ಶ್ರೇಷ್ಠ ವಿದ್ಯಾಸಂಸ್ಥೆ ಎನಿಸಿಕೊಂಡ ರಿಲಯನ್ಸ್ ಜಿಯೋ ಇನ್ನಷ್ಟೇ ಅಸ್ತಿತ್ವಕ್ಕೆ ಬರಬೇಕಿದೆ!

ಐದು ಶಿಕ್ಷಣ ಸಂಸ್ಥೆಗಳ ಜೊತೆಗೆ ಆರನೇ ಸಂಸ್ಥೆಯಾಗಿ ಜನ್ಮ ಪಡೆಯದ ರಿಲಯನ್ಸ್ ಅಂಗ ಸಂಸ್ಥೆಯೊಂದಕ್ಕೆ ಸರ್ಕಾರ ಶ್ರೇಷ್ಠ ವಿದ್ಯಾಸಂಸ್ಥೆ ಮಾನ್ಯತೆ ನೀಡಿದೆ. ಇದರ ಸಾಧಕ ಬಾಧಕಗಳೇನು? ಶಿಕ್ಷಣ ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ? ಇಲ್ಲಿದೆ ಸ್ಕ್ರಾಲ್ ವರದಿಯ ಸಂಗ್ರಹ ರೂಪ

ಮೂರು ಖಾಸಗಿ ಸಂಸ್ಥೆಗಳು ಸೇರಿದಂತೆ ದೇಶದ ಆರು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೋಮವಾರ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಶ್ರೇಷ್ಠ ವಿದ್ಯಾಸಂಸ್ಥೆ ಮಾನ್ಯತೆ ನೀಡಿದರು.

ಇದರಲ್ಲಿ ಒಂದು ಸಂಸ್ಥೆ ನೀತಾ ಅಂಬಾನಿ ನೇತೃತ್ವದ ರಿಲಯನ್ಸ್ ಫೌಂಡೇಶನ್ ಗೆ ಸೇರಿದ ಜಿಯೋ ಇನ್ ಸ್ಟಿಟ್ಯೂಟ್. ಇದು ದೇಶದ ಅತಿದೊಡ್ಡ ಖಾಸಗಿ ಕಂಪೆನಿಯಾದ ರಿಲಯನ್ಸ್ ನ ಅಂಗಸಂಸ್ಥೆ. ಹೀಗೆ ಮಾನ್ಯತೆ ಪಡೆಯುವ ಮೂಲಕ ಜಿಯೋ ಇನ್ಸ್ ಟಿಟ್ಯೂಟ್ ತಾನು ಅಸ್ತಿತ್ವ ಕಂಡುಕೊಳ್ಳುವ ಮೊದಲೇ ಉನ್ನತ ಶಿಕ್ಷಣ ನಿಯಂತ್ರಣದಿಂದ ಹೆಚ್ಚು ಸ್ವಾತಂತ್ರ್ಯ ಪಡೆಯುವ ಯತ್ನ ನಡೆಸಿದೆ.

ಸರ್ಕಾರದ ಶ್ರೇಷ್ಠ ಉನ್ನತ ವಿದ್ಯಾಸಂಸ್ಥೆ ಎಂಬ ಮಾನ್ಯತೆ ಪಡೆಯುವ ಸಂಸ್ಥೆಗಳು ಅಂತರ್ಶಿಸ್ತೀಯ ಬೋಧನೆಯನ್ನು ಒದಗಿಸಬೇಕು ಮತ್ತು ಹೊಸ ತಂತ್ರಜ್ಞಾನದಲ್ಲಿ ಸಂಶೋಧನೆ ನಡೆಸಲು ಅನುವು ಮಾಡಿಕೊಟ್ಟಿರಬೇಕು. ಅಂತಹ ಸಂಸ್ಥೆಗಳು ವಿಶ್ವ ದರ್ಜೆಯ ಸ್ವದೇಶಿ ಮತ್ತು ವಿದೇಶಿ ವಿದ್ಯಾರ್ಥಿಗಳು ಹಾಗೂ ಬೋಧಕವರ್ಗವನ್ನು ಒಳಗೊಂಡಿರಬೇಕು.

ಜಿಯೋ ಸಂಸ್ಥೆ ಈ ಯಾವುದನ್ನೂ ಹೊಂದಿಲ್ಲ ಮತ್ತು ಅದು ಅಸ್ತಿತ್ವದಲ್ಲೂ ಇಲ್ಲ. ಇಷ್ಟಾದರೂ ಇದು ದೆಹಲಿ ಹಾಗೂ ಬಾಂಬೆಯ ಐಐಟಿ, ಬೆಂಗಳೂರಿನ ಐಐಎಸ್ಸಿ, 1964ರಲ್ಲಿ ಸ್ಥಾಪನೆಯಾದ ರಾಜಸ್ತಾನದ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ 1953ರಲ್ಲಿ ರೂಪುಗೊಂಡ ಕಸ್ತೂರಬಾ ಮೆಡಿಕಲ್ ಕಾಲೇಜು ಆರಂಭಿಸಿದ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿಯೊಂದಿಗೆ ಶ್ರೇಷ್ಠತೆಯ ಮನ್ನಣೆ ಪಡೆದಿದೆ.

ಹತ್ತು ಖಾಸಗಿ ಸಂಸ್ಥೆಗಳು ಸೇರಿದಂತೆ 20 ಶಿಕ್ಷಣ ಸಂಸ್ಥೆಗಳಿಗೆ ಈ ಮಾನ್ಯತೆ ನೀಡಲು ಸರ್ಕಾರ ಮೊದಲು ಚಿಂತಿಸಿತ್ತು. ಆದರೆ ಕೇಂದ್ರದ ಮಾಜಿ ಚುನಾವಣಾ ಆಯುಕ್ತ ಎನ್ ಗೋಪಾಲಸ್ವಾಮಿ ನೇತೃತ್ವದ ನಾಲ್ವರು ಸದಸ್ಯರ ಸಮಿತಿ ಕೇವಲ ಆರು ಸಂಸ್ಥೆಗಳಿಗೆ ಮಾನ್ಯತೆ ನೀಡುವಂತೆ ಶಿಫಾರಸು ಮಾಡಿತು. ಈ ಕುರಿತು ಎಕನಾಮಿಕ್ ಟೈಮ್ಸ್ ಗೆ ಪ್ರತಿಕ್ರಿಯೆ ನೀಡಿರುವ ಅವರು, “ಅರ್ಹತೆಯ ಮಾನದಂಡಗಳನ್ನು ಎಚ್ಚರಿಕೆಯಿಂದ ಪರಿಗಣಿಸಿದ್ದೇವೆ. ಹತ್ತು ವರ್ಷಗಳಲ್ಲಿ ಉನ್ನತ ಜಾಗತಿಕ ಸ್ಥಾನ ಪಡೆಯುವ 20 ಸಂಸ್ಥೆಗಳು ನಮಗೆ ಕಂಡುಬರಲಿಲ್ಲ,” ಎಂದಿದ್ದಾರೆ.

“ಅತಿಹೆಚ್ಚು ಅಕಾಡೆಮಿಕ್ ರ್ಯಾಂಕಿಂಗ್ ಹೊಂದಿರುವ ಅಮೆರಿಕ ಬ್ರಿಟನ್ ಸಂಸ್ಥೆಗಳು ಒಂದು ಶತಮಾನಕ್ಕಿಂತಲೂ ಹೆಚ್ಚಿನ ಇತಿಹಾಸ ಹೊಂದಿವೆ. ಅವುಗಳಿಗೆ ಹೋಲಿಸಿದರೆ ಭಾರತದ ಶಿಕ್ಷಣ ಸಂಸ್ಥೆಗಳು ಪುಟ್ಟ ಅನುಭವ ಹೊಂದಿದ್ದು ಇವುಗಳಲ್ಲಿ ಬಹುತೇಕವು ಅಂಥ ಸಾಧನೆ ಮಾಡುತ್ತವೆ ಎಂದು ಹೇಳಲು ಸಾಧ್ಯವಿಲ್ಲ,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಗುಣಮಟ್ಟ ಕುರಿತಂತೆ ಜಿಯೋ ಮಾನ್ಯತೆ ಗಳಿಸಲು ಅರ್ಹವಲ್ಲ ಎಂದು ಅನೇಕ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ‘ಸ್ಕ್ರಾಲ್’ ನೊಂದಿಗೆ ಅನಿಸಿಕೆ ಹಂಚಿಕೊಂಡಿದ್ದಾರೆ. ಹೆಸರು ಹೇಳಲು ಬಯಸದ ಉತ್ತರ ಭಾರತದ ಪ್ರತಿಷ್ಠಿತ ಖಾಸಗಿ ವಿದ್ಯಾಸಂಸ್ಥೆಯೊಂದರ ಆಡಳಿತ ಮಂಡಳಿಯ ಸದಸ್ಯರೊಬ್ಬರ ಪ್ರಕಾರ “ಯಾವುದೇ ದಾಖಲೆ ಮಾಡಿರದ ಸಂಸ್ಥೆಯೊಂದಕ್ಕೆ ಮಾನ್ಯತೆ ನೀಡಲಾಗಿದೆ. ಇನ್ನೊಂದೆಡೆ ಉತ್ತಮ ದಾಖಲೆ ಹೊಂದಿಲ್ಲದ ಕಾರಣ ನೀಡಿ 20 ಶಿಕ್ಷಣ ಸಂಸ್ಥೆಗಳನ್ನು ದೂರವಿಡಲಾಗಿದೆ. ರಿಲಯನ್ಸ್ ಸೇರ್ಪಡೆಯಲ್ಲಿ ತಂತ್ರಗಾರಿಕೆ ಕೆಲಸ ಮಾಡಿರುವಂತಿದೆ. ರಾಜಸ್ತಾನದ ಶಿಕ್ಷಣ ಸಂಸ್ಥೆಯನ್ನು ಬಿರ್ಲಾ ಆರಂಭಿಸಿದ್ದು ಎಂದು ಸರ್ಕಾರ ವಾದಿಸಬಹುದಾದರೂ ಆರು ಸಂಸ್ಥೆಗಳಲ್ಲಿ ಇದೊಂದು ಊನಗೊಂಡ ಅಂಗದಂತೆ ಕಾಣುತ್ತದೆ” ಎಂದು ಹೇಳಿದ್ದಾರೆ.

ಈ ಸಂಬಂಧ ಗೋಪಾಲಸ್ವಾಮಿ ಅವರಿಗೆ ವಿವರವಾದ ಪ್ರಶ್ನೆಗಳನ್ನು ಸ್ಕ್ರಾಲ್ ಕೇಳಿತ್ತಾದರೂ ಇದುವರೆಗೆ ಅವರಿಂದ ಉತ್ತರ ಬಂದಿಲ್ಲ. ರಿಲಯನ್ಸ್ ಆಯ್ಕೆ ಕುರಿತಂತೆ ಇಡೀ ದಿನ ಸರ್ಕಾರ ತುಟಿ ಬಿಚ್ಚಿರಲಿಲ್ಲ. ಆದರೆ ಸಂಜೆ ಹೊತ್ತಿಗೆ ಪ್ರೆಸ್ ಇನ್ಫರ್ಮೇಷನ್ ಬ್ಯೂರೋದ ಅಧಿಕಾರಿಯೊಬ್ಬರು ಬಿಡುಗಡೆ ಮಾಡಿದ ಆರು ಪುಟಗಳ ದಾಖಲೆಯಲ್ಲಿ ಜಿಯೋಗೆ ಸಂಬಂಧಿಸಿದ ವಿವರಗಳಿವೆ. ‘ವಿಶ್ವದ 100 ವಿಶ್ವವಿದ್ಯಾಲಯಗಳಲ್ಲಿ ಅತಿ ಕಿರಿಯದಾದ ಇದು’ ‘ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿರುವ ವಿಷಯದಲ್ಲಿ ಪರಿಣತಿ ನೀಡುವ ಉದ್ದೇಶ ಹೊಂದಿದೆ’ ಎಂದು ಉಲ್ಲೇಖಿಸಲಾಗಿದೆ. ಇದು ಮೆರಿಟ್ ಆಧಾರಿತ ಪ್ರವೇಶ ನೀಡಲಿದೆ. ಮಾನವಿಕ ಶಾಸ್ತ್ರ, ಎಂಜಿನಿಯರಿಂಗ್, ವೈದ್ಯಕೀಯ, ಕ್ರೀಡೆ, ಕಾನೂನು, ಪ್ರದರ್ಶನ ಕಲೆ, ವಿಜ್ಞಾನ, ನಗರ ಯೋಜನೆ ಸೇರಿದಂತೆ 50 ವಿಷಯಗಳನ್ನು ಬೋಧಿಸುವ 10 ಶಾಲೆಗಳನ್ನು ತೆರೆಯಲಿದೆ ಎಂದು ಹೇಳಲಾಗಿದೆ. ನೂತನ ಸಂಸ್ಥೆಗಳನ್ನು ಕೂಡ ಆಯ್ಕೆ ಮಾಡಲು ಸರ್ಕಾರದ ನೀತಿ ಅವಕಾಶ ಮಾಡಿಕೊಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಯ್ಕೆ ಕುರಿತು ವಿವಾದ ಏಳುತ್ತಿದ್ದಂತೆ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯ ರಾತ್ರಿ 8.30ರ ಹೊತ್ತಿಗೆ ಸ್ಪಷ್ಟನೆಯೊಂದನ್ನು ನೀಡಿತು. “ಜಾಗತಿಕ ದರ್ಜೆಯ ಶಿಕ್ಷಣ ಒದಗಿಸಲು ಜವಾಬ್ದಾರಿಯುತ ಖಾಸಗಿ ಹೂಡಿಕೆದಾರರಿಗೆ ಅನುವು ಮಾಡಿಕೊಡುವುದು ಆ ಮೂಲಕ ದೇಶಕ್ಕೆ ಒಳಿತು ಮಾಡುವುದು, ಹೀಗೆ ಅವಕಾಶ ಕಲ್ಪಿಸಿರುವುದರ ಹಿಂದಿನ ಉದ್ದೇಶ” ಎಂದು ಅದರಲ್ಲಿ ಹೇಳಲಾಗಿದೆ.

ನೂತನ ಸಂಸ್ಥೆಗಳಿಂದ 11 ಅರ್ಜಿಗಳು ಬಂದಿದ್ದವು. ತಜ್ಞರ ಸಮಿತಿ ಇವುಗಳಲ್ಲಿ ಉತ್ತಮವಾದುದದನ್ನು ಆಯ್ಕೆ ಮಾಡಲು, ಜಾಗ ಮತ್ತು ಹಣದ ಲಭ್ಯತೆ, ಅತ್ಯುನ್ನತ ಅರ್ಹತೆ ಹೊಂದಿದ ತಂಡ, ವ್ಯಾಪಕ ಅನುಭವ, ವಾರ್ಷಿಕವಾಗಿ ಪ್ರಗತಿ ಸಾಧಿಸುವ ಕ್ರಿಯಾಯೋಜನೆ ಸೇರಿದಂತೆ ನಾಲ್ಕು ಮಾನದಂಡಗಳನ್ನು ನಿಗದಿಪಡಿಸಿತ್ತು.

“ಮೇಲಿನ ಮಾನದಂಡಗಳನ್ನು ಗಮನಿಸಿದಾಗ ಅರ್ಜಿ ಸಲ್ಲಿಸಿದ 11 ಸಂಸ್ಥೆಗಳಲ್ಲಿ ಜಿಯೋ ಮಾತ್ರ ಎಲ್ಲಾ ಅರ್ಹತೆ ಹೊಂದಿದ್ದು ತಿಳಿದು ಬಂತು. ಹಾಗಾಗಿ ಶ್ರೇಷ್ಠ ವಿದ್ಯಾಸಂಸ್ಥೆಯನ್ನು ಸ್ಥಾಪಿಸಲು ಅನುಮತಿ ಪತ್ರ ನೀಡಲಾಯಿತು” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಆದರೆ ನೀತಿ ದೋಷಪೂರಿತವಾಗಿದೆ ಎಂದು ಆಡಳಿತಾಧಿಕಾರಿಗಳು ಮತ್ತು ಖಾಸಗಿ ಹಾಗೂ ಸಾರ್ವಜನಿಕ ಸಂಸ್ಥೆಗಳ ಶಿಕ್ಷಕರು ಸಹ ಹೇಳಿದ್ದಾರೆ. ಅರ್ಜಿ ಸಲ್ಲಿಸಿದ ಖಾಸಗಿ ವಿಶ್ವವಿದ್ಯಾನಿಲಯದ ಹಿರಿಯ ಅಧಿಕಾರಿಯೊಬ್ಬರು "ಹೊಸ ಸಂಸ್ಥೆಯು ಅಸ್ತಿತ್ವದಲ್ಲಿದ್ದರೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಅಸ್ತಿತ್ವದಲ್ಲಿರದ ಸಂಸ್ಥೆಯೊಂದನ್ನು ಅಸ್ತಿತ್ವದಲ್ಲಿರುವ ಸಂಸ್ಥೆಯ ಗುಣಮಟ್ಟದೊಂದಿಗೆ ಹೋಲಿಸುವುದು ಸರಿ ಕಾಣುತ್ತಿಲ್ಲ,” ಎಂದಿದ್ದಾರೆ.

ವಾಸ್ತವವಾಗಿ ಶಿಕ್ಷಕರು ಮೊದಲಿನಿಂದಲೂ ಪ್ರಸ್ತಾವಿತ ನೂತನ ಸಂಸ್ಥೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಶ್ರೇಷ್ಠತೆ ಮಾನ್ಯತೆ ಪಡೆಯಲು ಅರ್ಜಿ ಸಲ್ಲಿಸಿದ್ದ ನೋಯ್ಡಾ ಮೂಲದ ಶಿಕ್ಷಣ ಸಂಸ್ಥೆಯ ಶಿಕ್ಷಕರೊಬ್ಬರು “ಇದರ ಅರ್ಥವೇನು? ಹಣ ಮತ್ತು ಭೂಮಿ ಹೊಂದಿದವರು ಮಾತ್ರ ಅರ್ಹರು ಎಂಬುದು ಇದರರ್ಥ. ರಿಲಯನ್ಸ್ ಇಂತಹ ಮಾನ್ಯತೆ ಪಡೆಯಬಹುದು ಎಂದು ಪ್ರಾರಂಭದಿಂದಲೂ ಅನ್ನಿಸಿತ್ತು” ಎಂದು ಹೇಳಿದ್ದಾರೆ.

ಖಾಸಗಿ ವಿಶ್ವವಿದ್ಯಾಲಯವೊಂದರ ಉಪಕುಲಪತಿಯೊಬ್ಬರು ಹೇಳುವಂತೆ “ಅನೇಕ ನೂತನ ಸಂಸ್ಥೆಗಳು ಈಗಾಗಲೇ ಅಸ್ತಿತ್ವದಲ್ಲಿರುವಾಗ ಅಸ್ತಿತ್ವದಲ್ಲಿರದ ಸಂಸ್ಥೆಗೆ ಮಾನ್ಯತೆ ನೀಡುವುದು ಸರಿಯಲ್ಲ. ಅಸ್ತಿತ್ವದಲ್ಲಿರದ ಸಂಸ್ಥೆಯನ್ನೂ ಅಸ್ತಿತ್ವದಲ್ಲಿರುವ ಸಂಸ್ಥೆಯನ್ನೂ ಒಂದೇ ವಿಭಾಗದಲ್ಲಿ ಸೇರಿಸಿದ್ದು ಹೇಗೆ? ಅಸ್ತಿತ್ವದಲ್ಲೇ ಇರದ ಸಂಸ್ಥೆಯೊಂದಿಗೆ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳನ್ನು ಹೋಲಿಸಿದ್ದಾದರೂ ಹೇಗೆ?” ಎಂದು ಪ್ರಶ್ನಿಸುತ್ತಾರೆ.

ಸ್ಕ್ರಾಲ್ ಈ ಸಂಬಂಧ ರಿಲಯನ್ಸ್ ಸಂಸ್ಥೆಗೆ ಸುದೀರ್ಘವಾದ ಪತ್ರ ಬರೆದಿದ್ದರೂ ಇದುವರೆಗೆ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ.

2016ರಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡುವ ಪ್ರಸ್ತಾವನೆ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಂದ ಆರಂಭವಾಯಿತು. ಆಗ ಖಾಸಗಿ ಮತ್ತು ಸರ್ಕಾರಿ ವಲಯದ 20 ಸಂಸ್ಥೆಗಳನ್ನು ಆಯ್ಕೆ ಮಾಡಿ ಅವುಗಳಿಗೆ ಸ್ವಾಯತ್ತತೆ ನೀಡುವುದು, ಉನ್ನತ ಶಿಕ್ಷಣ ನಿಯಂತ್ರಕ ಸಂಸ್ಥೆ ಯುಜಿಸಿಯಿಂದಲೂ ಅವುಗಳನ್ನು ಹೊರಗಿಡುವುದು ಎಂದು ಯೋಜಿಸಲಾಗಿತ್ತು. 2017ರಲ್ಲಿ ನಿಯಮವಾಗಿ ರೂಪುಗೊಂಡ ನೀತಿಯು 10 ಸಾವಿರ ಕೋಟಿ ರುಪಾಯಿವರೆಗೆ ಬಂಡವಾಳ ಹೂಡಬಲ್ಲ ಸಾಮರ್ಥ್ಯ ಹೊಂದಿರುವ ಹತ್ತು ‘ಟು ಬಿ ಡೀಮ್ಡ್ ವಿಶ್ವವಿದ್ಯಾಲಯಗಳಿಗೆ” ಮಾತ್ರ ಮಾನ್ಯತೆ ನೀಡಲು ನಿರ್ಧರಿಸಿತು.

ನಿಯಮಾವಳಿಗಳ ನಾಲ್ಕನೇ ವಿಧಿಯ ಪ್ರಕಾರ ಆಯ್ಕೆಯಾದ ವಿದ್ಯಾಸಂಸ್ಥೆಗಳು ಮುಂದಿನ ಐದರಿಂದ 15 ವರ್ಷದೊಳಗಾಗಿ ಶ್ರೇಷ್ಠ ವಿದ್ಯಾಸಂಸ್ಥೆಯ ಎಲ್ಲಾ ಅರ್ಹತೆಗಳನ್ನೂ ಪಡೆಯತಕ್ಕದ್ದು. ಬಹುಶಿಸ್ತೀಯ ಅಥವಾ ಅಂತರ್ ಶಿಸ್ತೀಯ ಹಾಗೂ ವಿದೇಶಿ ಅಥವಾ ವಿದೇಶದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳನ್ನು ಅವು ಹೊಂದಿರತಕ್ಕದ್ದು. ಮಾನ್ಯತೆ ಪಡೆದ ಹೊತ್ತಿನಲ್ಲಿ ಪ್ರತಿ 20 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರು ಇರಬೇಕು. ಮುಂದಿನ ಐದು ವರ್ಷಗಳಲ್ಲಿ ಪ್ರತಿ 10 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕನನ್ನು ನೇಮಕ ಮಾಡಿಕೊಳ್ಳಬೇಕು ಇತ್ಯಾದಿ ಸಂಗತಿಗಳನ್ನು ಹೇಳುತ್ತದೆ.

ಆಯ್ಕೆಯಾದ ಸಂಸ್ಥೆಗಳು ಉನ್ನತ ಶಿಕ್ಷಣದ ಎಲ್ಲಾ ನಿಯಂತ್ರಣಗಳು ಹಾಗೂ ರಾಜ್ಯ ಸರ್ಕಾರಗಳ ವಿಶ್ವವಿದ್ಯಾಲಯ ಕಾಯ್ದೆಗಳಿಂದ ಮುಕ್ತವಾಗಲಿದ್ದು ಯೋಜನೆಯಡಿಯ ನಿಯಮಗಳಿಗೆ ಮಾತ್ರ ಒಳಪಡಲಿವೆ. ಇದು ಅಸ್ತಿತ್ವದಲ್ಲಿರುವ ಮತ್ತು ಅಸ್ತಿತ್ವಪಡೆಯಲಿರುವ ಸಂಸ್ಥೆಗಳೆರಡಕ್ಕೂ ಅನ್ವಯವಾಗಲಿದೆ ಎಂದು ಪಿಐಬಿ ಅಧಿಕಾರಿ ವಿವರಿಸಿದ್ದಾರೆ.

ಜಾಗತಿಕ ವಿಶ್ವವಿದ್ಯಾಲಯದ ರ್ಯಾಂಕಿಂಗ್ ಪಟ್ಟಿಯಲ್ಲಿ ಈ ಸಂಸ್ಥೆಗಳು ಸ್ಥಾನ ಪಡೆಯುವುದು ಅತಿಮುಖ್ಯ. ವಿದೇಶಿ ಬೋಧಕರನ್ನು ನೇಮಿಸಿಕೊಳ್ಳಲು, ವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಸ್ವಾತಂತ್ರ್ಯವನ್ನು ಅವು ಹೊಂದಿವೆ. ಶ್ರೇಷ್ಠ ವಿದ್ಯಾಸಂಸ್ಥೆ ಮಾನ್ಯತೆ ಪಡೆಯಲು ಖಾಸಗಿ ಸಂಸ್ಥೆಗಳು ಸರ್ಕಾರಿ ಅನುದಾನ ಕೇಳುವಂತಿಲ್ಲ ಎನ್ನುತ್ತವೆ ಯುಜಿಸಿಯ ನಿಯಮಗಳು.

ಇದನ್ನೂ ಓದಿ : ರಿಲಯನ್ಸ್ ಜಿಯೋ ತಂತ್ರಕ್ಕೆ ಏರ್ಟೆಲ್, ಐಡಿಯಾ ತೀವ್ರ ಕುಸಿತ; ಸೆನ್ಸೆಕ್ಸ್ ಜಿಗಿತ

ಕೇವಲ ಮೂರು ಖಾಸಗಿ ಸಂಸ್ಥೆಗಳನ್ನು ಆಯ್ಕೆ ಮಾಡಿರುವುದಕ್ಕೆ ಕೂಡ ಅಸಮಾಧಾನ ವ್ಯಕ್ತವಾಗಿದೆ. “ಈಗಾಗಲೇ ಸಾಧನೆ ಮಾಡಿರುವ ಮೂರು ಸಂಸ್ಥೆಗಳ ಬದಲಿಗೆ ಸಾಧನೆಗೆ ತೊಡಗಲು ಉದ್ದೇಶಿಸಿರುವ 10 ಸಂಸ್ಥೆಗಳನ್ನು ಆಯ್ಕೆ ಮಾಡಬೇಕಿತ್ತು. ಸರಿಯಾದ ಮಾದರಿಯೊಂದಿಗೆ ಸರಿಯಾದ ಸಂಸ್ಥೆಗಳನ್ನು ಆಯ್ಕೆ ಮಾಡಬೇಕಿತ್ತು. ಕಡೆಗೆ ರಿಲಯನ್ಸ್ ಗೆ ಮಾನ್ಯತೆ ನೀಡಲು ತಜ್ಞರ ಸಮಿತಿ ನಿರ್ಧರಿಸಿರುವಂತಿದೆ” ಎಂದು ಕುಲಪತಿಯೊಬ್ಬರು ತಿಳಿಸಿದ್ದಾರೆ.

“ಪೂರ್ವ ಏಷ್ಯಾ ದೇಶಗಳನ್ನು ಗಮನದಲ್ಲಿಟ್ಟುಕೊಂಡು ವಿಶ್ವದರ್ಜೆಯ ವಿದ್ಯಾಸಂಸ್ಥೆಗಳನ್ನು ರೂಪಿಸುವ ದೊಡ್ಡ ಅವಕಾಶ ನೀಡಬೇಕಿತ್ತು. ಆದರೆ ಕೇವಲ ಆರು ಸಂಸ್ಥೆಗಳು ಮಾತ್ರ ಶ್ರೇಷ್ಠ ಶಿಕ್ಷಣ ನೀಡುತ್ತವೆ ಎಂದು ಬಿಂಬಿಸುವುದು ಸರಿಯಲ್ಲ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More