ಟ್ವಿಟರ್ ಸ್ಟೇಟ್ | ಐಎಎಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಲ್ಲಿ ತಾರತಮ್ಯ

ಐಎಎಸ್ ಅಧಿಕಾರಿ ಶಾ ಫೇಸಲ್ ಮಾಡಿರುವ ಟ್ವೀಟ್‌ಗೆ ಆಕ್ಷೇಪಣೆ ವ್ಯಕ್ತಪಡಿಸಿ ಕೇಂದ್ರ ಸರ್ಕಾರ ನೊಟೀಸ್ ಕಳುಹಿಸಿರುವುದು ಈಗ ಟ್ವಿಟರ್ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಪರವಾಗಿ ಟ್ವಿಟರ್‌ನಲ್ಲಿ ನಿಯಮ ಉಲ್ಲಂಘಿಸುವ ಅಧಿಕಾರಿಗಳ ಮೇಲೆ ಸರ್ಕಾರದ ಮೌನವನ್ನು ಟ್ವೀಟಿಗರು ಪ್ರಶ್ನಿಸಿದ್ದಾರೆ

ಜಮ್ಮು ಮತ್ತು ಕಾಶ್ಮೀರದ ಐಎಎಸ್ ಅಧಿಕಾರಿ ಶಾ ಫೇಸಲ್ ಅವರು ಟ್ವಿಟರ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬಗ್ಗೆ ಕೇಂದ್ರ ಸರ್ಕಾರ ನೀಡಿರುವ ಎಚ್ಚರಿಕೆ ಈಗ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಕೇಂದ್ರ ಸರ್ಕಾರವು ತಮಗೆ ನೀಡಿದ ಎಚ್ಚರಿಕೆಯ ಪತ್ರವನ್ನು ಶಾ ಫೇಸಲ್ ಅವರು ಟ್ವಿಟರ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಶಾ ಫೇಸಲ್ ಅವರು ಬರೆದ ಟ್ವಿಟರ್ ಬರಹವೊಂದು ಸರ್ಕಾರದ ಸೇವಾ ನಿಯಮವನ್ನು ಉಲ್ಲಂಘಿಸಿದೆ ಎಂದು ಕೇಂದ್ರ ಸರ್ಕಾರ ತನ್ನ ಪತ್ರದಲ್ಲಿ ಹೇಳಿದೆ.

ಈವರೆಗೆ ಕೇಂದ್ರ ನಾಗರಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್‌ ಪಡೆದ ಏಕೈಕ ಕಾಶ್ಮೀರಿ ಫೇಸಲ್. “ದಕ್ಷಿಣ ಏಷ್ಯಾದಲ್ಲಿ ಅತ್ಯಾಚಾರದ ಸಂಸ್ಕೃತಿ ಕುರಿತಂತೆ ನಾನು ಹಾಕಿದ ವ್ಯಂಗ್ಯದ ಟ್ವೀಟ್‌ಗೆ ಬಾಸ್ ನನಗೆ ಪ್ರೇಮ ಪತ್ರ ಬರೆದಿದ್ದಾರೆ. ಇಲ್ಲಿನ ವ್ಯಂಗ್ಯವೆಂದರೆ ವಸಾಹತುಶಾಹಿ ಸ್ಫೂರ್ತಿಯಲ್ಲಿ ಸೇವಾ ನಿಯಮಗಳ ನೆಪದಲ್ಲಿ ಪ್ರಜಾಸತ್ತಾತ್ಮಕ ಭಾರತದಲ್ಲಿ ಸಾಕ್ಷಿಪ್ರಜ್ಞೆಯ ಸ್ವಾತಂತ್ರ್ಯವನ್ನು ಕಸಿಯಲಾಗಿದೆ. ಈ ನಿಯಮದಲ್ಲಿ ಬದಲಾವಣೆ ಬರಬೇಕೆಂದು ಪತ್ರವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ” ಎಂದು ಶಾ ಫೇಸಲ್ ಮಂಗಳವಾರ ಟ್ವೀಟ್ ಮಾಡಿದ್ದರು.

ಸರ್ಕಾರ ಅಸಮಾಧಾನ ವ್ಯಕ್ತಪಡಿಸಿರುವ ಟ್ವೀಟ್ ಒಂದರಲ್ಲಿ ಫೇಸಲ್ ಅವರು ‘ದಕ್ಷಿಣ ಏಷ್ಯಾದ ಅತ್ಯಾಚಾರ ಸಂಸ್ಕೃತಿ’ಯನ್ನು ವರ್ಣಿಸಲು ‘ರೇಪಿಸ್ತಾನ್’ ಎನ್ನುವ ಶಬ್ದವನ್ನು ಬಳಸಿದ್ದಾರೆ. “ಪಿತೃಪ್ರಧಾನ + ಜನಸಂಖ್ಯೆ + ಅನಕ್ಷರತೆ + ಆಲ್ಕೋಹಾಲ್ + ಲೈಂಗಿಕತೆ + ತಂತ್ರಜ್ಞಾನ + ಅರಾಜಕತೆ = ರೇಪಿಸ್ತಾನ್!” ಎಂದು ಫೇಸಲ್ ಟ್ವೀಟ್ ಮಾಡಿದ್ದರು. ಇದು ವ್ಯಂಗ್ಯವಾಗಿ ಮಾಡಿದ ಟ್ವೀಟ್ ಎನ್ನುವುದು ಫೇಸಲ್ ಅಭಿಪ್ರಾಯ. ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಫೇಸಲ್ ಮೇಲೆ ಕ್ರಮ ಕೈಗೊಳ್ಳುವಂತೆ ಶ್ರೀನಗರದ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ. “ಫೇಸಲ್ ಅವರು ಪ್ರಾಮಾಣಿಕವಾಗಿ ಮತ್ತು ಬದ್ಧತೆಯಿಂದ ತಮ್ಮ ಅಧಿಕೃತ ಕರ್ತವ್ಯವನ್ನು ಮಾಡಿಲ್ಲ” ಎನ್ನುವ ಕಾರಣ ನೀಡಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಫೇಸಲ್ ನಂತರ ನೀಡಿದ ಪ್ರತಿಕ್ರಿಯೆಯಲ್ಲಿ ಕೇಂದ್ರ ಸರ್ಕಾರದ ಸಿಬ್ಬಂದಿ ಇಲಾಖೆಯ ಕ್ರಮವನ್ನು ‘ಆಡಳಿತಶಾಹಿಯ ಅತಿಯಾದ ಉತ್ಸಾಹದ ಕ್ರಮ. ಇದರಿಂದ ಯಾವುದೇ ಪರಿಣಾಮವಾಗುವುದಿಲ್ಲ’ ಎಂದು ಹೇಳಿದ್ದಾರೆ. “ಅತ್ಯಾಚಾರ ಎನ್ನುವುದು ಸರ್ಕಾರದ ನೀತಿಯಲ್ಲ. ಹೀಗಾಗಿ ಅತ್ಯಾಚಾರವನ್ನು ಟೀಕಿಸುವುದು ಸರ್ಕಾರದ ನೀತಿಯನ್ನು ವಿರೋಧಿಸಿದಂತಾಗುವುದಿಲ್ಲ ಮತ್ತು ಯಾವುದೇ ಕ್ರಮ ಕೈಗೊಳ್ಳುವ ಅಗತ್ಯವಿರುವುದಿಲ್ಲ” ಎಂದು ಫೇಸಲ್ ಅಭಿಪ್ರಾಯಪಟ್ಟಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು ಈ ಪ್ರಕರಣದಲ್ಲಿ ಫೇಸಲ್‌ರನ್ನು ಸಮರ್ಥಿಸಿಕೊಂಡಿದ್ದಾರೆ. “ಮೇಲೆ ಕುಳಿತು ಕಡತಗಳನ್ನು ದೂಡುವವರು ನಾವು ಇಂದು ನೆಲೆಸಿರುವ ತಲೆಮಾರಿನ ಸ್ಫೂರ್ತಿಯನ್ನು ಅರ್ಥಮಾಡಿಕೊಳ್ಳಲು ವಿಫಲವಾಗಿ ಇಂತಹ ನೊಟೀಸ್‌ಗಳನ್ನು ಕಳುಹಿಸುತ್ತಾರೆ. ಒಂದು ವ್ಯಂಗ್ಯದ ಟ್ವೀಟ್ ಅಪ್ರಾಮಾಣಿಕತೆ ಆಗುವುದು ಹೇಗೆ? ಆತ ಹೇಗೆ ಭ್ರಷ್ಟನಾಗುತ್ತಾನೆ?” ಎಂದು ಓಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.

ಫೇಸಲ್ ವಿಚಾರದಲ್ಲಿ ಮಾತನಾಡುತ್ತಾ ಓಮರ್ ಅಬ್ದುಲ್ಲಾ ಅವರು ಟ್ವಿಟರ್‌ನಲ್ಲಿ ಬಿಜೆಪಿ ಪರವಾಗಿ ಟ್ವೀಟ್‌ಗಳನ್ನು ಹಾಕುವ ಇತರ ರಾಜ್ಯಗಳ ಐಎಎಸ್ ಅಧಿಕಾರಿಗಳು ತಮ್ಮ ಪರಿಮಿತಿಯನ್ನು ಮೀರಿ ನಡೆದುಕೊಳ್ಳುವ ಬಗ್ಗೆ ಪ್ರಶ್ನಿಸಿದ್ದಾರೆ. ಇದು ನಿಜವೂ ಹೌದು. ಬಿಜೆಪಿ ಮತ್ತು ಪ್ರಧಾನಿ ಮೋದಿ ಪರವಾಗಿ ಟ್ವೀಟ್ ಮಾಡುವ ಹಲವು ಐಎಎಸ್ ಅಧಿಕಾರಿಗಳು ‘ತಟಸ್ಥ’ದ ಪರಿಧಿಯನ್ನು ಮೀರಿ ಬರಹಗಳನ್ನು ಹಾಕಿರುವ ಬಹಳಷ್ಟು ಉದಾಹರಣೆಗಳಿವೆ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ಮೋದಿ ಕುರಿತ ಟೀಕೆ ಹತ್ತಿಕ್ಕಲು ಪ್ರಯತ್ನಿಸುವ ಮಾಧ್ಯಮಗಳ ವಿರುದ್ಧ ಕಿಡಿ

ಆದರೆ ಇಂತಹ ಸಂದರ್ಭದಲ್ಲಿ ನಿಯಮಗಳು ಏನು ಹೇಳುತ್ತವೆ? ಅಖಿಲ ಭಾರತ ಸೇವಾ ನಿಯಮಗಳು ಹೇಳುವ ಪ್ರಕಾರ, “ಸಿಬ್ಬಂದಿಗಳು ಸಾರ್ವಜನಿಕ ವೇದಿಕೆಯಲ್ಲಿ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಮುಂದಿಡಬೇಕೇ ವಿನಾ ಸರ್ಕಾರದ ಅಭಿಪ್ರಾಯವನ್ನಲ್ಲ. ಹಾಗೆಯೇ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಅಭಿಪ್ರಾಯ ನೀಡಬೇಕು. ಸೇವೆಯಲ್ಲಿರುವ ಯಾವುದೇ ವ್ಯಕ್ತಿಯೂ ಸಾರ್ವಜನಿಕ ಮಾಧ್ಯಮಗಳಲ್ಲಿ ಅನಾಮದೇಯವಾಗಿ, ನಕಲಿ ಹೆಸರಿನಲ್ಲಿ ಅಥವಾ ತನ್ನದೇ ಹೆಸರಿನಲ್ಲಿ ಅಥವಾ ಮತ್ತೊಬ್ಬ ವ್ಯಕ್ತಿಯ ಹೆಸರಿನಲ್ಲಿ ಸಂವಹನ ಮಾಡುವಂತಿಲ್ಲ. ಯಾವುದೇ ಅಭಿಪ್ರಾಯ ಪ್ರಕಟಿಸುವಾಗ ಕೇಂದ್ರ ಮತ್ತು ರಾಜ್ಯ ಸರ್ಕಾರದ ಇತ್ತೀಚೆಗಿನ ನೀತಿಗಳು ಅಥವಾ ಕ್ರಮವನ್ನು ವಿರೋಧಿಸಿ ಟೀಕೆ ಮಾಡಬಾರದು. ಹಾಗೆಯೇ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಂಬಂಧ ಹಾಳಾಗುವಂತಹ ಟೀಕೆಗಳನ್ನು ಮಾಡಬಾರದು. ಕೇಂದ್ರ ಸರ್ಕಾರ ಮತ್ತು ಮತ್ತೊಂದು ದೇಶದ ನಡುವಿನ ಸಂಬಂಧ ಹಾಳಾಗುವಂತಹ ಟೀಕೆಗಳನ್ನೂ ಮಾಡಬಾರದು.” ಈ ನಿಯಮಗಳನ್ನು ಹೊರತುಪಡಿಸಿ ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸುವ ವಿಚಾರದಲ್ಲಿ ಇನ್ಯಾವುದೇ ಸೇವಾ ನಿಯಮಗಳೂ ಅಸ್ತಿತ್ವದಲ್ಲಿಲ್ಲ.

ಈ ಹಿನ್ನೆಲೆಯಲ್ಲಿ ಗಮನಿಸಿದಲ್ಲಿ ಶಾ ಫೇಸಲ್ ಅವರ ಟ್ವೀಟ್ ಸರ್ಕಾರದ ಯಾವುದೇ ನೀತಿ ಅಥವಾ ಯೋಜನೆಗಳನ್ನು ಟೀಕಿಸಿಲ್ಲ. ‘ರೇಪಿಸ್ತಾನ್’ ಎನ್ನುವ ಶಬ್ದವನ್ನು ಅವರು ದಕ್ಷಿಣ ಏಷ್ಯಾ ಪ್ರಾಂತದ ವಿಚಾರವಾಗಿ ಹೇಳಿದ್ದಾರೆಯೇ ವಿನಾ, ಭಾರತವನ್ನು ‘ರೇಪಿಸ್ತಾನ್’ ಎಂದು ಉಲ್ಲೇಖಿಸಿಲ್ಲ ಎನ್ನುವುದು ಶಾ ಅವರು ಸಮಜಾಯಿಷಿ ಕೊಟ್ಟಿದ್ದಾರೆ.

ವಾಸ್ತವದಲ್ಲಿ ಟ್ವಿಟರ್‌ನಲ್ಲಿ ಸೇವಾ ನಿಯಮಗಳನ್ನು ಉಲ್ಲಂಘಿಸುವ ಹಲವು ಟ್ವೀಟಿಗರಿದ್ದಾರೆ. ಕರ್ನಾಟಕದ ಐಎಎಸ್ ಅಧಿಕಾರಿ ಎಂದು ಟ್ವಿಟರ್ ಪ್ರೊಫೈಲ್‌ನಲ್ಲಿ ಹೇಳಿಕೊಂಡಿರುವ ಶ್ರೀವತ್ಸ ಕೃಷ್ಣ ದೆಹಲಿ ಸರ್ಕಾರ ಮತ್ತು ಸರ್ಕಾರದ ನೀತಿಗಳ ಬಗ್ಗೆ ಸಾಕಷ್ಟು ಟೀಕೆಗಳನ್ನು ಹಾಕಿದ್ದಾರೆ. ದೆಹಲಿ ಸರ್ಕಾರ ಮತ್ತು ಐಎಎಸ್ ಅಧಿಕಾರಿಗಳ ನಡುವೆ ಸಂಘರ್ಷವೇರ್ಪಟ್ಟ ಸಂದರ್ಭದಲ್ಲಿ ಅವರು ಟ್ವಿಟರ್‌ನಲ್ಲಿ ಸಕ್ರಿಯವಾಗಿ ರಾಜ್ಯ ಸರ್ಕಾರವನ್ನು ಟೀಕಿಸಿದ್ದರು.

ಶ್ರೀವತ್ಸ ಕೃಷ್ಣ ಅವರ ಟ್ವಿಟರ್ ಖಾತೆಯ ಉದ್ದಕ್ಕೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಆಪ್ ಪಕ್ಷದ ವಿರುದ್ಧ ನಕಾರಾತ್ಮಕ ಸುದ್ದಿಗಳು ಮತ್ತು ಬೈಗುಳಗಳೇ ಕಾಣಿಸುತ್ತವೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಟೀಕಿಸಿದ ಟ್ವೀಟ್‌ಗಳನ್ನೂ ಶ್ರೀವತ್ಸ ಕೃಷ್ಣ ಅವರು ಹಾಕಿದ್ದರು. ಆದರೆ ಶ್ರೀವತ್ಸ ಬಿಜೆಪಿ ಮತ್ತು ಪ್ರಧಾನಿ ಮೋದಿಯವರನ್ನು ಬಹಳ ಹೊಗಳುತ್ತಾರೆ. ಹೀಗಾಗಿ ಅವರು ಟ್ವಿಟರ್‌ನಲ್ಲಿ ಸಕ್ರಿಯವಾಗಿ ಪ್ರಸ್ತುತ ದೇಶದ ಬೆಳವಣಿಗೆಗಳ ಬಗ್ಗೆ ವಿಶ್ಲೇಷಣೆ ಮಾಡುವುದು ತಪ್ಪಾಗುವುದಿಲ್ಲ. ಏಕೆಂದರೆ ಶ್ರೀವತ್ಸ ಅವರ ವಿಶ್ಲೇಷಣೆಗಳೆಲ್ಲವೂ ಕೇಂದ್ರ ಸರ್ಕಾರದ ಪರವಾಗಿಯೇ ಇರುತ್ತವೆ. ಹೀಗಾಗಿ ಕೇಂದ್ರ ಸರ್ಕಾರ ಅವರ ಮೇಲೆ ಕ್ರಮಕೈಗೊಳ್ಳದೆ ಇರುವುದು ಸಹಜವೇ ಆಗಿದೆ. ಶ್ರೀವತ್ಸ ಕೃಷ್ಣ ಅವರ ಟ್ವಿಟರ್ ಖಾತೆಯಲ್ಲಿ ಸಿಕ್ಕ ಕೆಲವು ಟ್ವೀಟ್‌ಗಳು ಈ ಕೆಳಗಿನಂತಿವೆ:

ಫೇಸಲ್ ಪ್ರಕರಣದ ಬಗ್ಗೆ ಟ್ವಿಟರ್ನಲ್ಲಿ ಚರ್ಚೆಯಾಗುತ್ತಿದ್ದಾಗ ಪ್ರೊಫೆಸರ್ ಅಶೋಕ್ ಸ್ವೇನ್ ಅವರು ಟ್ವಿಟರ್ನಲ್ಲಿ ಸಕ್ರಿಯವಾಗಿರುವ ರಾಜಸ್ಥಾನದ ಐಎಎಸ್ ಅಧಿಕಾರಿ ಸಂಜಯ್ ದೀಕ್ಷಿತ್ ಬಗ್ಗೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. “ಮೋದಿ ಸರ್ಕಾರ ಕಾಶ್ಮೀರದ ಅಧಿಕಾರಿಯ ಮೇಲೆ ಸೇಡಿನ ಕ್ರಮ ಕೈಗೊಂಡಿದೆ. ಹಿರಿಯ ಅಧಿಕಾರಿಗಳಾದ ಸಂಜಯ್ ದೀಕ್ಷಿತ್ ಅವರು ಟ್ವಿಟರ್‌ನಲ್ಲಿ ನಿತ್ಯವೂ ಬೈಗುಳದ ಟ್ವೀಟ್‌ಗಳನ್ನು ಮಾಡುತ್ತಿರುವಾಗ ಕೇಂದ್ರ ಸರ್ಕಾರ ಕಾಶ್ಮೀರಿ ಅಧಿಕಾರಿಯನ್ನು ಗುರಿ ಮಾಡಿರುವುದು ಅರ್ಥವಾಗುತ್ತಿಲ್ಲ” ಎಂದು ಅಶೋಕ್ ಸ್ವೇನ್ ಟ್ವೀಟ್ ಮಾಡಿದ್ದಾರೆ. ಸಂಜಯ್ ದೀಕ್ಷಿತ್ ಅವರು ತಾವು ಟ್ವಿಟರ್ನಲ್ಲಿ ಸಕ್ರಿಯವಾಗಿದ್ದರೂ ಸರ್ಕಾರ ವಿರೋಧಿ ಟ್ವೀಟ್ಗಳನ್ನು ಮಾಡುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. “ಗೌರವಯುತವಾಗಿ ವ್ಯಕ್ತಿಗತ ಅಭಿಪ್ರಾಯ ಪ್ರಕಟಿಸುವ ಅಧಿಕಾರ ನನಗಿದೆ” ಎಂದು ಸಂಜಯ್ ದೀಕ್ಷಿತ್ ಹೇಳಿದ್ದಾರೆ. ಅವರು ಮಾಧ್ಯಮಗಳಿಗೆ ಲೇಖನಗಳನ್ನು ಬರೆದು ಕಾಶ್ಮೀರಿ ಅಧಿಕಾರಿ ಮೇಲೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಅವರ ಟ್ವಿಟರ್ ಖಾತೆಯನ್ನು ಪರಿಶೀಲಿಸಿದಲ್ಲಿ ಬಹಳಷ್ಟು ಮುಸ್ಲಿಂ ವಿರೋಧಿ ಟ್ವೀಟ್‌ಗಳು ಸಿಗುತ್ತವೆ. ಕರ್ನಾಟಕ ಸರ್ಕಾರ ಗೌರಿ ಲಂಕೇಶ್ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ಮಾಡಿರುವುದನ್ನು ಅವರು ವಿರೋಧಿಸಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧವೂ ಅವರ ಟ್ವಿಟರ್ ಖಾತೆಯಲ್ಲಿ ಸಾಕಷ್ಟು ಟೀಕೆಗಳನ್ನು ನೋಡಬಹುದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More