ಅಕ್ರಮ ನೇಮಕಾತಿ ವಿವಾದ: ೨೧ರಂದು ಮುಕ್ತ ವಿಶ್ವವಿದ್ಯಾಲಯದ ಸಭೆ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ನೇಮಕಾತಿ ಅಕ್ರಮ ಮತ್ತೆ ಸದ್ದು ಮಾಡಿದೆ. ರದ್ದುಗೊಂಡಿದ್ದ ಆಡಳಿತ ಮಂಡಳಿ ಸಭೆ ಇದೇ ಜುಲೈ ೨೧ರಂದು ನಡೆಯಲಿದೆ. ಅಕ್ರಮ ಫಲಾನುಭವಿಗಳ ಭವಿಷ್ಯ ಈ ಸಭೆಯಲ್ಲಿ ನಿರ್ಧಾರವಾಗಲಿದೆ. ಹಾಗಾಗಿ ಸಭೆಯ ಬಗ್ಗೆ ಕುತೂಹಲ ಮೂಡಿದೆ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಕಳೆದ ೫ ವರ್ಷಗಳ ಹಿಂದೆ ಅತಿಥಿ ಉಪನ್ಯಾಸಕರನ್ನು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನಿಯಮಬಾಹಿರವಾಗಿ ಕಾಯಂಗೊಳಿಸಿದ್ದ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ. ಪ್ರಕರಣ ಕುರಿತು ಕ್ರಮ ವಹಿಸುವ ಸಂಬಂಧ ಇದೇ ಜುಲೈ ೨೧ರಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸಭೆ ನಡೆಸಲು ನಿರ್ಧರಿಸಲಾಗಿದೆ.

ಇದೇ ಪ್ರಕರಣ ಕುರಿತು ಈ ಮೊದಲು ಜುಲೈ ೭ಕ್ಕೆ ನಡೆಯಬೇಕಿದ್ದ ಸಭೆಯನ್ನು ಏಕಾಏಕಿ ರದ್ದುಗೊಳಿಸಲಾಗಿತ್ತು. ವಿಶ್ವವಿದ್ಯಾಲಯದ ಈ ನಡೆ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಆದರೀಗ ಸಭೆ ನಡೆಸಲು ವಿಶ್ವವಿದ್ಯಾಲಯ ನಿರ್ಧರಿಸಿರುವ ಕಾರಣ ಅಕ್ರಮ ಫಲಾನುಭವಿಗಳಲ್ಲಿ ನಡುಕ ಹುಟ್ಟಿಸಿದೆ. ಈ ಪ್ರಕರಣದ ಕುರಿತು ವಿಶ್ವವಿದ್ಯಾಲಯ ಸರ್ಕಾರಕ್ಕೆ ಪೂರಕ ಮಾಹಿತಿಯನ್ನು ಗುರುವಾರದಂದು (ಜುಲೈ ೧೨) ಒದಗಿಸಿದೆ.

ಯುಜಿಸಿ ವೇತನ ಪಡೆಯಲು ಅರ್ಹತೆ ಇಲ್ಲದಿದ್ದರೂ ಸಹಾಯಕ ಪ್ರಾಧ್ಯಾಪಕರಾಗಿ ಕಾಯಂಗೊಂಡಿದ್ದ ಅತಿಥಿ ಉಪನ್ಯಾಸಕರಿಗೆ ವಿಶ್ವವಿದ್ಯಾಲಯ ಆರ್ಥಿಕ ಸಂಪನ್ಮೂಲದಿಂದ ವೇತನ ನೀಡಿತ್ತು. ವಾಸ್ತವವಾಗಿ ವೇತನ ಪಾವತಿಸಲು ಸರ್ಕಾರದಿಂದ ಯಾವುದೇ ಅನುದಾನ ಒದಗಿಸಿಲ್ಲ ಎಂದು ವಿಶ್ವವಿದ್ಯಾಲಯ ಸರ್ಕಾರಕ್ಕೆ ತಿಳಿಸಿದೆ.

ಇದನ್ನೂ ಓದಿ : ಶೋಧನಾ ಸಮಿತಿಗಳೇ ಅಕ್ರಮವಾಗಿರುವಾಗ ಅರ್ಹ ಕುಲಪತಿ ನೇಮಕ ಹೇಗೆ ಸಾಧ್ಯ?

“ಯುಜಿಸಿ ಮಾನದಂಡದಂತೆ ಯುಜಿಸಿ ವೇತನ ಪಡೆಯಲು ಅರ್ಹತೆ ಹೊಂದಿರದಿದ್ದರೂ ೨೨ ಮಂದಿಗೆ ವೇತನ ವಿಸ್ತರಿಸಿತ್ತು. ಇದರಿಂದ ಪ್ರತಿಯೊಬ್ಬರಿಗೆ ತಲಾ ೨೧,೩೨,೬೯೧ ರೂ.ರಂತೆ ಅಂದಾಜು ೪.೬೯ ಕೋಟಿ ರೂ.ಗಳು ನಷ್ಟ ಉಂಟಾಗಿದೆ,” ಎಂದು ಲೆಕ್ಕ ಪರಿಶೋಧಕರ ವರದಿಯಲ್ಲಿ ಹೇಳಲಾಗಿತ್ತು. ಆದರೆ, ವಿಶೇಷ ಲೆಕ್ಕ ಪರಿಶೋಧನೆಯಲ್ಲಿ ೭,೩೭,೨೩,೦೮೨ ರು. ಹೆಚ್ಚುವರಿಯಾಗಿ ಆರ್ಥಿಕ ಹೊರೆಯಾಗಿದೆ ಎಂದು ಹೇಳಿರುವುದನ್ನು ವಿಶ್ವವಿದ್ಯಾಲಯ ಕುಲಸಚಿವರು ಸರ್ಕಾರಕ್ಕೆ ಮಾಹಿತಿ ಒದಗಿಸಿದ್ದಾರೆ.

ಹಾಗೆಯೇ, “೨೨ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಿರುವುದರಲ್ಲಿ ಕಾನೂನು ಪಾಲನೆಯಾಗಿಲ್ಲ. ಭಕ್ತವತ್ಸಲ ಸಮಿತಿ ವರದಿಯಲ್ಲಿ ಈ ೨೨ ಮಂದಿ ಅತಿಥಿ ಉಪನ್ಯಾಸಕರನ್ನು ವಜಾಗೊಳಿಸುವಂತೆ ವರದಿ ನೀಡಿದೆ,” ಎಂಬ ಅಂಶವನ್ನೂ ಸರ್ಕಾರಕ್ಕೆ ತಿಳಿಸಿದ್ದಾರೆ.

ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ೨೮ ಮಂದಿ ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂಗೊಳಿಸುವ ನಿಟ್ಟಿನಲ್ಲಿ ಹಿಂದಿನ ಕುಲಪತಿಗಳು ಇದಕ್ಕಾಗಿ ಪರಿನಿಯಮವನ್ನು ರಚಿಸಿದ್ದರು. ಇದಕ್ಕೆ ಆಗಿನ ರಾಜ್ಯಪಾಲ ಹಂಸರಾಜ್‌ ಭಾರದ್ವಾಜ್‌ ಅವರು ಅಂಕಿತ ಹಾಕಿದ್ದರು. ಇದರನ್ವಯ ೨೮ ಮಂದಿ ಅತಿಥಿ ಉಪನ್ಯಾಸಕರುಗಳ ಸೇವೆಯನ್ನು ಸಹಾಯಕ ಪ್ರಾಧ್ಯಾಪಕ ಹುದ್ದೆಯಲ್ಲಿ ಖಾಯಂಗೊಳಿಸಿ ೨೦೦೬ರ ಯುಜಿಸಿ ವೇತನ ಶ್ರೇಣಿಯನ್ನು ಮಂಜೂರು ಮಾಡಿತ್ತಲ್ಲದೆ, ಮೇ ೧೦,೨೦೧೩ರಂದು ೨೮ ಮಂದಿಗೂ ಪ್ರತ್ಯೇಕವಾಗಿ ಆದೇಶ ಹೊರಡಿಸಿತ್ತು. ಈ ನೇಮಕಾತಿ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿತ್ತು. ಸೆಪ್ಟಂಬರ್‌ ೬,೨೦೧೨ರಲ್ಲಿ ೨೮ ಮಂದಿ ಪೈಕಿ ೬ ಮಂದಿ ತಾತ್ಕಾಲಿಕ ಸಿಬ್ಬಂದಿಯನ್ನು ಮಾತ್ರ ನಿಯಮಾನುಸಾರ ಪರಿಶೀಲಿಸಿ ಖಾಯಂಗೊಳಿಸಲು ಕ್ರಮ ಕೈಗೊಳ್ಳಲು ವಿ.ವಿ.ಗೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು. ಈ ನಿರ್ದೇಶನದಂತೆ ೬ ಮಂದಿಯನ್ನು ಮಾತ್ರ ಖಾಯಂಗೊಳಿಸಬೇಕಿದ್ದ ವಿಶ್ವವಿದ್ಯಾಲಯ, ಉಳಿದ ೨೨ ಮಂದಿಯನ್ನೂ ಖಾಯಂಗೊಳಿಸಿತ್ತು. ಈ ಪೈಕಿ ೧೮ ಮಂದಿ ಉಪನ್ಯಾಸಕರುಗಳು ಆ ಹುದ್ದೆಗಳಿಗೆ ಅಗತ್ಯವಿದ್ದ ಕನಿಷ್ಠ ವಿದ್ಯಾರ್ಹತೆಗಳನ್ನೂ ಹೊಂದಿರಲಿಲ್ಲ ಎಂಬ ಸಂಗತಿಯನ್ನು ಸಿಎಜಿ ಕೂಡ ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು.

“ವಿಶ್ವವಿದ್ಯಾಲಯಗಳಲ್ಲಿ ಮತ್ತು ಕಾಲೇಜುಗಳಲ್ಲಿ ಸಹ ಪ್ರಾಧ್ಯಾಪಕರ ನೇರ ನೇಮಕಾತಿಗೆ ಕನಿಷ್ಠ ೩೦೦ ಅಂಕಗಳನ್ನು ಪಡೆದಿರಬೇಕು ಎಂದು ಯುಜಿಸಿ ಸೂಚಿಸಿದೆ. ಆದರೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ೫ ಮಂದಿ ಸಹ ಪ್ರಾಧ್ಯಾಪಕರ ನೇಮಕಾತಿ ಸಂದರ್ಭದಲ್ಲಿ ಮೂವರನ್ನು ಸಂದರ್ಶನಕ್ಕೆ ಆಯ್ಕೆ ಮಾಡಲಾಗಿತ್ತು. ಇವರು ೩೦೦ ಅಂಕಗಳನ್ನು ಪಡೆದಿರದಿದ್ದರೂ ಸಹ ಅವರನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿತ್ತು,” ಎಂದು ಸಿಎಜಿ ತನ್ನ ವರದಿಯಲ್ಲಿ ಹೇಳಿದೆ.

ಕುವೆಂಪು ವಿಶ್ವವಿದ್ಯಾಲಯ, ರಾಣಿ ಚನ್ನಮ್ಮ, ಕರ್ನಾಟಕ, ಕನ್ನಡ, ಗುಲ್ಬರ್ಗ, ಬೀದರ್‌ನ ಕರ್ನಾಟಕ ಕಾಲೇಜು, ಮಂಗಳೂರಿನ ಪೊಂಪಿ ಕಾಲೇಜು, ಬೆಂಗಳೂರಿನ ಆರ್‌ ವಿ ಶಿಕ್ಷಕರ ಕಾಲೇಜು, ಕೊಡಗಿನ ಸರ್ವೋದಯ ಬಿ ಇಡಿ ಕಾಲೇಜಿನಲ್ಲಿಯೂ ಸಹಾಯಕ ಪ್ರಾಧ್ಯಾಪಕರು ನೇಮಕಾತಿ ಸಂದರ್ಭದಲ್ಲಿ ಅರ್ಹತಾ ಷರತ್ತನ್ನು ಹೊಂದಿರದೇ ಇದ್ದರೂ ನೇಮಕ ಮಾಡಲಾಗಿತ್ತು ಎಂದು ವರದಿ ಹೊರಗೆಡವಿತ್ತು.

ಚಿತ್ರ: ಶಿವಲಿಂಗಯ್ಯ, ಮುಕ್ತ ವಿವಿ ಕುಲಪತಿ

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More