ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ 5 ಪ್ರಮುಖ ಸುದ್ದಿಗಳು  

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು

ರಾಜ್ಯ ಬಜೆಟ್ ಅಧಿವೇಶನಕ್ಕೆ ತೆರೆ

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಡೆಯುತ್ತಿರುವ ಮೊದಲ ಬಜೆಟ್ ಅಧಿವೇಶನ ಇಂದಿಗೆ ಮುಗಿಯಲಿದೆ. ಜು.2ರಂದು ಆರಂಭವಾದ ಬಜೆಟ್ ಅಧಿವೇಶನದಲ್ಲಿ ಜು.5ರಂದು ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬಜೆಟ್ ಮಂಡಿಸಿದ್ದರು. ರೈತರ 34 ಸಾವಿರ ಕೋಟಿ ರುಪಾಯಿ ಸಾಲಮನ್ನಾವನ್ನು ಸರ್ಕಾರ ಘೋಷಿಸಿದೆ. ಸಾಲಮನ್ನಾಕ್ಕೆ ಸರ್ಕಾರವು ಸಾಕಷ್ಟು ನಿರ್ಬಂಧ ವಿಧಿಸಿರುವುದರಿಂದ ರೈತರು ಆಕ್ರೋಶಗೊಂಡಿದ್ದಾರೆ. ಈ ನಡುವೆ, ಕುಮಾರಸ್ವಾಮಿ ಅವರು ಗುರುವಾರ ಮಧ್ಯಾಹ್ನ ಉಭಯ ಸದನಗಳ ಸದಸ್ಯರಿಗೆ ಭೋಜನಕೂಟ ಆಯೋಜಿಸಿದ್ದಾರೆ.

ನಿತೀಶ್‌‌ ಕುಮಾರ್ ಭೇಟಿಗಾಗಿ ಬಿಹಾರಕ್ಕೆ ಅಮಿತ್ ಶಾ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಗುರುವಾರ ಬಿಹಾರಕ್ಕೆ ಭೇಟಿ ನೀಡಲಿದ್ದು, ಜೆಡಿಯು ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಜೊತೆ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಿದ್ದಾರೆ. ಬೆಳಗ್ಗೆ ನಿತೀಶ್‌ ಅವರಿಗೆ ಉಪಾಹಾರ ಕಾರ್ಯಕ್ರಮ ಆಯೋಜಿಸಿರುವ ಶಾ, ಮಧ್ಯಾಹ್ನ ನಿತೀಶ್‌ ಆಯೋಜಿಸಿರುವ ಭೋಜನ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ೨೦೧೯ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಕ್ಕಾಗಿ ಜೆಡಿಯು ಪಟ್ಟು ಹಿಡಿದಿದೆ. ಸಭೆಯಲ್ಲಿ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಸ್ಪಷ್ಟ ನಿಲುವು ತಳೆಯುವ ಸಾಧ್ಯತೆ ಇದೆ.

ವಿಂಬಲ್ಡನ್ ವನಿತೆಯರ ಸೆಮಿಫೈನಲ್ ಇಂದು

ವರ್ಷದ ಮೂರನೇ ಗ್ರಾಂಡ್‌ಸ್ಲಾಮ್ ಟೆನಿಸ್ ಪಂದ್ಯಾವಳಿಯಾದ ವಿಂಬಲ್ಡನ್ ವನಿತೆಯರ ಸಿಂಗಲ್ಸ್ ಸೆಮಿಫೈನಲ್ ಪಂದ್ಯಗಳು ಇಂದು ನಡೆಯಲಿವೆ. ಮೊದಲ ಸೆಮಿಫೈನಲ್‌ನಲ್ಲಿ ಜರ್ಮನಿಯ ಏಂಜಲಿಕ್ ಕೆರ್ಬರ್, ಲಾಟ್ವಿಯಾದ ಜೆಲೆನಾ ಒಸ್ಟಾಪೆಂಕೊ ವಿರುದ್ಧ ಸೆಣಸಲಿದ್ದರೆ, ಎರಡನೇ ಸೆಮಿಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್ ಜರ್ಮನಿಯ ಮತ್ತೋರ್ವ ಆಟಗಾರ್ತಿ ಜುಲಿಯಾ ಜಾರ್ಜರ್ಸ್ ವಿರುದ್ಧ ಕಾದಾಡಲಿದ್ದಾರೆ. ೨೪ನೇ ಗ್ರಾಂಡ್‌ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸೆರೆನಾ, ಎಲ್ಲರ ಆಕರ್ಷಣೆಯಾಗಿದ್ದಾರೆ. ಸೆರೆನಾ ಪಂದ್ಯ ಸಂಜೆ ೬.೪೫ರ ಹೊತ್ತಿಗೆ ಆರಂಭವಾಗಲಿದ್ದರೆ, ಕೆರ್ಬರ್ ಮತ್ತು ಒಸ್ಟಾಪೆಂಕೊ ನಡುವಣದ ಪಂದ್ಯ ಸಂಜೆ ೫.೩೦ಕ್ಕೆ ಆರಂಭವಾಗಲಿದೆ.

ಲಕ್ಸುರಿ ಸರಕುಗಳ ಮೇಲೆ ಶೇ.1 ಸೆಸ್; ಅಟಾರ್ನಿ ಜನರಲ್ ಅಭಿಪ್ರಾಯದ ನಿರೀಕ್ಷೆ

ರೈತರ ಸಂಕಷ್ಟಗಳಿಗೆ ನೆರವಾಗಲು ಲಕ್ಸುರಿ ಸರಕುಗಳ ಮೇಲೆ ಶೇ.1 ರಷ್ಟು ಸೆಸ್ (ಉಪ ಕರ) ವಿಧಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಸೆಸ್ ವಿಧಿಸಲು ಅಟಾರ್ನಿ ಜನರಲ್ ಅವರ ಅಭಿಪ್ರಾಯ ಕೋರಲಾಗಿದೆ. ಅಟಾರ್ನಿ ಜನರಲ್ ಅವರು ಸೆಸ್ ವಿಧಿಸಲು ಯಾವ ತಾಂತ್ರಿಕ ಅಡಚಣೆ ಇಲ್ಲ ಎಂದು ತಿಳಿಸಿದರೆ ಸೆಸ್ ಹೇರುವುದು ನಿಶ್ಚಿತ. ಸರಕು ಮತ್ತು ಸೇವಾ ತೆರಿಗೆ ಜಾರಿಯಲ್ಲಿರುವ ಕಾರಣ ಪ್ರತ್ಯೇಕ ಉಪಕರ ವಿಧಿಸುವಂತಿಲ್ಲ. ಹೀಗಾಗಿ, ಸಕ್ಕರೆ ಮೇಲೆ ಉಪಕರ ವಿಧಿಸುವ ಪ್ರಸ್ತಾಪ ಕೈಬಿಡಲಾಗಿದೆ. ಸಚಿವರ ಸಮಿತಿ ಲಕ್ಸುರಿ ಕರ ವಿಧಿಸಲು ಪ್ರಸ್ತಾಪಿಸಿದೆ. ಈಗ ಅಟಾರ್ನಿ ಜನರಲ್ ಏನು ಹೇಳುತ್ತಾರೆಂಬ ಕುತೂಹಲ ಇದೆ.

ಮೊದಲ ಬಾರಿಗೆ ಅಯೋಧ್ಯೆಯಲ್ಲಿ ಬೃಹತ್ ನಮಾಜ್, ಕುರಾನ್ ಪಠಣ

ಅಯೋಧ್ಯೆಯಲ್ಲಿ ಇದೇ ಮೊದಲ ಬಾರಿಗೆ ಸರಯೂ ನದಿ ದಂಡೆಯಲ್ಲಿ ಬೃಹತ್ ಸಾಮೂಹಿಕ ನಮಾಜ್ ಹಾಗೂ ಇಸ್ಲಾಂ ಪವಿತ್ರ  ಗ್ರಂಥ ಕುರಾನ್ ಪಠಣ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ರಾಷ್ಟ್ರೀಯ ಮುಸ್ಲಿಂ ಮಂಚ್ ಆಯೋಜಿಸಿದೆ. ಹಿಂದೂ ಭಕ್ತರ ಜೊತೆಗೆ ಸುಮಾರು 1,500 ಮುಸ್ಲಿಂ ಉಲೇಮಾಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸೂಫಿ ಸಂತರ ಸಮಾಧಿಗಳಿಗೆ ಸಹ ಅವರು ತೆರಳಲಿದ್ದಾರೆ ಎನ್ನಲಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More