ವಿವಾದದ ಸುಳಿಗೆ ಸಿಲುಕಿದ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳ ತೆರೆಯುವ ವಿಚಾರ

ಆಂಗ್ಲ ಮಾಧ್ಯಮ ಶಾಲೆಗಳ ತೆರೆಯುದರ ಬಗೆಗಿನ ಕುಮಾರಸ್ವಾಮಿ ನಿರ್ಧಾರದ ಬಗ್ಗೆ ಹಲವು ಟೀಕೆಗಳು ವ್ಯಕ್ತವಾಗಿವೆ. ರೈತರ ಮಕ್ಕಳೇ ಹೆಚ್ಚಾಗಿ ಓದುತ್ತಿರುವ ಸರ್ಕಾರಿ ಕನ್ನಡ ಶಾಲೆಗಳನ್ನು ವಿಲೀನಗೊಳಿಸಲು ಹೊರಟಿರುವುದರ ವಿರುದ್ಧವೂ ಹಲವೆಡೆ ಪ್ರತಿಭಟನೆಗಳು ನಡೆದಿವೆ

ಆಂಗ್ಲ ಮಾಧ್ಯಮದಲ್ಲಿ ಶಾಲೆಗಳ ಪ್ರಾರಂಭ ಹಾಗೂ ಕಡಿಮೆ ಮಕ್ಕಳಿರುವ ಸರ್ಕಾರಿ ಶಾಲೆಗಳ ವಿಲೀನ ಕುರಿತಂತೆ ಸಿಎಂ ಕುಮಾರಸ್ವಾಮಿಯವರು ಬಜೆಟ್‌‌ನಲ್ಲಿ‌ ಮಂಡಿಸಿರುವುದರ ಬಗೆಗಿನ ಪರ-ವಿರೋಧ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಕುಮಾರಸ್ವಾಮಿಯವರು ಅಧಿಕಾರಿಗಳ ಮಾತು ಕೇಳಿ ಆಂಗ್ಲ ಮಾಧ್ಯಮದಲ್ಲಿ ಶಾಲೆಗಳನ್ನು ತೆರೆಯಲು ಮತ್ತು ಶಾಲೆಗಳ ವಿಲೀನಗೊಳಿಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲವೆಂದು ಕನ್ನಡ ಚಳುವಳಿಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

“ಪ್ರಾಥಮಿಕ ಶಿಕ್ಷಣದಲ್ಲಿ ಆಂಗ್ಲ ಭಾಷೆಗೆ ಸಂಬಂಧಿಸಿದ ವಿಷಯವೊಂದನ್ನು ಅಳವಡಿಸುವುದಕ್ಕೆ ತಮ್ಮ ತಕರಾರಿಲ್ಲ. ಆದರೆ, ಎಲ್ಲ ವಿಷಯಗಳನ್ನು ಆಂಗ್ಲ ಮಾಧ್ಯಮದ ಮೂಲಕ ಕಲಿಸುವುದಕ್ಕೆ ನಮ್ಮ ವಿರೋಧವಿದೆ. ಕಡಿಮೆ ಮಕ್ಕಳಿರುವ ಸರ್ಕಾರಿ ಶಾಲೆಗಳ ವಿಲೀನ ಪ್ರಕ್ರಿಯೆ ಖಂಡನೀಯ,” ಎಂದು ಶಿಕ್ಷಣ ತಜ್ಞರು ಪ್ರತಿಕ್ರಿಯೆ ನೀಡಿದ್ದರು. ಯಾವುದೇ ಕಾರಣಕ್ಕೂ ಪ್ರಾಥಮಿಕ ಶಿಕ್ಷಣದಲ್ಲಿ ಆಂಗ್ಲ ಮಾಧ್ಯಮವನ್ನು ಅಳವಡಿಸಬಾರದೆಂದು ಕುಮಾರಸ್ವಾಮಿಯರನ್ನು ನೇರ ಭೇಟಿ ಮಾಡಿ ಕನ್ನಡ ಪರ ಹೋರಾಟಗಾರರು ಹಾಗೂ ಶಿಕ್ಷಣ ತಜ್ಞರು ಒತ್ತಾಯಿಸಿದ್ದರು. ಅಷ್ಟೇ ಅಲ್ಲದೇ, ಸರ್ಕಾರಿ ಶಾಲೆಗಳ ವಿಲೀನ ಪ್ರಕ್ರಿಯೆಯಿಂದ ಸಾಮಾಜಿಕವಾಗಿ ಸಂಭವಿಸಬಹುದಾದ ನಷ್ಟವನ್ನೂ ಸಹ ಸಿಎಂ ಕುಮಾರಸ್ವಾಮಿಯವರಿಗೆ ಮನದಟ್ಟು ಮಾಡಿಕೊಡುವ ಪ್ರಯತ್ನ ಮಾಡಿದ್ದರು.

ಶಿಕ್ಷಣ ತಜ್ಞರ ಅನಿಸಿಕೆ ಹಾಗೂ ಅಭಿಪ್ರಾಯ ಆಲಿಸಿದ ಕುಮಾರಸ್ವಾಮಿ ಅವರು ಈ ಬಗ್ಗೆ ಪರಿಶೀಲಿಸಿ, ಚರ್ಚಿಸಿ ಮುಂದಿನ ಕಾರ್ಯಯೋಜನೆ ರೂಪಿಸುವುದಾಗಿ ತಿಳಿಸಿದ್ದರು. ಆದರೆ, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿರುವ ಶಿಕ್ಷಣ ತಜ್ಞರ ಹಾಗೂ ಕನ್ನಡ ಪರ ಚಳುವಳಿಗಾರರನ್ನು ಕಿರಣ್‌ ಮುಜಂದಾರ್‌ ಅವರಂತಹ ಉದ್ಯಮಿಗಳು ಲೇವಡಿ ಮಾಡುವ ಮೂಲಕ ಆಂಗ್ಲ ಮಾಧ್ಯಮದಲ್ಲಿ ಸರ್ಕಾರಿ ಶಾಲೆಗಳನ್ನು ಆರಂಭಿಸುವುದರ ಪರ ಇದ್ದೇವೆ ಎಂದು ಪರೋಕ್ಷವಾಗಿ ಹೇಳಿದ್ದರು. ಇದರ ಬಗೆಗಿನ ಪರ-ವಿರೋಧಗಳು ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಶಿಕ್ಷಣದ ಬಗ್ಗೆ ಕುಮಾರಸ್ವಾಮಿಯವರು ಬಜೆಟ್‌ನಲ್ಲಿ ಮಂಡಿಸಿದ್ದೇನು ಎಂಬುದನ್ನು ತಿಳಿಯಬೇಕಿದೆ.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಬಜೆಟ್‌ ಮಂಡಿಸಿದ ಕುಮಾರಸ್ವಾಮಿಯವರು ಪ್ರಾಥಮಿಕ ಶಿಕ್ಷಣದಲ್ಲಿ ಹಲವು ಬದಲಾವಣೆಗಳನ್ನು ತರುವುದಾಗಿ ಘೋಷಿಸಿದ್ದರು. “ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಹಾಲಿ ಇರುವ ಕನ್ನಡ ಮಾಧ್ಯಮ ತರಗತಿಗಳ ಜೊತೆಗೆ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಲಾಗುವುದು. ಇದರಿಂದ, ಹೆಚ್ಚು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಆಕರ್ಷಿಸಬಹುದಾಗಿದೆ. ಆರಂಭಿಕವಾಗಿ 1000 ಶಾಲೆಗಳಲ್ಲಿ ಇಂತಹ ಪ್ರಯೋಗ ನಡೆಸಲಾಗುವುದು,” ಎಂದು ಹೇಳಿದ್ದರು.

ತಮ್ಮ ನೂತನ ಬಜೆಟ್‌ ಮಂಡಿಸುವ ವೇಳೆ ಸರ್ಕಾರಿ ಶಾಲೆಗಳ ವಿಲೀನದ ಮಾತನಾಡಿದ ಕುಮಾರಸ್ವಾಮಿ ಅವರು, “ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಮತ್ತು ದಾಖಲಾತಿ ಕಡಿಮೆ ಇರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳನ್ನು ಹತ್ತಿರದ ಶಾಲೆಯೊಂದಿಗೆ ವಿಲೀನಗೊಳಿಸಲಾಗುವುದು. ಒಂದು ಕಿಮೀ ವ್ಯಾಪ್ತಿಯಲ್ಲಿ ಕಡಿಮೆ ದಾಖಲಾತಿ ಹೊಂದಿರುವ 28847 ಸರ್ಕಾರಿ ಮತ್ತು ಅನುದಾನಿತ ಶಾಲೆಗಳನ್ನು ಗುರುತಿಸಲಾಗಿದ್ದು, ಈ ಶಾಲೆಗಳನ್ನು ಹತ್ತಿರದ 8530 ಸರ್ಕಾರಿ ಶಾಲೆಗಳೊಂದಿಗೆ ವಿಲೀನಗೊಳಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುವುದು,” ಎಂದಿದ್ದರು. ಮುಂದುವರೆದ ಅವರು, “ಪ್ರಸ್ತುತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ಆಯ್ದ 4100 ಸರ್ಕಾರಿ ಪ್ರಾಥಮಿಕ ಶಾಲೆಗಳ ಆವರಣಕ್ಕೆ ಸ್ಥಳಾಂತರಿಸಿ ‘ಬಾಲಸ್ನೇಹಿ ಕೇಂದ್ರ’ ಗಳನ್ನಾಗಿ ಬಲವರ್ಧಿಸಲಾಗುವುದು. ಹಂತಹಂತವಾಗಿ ಕಾರ್ಯಸಾಧ್ಯಯತೆಯನುಸಾರ ಬೇರೆ ಸರ್ಕಾರಿ ಶಾಲೆಗಳಲ್ಲಿ ಸಹ LKG/UKG ತರಗತಿಗಳನ್ನು ಪ್ರಾರಂಭಿಸಲಾಗುವುದು. ಇದರಿಂದ ಸರ್ಕಾರಿ ಶಾಲೆಗಳಲ್ಲಿನ ದಾಖಲಾತಿ ಪ್ರಮಾಣವು ಹೆಚ್ಚಾಗುವುದರೊಂದಿಗೆ ಮಕ್ಕಳ ಕಲಿಕೆಯ ಗುಣಮಟ್ಟವನ್ನು ವೃದ್ಧಿಸಬಹುದಾಗಿದೆ,” ಎಂದು ತಾವು ಮಂಡಿಸಿದ ಬಜೆಟ್‌ನಲ್ಲಿ ಘೋಷಿಸಿದ್ದರು.

ಆಂಗ್ಲ ಮಾಧ್ಯಮದಲ್ಲಿ ಸರ್ಕಾರಿ ಶಾಲೆಗಳನ್ನು ತೆರೆಯುವುದಾಗಿ ಕುಮಾರಸ್ವಾಮಿಯವರು ಬಜೆಟ್‌ ಮಂಡಿಸಿರುವ ಹಿನ್ನೆಲೆಯಲ್ಲಿ ‘ದಿ ಸ್ಟೇಟ್‌’ಗೆ ಪ್ರತಿಕ್ರಿಯಿಸಿರುವ ಶಿಕ್ಷಣ ತಜ್ಞ ನಿರಂಜನ್‌ ಆರಾಧ್ಯ ಅವರು, “ಆಂಗ್ಲ ಭಾಷೆಯನ್ನು ಒಂದು ವಿಷಯವಾಗಿ ಕಲಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಕೊಡುವುದನ್ನು ನಾವು ವಿರೋಧಿಸುತ್ತೇವೆ. ಆಂಗ್ಲ ಭಾಷೆಯಲ್ಲಿ ಪ್ರಭುತ್ವ ಹೊಂದಿದ ಶಿಕ್ಷಕರು ನಮ್ಮಲ್ಲಿ ಇಲ್ಲ. ಯಾವುದೇ ಎರಡನೇ ಭಾಷೆಯ ಮೇಲೆ ಪ್ರಭುತ್ವ ಹೊಂದಬೇಕಾದರೆ, ಮೊದಲು ಮಾತೃಭಾಷೆಯನ್ನು ಚೆನ್ನಾಗಿ ಅರಿತಿರಬೇಕೆಂದು ಸಂಶೋಧನೆ ಹೇಳುತ್ತದೆ. ಕನ್ನಡದ ಜೊತೆಜೊತೆಗೆ ಆಂಗ್ಲ ಭಾಷೆಯನ್ನು ಕಲಿಸಬೇಕು. ಈ ಮೂಲಕ ಮಕ್ಕಳು ಎರಡೂ ಭಾಷೆಯಲ್ಲಿ ಪ್ರಭುತ್ವ ಹೊಂದಬೇಕು. ಒಂದು ವಿಷಯವನ್ನೇ ಆಂಗ್ಲ ಮಾಧ್ಯಮದಲ್ಲಿ ಕಲಿಸಲು ಸರ್ಕಾರಿ ಶಿಕ್ಷಕರಿಗೆ ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಯಾವುದೇ ಸಿದ್ಧತೆ ಇಲ್ಲದೇ ಎಲ್ಲ ವಿಷಯಗಳನ್ನೂ ಆಂಗ್ಲ ಮಾಧ್ಯಮದಲ್ಲಿ ಕಲಿಸುತ್ತೇನೆಂದು ಹೊರಡುವುದು ಮೂರ್ಖತನ,” ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆ ಇರುವ ಶಾಲೆಗಳ ವಿಲೀನ ಪ್ರಕ್ರಿಯೆ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿರುವ ನಿರಂಜನ್ ಆರಾಧ್ಯ ಅವರು, “ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು. ಸರ್ಕಾರಿ ಶಾಲೆಗಳ ವಿಲೀನದಿಂದ (ಮುಚ್ಚುವುದು) ಮಕ್ಕಳ ಮೂಲಭೂತ ಹಕ್ಕನ್ನು ಕಿತ್ತುಕೊಂಡಂತಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಕೊಡುವ ನಿಟ್ಟಿನಿಲ್ಲಿ ಕೆಲಸ ನಡೆಯಬೇಕು. ಅಂದಾಗ ಮಾತ್ರ ಸರ್ಕಾರಿ ಶಾಲೆಗಳಿಗೆ ಮಕ್ಕಳು ಹೆಚ್ಚು ಆಕರ್ಷಿತರಾಗುತ್ತಾರೆ. ಶಾಲೆಗಳ ವಿಲೀನ ಕ್ರಮ ಸಂವಿಧಾನಕ್ಕೆ ಬಗೆಯುವ ದೊಡ್ಡ ಅಪಚಾರ. ತಾವು ಕನ್ನಡ ಪರವೆಂದು ಕುಮಾರಸ್ವಾಮಿ ಹೇಳುತ್ತಾರೆ. ಯಾವುದೇ ಸಿದ್ದತೆ ಇಲ್ಲದೇ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುದಾಗಿ ಘೋಷಿಸುತ್ತಾರೆ. ಇದು ಕನ್ನಡಪರ ನಿಲುವಲ್ಲ,” ಎಂದು ಪ್ರತಿಕ್ರಿಯಿಸಿದರು.

ಕಡಿಮೆ ಮಕ್ಕಳಿರುವ ಸರ್ಕಾರಿ ಶಾಲೆಗಳ ವಿಲೀನದ ಬಗ್ಗೆ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಎನ್‌ ಮಹೇಶ್‌ ಅವರು‌ ಸಿಎಂ ಕುಮಾರಸ್ವಾಮಿ ಅವರ ಘೋಷಣೆಗಳಿಗೆ ತದ್ವಿರುದ್ದವಾಗಿ ಹೇಳಿಕೆ ನೀಡಿದ್ದಾರೆ. “ಕಡಿಮೆ ಮಕ್ಕಳಿರುವ ಯಾವುದೇ ಶಾಲೆಗಳ ವಿಲೀನ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಮುಂದಾಗುವುದಿಲ್ಲ,” ಎಂದಿದ್ದಾರೆ.

ಇದನ್ನೂ ಓದಿ : ನಿರಂಜನ ಆರಾಧ್ಯ ಮನದ ಮಾತು | ಆಂಗ್ಲ ಮಾಧ್ಯಮ ಶಾಲೆಗಳ ಆರಂಭ ಅವೈಜ್ಞಾನಿಕ

ಶಾಲೆ ವಿಲೀನದ ಬಗ್ಗೆ ಈ ಹಿಂದೆ ‘ದಿ ಸ್ಟೇಟ್‌’ಗೆ ಪ್ರತಿಕ್ರಿಯಿಸಿದ್ದ ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಅವರು, “ಶಾಲೆಗಳ ವಿಲೀನಗೊಳಿಸುವುದರ ಬದಲು ಅವುಗಳ ಸುಧಾರಣೆ ಹೇಗೆ ಮಾಡಬೇಕೆಂಬುದನ್ನು ಯೋಚಿಸಬೇಕಿದೆ. ನಮ್ಮ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಶಿಕ್ಷಕರಿಗೆ ತರಬೇತಿ ಕೊಡಬೇಕಿದೆ. ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಹದಗೆಡಿಸುವಲ್ಲಿ ಅಧಿಕಾರಿಗಳ ಪಾತ್ರ ದೊಡ್ಡದು. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಹೀಗಾಗಿ, ಶಿಕ್ಷಕರ ವೃತ್ತಿಪರತೆಯ ಮೇಲೆ ನಿಗಾವಹಿಸುವ ನಿಟ್ಟಿನಲ್ಲಿ ಸರ್ಕಾರ ಯೋಚಿಸಲಿ,” ಎಂದು ಹೇಳಿದ್ದರು.

ರೈತರ ಮಕ್ಕಳೇ ಹೆಚ್ಚು ಓದುತ್ತಿರುವ ಸರ್ಕಾರಿ ಕನ್ನಡ ಶಾಲೆಗಳನ್ನು ವಿಲೀನಗೊಳಿಸಲು ಹೊರಟಿರುವ ಸಿಎಂ ಕುಮಾರಸ್ವಾಮಿ ನಿರ್ಧಾರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವು ಟೀಕೆಗಳು ವ್ಯಕ್ತವಾಗಿವೆ. ಸರ್ಕಾರಿ ಶಾಲೆ ವಿಲೀನ ಹಾಗೂ ಆಂಗ್ಲ ಮಾಧ್ಯಮ ಶಾಲೆಗಳ ಪ್ರಾರಂಭದ ಬಗೆಗಿನ ಕುಮಾರಸ್ವಾಮಿ ನಿರ್ಧಾರದ ವಿರುದ್ಧ ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆದಿವೆ. “ಒಬ್ಬರೇ ಶಿಕ್ಷಕರಿರುವ ಹಾಗೂ ಕಡಿಮೆ ಮಕ್ಕಳಿರುವ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವುದರಿಂದ ಮಕ್ಕಳಿಗೆ ತೊಂದರೆಯಾಗುತ್ತದೆ. ಪ್ರಾಥಮಿಕ ಶಿಕ್ಷಣ ಹೊಂದಲು ತಮ್ಮ ಮಕ್ಕಳು ದೂರದ ಊರಿಗೆ ಪ್ರಯಾಣ ಮಾಡಬೇಕಾಗುತ್ತದೆ. ಇದರಿಂದ ತಮ್ಮ ಮಕ್ಕಳು ಮೂಲಭೂತ ಹಕ್ಕನ್ನು ಕಸಿದುಕೊಂಡಂತಾಗುತ್ತದೆ,” ಎಂಬುದು ಗ್ರಾಮೀಣ ಭಾಗದ ಪೋಷಕರ ಅಭಿಪ್ರಾಯವಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More