ಪೂರ್ಣ ಚಂದ್ರಗ್ರಹಣದ ಸತ್ಯಗಳೇನು: ಜ್ಯೋತಿಷಿಗಳು ಸೃಷ್ಟಿಸಿದ ಮಿಥ್ಯೆಗಳೇನು?

ಜ್ಯೋತಿಷಿ ಮಹಾಶಯನೊಬ್ಬ ದೇವೇಗೌಡರ ಕುಟುಂಬದಲ್ಲಿ ವಿಪ್ಲವ ಸಂಭವಿಸುತ್ತದೆಂದು ಭವಿಷ್ಯ ನುಡಿದು, ಅದಕ್ಕೆ ಗ್ರಹಣದ ‘ನಂಟು’ಕಟ್ಟಿದ್ದಾನೆ. ಇದು ‘ರಕ್ತ ಚಂದ್ರಗ್ರಹಣ’ ಆದ್ದರಿಂದ ಕಾಶ್ಮೀರ ಹಾಗೂ ದೇಶದ ಕೆಲವು ಭಾಗಗಳಲ್ಲಿ ಉಗ್ರರ ದಾಳಿ, ರಕ್ತಪಾತ, ಸಾವು-ನೋವು ಎಂದು ಹತ್ತು ಹಲವು ಮಿಥ್ಯೆಗಳನ್ನು ಪಸರಿಸಲಾಗುತ್ತಿದೆ

ಚಂದ್ರ ಗ್ರಹಣ, ಸೂರ್ಯ ಗ್ರಹಣ ಇತ್ಯಾದಿ ಖಗೋಳ ಚಮತ್ಕಾರಗಳು ಆಗಾಗ ಆಗುವುದು, ನೆರಳು-ಬೆಳಕಿನ ಬೆರಗು ಸಂಭವಿಸುವುದು ಖಗೋಳ ತಜ್ಞರು ಮತ್ತು ತಾರಾಲೋಕದ ಸತ್ಯಾನ್ವೇಷಕರಿಗೆ ಸದಾ ಅಧ್ಯಯನ ವಿಷಯ. ಇಂಥ ಕುತೂಹಲಗಳ ಬಗ್ಗೆ ಅವರೆಲ್ಲ ಸದಾ ತೆರೆದ ಕಣ್ಣಾಗಿರುತ್ತಾರೆ. ಆಕಾಶ ಕಾಯಗಳ ಬಗೆಗಿನ ಹೊಸ ಹೊಸ ಸತ್ಯಗಳನ್ನು ಆವಿಷ್ಕರಿಸಲು ಹವಣಿಸುತ್ತಾರೆ. ಆದರೆ, ಗ್ರಹಣ ಹಿಡಿಯುವುದು-ಬಿಡುವುದೆನ್ನುವುದು ಕೆಲವರ ಪಾಲಿಗೆ ಈ ಕಾಲದಲ್ಲೂ ‘ಮೌಢ್ಯ’ವನ್ನು ಬಿತ್ತುವ, ಜನರನ್ನು ಭೀತಿಗೆ ತಳ್ಳಿ ಹೊಟ್ಟೆಹೊರೆದುಕೊಳ್ಳುವ ಅಸ್ತ್ರದಂತಾಗಿದೆ.ಸೂರ್ಯ,ಚಂದ್ರರಿಗೆ ‘ಸ್ಪರ್ಶಿಸಿದ’ ಗ್ರಹಣ ಬಿಟ್ಟರೂ,ಇಂಥವರ ತಲೆಗೆ ಹಿಡಿದ ‘ಮೌಢ್ಯ ಗ್ರಹಣ’ ಯಾವತ್ತೂ ಬಿಡದೆನ್ನುವುದು ಈಗ ಮತ್ತೊಮ್ಮೆ ನಿಜವಾಗುತ್ತಿದೆ.

ಪ್ರಜ್ವಲಿಸುವ ಸೂರ್ಯ ಇದ್ದಕ್ಕಿದ್ದಂತೆ ಮರೆಯಾಗಿ, ಹಗಲಲ್ಲೆ ಕತ್ತಲು ಆವರಿಸುವುದು; ರಾತ್ರಿಯ ಚಂದಿರ ಹಲವು ವರ್ಣಗಳನ್ನೆತ್ತುವುದು, ಈ ಗ್ರಹಗಳನ್ನು ರಾಹುವೋ-ಕೇತುವೋ ನುಂಗುತ್ತಿದೆ ಮತ್ತು ಕೆಲವು ಹೊತ್ತಿನ ನಂತರ ‘ಬಿಡುತ್ತದೆ’ ಎಂದು ಭ್ರಮಿಸುವುದು, ಹಾಗೆ ನುಂಗುವ ಕಾಲ ಅಪವಿತ್ರವಾದುದು ಮತ್ತು ಬಿಡುಗಡೆ ಮಾಡಿದ ನಂತರ ಎಲ್ಲವನ್ನೂ ‘ಶುದ್ಧಿ’ ಮಾಡಿಕೊಳ್ಳಬೇಕೆನ್ನುವುದು ಖಗೋಳ ಜ್ಞಾನ ವಿಸ್ತರಿಸದ ಹಿಂದಿನ ಕಾಲದಲ್ಲಿ ಸಹಜವೇ ಆಗಿತ್ತು. ಆದರೆ, ಗ್ರಹಣಕ್ಕೆ ಕಾರಣವೇನು, ಅದರ ಹಿಂದಿನ ಖಗೋಳ ಸತ್ಯಗಳೇನು ಎನ್ನುವ ಕುರಿತ ವೈಜ್ಞಾನಿಕ ಅರಿವು ವ್ಯಾಪಕವಾಗಿ ಹರಡಿರುವ ವರ್ತಮಾನದಲ್ಲೂ ಅನಾದಿ ಕಾಲದ ಮೂಢ ನಂಬುಗೆಗಳನ್ನು ಹೇರುವವರು ಹೆಚ್ಚುತ್ತಿರುವುದರಿಂದ ಬಹುಸಂಖ್ಯೆಯ ಜನ ಗ್ರಹಣ ಸಂಬಂಧಿ ಭಯಗಳಿಂದ ಮುಕ್ತರಾಗಿಲ್ಲ.

ಇದೇ ಜುಲೈ 27-28 ರ ಮಧ್ಯರಾತ್ರಿ ನಡೆಯುವ ಅಪೂರ್ವ ಖಗೋಳ ಚಮತ್ಕಾರವನ್ನು ಆನಂದಿಸಲು ಖಗೋಳ ಕುತೂಹಲಿಗಳು ತುದಿಗಾಲ ಮೇಲೆ ನಿಂತಿದ್ದರೆ, ನಿಸರ್ಗ ವಿದ್ಯಮಾನಕ್ಕೆ ತದ್ವಿರುದ್ಧ ನೆಲೆಯಲ್ಲಿ ಭಯ ಬಿತ್ತುವವರು ಮತ್ತೊಮ್ಮೆ ಸಕ್ರೀಯರಾಗಿದ್ದಾರೆ.“ಆ ದಿನ ಅತ್ಯಂತ ಕೆಟ್ಟದು.ಘಾತುಕ ಘಟನೆಗಳು ಸಂಭವಿಸಲಿವೆ. ಗ್ರಹಣಾನಂತರ ದೇಶ,ರಾಜ್ಯದಲ್ಲೆಲ್ಲ ಅಲ್ಲೋಲ ಕಲ್ಲೋಲ ನಡೆದು ಹೋಗುತ್ತದೆ.ಅಂದು ಜನ ಮನೆ ಬಿಟ್ಟು ಹೊರ ಬರಬಾರದು,’’ಎಂದು ಹಬ್ಬಿಸಲಾಗುತ್ತಿದೆ. ಕೆಲವು ಟಿ ವಿ ಜ್ಯೋತಿಷಿಗಳಿಗಂತೂ ಭಯಂಕರ ಭಯ ಬಿತ್ತುವುದೇ ಕಾಯಕ. ಸತ್ಯ ಹೇಳುವುದಕ್ಕಿಂತ ಭೀತಿಗೆ ತಳ್ಳಿ ಜನರನ್ನು ಸೆಳೆಯುವುದು ಸುಲಭ ಎನ್ನುವುದನ್ನು ‘ಟಿಆರ್‌ಪಿ’ ತಂತ್ರವನ್ನಾಗಿಸಿಕೊಂಡಿರುವ ವಾಹಿನಿಗಳಿಗೂ ‘ಭಯಂಕರ’ ಜ್ಯೋತಿಷಿಗಳ ಅಸಂಬದ್ಧ ಮಾತುಗಳೇ ಅರ್ಧ ತಾಸಿನ ‘ಗ್ರಹಣ ವಿಶೇಷ’ಕ್ಕೆ ಬಂಡವಾಳ. ತಮ್ಮ ತಲೆಗೆ ಶಾಶ್ವತ ಗ್ರಹಣ ಹಿಡಿಸಿಕೊಂಡವರು ಹೇಳಿದ ಭವಿಷ್ಯ ನುಡಿಗಳಾದರೂ ಹೇಗಿವೆ ನೋಡಿ:

  • ಗ್ರಹಣ ಮಕರ ರಾಶಿಯಲ್ಲಿ ಸಂಭವಿಸುವುದರಿಂದ ಉಳಿದ ಹಲವು ರಾಶಿ,ನಕ್ಷತ್ರದವರ ಮೇಲೂ ಮಾರಕ ಪರಿಣಾಮ ನಿಶ್ಚಿತ. ಕೆಲ ರಾಶಿಯವರಿಗೆ ದೋಷ ಫಲ ಹೆಚ್ಚು.ಸಕಲ ಜೀವರಾಶಿಗಳಿಗೂ ಕೇಡು ತಪ್ಪಿದಲ್ಲ.
  • ಕೇತುಗ್ರಸ್ತ ಚಂದ್ರ ಗ್ರಹಣವಾದ ಕಾರಣ ರವಿಯ ಬೆಳಕು ಬೀಳದೆ ಚಂದ್ರ ದುರ್ಬಲವಾಗುತ್ತದೆ.ಆದ್ದರಿಂದ, ಜಾತಕದಲ್ಲಿ ಚಂದ್ರ ದುರ್ಬಲವಾಗಿರುವವರ ಮನಸ್ಸು,ಮೆದುಳಿನ ಮೇಲೆ ಮಾರಕ ಪರಿಣಾಮ ಬೀರುತ್ತದೆ.
  • ಸಮುದ್ರದ ಮೇಲೂ ಗ್ರಹಣ ಪರಿಣಾಮವಿದೆ. ವಿಪರೀತ ಮಳೆಯಾಗಿ,ಸಮುದ್ರದ ಅಲೆಗಳು ಹೆಚ್ಚುತ್ತವೆ.
  • ರಾಜ್ಯದ ರಾಜಕೀಯ ಸ್ಥಿತಿ,ರಾಜ್ಯಸರಕಾರದ ಭವಿಷ್ಯಕ್ಕೂ ಗ್ರಹಣ ಗಂಡಾಂತರ ಕಾದಿದೆ.ಗ್ರಹಣಾನಂತರ ಸರಕಾರ ಬಿದ್ದುಹೋಗುವ ಸಾಧ್ಯತೆಯಿದೆ. ಮುನಿಸು ಬಿಟ್ಟು,ತಾಳ್ಮೆಯಿಂದ ವರ್ತಿಸುವುದಷ್ಟೆ ಪರಿಹಾರ.
  • ಇಷ್ಟು ಮಾತ್ರವಲ್ಲ, ಜ್ಯೋತಿಷಿ ಮಹಾಷಯನೊಬ್ಬ ಎಚ್‌ ಡಿ ದೇವೇಗೌಡರ ಕುಟುಂಬದಲ್ಲಿ ವಿಪ್ಲವ ಸಂಭವಿಸುತ್ತದೆಂದು ಭವಿಷ್ಯ ನುಡಿದು,ಅದಕ್ಕೆ ಗ್ರಹಣದ “ನಂಟು’’ಕಟ್ಟಿದ್ದಾನೆ. ಇದು ‘ರಕ್ತ ಚಂದ್ರಗ್ರಹಣ’ ಆದ್ದರಿಂದ ಕಾಶ್ಮೀರ ಹಾಗೂ ದೇಶದ ಕೆಲವು ಭಾಗಗಳಲ್ಲಿ ಉಗ್ರರ ದಾಳಿ, ಹಿಂಸಾಚಾರ ಹೆಚ್ಚಳವಾಗಿ ರಕ್ತಪಾತ, ಸಾವು-ನೋವು ಸಂಭವಿಸುತ್ತದಂತೆ. ಆಹಾರ ಸೇವನೆ, ಆಚರಣೆ, ಒಳಿತು-ಕೆಡುಕುಗಳ ವಿಷಯದಲ್ಲಿಯೂ ಹತ್ತು ಹಲವು ಮಿಥ್ಯೆಗಳನ್ನು ಪಸರಿಸಲಾಗುತ್ತಿದೆ.

ಪ್ರಾಥಮಿಕ ಶಾಲೆಯ ಪಠ್ಯಗಳಲ್ಲೇ ಉಲ್ಲೇಖವಾಗಿರುವ ಪ್ರಕಾರ, ಸೂರ್ಯ ಮತ್ತು ಚ೦ದ್ರರ ನಡುವೆ ಸರಳರೇಖೆಯಲ್ಲಿ ಭೂಮಿ ಬಂದು, ಅದರ ಛಾಯೆ ಚಂದ್ರನ ಮೇಲೆ ಬೀಳುವ ಸಂದರ್ಭ ‘ಚಂದ್ರ ಗ್ರಹಣ’ ಎನ್ನಿಸಿಕೊಳ್ಳುತ್ತದೆ. ಭೂಮಿಯ ಛಾಯೆ ಚ೦ದ್ರನ ಮೇಲೆ ಬಿದ್ದಾಗ ಚ೦ದ್ರನು ಸ೦ಪೂರ್ಣ ಮರೆಯಾದರೆ ಅದು ಪೂರ್ಣಚ೦ದ್ರಗ್ರಹಣ. ಚ೦ದ್ರನ ಸ್ವಲ್ಪ ಭಾಗ ಮರೆಯಾದರೆ ಅದು ಭಾಗಶಃ ಚ೦ದ್ರಗಹಣ.ಸೂರ್ಯ ಮತ್ತು ಭೂಮಿಯ ನಡುವೆ ಚ೦ದ್ರ ಬ೦ದು ಸೂರ್ಯನು ಕೆಲಕಾಲ ಮರೆಯಾಗುವುದು ಸೂರ್ಯಗ್ರಹಣ. ಚ೦ದ್ರನ ಛಾಯೆಯು ಬೀಳುವ ಭೂಮಿಯ ಆ ಭೂಭಾಗದಲ್ಲಿ ನಾವು ಇದ್ದರಷ್ಟೆ ಗ್ರಹಣ ಗೋಚರಿಸುತ್ತದೆ. ಸೂರ್ಯ ಸ೦ಪೂರ್ಣ ಮರೆಯಾದರೆ ಪೂರ್ಣಸೂರ್ಯಗ್ರಹಣ. ಸ್ವಲ್ಪ ಭಾಗವಷ್ಟೆ ಕಾಣದಾದರೆ ಭಾಗಶಃ ಸೂರ್ಯಗ್ರಹಣ. ಹೀಗೆ, ಸೂರ್ಯ-ಚಂದ್ರ-ಭೂಮಿಯ ಚಲನೆಗೆ ತಕ್ಕಂತೆ ಜಗತ್ತಿನ ಹಲವು ದೇಶಗಳಲ್ಲಿ ಕಾಣಿಸಿಕೊಳ್ಳುವ ಈ ಖಗೋಳ ಬೆರಗಿಗೂ,ಇಲ್ಲಿ ನಡೆಯುವ ರಾಜಕೀಯ, ಸಾಮಾಜಿಕ, ಪ್ರಾಕೃತಿಕ “ವಿಕೋಪ’’ಗಳಿಗೂ ನಂಟೇನು ಎಂದು ಕೇಳಿದರೆ ಜ್ಯೋತಿಷಿ ಸೋಗಿನ ಕಪಟಿಗಳು ಸ್ಪಷ್ಟ ಉತ್ತರ ನೀಡಲಾರರು. ಅಡ್ಡೇಟಿನ ಮೇಲೊಂದು ಗುಡ್ಡೇಟು ಎನ್ನುವ ರೀತಿಯಲ್ಲಿ ಅವರು ನುಡಿಯುವ “ಭವಿಷ್ಯ ವಾಣಿ’’ಗಳು ಮೇಲ್ನೋಟಕ್ಕೇ ಅಸಂಬದ್ಧ ಪ್ರಲಾಪ, ತಲೆಬುಡವಿಲ್ಲದ ಅವೈಜ್ಞಾನಿಕ ತರ್ಕಗಳಂತೆ ಕಂಡರೂ ಸಾಮಾನ್ಯ ಜನರು ‘ಭಯ’ಕ್ಕೆ ಬಲಿಬಿದ್ದು, ‘ಗ್ರಹಣ ಗಂಡಾಂತರ ಪರಿಹಾರ’ಕ್ಕೆ ಮುಂದಾಗುತ್ತಿದ್ದಾರೆ. ಇದರಿಂದಾಗಿ, “ಗ್ರಹಣಗಳು ಖಗೋಳ ಕುತೂಹಲಗಳಷ್ಟೆ. ಭಯ ಬೇಕಿಲ್ಲ,’’ಎನ್ನುವ ತಜ್ಞರ ಖಚಿತ ಪ್ರತಿಪಾದನೆಗಳಿಗಿಂತ ಮೌಢ್ಯ- ವಾದಗಳೇ ಮೇಲುಗೈ ಪಡೆಯುತ್ತಿವೆ.

ಜು.27 ರಂದು ಮೈಸೂರಿನಲ್ಲಿ ನಿಗದಿಯಾಗಿದ್ದ ಪ್ರಮುಖ ಕಾರ್ಯಕ್ರಮವೊಂದನ್ನು ಇಂಥದೇ ಕಾರಣದಿಂದ ಸಂಘಟಕರು ಮುಂದೂಡಿದ್ದಾರೆ. ಹಲವು ಹಿನ್ನೆಲೆಯ ವಿಚಾರವಂತರಿರುವ ಈ ಸಂಘಟನೆ ಕಾರ್ಯಕ್ರಮ ಮುಂದೂಡಿಕೆಗೆ ನೀಡಿದ ಕಾರಣ: “ಕಾರ್ಯಕ್ರಮಕ್ಕೆ ಬರಲೊಪ್ಪಿದ್ದ ಅತಿಥಿ ಗಣ್ಯರೆಲ್ಲ ಅಂದು ಚಂದ್ರ ಗ್ರಹಣ ಇರುವ ಕಾರಣ ಬರಲ್ಲ ಎಂದಿದ್ದಾರೆ.’’ ಕಾರ್ಯಕ್ರಮ ‌ಆಯೋಜನೆ ಸಂದರ್ಭವೇ ಅಂದು ಪೌರ್ಣಿಮೆ; ಚಂದ್ರಗ್ರಹಣವಿದೆ ಎನ್ನುವುದು ಗೊತ್ತಿತ್ತಂತೆ. ಆದರೆ,ಅದರ ಪರಿಣಾಮ ಇಷ್ಟೊಂದು ಕೆಟ್ಟದಾಗಿರುತ್ತದೆನ್ನುವುದು ಅವರಿಗೆ ತಿಳಿದಿರಲಿಲ್ಲವಂತೆ. “ಟಿ ವಿ ಮತ್ತಿತರ ಮಾಧ್ಯಮಗಳಲ್ಲಿ ಜ್ಯೋತಿಷಿಗಳು ಗ್ರಹಣಕ್ಕೆ ಕೆಟ್ಟ ಪರಿಣಾಮ ಆರೋಪಿಸಿದ್ದರಿಂದಲೇ ಇರಬೇಕು, ಕಾರ್ಯಕ್ರಮಕ್ಕೆ ಬರುತ್ತೇವೆಂದಿದ್ದ ಅತಿಥಿಗಳು ಕೈ ಕೊಟ್ಟರು,’’ ಎಂದು ಸಂಘಟಕರೊಬ್ಬರು ಬೇಸರಿಸಿದರು. ಅಂದರೆ,ಅನಾದಿ ಕಾಲದ ಗ್ರಹಣ ಭಯವು ಆಧುನಿಕ ಕಾಲದ ಸಾಮಾನ್ಯ ಜನ ಮತ್ತು ಮುಗ್ಧರನ್ನಷ್ಟೆ,ವಿದ್ಯಾವಂತ ಮೂಢರನ್ನೂ ಕಾಡುತ್ತಿದೆ ಎಂದಾಯಿತು.

ಇದನ್ನೂ ಓದಿ : ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಮಸೂದೆಯಲ್ಲಿ ಏನಿದೆ? ಏನಿಲ್ಲ?

ಇಂಥ ಅಸಂಬದ್ಧಗಳಿಗೆ ಕಿವಿ, ಮೆದುಳನ್ನು ಕೊಡದೆ, ಖಗೋಳ ಕುತೂಹಲಕ್ಕೆ ಕಣ್ಣು ತೆರೆಯುವರಿಗಾಗಿ “ದಿ ಸ್ಟೇಟ್,’’ ಈ ವಿಸ್ಮಯದ ಒಂದಷ್ಟು ವಿಶೇಷ ಮತ್ತು ಮಹತ್ವಗಳನ್ನಿಲ್ಲಿ ಪಟ್ಟಿ ಮಾಡಿದೆ.

1. ಖಗೋಳ ಶಾಸ್ತ್ರಜ್ಞರ ಪ್ರಕಾರ,ಪ್ರತಿ ಚಂದ್ರಗ್ರಹಣ ಗ್ರಹಣಾಂತರ ಆವರ್ತಕ್ಕೆ (Saros cycle‌) ತಕ್ಕಂತೆ ನಿಗದಿಯಾಗಿರುತ್ತದೆ. ಸೂರ್ಯ, ಭೂಮಿ, ಚಂದ್ರನ ಪುನರಾವರ್ತಿತ ಸ್ಥಾನಗಳನ್ನಾಧರಿಸಿ ಈ ಆವರ್ತಕವನ್ನು 18 ವರ್ಷ ಅಥವಾ 223 “ಸಂಯೋಗ ಮಾಸ’’ (Synodic months) ಎಂದು ವ್ಯಾಖ್ಯಾನಿಸಲಾಗಿದೆ.

ಜು.27/28ರ ಚಂದ್ರಗ್ರಹಣ ಈ ಸರಣಿಯ 129ನೆಯದು. 2000ನೇ ಇಸ್ವಿ ಜುಲೈ16 ರಂದು ನಡೆದ ಸಂಪೂರ್ಣ ಚಂದ್ರಗ್ರಹಣ 20ನೇ ಶತಮಾನದ ದೀರ್ಘಾವಧಿ ಚಂದ್ರಗ್ರಹಣ ಎನ್ನಿಸಿಕೊಂಡಿತ್ತು. 71 ಗ್ರಹಣಗಳನ್ನು ಹೊಂದಿದ ಈ ಸರಣಿ 1351ರ ಜೂ.10ರ ‘ಅರೆ ನೆರಳು’ ಚಂದ್ರಗ್ರಹಣದಿಂದ (penumbral lunar eclipses)ಶುರುವಾಗಿದ್ದು, 2613 ಜು.24ರ ಇಂಥದೇ ಗ್ರಹಣದಿಂದ ಮುಗಿಯುತ್ತದೆ.

2.ಜುಲೈ 27ರ ರಾತ್ರಿ 11.54ಕ್ಕೆ (ಭಾರತೀಯ ಕಾಲಮಾನ) ಭಾಗಶಃ ಚಂದ್ರಗ್ರಹಣ, ಜು.28ರ ನಸುಕಿನ 1ಕ್ಕೆ ಪೂರ್ಣ ಚಂದ್ರಗ್ರಹಣ ಆರಂಭ. 1.52ಕ್ಕೆ ಚಂದ್ರ ಗಾಢವರ್ಣದಲ್ಲಿ ಕಾಣಿಸಲಿದ್ದು,2.43ರ ವರೆಗೆ ಇರುತ್ತದೆ. 3.49ರ ವರೆಗೆ ಭಾಗಶಃ ಗ್ರಹಣ ಮುಂದುವರಿಯುತ್ತದೆ. ಭೂಮಿಯ ನೆರಳು ಚಂದ್ರನನ್ನು 103 ನಿಮಿಷ ಸಂಪೂರ್ಣ (ಪೂರ್ಣ ಚಂದ್ರಗ್ರಹಣ)ಆವರಿಸಿರುತ್ತದೆ. ಗ್ರಹಣ ಆರಂಭದಿಂದ ಅಂತ್ಯದ ವರೆಗಿನ ಒಟ್ಟು ಅವಧಿ 6.14 ಗಂಟೆ. ಇದರಿಂದಾಗಿ ಈ ಗ್ರಹಣ 21ನೇ ಶತಮಾನದ ಅತ್ಯಂತ ದೀರ್ಘಾವಧಿ ಗ್ರಹಣ ಎನ್ನಿಸಿಕೊಳ್ಳಲಿದೆ. ಇಷ್ಟು ದೀರ್ಘಾವಧಿ ಗ್ರಹಣ ನೋಡಲು 18 ವರ್ಷ ಕಾಯಬೇಕು. 2036ರ ಆಗಸ್ಟ್ 6 ಮತ್ತು 7ರ ಮಧ್ಯ ರಾತ್ರಿ ಸಂಭವಿಸುವ ಗ್ರಹಣ 6.12 ಗಂಟೆಯದ್ದಾಗಿರಲಿದೆ.

3. ಈ ವರ್ಷ 3 ಸೂರ್ಯ ಗ್ರಹಣ ಮತ್ತು 2 ಸಂಪೂರ್ಣ ಚಂದ್ರಗ್ರಹಣಗಳಿವೆ. ಜನವರಿ 31 ರಂದು ನಡೆದ ವರ್ಷದ ಮೊದಲ ಚಂದ್ರಗ್ರಹಣವನ್ನು “ಸೂಪರ್ ಬ್ಲೂ‌ ಬ್ಲಡ್‌ ಮೂನ್’’‌ ಎಂದು ಕರೆಯಲಾಗಿತ್ತು. ಜ.27ರ ರಾತ್ರಿಯದ್ದು ವರ್ಷದ 2ನೆಯ ಮತ್ತು ಕೊನೆಯ ಚಂದ್ರಗ್ರಹಣ. ಅಂದು ಭೂಮಿಯಿಂದ ಸುಮಾರು 4,06,223 ಕಿ.ಮೀ.ದೂರದಲ್ಲಿರುವಾಗ ಚಂದ್ರ ಭೂಮಿಯ ನೆರಳಿನ ಕೇಂದ್ರದಲ್ಲಿರುತ್ತದೆ. ಚಂದ್ರ ಭೂಮಿಯ ನೆರಳಿನ ಯಾವ ಭಾಗವನ್ನು ಹಾದು ಹೋಗುತ್ತದೆನ್ನುವುದನ್ನು ಅವಲಂಭಿಸಿ ಚಂದ್ರನ ವರ್ಣ ಬದಲಾಗುತ್ತೆ. ಒಮ್ಮೆ ಉಜ್ವಲ ಕಿತ್ತಳೆ ಬಣ್ಣದಲ್ಲೆ ಕಂಡರೆ, ಮತ್ತೊಮ್ಮೆ “ರಕ್ತ ಕೆಂಪು’’ ವರ್ಣವನ್ನು ತಳೆಯುತ್ತದೆ. ಒಂದು ಹಂತದಲ್ಲಿ ಗಾಢ ಕಂದು ಮತ್ತು ಅತ್ಯಂತ ಗಾಢ ಬೂದು ಬಣ್ಣಕ್ಕೂ ತಿರುಗಲಿದೆ. ಈ ಕಾರಣಕ್ಕೆ ಇದನ್ನು'ರಕ್ತ ಚಂದ್ರ ಗ್ರಹಣ'ಎಂದು ಕರೆಯಲಾಗುತ್ತದೆ.

4.ಇದು ಪುಟ್ಟ ಚಂದ್ರನ ಗ್ರಹಣವೂ ಹೌದು. ಜುಲೈ 27ರ 05.43 “ಯುಟಿಸಿ” (ಸಾರ್ವತ್ರಿಕ ಸಮಯ ಸಂಯೋಜನೆ) ಯಲ್ಲಿ ಚಂದ್ರ ಭೂಮಿಯ ಸುತ್ತಲಿನ ತನ್ನ ಕಕ್ಷೆಯಲ್ಲಿ ಅತಿ ದೂರದಲ್ಲಿರುತ್ತದೆ. ಇದರಿಂದ ಪೂರ್ಣಚಂದ್ರ ಅಂದು ಗಾತ್ರದಲ್ಲಿ ಸಣ್ಣಗೆ ಕಾಣುತ್ತದೆ ಮತ್ತು ಕಡಿಮೆ ಪ್ರಕಾಶವನ್ನು ಚೆಲ್ಲುತ್ತಿರುತ್ತದೆ. ಈ ಪುಟ್ಟ ಚಂದಿರ ಭೂಮಿಯ ನೆರಳನ್ನು ದಾಟಲು ಹೆಚ್ಚು ಸಮಯ ಹಿಡಿಯುವುದರಿಂದ ಇದು ಈ ಶತಮಾನದ ದೀರ್ಘಾವಧಿ ಚಂದ್ರ ಗ್ರಹಣ ಎನ್ನಿಸಿಕೊಂಡಿದೆ.

5. ವಿಜ್ಞಾನಿಗಳ ಪ್ರಕಾರ ಸಂಪೂರ್ಣ ಚಂದ್ರಗ್ರಹಣದ ಸಂಭವನೀಯ ಅವಧಿ 107ನಿಮಿಷ. 2000 ಜುಲೈ 16/17ರ ಮಧ್ಯರಾತ್ರಿಯ ಚಂದ್ರಗ್ರಹಣದ ಅವಧಿ (106 ನಿಮಿಷ 24 ಸೆಕೆಂಡ್) ಇದರ ಸನಿಹದಲ್ಲಿತ್ತು. ಗ್ರಹಣ ಸಮಯದಲ್ಲಿ ಭೂಮಿ ಕೂಡ ಸೂರ್ಯನಿಂದ ಅತಿ ದೂರದಲ್ಲಿರುವ ಕಾರಣ ಪೂರ್ಣ ಚಂದ್ರಗ್ರಹಣದಲ್ಲಿನ “ಪೂರ್ಣತೆ’’ ದೀರ್ಘಾವಧಿಯದ್ದಾಗಿರುತ್ತದೆ. ಅಲ್ಲದೆ,ಭೂಮಿಯು ಅಫೀಲಿಯನ್ ಸಮೀಪದಲ್ಲಿದ್ದಾಗ,ಭೂಮಿಯ ಛಾಯೆಯು ಅತಿ ಉದ್ದ ಮತ್ತು ವಿಶಾಲವಾಗಿರುತ್ತದೆ. ಉದ್ದ ಮತ್ತು ವಿಶಾಲ ಛಾಯೆ ಇದ್ದಾಗ, ಚಂದ್ರ ಅದನ್ನು ಹಾದು ಹೋಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

6. ಪುಟ್ಟ ರಕ್ತ ಚಂದಿರ ಗ್ರಹಣ ನಡೆಯುವ ದಿನ “ಕೆಂಪು ಗ್ರಹ’’ ಎಂದು ಕರೆಯಲ್ಪಡುವ ಮಂಗಳ ಕೂಡ ಆಗಸವನ್ನು ಹಂಚಿಕೊಳ್ಳಲಿದೆ.ಈ ಗ್ರಹ ವರ್ಷವಿಡೀ ರಾತ್ರಿ ಗೋಚರಿಸುತ್ತದೆಯಾದರೂ, ಕೆಲವು ವರ್ಷಗಳಿಗೊಮ್ಮೆ, ಮಂಗಳ ಮತ್ತು ಸೂರ್ಯ ವಿರುದ್ಧವಾಗಿದ್ದಾಗ ಅತ್ಯಂತ ಪ್ರಕಾಶಮಾನವಾಗಿ ಕಾಣುತ್ತದೆ. ಪ್ರತಿ 26 ತಿಂಗಳಿಗೊಮ್ಮೆ ನಡೆಯುವ ಈ ಖಗೋಳ ವಿದ್ಯಮಾನ ಇದೇ ಜುಲೈ 27ರಂದು ಪುನರಾವರ್ತನೆಯಾಗುತ್ತದೆ. ಜುಲೈ 31ರಂದು ಕೂಡ ಮಂಗಳ ಭೂಮಿಗೆ ( 57 ಮಿಲಿಯನ್‌ ಕಿಲೋಮೀಟರ್ ಅಥವಾ 35.7 ಮಿಲಿಯನ್‌ ಮೈಲು) ಹತ್ತಿರವಾಗಿರುತ್ತದೆ. ಈ ಎರಡು ವಿದ್ಯಮಾನಗಳು ಹತ್ತಿರದಲ್ಲಿ ಘಟಿಸುವುದರಿಂದ ಮಂಗಳ ಪ್ರಕಾಶಮಾನವಾಗಿರುತ್ತದೆ ಮತ್ತು ವೀಕ್ಷಣೆಗೆ ಸುಲಭ ಗ್ರಾಹ್ಯ.

7.ಯೂರೋಪ್, ಏಷ್ಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ನ ಬಹುತೇಕ ಮತ್ತು ಆಫ್ರಿಕಾ, ದಕ್ಷಿಣಾ ಅಮೆರಿಕದ ಭಾಗಶಃ ಪ್ರದೇಶಗಳಲ್ಲಿ ಗ್ರಹಣವು ಗೋಚರಿಸುತ್ತದೆ.ದಕ್ಷಿಣ ಅಮೆರಿಕದ ಪೂರ್ವ ಭಾಗದ ಜನರು ಜುಲೈ 27 ರ ಸೂರ್ಯಾಸ್ತದ ನಂತರ ಗ್ರಹಣ ಅಂತ್ಯವನ್ನು ನೋಡಬಹುದು. ನ್ಯೂಜಿಲ್ಯಾಂಡ್ ಜನರು ಜುಲೈ 28 ರ ಸೂರ್ಯೋದಯದ ಮೊದಲಷ್ಟೆ ಗ್ರಹಣ ಆರಂಭವನ್ನು ಆನಂದಿಸಲು ಸಾಧ್ಯ. ಆ ರಾತ್ರಿ ಹವಾಮಾನ ವೈಪರಿತ್ಯ ಇಲ್ಲದಿದ್ದರೆ ಏಷ್ಯಾ,ಆಸ್ಟ್ರೇಲಿಯಾದ ಜನರು ಪೂರ್ಣ ಚಂದ್ರಗ್ರಹಣವನ್ನು ಪೂರ್ಣವಾಗಿ ಕಣ್ತುಂಬಿಕೊಳ್ಳಬಹುದು. ಮಧ್ಯಪ್ರಾಚ್ಯದ ಜನರು ಮಧ್ಯರಾತ್ರಿ ವರೆಗಷ್ಟೆ ಕಾಣಬಹುದು. ಯುರೋಪ್‌ ಮತ್ತು ಆಫ್ರಿಕಾ ಜನರು ಜು.27ರ ಸೂರ್ಯಾಸ್ತದ ನಂತರ ಖಗೋಳ ಅದ್ಭುತವನ್ನು ಆನಂದಿಸುವರು.

8. ಸಂಪೂರ್ಣ ಚಂದ್ರಗ್ರಹಣದ ಖಗೋಳ ಚಮತ್ಕಾರವನ್ನು ಯಾವುದೇ ನೇತ್ರ ರಕ್ಷಕಗಳ ಅಗತ್ಯವಿಲ್ಲದೆ, ಬರಿಗಣ್ಣಿನಲ್ಲೇ ನೋಡಬಹುದು. ಸೂರ್ಯ ಗ್ರಹಣಗಳು ಸಂಭವಿಸಿದಾಗ ಕಣ್ಣಿನ ಸುರಕ್ಷತೆಗೆ ವಿಶೇಷ ನೇತ್ರ ರಕ್ಷಣಾ ಪರಿಕರಗಳನ್ನು ಬಳಸಬೇಕು.ಆದರೆ,ಚಂದ್ರಗ್ರಹಣಕ್ಕೆ ಅದರ ಅಗತ್ಯವಿಲ್ಲ.ಸುಸ್ಪಷ್ಟವಾಗಿ ನೋಡುವ ಕುತೂಹಲವಿದ್ದರೆ ಬೈನಾಕ್ಯುಲರ್ ಗಳನ್ನು ಬಳಸಬಹುದು.

ಭಾರತದಲ್ಲಿ ಗ್ರಹಣವು ಹೆಚ್ಚುಕಡಿಮೆ ರಾತ್ರಿಯಿಡೀ ಕಾಣುವುದರಿಂದ ಆಕಾಶ ವಿದ್ಯಮಾನಗಳ ಆಸಕ್ತರಿಗಿದು ಸುವರ್ಣಾವಕಾಶ. ಜ್ಯೋತಿಷಿಗಳು, ಮೌಢ್ಯ ಬಿತ್ತುವ ಮೂಢರು ಹುಟ್ಟಿಸುವ ಯಾವುದೇ ಭಯ, ಭೀತಿಗಳನ್ನು ಕಿವಿಮೇಲೆ ಹಾಕಿಕೊಳ್ಳದೆ ಅಂದು ಮನೆಯಿಂದ ಹೊರಬನ್ನಿ, ಆಕಾಶವನ್ನು ನೋಡಿರಿ. ಶತಮಾನದ ವಿಶೇಷ ವಿದ್ಯಮಾನವನ್ನು ಕಣ್ತುಂಬಿಕೊಳ್ಳಿ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More