ಆರಂಭದಲ್ಲಿ ಭಾರೀ ಶಬ್ದ ಮಾಡಿದ ಪ್ರಧಾನಿ ಫೆಲೋಶಿಪ್ ವರ್ಷವಾದರೂ ಮೇಲೆದ್ದಿಲ್ಲ

ಪ್ರಧಾನಮಂತ್ರಿಗಳ ಸಂಶೋಧನಾ ಫೆಲೋಶಿಪ್ ಸ್ವರೂಪವನ್ನು ಗಮನಿಸಿದರೆ, ಉನ್ನತ ವರ್ಗದಾಚೆಗೆ ಇರುವವರು ಅದರ ಪ್ರಯೋಜನ ಪಡೆಯುವುದಕ್ಕೆ ನ್ಯಾಯಯುತ ಅವಕಾಶ ಒದಗಿಸುವುದರ ಬದಲು ಕೇವಲ ಅನುಕೂಲಸ್ಥರಿಗೆ ನೆರವಾಗುವಂತೆ ವಿನ್ಯಾಸಗೊಳಿಸಿ ಎಂದು ದಿ ವೈರ್ ವರದಿ ಮಾಡಿದೆ

ಮೊದಲನೇ ವರ್ಷದಲ್ಲಿ 1,000 ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿಗಳ ಸಂಶೋಧನಾ ಫೆಲೋಶಿಪ್ (ಪಿಎಂಆರ್‌ಎಫ್) ನೀಡುವುದಾಗಿ ಆಶ್ವಾಸನೆ ಕೊಡಲಾಗಿತ್ತಾದರೂ ಅದರ ಪ್ರಯೋಜನ ವಾಸ್ತವದಲ್ಲಿ ಸಿಕ್ಕಿದ್ದು ಕೇವಲ 135 ವಿದ್ಯಾರ್ಥಿಗಳಿಗೆ ಮಾತ್ರ; ಅದರಲ್ಲೂ ಅನ್ವಯಿಕ ವಿಜ್ಞಾನ ಸಂಶೋಧನೆಗಾಗಿ ಸಲ್ಲಿಕೆಯಾದ ಅರ್ಜಿಗಳತ್ತ ವಿಶೇಷ ಒಲವು (ಶೇಕಡ 96.3) ನೀಡಲಾಗಿದೆ.

ಪಿಎಚ್‍ಡಿ ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸುವ ಉದ್ದೇಶದಿಂದ ಭಾರತ ಸರ್ಕಾರವು ಪ್ರಧಾನಮಂತ್ರಿಗಳ ಸಂಶೋಧನಾ ಫೆಲೋಶಿಪ್ (ಪಿಎಂಆರ್‌ಎಫ್) ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಡಿಯಲ್ಲಿ ಪ್ರತೀ ವರ್ಷ ದೇಶದ ಪ್ರತಿಷ್ಠಿತ ಸರ್ಕಾರಿ ವಿದ್ಯಾಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ 1000 ವಿದ್ಯಾರ್ಥಿಗಳಿಗೆ ಗುಣಮಟ್ಟದ ಸಂಶೋಧನೆಗಾಗಿ ಸಾಕಷ್ಟು ಹಣ ನೀಡುವ ಉದ್ದೇಶವಿದೆ. ಆದರೆ, ಈ ವರ್ಷ, ಅಂದರೆ ಈ ಕಾರ್ಯಕ್ರಮ ಪ್ರಾರಂಭವಾದ ಮೊದಲ ವರ್ಷದಲ್ಲೇ, ಕೇವಲ 135 ವಿದ್ಯಾರ್ಥಿಗಳನ್ನು ಮಾತ್ರ ಫೆಲೋಶಿಪ್‍ಗಾಗಿ ಆಯ್ಕೆ ಮಾಡಲಾಗಿದೆ. ನಾವಿಬ್ಬರೂ ಪಿಎಚ್‍ಡಿ ವಿದ್ಯಾರ್ಥಿಗಳೂ ಹಾಗೂ ಈ ‘ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲೇ ಹಿಂದೆ ಓದಿದವರೂ ಆಗಿದ್ದು ಈ ವಿದ್ಯಾರ್ಥಿವೇತನದ ಬಗ್ಗೆ ಇಲ್ಲಿ ವಿಶ್ಲೇಷಣೆ ಮಾಡಿದ್ದೇವೆ ಎಂದು ಲೇಖನದ ಬರೆದಿರುವ ಕ್ಷಿತಿ ಮಿಶ್ರಾ ಮತ್ತು ಕೃಷ್ಣಾ ಅನುಜನ್‌ ವಿವರಿಸಿದ್ದಾರೆ.

ಪಿಎಂಆರ್‌ಎಫ್ ವೆಬ್‍ಪುಟ ಹೇಳುವಂತೆ, “ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮತ್ತು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‍ಸಿ) ಸಂಸ್ಥೆಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಆದ್ಯತೆಗಳ ಮೇಲೆ ಒತ್ತು ಕೊಟ್ಟು ಉತ್ಕೃಷ್ಟ ಗುಣಮಟ್ಟದ ಸಂಶೋಧನೆ ನಡೆಸುವುದಕ್ಕಾಗಿ ದೇಶದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಕರ್ಷಿಸುವುದು ಈ ಯೋಜನೆಯ ಉದ್ದೇಶವಾಗಿದೆ.” ಎನ್ನುತ್ತಾರೆ.

ಈ ಯೋಜನೆಯಡಿಯಲ್ಲಿ ಸಂಶೋಧನೆ ಕೈಗೆತ್ತಿಕೊಳ್ಳುವ ವಿದ್ಯಾರ್ಥಿಗಳಿಗೆ ಬಹಳ ಉದಾರವಾಗಿ ಸ್ಕಾಲರ್‌ಶಿಪ್‌ ನೀಡಲಾಗುತ್ತದೆ. ಐಐಇಎಸ್‍ಟಿ, ಐಐಎಸ್‍ಸಿ, ಐಐಟಿ, ಎನ್‍ಐಟಿ, ಐಐಎಸ್‍ಆರ್ ಮತ್ತು ಕೇಂದ್ರ ಸರ್ಕಾರದ ಅನುದಾನದಲ್ಲಿ ನಡೆಯುವ ಐಐಐಟಿ ಸಂಸ್ಥೆಗಳಲ್ಲಿ ಪದವಿ ಅಧ್ಯಯನ ಮಾಡುತ್ತಿರುವ 1000 ವಿದ್ಯಾರ್ಥಿಗಳನ್ನು ಪ್ರತೀ ವರ್ಷ ಆಯ್ಕೆ ಮಾಡಿ ಅವರನ್ನು ಐಐಟಿ ಅಥವಾ ಐಐಎಸ್‍ಸಿ ಸಂಸ್ಥೆಗಳಲ್ಲಿ ಪೂರ್ಣಾವಧಿ ಪಿಎಚ್‍ಡಿ ಅಧ್ಯಯನಕ್ಕಾಗಿ ಕಳಿಸಲಾಗುತ್ತದೆ. ಈ ಯೋಜನೆಯಡಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮೊದಲೆರಡು ವರ್ಷ ತಿಂಗಳಿಗೆ 70,000 ರೂಪಾಯಿ ಸ್ಕಾಲರ್‌ಶಿಪ್‌ ನೀಡಲಾಗುತ್ತದೆ. ಇಂತಹ ಒಂದು ಪ್ರತಿಷ್ಠಿತ ಸಂಸ್ಥೆಯಲ್ಲೇ ನಾವು ಮೂರು ವರ್ಷಗಳ ಹಿಂದೆ ಅಕೆಡೆಮಿಕ್ ಶಿಕ್ಷಣದ ಬಗ್ಗೆ ತುಂಬಾ ಭರವಸೆಯಿಟ್ಟುಕೊಂಡು ಪದವಿ ಶಿಕ್ಷಣ ಮುಗಿಸುತ್ತಿದ್ದಾಗ ಉದಾರವಾಗಿ ಸ್ಕಾಲರ್‌ಶಿಪ್‌ ನೀಡುವ ಇಂತಹ ಒಂದು ಯೋಜನೆ ರೋಮಾಂಚನವುಂಟು ಮಾಡುತ್ತಿತ್ತೇನೋ. ಆದರೆ, ಇಂದು ನಮ್ಮ ಪಿಎಚ್‍ಡಿ ಸಂಶೋಧನೆಗಳಲ್ಲಿ ಕುತ್ತಿಗೆ ತನಕ ಮುಳುಗಿರುವ ನಮಗೆ ಇದರ ಬಗ್ಗೆ ಹಲವು ಅನುಮಾನಗಳೆದ್ದಿವೆ. ಅದಕ್ಕೆ ಕಾರಣ ‘ಕೈಗೆಟುಕದ ದ್ರಾಕ್ಷಿ ಹುಳಿ’ ಎಂಬಂತೆ ಈ ಸ್ಕಾಲರ್‌ಶಿಪ್‌ ನಮಗೆ ಸಿಗಲಿಲ್ಲವಲ್ಲ ಎಂಬುದಷ್ಟೇ ಅಲ್ಲ ಕ್ಷಿತಿ ಮಿಶ್ರಾ ಮತ್ತು ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

ಇದು ಒಳ್ಳೆಯ ಸುದ್ದಿಯೋ ಅಥವಾ ಕೆಟ್ಟ ಸುದ್ದಿಯೋ?

ಇದು ಒಳ್ಳೆಯ ಸುದ್ದಿಯೆ. ದೇಶದಲ್ಲಿ ವಿಜ್ಞಾನಕ್ಕಾಗಿ ನೀಡುತ್ತಿರುವ ಹಣದ ಪ್ರಮಾಣದ ವರ್ಷದಿಂದ ವರ್ಷಕ್ಕೆ ಏರುತ್ತಾ ಸಾಗಿದೆ. ಹಲವು ವರದಿಗಳ ಪ್ರಕಾರ ಈ ಹಣಕಾಸು ಪ್ರಮಾಣವು ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಶೇಕಡ 0.7 ರಿಂದ ಶೇಕಡ 0.8ರಷ್ಟಿದೆ. ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಾಗುತ್ತಿರುವ ವಿದ್ಯಾರ್ಥಿಗಳ ಮತ್ತು ಸಂಶೋಧಕರ ಸಂಖ್ಯೆಗೆ ಹೋಲಿಸಿದರೆ ವಿಜ್ಞಾನ ಕ್ಷೇತ್ರಕ್ಕೆ ನೀಡುತ್ತಿರುವ ಈ ಹಣ ಸಾಕಾಗುವುದಿಲ್ಲ. ಈ ಹಿನ್ನೆಲೆಯಲ್ಲಿ, ಪಿಎಂಆರ್‌ಎಫ್ ಅಡಿಯಲ್ಲಿ ಉದಾರವಾಗಿ ಹಣ ನೀಡುತ್ತಿರುವುದು ಸ್ವಾಗತಾರ್ಹವಾಗಿದೆ.

ಇತರ ಕ್ಷೇತ್ರಗಳಿಗೆ ಹೋಲಿಸಿದರೆ ವಿಜ್ಞಾನ ಕ್ಷೇತ್ರದಲ್ಲಿ ಸೃಷ್ಟಿಯಾಗುವ ಉದ್ಯೋಗಾವಕಾಶಗಳು ಕಡಿಮೆ; ಆದರೂ ವಿಜ್ಞಾನ ಕ್ಷೇತ್ರದಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳುವುದಕ್ಕೆ ವಿದ್ಯಾರ್ಥಿಗಳಿಗೆ ಈ ರೀತಿಯ ಫೆಲೋಶಿಪ್‍ಗಳು ಉತ್ತೇಜನ ನೀಡುತ್ತವೆ. ವಿಜ್ಞಾನ ಬೇಕೆಂದರೆ ಅದಕ್ಕೆ ತಕ್ಕುದಾದ ಬೆಲೆ ತೆರಬೇಕಾಗುತ್ತದೆ. ಪಿಎಂಆರ್‌ಎಫ್ ಥರದ ಸ್ಕಾಲರ್‌ಶಿಪ್ ಸಿಕ್ಕರೆ ಸಂಶೋಧನಾ ನಿರತ ವಿದ್ಯಾರ್ಥಿಗಳು ತಮ್ಮ ಕುಟುಂಬಗಳಿಗೆ ಹೊರೆಯಾಗುವುದರ ಬದಲು ಅವುಗಳನ್ನು ಸಾಕುವುದಕ್ಕೆ ನೆರವಾಗುತ್ತದೆ. ಸಾಮಾನ್ಯವಾಗಿ ಸ್ಕಾಲರ್‍ಷಿಪ್‍ಗಳನ್ನು ಆಡಳಿತಾಂಗವೇ ತೀರಾ ಪರೋಕ್ಷ ಪ್ರಯೋಜನಗಳಿಗಾಗಿ ಅಥವಾ ಅತ್ಯಗತ್ಯವಲ್ಲದ ಮೂಲಸೌಕರ್ಯ ಅಭಿವೃದ್ಧಿಗಾಗಿ ಖರ್ಚುಮಾಡಿಬಿಡುತ್ತದೆ. ಆದರೆ, ಪಿಎಂಆರ್‌ಎಫ್ ಸ್ಕಾಲರ್‌ಶಿಪ್‌ ಇಂತಹ ಆಡಳಿತಾತ್ಮಕ ಅಡೆತಡೆಗಳನ್ನು ನಿವಾರಿಸಿ ಸ್ಕಾಲರ್‌ಶಿಪ್ ಹಣ ನೇರವಾಗಿ ವಿದ್ಯಾರ್ಥಿಗಳ ಕೈಗೆ ಸಿಗುವಂತೆ ನೋಡಿಕೊಳ್ಳುತ್ತದೆ. ವಿದ್ಯಾರ್ಥಿಗಳ ಕೈಗೇ ನೇರವಾಗಿ ಹಣ ಸಿಗುವುದರಿಂದ ಕಾಲಕ್ಕೆ ಸರಿಯಾಗಿ ಹಣ ಸಿಗದೇ ವಿದ್ಯಾರ್ಥಿಗಳು ತೊಂದರೆ ಅನುಭವಿಸುವುದು ತಪ್ಪುತ್ತದೆ.

ಸಂಶೋಧನಾ ಪ್ರಸ್ತಾವದ ಆಧಾರದಲ್ಲಿ ಈ ಸ್ಕಾಲರ್‍ಷಿಪ್ ನೀಡುವುದರಿಂದ ಭವಿಷ್ಯದಲ್ಲಿ ಸ್ವತಂತ್ರ ಅಕೆಡೆಮಿಕ್ ಸಾಮರ್ಥ್ಯದಲ್ಲಿ ಉತ್ತಮ ಸ್ಕಾಲರ್‌ಶಿಪ್ ಪ್ರಸ್ತಾವದ ಬರೆಹಗಳು ಬರುವುದಕ್ಕೆ ಸಾಧ್ಯವಾಗುತ್ತದೆ. ನಮ್ಮಲ್ಲಿ ಬಹುತೇಕರಿಗೆ ಪಿಎಚ್‍ಡಿ ಮಾಡುವಾಗಲೇ ಇಂತಹ ಬಹುಮುಖ್ಯ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳುವುದಕ್ಕೆ ಅವಕಾಶ ದೊರೆಯಲಿಲ್ಲ. ಸಿಎಸ್‍ಐಆರ್ ನೀಡುವ ಕಿರಿಯ ಸಂಶೋಧನಾ ಫೆಲೋಶಿಪ್ ಮೊತ್ತದ ಎರಡು ಪಟ್ಟಿಗಿಂತ ಹೆಚ್ಚಿನ ಮೊತ್ತವನ್ನು ಪಿಎಂಆರ್‌ಎಫ್ ಫೆಲೋಶಿಪ್ ಅಡಿಯಲ್ಲಿ ನೀಡುವುದರಿಂದ ವಿದ್ಯಾರ್ಥಿಗಳು ದೊಡ್ಡ ಮತ್ತು ದಿಟ್ಟ ಸಂಶೋಧನೆಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ಮುಂದಾಗಲು ಇದು ಪ್ರೇರಣೆ ನೀಡುತ್ತದೆ. ಬೇರೆ ದೇಶಗಳ ಪಿಎಚ್‍ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ಹೋಲಿಸಿದರೆ ನಮ್ಮ ದೇಶದ ಸಂಶೋಧನಾ ವಿದ್ಯಾರ್ಥಿಗಳಿಗೆ ವಿಶ್ವದಾದ್ಯಂತ ನಡೆಯುತ್ತಿರುವ ಸಂಶೋಧನೆಗಳ ಬಗ್ಗೆ ಅಷ್ಟಾಗಿ ಗೊತ್ತಿರುವುದಿಲ್ಲ. ಈ ಸ್ಕಾಲರ್‍ಷಿಪ್ ಅಡಿಯಲ್ಲಿ ದೊಡ್ಡ ಮೊತ್ತದ ಹಣ ಸಿಗುವುದರಿಂದ ಹಿಂಜರಿಕೆ ಬಿಟ್ಟು ಸುಸ್ತಾಡುವುದಕ್ಕೆ ಹಾಗೂ ವಿವಿಧ ಸಮ್ಮೇಳನಗಳಲ್ಲಿ ಭಾಗವಹಿಸುವುದಕ್ಕೆ ಅನುಕೂಲವಾಗುತ್ತದೆ. ಇದರಿಂದ ವಿಶ್ವದಾದ್ಯಂತ ನಡೆಯುತ್ತಿರುವ ಸಂಶೋಧನೆಗಳಿಗೆ ತೆರೆದುಕೊಳ್ಳುವುದಕ್ಕೆ ಅನುಕೂಲವಾಗುತ್ತದೆ.

ಈ ಎಲ್ಲಾ ಗುಣಾತ್ಮಕ ಪ್ರಯೋಜನಗಳಿದ್ದರೂ ಇದರಲ್ಲಿ ಕೆಲವು ಗಂಭೀರ ಸಮಸ್ಯೆಗಳೂ ಇದ್ದು ಅವುಗಳ ಕಡೆ ನಾವು ಆಲೋಚಿಸಬೇಕಾಗಿದೆ.

ಲೆಕ್ಕವಿಲ್ಲದ ಹಣ, ನನಸಾಗದ ಕನಸುಗಳು

ಮೊದಲನೆಯ ವಿಷಯ ಏನೆಂದರೆ ಈ ವರ್ಷ ಕೇವಲ 135 ಪೆಲೋಶಿಪ್‍ಗಳನ್ನಷ್ಟೇ ಘೋಷಿಸಲಾಗಿದೆ. ಅಂದರೆ, ಆಶ್ವಾಸನೆ ನೀಡಿದ್ದರಲ್ಲಿ ಕೇವಲ ಶೇಕಡ 10ರಷ್ಟು ಮಾತ್ರ. ಇದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯ ಆಯ್ಕೆಯಾಗುವ ಸಂಭವ ಶೇಕಡ 90ರಷ್ಟು ಕಡಿಮೆಯಾಗುತ್ತದೆ. ಈ ಅವಕಾಶ ವಂಚಿತರು ಸಂಶೋಧನಾ ವಿಷಯವನ್ನು ಗುರುತಿಸುವುದಕ್ಕೆ, ಸಾಹಿತ್ಯಿಕ ಪರಾಮರ್ಶೆ ಮಾಡುವುದಕ್ಕೆ ಮತ್ತು ಸಂಶೋಧನಾ ವಿಧಾನಗಳನ್ನು ಕಂಡುಕೊಳ್ಳುವುದಕ್ಕೆ ಸಾಕಷ್ಟು ಸಮಯ ಮತ್ತು ಶ್ರಮವನ್ನು ವ್ಯಯ ಮಾಡಿದ ವಿದ್ಯಾರ್ಥಿಗಳೇ ಆಗಿರುತ್ತಾರೆ. ತಮ್ಮ ಭವಿಷ್ಯದ ಬಾಗಿಲಲ್ಲಿ ನಿಂತಿರುವ ಇಂತಹ ಯುವ ವಿಜ್ಞಾನಿಗಳಿಗೆ ಈ ರೀತಿ ಮಾಡುವುದು ಅನ್ಯಾಯವಾಗುತ್ತದೆ.

ಇದಲ್ಲದೇ, ಘೋಷಣೆಯಾಗದೇ ಉಳಿದ 865 ಫೆಲೋಶಿಪ್‍ಗಳ ಹಣ ಹೇಗೆ ವಿನಿಯೋಗವಾಗುತ್ತದೆ – ಮತ್ತು ಆ ಹಣವನ್ನು ವೈಜ್ಞಾನಿಕ ಸಂಶೋಧನೆಗಾಗಿಯೇ ಬಳಸಲಾಗುತ್ತದೆಯೇ – ಎಂಬುದು ಬಹಿರಂಗ ಪ್ರಶ್ನೆ. ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಹರ್ಷವರ್ಧನ್ ಅವರು ತಮ್ಮ ಸರ್ಕಾರ ಪ್ರಾರಂಭಿಸಿದ ಅನೇಕ ಹಣಕಾಸು ಅನುದಾನಗಳ ಬಗ್ಗೆ ಮಾತಾಡುತ್ತಲೇ ಇದ್ದಾರೆ. ಆದರೆ, ಯಾರ ಕೈಗೆ ಆ ಹಣ ಸೇರಬೇಕಿತ್ತೋ ಅಂತಹ ವಿಜ್ಞಾನಿಗಳು ಅದಿನ್ನೂ ತಮಗೆ ತಲುಪಿಲ್ಲ ಎಂದು ಹೇಳುತ್ತಿದ್ದಾರೆ. ಸರ್ಕಾರದ ಪ್ರತಿನಿಧಿಗಳು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವುದಕ್ಕೆ ಇದನ್ನು ಬಳಸಿಕೊಳ್ಳುತ್ತಿದ್ದರೆ ಅದು ನಾಚಿಕೆಗೇಡು.

1000 ವಿದ್ಯಾರ್ಥಿಗಳಲ್ಲಿ ಕೇವಲ 135 ವಿದ್ಯಾರ್ಥಿಗಳನ್ನಷ್ಟೇ ಆಯ್ಕೆ ಮಾಡಿರುವುದನ್ನು ನೋಡಿದರೆ ಈಗಾಗಲೇ ನಿರ್ಬಂಧಕಾರಿಯಾಗಿರುವ ಈ ಫೆಲೋಶಿಪ್‍ಗೆ ಇಷ್ಟೊಂದು ಕಠಿಣ ಆಯ್ಕೆಯ ಕ್ರಮ ಏಕೆ ಎಂಬ ಪ್ರಶ್ನೆ ಹುಟ್ಟುತ್ತದೆ. ಐಐಟಿ, ಐಐಇಎಸ್‍ಟಿ, ಐಐಎಸ್‍ಸಿ, ಎನ್‍ಐಟಿ, ಐಐಎಸ್‍ಇಆರ್ ಮತ್ತು ಕೇಂದ್ರದ ಅನುದಾನದಲ್ಲಿ ನಡೆಯುವ ಐಐಟಿ ಸಂಸ್ಥೆಗಳಲ್ಲಿ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಮಾತ್ರವೇ ಇದಕ್ಕೆ ಅರ್ಜಿ ಸಲ್ಲಿಸುವುದಕ್ಕೆ ಅರ್ಹರು ಎಂಬ ನಿಯಮ ಹಾಕಲಾಗಿದೆ. ಇದರಿಂದ ಈಗಾಗಲೇ ಶ್ರೇಣೀಕರಣಗೊಂಡಿರುವ ಭಾರತೀಯ ಅಕೆಡೆಮಿಕ್ ಕ್ಷೇತ್ರದಲ್ಲಿ ಈ ಫೆಲೋಶಿಪ್ ಇನ್ನಷ್ಟು ಪದರುಗಳನ್ನು ಸೇರಿಸುತ್ತದೆ.

ಈ ಫೆಲೋಶಿಪ್‍ಗಾಗಿ ಅರ್ಜಿ ಸಲ್ಲಿಸಿದ 1800 ವಿದ್ಯಾರ್ಥಿಗಳು ತಾವಿರುವ ಹಂತಕ್ಕೆ ಬರುವುದಕ್ಕೆ ಈಗಾಗಲೇ ಹಲವು ಪದರಗಳ ಪರೀಕ್ಷೆಗಳನ್ನು ದಾಟಿ ಬಂದವರಾಗಿರುತ್ತಾರೆ. ಐಐಟಿ ಸಂಸ್ಥೆಯೊಂದರ ವಿದ್ಯಾರ್ಥಿ ಸಂಯೋಜನೆಯನ್ನು ವಿಶ್ಲೇಷಣೆ ಮಾಡಿದರೆ, ಈ ಉನ್ನತ ಸಂಸ್ಥೆಗಳಲ್ಲಿ ಎಲ್ಲಾ ಸಾಮಾಜಿಕ ಮತ್ತು ಆರ್ಥಿಕ ವರ್ಗಗಳ ಸಮಾನ ಪ್ರಾತಿನಿಧ್ಯವಿಲ್ಲ ಎಂಬುದು ಗೊತ್ತಾಗುತ್ತದೆ. ವಿದ್ಯಾರ್ಥಿಯೊಬ್ಬ ಈ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಬೇಕೆಂದರೆ ಹಲವು ಹಂತಗಳಲ್ಲಿ ಅಳವಡಿಸಿರುವ ಸರಣ ಫಿಲ್ಟರುಗಳನ್ನು ದಾಟಿ ಬರಬೇಕಾಗುತ್ತದೆ. ಈ ಫಿಲ್ಟರುಗಳು ಆರ್ಥಿಕ ಮತ್ತು ಜಾತಿ ಅಂತಸ್ತು, ಶಾಲಾ ಶಿಕ್ಷಣದ ಗುಣಮಟ್ಟ, ವಿವಿಧ ಪ್ರವೇಶ ಪರೀಕ್ಷೆಗಳನ್ನು ಪಾಸು ಮಾಡುವುದಕ್ಕೆ ಅಗತ್ಯವಿರುವ ಕೋಚಿಂಗ್ ಪಡೆಯುವ ಸಾಮರ್ಥ್ಯ, ಈ ಶಿಕ್ಷಣ ಸಂಸ್ಥೆಗಳು ವಿಧಿಸುವ ದುಬಾರಿ ಶುಲ್ಕಗಳನ್ನು ಕಟ್ಟುವ ಸಾಮರ್ಥ್ಯ, ಹಾಸ್ಟೆಲ್ ಶುಲ್ಕ, ಊಟ ತಿಂಡಿ ಶುಲ್ಕ ಇತ್ಯಾದಿ ಖರ್ಚುಗಳನ್ನು ನಿಭಾಯಿಸುವ ಶಕ್ತಿ ಮುಂತಾದವುಗಳ ಮೇಲೆ ಆಧರಿಸಿರುತ್ತವೆ. ವಿಶ್ವದರ್ಜೆಯ ಶಿಕ್ಷಣವನ್ನು ಪಡೆಯುವುದಕ್ಕೆ ಭಾರತೀಯ ವಿದ್ಯಾರ್ಥಿಗಳಿಗಿರುವ ಅಸಮಾನ ಅವಕಾಶಗಳನ್ನು ಈ ಫಿಲ್ಟರುಗಳು ಖಾತ್ರಿಪಡಿಸುತ್ತವೆ.

ಈ ಫೆಲೋಶಿಪ್ ಸ್ವರೂಪವನ್ನು ಗಮನಿಸಿದರೆ, ಉನ್ನತ ವರ್ಗದಾಚೆಗಿರುವವರು ಅದರ ಪ್ರಯೋಜನ ಪಡೆಯುವುದಕ್ಕೆ ನ್ಯಾಯಯುತ ಅವಕಾಶ ಒದಗಿಸುವುದರ ಬದಲು ಕೇವಲ ಅನುಕೂಲಸ್ಥರು ಮಾತ್ರ ಅದರ ಪ್ರಯೋಜನ ಪಡೆಯುವುದಕ್ಕೆ ಅನುಕೂಲವಾಗುಂತೆ ಅದನ್ನು ವಿನ್ಯಾಸಗೊಳಿಸಿದಂತೆ ಕಾಣುತ್ತದೆ. ಇಲ್ಲಿ ಉನ್ನತ ವರ್ಗದಾಚೆಯಿರುವ ಯಾವ ವಿದ್ಯಾರ್ಥಿಯೂ ವೈಜ್ಞಾನಿಕ ನಿಸ್ಪಷ್ಟತೆ, ಒಳನೋಟ ಮತ್ತು ಕಟಿಬದ್ಧತೆಗಳನ್ನು ಹೊಂದಿಲ್ಲ ಎಂಬ ತರವಲ್ಲದ ಪೂರ್ವಗ್ರಹ ಇದ್ದಂತೆ ಕಾಣುತ್ತದೆ. ಇನ್ನೊಂದೆಡೆ ನೋಡಿದರೆ, ಅಮೆರಿಕ ಸರ್ಕಾರವು ತನ್ನ ನ್ಯಾಷನಲ್ ಸೈನ್ಸ್ ಫೌಂಡೇಶನ್ ಮೂಲಕ ನೇರವಾಗಿ ವಿದ್ಯಾರ್ಥಿಗಳಿಗೆ ನೀಡುವ ಮಹತ್ವಪೂರ್ಣ ಜಿಆರ್‌ಎಫ್‍ಪಿ ಅನುದಾನಕ್ಕೆ ಎಲ್ಲಾ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಂದಲೂ ಅರ್ಜಿ ಸ್ವೀಕರಿಸುತ್ತದೆ. ನೆರವು ಪಡೆದ ವಿದ್ಯಾರ್ಥಿಗಳು ನಂತರ ತಮ್ಮ ತಮ್ಮ ಕ್ಷೇತ್ರದಲ್ಲಿ ಜಗದ್ವಿಖ್ಯಾತ ನಾಯಕಾಗಿ ಹೊರಹೊಮ್ಮಿದ್ದಾರೆ.

ರಾಷ್ಟ್ರೀಯ ಆದ್ಯತೆಗಳು ಎಂಬ ಅಸ್ಪಷ್ಟತೆ

ನಾವೀಗಾಗಲೇ ಚರ್ಚಿಸಿದಂತೆ ಈ ಫೆಲೋಶಿಪ್‍ಗಾಗಿ ಆಯ್ಕೆಯಾದ ವಿದ್ಯಾರ್ಥಿಗಳು ನಿರ್ದಿಷ್ಟ ಸಂಸ್ಥೆಗಳಲ್ಲಷ್ಟೇ ಸಂಶೋಧನೆ ನಡೆಸಬೇಕು. ಇದನ್ನು ಸಂಶೋಧನೆಗಾಗಿನ ಅನುದಾನ ಎಂದು ಪ್ರಚಾರ ಮಾಡಲಾಗುತ್ತಿದೆಯಾದರೂ ಪಿಎಚ್‍ಡಿ ಸಂಶೋಧನೆಯನ್ನು 23 ಐಐಟಿಗಳ ಪೈಕಿ ಯಾವುದಾದರೊಂದು ಐಐಟಿಯಲ್ಲಿ ಅಥವಾ ಐಐಎಸ್‍ಸಿಯಲ್ಲಿ ಮಾತ್ರ ಪಿಎಚ್‍ಡಿ ಸಂಶೋಧನೆ ಮಾಡಬೇಕು ಎಂಬ ನಿರ್ಬಂಧ ಹೇರಿರುವುದು ವಿಚಿತ್ರ ಎನ್ನಿಸುತ್ತದೆ. ವಿವಿಧ ಐಐಎಸ್‍ಇಆರ್‍ಗಳಲ್ಲಿ ಮತ್ತು ಎನ್‍ಸಿಬಿಎಸ್, ಎನ್‍ಐಓ, ಐಐಟಿಎಂ, ಐಎಸಿಎಸ್, ಆರ್‌ಆರ್‌ಎಫ್‌, ಐಐಟಿಗಳಲ್ಲಿ ಸಂಶೋಧನೆ ನಡೆಸಿದವರಷ್ಟೇ ಉತ್ತಮ ಸಾಮರ್ಥ್ಯ ಹೊಂದಿದವರಾಗಿದ್ದಾರೆ.

ತಾಂತ್ರಿಕ ಧ್ಯೇಯೋದ್ದೇಶಗಳನ್ನು ಹೊಂದಿರುವ ಐಐಟಿ ಸಂಸ್ಥೆಗಳಿಗಿಂತ ಉತ್ತಮವಾದ ಮೂಲಸೌಕರ್ಯ ಮತ್ತು ಅಕಡೆಮಿಕ್ ಸಮುದಾಯಗಳು ಸಂಶೋಧನೆಯೇ ಮೂಲ ಧ್ಯೇಯವಾಗಿರುವ ಈ ಸಂಸ್ಥೆಗಳಲ್ಲಿ ಇರಬೇಕು ಎಂದು ನಾವು ನಿರೀಕ್ಷಿಸಬಹುದು. ನೋಡಲ್ ಸಂಸ್ಥೆಗಳು ಅನ್ವಯಿಕ ವಿಜ್ಞಾನಕ್ಕೆ ವಿಶೇಷ ಒಲವು ತೋರಿಸಿದಂತೆ ಕಾಣುತ್ತದೆ. ಈ ವರ್ಷ ನೀಡಲಾದ ಫೆಲೋಶಿಪ್‍ಗಳ ಮೇಲೆ ಒಮ್ಮೆ ಕಣ್ಣು ಹಾಯಿಸಿದರೂ ಸಾಕು ಇದು ಸ್ಪಷ್ಟವಾಗಿ ಗೋಚರಿಸುತ್ತದೆ. 135 ಘೋಷಿತ ಫೆಲೋಶಿಪ್‍ಗಳಲ್ಲಿ ಕೇವಲ ಐದು ಮಾತ್ರ (ನೀಡಲಾದ ಫೆಲೋಷಿಪ್‍ಗಳಲ್ಲಿ ಶೇಕಡ 3.7ರಷ್ಟು) ಮೂಲ ವಿಜ್ಞಾನದ ಸಂಶೋಧನೆಗೆ ಆಯ್ಕೆಯಾಗಿವೆ, ಎರಡು ಜೀವಶಾಸ್ತ್ರಕ್ಕೆ ಮತ್ತು ಮೂರು ಭೌತಶಾಸ್ತ್ರಕ್ಕೆ.

ನಮ್ಮ “ರಾಷ್ಟ್ರೀಯ ಆದ್ಯತೆಗಳು” ಏನು ಎಂಬ ವಿಶಾಲ ಪ್ರಶ್ನೆಯಡಿಯಲ್ಲಿ ಇದನ್ನು ಮಿಳಿತಗೊಳಿಸಲಾಗಿದೆ. ಅದರೆ, ಅರ್ಜಿಯ ಯಾವ ಮೂಲೆಯಲ್ಲೂ ಇದರ ಬಗ್ಗೆ ವಿವರಣೆ ಇಲ್ಲದ್ದರಿಂದ ಅರ್ಜಿದಾರರಿಗೂ ಇದೊಂದು ಗೋಜಲು.

ಇದನ್ನೂ ಓದಿ : ಮುಖ್ಯಮಂತ್ರಿ ಅನಿಲ ಭಾಗ್ಯದ ಮುಂದೆ ಮಂಕಾದ ಪ್ರಧಾನಮಂತ್ರಿ ಉಜ್ವಲ ಯೋಜನೆ

ಕೃಷಿ ತಂತ್ರಜ್ಞಾನ, ನೌಕಾ ತಾಂತ್ರಿಕತೆ, ಪೆಟ್ರೋಲಿಯಂ ತಾಂತ್ರಿಕತೆ, ಔಷಧೀಯ ಸಂಶೋಧನೆ ಮತ್ತು ಜೈವಿಕವೈದ್ಯಕೀಯ ತಾಂತ್ರಿಕತೆಗಳು ರಾಷ್ಟ್ರೀಯ ಆದ್ಯತೆಗಳಾಗುವುದಕ್ಕೆ ಅರ್ಹವಾಗಿವೆ. ಆದರೆ, ಜೈವಿಕವೈವಿದ್ಯತೆಯ ಸಂರಕ್ಷಣೆ, ನೈಸರ್ಗಿಕ ಸಂಪನ್ಮೂಲಕಗಳ ನಿರ್ವಹಣೆ, ಪ್ರೊಟೀನ್ ಮತ್ತು ಕಿಣ್ವ ಜೀವಶಾಸ್ತ್ರ, ಸಾರ್ವಜನಿಕ ಆರೋಗ್ಯ, ಶುದ್ಧ ಇಂಧನ ಅಥವಾ ಉಷ್ಣವಿದ್ಯುಚ್ಛಕ್ತಿ ಮುಂತಾದ ಕ್ಷೇತ್ರಗಳ ಕುರಿತು ಔಚಿತ್ಯಪೂರ್ಣ ಪ್ರಶ್ನೆಗಳನ್ನು ಕೇಳುವ ವಿದ್ಯಾರ್ಥಿಗಳನ್ನು ಈ ಫೆಲೋಶಿಪ್‍ನಿಂದ ದೂರ ಇಡಲಾಗಿದೆ. ಜಲಯುದ್ಧಗಳು ನಡೆಯುತ್ತಿರುವ, ವೈರಾಣು ರೋಗಗಳು ಸ್ಫೋಟಗೊಳ್ಳುತ್ತಿರುವ ಹಾಗೂ ಜೀವಿಗಳು ವೇಗವಾಗಿ ಕಣ್ಮರೆಯಾಗುತ್ತಿರುವ ಈ ಕಾಲದಲ್ಲಿ ಮೇಲಿನ ಈ ಪ್ರಶ್ನೆಗಳು ಅಷ್ಟೇ ಮುಖ್ಯವಾಗಿಲ್ಲವೆ? ಅನ್ವಯಿಕ ವಿಜ್ಞಾನಗಳು ಸಮಸ್ಯೆಗಳಿಗೆ ತತ್‍ಕ್ಷಣದ ಪರಿಹಾರ ನೀಡಬಹುದು. ಆದರೆ, ಮೂಲ ವಿಜ್ಞಾನದ ಸಂಶೋಧನೆಗಳು ಇವತ್ತು ನಾವು ಮುಂಗಾಣುವುದಕ್ಕೆ ಸಾಧ್ಯವಾಗದ ಸಮಸ್ಯೆಗಳನ್ನು ಪರಿಹರಿಸುವುದಕ್ಕೂ ಭೂಮಿಕೆ ಒದಗಿಸಬಲ್ಲವು.

ಮೂಲ ಸಂಶೋಧನೆಗಿಂತ ವಾಣ ಜ್ಯಿಕ ಸಂಶೋಧನೆಗೆ ಆದ್ಯತೆ ನೀಡುವ ಪರಿಪಾಠವು ದೂರದೃಷ್ಟಿಯಿಲ್ಲದ ಧೋರಣೆಯಾಗಿದೆ ಎಂದು 2015ರ ಯುನೆಸ್ಕೋ ವಿಜ್ಞಾನ ವರದಿ ಅಭಿಪ್ರಾಯಪಟ್ಟಿದೆಯಲ್ಲದೇ ಸಂಶೋಧನೆಗಳು “ಸಾರ್ವಜನಿಕ ಒಳಿತಿನ” ಮೇಲೆ ಗಮನ ನೀಡಬೇಕೆಂದು ಶಿಫಾರಸ್ಸು ಮಾಡಿದೆ. ಭಾರತೀಯ ವೈಜ್ಞಾನಿಕ ಸಮುದಾಯವು ಈಗ ಹಿಂದೆಂದಿಗಿಂತಲೂ ದೊಡ್ಡದಾಗಿಯೂ ಮತ್ತು ವೈವಿಧ್ಯಮಯವಾಗಿಯೂ ಬೆಳೆದಿದೆ. ಜನರಿಗಾಗಿ ವಿಜ್ಞಾನವನ್ನು ಅಭಿವೃದ್ಧಿಪಡಿಸುವುದಕ್ಕಾಗಿ ವಿಶಾಲವಾದ ಮತ್ತು ಎಲ್ಲರನ್ನೂ ಒಳಗೊಳ್ಳುವ ಅನುದಾನ ಯೋಜನೆಯನ್ನು ರೂಪಿಸುವ ಮೂಲಕ ಈ ಜ್ಞಾನಸಾಗರದ ಸದುಪಯೋಗ ಪಡೆದುಕೊಳ್ಳುವುದಕ್ಕೆ ಇದು ಸಕಾಲ.

ಕ್ಷಿತಿ ಮಿಶ್ರ ಅವರು ನೆದರ್‌ಲ್ಯಾಂಡ್‌ನ ರಾಡ್‍ಬೌಡ್ ಯೂನಿವರ್ಸಿಟೆಯಿಟ್‍ನಲ್ಲಿ ಭೌತವಿಜ್ಞಾನದಲ್ಲಿ ಪಿಎಚ್‍ಡಿ ಸಂಶೋಧನೆ ಮಾಡುತ್ತಿದ್ದಾರೆ. ಕೃಷ್ಣ ಅನುಜನ್ ಅವರು ಕೊಲಂಬಿಯ ಯೂನಿವರ್ಸಿಟಿಯಲ್ಲಿ ಉಷ್ಣವಲಯದ ಅರಣ್ಯಪರಿಸರದ ಬಗ್ಗೆ ಪಿಎಚ್‍ಡಿ ಸಂಶೋಧನೆ ಮಾಡುತ್ತಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More