ಮೋದಿ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಕುಸಿತ; ಅಧ್ಯಯನದಿಂದ ಬಹಿರಂಗ

ಮೋದಿಯವರು ಆಯ್ಕೆಯಾದ ಮೇಲೆ ಭಾರತದ ಪ್ರಜಾಸತ್ತೆಯು ತೀವ್ರ ಕುಸಿತ ಕಂಡಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ನಾಗರಿಕ ಸಮಾಜದ ಮೇಲಿನ ದಾಳಿಗಳೇ ಭಾರತದ ಈ ಕುಸಿತಕ್ಕೆ ಕಾರಣವೆಂದು ಅಧ್ಯಯನವೊಂದು ಗುರುತಿಸಿದೆ. ಈ ಕುರಿತ ‘ಸ್ಕ್ರಾಲ್‌’ ವರದಿಯ ಭಾವಾನುವಾದ ಇಲ್ಲಿದೆ

೨೦೧೪ರ ಮೇ ತಿಂಗಳಲ್ಲಿ ನರೇಂದ್ರ ಮೋದಿಯವರು ಭಾರತದ ಪ್ರಧಾನಮಂತ್ರಿಯಾಗಿ ಆಯ್ಕೆಯಾದರು. ಅದಕ್ಕಿಂತ ಮುಂಚೆ ಒಂದು ದಶಕಕ್ಕಿಂತ ಹೆಚ್ಚು ಕಾಲ ಅವರು ಬಲಪಂಥೀಯ ಕಠೋರವಾದಿ ಎಂದೇ ಪರಿಗಣಿತವಾಗಿದ್ದರು. ಅವರು ಪ್ರಧಾನಮಂತ್ರಿಯಾಗಿ ಆಯ್ಕೆಯಾದಾಗ ದೇಶದ ಪ್ರಜಾಸತ್ತೆಗೆ ಬಂದೊದಗಲಿರುವ ಆಪತ್ತಿನ ಬಗ್ಗೆ ಅನೇಕರು ದೇಶದ ಮೂಲೆಮೂಲೆಗಳಿಂದ ಆತಂಕ ವ್ಯಕ್ತಪಡಿಸಿದ್ದರು. ಈಗ ಭಾರತೀಯ ಜನತಾ ಪಕ್ಷವು ಕೇಂದ್ರ ಸರ್ಕಾರವಾಗಿ ಭದ್ರವಾಗಿ ನೆಲಯೂರಿ ದೇಶಾದ್ಯಂತ ಒಂದಾದ ಮೇಲೆ ಒಂದರಂತೆ ರಾಜ್ಯಗಳನ್ನು ಗೆಲ್ಲುತ್ತ ಸಾಗಿರುವುದರಿಂದ ಈ ಆತಂಕಗಳು ಈಗಲೂ ಮುಂದುವರಿಯುತ್ತಿವೆ ಹಾಗೂ ಇನ್ನೂ ಹೆಚ್ಚಾಗಿವೆ.

ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ ಅಧಿಕಾರಕ್ಕೇರಿ ಈಗ ನಾಲ್ಕು ವರ್ಷಗಳಾಗಿರುವ ಸಂದರ್ಭದಲ್ಲಿ ವಿಶ್ವಾದ್ಯಂತ ವಿವಿಧ ದೇಶಗಳಲ್ಲಿ ಪ್ರಜಾಸತ್ತೆಯ ಪರಿಸ್ಥಿತಿ ಹೇಗಿದೆ ಎಂಬುದರ ಮೇಲೆ ನಡೆದ ಅಧ್ಯಯನವೊಂದು ಈ ಆತಂಕಗಳಲ್ಲಿ ಕೆಲವನ್ನು ಪುಷ್ಟೀಕರಿಸಿದೆ. ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆಯ ಪ್ರಜಾಸತ್ತೆಯಾಗಿರುವ ಭಾರತ ಅಪಾಯದಲ್ಲಿದೆ.

ಮೇ ೨೮ರಂದು ಬಿಡುಗಡೆಯಾಗಿರುವ ಈ ವರದಿಯನ್ನು ೨,೫೦೦ಕ್ಕೂ ಹೆಚ್ಚು ಸಮಾಜ ವಿಜ್ಞಾನ ತಜ್ಞರು ಸ್ವೀಡನ್ನಿನ ಗಾಥೆನ್‌ಬರ್ಗ್ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ವಿಭಾಗವನ್ನು ಕೇಂದ್ರ ನೆಲೆಯನ್ನಾಗಿಟ್ಟುಕೊಂಡು ಅಧ್ಯಯನ ಮಾಡಿ ರೂಪಿಸಿದ್ದಾರೆ.

ಭವಿಷ್ಯದ ವಿಶ್ವದಲ್ಲಿ ಪ್ರಜಾಸತ್ತೆಯ ಪರಿಸ್ಥಿತಿ ಆಶಾದಾಯಕವಾಗಿಲ್ಲ. ಬ್ರೆಜಿಲ್, ಭಾರತ, ರಷ್ಯಾ, ಟರ್ಕಿ ಮತ್ತು ಅಮೆರಿಕಗಳನ್ನೂ ಒಳಗೊಂಡಂತೆ ಅನೇಕ ದೊಡ್ಡ-ದೊಡ್ಡ ದೇಶಗಳಲ್ಲಿ ಪ್ರಜಾಸತ್ತೆ ಅಪಾಯದಲ್ಲಿದೆ. ಈ ಪ್ರಕ್ರಿಯೆ ಭೂಮಂಡಲದ ಮೂರನೇ ಒಂದರಷ್ಟು ಜನಸಂಖ್ಯೆಯ ಮೇಲೆ ಅಥವಾ ಇನ್ನೂರೈವತ್ತು ಕೋಟಿ ಜನರ ಮೇಲೆ ಪರಿಣಾಮ ಬೀರುತ್ತಿದೆ.

ಭಾರತದ ಉದಾರವಾದಿ ಪ್ರಜಾತಂತ್ರ ಸೂಚಿ ಕುರಿತು ವರದಿ ವಿಶ್ಲೇಷಿಸಿದೆ. ಈ ವರದಿಯಲ್ಲಿರುವ ಉದಾರ ಪ್ರಜಾತಂತ್ರ ಸೂಚಿಯು, ಪ್ರಜಾತಂತ್ರದ ಉದಾರವಾದಿ ಮತ್ತು ಚುನಾವಣಾ ಅಂಶಗಳ ಮೇಲೆ ಬೆಳಕು ಚೆಲ್ಲುವುದಕ್ಕೆ ಪ್ರಯತ್ನಿಸಿದೆ. ಇದರಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವುದು ಹಾಗೂ ವ್ಯಕ್ತಿಗತ ಹಕ್ಕುಗಳು ಮತ್ತು ಸಾಂಸ್ಥಿಕ ಅಧಿಕಾರಗಳ ವಿಷಯದಲ್ಲಿ ಸರ್ಕಾರದ ಕಾರ್ಯನಿರ್ವಹಣೆ ಸೇರಿರುತ್ತದೆ.

ಉದಾರವಾದಿ ಪ್ರಜಾತಂತ್ರ ಸೂಚಿಯಲ್ಲಿ ಭಾರತವು ವಿಶ್ವದ ದೇಶಗಳ ಪೈಕಿ ೮೧ನೇ ಸ್ಥಾನದಲ್ಲಿದೆ. ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಶ್ರೀಲಂಕಾ ಮತ್ತು ನೇಪಾಳಗಳು ಭಾರತಕ್ಕಿಂತ ಸುಧಾರಿತ ಸ್ಥಾನಗಳಲ್ಲಿವೆ. ಅಲ್ಲದೆ, ಭಾರತದ ಚಾರಿತ್ರಿಕ ಸಾಧನೆಗಳಿಗೆ ಹೋಲಿಸಿದರೆ, ಮೋದಿಯವರು ೨೦೧೪ರಲ್ಲಿ ಅಧಿಕಾರಕ್ಕೇರಿದ ನಂತರ ಭಾರತವು ಈ ಅಂಶದಲ್ಲಿ ಗಣನೀಯವಾಗಿ ಕುಸಿದಿರುವುದು ಕಂಡುಬರುತ್ತದೆ.

ಕುಸಿಯುತ್ತಿರುವ ಉದಾರವಾದ

ಉದಾರವಾದ ಕುಸಿಯುತ್ತಿರುವುದಕ್ಕೆ ಕಾರಣವೇನು? ಭಾರತದ ಪ್ರಜಾಸತ್ತೆಯ ಚುನಾವಣಾ ಮಗ್ಗಲು ಕುಸಿಯುತ್ತಿಲ್ಲ. ಚುನಾವಣೆಗಳನ್ನು ಸಕಾಲಕ್ಕೆ ಹಾಗೂ ಮುಕ್ತ, ನ್ಯಾಯಸಮ್ಮತವಾಗಿ ನಡೆಸಲಾಗುತ್ತಿದೆ. ಭಾರತದ ಕಳಪೆ ಪ್ರದರ್ಶನಕ್ಕೆ ಕಾರಣ, ಭಾರತೀಯ ವ್ಯವಸ್ಥೆಯ ಉದಾರವಾದಿ ಗುಣಲಕ್ಷಣಗಳನ್ನು ಹತ್ತಿಕ್ಕುತ್ತಿರುವುದು.

ಹಿಂದುತ್ವ-ರಾಷ್ಟ್ರೀಯವಾದಿ ಸರ್ಕಾರ ಚುನಾಯಿತವಾದ ಮೇಲೆ ಮಾಧ್ಯಮ ಸ್ವಾತಂತ್ರ್ಯ ಮತ್ತು ನಾಗರಿಕ ಸಮಾಜದ ಚಟುವಟಿಕೆಗಳ ಮೇಲೆ ಪ್ರಾರಂಭವಾಗಿರುವ ಅತಿಕ್ರಮಣಗಳು ದಕ್ಷಿಣ ಭೂಗೋಳದ ಸುದೀರ್ಘ ಮತ್ತು ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಜಾಸತ್ತೆಯನ್ನು ಶಿಥಿಲಗೊಳಿಸಲಾರಂಭಿಸಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ದೇಶದ ವ್ಯವಸ್ಥೆಯ ಉದಾರವಾದಿ ಗುಣಲಕ್ಷಣಗಳನ್ನು ಅಳೆಯುವುದಕ್ಕಾಗಿ ಈ ವರದಿಯು ಉದಾರವಾದಿ ಅಂಶ ಸೂಚಿ ಎಂದು ಎಂಬ ಮಾನದಂಡ ಬಳಸಿದೆ. ಇದರಲ್ಲಿ ಬಿಡಿ-ಬಿಡಿ ವ್ಯಕ್ತಿಗಳ ಮತ್ತು ಅಲ್ಪಸಂಖ್ಯಾತರ ಹಕ್ಕುಗಳು ಹಾಗೂ ರಾಜಕೀಯ ವ್ಯವಸ್ಥೆಯಲ್ಲಿರುವ ವಿವಿಧ ಶಕ್ತಿಗಳ ನಡುವಿನ ಕಾರ್ಯನಿರ್ವಹಣೆ ಮತ್ತು ಅಧಿಕಾರಗಳು ಸೇರಿವೆ.

೨೦೧೪ರಿಂದ ಈ ವಿಷಯದಲ್ಲಿ ಭಾರತದ ಸಾಧನೆ ತುಂಬಾ ಕಳಪೆಯಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ, ನಾಗರಿಕ ಸಮಾಜದ ದಾಳಿಗೊಳಗಾಗಿದೆ ಎಂದು ವರದಿ ಹೇಳಿದೆ. ಉದಾರವಾದಿ ಅಂಶ ಸೂಚಿಯಲ್ಲಿ ಭಾರತಕ್ಕೆ ತುಂಬಾ ಕಡಿಮೆ ಅಂಕ ಬರುವುದಕ್ಕೆ ಕಾರಣವಾಗಿರುವ ಎರಡು ಅಂಶಗಳು ಎಂದರೆ, ಮೋದಿಯವರು ಪ್ರಧಾನಮಂತ್ರಿಯಾಗಿರುವ ಅವಧಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಆಗುತ್ತಿರುವ ದಾಳಿ ಮತ್ತು ನಾಗರಿಕ ಸಮಾಜದ ಮೇಲೆ ಆಗುತ್ತಿರುವ ದಾಳಿ.

೨೦೧೪ರಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ಅಂಕಗಳು ಶೇಕಡ ೨೭ರಷ್ಟು ಇಳಿಯುವುದರೊಂದಿಗೆ ಬಿಜೆಪಿ ಸರ್ಕಾರದಡಿಯಲ್ಲಿ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಗಣನೀಯವಾಗಿ ಕುಸಿದಿದೆ. ಭಾರತದಲ್ಲಿ ನಾಗರಿಕ ಸಮಾಜದ ಕಿರಿದಾಗುತ್ತಿರುವ ಸ್ಥಳಾವಕಾಶದ ಬಗ್ಗೆ ಈ ವರದಿಯಲ್ಲಿ ಈ ರೀತಿ ಹೇಳಲಾಗಿದೆ.

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಬಳಸಿಕೊಂಡು ಎನ್‌ಜಿಓಗಳಿಗೆ (ಸರ್ಕಾರೇತರ ಸಂಘಟನೆಗಳು) ವಿದೇಶದಿಂದ ಬರುವ ಹಣಕಾಸು ನೆರವಿನ ಮೇಲೆ ಸರ್ಕಾರ ಹೆಚ್ಚು ನಿರ್ಬಂಧ ಹೇರುತ್ತಿದೆ. ೨೦೧೭ರ ಹೊತ್ತಿಗೆ, ದೇಶದಲ್ಲಿ ಪ್ರಧಾನವಾಗಿ ಮಾನವ ಹಕ್ಕುಗಳು ಮತ್ತು ಪರಿಸರ ವಿಷಯಗಳ ಮೇಲೆ ಕಾರ್ಯನಿರ್ವಹಿಸುತ್ತಿದ್ದ ೨೦,೦೦೦ ಸಿಎಸ್‌ಒಗಳು (ನಾಗರಿಕ ಸಮಾಜ ಸಂಘಟನೆಗಳು) ಪರವಾನಗಿ ಕಳೆದುಕೊಂಡಿವೆ. ಅದಾದ ಮೇಲೆ ಉಳಿದ ಕೇವಲ ೧೩,೦೦೦ ಸಿಎಸ್‌ಒಗಳು ಅನಿರ್ಬಂಧಿತವಾಗಿ ಕಾರ್ಯನಿರ್ವಹಿಸುತ್ತಿವೆ. ನಾಗರಿಕ, ರಾಜಕೀಯ, ಆರ್ಥಿಕ, ಸಾಮಾಜಿಕ, ಪರಿಸರ ಅಥವಾ ಸಾಂಸ್ಕೃತಿಕ ಆದ್ಯತೆಗಳನ್ನು ಸರ್ಕಾರ ಬೆಂಬಲಿತ ಸಂಘಟನೆಗಳಿಗಿಂತ ಭಿನ್ನವಾಗಿ ಪ್ರತಿಪಾದಿಸುತ್ತಿರುವ ಸಂಘಟನೆಗಳ ಬಾಯಿ ಮುಚ್ಚಿಸುವ ಸಲುವಾಗಿ ಎಫ್‌ಸಿಆರ್‌ಎ ಕಾಯ್ದೆಯನ್ನು ಹೆಚ್ಚಾಗಿ ಬಳಸಲಾಗುತ್ತಿದ್ದು, ಅದನ್ನು ಹಿಂಪಡೆಯಬೇಕೆಂದು ವಿಶ್ವಸಂಸ್ಥೆಯ ವರದಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕೇಳಿಕೊಂಡಿವೆ.

ಪರಿಣಾಮವಾಗಿ, ದೇಶದ ನಾಗರಿಕ ಸಮಾಜದ ಪಾಲ್ಗೊಳ್ಳುವಿಕೆಯ ಸೂಚಿ ೨೦೧೧ರಿಂದ ಗಣನೀಯವಾಗಿ ಇಳಿಮುಖವಾಗಿದ್ದು, ೨೦೧೫ರಲ್ಲಿ ಅಂದರೆ, ಮೋದಿ ಆಡಳಿತದ ಅವಧಿಯಲ್ಲಿ ಅತಿದೊಡ್ಡ ಕುಸಿತ ಕಂಡಿದೆ. ೧೯೭೫ರ ತುರ್ತುಪರಿಸ್ಥಿತಿ ಮತ್ತು ಪ್ರಸ್ತುತ ನಿರಂಕುಶಾಧಿಕಾರಗಳ ನಡುವೆ ಹಲವು ವಿಶ್ಲೇಷಕರು ತುಲನೆ ಮಾಡುತ್ತಿರುವಂತೆ, ಮೋದಿ ಆಡಳಿತಾವಧಿಯಲ್ಲಿ ದೇಶದ ಪರಿಸ್ಥಿತಿ ತುರ್ತುಪರಿಸ್ಥಿತಿಷ್ಟು ಕೆಟ್ಟದಾಗಿಲ್ಲ ಎಂದು ಈ ವರದಿಯಲ್ಲಿ ಹೇಳಲಾಗಿದೆ.

ಈ ಪರಿಸ್ಥಿತಿ ಮುಂಬರುವ ವರ್ಷಗಳಲ್ಲಿ ಬದಲಾಗುತ್ತದೆಯೇ ಅಥವಾ ಭಾರತವು ೧೯೭೫-೧೯೭೭ರ ಅವಧಿಯಲ್ಲಿದ್ದಂತೆ ಇನ್ನಷ್ಟು ಕಠೋರ ನಿರಂಕುಶಾಧಿಕಾರಕ್ಕೆ ಕುಸಿಯುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More