ಅಮೆರಿಕದ ವ್ಯೂಹತಂತ್ರ ಅನುಸರಿಸುತ್ತಿರುವ ಭಾರತೀಯ ಬಲಪಂಥೀಯರು

ಭಾರತದ ವಾಕ್ ಸ್ವಾತಂತ್ರ್ಯ ಕಾನೂನುಗಳು ಅಮೆರಿಕದ ವಾಕ್ ಸ್ವಾತಂತ್ರ್ಯ ಕಾನೂನುಗಳಿಗಿಂತ ದುರ್ಬಲವಾಗಿದ್ದು, ರಾಷ್ಟ್ರೀಯ ಭದ್ರತೆ ಹೆಸರಿನಲ್ಲಿ ದೌರ್ಜನ್ಯಕ್ಕೆ ಅವಕಾಶ ಮಾಡಿಕೊಡುತ್ತಿವೆ. ಈ ಕುರಿತು ‘ಸ್ಕ್ರಾಲ್‌’ಜಾಲತಾಣಕ್ಕೆ ಶ್ರುತಿಸಾಗರ್ ಯಮುನನ್ ಬರೆದ ಲೇಖನದ ಭಾವಾನುವಾದ ಇಲ್ಲಿದೆ

೧೯೮೦ರ ದಶಕದ ಕೊನೆಯ ಭಾಗದಲ್ಲಿ ಅಮೆರಿಕದ ಉಗ್ರ ಬಲಪಂಥೀಯ ವಿಶ್ಲೇಷಕರ ಗುಂಪೊಂದು, ಪಶ್ಚಿಮದಲ್ಲಿ ಪಾರಂಪರಿಕ ಕ್ರಿಶ್ಚಿಯನ್ ಮೌಲ್ಯಗಳು ಕುಸಿಯುತ್ತಿರುವುದಕ್ಕೆ ಕಾರಣಗಳನ್ನು ವಿವರಿಸುವ ಪರಿಕಲ್ಪನೆಯನ್ನು ಮುಂದೆ ತಂದಿತು. ಸಂಪ್ರದಾಯಶರಣ ಸಿದ್ಧಾಂತಿ, ಬರೆಹಗಾರ ವಿಲಿಯಂ ಎಸ್ ಲಿಂಡ್ ಇದನ್ನು ನಾಲ್ಕನೇ ಪೀಳಿಗೆಯ ಯುದ್ಧ ಎಂದು ಕರೆದರು. ಸೋವಿಯತ್ ಒಕ್ಕೂಟವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಮ್ಯುನಿಸ್ಟ್ ಪ್ರಭುತ್ವ ಪ್ರತಿಷ್ಠಾಪಿಸಬೇಕೆಂಬ ತನ್ನ ಕನಸಿನೊಂದಿಗೆ ಪತನವಾದ ನಂತರ ಲಿಂಡ್ ಅವರು, ಯುದ್ಧದ ವ್ಯಾಪ್ತಿಯೀಗ ವಿಸ್ತಾರಗೊಂಡಿದೆ ಎಂದು ಹೇಳಿದರು. ಮಿಲಿಟರಿ ಮತ್ತು ಆರ್ಥಿಕತೆಗೆ ಸೀಮಿತವಾಗಿದ್ದ ಯುದ್ಧವೀಗ ಸಮಾಜ ಮತ್ತು ಸಂಸ್ಕೃತಿಗಳನ್ನೂ ಆವರಿಸಿಕೊಂಡಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.

ಪಾಶ್ಚಿಮಾತ್ಯ ಸಮಾಜವನ್ನು ಪತನಗೊಳಿಸುವುದಕ್ಕೆ ಪ್ರಭುತ್ವೇತರ ಶಕ್ತಿಗಳಿಗೆ ನೆರವಾಗಲು ಅಮೆರಿಕ ಮತ್ತು ಯೂರೋಪಿನ ಬೀದಿಗಳಲ್ಲಿ ಬುದ್ಧಿಜೀವಿಗಳ ದೊಡ್ಡ ಪಡೆಯೇ ಕಾರ್ಯನಿರತವಾಗಿದ್ದು ನಾಸ್ತಿಕವಾದ, ಮಹಿಳಾವಾದ ಮತ್ತು ಸಲಿಂಗಕಾಮ ಚಳವಳಿಗಳು ಈ ಬೃಹತ್ ಪ್ರಯತ್ನದ ಭಾಗಗಳಾಗಿವೆ ಎಂಬುದು ಲಿಂಡ್ ಅವರ ಅಭಿಪ್ರಾಯವಾಗಿತ್ತು. ಅಲ್ಲದೆ, ಯಹೂದಿಗಳು ಮತ್ತು ಅವರ ಬೆಂಗಲಿಗರೇ ಈ ಪರೋಕ್ಷ ಯುದ್ಧದ ರೂವಾರಿಗಳು ಎಂದು ಆರೋಪಿಸಿದ ಲಿಂಡ್ ವಾದವು, ಸಾರಾಂಶದಲ್ಲಿ ಜನಾಂಗೀಯ ತಾರತಮ್ಯದಿಂದಲೂ ಕೂಡಿತ್ತು.

ಹಲವು ವರ್ಷಗಳ ನಂತರವೂ ಲಿಂಡ್ ವಾದ ಚಾಲ್ತಿಯಲ್ಲಿದೆ. ಆದರೆ, ಆಗಿರುವ ಒಂದು ಬದಲಾವಣೆ ಏನೆಂದರೆ ಯಹೂದಿಗಳ ಜಾಗದಲ್ಲೀಗ ಮುಸ್ಲಿಮರನ್ನು ಇಡಲಾಗಿದೆ; ಅವರನ್ನು ಪಶ್ಚಿಮದ ಮೇಲೆ ಸಂಸ್ಕೃತಿ ಯುದ್ಧ ಸಾರಿದವರೆಂಬಂತೆ ಬಿಂಬಿಸಲಾಗುತ್ತಿದೆ.

ಇದನ್ನೂ ಓದಿ : ಅಮೆರಿಕ-ಚೀನಾ ವ್ಯಾಪಾರ ಸಮರದಿಂದ ಭಾರತದ ಮೇಲಾಗುವ ಪರಿಣಾಮವೇನು?

ಇದೇ ತೆರನಾದ ಬೆಳವಣಿಗೆಗಳು ಇಂದು ಭಾರತದಲ್ಲೂ ನಡೆಯುತ್ತಿವೆ. ಅಕಡೆಮಿಕ್ ವಲಯದ ಬುದ್ದಿಜೀವಿಗಳಿಂದ ಹಿಡಿದು ಸಾಮಾಜಿಕ ಕಾರ್ಯಕರ್ತರ ತನಕ ಯಾರ್ಯಾರು ಪ್ರಭುತ್ವದ ನೀತಿಗಳನ್ನು ಪ್ರಶ್ನಿಸುತ್ತಾರೋ, ಯಾರ್ಯಾರು ಆಡಳಿತಾಂಗದ ವಿರುದ್ಧ ಸೆಟೆದು ನಿಂತಿದ್ದಾರೋ ಅವರೆಲ್ಲರಿಗೂ ‘ನಗರ ನಕ್ಸಲರು’ ಎಂಬ ಹಣೆಪಟ್ಟಿಯನ್ನು ದೇಶದ ಬಲಪಂಥೀಯ ವಿಶ್ಲೇಷಕರು ಕಳೆದ ಕೆಲವು ತಿಂಗಳಿಂದ ಹಚ್ಚುತ್ತಿದ್ದಾರೆ. ಭಾರತವನ್ನು ಒಡೆಯುವುದಕ್ಕೆ ಪ್ರಯತ್ನಿಸುತ್ತಿರುವ ನಕ್ಸಲರು ಮತ್ತು ಕಾಶ್ಮೀರದ ಪ್ರತ್ಯೇಕವಾದಿಗಳಂತಹ ಶಕ್ತಿಗಳಿಗೆ ಈ ಕಾರ್ಯಕರ್ತರು ಗೌಪ್ಯವಾಗಿ ಸಹಕರಿಸುತ್ತಿದ್ದಾರೆ ಎನ್ನುವ ಈ ವಿಶ್ಲೇಷಕರು, ವಾಸ್ತವದಲ್ಲಿ ಲಿಂಡ್ ವಾದವನ್ನೇ ಪ್ರತಿಧ್ವನಿಸುತ್ತಿದ್ದಾರೆ.

ಸಾಂಸ್ಕೃತಿಕ ಮಾರ್ಕ್ಸ್‌ವಾದ

ಆದರೆ, ಈಗಿನ ಭಾರತದ ಪರಿಸ್ಥಿತಿಗೂ ಹಾಗೂ ಅಮೆರಿಕದ ಪರಿಸ್ಥಿತಿಗೂ ಒಂದು ವ್ಯತ್ಯಾಸವಿದೆ. ಸಾಮಾಜಿಕ ಕಾರ್ಯಕರ್ತರನ್ನು ದೆವ್ವಗಳಂತೆ ಚಿತ್ರಿಸುವುದು ಅಮೆರಿಕಕ್ಕಿಂತ ಭಾರತದಲ್ಲಿ ಹೆಚ್ಚು ಅಪಾಯಕಾರಿಯಾಗಿ ನಡೆಯುತ್ತಿದೆ. ಏಕೆಂದರೆ, ಭಾರತದ ವಾಕ್ ಸ್ವಾತಂತ್ರ್ಯ ಕಾನೂನುಗಳು ಅಮೆರಿಕದ ವಾಕ್ ಸ್ವಾತಂತ್ರ್ಯದ ಕಾನೂನುಗಳಿಗಿಂತ ಬಹಳಷ್ಟು ದುರ್ಬಲವಾಗಿವೆ. ಅಮೆರಿಕದಲ್ಲಿ ಪ್ರಭುತ್ವ ವಿರೋಧಿ ಬುದ್ಡಿಜೀವಿಗಳನ್ನು ಸಾರ್ವಜನಿಕವಾಗಿ ದೆವ್ವಗಳಂತೆ ಬಿಂಬಿಸಲಾಯಿತಾದರೂ ಪ್ರಭುತ್ವವು ಅಂಥ ಬುದ್ಡಿಜೀವಿಗಳ ಮೇಲೆ ಮುಗಿಬೀಳಲಿಲ್ಲ. ಆದರೆ, ಭಾರತದಲ್ಲಿ, ಬಹುಸಂಖ್ಯಾತ ಮನಸ್ಥಿತಿಯ ಪ್ರಭುತ್ವವು ತನ್ನ ದೌರ್ಜನ್ಯಗಳನ್ನು ಸಮರ್ಥಿಸಿಕೊಳ್ಳುವುದಕ್ಕೆ ಈ ಪರಿಭಾಷೆಯನ್ನು ಬಳಸುತ್ತಿದೆ.

ಲಿಂಡ್ ಥರದ ವಿಶ್ಲೇಷಕರು ಕಟ್ಟಿದ ಚಳವಳಿಯು ದ್ವಿತೀಯ ಮಹಾಯುದ್ಧದ ತಕ್ಷಣವೇ ಜನರನ್ನು ಆಕರ್ಷಿಸಲಾರಂಭಿಸಿತು. ಎರಡು ಭಿನ್ನ ಲೋಕದೃಷ್ಟಿಯನ್ನು ಹೊಂದಿದ್ದ ವಿಶ್ವದ ಎರಡು ಮಹಾಶಕ್ತಿಗಳ ನಡುವೆ ಪ್ರಪಂಚವು ಇಬ್ಬಾಗವಾಗಿತ್ತು. ಯುದ್ಧಾನಂತರದಲ್ಲಿ ವಿಶ್ವದ ಮೇಲೆ ಆಧಿಪತ್ಯ ಸಾಧಿಸುವುದಕ್ಕಾಗಿ ಈ ಎರಡು ಮಹಾಶಕ್ತಿಗಳ ನಡುವೆ ಸಂಘರ್ಷ ತೀವ್ರಗೊಂಡಿತ್ತು. ಒಂದು ಶಕ್ತಿಗೆ ಕಮ್ಯುನಿಸ್ಟ್ ಸೋವಿಯತ್ ಯೂನಿಯನ್ ನಾಯಕತ್ವ ನೀಡಿದ್ದರೆ, ಇನ್ನೊಂದಕ್ಕೆ ಮುಕ್ತ ಮಾರುಕಟ್ಟೆಯ ಅಮೆರಿಕ ನೇತೃತ್ವ ವಹಿಸಿತ್ತು.

ಎರಡು ವಿಶ್ವ ಮಹಾಯುದ್ಧಗಳ ನಡುವಿನ ಅವಧಿಯಲ್ಲಿ ಫ್ರಾಂಕ್‌ಫರ್ಟ್ ಚಿಂತನಾಧಾರೆ ಹುಟ್ಟಿಕೊಂಡಿತು (ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿದ್ದ ಗಯಟೆ ಯೂನಿವರ್ಸಿಟಿಯ ಸಾಮಾಜಿಕ ಸಂಶೋಧನಾ ಸಂಸ್ಥೆಯ ಜೊತೆ ಗುರುತಿಸಿಕೊಂಡಿದ್ದ ಎಡಪಂಥೀಯ ಪ್ರಭಾವಶಾಲಿ ಚಿಂತಕರನ್ನು ವರ್ಣಿಸಲು ಈ ಪದವನ್ನು ಬಳಸಲಾಗಿತ್ತು). ಅಡಾಲ್ಫ್ ಹಿಟ್ಲರ್ ಪ್ರವರ್ಧಮಾನಕ್ಕೆ ಬಂದ ಮೇಲೆ, ಈ ಚಿಂತಕರಲ್ಲಿ ಬಹಳಷ್ಟು ಮಂದಿ ಜರ್ಮನಿಯನ್ನು ತೊರೆದು ಅಮೆರಿಕಕ್ಕೆ ವಲಸೆ ಬಂದು ನೆಲೆನಿಂತರು.

೧೯೬೦ರ ಹೊತ್ತಿಗೆ, ಅಮೆರಿಕದ ಬಲಪಂಥೀಯ ಚಿಂತಕರು ಫ್ರಾಂಕ್‌ಫರ್ಟ್ ಚಿಂತನಾಧಾರೆಯ ವಿರುದ್ಧ ಭಾರಿ ಟೀಕಾಪ್ರಹಾರ ಪ್ರಾರಂಭಿಸಿದರು. ಎಡಪಂಥೀಯ ಚಿಂತಕರನ್ನು ಬಂಡವಾಳವಾದ ಮತ್ತು ಕುಟುಂಬ ಮೌಲ್ಯಗಳನ್ನು ಪ್ರತಿಪಾದಿಸಿದ ಕ್ರಿಶ್ಚಿಯಾನಿಟಿಯ ವಿರೋಧಿಗಳು ಎಂಬಂತೆ ಬಿಂಬಿಸುತ್ತ, ಈ ಚಿಂತಕರಿಗೆ ಸಾಂಸ್ಕೃತಿಕ ಮಾರ್ಕ್ಸ್‌ವಾದಿಗಳು ಎಂಬ ಹಣೆಪಟ್ಟಿ ಹಚ್ಚಲಾಯಿತು. ೧೯೬೦ರ ದಶಕದ ನಾಗರಿಕ ಹಕ್ಕುಗಳ ಚಳವಳಿ ಕೂಡ ಈ ಎಡಪಂಥೀಯ ಚಿಂತಕರೇ ಹುಟ್ಟುಹಾಕಿದ ಹುನ್ನಾರ ಎಂಬಂತೆಯೂ ಪ್ರಚಾರ ಮಾಡಲಾಯಿತು. ಅರ್ಥಶಾಸ್ತ್ರದಲ್ಲಿನ ಉದಾರವಾದಿತನವು ಮೂಲತಃ ಪಶ್ಚಿಮದ್ದು ಎಂದು ಹೇಳಿಕೊಳ್ಳುತ್ತಲೇ ಇನ್ನೊಂದು ಕಡೆ ಸಮಾಜ ಮತ್ತು ಸಂಸ್ಕೃತಿಗಳಲ್ಲಿನ ಉದಾರವಾದಿತನವನ್ನು ಎಡಪಂಥೀಯರ ಕುತಂತ್ರ ಎಂದು ಚಿತ್ರಿಸಲಾಯಿತು.

ಈ ಎರಡು ಧಾರೆಗಳ ನಡುವಿನ ಹೋರಾಟವು ಕೇಂದ್ರೀಕರಣಗೊಂಡಿದ್ದು ಅಮೆರಿಕದ ಸಂಸ್ಕೃತಿಯನ್ನು ಪ್ರಭಾವಿಸುವ ಕ್ಷೇತ್ರಗಳು ಎಂದೇ ಪರಿಗಣಿಸಲ್ಪಟ್ಟಿದ್ದ ಸಿನಿಮಾ ಮತ್ತು ವಿಶ್ವವಿದ್ಯಾಲಯಗಳ ಮೇಲೆಯೇ. ರಾಜಕೀಯವಾಗಿ ಒತ್ತಡ ಹೇರುವುದು, ವಿಶ್ವವಿದ್ಯಾಲಯಗಳ ಮಾನವಶಾಸ್ತ್ರ ವಿಭಾಗಗಳ ಸಂಯೋಜನೆಯನ್ನು ಬದಲಿಸುವುದನ್ನೂ ಒಳಗೊಂಡಂತೆ ಸುದೀರ್ಘ ಅಭಿಯಾನವನ್ನೇ ಸಾಂಸ್ಕೃತಿಕ ಸಂಪ್ರದಾಯಶರಣರು ನಡೆಸಿದರು. ರಿಪಬ್ಲಿಕನ್ ಪಕ್ಷದ ಬೆಂಬಲದೊಂದಿಗೆ ಮುನ್ನಡೆದ ಈ ಚಳವಳಿಯು ೧೯೮೦ರ ದಶಕದ ತನಕ ಸೋವಿಯತ್ ಒಕ್ಕೂಟ ವಿರೋಧಿ ಉನ್ಮಾದವಾಗಿ ಬೆಳೆದುನಿಂತಿತು.

ಸೋವಿಯತ್ ಒಕ್ಕೂಟ ವಿಘಟನೆಯಾದ ಮೇಲೆ ಹಾಗೂ ಅಣುಬಾಂಬ್ ಯುದ್ಧ ಭೀತಿ ಹೊರಟುಹೋದ ಮೇಲೆ ಸಾಂಸ್ಕೃತಿಕ ಕ್ಷೇತ್ರವೇ ಅಮೆರಿಕದಲ್ಲಿ ಉದಾರವಾದಿಗಳು ಮತ್ತು ಸಂಪ್ರದಾಯಶರಣರ ನಡುವಿನ ಪ್ರಾಥಮಿಕ ರಣರಂಗವಾಗಿತ್ತು.

ಲಿಂಡ್ ಥರದ ಕರ್ಮಠ ಸಂಪ್ರದಾಯಶರಣರು ಪ್ರವರ್ಧಮಾನಕ್ಕೆ ಬಂದದ್ದು, ನಾಲ್ಕನೇ ಪೀಳಿಗೆಯ ಯುದ್ಧದಂತಹ ಪರಿಕಲ್ಪನೆಗಳನ್ನು ಹುಟ್ಟುಹಾಕಿದ್ದು ಈ ಶೀತಲಸಮರೋತ್ತರ ಯುಗದಲ್ಲೇ. ೧೯೯೫ರಲ್ಲಿ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯಲ್ಲಿ ಪ್ರಕಟವಾದ ಲಿಂಡ್ ಅವರ ಭವಿಷ್ಯವಾದಿ ಬರೆಹವು ಅತಿ ಬಲಪಂಥೀಯವಾದಿಗಳ ಆಲೋಚನಾ ಲಹರಿಯ ಮೇಲೆ ಬೆಳಕು ಚೆಲ್ಲುತ್ತದೆ. ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಅಧಿಕ್ಕಾರಕ್ಕೆ ಏರುವುದರೊಂದಿಗೆ ಈ ಆಲೋಚನೆಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ಬಂದಿವೆ. ಎಷ್ಟರಮಟ್ಟಿಗೆ ಎಂದರೆ, ಸರ್ಕಾರಿ ನೌಕರರಿಗೆ ನೀಡುವ ಮೆಮೊಗಳಲ್ಲಿಯೂ ಅಮೆರಿಕದ ಅಧ್ಯಕ್ಷರನ್ನು ದುರ್ಬಲಗೊಳಿಸುವುದಕ್ಕೆ ಮಾವೋವಾದಿ ಕಾರ್ಯತಂತ್ರದ ಬಗ್ಗೆ ನಮೂದಿಸಲಾಗುತ್ತಿದೆ.

ಲಿಂಡ್ ಥರದ ವಾದಗಳಿಗೂ ಹಾಗೂ ಭಾರತದಲ್ಲಿನ ಸಮಕಾಲಿನ ಬಲಪಂಥೀಯ ಚಿಂತಕರು ಮಾಡುವ ವಾದಗಳಿಗೂ ಬಹಳ ವ್ಯತ್ಯಾಸಗಳೇನಿಲ್ಲ. ಸಾಂಸ್ಕೃತಿಕ ಮಾರ್ಕ್ಸ್‌ವಾದಿಗಳು ಎಂಬ ಪರಿಭಾಷೆಯ ಬದಲು ಭಾರತದಲ್ಲಿ ನಗರ ನಕ್ಸಲರು ಎಂಬ ಪದಬಳಕೆ ಮಾಡಲಾಗುತ್ತಿದೆ; ಅದರೆ ಎರಡೂ ಪದಪುಂಜಗಳ ಗುರಿ ಒಂದೇ. ಈ ನಿರೂಪಣೆಯ ಪ್ರಕಾರ, ನಗರ ನಕ್ಸಲರು ಎಂದರೆ, ಭಾರತವನ್ನು ಒಡೆಯುವುದಕ್ಕೆ ಪ್ರಯತ್ನಿಸುತ್ತಿರುವ ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋಯಿಸ್ಟ್) ಮತ್ತು ವಿದೇಶಿ ಹಣದಿಂದ ನಡೆಯುವ ಕ್ರಿಶ್ಚಿಯನ್ ಮಿಷನರಿಗಳಂತಹ ವಿಚ್ಛಿದ್ರಕಾರಿ ಶಕ್ತಿಗಳನ್ನು ಪ್ರೋತ್ಸಾಹಿಸುವ ಮೂಲಕ ಭಾರತೀಯವಾದದ್ದು (ಹಿಂದೂ ಎಂದು ಓದಿಕೊಳ್ಳಿ) ಯಾವುದೆಲ್ಲ ಇದೆಯೋ ಅದನ್ನು ನಾಶ ಮಾಡುವುದಕ್ಕೆ ಪ್ರಯತ್ನಿಸುತ್ತಿರುವವರ ಗುಂಪು. ಆದರೆ, ಈ ಆರೋಪವನ್ನು ಸಾಬೀತುಪಡಿಸುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂಬುದು ಬೇರೆ ಮಾತು. ಅಮೆರಿಕದಂತೆಯೇ ಭಾರತದಲ್ಲೂ ಅನೈತಿಕ ಎಡಪಂಥೀಯರ ಅಡಗುದಾಣಗಳೆಂಬಂತೆ ಪರಿಗಣಿತವಾಗಿರುವ ಜವಹರಲಾಲ್ ನೆಹರು ವಿಶ್ವವಿದ್ಯಾಲಯಗಳಂತಹ ಅಕಾಡೆಮಿಕ್ ಸ್ಥಳಗಳನ್ನೇ ದಾಳಿಗಳ ಗುರಿಯನ್ನಾಗಿಸಲಾಗಿದೆ. ಮಹಾರಾಷ್ಟ್ರದ ಭೀಮಾ ಕೋರೇಗಾಂವ್‌ನಲ್ಲಿ ಡಿ.೩೧ರಂದು ನಡೆದ ಹಿಂಸಾಚಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ನಡೆದ ದಮನಿತ ಸಮುದಾಯಗಳ ಚಳವಳಿಗಳೂ ಹಿಂಸಾವಾದಿ ಎಡಪಂಥೀಯರ ಮತ್ತು ನಗರ ಪ್ರದೇಶದಲ್ಲಿರುವ ಅವರ ಬೆಂಬಲಿಗರ ಕುತಂತ್ರದ ಪ್ರತಿಫಲ ಎಂದು ಅಪಹಾಸ್ಯ ಮಾಡಲಾಗುತ್ತಿದೆ. ಅಮೆರಿಕದಲ್ಲಿ ನಾಗರಿಕ ಹಕ್ಕುಗಳ ಚಳವಳಿಯನ್ನೂ ಇದೇ ರೀತಿಯ ದಾಳಿಗಳಿಗೆ ಗುರಿಪಡಿಸಲಾಗಿತ್ತು. ಇಂತಹ ಉದ್ದೇಶಗಳಿಗೆ ಬೆಂಗಾವಲಾಗಿರುವ ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ ಥರದ ಪ್ರಭಾವಶಾಲಿ ನಾಯಕರು ಅಧಿಕಾರಕ್ಕೇರಿದರೆ ಆ ಧ್ವನಿಗಳು ಇನ್ನಷ್ಟು ಜೋರಾಗುತ್ತವೆ.

ಪ್ರಭುತ್ವ ದೌರ್ಜನ್ಯಗಳು

ಜ.೧ರ ಭೀಮಾ ಕೋರೆಗಾಂವ್ ಪ್ರತಿಭಟನೆಗೆ ಪ್ರಚೋದನೆ ನೇಡಿದ್ದಾರೆಂಬ ಆರೋಪದಲ್ಲಿ ದಲಿತರು, ಆದಿವಾಸಿಗಳು ಮತ್ತು ರಾಜಕೀಯ ಕೈದಿಗಳ ನಡುವೆ ಕೆಲಸ ಮಾಡುತ್ತಿದ್ದ ಐವರು ಸಾಮಾಜಿಕ ಕಾರ್ಯಕರ್ತರನ್ನು ಕಳೆದ ತಿಂಗಳು ಪೊಲೀಸರು ಬಂಧಿಸಿದ್ದಾರೆ. ಒಂದು ಕಡೆ ಪೊಲೀಸರು ಅವರ ಮೇಲೆ ಕಠಿಣವಾದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದರೆ, ಇನ್ನೊಂದು ಕಡೆ ಟಿವಿ ನಿರೂಪಕರು ಅವರಿಗೆ ಮಾವೋವಾದಿ ಸಹಾನುಭೂತಿಗಳು ಎಂಬ ಹಣೆಪಟ್ಟಿ ಹಚ್ಚಿ ಪ್ರಚಾರ ಮಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕೊಲ್ಲುವ ಷಡ್ಯಂತ್ರವನ್ನು ಈ ಐವರು ಬಂಧಿತರು ರೂಪಿಸಿದ್ದರು ಎಂಬ ಆರೋಪಗಳನ್ನೂ ತೇಲಿಬಿಡಲಾಯಿತು. ಆಸ್ಟ್ರೇಲಿಯದ ನ್ಯಾಯಶಾಸ್ತ್ರಜ್ಞ ಲಾರೆನ್ಸ್ ಡಬ್ಲೂ ಮಹರ್ ಅವರು ತಮ್ಮ ಒಂದು ಲೇಖನದಲ್ಲಿ ಹೇಳಿದಂತೆ, ಪ್ರಭುತ್ವವು ತನ್ನನ್ನು ಪ್ರಶ್ನಿಸುವವರನ್ನು ಮಟ್ಟ ಹಾಕಲು ರಾಷ್ಟ್ರೀಯ ಭದ್ರತೆ ಎಂಬ ನೆಪವನ್ನು ಬಳಸುತ್ತದೆ.

ಸಾಮಾಜಿಕ ಕಾರ್ಯಕರ್ತರಿಗೆ ನಗರ ನಕ್ಸಲರು ಎಂಬ ಹಣೆಪಟ್ಟಿ ಹಚ್ಚುವ ಅಭಿಯಾನಕ್ಕೆ ಇಲ್ಲೇ ಮಹತ್ವ ಬರೋದು. ಮಾಧ್ಯಮಗಳಲ್ಲೂ ಅದಕ್ಕೆ ಬೆಂಬಲ ವ್ಯಕ್ತವಾದಾಗ ಪ್ರಭುತ್ವವು ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ನಡೆಸುವ ದೌರ್ಜನ್ಯಗಳು ನ್ಯಾಯಸಮ್ಮತವಾಗಿಬಿಡುತ್ತವೆ. ಮಾತ್ರವಲ್ಲದೆ, ವಾಕ್ ಸ್ವಾತಂತ್ರ್ಯ ಮತ್ತು ಚಳವಳಿ ಸ್ವಾತಂತ್ರ್ಯಗಳನ್ನು ಹತ್ತಿಕ್ಕಲು ಕರಾಳ ಕಾನೂನುಗಳನ್ನು ರೂಪಿಸುವುದಕ್ಕೂ ಪ್ರಭುತ್ವಕ್ಕೆ ಸಮರ್ಥನೆ ಸಿಗುತ್ತದೆ.

ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ

ಇಂತಹ ನಿರ್ಬಂಧಕಾರಿ ಕಾನೂನುಗಳನ್ನು ರದ್ದುಗೊಳಿಸುವಲ್ಲಿ ಭಾರತದ ನ್ಯಾಯಾಂಗವೂ ಅಷ್ಟೊಂದು ಕ್ರಿಯಾಶೀಲವಾಗಿಲ್ಲ ಎಂಬುದು ಅದರ ಚರಿತ್ರೆಯನ್ನು ನೋಡಿದರೆ ಗೊತ್ತಾಗತ್ತದೆ. ಕೇದಾರನಾಥ್ ಸಿಂಗ್ ಮತ್ತು ಬಿಹಾರ ಪ್ರಭುತ್ವಗಳ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟು, ಸರ್ಕಾರದ ಕ್ರಮಗಳನ್ನು ಕಾನೂನಾತ್ಮಕ ವಿಧಾನಗಳ ಮೂಲಕ ಸುಧಾರಿಸುವ ಅಥವಾ ಮಾರ್ಪಡಿಸುವ ಉದ್ದೇಶದಿಂದ ಕಠಿಣ ಪದಗಳನ್ನು ಬಳಸಿ ವಿಮರ್ಶಿಸುವುದು ರಾಜದ್ರೋಹವಲ್ಲ ಎಂದು ಹೇಳುವ ಮೂಲಕ, ೧೯೬೨ರಷ್ಟು ಹಿಂದೆಯೇ ರಾಜದ್ರೋಹ ಕಾಯ್ದೆಗೆ ವ್ಯಾಪ್ತಿಯ ಬೇಲಿ ಹಾಕಿದೆ. ಆದರೆ, ಅದೇ ಕೋರ್ಟು, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ, ಭಯೋತ್ಪಾದಕ ಮತ್ತು ವಿಚ್ಛಿದ್ರಕಾರಿ ಚಟುವಟಿಕೆಗಳ ತಡೆ ಕಾಯ್ದೆ ಮತ್ತು ಸಶಸ್ತ್ರ ಪಡೆಗಳ ವಿಶೇಷಾಧಿಕಾರಗಳ ಕಾಯ್ದೆಗಳಿಗೆ ಅವಕಾಶ ಕೊಟ್ಟಿದೆ. ಭಯೋತ್ಪಾದಕ ಮತ್ತು ವಿಚ್ಛಿ ದ್ರಕಾರಿ ಚಟುವಟಿಕೆಗಳ ತಡೆ ಕಾಯ್ದೆಯಡಿಯಲ್ಲಿ ಬಲವಂತದಿಂದ ಹೆಳಿಸಿಕೊಂಡ ತಪ್ಪೊಪ್ಪಿಗೆಗಳೂ ನ್ಯಾಯಾಲಯದಲ್ಲಿ ವಿಚಾರಣೆಯ ವೇಳೆ ಸಾಕ್ಷಿಗಳಾಗಿ ಸಮ್ಮತವಾಗುತ್ತವೆ.

ಬಹುಸಂಖ್ಯಾತರ ಮೌಲ್ಯಗಳಿಗೆ ಅಪಾಯವಿದೆ ಎಂಬಂತೆ ಬಿಂಬಿಸುವುದು ಹುಸಿ ಸಾಂಸ್ಕೃತಿಕ ಶತ್ರುಗಳ ಸೃಷ್ಟಿಗೆ ಕಾರಣವಾಗುತ್ತದೆ; ಆದ್ದರಿಂದ, ಪ್ರಭುತ್ವಕ್ಕೆ ಅಥವಾ ಅದರ ಸಿದ್ಧಾಂತಕ್ಕೆ ವಿರುದ್ಧವಾಗಿರುವ ಸಾಮಾಜಿಕ ಕಾರ್ಯಕರ್ತರನ್ನು ದೆವ್ವಗಳಂತೆ ಬಿಂಬಿಸುವ ಭಾವೋತ್ತೇಜಕ ಪ್ರಚಾರವು ಪ್ರಭುತ್ವೇತರ ಹಿಂಸೆಯನ್ನು ಪ್ರೋತ್ಸಾಹಿಸುತ್ತದೆ. ೨೦೧೭ರಲ್ಲಿ ಗೌರಿ ಲಂಕೇಶ್ ಅವರ ಕೊಲೆ ಮತ್ತು ೨೦೧೩ರಲ್ಲಿ ನರೇಂದ್ರ ದಾಬೋಲ್ಕರ್ ಅವರ ಕೊಲೆಗಳು ಈ ರೀತಿಯ ಪ್ರಭುತ್ವೇತರ ಹಿಂಸೆಯ ಉದಾಹರಣೆಗಳಾಗಿವೆ.

ಅಂತಿಮವಾಗಿ, ವಾಕ್ ಸ್ವಾತಂತ್ರ್ಯದ ವಿಷಯದಲ್ಲಿ ಅಮೆರಿಕ ಮತ್ತು ಭಾರತ ಭಿನ್ನ ಮನೋಭಾವಗಳನ್ನು ಹೊಂದಿವೆ. ಅಮೆರಿಕದಲ್ಲಿ ವಾಕ್ ಸ್ವಾತಂತ್ರ್ಯ ಮತ್ತು ಚಳವಳಿ ಸ್ವಾತಂತ್ರ್ಯಗಳ ಉಲ್ಲಂಘನೆಯನ್ನು ಸಂಪ್ರದಾಯಶರಣರು ಕೂಡ ದೊಡ್ಡ ಅಪಾಯವೆಂಬಂತೆ ನೋಡುತ್ತಾರೆ. ಆದರೆ, ಭಾರತದಲ್ಲಿ ವಾಕ್ ಸ್ವಾತಂತ್ರ್ಯ ಮೇಲ್ಪದರದಲ್ಲಷ್ಟೇ ಇದೆ. ಎಡಪಕ್ಷಗಳ ನೇತೃತ್ವದ ಸರ್ಕಾರಗಳೂ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಿದ ಚರಿತ್ರೆಯನ್ನು ಹೊಂದಿವೆ ಹಾಗೂ ಬಲಪಕ್ಷಗಳ ನೇತೃತ್ವದ ಸರ್ಕಾರಗಳೂ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಿದ ಚರಿತ್ರೆಯನ್ನು ಹೊಂದಿವೆ. ಆದರೂ ಅವೆರಡೂ ಸಾರ್ವಜನಿಕ ಆಕ್ರೋಶದಿಂದ ಬಚಾವಾಗಿವೆ. ಸಂವಿಧಾನದತ್ತ ಹಕ್ಕುಗಳಾದ ವಾಕ್ ಸ್ವಾತಂತ್ರ್ಯ ಮತ್ತು ಸಂಘಟನಾ ಸ್ವಾತಂತ್ರ್ಯಗಳನ್ನು ರಕ್ಷಿಸಿಕೊಳ್ಳುವ ಸಲುವಾಗಿ ನಗರ ನಕ್ಸಲರು ಎಂಬ ಹಣೆಪಟ್ಟಿ ಹಚ್ಚುತ್ತಿರುವುದನ್ನು ವಿರೋಧಿಸಬೇಕಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More