ಅಕ್ರಮ ಸಂಬಂಧ ಅಪರಾಧ ಮುಕ್ತವಲ್ಲವೆಂದು ಸುಪ್ರೀಂಗೆ ತಿಳಿಸಿದ ಕೇಂದ್ರ ಸರ್ಕಾರ

ಅಕ್ರಮ ಸಂಬಂಧವನ್ನು ಅಪರಾಧದ ವ್ಯಾಪ್ತಿಯಿಂದ ತೆಗೆಯವುದು ಬೇಡವೆಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಈ ಹಿನ್ನೆಲೆಯಲ್ಲಿ, ಹಲವು ವಿವಾದಿತ ವಿಚಾರಗಳಲ್ಲಿ ನ್ಯಾಯಾಲಯ ಯಾವ ರೀತಿಯ ತೀರ್ಪು ನೀಡಿದೆ ಎಂಬುದನ್ನು ನೆನಸಿಕೊಳ್ಳುವುದಕ್ಕೆ ಇದು ಸಕಾಲ

ಅಕ್ರಮ ಸಂಬಂಧವನ್ನು ಅಪರಾಧ ಮುಕ್ತವೆಂದು ಒಪ್ಪಲು ಸಾಧ್ಯವಿಲ್ಲವೆಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಮದುವೆಯಾಚೆಯ ಅಕ್ರಮ ಸಂಬಂಧಗಳು ನಮ್ಮ ವಿವಾಹ ವ್ಯವಸ್ಥೆಯನ್ನು ಬಲಹೀನಗೊಳಿಸುವುದಲ್ಲದೆ, ವೈವಾಹಿಕ ಬದುಕನ್ನು ಹದಗೆಡಿಸುತ್ತವೆ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದೆ. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ 11 ಪುಟಗಳ ಅಫಿಡವಿಟ್‌ನಲ್ಲಿ, “ಭಾರತೀಯ ನಾಗರಿಕ ಸಮುದಾಯದಲ್ಲಿ ವಿವಾಹ ವ್ಯವಸ್ಥೆಗೆ ತನ್ನದೇ ಆದ ಪಾವಿತ್ರ್ಯ ಇದೆ. ಭಾರತೀಯ ದಂಡಸಂಹಿತೆ (497) ವಿವಾಹ ವ್ಯವಸ್ಥೆಗೆ ಬೆಂಬಲ ಹಾಗೂ ರಕ್ಷಣೆ ಒದಗಿಸುತ್ತಿದ್ದು, ಇದನ್ನು ರದ್ದು ಮಾಡುವುದರಿಂದ ವೈವಾಹಿಕ ಬಂಧ ಸಡಿಲಗೊಳ್ಳಲಿದೆ,” ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ.

ಜೋಸೆಫ್ ಶೈನ್ ಎಂಬುವವರ ಪರವಾಗಿ ವಕೀಲರಾದ ಕಲೀಶ್ವರಂ ರಾಜ್ ಮತ್ತು ಸುವಿದತ್ ಎಂ ಎಸ್ ಅವರು ಅಕ್ರಮ ಸಂಬಂಧ ಶಿಕ್ಷಾರ್ಹವೆಂದು ಪರಿಗಣಿಸುವ ಐಪಿಸಿ 497 ಅನ್ನು ಕೈಬಿಡಬೇಕೆಂದು ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದರು. ಈ ವಿಚಾರವಾಗಿ ತನ್ನ ಅಭಿಪ್ರಾಯ ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಈ ಹಿಂದೆ ಸೂಚಿಸಿತ್ತು.

ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮನುಷ್ಯನ ಖಾಸಗಿ ಆಯ್ಕೆ, ಆಸಕ್ತಿಗಳ ಮೇಲೆ ಸರ್ಕಾರ ಹಾಗೂ ಕಾನೂನು ಯಾವ ರೀತಿ ಪ್ರಭಾವ ಬೀರುತ್ತಿವೆ ಎಂಬುದು ಗಮನಾರ್ಹ. ಇತ್ತೀಚೆಗೆ ಸಲಿಂಗಕಾಮ, ತ್ರಿವಳಿ ತಲಾಖ್‌, ಲಿವಿಂಗ್‌ ಟುಗೆದರ್‌, ಲವ್‌ ಜಿಹಾದ್‌ ಹಾಗೂ ನಿಖಾ ಹಲಾಲ (ವಿಚ್ಛೇದಿತ ಪತ್ನಿ ಮರುಮದುವೆ ಕಾನೂನು) ಹಾಗೂ ಬಹುಪತ್ನಿತ್ವದಂತಹ ವಿವಾದಿತ ವಿಚಾರಗಳಿಗೆ ಸಂಬಂಧಪಟ್ಟಂತೆ ಕಾನೂನು ಹಾಗೂ ಸರ್ಕಾರ ಹಲವು ನಿರ್ಧಾರಗಳನ್ನು ಕೈಗೊಂಡಿತ್ತು. ಎಲ್ಲಕ್ಕಿಂತ ಪ್ರಮುಖವಾಗಿ, ಆಧಾರ್‌ ಕಡ್ಡಾಯಗೊಳಿಸಲು ಹೊರಟಿದ್ದ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧವಾಗಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಈ ಮೂಲಕ ‘ಖಾಸಗಿತನ ಮನುಷ್ಯನ ಮೂಲಭೂತ ಹಕ್ಕು’ ಎಂದು ನ್ಯಾಯಲಯ ಘೋಷಿಸಿತ್ತು. ಮನುಷ್ಯನ ವೈಯಕ್ತಿಕ ವಿಚಾರಗಳಲ್ಲಿ ಸರ್ಕಾರ ತಲೆಹಾಕಬಾರದೆಂಬ ಸಂದೇಶವನ್ನು ರವಾನಿಸಿತ್ತು. ಈ ಎಲ್ಲ ವಿವಾದಿತ ವಿಚಾರಗಳಲ್ಲಿ ನ್ಯಾಯಾಲಯ ಯಾವ ರೀತಿಯ ನಿರ್ಣಯಗಳನ್ನು ತೆಗೆದುಕೊಂಡಿದೆ, ಹೇಗೆ ನಡೆದುಕೊಂಡಿದೆ ಎಂಬುದನ್ನು ನೆನಸಿಕೊಳ್ಳುವುದು ಇದು ಸಕಾಲ.

ಇದನ್ನೂ ಓದಿ : ಮಡಿವಂತಿಕೆ-ರಂಜಕತೆಯ ನಡುವೆ ಸಾಹಿತ್ಯ, ಸಿನಿಮಾದಲ್ಲಿ ಸಲಿಂಗ ಪ್ರೇಮದ ನೆರಳು

ಸಲಿಂಗಕಾಮ‌

2013ರಲ್ಲಿ ಸಲಿಂಗಕಾಮವನ್ನು ಅಪರಾಧವೆಂದು ಪರಿಗಣಿಸಿ ತೀರ್ಪು ನೀಡಿದ್ದ ನ್ಯಾಯಾಲಯ, ನಾಲ್ಕು ವರ್ಷಗಳ ನಂತರ ಅದರ ಬಗೆಗಿನ ವಿಚಾರಣೆಯನ್ನು ಮಂಗಳವಾರ ಕೈಗೆತ್ತಿಕೊಂಡಿದೆ. ಸಲಿಂಗಕಾಮವನ್ನು ಅಪರಾಧ ಮುಕ್ತವಾಗಿಸಲು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಆರಂಭಿಸಿದೆ. ವಿಚಾರಣೆ ವೇಳೆ, ಸಲಿಂಗಕಾಮವೆಂಬುದು ಸಹಜತೆಯಿಂದ ನಿರ್ಗಮನ ಹೊಂದುವ ಕ್ರಿಯೆಯಲ್ಲ, ಅದೊಂದು ನಿಸರ್ಗದತ್ತ ವಿಭಿನ್ನತೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಪ್ಪಿತ ಸಲಿಂಗಕಾಮದ ಬಗ್ಗೆ ಕೇಂದ್ರ ಸರ್ಕಾರವು ತಟಸ್ಥ ನಿಲುವು ಹೊಂದಿದ್ದು, ಸಲಿಂಗಕಾಮವನ್ನು ಅಪರಾಧ ವ್ಯಾಪ್ತಿಯಿಂದ ಮುಕ್ತಗೊಳಿಸುವ ಬಗ್ಗೆ ನ್ಯಾಯಮೂರ್ತಿಗಳು ನಿರ್ಧಾರ ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಹೇಳಿತ್ತು.

ತ್ರಿವಳಿ ತಲಾಖ್‌

ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದಲ್ಲಿ ಅಧಿಕಾರ ಹಿಡಿದಾಗಿನಿಂದ ತ್ರಿವಳಿ ತಲಾಖ್‌ ಬಗೆಗಿನ ಚರ್ಚೆಗಳು ಮುನ್ನೆಲೆಗೆ ಬಂದಿದ್ದವು. ಮುಸ್ಲಿಂ ಮಹಿಳೆಯರ ಹಿತ ಕಾಪಾಡುವ ನಿಟ್ಟಿನಲ್ಲಿ ತಾನು ತ್ರಿವಳಿ ತಲಾಖ್‌ ಅನ್ನು ನಿಷೇಧಿಸುವುದಾಗಿ ಕೇಂದ್ರ ಸರ್ಕಾರ ಹೇಳುತ್ತಲೇ ಬಂದಿತ್ತು. ಈ ಹಿನ್ನೆಲೆಯಲ್ಲಿ, ಕಳೆದ ವರ್ಷ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್‌ಗೆ ತಡೆಯಾಜ್ಞೆ ನೀಡಿ,‌ ಈ ಬಗ್ಗೆ ಹೊಸ ನಿಯಮಾವಳಿ ರಚಿಸಲು ಕೇಂದ್ರ ಸರಕಾರಕ್ಕೆ ಸೂಚಿಸಿತ್ತು. ಈ ಮೂಲಕ ಮಂಡಿಸಲಾದ ‘ಮುಸ್ಲಿಂ ಮಹಿಳಾ ವೈವಾಹಿಕ ಹಕ್ಕುಗಳ ಸಂರಕ್ಷಣಾ ವಿಧೇಯಕ’ವನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.

ಲಿವ್‌-ಇನ್‌ ಸಂಬಂಧ‌

2015 ರಲ್ಲಿ ಲಿವ್-ಇನ್‌ ಸಂಬಂಧದ ಬಗ್ಗೆ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್‌, ಮದುವೆಯಾಗದೆ ಇರುವ ಗಂಡು-ಹೆಣ್ಣಿನ ನಡುವೆ ಒಪ್ಪಿತ ಸಂಬಂಧ ಏರ್ಪಟ್ಟು, ಒಟ್ಟಿಗೆ ಜೀವನ ನಡೆಸುವುದು ಅಪರಾಧವೆನ್ನಲಾಗದು. ಭಾರತದಲ್ಲಿ ಲಿವ್-ಇನ್ ಸಂಬಂಧಕ್ಕೆ ಕಾನೂನು ಅಡ್ಡಿಪಡಿಸುವುದಿಲ್ಲ. ಈಗಾಗಲೇ ಲಿವ್‌-ಇನ್‌ ಸಂಬಂಧವನ್ನು ಆಧುನಿಕ ಸಮಾಜ ಒಪ್ಪಿಕೊಂಡಾಗಿದೆ ಎಂದು ಹೇಳುವ ಮೂಲಕ ಲಿವ್‌-ಇನ್‌ ಸಂಬಂಧ ಅಪರಾಧವಲ್ಲವೆಂದು ಸ್ಪಷ್ಟಪಡಿಸಿತ್ತು.

ಲವ್‌-ಜಿಹಾದ್‌

ಕೇರಳದ ಹಾದಿಯಾ ಪ್ರಕರಣದಲ್ಲಿನ ಲವ್‌-ಜಿಹಾದ್‌ ವಿಚಾರ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಶಾಫಿನ್‌ ಜಹಾನ್‌ ಎಂಬ ಮುಸ್ಲಿಂ ಯುವಕ ಹಿಂದೂ ಧರ್ಮದ ಅಖಿಲಾ(ಹಾದಿಯಾ)ಳನ್ನು ಮದುವೆಯಾಗಿರುವುದರ ಹಿಂದೆ ಲವ್‌-ಜಿಹಾದ್‌ನ ನಂಟಿದೆ ಎಂದು ಆರೋಪಿಸಿ ಅವಳ ತಂದೆ ಅಶೋಕನ್‌ ಕಳೆದ ವರ್ಷ ಕೇರಳ ಹೈಕೋರ್ಟ್‌ ಮೊರೆಹೋಗಿದ್ದರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್, ಮದುವೆ ರದ್ದುಗೊಳಿಸಿ ತೀರ್ಪು ನೀಡಿತ್ತು. ಈ ಮೂಲಕ ಹಾದಿಯಾಳನ್ನು ಅವಳ ತಂದೆಗೆ ಒಪ್ಪಿಸಿತ್ತು. ಕೇರಳ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಹಾದಿಯಾಳ ಪತಿ ಶಾಫಿನ್‌ ಜಹಾನ್‌ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ್ದ ತ್ರಿಸದಸ್ಯ ಪೀಠ, ಕೇರಳ ಹೈಕೋರ್ಟ್‌ ಆದೇಶವನ್ನು ವಜಾಗೊಳಿಸಿತ್ತು. ಈ ಮೂಲಕ, ಹಾದಿಯಾ ಮತ್ತು ಶಾಫಿನ್‌ ಜಹಾನ್‌ ಮದುವೆಯನ್ನು ಊರ್ಜಿತಗೊಳಿಸಿ ತೀರ್ಪು ನೀಡಿತ್ತು. ತಾನು ಸ್ವಇಚ್ಛೆಯಿಂದಲೇ ಮತಾಂತರಗೊಂಡಿದ್ದು, ಶಾಫೀಕ್‌ ಜಹಾನ್‌ನನ್ನು ಪೂರ್ಣ ಮನಸ್ಸಿನಿಂದ ಮದುವೆಯಾಗಿದ್ದಾಗಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಪೀಠದ ಮುಂದೆ ಹಾದಿಯಾ ತಿಳಿಸಿದ್ದಳು.

ನಿಖಾ ಹಲಾಲ್‌

ಇದೇ ವರ್ಷ ಜನವರಿಯಲ್ಲಿ ನಿಖಾ ಹಲಾಲ್‌ ಮತ್ತು ಬಹುಪತ್ನಿತ್ವ ಪದ್ಧತಿಗಳು ಕಾನೂನುಬಾಹೀರವೆಂದು ಪರಿಗಣಿಸಲು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಕೇಂದ್ರ ಸರ್ಕಾರ ತನ್ನ ಬೆಂಬಲ ವ್ಯಕ್ತಪಡಿಸಿತ್ತು. ನಿಖಾ ಹಲಾಲ್‌ ಎಂಬುದು ವಿವಾದಾತ್ಮಕ ಪದ್ಧತಿಯಾಗಿದ್ದು, ವಿಚ್ಛೇದಿತ ಪತ್ನಿ ಮರುಮದುವೆಯಾಗಲು ಹಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಈ ಹಿಂದೆ ತೊರೆದುಬಿಟ್ಟ ಪತಿಯನ್ನು ಮಹಿಳೆಯು ಮರು ಮದುವೆಯಾಗಲು ಮತ್ತೊಬ್ಬನನ್ನು ಮದುವೆಯಾಗಿ ವಿಚ್ಛೇದನ ನೀಡಬೇಕು ಅಥವಾ ಎರಡನೇ ಪತಿ ಸಾವಿಗೀಡಾಗಿರಬೇಕು.

ಬಹುಪತ್ನಿತ್ವ

ಇದು ಮಹಿಳಾ ವಿರೋಧಿಯಾಗಿದ್ದು ಶೋಷಣೆಯ ಅಸ್ತ್ರವಾಗಿದೆ ಎಂದು ಆರೋಪಿಸಿ, ಕಾನೂನಿನ ಅಡಿಯಲ್ಲಿ ಅಪರಾಧವೆಂದು ಘೋಷಿಸಲು ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಲು ಸಮ್ಮತಿ ಸೂಚಿಸಿದ್ದ ಸುಪ್ರೀಂ ಕೋರ್ಟ್, ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More