ಉದ್ಯಮಸ್ನೇಹಿ ಕರ್ನಾಟಕದಲ್ಲಿ ಕೈಗಾರಿಕಾ ಪ್ರದೇಶಗಳಿಗೆ ಬೇಡಿಕೆಯೇ ಇಲ್ಲ!

ಉದ್ಯಮಸ್ನೇಹಿ ರಾಜ್ಯಗಳ ಪೈಕಿ ಕರ್ನಾಟಕವು ೧೩ರಿಂದ ೮ನೇ ಸ್ಥಾನಕ್ಕೆ ಏರುವ ಮೂಲಕ ಸುಧಾರಿಸಿದೆಯಾದರೂ ರಾಜ್ಯದ ಕೈಗಾರಿಕಾ ಪ್ರದೇಶಗಳಿಗೆ ಬೇಡಿಕೆಯೇ ಇಲ್ಲ. ಹಲವು ಕಂಪನಿಗಳ ಪರ ಜಮೀನು ಸ್ವಾಧೀನ ಪಡಿಸಿಕೊಂಡರೂ ಆ ಕಂಪನಿಗಳೀಗ ಯೋಜನೆಯಿಂದಲೇ ಹಿಂದೆ ಸರಿದಿವೆ

ಕೈಗಾರಿಕೆಗಳ ಸ್ಥಾಪನೆಗೆ ನಿಯಮಗಳ ಸಡಿಲಿಕೆ, ತ್ವರಿತಗತಿಯಲ್ಲಿ ಭೂಸ್ವಾಧೀನ ಸೇರಿದಂತೆ ಎಲ್ಲ ರೀತಿಯಿಂದಲೂ ಅನುಕೂಲ ಮಾಡಿಕೊಟ್ಟಿದ್ದರೂ ರಾಜ್ಯದ ಕೈಗಾರಿಕೆ ಪ್ರದೇಶಗಳಿಗೆ ಕೈಗಾರಿಕೋದ್ಯಮಿಗಳಿಂದ ಬೇಡಿಕೆ ಇಲ್ಲವಾಗಿದೆ. ಕೈಗಾರಿಕೋದ್ಯಮಿಗಳಿಂದ ಬೇಡಿಕೆ ಇದೆಯೇ ಇಲ್ಲವೇ ಎಂಬ ಅಧ್ಯಯನ ನಡೆಸದೆಯೇ ಜಮೀನುಗಳನ್ನು ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧೆಡೆ ಸ್ವಾಧೀನಪಡಿಸಿಕೊಂಡಿತ್ತು. ಆದರೀಗ ಬೇಡಿಕೆ ಇಲ್ಲದ ಕಾರಣ ಅಂತಿಮ ಅಧಿಸೂಚನೆ ಹೊರಡಿಸಿರುವ ಜಮೀನುಗಳನ್ನು ರೈತರಿಗೆ ಹಿಂದಿರುಗಿಸುವ ಅನಿವಾರ್ಯತೆ ಬಂದೊದಗಿದೆ.

ಹಲವೆಡೆ ಜಮೀನುಗಳನ್ನು ಪಡೆದಿದ್ದ ಕಂಪನಿಗಳು ಕೂಡ ಯೋಜನೆಯನ್ನು ಹಿಂಪಡೆದುಕೊಂಡಿವೆ. ಹೀಗಾಗಿ ಕೈಗಾರಿಕೋದ್ಯಮಿಗಳಿಂದ ಬೇಡಿಕೆ ಇದೆಯೇ, ಇಲ್ಲವೇ ಹಾಗೂ ಜಮೀನಿನ ಭೂಸ್ವಾಧೀನ ಪ್ರಕ್ರಿಯೆ ಮುಂದುವರೆಸಬೇಕೇ, ಬೇಡವೇ ಎಂಬ ಕುರಿತು ಪರಿಶೀಲಿಸಿ ವರದಿ ಸಲ್ಲಿಸಲು ಭೂಸ್ವಾಧೀನಾಧಿಕಾರಿಗಳಿಗೆ ಕೆಐಎಡಿಬಿ ಸೂಚಿಸಿದೆ.

ಈ ಹಿಂದಿನ ಬಿಜೆಪಿ ಸರ್ಕಾರ (೨೦೦೮-೦೯) ಸುವರ್ಣ ಕರ್ನಾಟಕ ಕೈಗಾರಿಕಾ ಕಾರಿಡಾರ್‌ ಯೋಜನೆಯಡಿ ಲ್ಯಾಂಡ್‌ ಬ್ಯಾಂಕ್‌ ಸ್ಥಾಪಿಸಿತ್ತು. ಕೆಐಎಡಿಬಿ ೮೦,೩೮೨ ಎಕರೆ ವಿಸ್ತೀರ್ಣದ ಜಮೀನನ್ನು ಸ್ವಾಧೀನಪಡಿಸಿಕೊಂಡಿತ್ತು. ಇದರಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸೇರಿದ ಜಮೀನುಗಳಿದ್ದವು. ಸ್ವಾಧೀನಪಡಿಸಿಕೊಂಡು ೧೦ ವರ್ಷಗಳಾದರೂ ಈ ಜಮೀನುಗಳಲ್ಲಿ ನಿರೀಕ್ಷೆಯಂತೆ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ.

ಇದೇ ಯೋಜನೆಯಡಿ ಸ್ವಾಧೀನಪಡಿಸಿಕೊಂಡಿದ್ದ ಜಮೀನುಗಳ ಪೈಕಿ ಒಟ್ಟು ೪೩,೨೩೦ ಎಕರೆಗೆ ಅಂತಿಮ ಅಧಿಸೂಚನೆ ಹೊರಡಿಸಿದೆಯಾದರೂ ಈ ಜಮೀನುಗಳಲ್ಲಿಯೂ ಕೈಗಾರಿಕೆಗಳು ನಿರೀಕ್ಷಿತ ಪ್ರಮಾಣದಲ್ಲಿ ಸ್ಥಾಪನೆಯಾಗಿಲ್ಲ. ಇದೇ ಸ್ಥಿತಿ ಮುಂದುವರಿದರೆ ಅಂತಿಮ ಅಧಿಸೂಚನೆಗೆ ಒಳಪಟ್ಟಿರುವ ಜಮೀನುಗಳನ್ನೂ ಮುಂದಿನ ದಿನಗಳಲ್ಲಿ ಕೈ ಬಿಡುವ ಸಾಧ್ಯತೆಗಳು ಹೆಚ್ಚಿವೆ ಎಂದು ಕೆಐಎಡಿಬಿ ಮೂಲಗಳು ‘ದಿ ಸ್ಟೇಟ್‌’ಗೆ ತಿಳಿಸಿವೆ.

ಅಲ್ಲದೆ, ಉದ್ಯಮಿಗಳಿಂದ ಸೂಕ್ತ ಬೇಡಿಕೆ ಬಾರದ ಕಾರಣ ಒಟ್ಟು ಸ್ವಾಧೀನಪಡಿಸಿಕೊಂಡಿದ್ದ ಜಮೀನಿನ ಪೈಕಿ ೧೩,೭೮೮.೦೧ ಎಕರೆಯನ್ನು ೨೦೧೫ ಮತ್ತು ೨೦೧೬ರ ಅವಧಿಯಲ್ಲಿ ಪ್ರಾಥಮಿಕ ಅಧಿಸೂಚನೆಯಿಂದ ಕೈ ಬಿಟ್ಟಿದೆಯಲ್ಲದೆ, ಅವನ್ನು ರೈತರಿಗೆ ಹಿಂದಿರುಗಿಸಿದೆ.

ಮೈಸೂರು ಜಿಲ್ಲೆಯ ಹುಣಸೂರು ಮತ್ತು ಎಚ್ ಡಿ ಕೋಟೆ ತಾಲೂಕಿನ ಮನುಗನಹಳ್ಳಿ, ಹುಲ್ಲೇನಹಳ್ಳಿ ಮತ್ತು ಹಳ್ಳದಮನುಗನಹಳ್ಳಿಯಲ್ಲಿ ಸ್ವಾಧೀನಪಡಿಸಿಕೊಂಡಿದ್ದ ೪,೪೭೮ ಎಕರೆ ಜಮೀನನ್ನು ಸಂಪೂರ್ಣವಾಗಿ ಪ್ರಾಥಮಿಕ ಅಧಿಸೂಚನೆಯಿಂದ ಕೈ ಬಿಡಲಾಗಿದೆ.

ಇದನ್ನೂ ಓದಿ : ವಿಡಿಯೋ ಸ್ಟೋರಿ | ಪ್ಲಾಸ್ಟಿಕ್ ಬಳಕೆಯಿಂದ ಗುಡಿ ಕೈಗಾರಿಕೆ ಉತ್ಪನ್ನ ಮೂಲೆಗುಂಪು

ಅದೇ ರೀತಿ, ರಾಯಚೂರು ಜಿಲ್ಲೆಯ ದೇವಸೊಗೂರು, ಹೆಗ್ಗಸನಹಳ್ಳಿ ಮತ್ತು ವಡ್ಲೂರಿನಲ್ಲಿ ಸ್ವಾಧೀನಪಡಿಸಿಕೊಂಡಿದ್ದ ೨,೦೭೨ ಎಕರೆ, ಚಿಕ್ಕಮಗಳೂರು ಜಿಲ್ಲೆಯ ಅಂಬಳೆ, ತಂಗಲ್ಲಿಕಾವಲ್, ಕಾನುಗೊಂಡನಹಳ್ಳಿ, ಬೀರನಹಳ್ಳಿ, ಕಾರೇಹಳ್ಳಿಯಲ್ಲಿ ೧,೫೧೨, ತುಮಕೂರು ಜಿಲ್ಲೆಯ ತಿಪಟೂರು, ಗುಬ್ಬಿ, ಕುಣಿಗಲ್ ತಾಲೂಕಿನ ವಿವಿಧೆಡೆ ೧,೩೬೫, ಬೆಳಗಾವಿಯಲ್ಲಿ ೧,೩೫೦ ಎಕರೆಯನ್ನು ಪ್ರಾಥಮಿಕ ಅಧಿಸೂಚನೆಯಿಂದ ಕೈ ಬಿಡಲಾಗಿದೆ. ಕೈಗಾರಿಕೆ ಪ್ರದೇಶಕ್ಕೆ ಸೂಕ್ತ ಬೇಡಿಕೆ ಇಲ್ಲದೇ ಇರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಕೊಂಡರೆಡ್ಡಿಪಲ್ಲಿ,ಹೊಸಹುಡ್ಯ ಮತ್ತು ಸೋಮಯಾಜಲಹಳ್ಳಿ, ಬಡಗವಾರಹಳ್ಳಿಯಲ್ಲಿ ಒಟ್ಟು ೧,೫೪೧ ಎಕರೆ ೨೪ ಗುಂಟೆ ಜಮೀನಿಗೆ ೮ ವರ್ಷಗಳಿಂದಲೂ ಅಂತಿಮ ಅಧಿಸೂಚನೆ ಹೊರಡಿಸಿಲ್ಲ. “ಈ ಜಿಲ್ಲೆಯಲ್ಲಿನ ಜಮೀನುಗಳಿಗೆ ಕೈಗಾರಿಕೋದ್ಯಮಿಗಳಿಂದ ಬೇಡಿಕೆ ಇದೆಯೇ? ಇಲ್ಲವೇ ಹಾಗೂ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆ ಮುಂದುವರೆಸಬೇಕೇ ಬೇಡವೇ ಎಂಬುದರ ಕುರಿತು ಪರಿಶೀಲಿಸಿ ವರದಿ ಸಲ್ಲಿಸಬೇಕು,” ಎಂದು ಜೂನ್‌ ೮,೨೦೧೮ರಂದು ಜಿಲ್ಲಾ ಭೂ ಸ್ವಾಧೀನಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

ವಿಜಯಪುರ ಜಿಲ್ಲೆಯಲ್ಲಿ ಅಂಜನಿ ಸಿಮೆಂಟ್ಸ್‌ ಕಂಪನಿಗೆ ೬೮೪ ಎಕರೆ ೦೭ ಗುಂಟೆ ಜಮೀನನ್ನು ೨೦೧೧ರಲ್ಲಿ ಸ್ವಾಧೀನಪಡಿಸಿಕೊಂಡಿತ್ತು. ಆದರೆ, “ಈ ಜಮೀನು ಕಂಪನಿಗೆ ಅವಶ್ಯಕತೆ ಇರುವುದಿಲ್ಲ ಹಾಗೂ ಜಮೀನಿಗೆ ಸಂಬಂಧಿಸಿದಂತೆ ಮಂಡಳಿಗೆ ಈಗಾಗಲೇ ಠೇವಣಿ ರೂಪದಲ್ಲಿ ಇರಿಸಿದ್ದ ೫.೭೨ ಲಕ್ಷ ರೂ.ಗಳನ್ನು ಕಂಪನಿಗೆ ಹಿಂದಿರುಗಿಸಿ,” ಎಂದು ಯೋಜನೆ ಪ್ರವರ್ತಕರು ಕೋರಿದ್ದಾರೆ. ಹೀಗಾಗಿ, ಈ ಜಮೀನು ಕೂಡ ಮುಂದಿನ ದಿನಗಳಲ್ಲಿ ಅಧಿಸೂಚನೆಯಿಂದ ಕೈ ಬಿಡಲಿದೆ ಎಂದು ಮೂಲಗಳು ತಿಳಿಸಿವೆ.

ಬೆಳಗಾವಿ ಜಿಲ್ಲೆಯಲ್ಲಿ ಎಂ.ಜುವರಿ ಕಂಪನಿಗೆಂದು ೧,೦೭೮ ಎಕರೆ ೦೧ ಗುಂಟೆ ಜಮೀನು ಸ್ವಾಧೀನಪಡಿಸಿಕೊಂಡಿತ್ತಾದರೂ ಕಡೆ ಗಳಿಗೆಯಲ್ಲಿ ಈ ಕಂಪನಿ ಯೋಜನೆಯನ್ನು ಹಿಂಪಡೆದಿದೆ ಎಂದು ತಿಳಿದುಬಂದಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More