ವಿಶ್ವದ 6ನೇ ಆರ್ಥಿಕ ಶಕ್ತಿಯಾಗಿ ಉದಯಿಸಿದ ಭಾರತ, 7ನೇ ಸ್ಥಾನಕ್ಕಿಳಿದ ಫ್ರಾನ್ಸ್

ವಿಶ್ವಬ್ಯಾಂಕ್ ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯಲ್ಲಿ ಭಾರತವು ವಿಶ್ವದ ಆರನೇ ಬೃಹತ್ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಇದುವರೆಗೆ ಆರನೇ ಸ್ಥಾನದಲ್ಲಿದ್ದ ಫ್ರಾನ್ಸ್ ಏಳನೇ ಸ್ಥಾನಕ್ಕೆ ಇಳಿದಿದೆ. ಭಾರತದ ಜಿಡಿಪಿ 2.597ಟ್ರಿಲಿಯನ್ ಡಾಲರ್ ಗೆ ಏರಿದೆ. ಅಮೆರಿಕದ ಅಗ್ರಸ್ಥಾನ ಅಬಾಧಿತವಾಗಿದೆ

ನಿರೀಕ್ಷಿಸಿದಂತೆಯೇ ಭಾರತ ವಿಶ್ವದ ಆರನೇ ಬೃಹತ್ ಆರ್ಥಿಕ ಶಕ್ತಿಯಾಗಿ ಉದಯಿಸಿದೆ. ಇದುವರೆಗೆ ಆರನೇ ಸ್ಥಾನದಲ್ಲಿದ್ದ ಫ್ರಾನ್ಸ್ ಏಳನೇ ಸ್ಥಾನಕ್ಕೆ ಇಳಿದಿದೆ. ವಿಶ್ವಬ್ಯಾಂಕ್ ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿ ಅಂಶಗಳು ಭಾರತವು ಆರನೇ ಸ್ಥಾನಕ್ಕೆ ದಾಪುಗಾಲಿಟ್ಟಿರುವುದನ್ನು ದೃಢಪಡಿಸಿದೆ. ಮೊದಲನೇ ಸ್ಥಾನದಲ್ಲಿ ಅಮೆರಿಕ ಇದೆ ನಂತರದ ನಾಲ್ಕು ಸ್ಥಾನಗಳಲ್ಲಿ ಕ್ರಮವಾಗಿ ಚೀನಾ, ಜಪಾನ್, ಜರ್ಮನಿ ಮತ್ತು ಬ್ರಿಟನ್ ದೇಶಗಳಿವೆ.

2017ನೇ ಸಾಲಿ ಭಾರತ ಸಾಧಿಸಿರುವ ಆರ್ಥಿಕ ಅಭಿವೃದ್ಧಿಯನ್ನು ಆಧಾರಿಸಿ ವಿಶ್ವಬ್ಯಾಂಕ್ ಹೊಸದಾಗಿ ಲೆಕ್ಕಾಚಾರ ಹಾಕಿದ್ದು, ಭಾರತ ಆರನೇ ಸ್ಥಾನಕ್ಕೆ ಏರಿದೆ. ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನವು (ಜಿಡಿಪಿ) 2017ರ ಅಂತ್ಯದಲ್ಲಿ 2.597 ಟ್ರಿಲಿಯನ್ ಡಾಲರ್ (179.193 ಲಕ್ಷ ಕೋಟಿ ರುಪಾಯಿ) ಮೌಲ್ಯದಷ್ಟಾಗಿದೆ. ಇದೇ ವೇಳೆ ಫ್ರಾನ್ಸ್ ಜಿಡಿಪಿಯು 2.582 ಟ್ರಿಲಿಯನ್ ಡಾಲರ್ ನಷ್ಟಿದೆ.

ಅಪನಗದೀಕರಣ, ಜಿಎಸ್ಟಿ ಜಾರಿ ಮತ್ತಿತರ ಕಾರಣಗಳಿಂದಾಗಿ ಹಲವು ತ್ರೈಮಾಸಿಕಗಳಿಂದ ಹಿನ್ನಡೆ ಸಾಧಿಸಿದ್ದ ಭಾರತದ ಆರ್ಥಿಕತೆಯು ನರೇಂದ್ರಮೋದಿ ಸರ್ಕಾರ ಕೈಗೊಂಡ ಸುಧಾರಣಾ ಕ್ರಮಗಳಿಂದಾಗಿ ಮತ್ತೆ ಚೇತರಿಕೆಯ ಹಾದಿಯಲ್ಲಿ ಸಾಗಿದೆ ಎಂದು ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ಹೇಳಿದೆ.

ಆದರೆ, ತಲಾ ಆದಾಯ ಲೆಕ್ಕದಲ್ಲಿ ಭಾರತವು ಫ್ರಾನ್ಸ್ ದೇಶಕ್ಕಿಂತ ಬಹಳ ಹಿಂದೆ ಇದೆ. ತಲಾ ಆದಾಯ ಲೆಕ್ಕದಲ್ಲಿ ಫ್ರಾನ್ಸ್ ಭಾರತಕ್ಕಿಂತ ಸುಮಾರು 20 ಪಟ್ಟು ದೊಡ್ಡದಿದೆ. ಅದಕ್ಕೆ ಮುಖ್ಯ ಕಾರಣ ಎಂದರೆ ಫ್ರಾನ್ಸ್ ಜನಸಂಖ್ಯೆ 6.7ಕೋಟಿ ಇದೆ. ಆದರೆ ಭಾರತದ ಜನಸಂಖ್ಯೆ 134 ಕೋಟಿಗೆ ಏರಿದೆ.

ವಿಶ್ವಬ್ಯಾಂಕ್ ಪ್ರಕಾರ, ಗ್ರಾಹಕರ ವಿನಿಯೋಗ ಹೆಚ್ಚಳದಿಂದಾಗಿ ಉತ್ಪಾದಕ ವಲಯವು ಚೇತರಿಸಿಕೊಂಡು ಉತ್ತಮ ಸಾಧನೆ ಮಾಡಿದೆ. ಇದು ಭಾರತದ ಆರ್ಥಿಕತೆ ಹಿಗ್ಗಲು ನೆರವಾಗಿದೆ. ಅಪನಗದೀಕರಣ ಮತ್ತು ತರಾತುರಿಯಲ್ಲಿ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಜಾರಿಗೆ ತಂದಿದ್ದು ಭಾರತದ ಆರ್ಥಿಕತೆಯು ಕುಸಿತಕ್ಕೀಡಾಗಲು ಕಾರಣವಾಗಿತ್ತು ಎಂಬುದನ್ನು ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ಹೇಳಿದೆ.

ಒಟ್ಟಾರೆ ಭಾರತದ ಆರ್ಥಿಕತೆಯು ತ್ವರಿತಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದು ಕೇವಲ ಒಂದೇ ಒಂದು ದಶಕದಲ್ಲಿ ಜಿಡಿಪಿ ದುಪ್ಪಟ್ಟಾಗಿದೆ. ಚೀನಾದ ಆರ್ಥಿಕತೆ ನಿಧಾನಗತಿಗೆ ಇಳಿಯುತ್ತಿರುವ ಹೊತ್ತಿಗೆ ಭಾರತದ ಅಭಿವೃದ್ಧಿ ಉತ್ಕರ್ಷಕ್ಕೇರಿದೆ ಎಂದಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಭಾರತದ ಜಿಡಿಪಿ 2018ರಲ್ಲಿ ಶೇ.7.4 ಮತ್ತು 2019ರಲ್ಲಿ ಶೇ.7.8ರಷ್ಟಾಗಲಿದೆ ಎಂದು ಅಂದಾಜಿಸಿದೆ. ಇದೇ ವೇಳೆ ಜಾಗತಿಕ ಆರ್ಥಿಕತೆಯ ಮುಂದಿನ ವರ್ಷ ಶೇ.3.9ರಷ್ಟು ಮಾತ್ರ ಅಭಿವೃದ್ಧಿ ಹೊಂದಲಿದೆ ಎಂದು ಹೇಳಿದೆ.

ಇದನ್ನೂ ಓದಿ : ಮುಂದಿನ ವರ್ಷ ದೇಶದ ಜಿಡಿಪಿ 7.3%ಗೆ ಏರಲಿದೆ ಎಂದಿದೆ ವಿಶ್ವಬ್ಯಾಂಕ್ ವರದಿ

ಭಾರತವು ಈಗಾಗಲೇ ಜಾಗತಿಕವಾಗಿ ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿ ಹೊರಹೊಮ್ಮಿದೆ. ಪ್ರಧಾನಿ ಮೋದಿ ಸರ್ಕಾರ ಅಪನಗದೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆ ಜಾರಿಗೆ ತಂದಿದ್ದರಿಂದಾದ ಆರ್ಥಿಕ ಹಿನ್ನಡೆಯಿಂದಾಗಿ ಭಾರತದ ಆರ್ಥಿಕತೆಯು ಶೇ.2ಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಒಂದು ಹಂತದಲ್ಲಿ ಶೇ.5.4ಕ್ಕೆ ಕುಸಿದಿತ್ತು.

ಆ ಹಂತದಲ್ಲಿ ಚೀನಾ ದೇಶವು ಮತ್ತೆ ಜಾಗತಿಕವಾಗಿ ಅತಿಹೆಚ್ಚು ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿ ಹೊರಹೊಮ್ಮಿತ್ತು. ಈಗ ಅಪನಗದೀಕರಣ ಮತ್ತು ಜಿಎಸ್ಟಿ ಹಿನ್ನಡೆಗಳನ್ನು ದಾಟಿ ದೇಶ ಮುಂದಡಿ ಇಟ್ಟಿದೆ. ಮತ್ತೆ ಆರ್ಥಿಕ ಅಭಿವೃದ್ಧಿ ಉತ್ಕರ್ಷಕ್ಕೇರಿದೆ. ಈಗ ಮತ್ತೆ ಜಾಗತಿಕವಾಗಿ ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More