ಇಂದಿನ ಡೈಜೆಸ್ಟ್| ನೀವು ಗಮನಿಸಬೇಕಾದ ಇತರ ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಷ್ಟ್ರೀಯ, ಅಂತಾರಾಷ್ಟ್ರೀಯ, ಕ್ರೀಡೆ ಮತ್ತು ವಾಣಿಜ್ಯ ಸುದ್ದಿಗಳ ಸಂಕ್ಷಿಪ್ತ ನೋಟ

ಸಲಿಂಗ ಸಂಬಂಧ ಅಪರಾಧ ಪರಿಧಿಯಿಂದ ಮುಕ್ತವಾದರೆ ತಾರತಮ್ಯದಿಂದಲೂ ಮುಕ್ತ: ಸುಪ್ರೀಂ

ಸಲಿಂಗಿಗಳ ನಡುವಿನ ಸಂಬಂಧವನ್ನು ಅಪರಾಧ ಎಂದು ಕರೆಯಬೇಕೋ ಬೇಡವೋ ಎಂಬ ಕುರಿತ ಅರ್ಜಿಗಳನ್ನು ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಲೈಂಗಿಕ ಅಲ್ಪಸಂಖ್ಯಾತರ ಪರವಾಗಿ ನಿಂತಿದೆ. “ಎಲ್‌ಜಿಬಿಟಿ ಸಮುದಾಯವರ ನಡುವಿನ ಸಂಬಂಧವನ್ನು ಅಪರಾಧದಿಂದ ಮುಕ್ತಿಗೊಳಿಸಿದರೆ ತಾರತಮ್ಯ ಹಾಗೂ ಸಮಾಜದಲ್ಲಿ ಅವರ ಬಗೆಗಿನ ಕೀಳು ಭಾವನೆ ಹೋಗುತ್ತದೆ,” ಎಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ಸದಸ್ಯರ ಪೀಠ ಅಭಿಪ್ರಾಯಪಟ್ಟಿದೆ.

ವಿಧಾನಮಂಡಲ ಅಧಿವೇಶನ ಒಂದು ದಿನ ವಿಸ್ತರಣೆ

ವಿಧಾನಮಂಡಲ ಅಧಿವೇಶನವನ್ನು ಒಂದು ದಿನ ವಿಸ್ತರಿಸಲು ಕಲಾಪ ಸಲಹಾ ಸಮಿತಿ ನಿರ್ಧರಿಸಿದೆ. ಅಧಿವೇಶವನ್ನು ಶುಕ್ರವಾರವೂ ನಡೆಸಬೇಕೆಂದು ವಿಧಾನಸಭೆ ಪ್ರತಿಪಕ್ಷ ನಾಯಕ ಬಿ ಎಸ್‌ ಯಡಿಯೂರಪ್ಪನವರು ಸದನದಲ್ಲಿ ಮನವಿ ಮಾಡಿದ್ದರು. “ಕಲಾಪದಲ್ಲಿ ಮಾತನಾಡುವುದು ಹಲವು ಸದಸ್ಯರ ಇಂಗಿತವಾಗಿದೆ. ಆದ್ದರಿಂದ, ಮಾತನಾಡಲು ಬಾಕಿ ಇರುವ ಸದಸ್ಯರು ಮಾತನಾಡಲು ಗುರುವಾರ ಪೂರ್ತಿ ಅವಕಾಶ ನೀಡಬೇಕು,” ಎಂದು ಯಡಿಯೂರಪ್ಪ ಹೇಳಿದರು. ಶುಕ್ರವಾರ ನಡೆಯುವ ಕಲಾಪದಲ್ಲಿ ಪ್ರಶ್ನೋತ್ತರ ಹಾಗೂ ಮಸೂದೆ ಮಂಡನೆಗೆ ಅವಕಾಶ ನೀಡಲಾಗುವುದು ಎಂದು ಸಭಾಧ್ಯಕ್ಷ ರಮೇಶ್‌ ಕುಮಾರ್‌ ಪ್ರತಿಕ್ರಿಯಿಸಿದರು.

ಮೈತ್ರಿ ಸರ್ಕಾರ ರಚನೆಯಾದ ನಂತರ ಮೊದಲ ಬಾರಿಗೆ ಬಿಹಾರಕ್ಕೆ ಭೇಟಿ ನೀಡಿದ ಅಮಿತ್‌ ಶಾ

ಆರ್‌ಜೆಡಿ-ಕಾಂಗ್ರೆಸ್‌ ಜೊತೆಗಿನ ಮಹಾಮೈತ್ರಿ ತೊರೆದು ಬಿಜೆಪಿ ಜೊತೆ ಜೆಡಿಯು ಸರ್ಕಾರ ರಚಿಸಿದ ನಂತರ ಮೊದಲ ಬಾರಿಗೆ ಬಿಹಾರಕ್ಕೆ ಭೇಟಿ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರನ್ನು ಗುರುವಾರ ಪಟ್ನಾದಲ್ಲಿ ಭೇಟಿ ಮಾಡಿ, ಒಟ್ಟಿಗೆ ಉಪಾಹಾರ ಸೇವಿಸಿದರು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ನಾಯಕರು ಹಾಜರಿದ್ದರು. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ. ರಾತ್ರಿ ಮತ್ತೊಮ್ಮೆ ಭೋಜನ ಕೂಟದಲ್ಲಿ ಉಭಯ ಪಕ್ಷಗಳ ನಾಯಕರು ಚರ್ಚೆ ನಡೆಸಲಿದ್ದಾರೆ. ಇಲ್ಲಿ ಬಿಜೆಪಿ-ಜೆಡಿಯುಗೆ ಸೀಟು ಹಂಚಿಕೆ ಕುರಿತಂತೆ ಸ್ಪಷ್ಟ ನಿಲುವು ತಳೆಯುವ ಸಾಧ್ಯತೆ ಇದೆ.

ಲೆಫ್ಟಿನೆಂಟ್‌ ಗವರ್ನರ್‌ ಅನಿಲ್ ಬೈಜಾಲ್ ಗೆ ಸುಪ್ರೀಂ ಕೋರ್ಟ್ ಚಾಟಿ

ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್ ಬೈಜಾಲ್ ಅವರನ್ನು ಸುಪ್ರೀಂ ಕೋರ್ಟ್ ಗುರುವಾರ ತೀವ್ರ ತರಾಟೆಗೆ ತಗೆದುಕೊಂಡಿದೆ. “ಎಲ್ಲದರಲ್ಲೂ ತಾವೇ ಸೂಪರ್ ಮ್ಯಾನ್ ಎಂದು ಹೇಳುವ ನೀವು ಯಾವುದೇ ಕೆಲಸ ಮಾಡುವುದಿಲ್ಲ,” ಎಂದು ನೇರವಾಗಿಯೇ ಹೇಳಿದೆ. “ದೆಹಲಿಯಲ್ಲಿ ಹೆಚ್ಚುತ್ತಿರುವ ಕಸದ ಸಮಸ್ಯೆ ನಿರ್ವಹಿಸುವಲ್ಲಿ ಹಾಗೂ ಅದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾಗಿದ್ದೇನೆ,” ಎಂದು ಅನಿಲ್ ಬೈಜಾಲ್ ಕೋರ್ಟ್‌ಗೆ ತಿಳಿಸಿದ ಮೇಲೆ ಈ ರೀತಿ ಖಾರವಾಗಿ ಕೋರ್ಟ್‌ ಪ್ರತಿಕ್ರಿಯಿಸಿದೆ.

ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿದ ಸೆನ್ಸೆಕ್ಸ್, ಅದೇ ಹಾದಿಯಲ್ಲಿ ನಿಫ್ಟಿ

ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ (ಸೆನ್ಸೆಕ್ಸ್) ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿದೆ. ಗುರುವಾರದ ವಹಿವಾಟಿನಲ್ಲಿ ಈ ಹಿಂದೆ ಜನವರಿ 29ರ ಗರಿಷ್ಠ ಮಟ್ಟವಾದ 36,443 ಅಂಶಗಳನ್ನು ದಾಟಿ 36,699.53ಕ್ಕೆ ಏರಿತು. ಸೆನ್ಸೆಕ್ಸ್ ದಿನದ ವಹಿವಾಟಿನಲ್ಲಿ 282.48 ಅಂಶ ಏರಿ ಸಾರ್ವಕಾಲಿಕ ಮಟ್ಟವನ್ನು ಮುಟ್ಟಿತು. ದಿನದ ಅಂತ್ಯಕ್ಕೆ 36,548ಕ್ಕೆ ಸ್ಥಿರವಾಯಿತು. ನಿಫ್ಟಿ 11,000 ಮಟ್ಟವನ್ನು ದಾಟಿತು. ಗರಿಷ್ಠ ಮಟ್ಟಮುಟ್ಟಲು 150 ಅಂಶಗಳಷ್ಟೇ ಬಾಕಿ ಇದೆ. ಇನ್ನು ಎರಡು ಅಥವಾ ಮೂರು ದಿನಗಳ ವಹಿವಾಟಿನಲ್ಲಿ ಸರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟುವ ನಿರೀಕ್ಷೆ ಇದೆ. ದಿನದ ವಹಿವಾಟಿನಲ್ಲಿ 74 ಅಂಶ ಏರಿದ ನಿಫ್ಟಿ 110.23.20ಕ್ಕೆ ವಹಿವಾಟು ಅಂತ್ಯಗೊಳಿಸಿತು.

ಥಾಯ್ಲೆಂಡ್ ಓಪನ್: ಭಾರತದ ಸವಾಲು ಜೀವಂತವಾಗಿಟ್ಟ ಸಿಂಧು

ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಮರ್ಯಾದೆಯನ್ನು ಉಳಿಸಿದ ಪಿ ವಿ ಸಿಂಧು, ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ಕಾಲಿಟ್ಟರು. ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಪಂದ್ಯಾವಳಿಯ ಎರಡನೇ ಸುತ್ತಿನಲ್ಲಿ ಭಾರತದ ಸ್ಪರ್ಧಿಗಳೆಲ್ಲಾ ಸೋಲನುಭವಿಸಿದಾಗ ಸಿಂಧು ಏಕಾಂಗಿ ಗೆಲುವು ಸಾಧಿಸಿ ಹೋರಾಟವನ್ನು ಜೀವಂತವಾಗಿಟ್ಟರು. ಇಂದು ನಡೆದ ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಹಾಂಕಾಂಗ್ ಆಟಗಾರ್ತಿ ಪುಯಿ ಯಿನ್ ಯಿಪ್ ಎದುರು ೨೧-೧೬, ೨೧-೧೪ ಎರಡು ನೇರ ಗೇಮ್‌ಗಳಲ್ಲಿ ಗೆದ್ದ ಸಿಂಧು, ಇದೀಗ ಕ್ವಾರ್ಟರ್‌ಫೈನಲ್ ಸೆಣಸಾಟದಲ್ಲಿ ಸೋನಿಯಾ ಚೀಹ್ ವಿರುದ್ಧ ಕಾದಾಡಲಿದ್ದಾರೆ. ಅಂದಹಾಗೆ, ಪುರುಷರ ಸಿಂಗಲ್ಸ್‌ನಲ್ಲಿ ಪರುಪಳ್ಳಿ ಕಶ್ಯಪ್, ಎಚ್ ಎಸ್ ಪ್ರಣಯ್ ಸೋಲನುಭವಿಸಿದರೆ, ಮಿಶ್ರ ಡಬಲ್ಸ್‌ನಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್‌ಸಾಯಿರಾಜ್ ಜೋಡಿಯೂ ಪರಾಭವಗೊಂಡಿತ್ತು.

ಟ್ರಂಪ್ ಜೊತೆ ಸಖ್ಯ ಹೊಂದಿದ್ದ ಅಮೆರಿಕ ನೀಲಿಚಿತ್ರ ತಾರೆ ಸ್ಟಾರ್ಮಿ ಬಂಧನ

ಸ್ಟ್ರಿಪ್ ಕ್ಲಬ್‌ನಲ್ಲಿ ಪ್ರದರ್ಶನ ನೀಡುತ್ತಿರುವ ವೇಳೆ ಉದ್ದೇಶಪೂರ್ವಕವಾಗಿ ಜನರನ್ನು ಮೈ ಮುಟ್ಟಿಸಿಕೊಳ್ಳುತ್ತಿದ್ದರೆಂದು ಆರೋಪಿಸಿ ಸ್ಟಾರ್ಮಿ ಡೇನಿಯಲ್ಸ್ ಅವರನ್ನು ಗುರುವಾರ ಓಹಿಯೋದಲ್ಲಿ ಬಂಧಿಸಲಾಗಿದೆ. ಈ ಕುರಿತಾಗಿ ಆಕೆಯ ವಕೀಲ ಮೈಕೆಲ್ ಅವೆನೆಟ್ಟಿ ಅವರು ಟ್ವಿಟ್ಟರ್‌ನಲ್ಲಿ ಬಂಧಿಸಿರುವ ಬರೆದುಕೊಂಡಿದ್ದಾರೆ. “ನನ್ನ ಕಕ್ಷಿದಾರರಾದ ಸ್ಟಾರ್ಮಿ ಅವರು ಇಲ್ಲಿಯವರೆಗೆ ನೂರು ಪ್ರದರ್ಶನಗಳನ್ನು ಕೊಟ್ಟಿದ್ದು, ಅವರ ಬಂಧನದ ವಿಚಾರ ರಾಜಕೀಯ ಉದ್ದೇಶದಿಂದ ಕೂಡಿದೆ,” ಎಂದು ಹೇಳಿದ್ದಾರೆ. ಈ ವಿಷಯದಲ್ಲಿ ಮಾನದಂಡಗಳು ಬಿಗಿಯಾಗಿದ್ದು ಸ್ಟಾರ್ಮಿಯವರ ಬಂಧನದ ಹಿನ್ನೆಲೆಯಲ್ಲಿ ಅನುಮಾನಗಳು ಎದ್ದಿವೆ.

‘ತಾಜ್‌ ಎ ಮಾನುಮೆಂಟ್‌ ಆಫ್ ಬ್ಲಡ್’ ವೆಬ್‌ ಸರಣಿ

ಮೊಘಲ್‌ ಸಾಮ್ರಾಜ್ಯದ ಏಳುಬೀಳುಗಳ ಕತೆ ಹೇಳುವ ‘ತಾಜ್‌ ಎ ಮಾನುಮೆಂಟ್‌ ಆಫ್ ಬ್ಲಡ್‌’ ವೆಬ್‌ ಸರಣಿ ಮೂಡಿಬರಲಿದೆ. ಕಾಂಟಿಲಿಯೋ ಪಿಕ್ಚರ್ಸ್‌ ಮತ್ತು ಅಪ್ಲೌಸ್‌ ಎಂಟರ್‌ಟೇನ್‌ಮೆಂಟ್ ಕೂಡಿ ನಿರ್ಮಿಸಲಿರುವ ಸರಣಿಯಿದು. ಅಧಿಕಾರ, ದ್ವೇಷ, ಪ್ರೇಮ ಸೇರಿದಂತೆ ಮೊಘಲ್‌ ಸಾಮ್ರಾಜ್ಯದ ರಕ್ತಸಿಕ್ತ ಅಧ್ಯಾಯದ ಚಿತ್ರಣವಿದು. ಮೂರು ಶತಮಾನಗಳ ಆಡಳಿತದ ಅವಧಿಯಲ್ಲಿನ ಮೊಘಲ್ ಚಕ್ರವರ್ತಿಗಳಾದ ಅಕ್ಬರ್‌, ಜಹಾಂಗೀರ್‌, ಶಹಜಹಾನ್‌, ಔರಂಗಜೇಬ್‌ ಕುರಿತ ಚಿತ್ರಣ ನೋಡಬಹುದು. ಐದು ಸೀಸನ್‌ಗಳಲ್ಲಿ ಮೂಡಿಬರಲಿರುವ ಸರಣಿಯ ಪ್ರತೀ ಸೀಸನ್‌ನಲ್ಲಿ ಹನ್ನೆರೆಡು ಎಪಿಸೋಡ್‌ಗಳಿರುತ್ತವೆ. ಸರಣಿಯಲ್ಲಿ ನಟಿಸಲಿರುವ ಕಲಾವಿದರು ಹಾಗೂ ತಂತ್ರಜ್ಞರ ಬಗೆಗಿನ ಮಾಹಿತಿ ಮುಂದಿನ ದಿನಗಳಲ್ಲಿ ಸಿಗಲಿದೆ.

ಗಿನ್ನಿಸ್ ದಾಖಲೆ ಬರೆದ ಅತಿ ಉದ್ದದ ಉಗುರುಗಳನ್ನು ಕತ್ತರಿಸಿಕೊಂಡ ಶ್ರೀಧರ್

ಅತಿ ಉದ್ದದ ಕೈಬೆರಳ ಉಗುರಿನಿಂದಾಗಿ ಗಿನ್ನಿಸ್ ವಿಶ್ವದಾಖಲೆ ಬರೆದ ಪುಣೆಯ ಶ್ರೀಧರ್ ಚೆಲ್ಲಾರ್ ಇದೀಗ ತಮ್ಮ ಉಗುರನ್ನು ಕತ್ತರಿಸಿಕೊಂಡಿದ್ದಾರೆ. 82ರ ಹರೆಯದ ಶ್ರೀಧರ್, 66 ವರ್ಷಗಳ ಬಳಿಕ ಇದೀಗ ಟೈಮ್ಸ್ ಸ್ಕೇರ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಉಗುರು ಕತ್ತರಿಸಿದ್ದು, ಕತ್ತರಿಸಲ್ಪಟ್ಟ ಉಗುರಿನ ಉದ್ದ  31 ಅಡಿ ಇದೆ.  ಶ್ರೀಧರ್ 14 ವರ್ಷದವರಿದ್ದಾಗ, ಎಡಗೈ ಬೆರಳುಗಳ ಉಗುರನ್ನು ಬೆಳೆಸಲು ಆರಂಭಿಸಿದರು. ಅವರ ಉಗುರು ವಿಶ್ವದ ಅತಿ ಉದ್ದದ ಉಗುರು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More