಿಷ್ಠ ದರವನ್ನು 29 ರುಪಾಯಿಗೆ ನಿಗದಿ ಮಾಡಿದೆ. ಈ ದರಕ್ಕಿಂತ ಕಡಮೆ ದರಕ್ಕೆ ಯಾವ ಕಾರ್ಖಾನೆಗಳೂ ಸಕ್ಕರೆ ಮಾರಾಟ ಮಾಡುವಂತಿಲ್ಲ. ಇಷ್ಟಾದರೂ ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಪೂರೈಕೆ ಬೇಡಿಕೆಗಿಂತ ಹೆಚ್ಚಿದೆ. ಸಕ್ಕರೆ ಉತ್ಪಾದಿಸುವ ಪ್ರಮುಖ ರಾಷ್ಟ್ರಗಳಾದ ಬ್ರೆಜಿಲ್, ಥಾಯ್ಲೆಂಡ್, ಆಸ್ಟ್ರೇಲಿಯಾ, ಗ್ವಾಟೆಮಾಲಾ, ಮೆಕ್ಸಿಕೊ, ಕ್ಯೂಬಾ, ಎಲ್‌ಸಾಲ್ವಡಾರ್, ಅರ್ಜೆಂಟೀನಾದಲ್ಲೂ ಉತ್ಪಾದನೆ ಹೆಚ್ಚಿದ್ದು, ಬೇಡಿಕೆ ಕಡಿಮೆ ಆಗಿದೆ. ಅಲ್ಲದೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಕ್ಕರೆ ದರವು ಶೇ.21ರಷ್ಟು ಕುಸಿದಿದೆ. ಹೀಗಾಗಿ, ದೇಶೀಯ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಸಕ್ಕರೆಯನ್ನು ರಫ್ತು ಮಾಡಬೇಕಾಗುತ್ತದೆ. ಇದರಿಂದ ಉತ್ಪಾದಕರಿಗೆ ನಷ್ಟ.

ಸಕ್ಕರೆ ಉತ್ಪಾದನೆ ಹೆಚ್ಚಿ ದರ ಕುಸಿದ ಕಾರಣ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಸಕಾಲದಲ್ಲಿ ಬಾಕಿ ಹಣ ಪಾವತಿ ಮಾಡಲಾಗಿಲ್ಲ. ಈ ಸಮಸ್ಯೆ ನಿವಾರಿಸಲು ಕಳೆದ ತಿಂಗಳು ಕೇಂದ್ರ ಸರ್ಕಾರ 8,500 ಕೋಟಿ ರುಪಾಯಿ ಪ್ಯಾಕೇಜ್ ಘೋಷಣೆ ಮಾಡಿದೆ. ಈ ಪೈಕಿ, 4,000 ಕೋಟಿ ರುಪಾಯಿಗಳನ್ನು ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸಲಾಗುತ್ತದೆ. ಉಳಿದ 4,500 ಕೋಟಿ ರುಪಾಯಿಗಳಲ್ಲಿ ಕೇಂದ್ರ ಸರ್ಕಾರ ಕಾರ್ಖಾನೆಗಳಿಂದ ಸಕ್ಕರೆ ಖರೀದಿಸುತ್ತದೆ. ಖರೀದಿಸಿದ ಸಕ್ಕರೆ ಹಣವನ್ನು ಕಾರ್ಖಾನೆಗಳಿಗೆ ಪಾವತಿ ಮಾಡದೆ, ನೇರವಾಗಿ ರೈತರಿಗೆ ಬಾಕಿ ಪಾವತಿ ಮಾಡಲಿದೆ.

ಇದನ್ನೂ ಓದಿ : ಸಕ್ಕರೆ ಉದ್ಯಮ ರಕ್ಷಿಸಲು ರಫ್ತು ಸುಂಕ ರದ್ದು ಮಾಡಲಿದೆಯೇ ಕೇಂದ್ರ ಸರ್ಕಾರ?

ಇಂಡಿಯನ್ ಷುಗರ್ಸ್ ಮಿಲ್ಸ್ ಅಸೋಸಿಯೇಷನ್ (ಐಎಸ್ಎಂಎ) ಸರ್ಕಾರದ ಕ್ರಮವನ್ನು ಸ್ವಾಗತಿಸಿದೆ. ಆದರೆ, ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಸುಮಾರು 23,000 ಕೋಟಿ ರುಪಾಯಿ ಬಾಕಿ ಪಾವತಿ ಆಗಬೇಕಿದೆ. ಆ ಲೆಕ್ಕಕ್ಕೆ ಹೋಲಿಸಿದರೆ ಕೇಂದ್ರ ಸರ್ಕಾರ ನೀಡಿರುವ ಮೊತ್ತವು ಶೇ.27ರಷ್ಟಾಗುತ್ತದೆ. ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ.

ಸಕ್ಕರೆ ಉತ್ಪಾದನೆ ಜಾಗತಿಕವಾಗಿ ಹೆಚ್ಚಳವಾದಾಗ ಭಾರತ ಎದುರಿಸುತ್ತಿರುವ ಸಮಸ್ಯೆಯನ್ನೇ ಇತರ ದೇಶಗಳೂ ಎದುರಿಸುತ್ತವೆ. ಆದರೆ, ಕೆಲವು ದೇಶಗಳು ಬೆಳೆಗಾರರರನ್ನು ಪ್ರೋತ್ಸಾಹಿಸಲು ಸಕ್ಕರೆಯನ್ನು ಪೂರ್ಣ ಪ್ರಮಾಣದಲ್ಲಿ ಖರೀದಿ ಮಾಡಿ ರೈತರಿಗೆ ನಷ್ಟವಾಗದಂತೆ ನೋಡಿಕೊಳ್ಳುತ್ತವೆ. ಸದ್ಯಕ್ಕೆ ಭಾರತದಲ್ಲಿ ಆ ವ್ಯವಸ್ಥೆ ಇನ್ನೂ ಜಾರಿಯಾಗಿಲ್ಲ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More