ನಿಷ್ಕ್ರಿಯ ಸಾಲ ಹೆಚ್ಚಳ; ಲೋಕಸಭೆ ಅಂದಾಜು ಸಮಿತಿಯಿಂದ ಅರವಿಂದ್ ಗೆ ಬುಲಾವ್

ಭಾರತದಲ್ಲಿ ಬ್ಯಾಂಕಿಂಗ್ ಉದ್ಯಮಕ್ಕೆ ಸವಾಲಾಗುವಷ್ಟು ಬೃಹತ್ತಾಗಿ ಬೆಳೆದಿರುವ ನಿಷ್ಕ್ರಿಯ ಸಾಲ ಕುರಿತಂತೆ ವಿವರಣೆ ಪಡೆಯಲು ಲೋಕಸಭಾ ಅಂದಾಜು ಸಮಿತಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್, ಹಣಕಾಸು ಕಾರ್ಯದರ್ಶಿ ಮತ್ತಿತರರಿಗೆ ಹಾಜರಾಗುವಂತೆ ಸೂಚಿಸಿದೆ

ಬಿಜೆಪಿ ಹಿರಿಯ ನಾಯಕ ಮುರುಳಿ ಮನೋಹರ ಜೋಷಿ ಅಧ್ಯಕ್ಷರಾಗಿರುವ ಲೋಕಸಭಾ ಅಂದಾಜು ಸಮಿತಿಯು ಬ್ಯಾಂಕುಗಳಲ್ಲಿನ ನಿಷ್ಕ್ರಿಯ ಸಾಲ ಬೃಹತ್ತಾಗಿ ಬೆಳೆದಿರುವ ಹಿನ್ನೆಲೆಯಲ್ಲಿ ಹುದ್ದೆ ತೊರೆಯಲಿರುವ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್, ಹಣಕಾಸು ಕಾರ್ಯದರ್ಶಿ ಹಸ್ಮುಖ್ ಹದಿಯಾ, ಆರ್ಬಿಐ ಡೆಪ್ಯೂಟಿ ಗವರ್ನರ್ ಮಹೇಶ್ ಕುಮಾರ್ ಜೈನ್, ಹಣಕಾಸು ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗಾರ್ಗ್ ಅವರಿಗೆ ಸಮಿತಿ ಮುಂದೆ ಹಾಜರಾಗುವಂತೆ ಸೂಚಿಸಿದ್ದಾರೆ.

ಈ ಹಿಂದೆ ಲೋಕಸಭಾ ಸಾರ್ವಜನಿಕ ಲೆಕ್ಕ ಸಮಿತಿ ಅಧ್ಯಕ್ಷರಾಗಿದ್ದ ಮುರುಳಿ ಮನೋಹರ ಜೋಷಿ ಅವರು 2ಜಿ ಹಗರಣದ ನಿಷ್ಠುರವಾದ ವರದಿ ನೀಡಿದ್ದರು. ಲೋಕಸಭಾ ಅಂದಾಜು ಸಮಿತಿಯು ತೆರಿಗೆದಾರರ ಹಣವನ್ನು ಸಮರ್ಥವಾಗಿ ಬಳಕೆ ಮಾಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುತ್ತದೆ. ಬ್ಯಾಂಕುಗಳ ನಿಷ್ಕ್ರಿಯ ಸಾಲವು ಬೃಹತ್ ಪ್ರಮಾಣದಲ್ಲಿ ಬೆಳೆದು ಬ್ಯಾಂಕಿಂಗ್ ವ್ಯವಸ್ಥೆಗೆ ದೊಡ್ಡ ಸವಾಲಾಗಿರುವ ಹಿನ್ನೆಲೆಯಲ್ಲಿ ಮುರುಳಿ ಮನೋಹರ ಜೋಷಿ ಅವರು ಪಕ್ಷಾತೀತ ನಿಲವು ತಳೆದು ಪರಿಶೀಲನೆ ನಡೆಸುವ ನಿರೀಕ್ಷೆ ಇದೆ ಎಂದು ದಿ ವೈರ್ ವರದಿ ಮಾಡಿದೆ.

ಅಂದಾಜು ಸಮಿತಿಯು ಹಾಜರಾಗುವಂತೆ ಕಾರ್ಯದರ್ಶಿಗೆ ಸೂಚಿಸಿರುವುದರಿಂದ ಹಣಕಾಸು ಸಚಿವಾಲಯದಲ್ಲಿ ಎಚ್ಚರಿಕೆಯ ಗಂಟೆ ಬಾರಿಸಿದಂತಾಗಿದೆ. ಸದ್ಯ ಪಿಯುಶ್ ಗೋಯಲ್ ಹಂಗಾಮಿ ವಿತ್ತ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅರ್ಜುನ್ ಜೇಟ್ಲಿ ಅವರು ಆರ್ಥಿಕ ನೀತಿ ಕುರಿತಂತೆ ನಿಷ್ಠೂರವಾಗಿ ಮಾತನಾಡುತ್ತಿದ್ದರು. ಇತ್ತೀಚೆಗೆ ಕೈಗೊಂಡಿರುವ ಕೆಲವು ನಿರ್ಧಾರಗಳ ಪರಸ್ಪರ ವೈರುಧ್ಯಗಳಿರುವ ಹಿನ್ನೆಲೆಯಲ್ಲಿ ಸಮಿತಿಯು ಅರವಿಂದ್ ಅವರ ವಿಷಯ ಪರಿಣತಿ ಪಡೆದುಕೊಳ್ಳುವ ನಿರೀಕ್ಷೆ ಇದೆ.

ಈ ನಡುವೆ ಹಣಕಾಸು ಕಾರ್ಯದರ್ಶಿ ಹಸ್ಮುಖ ಹದಿಯಾ ಅವರಿಗೂ ಹಾಜರಾಗುವಂತೆ ಅಂದಾಜು ಸಮಿತಿಯು ಸೂಚಿಸಿರುವುದರಿಂದ ಹಣಕಾಸು ಸಚಿವಾಲಯದಲ್ಲಿ ಎಚ್ಚರಿಕೆಯ ಗಂಟೆ ಬಾರಿಸಿದಂತಾಗಿದೆ. ಸದ್ಯ ಪಿಯುಶ್ ಗೋಯಲ್ ಹಂಗಾಮಿ ವಿತ್ತ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅರ್ಜುನ್ ಜೇಟ್ಲಿ ಅವರು ಆರ್ಥಿಕ ನೀತಿ ಕುರಿತಂತೆ ನಿಷ್ಠುರವಾಗಿ ಮಾತನಾಡುತ್ತಿದ್ದರು. ಅರುಣ್ ಜೇಟ್ಲಿ ಅನಾರೋಗ್ಯ ನಿಮಿತ್ತ ಪಿಯುಶ್ ಗೋಯಲ್ ಅವರನ್ನು ಹಂಗಾಮಿ ವಿತ್ತ ಸಚಿವರನ್ನಾಗಿ ನೇಮಕ ಮಾಡಲಾಗಿದೆ.

ಪ್ರಸ್ತುತ 10 ಲಕ್ಷ ಕೋಟಿ ರುಪಾಯಿ ಮೀರಿರುವ ನಿಷ್ಕ್ರಿಯ ಸಾಲ ಕುರಿತಂತೆ ಮುರುಳಿ ಮನೋಹರ ಜೋಷಿ ಅಧ್ಯಕ್ಷತೆಯ ಅಂದಾಜು ಸಮಿತಿಯು ಪರಿಶೀಲನೆ ನಡೆಸಲಿದೆ. ಬೃಹತ್ ಪ್ರಮಾಣದಲ್ಲಿರುವುದರಿಂದ ನಿಷ್ಕ್ರಿಯ ಸಾಲ ಸಮಸ್ಯೆಯನ್ನು ನಿಭಾಯಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಎನ್ಡಿಎ ಸರ್ಕಾರಕ್ಕೆ ಕೂಡಾ ಇದು ದೊಡ್ಡಸವಾಲಾಗಿ ಪರಿಣಮಿಸಿದೆ. 2018 ಮಾರ್ಚ್ ಅಂತ್ಯಕ್ಕೆ ಶೇ.11.6ರಷ್ಟಿದ್ದ ನಿಷ್ಕ್ರಿಯ ಸಾಲ ಪ್ರಮಾಣವು 2019 ಮಾರ್ಚ್ ಅಂತ್ಯದ ವೇಳೆಗೆ ಶೇ.12.3ಕ್ಕೆ ಏರುವ ನಿರೀಕ್ಷೆ ಇದೆ ಎಂದು ಇತ್ತೀಚಿನ ಆರ್ಥಿಕ ಸ್ಥಿರತೆ ಕುರಿತಾದ ಭಾರತೀಯ ರಿಸರ್ವ್ ಬ್ಯಾಂಕ್ ವರದಿ ವಿವರಿಸಿದೆ. ಅಂದರೆ ಚುನಾವಣೆ ಎದುರಿಸುವ ಹೊತ್ತಿಗೆ ಮೋದಿ ನೇತೃತ್ವದ ಎನ್ಡಿಎ ಸರ್ಕಾರಕ್ಕೆ ಭಾರಿ ಹೊರೆ ಬಿದ್ದಂತಾಗಲಿದೆ.

ಬಿಜಿಪಿ ಚುನಾವಣೆ ವೇಳೆ ದೇಣಿಗೆ ನೀಡುತ್ತಿದ್ದ ಮೂಲಭೂತ ಸೌಲಭ್ಯ ಕಂಪನಿಗಳು ಸುಸ್ತಿದಾರರಾಗಿದ್ದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಲಿದೆ. ಬಿಜೆಪಿಗೆ ಬರುವ ದೇಣಿಗೆಯಲ್ಲಿ ಬಹುತೇಕ ಬೃಹತ್ ಕಾರ್ಪೊರೆಟ್ ಗಳದ್ದೇ ಆಗಿರುತ್ತದೆ. ವಿಶೇಷ ಎಂದರೆ ಬೃಹತ್ ಪ್ರಮಾಣದಲ್ಲಿ ನಿಷ್ಕ್ರಿಯ ಸಾಲಕ್ಕೆ ಕಾರಣವಾಗಿರುವುದು ಇದೇ ಕಾರ್ಪೊರೆಟ್ ಗಳು.

ನಿಷ್ಕ್ರಿಯ ಸಾಲದ ವಸೂಲಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಕಟ್ಟು ನಿಟ್ಟಿನ ಕ್ರಮ ರೂಪಿಸಿ ಜಾರಿ ಮಾಡುತ್ತಿದ್ದರೂ ಬೃಹತ್ ಪ್ರಮಾಣದ ಸಾಲ ಮಾಡಿ ಸುಸ್ತಿಯಾಗಿರುವ ಬಿಜೆಪಿಗೆ ದೇಣಿಗೆ ನೀಡುವ ಕಾರ್ಪೊರೆಟ್ ಗಳ ವಿರುದ್ಧ 2019ರ ಲೋಕಸಭಾ ಚುನಾವಣೆ ವರೆಗೂ ಏನೂ ಕ್ರಮ ಕೈಗೊಳ್ಳದಿರುವ ಸಾಧ್ಯತೆ ಇದೆ. ಇತ್ತೀಚೆಗೆ ಹಂಗಾಮಿ ವಿತ್ತ ಸಚಿವ ಪಿಯುಷ್ ಗೋಯಲ್ ಅವರು ಇಂಧನ ವಲಯದ 2.5 ಲಕ್ಷ ಕೋಟಿ ನಿಷ್ಕ್ರಿಯ ಸಾಲ ನಿರ್ವಹಣೆಗಾಗಿ ಅಸೆಟ್ ಮ್ಯಾನೆಜ್ಮೆಂಟ್ ಕಂಪನಿ ರಚಿಸಿರುವುದು ಸಹ ಕಾರ್ಪೊರೆಟ್ ಗಳಿಗೆ ಕಾಲಾವಕಾಶ ನೀಡುವ ಉದ್ದೇಶದಿಂದಲೇ ಎನ್ನಲಾಗಿದೆ.

ಆದರೆ, ಈಗಾಗಲೇ ಸುಸ್ತಿಯಾಗಿರುವ ಪವರ್ ಕಂಪನಿಗಳ ವಿರುದ್ಧ ಆರ್ಬಿಐ ಮಾರ್ಗಸೂಚಿಗಳ ಪ್ರಕಾರ ಕ್ರಮ ಕೈಗೊಂಡರೆ ಅಕ್ಟೋಬರ್ 1ರಿಂದಲೇ ದಿವಾಳಿ ಸಂಹಿತೆಯಡಿ ಹರಾಜು ಹಾಕಬಹುದಾಗಿದೆ. ನೂತನವಾಗಿ ರಚಿಸಿರುವ ಅಸೆಟ್ ಮ್ಯಾನೆಜ್ಮೆಂಟ್ ಕಂಪನಿಯು ಸುಸ್ತಿದಾರ ಪವರ್ ಕಂಪನಿಗಳಿಗೆ ಜೀವದಾನ ನೀಡುವುದೋ ಅಥವಾ ಆರ್ಬಿಐ ಮಾರ್ಗಸೂಚಿಯಂತೆ ಅಕ್ಟೋಬರ್ 1ರಿಂದ ದವಾಳಿ ಸಂಹಿತೆಯಡಿ ಹರಾಜು ಪ್ರಕ್ರಿಯೆ ಪ್ರಾರಂಭಿಸಲಾಗುತ್ತದೋ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಇದನ್ನೂ ಓದಿ : ನಿಷ್ಕ್ರಿಯ ಸಾಲ ತ್ವರಿತ ಇತ್ಯರ್ಥಕ್ಕೆ ಮಾರ್ಗಸೂಚಿ ರೂಪಿಸಿದ ಆರ್‌ಬಿಐ

ಇತ್ತೀಚಿನ ಸಂದರ್ಶನವೊಂದರಲ್ಲಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಅವರು, ನೂತನವಾಗಿ ರಚಿತವಾಗಿರುವ ಅಸೆಟ್ ಮ್ಯಾನೆಜ್ಮೆಂಟ್ ಕಂಪನಿಗಳು ದಿವಾಳಿ ಸಂಹಿತೆಯೊಂದಿಗೆ ಹೇಗೆ ಸಮನ್ವಯತೆ ಸಾಧಿಸಿಕೊಂಡು ಹೋಗುತ್ತವೆಂಬುದರ ಬಗ್ಗೆ ಸ್ಪಷ್ಟತೆ ಇಲ್ಲ ಎಂದಿದ್ದರು. ದಿವಾಳಿ ಸಂಹಿತೆ ಮತ್ತು ಅಸೆಟ್ ಮ್ಯಾನೆಜ್ಮೆಂಟ್ ಕಂಪನಿ ಒಟ್ಟಿಗೆ ಕೆಲಸ ಮಾಡುತ್ತವೆಯೋ ಅಥವಾ ಪ್ರತ್ಯೇಕವಾಗಿ ಪರಸ್ಪರ ವಿರುದ್ಧವಾಗಿ ಕೆಲಸ ಮಾಡುತ್ತವೋ ಕಾದು ನೋಡಬೇಕಿದೆ. ಅರವಿಂದ್ ಸುಬ್ರಮಣಿಯನ್ ಅವರ ಅಭಿವ್ಯಕ್ತಿಸಿರುವ ಅನುಮಾನವನ್ನು ಬಹುತೇಕ ತಜ್ಞರು ಅಭಿವ್ಯಕ್ತಿಸಿದ್ದಾರೆ.

ದಿವಾಳಿ ಸಂಹಿತೆ ಕಾನೂನು ಚೌಕಟ್ಟು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ, ಪಿಯುಶ್ ಗೋಯಲ್ ರಚಿಸಿರುವ ಅಸೆಟ್ ಮ್ಯಾನೆಜ್ಮೆಂಟ್ ಕಂಪನಿಗೆ ಯಾವುದೇ ಕಾನೂನು ಚೌಕಟ್ಟು ಇಲ್ಲ. ಈ ಸಂಕೀರ್ಣ ವಿಷಯಗಳ ಬಗ್ಗೆ ಲೋಕಸಭಾ ಅಂದಾಜು ಸಮಿತಿಯು ಗಮನಿಸಲಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More