ರಕ್ಷಣೆ ನೀಡಿದ ಪೊಲೀಸರ ವಶದಲ್ಲೇ ವ್ಯಕ್ತಿ ಕೊಲೆಯಾಗುವುದು ಉ.ಪ್ರದೇಶದ ವಾಸ್ತವ

ಆರೋಪಿಗೆ ಜೀವಭಯವಿದೆ ಎಂದು ಕುಟುಂಬಸ್ಥರು ಬಹಿರಂಗವಾಗಿ ಹೇಳಿದ ಮೇಲೂ ಆತ ಕೊಲೆಯಾಗುತ್ತಾನೆ. ಪೊಲೀಸರ ರಕ್ಷಣೆಯಲ್ಲಿದ್ದ ವ್ಯಕ್ತಿಯ ಕತೆಯೇ ಹೀಗಾದಲ್ಲಿ, ಸಾಮಾನ್ಯರು ಪೊಲೀಸ್ ಇಲಾಖೆಯಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎಂಬ ‘ಸ್ಕ್ರಾಲ್‌’ ವರದಿಯ ಭಾವಾನುವಾದವಿದು

ಯೋಗಿ ಆದಿತ್ಯನಾಥ್ ಸರ್ಕಾರದ ಆಡಳಿತಶಾಹಿಗೆ ಗ್ಯಾಂಗ್‌ಸ್ಟರ್ ಮುನ್ನಾ ಬಜರಂಗಿ ಕೊಲೆಯಾಗಲಿದ್ದಾನೆ ಎನ್ನುವುದು ಮೊದಲೇ ತಿಳಿದಿತ್ತು. ಬಜರಂಗಿಯ ಪತ್ನಿ ಜೂ.೨೯ರಂದು ಪತ್ರಿಕಾಗೋಷ್ಠಿ ನಡೆಸಿ, ತನ್ನ ಪತಿಯನ್ನು ಕೊಲೆ ಮಾಡಲು ಪಿತೂರಿ ನಡೆಯುತ್ತಿದೆ ಎಂದು ಹೇಳಿದ್ದರು. ಬಜರಂಗಿಯ ಪತ್ನಿ ಈ ಆರೋಪ ಮಾಡಿದಾಗ ಆತ ಉತ್ತರ ಪ್ರದೇಶದ ಭಾಗ್ಪಟ್‌ ಜೈಲಿನಲ್ಲಿ ಪೊಲೀಸರ ವಶದಲ್ಲಿದ್ದ! ಇಷ್ಟೆಲ್ಲ ಆದ ನಂತರವೂ ಬಜರಂಗಿ ಮೇಲೆ ದಾಳಿ ನಡೆಯುತ್ತದೆ ಮತ್ತು ಇನ್ನೊಂದು ಕ್ರಿಮಿನಲ್ ಗ್ಯಾಂಗ್‌ಗೆ ಸೇರಿದ ವ್ಯಕ್ತಿಯಿಂದ ಕೊಲೆಯಾಗುತ್ತಾನೆ. ಉತ್ತರ ಪ್ರದೇಶದ ಆಡಳಿತ ಇಷ್ಟೊಂದು ದುರ್ಬಲವಾಗಿದೆಯೇ? ಒಬ್ಬ ವ್ಯಕ್ತಿ ಪೊಲೀಸರ ವಶದಲ್ಲಿದ್ದರೂ ಕೊಲೆಯಾಗುವ ಸಾಧ್ಯತೆ ಇದೆ ಎನ್ನುವ ವಿಷಯ ಗೊತ್ತಿದ್ದೂ, ಆತನಿಗೆ ರಕ್ಷಣೆ ನೀಡಲು ಸರ್ಕಾರ ವಿಫಲವಾಗಿರುವುದು ಪ್ರಜಾಸತ್ತೆಯ ದುರಂತ.

ಬೆಂಬಲಿಗರ ನಡುವೆ ಯೋಗಿ ಎಂದೇ ಜನಪ್ರಿಯವಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಈ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಜೈಲು ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ನಂತರ ರಾಜ್ಯದ ಡಿಜಿಪಿ ಒ ಪಿ ಸಿಂಗ್ ಹೇಳಿಕೆ ನೀಡಿ, "ಬಜರಂಗಿಗೆ ರಕ್ಷಣೆ ನೀಡುವಲ್ಲಿ ಇಲಾಖೆ ಅಲಕ್ಷ್ಯ ತೋರಿಲ್ಲ. ಹಾಗಿದ್ದರೂ ಆತ ಕೊಲೆಯಾಗಿದ್ದಾನೆ," ಎಂದು ಹೇಳಿದ್ದಾರೆ.

ಇಂತಹ ಬೇಜವಾಬ್ದಾರಿತನ ಹೇಳಿಕೆ ಕೊಡುವ ರಾಜ್ಯವೇ ಯೋಗಿ ಆದಿತ್ಯನಾಥರ ಉತ್ತರ ಪ್ರದೇಶ. ಉಗ್ರ ಹಿಂದುತ್ವ ರಾಷ್ಟ್ರೀಯವಾದಿ ಆದಿತ್ಯನಾಥ್ ಸ್ವತಃ ತನ್ನ ಹೆಸರಿನ ಮೇಲೆ ಕ್ರೂರ ಅಪರಾಧಗಳ ಆರೋಪವನ್ನು ಹೊತ್ತುಕೊಂಡಿದ್ದಾರೆ. ಆದರೆ, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಾಗ ರಾಜ್ಯದಿಂದ ಅಪರಾಧವನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವುದಾಗಿ ಶಪಥ ಮಾಡಿದ್ದರು. ೨೦೧೭ ನವೆಂಬರ್‌ನಲ್ಲಿ ಸಾರ್ವಜನಿಕ ವೇದಿಕೆಯಲ್ಲಿ ಮಾಡಿದ ಭಾಷಣದಲ್ಲಿ ಆದಿತ್ಯನಾಥ್, "ಅಪರಾಧಿಗಳನ್ನು ಜೈಲಿಗೆ ಅಟ್ಟಲಾಗುವುದು ಅಥವಾ ಎನ್‌ಕೌಂಟರ್ ಮೂಲಕ ಕೊಲೆ ಮಾಡಲಾಗುವುದು," ಎಂದು ಹೇಳಿದ್ದರು. ಹೀಗಾಗಿ, ಅವರ ಅಡಿಯಲ್ಲಿರುವ ಪೊಲೀಸ್ ಇಲಾಖೆ ಈ ವಾಕ್ಯವನ್ನು ಬಹಳ ಗಂಭೀರವಾಗಿಯೇ ತೆಗೆದುಕೊಂಡಂತೆ ಕಾಣಿಸುತ್ತದೆ. ಆದಿತ್ಯನಾಥ್ ಅವರ ಮೊದಲ ೧೦ ತಿಂಗಳ ಆಡಳಿತದಲ್ಲಿ ರಾಜ್ಯದಲ್ಲಿ ೯೨೧ ಎನ್‌ಕೌಂಟರ್‌ ದಾಖಲಾಗಿವೆ. ಪೊಲೀಸರು ನ್ಯಾಯಾಲಯದ ವಿಚಾರಣೆ ಇಲ್ಲದೆ ಮಾಡಿದ ಈ ಎನ್‌ಕೌಂಟರ್‌ಗಳಲ್ಲಿ ೩೩ ಮಂದಿ ಬಲಿಯಾಗಿದ್ದಾರೆ. ಈ ಕ್ರೂರ ಕ್ರಮಕ್ಕಾಗಿ ಸರ್ಕಾರ ರಾಷ್ಟ್ರೀಯ ಮಾನವ ಹಕ್ಕು ಆಯೋಗದಿಂದ ನೋಟಿಸ್ ಅನ್ನೂ ಪಡೆದುಕೊಂಡಿದೆ. ಆಯೋಗವು ಈ ಎನ್‌ಕೌಂಟರ್‌ಗಳು ಅಮಾನವೀಯ ಎಂದು ನೋಟಿಸ್ ಕಳುಹಿಸಿ ಪ್ರಶ್ನಿಸಿದೆ. ೨೦೧೭ರ ಏಪ್ರಿಲ್‌ನಿಂದ ೨೦೧೮ರ ಫೆಬ್ರವರಿ ನಡುವೆ ೧೦ ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ನ್ಯಾಯಾಂಗ ವಶದಲ್ಲಿ ಮರಣ ಹೊಂದಿರುವ ಸುಮಾರು ೩೬೫ ಪ್ರಕರಣ ವರದಿಯಾಗಿವೆ ಎಂದು ಮಾನವ ಹಕ್ಕು ಪ್ರಾಧಿಕಾರ ಹೇಳಿದೆ. ಮಾನವ ಹಕ್ಕು ಪ್ರಾಧಿಕಾರವು ಸಿದ್ಧಪಡಿಸಿರುವ ಅತಿ ಹೆಚ್ಚು ನ್ಯಾಯಾಂಗ ಮರಣಗಳು ದಾಖಲಾಗಿರುವ ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ಅಲ್ಲದೆ, ಎರಡನೇ ಸ್ಥಾನದಲ್ಲಿರುವ ರಾಜ್ಯಕ್ಕೆ ಹೋಲಿಸಿದರೆ ದುಪ್ಪಟ್ಟಿಗೂ ಅಧಿಕ ಮರಣ ದಾಖಲಿಸಿದೆ!

ಇದನ್ನೂ ಓದಿ : ಎನ್‌ಕೌಂಟರ್ ರಹಸ್ಯ | ಕಂತು 1 | ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವುದೇನು?

ನ್ಯಾಯಾಂಗ ವಶದಲ್ಲಿ ಆರೋಪಿಗಳ ಸಾವು, ಎನ್‌ಕೌಂಟರ್ ಪ್ರಕರಣಗಳು ಮೊದಲಾದವುಗಳು ಅತ್ಯಧಿಕವಾಗಿದ್ದರೂ ರಾಜ್ಯದಲ್ಲಿ ಅಪರಾಧದ ಪ್ರಮಾಣವೇನೂ ಇಳಿದಿಲ್ಲ. ಇದೇ ೧೦ ತಿಂಗಳ ಅವಧಿಯಲ್ಲಿ ಉತ್ತರ ಪ್ರದೇಶ ಅತಿ ಹೆಚ್ಚು ಸಂಖ್ಯೆಯಲ್ಲಿ ಅಪರಾಧಗಳನ್ನು ದಾಖಲಿಸಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ನಿರ್ದಿಷ್ಟ ಅಪರಾಧಗಳ ಸಂಖ್ಯೆಯೂ ಹೆಚ್ಚಾಗಿದೆ. ಮತ್ತೊಂದು ರೀತಿಯಲ್ಲಿ ಈ ಒಟ್ಟಾರೆ ಚಿತ್ರಣವನ್ನು ವಿಶ್ಲೇಷಿಸುವುದಾದಲ್ಲಿ, ಉತ್ತರ ಪ್ರದೇಶ ಸರ್ಕಾರ ಪೊಲೀಸರಿಗೆ ಅಪರಾಧಿಗಳನ್ನು ಕೊಲ್ಲುವ ಅಧಿಕಾರವನ್ನು ಕೊಡುವ ಮೂಲಕ ಒಂದು ಬಗೆಯ ಅಪರಾಧ ಹತ್ತಿಕ್ಕಲು ಮತ್ತೊಂದು ಬಗೆಯ ಅಪರಾಧಕ್ಕೆ ಪ್ರೋತ್ಸಾಹ ನೀಡಿರುವುದು ಖಚಿತ. ಹೀಗಾಗಿ, ನ್ಯಾಯದ ಅವಕಾಶ ಇನ್ನೂ ಕಡಿಮೆಯಾಗಿದೆ. ಏಕೆಂದರೆ, ಅಧಿಕಾರಿಗಳು ತಮ್ಮ ವಿರುದ್ಧವೇ ಕ್ರಮ ಕೈಗೊಳ್ಳುವ ಅವಕಾಶ ಅತಿ ಕಡಿಮೆ.

ಬಜರಂಗಿ ಪ್ರಕರಣ ಇನ್ನೂ ಗಂಭೀರ ಸ್ಥಿತಿಯನ್ನು ಸೂಚಿಸುತ್ತದೆ. ಸರ್ಕಾರವು ತನ್ನ ವಶದಲ್ಲಿದ್ದ ಆರೋಪಿಯೊಬ್ಬ ಸತ್ತಿರುವುದನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿದೆ. ಅಲ್ಲದೆ, ಆರೋಪಿಗೆ ಜೀವಭಯ ಇದೆ ಎನ್ನುವುದನ್ನು ಕುಟುಂಬಸ್ಥರು ಬಹಿರಂಗವಾಗಿ ಹೇಳಿದ ನಂತರವೂ ಆ ಮರಣವನ್ನು ತಡೆಯುವಲ್ಲಿ ಸರ್ಕಾರ ಸಫಲವಾಗಿಲ್ಲ. ಪೊಲೀಸರು ಸೂಕ್ತ ರಕ್ಷಣೆ ನೀಡಿದ್ದೇವೆ ಎಂದು ಹೇಳಿಕೊಂಡ ವ್ಯಕ್ತಿಯ ಕತೆಯೇ ಈ ಹೀಗಾದರೆ, ಜನಸಾಮಾನ್ಯರು ಪೊಲೀಸ್ ಇಲಾಖೆಯಿಂದ ಏನನ್ನು ನಿರೀಕ್ಷಿಸಲು ಸಾಧ್ಯ?

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More