ಬಿಜೆಪಿ ಹಿರಿಯ ನಾಯಕ ಜೋಷಿಯವರು ಹೇಳುತ್ತಿರುವ ‘ರಾಜಧರ್ಮ’ದ ಕಿವಿಮಾತು

ಬಿಜೆಪಿಯ ಮಾರ್ಗದರ್ಶಕ್ ಮಂಡಳಿಯ ಹಿರಿಯ ಮುರಳಿ ಮನೋಹರ ಜೋಷಿ ಅವರ ಲೇಖನ, ಸದ್ಯದ ಮೋದಿ ಸರ್ಕಾರದ ಆಡಳಿತ ತಪ್ಪುತ್ತಿರುವುದು ಎಲ್ಲಿ ಎಂಬ ಬಗ್ಗೆ ಬೆಳಕು ಚೆಲ್ಲಿದೆ ಎಂಬುದು ಸ್ವತಃ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಲ್ಲೇ ಈಗ ಚರ್ಚೆಯ ವಸ್ತುವಾಗಿದೆ. ಆ ಕುರಿತ ‘ದ ವೈರ್’ ವರದಿಯ ಆಯ್ಧಭಾಗ ಇಲ್ಲಿದೆ

“ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ರಾಷ್ಟ್ರಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಕುರಿತು ದೇಶದ ಜನ ನಡೆಸುವ ಪ್ರಾಮಾಣಿಕ ಸಾರ್ವಜನಿಕ ಚರ್ಚೆಯಲ್ಲಿ ಭಾಗವಹಿಸುವುದು ಒಬ್ಬ ರಾಜನ ಉತ್ತಮ ಪ್ರಭುತ್ವದ ಬುನಾದಿ.”

ಇದು, ಇತ್ತೀಚೆಗೆ ರಾಜಧಾನಿಯ ರಾಜಕಾರಣ ಮತ್ತು ಸಂಘಪರಿವಾರದ ಪಡಸಾಲೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ, ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಮುರಳಿ ಮನೋಹರ ಜೋಷಿ ಅವರ ಲೇಖನದ ಒಂದು ಬಹುಚರ್ಚಿತ ವಾಕ್ಯ. ಉತ್ತಮ ಪ್ರಭುತ್ವದ ಕುರಿತ, ಒಂದು ಕಾಲದ ಭಾರತೀಯ ಜನತಾ ಪಕ್ಷದ ಪ್ರಭಾವಿ ಅಧ್ಯಕ್ಷ ಹಾಗೂ ಮುತ್ಸದ್ಧಿ ನಾಯಕನ ಆ ಲೇಖನ ಇದೀಗ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉನ್ನತ ನಾಯಕರ ನಡುವೆಯೂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅಲ್ಲದೆ, ಮೋದಿ ಆಡಳಿತದ ಕುರಿತ ಕೇಸರಿಪಡೆಯ ಈ ಮುತ್ಸದ್ಧಿಯ ಮಡುಗಟ್ಟಿದ ಅಸಮಾಧಾನದ ಸ್ಫೋಟ ಆ ಲೇಖನ ಎಂದೂ ವಿಶ್ಲೇಷಿಸಲಾಗುತ್ತಿದೆ. ಆ ಕಾರಣಕ್ಕೆ ಜೋಷಿ ಅವರ ಬರಹ ಸಾರ್ವಜನಿಕ ಚರ್ಚೆಯ ಭಾಗವೂ ಆಗಿದೆ.

“ರಾಜಧರ್ಮ-ಆಡಳಿತಗಾರ ಹೇಗೆ ನಡೆದುಕೊಳ್ಳಬೇಕು; ಪ್ರಾಚೀನ ಭಾರತದ ಪಾಠಗಳು” ಎಂಬ ತಲೆಬರಹದ ಆ ಲೇಖನ, ‘ಪವರ್ ಪಾಲಿಟಿಕ್ಸ್’ ಎಂಬ ನಿಯತಕಾಲಿಕವೊಂದರಲ್ಲಿ ಪ್ರಕಟವಾಗಿದೆ. ಮೋದಿ ಸರ್ಕಾರದ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಟೀಕೆ ಮಾಡದಿರುವ ಹಿರಿಯ ಸಂಸದ ಹಾಗೂ ಬಿಜೆಪಿ ಮಾರ್ಗದರ್ಶಕ ಮಂಡಳಿಯ ಸದಸ್ಯರೂ ಆಗಿರುವ ಜೋಷಿ ಅವರು, ಇದೀಗ ವಾಲ್ಮೀಕಿ ರಾಮಾಯಣ, ವ್ಯಾಸ ಮಹಾಭಾರತ ಮತ್ತು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಉತ್ತಮ ಪ್ರಭುತ್ವದ ಕುರಿತ ವ್ಯಾಖ್ಯಾನಗಳನ್ನು ಉದ್ಧರಿಸಿ ಬರೆದಿರುವ ವಿವರ ಲೇಖನ, ಬಿಜೆಪಿ ಆಡಳಿತದ ಕುರಿತ ಬಿಜೆಪಿಯನ್ನು ಕಟ್ಟಿದ ನಾಯಕರ ಅಭಿಮತ ಎಂಬಂತೆ ಗ್ರಹಿಸಲಾಗುತ್ತಿದೆ.

ಉತ್ತಮ ಪ್ರಭುತ್ವದ ಕುರಿತ ಜೋಷಿ ಅವರ ಸಲಹೆಗಳು- ಸಾರ್ವಜನಿಕ ಚರ್ಚೆ, ಸಂವಾದ, ಭಿನ್ನಾಭಿಪ್ರಾಯಗಳಿಗೆ ಮುಕ್ತ ಅವಕಾಶ, ಜನರಿಗೆ ಹಸಿವು ಮತ್ತು ಭಯದಿಂದ ರಕ್ಷಣೆ, ಮಹಿಳೆಯರ ಸುರಕ್ಷತೆ- ಪ್ರಸ್ತುತ ಸರ್ಕಾರಕ್ಕೆ ಹೇಳಿಮಾಡಿಸಿದಂತಿವೆ. ಅದರಲ್ಲೂ, ಜೋಷಿಯವರು ಉತ್ತಮ ಆಡಳಿತದ ಲಕ್ಷಣಗಳೆಂದು ಪ್ರಸ್ತಾಪಿಸಿರುವ ಅಂಶಗಳೆಲ್ಲೆಲ್ಲಾ ವಿಫಲವಾಗಿದೆ ಎಂಬ ಸರ್ಕಾರದ ವಿರುದ್ಧದ ಟೀಕೆಗಳ ಹಿನ್ನೆಲೆಯಲ್ಲಿ, ಆ ಸಲಹೆಗಳು ಇನ್ನಷ್ಟು ಪ್ರಸ್ತುತ ಎನಿಸಿವೆ.

“ವಾಲ್ಮೀಕಿಯ ಪ್ರಕಾರ ರಾಜನಾದವನು ಸರ್ವಾಧಿಕಾರಿಯಾಗಬಾರದು. ರಾಜ ತನ್ನ ಮಂತ್ರಿಗಳು, ವಿದ್ವಾಂಸರು, ಸೇನೆಯ ದಂಡನಾಯಕರೊಂದಿಗೆ ಚರ್ಚಿಸಿ ಆಡಳಿತದ ನೀತಿಗಳನ್ನು ಅಂತಿಮಗೊಳಿಸುತ್ತಿದ್ದರು ಎಂಬುದು ರಾಮಾಯಣದಲ್ಲಿ ನಮಗೆ ತಿಳಿಯುತ್ತದೆ” ಎಂಬ ಜೋಷಿಯವರ ಅಭಿಪ್ರಾಯವನ್ನು ಆರ್‌ಎಸ್‌ಎಸ್ ಕಚೇರಿಗಳಲ್ಲಿ ವ್ಯಾಪಕವಾಗಿ ಚರ್ಚಿಸಲಾಗುತ್ತಿದೆ. ಆ ಮೂಲಕ ನರೇಂದ್ರ ಮೋದಿ- ಅಮಿತ್ ಶಾ ಜೋಡಿಯ ಆಡಳಿತ ವೈಖರಿ ಮತ್ತು ಆ ಜೋಡಿ ಹೇಗೆ, ಒಂದು ಕಾಲದಲ್ಲಿ ಆಂತರಿಕ ಪ್ರಜಾಪ್ರಭುತ್ವ, ಶಿಸ್ತು ಮತ್ತು ತತ್ವಬದ್ಧ ಕಾರ್ಯಕರ್ತರ ಬಲದ ಬಗ್ಗೆ ಹೆಮ್ಮೆಪಡುತ್ತಿದ್ದ, ಬಿಜೆಪಿ ಪಕ್ಷವನ್ನು ಇಡಿಯಾಗಿ, ಇಬ್ಬರು ವ್ಯಕ್ತಿಗಳ ಆಡುಂಬೊಲವಾಗಿ ಬದಲಾಯಿಸಿದ್ದಾರೆ ಎಂಬ ಕುರಿತ ಸಂಘ ಮತ್ತು ಬಿಜೆಪಿಯ ಒಳಗೇ ಇರುವ ಅಸಮಾಧಾನ ಮತ್ತು ಅತೃಪ್ತಿಗಳಿಗೆ ಈ ಮಾತುಗಳು ದನಿ ನೀಡಿವೆ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.

ರಾಜಧರ್ಮದ ನೆನಪು

ದೇಶಾದ್ಯಂತ ಜನರನ್ನು ಬೀದಿ ನಾಯಿಗಳಂತೆ ಹೊಡೆದು ಸಾಯಿಸುತ್ತಿರುವ ಹೊತ್ತಲ್ಲಿ; ಜೋಷಿಯವರು, “ರಾಜನಾದವನು ಪ್ರಜೆಗಳನ್ನು ಸ್ವತಃ ರಾಜನ ಭಯದಿಂದ ಮುಕ್ತರನ್ನಾಗಿಸಬೇಕು, ಪರಸ್ಪರರ ಬಗೆಗಿನ ಭಯದಿಂದ ಮುಕ್ತರನ್ನಾಗಿಸಬೇಕು, ಮನ್ಯುಷರಲ್ಲದ ಮೂಲಗಳ ಭಯದಿಂದಲೂ ಪ್ರಜೆಗಳನ್ನು ಮುಕ್ತರನ್ನಾಗಿ ಮಾಡಬೇಕು” ಎನ್ನುವ ಮೂಲಕ, ಮೋದಿಯವರಿಗೆ- ೨೦೦೨ರ ಗುಜರಾತ್ ಗಲಭೆಯ ವೇಳೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನೆನಪಿಸಿದಂತೆ- ರಾಜಧರ್ಮವನ್ನು ನೆನಪಿಸಿದ್ದಾರೆ ಎನಿಸುತ್ತದೆ.

ಜೋಷಿಯವರ ಪ್ರಕಾರ, ರಾಜಧರ್ಮದ ಸಾರವೆಂದರೆ;

“ಈ ಮೊದಲೇ ಹೇಳಿದಂತೆ, ಪ್ರಭುತ್ವದ ಅಥವಾ ಆಡಳಿತದ ಉದ್ದೇಶವೇ ಜನರನ್ನು ಸಕಲ ಭಯದಿಂದ ಮುಕ್ತರನ್ನಾಗಿ ಮಾಡುವುದು. ಅದಕ್ಕೆ ಭಯದಿಂದ ಅವರಿಗೆ ರಕ್ಷಣೆ ನೀಡುವ ಅಭಯ ಮುಖ್ಯ. ಏಕೆಂದರೆ, ಮನುಷ್ಯರ ಬದುಕನ್ನು ಹೀನಾಯ ಮಾಡುವ ಅಂಶಗಳಲ್ಲಿ ಭಯಕ್ಕಿಂತ ದೊಡ್ಡದು ಮತ್ತೊಂದಿಲ್ಲ.” ಹಾಗೇ, ಮಹಾಭಾರತದಲ್ಲಿ ಪ್ರಸ್ತಾಪಿಸಿರುವ ಪ್ರಭುತ್ವವನ್ನು ಎಲ್ಲಿ, ಎಷ್ಟು ಮತ್ತು ಹೇಗೆ ಬಳಸಬೇಕು ಎಂಬ ಮಿತಿಗಳನ್ನೂ, ಅಂತಹ ಪ್ರಭುತ್ವ ದಬ್ಬಾಳಿಕೆಯ ಅಥವಾ ಹಿಂಸೆಯ ಪ್ರಯೋಗಕ್ಕೆ ಇಳಿದರೆ, ಆಗ ಅದನ್ನು ಪ್ರಶ್ನಿಸುವ ಅಥವಾ ವಿರೋಧಿಸುವ ಪ್ರಜೆಗಳು ಹಕ್ಕುಬಾಧ್ಯತೆಗಳ ಬಗ್ಗೆಯೂ ಜೋಷಿಯವರು ತಮ್ಮ ಸುದೀರ್ಘ ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ. ಈ ಸಾಲುಗಳನ್ನು ಸದ್ಯ ದೇಶದಲ್ಲಿ ಸರಣಿ ಹಲ್ಲೆ-ಹತ್ಯೆಗಳ ಮೂಲಕ ಭಯ ಬಿತ್ತಿರುವ ಗೋರಕ್ಷಕರ ಅಟ್ಟಹಾಸದ ಹಿನ್ನೆಲೆಯಲ್ಲಿ ಚರ್ಚಿಸಲಾಗುತ್ತಿದೆ ಎಂಬುದು ಈ ಮಾತುಗಳಿಗೆ ವಿಶೇಷ ಪ್ರಸ್ತುತತೆಯನ್ನು ತಂದುಕೊಟ್ಟಿದೆ. ಆ ಕಾರಣಕ್ಕಾಗಿಯೇ ಈ ಸಾಲುಗಳು ಬಿಜೆಪಿ ವಲಯದಲ್ಲಿ ಭಾರೀ ಪ್ರಮಾಣದಲ್ಲಿ ವಾಟ್ಸಪ್‌ ಗುಂಪುಗಳ ಮೂಲಕ ಹರಿದಾಡುತ್ತಿವೆ.

ಜೋಷಿಯವರ ಮತ್ತೊಂದು ಪ್ರಮುಖ ಅಭಿಪ್ರಾಯ, “ಮಹಾಭಾರತದ ಪ್ರಕಾರ ಯಾವುದೇ ಪ್ರಭುತ್ವದ ಮುಖ್ಯ ಉದ್ದೇಶವೇ, ಹಿಂಸೆಯೂ ಸೇರಿದಂತೆ ಎಲ್ಲಾ ಬಗೆಯ ಭಯದಿಂದ ಮುಕ್ತವಾದ ಸಮಾಜವನ್ನು ಕಟ್ಟುವುದು. ಅಂದರೆ, ದೊಡ್ಡ ಮೀನುಗಳಿಂದ ಸಣ್ಣ ಮೀನುಗಳನ್ನು ರಕ್ಷಿಸುವುದು ಪ್ರಭುತ್ವದ ಗುರಿ. ಅದೇ ಹೊತ್ತಿಗೆ, ಸ್ವತಃ ಪ್ರಭುತ್ವವೇ ದೊಡ್ಡ ಮೀನಾಗದಂತೆಯೂ ಜಾಗ್ರತೆ ವಹಿಸಬೇಕಾಗುತ್ತದೆ. ಒಂದು ವೇಳೆ ಆ ಜಾಗ್ರತೆ ವಹಿಸದೇ ಹೋದರೆ, ಅದು ದಬ್ಬಾಳಿಕೆಗೆ ಮತ್ತು ಭೀತಿಗೆ ಕಾರಣವಾಗುತ್ತದೆ. ಹಾಗೆ ಸ್ವತಃ ತನ್ನದೇ ಪ್ರಜೆಗಳ ಮೇಲೆ ದಬ್ಬಾಳಿಕೆ ನಡೆಸುವುದು ಮತ್ತು ಅವರಲ್ಲಿ ಭೀತಿ ಹುಟ್ಟಿಸುವುದು ಪ್ರಭುತ್ವದ ಪಾಲಿಗೆ ‘ಅಧರ್ಮ’ವಾಗುತ್ತದೆ.” ಹೀಗೆ ಅಧರ್ಮದ ಪ್ರಸ್ತಾಪ ಇಡೀ ಲೇಖನದುದ್ದಕ್ಕೂ ಜೋಷಿಯವರ ಚಿಂತನೆಯ ಎಳೆಯಾಗಿ ಕಾಣಿಸಿಕೊಳ್ಳುತ್ತದೆ ಎಂಬುದು ಗಮನಾರ್ಹ.

ಇದನ್ನೂ ಓದಿ : ಸಂಘ ಪರಿವಾರ ಆತ್ಮವಿಮರ್ಶೆಯ ಹಾದಿಯಲ್ಲಿ ಸಾಗುವುದು ಯಾವಾಗ?

“ರಾಜನಾದವನು ಬಡವರು, ನಿರ್ಗತಿಕರು ಮತ್ತು ವೃದ್ಧ ಅಶಕ್ತರ ಕಣ್ಣೀರು ಒರೆಸಿ, ಅವರ ಮುಖದಲ್ಲಿ ನಗು ಅರಳಿಸಿದರೆ, ಅಂತಹ ನಡವಳಿಕೆಯನ್ನು ರಾಜನ ಧರ್ಮ ಎಂದು ಕರೆಯಲಾಗುತ್ತದೆ” ಎನ್ನುವ ಮೂಲಕ ಪರೋಕ್ಷವಾಗಿ ಪ್ರಸ್ತುತ ಸರ್ಕಾರದ ಕಿವಿ ಹಿಂಡುವ ಪ್ರಯತ್ನ ಮಾಡಿರುವ ಜೋಷಿ ಅವರು, ಒಂದು ಹಂತದಲ್ಲಿ; “ರಾಜನಾದವನು ಸ್ವತಃ ತನ್ನನ್ನು ತಾನು ಸರಿ ದಾರಿಯಲ್ಲಿ ಇಟ್ಟುಕೊಳ್ಳಬೇಕು, ತನ್ನ ಬದುಕನ್ನು ಶಿಸ್ತಿನಲ್ಲಿಟ್ಟುಕೊಳ್ಳಬೇಕು. ಆಗ ಮಾತ್ರ ಆತ ತನ್ನ ಅಧೀನರು ಮತ್ತು ಪ್ರಜೆಗಳನ್ನು ಸರಿ ದಾರಿಯಲ್ಲಿ ಇಡಲು ಶಕ್ತನಾಗುತ್ತಾನೆ. ಆದರೆ, ತನ್ನನ್ನು ತಾನು ಸರಿ ಮಾಡಿಕೊಳ್ಳದೆ, ತಮ್ಮ ತಪ್ಪುಗಳನ್ನು ಅರಿತುಕೊಳ್ಳದೆ, ಆತ ಜನರಿಗೆ ಬೋಧಿಸತೊಡಗಿದರೆ, ಅಪಹಾಸ್ಯಕ್ಕೀಡಾಗುತ್ತಾನೆ. ಈ ಎಚ್ಚರ ಕೂಡ ರಾಜನಿಗೆ ಇರಬೇಕು” ಎನ್ನುತ್ತಾರೆ. ಜೋಷಿಯವರ ಈ ಹೇಳಿಕೆಯನ್ನು ಒಪ್ಪುವ ಬಿಜೆಪಿಯ ನಾಯಕರೊಬ್ಬರು, “ಈ ಮಾತುಗಳಿಗೆ ಮೋದಿಯವರ ವೈಖರಿ ನೂರಕ್ಕೆ ನೂರು ತಾಳೆಯಾಗುತ್ತದೆ” ಎಂದು ಅಭಿಪ್ರಾಯಪಡುತ್ತಾರೆ!

ಭಾರತಕ್ಕೆ ಕೌಟಿಲ್ಯ ಬೇಕು, ಮೆಕೆವೆಲ್ಲೆ ಅಲ್ಲ!

“ರಾಜಧರ್ಮ” ಎನ್ನುವ ಮೂಲಕ ತಾವು ಏನನ್ನು ಹೇಳುತ್ತಿದ್ದೇವೆ ಎಂಬುದನ್ನು ಒತ್ತಿ ಹೇಳಿರುವ ಜೋಷಿ ಅವರು, ರಾಜಧರ್ಮ ಎಂಬುದು ಧಾರ್ಮಿಕ ಸಂಗತಿಯಲ್ಲ; ಬದಲಾಗಿ ಉತ್ತಮ ಪ್ರಭುತ್ವದ ತತ್ವ ಎಂದಿದ್ದಾರೆ. “ಸಮಾಜ ಕಲ್ಯಾಣದ ಬಗ್ಗೆ ಆದ್ಯತೆ ಮತ್ತು ರಾಜನ ವೈಯಕ್ತಿಕ ವ್ಯಕ್ತಿತ್ವ ಘನತೆಯನ್ನು ಭಾರತೀಯ ಇತಿಹಾಸದುದ್ದಕ್ಕೂ ಕಾಯ್ದುಕೊಂಡು ಬರಲಾಗಿದೆ” ಎಂದಿರುವ ಅವರು, ಕೌಟಿಲ್ಯನ ಬಗ್ಗೆ ಪ್ರಸ್ತಾಪಿಸುತ್ತಾ, ಚಾಣಕ್ಯನೀತಿ-ಅಭಿಮಾನಿಗಳು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ವಿಷಯದಲ್ಲಿ ಬಳಸುವ ಹೊಗಳಿಕೆಯ ಪದ- ಬಗ್ಗೆಯೂ ಹೇಳಿದ್ದಾರೆ. ಹಾಗೇ, “ಕೌಟಿಲ್ಯನನ್ನು ಭಾರತದ ಮೆಕೆವೆಲ್ಲೆ ಎಂದು ಕರೆಯುವುದನ್ನು ಇನ್ನಾದರೂ ನಿಲ್ಲಿಸೋಣ. ವಾಸ್ತವವಾಗಿ ಮೆಕೆವೆಲ್ಲೆಯೇ ಪಾಶ್ಚಿಮಾತ್ಯ ಜಗತ್ತಿನ ಕೌಟಿಲ್ಯ” ಎಂದಿದ್ದಾರೆ.

“ಪ್ರಭುತ್ವ ತನ್ನ ಅಧಿಕಾರವನ್ನು ಅತಿಯಾಗಿ ಬಳಸಿದರೆ, ಅದು ಪ್ರತಿರೋಧಕ್ಕೆ, ಅಸಹನೆಗೆ ಮತ್ತು ಬಂಡಾಯಕ್ಕೆ ಕಾರಣವಾಗುತ್ತದೆ” ಎಂದು ಕೌಟಿಲ್ಯ ಹೇಳಿದ್ದಾನೆ ಎಂಬುದನ್ನೂ ಕೂಡ ಜೋಷಿ ನೆನಪಿಸಿದ್ದಾರೆ. ಹಾಗಾಗಿ, “ಆಡಳಿತದಲ್ಲಿ ಸದಾ ಜಾಗ್ರತೆಯ ಕ್ರಮಗಳು ಅಗತ್ಯ. ಅಂತಹ ಕ್ರಮಗಳ ಹೊರತಾಗಿಯೂ ಒಂದು ಬಂಡಾಯ ತಲೆ ಎತ್ತಬೇಕು ಮತ್ತು ಅಂತಹ ಸಂದರ್ಭದಲ್ಲಿ ಪ್ರಭುತ್ವ ಜನರ ಮೇಲೆ ಸಾಮೂಹಿಕವಾಗಿ ಗಧಾಪ್ರಹಾರ ನಡೆಸದೇ, ಸಂಯಮದಿಂದ ನಡೆಸಿಕೊಳ್ಳಬೇಕು” ಎಂದೂ ಸಲಹೆ ನೀಡಿದ್ದಾರೆ.

ಮಹಿಳಾ ಘನತೆ ಕಾಯಿರಿ

ಪುರಾಣಗಳಲ್ಲಿ ಆಡಳಿತ ಮತ್ತು ಮಹಿಳೆಯ ಸುರಕ್ಷತೆಯ ವಿಷಯದಲ್ಲಿ ಏನೇನು ಹೇಳಲಾಗಿದೆ ಎಂಬ ಬಗ್ಗೆ ತಮ್ಮ ಲೇಖನದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿರುವ ಜೋಷಿ ಅವರು, ಮಹಿಳೆಯರ ಜೀವ ಮತ್ತು ಘನತೆಯನ್ನು ಕಾಯುವುದು ಪ್ರಭುತ್ವ(ಆಡಳಿತದ)ದ ಮುಖ್ಯ ಗುರಿಯಾಗಿರಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ, ಮಹಾಭಾರತದಲ್ಲಿ ಆ ಕುರಿತ ಪ್ರಸ್ತಾಪವನ್ನು ಉಲ್ಲೇಖಿಸಿ, “ಯಾವುದೇ ರಾಜ್ಯದಲ್ಲಿ ತನ್ನ ಮಕ್ಕಳು, ಪತಿಯ ಕಣ್ಣೆದುರಿನಲ್ಲೇ ಗೋಳಿಡುವ ಹೆಣ್ಣುಮಕ್ಕಳನ್ನು ಹೊತ್ತೊಯ್ಯಲಾಗುತ್ತದೆಯೋ, ಅದನ್ನು ಕಂಡು ಆಕೆಯ ಮನೆಮಂದಿ ಕಣ್ಣೀರು ಸುರಿಸುತ್ತಾರೆಯೋ, ಅಂತಹ ಕಡೆ ಪ್ರಭುತ್ವ(ಸರ್ಕಾರ) ಎಮಬುದೇ ಇಲ್ಲ ಎಂದರ್ಥ” ಎಂದಿದ್ದಾರೆ.

ಕಥುವಾ ಮತ್ತು ಉನ್ನಾವ್ ಘಟನೆಗಳಿಗೆ ಪೂರ್ವದಲ್ಲೇ ಈ ಲೇಖನ ಪ್ರಕಟವಾಗಿದ್ದರೂ, ಮೋದಿ ಆಡಳಿತದಲ್ಲಿ ದೇಶದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳ ಹಿನ್ನೆಲೆಯಲ್ಲಿ ಇದೀಗ ಇನ್ನಷ್ಟು ಪ್ರಸ್ತುತವೆನಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಲೇಖನ ಕಳೆದ ಫೆಬ್ರವರಿಯಲ್ಲಿ ಪ್ರಕಟವಾಗಿದ್ದರೂ, ಅದು ಇತ್ತೀಚಿನ ದಿನಗಳಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ವಲಯದಲ್ಲಿ ವಾಟ್ಸಪ್ ಗುಂಪುಗಳ ಮೂಲಕ ಸಾಕಷ್ಟು ಚಾಲ್ತಿಗೆ ಬಂದಿದೆ ಎಂಬುದು ಗಮನಾರ್ಹ.

ನಿಜವಾದ ಪ್ರಭಾವಿ ನಾಯಕ

“ಒಂದೇ ಚಕ್ರದಲ್ಲಿ ರಥ ಹೇಗೆ ಚಲಿಸಲಾರದೋ, ಹಾಗೇ ರಾಜನೊಬ್ಬನೇ ಏಕಾಂಗಿಯಾಗಿ ಒಂದು ದೇಶವನ್ನು ಆಳುವುದು ಸಾಧ್ಯವಿಲ್ಲ” ಎನ್ನುವ ಜೋಷಿಯವರ ಹೇಳಿಕೆಯನ್ನು ಮೆಚ್ಚಿಕೊಂಡಿರುವ ಮತ್ತು ಮೋದಿಯವರ ವೈಖರಿಗೆ ತೀವ್ರ ಅಸಮಾಧಾನಗೊಂಡಿರುವ ಬಿಜೆಪಿ ನಾಯಕರೊಬ್ಬರು, “ಈ ಮಾತುಗಳು ತಮ್ಮನ್ನು ತಾವು ಬಹಳ ದೊಡ್ಡ ‘ಮಹಾನ್ ನಾಯಕ’ ಎಂದುಕೊಂಡಿರುವ ಮೋದಿಯವರ ಭ್ರಮೆಗೆ ಸರಿಯಾದ ಪೆಟ್ಟು ನೀಡಿವೆ” ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೂಲಗಳ ಪ್ರಕಾರ, ಸಂಘಪರಿವಾರದ ಆಪ್ತ ಧುರೀಣ ಜೋಷಿ ಅವರು, ಈವರೆಗೆ ಮೋದಿಯವರ ಸರ್ಕಾರದ ವೈಖರಿಯ ಬಗ್ಗೆ ಮೌನ ವಹಿಸಿದ್ದರು. ಆದರೆ, ಈಗ ಅವರು ತಮ್ಮದೇ ಆದ ನಿಲುವಿಗೆ ಬಂದಿದ್ದಾರೆ. ಅವರ ಅಂತಹ ನಿಲುವು ಈಗಾಗಲೇ ಆ ಲೇಖನದ ಮೂಲಕ ಬಹಿರಂಗಗೊಂಡಿದೆ. ಬಿಜೆಪಿಯ “ರಾಷ್ಟ್ರೀಯವಾದಿ” ಸರ್ಕಾರ, ತನಗೆ ಇರಿಸುಮುರಿಸು ತರಿಸಿರುವ ಜೋಷಿಯವರ ಈ ಸಲಹೆಗಳನ್ನು ತಿರಸ್ಕರಿಸಬಹುದು. ಆದರೆ, ಅವರು ಉಲ್ಲೇಖಿಸಿರುವ ಮಹಾನ್ ಗ್ರಂಥಗಳ ಆಳ ವಿವೇಕವನ್ನೂ, ಜನಪರ ಕಾಳಜಿಯನ್ನೂ ಹಾಗೆ ಸುಲಭವಾಗಿ ತಳ್ಳಿಹಾಕಲಾಗದು ಅಲ್ಲವೆ?

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More