ವಿಶ್ವದ ಅತಿ ಕಡಿಮೆ ಬೆಲೆಯ ನ್ಯಾನೊ ಕಾರಿಗೆ ಟಾಟಾ ಹೇಳಿದ ಟಾಟಾ ಕಂಪನಿ

ದಶಕದ ಹಿಂದೆ ವಿಶ್ವದ ಅತಿ ಕಡಮೆ ದರದ ಕಾರೆಂಬ ಹೆಗ್ಗಳಿಕೆ ಪಡೆದು ಭಾರಿ ಸುದ್ದಿ ಮಾಡಿದ್ದ ಟಾಟಾ ನ್ಯಾನೊ ಇತಿಹಾಸ ಸೇರುತ್ತಿದೆ. ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿ ಆಗದ ನ್ಯಾನೊ ಕಾರು ಟಾಟಾ ಸಮೂಹಕ್ಕೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಜೂನ್ ತಿಂಗಳಲ್ಲಿ ಬಿಕರಿಯಾಗಿದ್ದು ಒಂದೇ ನ್ಯಾನೊ!

ಟಾಟಾ ನ್ಯಾನೊ ಮಾರುಕಟ್ಟೆಗೆ ಬಂದಾಗ ಆಟೋಮೊಬೈಲ್ ಕ್ಷೇತ್ರದಲ್ಲೊಂದು ದೊಡ್ಡ ಕ್ರಾಂತಿಯನ್ನು ನಿರೀಕ್ಷಿಸಲಾಗಿತ್ತು. ನ್ಯಾನೊ ಹುಟ್ಟುಹಾಕಿದ್ದ ನಿರೀಕ್ಷೆ ಬೃಹತ್ ಪ್ರಮಾಣದಲ್ಲಿತ್ತು. ನ್ಯಾನೊ ಘೋಷಣೆ ಮಾಡಿದಾಗ ಲಕ್ಷಾಂತರ ಮಂದಿ ಹೊಸ ಕಾರಿಗಾಗಿ ಬುಕ್ ಮಾಡಿದ್ದರು. ಏಕೆಂದರೆ ಬುಕ್ ಮಾಡಿದವರಿಗೆಲ್ಲ ಒಂದೇ ಲಕ್ಷ ರುಪಾಯಿಗೆ ಕಾರು ನೀಡುವುದಾಗಿ ಟಾಟಾ ಕಂಪನಿ ಹೇಳಿತ್ತು. ಸುಮಾರು ಒಂದು ಲಕ್ಷ ಕಾರುಗಳನ್ನು ಟಾಟಾ ಕಂಪನಿ ಗ್ರಾಹಕರಿಗೆ ಒಂದೇ ಲಕ್ಷ ರುಪಾಯಿಗೆ ನೀಡಿತ್ತು.

2008ರಲ್ಲಿ ಎಲ್ಲೆಲ್ಲೂ ಟಾಟಾ ನ್ಯಾನೊದೇ ಮಾತು. ಅದರ ಬಗ್ಗೆಯೇ ಚರ್ಚೆ. ಆದರೆ, ನ್ಯಾನೊ ಸೃಷ್ಟಿಸಿದ ಕ್ರೇಜ್ ಬಹಳ ಕಾಲ ಇರಲಿಲ್ಲ. ಮೊದಲನೆಯದಾಗಿ ಕಾರುಕೊಂಡ ಮಾಲೀಕರಿಗೆ ಯಾಕೋ ಏನೋ ತಾವು ಕಾರು ಮಾಲೀಕರಾದ ಬಗ್ಗೆ ಹೆಮ್ಮೆ ಅನ್ನಿಸಲೇ ಇಲ್ಲ. ನ್ಯಾನೊ ಕಾರಿನ ಸೋಲು ಆ ಕಾರಿನ ಮಾಲೀಕರ ಹೆಮ್ಮೆಯಿಲ್ಲದ ಭಾವನೆಯಿಂದಲೇ ಆರಂಭವಾಯಿತು.

ನ್ಯಾನೊ ಕಾರು ತಾಂತ್ರಿಕವಾಗಿ ಎಷ್ಟೇ ಉನ್ನತವಾಗಿದ್ದರೂ ಟೆಸ್ಟ್ ಕ್ರ್ಯಾಶ್ ನಲ್ಲಿ ಸೋತಿತ್ತು. ಕಾರು ಅಪಘಾತವಾದಾಗ ಕಾರಿನಲ್ಲಿದ್ದವರು ಎಷ್ಟು ಸುರಕ್ಷಿತರಾಗಿತ್ತಾರೆ ಎಂಬುದನ್ನು ಕಂಡುಕೊಳ್ಳಲು ಕ್ರ್ಯಾಶ್ ಟೆಸ್ಟ್ ಮಾಡಲಾಗುತ್ತದೆ. ಮಾರುಕಟ್ಟೆಗೆ ಬರುವ ಪ್ರತಿಯೊಂದು ವಾಹನಗಳು ಇಂತಹ ಟೆಸ್ಟ್ ಗೆ ಒಳಪಡುತ್ತವೆ. ಕ್ರ್ಯಾಶ್ ಟೆಸ್ಟ್ ನಲ್ಲಿ ಸಣ್ಣ ಕಾರುಗಳು ಬಹುತೇಕ ಫೇಲಾಗುತ್ತವೆ. ಆದರೆ, ಮಾಲಿಕರಿಗೆ ಹೆಮ್ಮೆ ಎನಿಸುವಲ್ಲಿ ನ್ಯಾನೊ ಫೇಲಾಗಿ ಬಿಟ್ಟಿತ್ತು. ಅದು ಏಕೆಂದರೆ, ಪ್ರತಿಯೊಂದರ ಬೆಲೆಯನ್ನು ಅಳೆದು ತೂಗಿದ ನಂತರವೇ ಖರೀದಿ ಮಾಡುವ ಭಾರತೀಯರ ಪ್ರವೃತ್ತಿ ನ್ಯಾನೊ ವಿಚಾರದಲ್ಲಿ ವಿಚಿತ್ರವಾಗಿ ಮತ್ತು ವೈರುಧ್ಯವಾಗಿ ರೂಪುಗೊಂಡಿತು.

ಟಾಟಾ ಕಾರು ಮಾಲೀಕರ ಬಗ್ಗೆ ಜನರ ಭಾವನೆ ಕೂಡ ಬದಲಾಯಿತು. ನ್ಯಾನೊ ಮಾಲಿಕರು ಕಾರು ಕೊಳ್ಳುವಷ್ಟು ಆರ್ಥಿಕವಾಗಿ ಸದೃಢರಾಗಿಲ್ಲ. ಆ ಕಾರಣಕ್ಕೆ ನ್ಯಾನೊ ಕೊಂಡಿದ್ದಾರೆಂಬ ಭಾವನೆ ಬರತೊಡಗಿತು. ನ್ಯಾನೊ ಕಾರಿನ ಹಿಂಭಾಗ ಅಷ್ಟೇನೂ ಚಂದವಾಗಿರಲಿಲ್ಲ. ತ್ರಿಚಕ್ರ ಆಟೋದ ಸುಧಾರಿತ ರೂಪವಾಗಿ ಕಾಣತೊಡಗಿತು. ಆರಂಭದಲ್ಲಿ ಒಂದು ಲಕ್ಷಕ್ಕೆ ನ್ಯಾನೊ ಮಾರಾಟ ಮಾಡುತ್ತಿದ್ದ ಟಾಟಾ ಕಂಪನಿ ವೆಚ್ಚ ಏರಿದ ಪರಿಣಾಮ ದರ ಏರಿಸಿತು. ದರ ಏರಿಸಿದ ನಂತರವೂ ಬೇಡಿಕೆ ಇತ್ತಾದರೂ ಅಲ್ಲಲ್ಲಿ ಚಲಿಸುತ್ತಿದ್ದ ಕಾರಿಗೆ ಬೆಂಕಿ ಹತ್ತಿಕೊಂಡ ಸುದ್ದಿಗಳು ಗ್ರಾಹಕರಲ್ಲಿ ಆತಂಕ ಮೂಡಿಸಿದವು.

ರತನ್ ಟಾಟಾ ಅವರು ಕನಸುಕಂಡಂತೆ ನ್ಯಾನೊ ಯಶಸ್ಸು ಗಳಿಸಲಿಲ್ಲ. ಒಂದು ಕಡೆ ದರ ಏರುತ್ತ ಹೋಯಿತು. ಜನರ ಮನಸ್ಸಿನಲ್ಲಿ ಕಾರೇ ಕೊಳ್ಳುವಾಗ ನ್ಯಾನೊ ಏಕೆ ಉತ್ತಮ ಕಾರನ್ನೇ ಕೊಳ್ಳುವ ಎಂಬ ಭಾವನೆ ಬೆಳೆಯಿತು. ನ್ಯಾನೊಗೆ ಪರ್ಯಾಯವಾಗಿ ಮಾರುತಿ ಕಂಪನಿಯ ಆಲ್ಟೋ, ಮಾರುತಿ 800, ಕೆ 10 ಲಭ್ಯವಿದ್ದವು. ಆಲ್ಟೋ ಜಗತ್ತಿನ ಅತಿ ಹೆಚ್ಚು ಮಾರಾಟವಾಗುವ ಸಣ್ಣ ಕಾರೆಂಬ ಹೆಗ್ಗಳಿಕೆ ಪಡೆದಿತ್ತು.

ನಂತರದ ದಿನಗಳಲ್ಲಿ ಟಾಟಾ ನ್ಯಾನೊ ಬಹುತೇಕ ಫ್ಲಾಪಾಯಿತು. ದರವು ಏರಿತು. ಕಾರ್‌ವಾಲೆ.ಕಾಂ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ ಟಾಟಾ ನ್ಯಾನೊಎಕ್ಸ್ಎಂ ಆನ್ ರೋಡ್ ದರ 3.68 ಲಕ್ಷ ರುಪಾಯಿ. ಇತ್ತೀಚೆಗೆ ಬಂದ ನ್ಯಾನೊ ಜೆನ್ಎಕ್ಸ್ ದರ 3.06 ಲಕ್ಷ ರುಪಾಯಿ. ಅದೇ ಮಾರುತಿ ಸುಜುಕಿ ಆಲ್ಟೊ 800 ದರ 3.68 ಲಕ್ಷ ರುಪಾಯಿ. ನ್ಯಾನೊ ದರದ ಆಜುಬಾಜಿನಲ್ಲಿ ಆಲ್ಟೋ, ಕ್ವಿಡ್ ಮತ್ತಿತರ ಆಯ್ಕೆಗಳಿವೆ.

2017ರ ಜೂನ್ ತಿಂಗಳಲ್ಲಿ ಟಾಟಾ ನ್ಯಾನೊ 275 ಮಾರಾಟವಾಗಿದ್ದವು. 2018 ಜೂನ್ ತಿಂಗಳಲ್ಲಿ ಒಂದೇ ಒಂದು ನ್ಯಾನೊ ಕಾರು ಮಾರಾಟವಾಗಿದೆ. ಈಗಿನ ಪರಿಸ್ಥಿತಿಯಲ್ಲಿ 2019ರ ನಂತರವೂ ಟಾಟಾ ಮುಂದುವರಿಸುವುದು ಸಾಧ್ಯವಿಲ್ಲ ಎಂದು ಟಾಟಾ ಕಂಪನಿ ಒಪ್ಪಿಕೊಂಡಿದೆ. ಭಾರತದಂತಹ ಮಾರುಕಟ್ಟೆಯಲ್ಲಿ ಅತಿಕಡಮೆ ದರದ ಕಾರು ತಿಂಗಳಿಗೆ ತಿಂಗಳಿಗೆ 275 ಮಾರಾಟವಾಗುತ್ತದೆ ಎಂಬ ಕಾರಣವೇ ಸಾಕು ಆ ಕಾರಿನ ಉತ್ಪಾದನೆ ನಿಲ್ಲಿಸಲು. ಈಗ ತಿಂಗಳಿಗೆ ಒಂದೇ ಒಂದು ಕಾರು ಮಾರಾಟವಾಗಿದೆ ಎಂದರೆ ಅದು ನಿಂತಂತಯೇ!

ಭಾರತದ ಜನರೆಲ್ಲರೂ ಕಾರಿನಲ್ಲೇ ಸಂಚರಿಸುವಂತಾಗಬೇಕು ಎಂಬುದು ರತನ್ ಟಾಟಾ ಅವರ ಕನಸಾಗಿತ್ತು. ಬದಲಾಗುತ್ತಿದ್ದ ಭಾರತೀಯರ ಖರೀದಿ ಪ್ರವೃತ್ತಿ ಮತ್ತು ಸುಧಾರಿಸುತ್ತಿದ್ದ ಭಾರತೀಯ ಕುಟುಂಬಗಳ ಗಳಿಕೆ ಕುರಿತಂತೆ ರತನ್ ಟಾಟಾ ಅವರು ಅಂದಾಜಿಸುವಲ್ಲಿ ವಿಫಲರಾದರು. ನ್ಯಾನೊ ಸೋತಿದೆ ಆದರೆ, ಇಡೀ ಭಾರತೀಯ ಆಟೊಮೊಬೈಲ್ ಉದ್ಯಮ ಬೃಹತ್ ಪ್ರಮಾಣದಲ್ಲಿ ಬೆಳೆದಿದೆ. ಮಾರುತಿ ಸುಜುಕಿ ಕಂಪನಿಯು ತನ್ನ ಸಣ್ಣ ಕಾರುಗಳ ಮಾರಾಟ ಮಾಡುತ್ತಲೇ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ವರ್ಗದಲ್ಲಿ ತನ್ನ ಪಾಲು ಹೆಚ್ಚಿಸಿಕೊಂಡಿದೆ. ಆ ವರ್ಗದಲ್ಲಿ ಟಾಟಾ ಸಹ ತನ್ನ ಪಾಲು ಕಳೆದುಕೊಂಡಿದೆ.

ಇದನ್ನೂ ಓದಿ : ಟಾಟಾ ಟೆಲಿಸರ್ವೀಸಸ್ ಸ್ಥಿರ ದೂರವಾಣಿ ಖರೀದಿಸಲಿದ್ದಾರೆ ಅದರದ್ದೇ ಉದ್ಯೋಗಿಗಳು!

ಜನರ ಆರ್ಥಿಕ ಶಕ್ತಿ ಸದೃಢಗೊಂಡಂತೆ ಖರೀದಿ ಪ್ರವೃತ್ತಿಯೂ ಬದಲಾಗಿದೆ. ಎಸ್‌ಯುವಿ ವರ್ಗದ ಕಾರುಗಳ ಮಾರಾಟ ತ್ವರಿತಗತಿಯಲ್ಲಿ ಏರುತ್ತಿದೆ. ಸಣ್ಣ ಕಾರುಗಳ ಮಾರಾಟವೂ ಮುಂದುವರಿದಿದೆ. ಆದರೆ, ಕಳೆದ ನಾಲ್ಕು ವರ್ಷಗಳಲ್ಲಿ ಎಸ್ ಯುವಿ ಮಾರಾಟ ದುಪ್ಪಟ್ಟಾಗುತ್ತಿದೆ. ಹಿಂದೆಲ್ಲ ಸಣ್ಣ ಕಾರಿನಲ್ಲೇ ತೃಪ್ತಿ ಹೊಂದುತ್ತಿದ್ದವರು ಈಗ ಎಸ್‌ಯುವಿಗಳತ್ತ ಕಣ್ಣು ಹಾಯಿಸುತ್ತಿದ್ದಾರೆ. ಜನರ ಆದಾಯವೂ ಹೆಚ್ಚಿದಂತೆ ಕಾರುಗಳನ್ನು ಮೇಲ್ದರ್ಜೆಗೆ ಏರಿಸಿಕೊಳ್ಳುವ ಪ್ರವೃತ್ತಿ ಪ್ರಾರಂಭವಾಗಿದೆ. ಕಾರು ನಮ್ಮ ಜನರ ಆರ್ಥಿಕ ಶಕ್ತಿಯ ಪ್ರತಿಬಿಂಬವಾಗಿದೆ. ಹೀಗಾಗಿ ನ್ಯಾನೊ ಖರೀದಿಸಿ ಯಾರೂ ತಾವು ಬಡವರೆಂದು ಘೋಷಿಸಿಕೊಳ್ಳ ಬಯಸುತ್ತಾರೆ.

ರತನ್ ಟಾಟಾ ಅವರು ಈ ಅಂಶವನ್ನು ಗ್ರಹಿಸುವಲ್ಲಿ ವಿಫಲರಾದರೇ ಅಥವಾ ರತನ್ ಟಾಟಾ ಅವರ ಆಶಯವನ್ನು ಜನರೇ ಸ್ಪಂದಿಸಲಿಲ್ಲವೇ? ನಮ್ಮ ಆರ್ಥಿಕತೆ ಬೆಳವಣಿಗೆ ನಮ್ಮ ಖರೀದಿ ಪ್ರವೃತ್ತಿ ಬದಲಿಸಿತೇ? ಟಾಟಾ ನ್ಯಾನೊ ಜನರ ಕಾರಾಗುವಲ್ಲಿ ವಿಫಲವಾಯಿತೇ? ಈ ಎಲ್ಲ ಪ್ರಶ್ನೆಗಳ ನಡುವೆಯೂ ನ್ಯಾನೊಗೆ ಟಾಟಾ ಕಂಪನಿ ಟಾಟಾ ಹೇಳುತ್ತಿದೆ. ಆದರೆ, ನ್ಯಾನೊ ಇಡೀ ಜಾಗತಿಕ ಆಟೋಮೊಬೈಲ್ ಉದ್ಯಮಕ್ಕೆ ಒಂದು ಜೀವಂತ ಪಾಠದಂತಿದೆ. ಕಾರು ಯಾವತ್ತೂ ಪ್ರತಿಷ್ಠೆಯ ಸಂಕೇತ. ಅದು ಚಿಕ್ಕದೇ ಆಗಲೀ, ದೊಡ್ಡದೇ ಆಗಲೀ, ಸಸ್ತಾ ಕಾರೆಂದರೆ ಯಾರೂ ಕೊಳ್ಳರು!

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More