ಲಿಂಚಿಂಗ್ ಕುರಿತು ಇಂದಿರಾ ಜೈಸಿಂಗ್ ಸುಪ್ರೀಂ ಕೋರ್ಟ್‌ಗೆ ಹೇಳಿದ್ದೇನು?

ಅಮೆರಿಕದಲ್ಲಿ ಆಫ್ರಿಕಾ ಮೂಲದವರನ್ನು ಮುಖ್ಯವಾಹಿನಿಯಿಂದ ದೂರ ಇಡುವ ಮತ್ತು ಶೋಷಣೆಗೆ ಒಳಪಡಿಸುವ ಕ್ರಮವಾಗಿ ಕಳೆದ ಶತಮಾನದಲ್ಲಿ ಚಾಲ್ತಿಯಲ್ಲಿದ್ದ ವ್ಯಾಪಕ ಲಿಂಚಿಂಗ್ ಮಾದರಿ ಭಾರತದಲ್ಲಿ ಈಗ ಮುಸ್ಲಿಮರು ಮತ್ತು ದಲಿತರ ವಿರುದ್ಧ ಜಾರಿಗೆ ಬಂದಿದೆ ಎಂದಿದ್ದಾರೆ ಹಿರಿಯ ವಕೀಲೆ

ಒಂದು ಕಡೆ, ಗೋರಕ್ಷಣೆಯ ಹೆಸರಲ್ಲಿ ಮುಸ್ಲಿಮರು ಮತ್ತು ದಲಿತರ ಮೇಲೆ ಸಾಮೂಹಿಕ ದಾಳಿ ನಡೆಸಿ ಹೊಡೆದು ಸಾಯಿಸುವ ಲಿಂಚಿಂಗ್ (ಹಲ್ಲೆ ನಡೆಸಿ ಹತ್ಯೆ) ಪ್ರಕರಣಗಳು ಎಗ್ಗಿಲ್ಲದೆ ವ್ಯಾಪಿಸುತ್ತಿವೆ. ಮತ್ತೊಂದು ಕಡೆ, ಅಂತಹ ಅಮಾನವೀಯ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಗೆ ಆಳುವ ಸರ್ಕಾರಗಳ ಸಚಿವರುಗಳೇ ಪರೋಕ್ಷ ಶಹಬ್ಬಾಸ್‌ಗಿರಿ ನೀಡುತ್ತಿದ್ದಾರೆ. ಗೋರಕ್ಷಣೆಯ ಹೆಸರಿನಲ್ಲಿ ಮುಸ್ಲಿಂ ವ್ಯಕ್ತಿಯನ್ನು ಹೊಡೆದು ಸಾಯಿಸಿದ ಆರೋಪದ ಮೇಲೆ ಜೈಲಿಗೆ ಹೋಗಿಬಂದವರಿಗೆ ಸರ್ಕಾರದ ಭಾಗವಾದ ಸಚಿವರೊಬ್ಬರು ಹಾರ ಹಾಕಿ ಬಹುಪರಾಕ್ ಹಾಕಿದ ಘಟನೆ ನಡೆದಿದೆ. ಇದರ ಬೆನ್ನಲ್ಲೇ, ಇದೀಗ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು, ದೇಶದ ಇತ್ತೀಚಿನ ವರ್ಷಗಳ ಲಿಂಚಿಂಗ್ ಘಟನೆಗಳಿಗೂ, ಅಮೆರಿಕದಲ್ಲಿ ಕಳೆದ ಶತಮಾನದಲ್ಲಿ ವ್ಯಾಪಕವಾಗಿದ್ದ ಲಿಂಚಿಂಗ್ ಘಟನೆಗಳಿಗೂ ಇರುವ ಸಾಮ್ಯತೆಯ ಬಗ್ಗೆ ಸುಪ್ರೀಂ ಕೋರ್ಟಿನ ಗಮನ ಸೆಳೆದಿದ್ದಾರೆ.

ಲಿಂಚಿಂಗ್ ಪ್ರಕರಣಗಳ ಕುರಿತ ತುಷಾರ್ ಗಾಂಧಿ ಅವರ ಅರ್ಜಿ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನೊಳಗೊಂಡ ಮೂವರು ನ್ಯಾಯಮೂರ್ತಿಗಳ ಪೀಠದ ಮುಂದೆ ಲಿಖಿತ ಹೇಳಿಕೆ ದಾಖಲಿಸಿರುವ ಇಂದಿರಾ ಅವರು, “ಅಮೆರಿಕದಲ್ಲಿ ಆಫ್ರಿಕಾ ಮೂಲದವರನ್ನು ಮುಖ್ಯವಾಹಿನಿಯಿಂದ ದೂರವಿಡುವ ಮತ್ತು ಶೋಷಣೆಗೊಳಪಡಿಸುವ ಕ್ರಮವಾಗಿ ಕಳೆದ ಶತಮಾನದ ಆರಂಭದಲ್ಲಿ ಚಾಲ್ತಿಯಲ್ಲಿದ್ದ ವ್ಯಾಪಕ ಲಿಂಚಿಂಗ್ ಮಾದರಿಯಲ್ಲೇ ಭಾರತದಲ್ಲಿ ಈಗ ಮುಸ್ಲಿಮರು ಮತ್ತು ದಲಿತರನ್ನು ಮುಖ್ಯವಾಹಿನಿಯಿಂದ ಹೊರದಬ್ಬುವ ಮತ್ತು ಭೀತಿ ಹುಟ್ಟಿಸುವ ಮೂಲಕ ಅಡಿಯಾಳುಗಳನ್ನಾಗಿ ಮಾಡಿಕೊಳ್ಳುವ ಮನಸ್ಥಿತಿ ವ್ಯಾಪಕವಾಗಿ ಹಬ್ಬುತ್ತಿದೆ,” ಎಂದು ಸಂಪೂರ್ಣ ಅಂಕಿ-ಅಂಶ ಸಹಿತ ಮಾಹಿತಿ ವಿಶ್ಲೇಷಣೆ ಮಾಡಿದ್ದಾರೆ.

“ಅಮೆರಿಕದಲ್ಲಿ ಅಂದು ನಡೆದ ಲಿಂಚಿಂಗ್‌ಗಳಿಗೂ, ಭಾರತದಲ್ಲಿ ಈಗ ನಡೆಯುತ್ತಿರುವ ಲಿಂಚಿಂಗ್‌ಗಳಿಗೂ ಹೋಲಿಕೆ ಬೆಚ್ಚಿಬೇಳಿಸುವಂತಿದ್ದು, ಸರಿಸುಮಾರು ನೂರು ವರ್ಷಗಳ ಹಿಂದೆ ಅಲ್ಲಿ ನಡೆದ ಭೀಕರ ಮೃಗೀಯ ಕೃತ್ಯಗಳು ಇಂದು ಸಂಸ್ಕೃತಿ, ಧರ್ಮ ಮತ್ತು ಗೋವಿನ ಹೆಸರಿನಲ್ಲಿ ನಡೆಯುತ್ತಿವೆ ಹಾಗೂ ದೇಶದ ಕಾನೂನನ್ನು ಗಾಳಿಗೆ ತೂರುವ ಅಂತಹ ಕೃತ್ಯಗಳಿಗೆ ಆಳುವ ಸರ್ಕಾರಗಳು (ರಾಜ್ಯ ಮತ್ತು ಕೇಂದ್ರ) ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿವೆ ಎಂಬ ಬಗ್ಗೆಯೂ ಇಂದಿರಾ ಅವರು ನ್ಯಾಯಾಲಯದ ಗಮನ ಸೆಳೆದಿದ್ದಾರೆ. ಅಲ್ಲದೆ, ಕೆಲವು ಪ್ರಕರಣಗಳಲ್ಲಿ ಪೊಲೀಸ್ ಮತ್ತು ನ್ಯಾಯಾಂಗ ಕೂಡ ಮೌನ ವಹಿಸಿರುವುದು ದೇಶದ ಅಲ್ಪಸಂಖ್ಯಾತರು ಮತ್ತು ದಲಿತರಲ್ಲಿ ಭವಿಷ್ಯದ ಬಗ್ಗೆ ಭೀತಿ ಹುಟ್ಟಿಸಿದೆ,” ಎಂಬ ಅಂಶವನ್ನೂ ಅವರು ನ್ಯಾಯಾಲಯದ ಮುಂದಿಟ್ಟಿದ್ದಾರೆ.

“ಗೋವಿನ ಕಳ್ಳಸಾಗಣೆ, ಹತ್ಯೆ, ಮಾಂಸ ಭಕ್ಷಣೆಯಂತಹ ಅನುಮಾನಗಳ ಮೇಲೆ ಮುಸ್ಲಿಮರು ಮತ್ತು ದಲಿತರ ಮೇಲೆ ಏಕಾಏಕಿ ದಾಳಿ ನಡೆಸುವುದು ಮತ್ತು ಹಲ್ಲೆ ಮಾಡಿ ಕೊಲ್ಲುವುದು ದೇಶದ ಹಲವು ರಾಜ್ಯಗಳಲ್ಲಿ ಪುನರಾವರ್ತನೆ ಆಗುತ್ತಿದೆ. ಮುಸ್ಲಿಮರು ಧರಿಸುವ ಟೊಪ್ಪಿ ಮತ್ತು ದಾಡಿಯನ್ನು ಆಧರಿಸಿ ಅವರನ್ನು ಅನುಮಾನಿಸಿ ಸಾಮೂಹಿಕವಾಗಿ ಹಲ್ಲೆ ನಡೆಸುವುದು, ದಲಿತರ ಮೇಲೆ ಮುಗಿಬೀಳುವುದು ಸಾಮಾನ್ಯವೆಂಬಂತಾಗಿದೆ. ೨೦೧೪ ಮತ್ತು ೨೦೧೭ರ ಆಗಸ್ಟ್ ನಡುವಿನ ಅವಧಿಯಲ್ಲಿ ದೇಶದಲ್ಲಿ ಒಟ್ಟು ೭೦ ಲಿಂಚಿಂಗ್ ಪ್ರಕರಣಗಳು ಸಂಭವಿಸಿದ್ದು; ಜನಾಂಗ, ಲಿಂಗ ಮತ್ತು ಧರ್ಮ, ಜಾತಿಯನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ಇಂತಹ ಕೃತ್ಯಗಳು ದೇಶದಲ್ಲಿ ಕೆಲವು ಸಮುದಾಯಗಳಿಗೆ ಸುರಕ್ಷತೆ ಇಲ್ಲ ಎಂಬುದನ್ನು ಹೇಳುತ್ತಿವೆ. ಅಲ್ಪಸಂಖ್ಯಾತರು ಮತ್ತು ದಲಿತರ ಮೇಲೆ ಲಿಂಚಿಂಗ್ ದಾಳಿಗಳ ಮೂಲಕ ಬಹುಸಂಖ್ಯಾತ, ಪ್ರಭಾವಿ ವರ್ಗಗಳು ಹಿಡಿತ ಸ್ಥಾಪಿಸುವ ಹುನ್ನಾರ ನಡೆಸಿವೆ,” ಎಂಬುದನ್ನೂ ಹೇಳಿಕೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

“ಕಳೆದ ೨-೩ ವರ್ಷದಲ್ಲಿ ಗೋರಕ್ಷಣೆ ಹೆಸರಿನಲ್ಲಿ ನಡೆದಿರುವ ಹಿಂಸಾಚಾರ, ಲಿಂಚಿಂಗ್‌ನಲ್ಲಿ ಶೇ.೯೭ರಷ್ಟು ಪ್ರಕರಣಗಳಲ್ಲಿ ಗುರಿಯಾಗಿರುವುದು ಮುಸ್ಲಿಮರು ಮತ್ತು ದಲಿತರೇ. ಗೋರಕ್ಷಕರು, ಗೋರಕ್ಷಣೆ ನೆಪದಲ್ಲಿ ಈ ದುರ್ಬಲ ಸಮುದಾಯಗಳ ಮೇಲೆ ಕೊಲೆ, ಹಲ್ಲೆ, ದಬ್ಬಾಳಿಕೆ ಮತ್ತು ಅತ್ಯಾಚಾರಗಳನ್ನೂ ನಡೆಸಿದ್ದಾರೆ. ಇಂತಹ ಪ್ರಕರಣಗಳಲ್ಲಿ ಕೇಂದ್ರದ ಆಡಳಿತಾರೂಢ ಬಿಜೆಪಿಯ ನಾಯಕರು, ಅದರಲ್ಲೂ ಸರ್ಕಾರದ ಭಾಗವಾಗಿರುವ ಸಚಿವರುಗಳೇ ಆರೋಪಿಗಳ ಪರ ನಿಂತಿರುವ ಪ್ರಕರಗಳೂ ಇವೆ. ಅಲ್ಲದೆ, ಇಂತಹ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದ ಪೊಲೀಸರು ಮೂಕಪ್ರೇಕ್ಷಕರಾಗಿ, ಅಂತಹ ಘಟನೆಗಳಿಗೆ ಸಾಕ್ಷಿಯಾಗಿರುವ ದುರಂತ ಸ್ಥಿತಿ ನಿರ್ಮಾಣವಾಗಿದೆ. ನ್ಯಾಯಾಂಗ ಕೂಡ ಈ ವಿಷಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಜನರಿಗೆ ನ್ಯಾಯ ಒದಗಿಸುತ್ತಿಲ್ಲ,” ಎಂದೂ ಅವರು ಹೇಳಿದ್ದಾರೆ.

“ಅಮೆರಿಕದಲ್ಲಿಯೂ ೧೯ ಮತ್ತು ೨೦ನೇ ಶತಮಾನದ ನಡುವೆ ಆಫ್ರಿಕನ್ನರ ವಿರುದ್ಧ ನಡೆದ ಇಂತಹ ಲಿಂಚಿಂಗ್ ಪ್ರಕರಣಗಳ ಸಂದರ್ಭದಲ್ಲಿಯೂ ಅಲ್ಲಿನ ಪೊಲೀಸ್, ನ್ಯಾಯಾಂಗ, ಆಡಳಿತ ವ್ಯವಸ್ಥೆಗಳು ಇಂತಹದ್ದೇ ಮೌನ ವಹಿಸಿದ್ದವು. ೧೮೮೨ ಮತ್ತು ೧೯೬೮ರ ನಡುವಿನ ಅವಧಿಯಲ್ಲಿ ಅಮೆರಿಕದಲ್ಲಿ ೪,೭೪೩ ಲಿಂಚಿಂಗ್ ಪ್ರಕರಣಗಳು ವರದಿಯಾಗಿದ್ದವು. ಆ ಪೈಕಿ, ೩,೪೪೬ ಮಂದಿ ಕರಿಯರಾಗಿದ್ದರೆ, ಉಳಿದವರು ಕೂಡ ಲಿಂಚಿಂಗ್ ವಿರುದ್ಧ ದನಿ ಎತ್ತಿದ ಇತರ ಜನಾಂಗಗಳವರೇ ಆಗಿದ್ದರು. ೧೯೦೦ರ ಬಳಿಕವಷ್ಟೇ ಅಲ್ಲಿ ಲಿಂಚಿಂಗ್ ಪ್ರಕರಣಗಳಲ್ಲಿ ಶೇ.೧ರಷ್ಟು ಅಪರಾಧಿಗಳಿಗೆ ಶಿಕ್ಷೆಯಾಯಿತು. ಸಮಾಜದ ಹಿತ ಕಾಯಬೇಕಾದ ವ್ಯವಸ್ಥೆಗಳೇ ಒಂದು ಪ್ರಬಲ ಜನಾಂಗ ಮತ್ತು ಸಮುದಾಯದ ಪರ ನಿಂತಿದ್ದರಿಂದಲೇ ಲಿಂಚಿಂಗ್ ಪ್ರಕರಣಗಳು ಸಾಂಕ್ರಾಮಿಕದಂತೆ ಹರಡಿದವು,” ಎಂದು ಹೇಳಲಾಗಿದೆ.

ಇದನ್ನೂ ಓದಿ : ಮಕ್ಕಳ ಕಳ್ಳರ ವದಂತಿ; ಜನಜಾಗೃತಿಯಿಂದ ಗಮನ ಸೆಳೆದ ತೆಲಂಗಾಣ ಪೊಲೀಸ್ ಅಧಿಕಾರಿ

“ಅಲ್ಲಿಯೂ ಈಗಿನಂತೆಯೇ ಲಿಂಚಿಂಗ್ ದೃಶ್ಯಗಳನ್ನು ಕ್ಯಾಮೆರಾಗಳಲ್ಲಿ ಸೆರೆಹಿಡಿದು, ಅದನ್ನು ಫೋಟೋಕಾಪಿ ಮಾಡಿ ಮನೆಮನೆಗೆ ಹಂಚುವ ಮೂಲಕ ಜನರಲ್ಲಿ ಭಯ ಹುಟ್ಟಿಸುವ ರೂಢಿ ಇತ್ತು. ಈಗಲೂ ದೇಶದಲ್ಲಿ ಲಿಂಚಿಂಗ್ ಪ್ರಕರಣಗಳಲ್ಲಿ ಹಲ್ಲೆಯ ದೃಶ್ಯಗಳಲ್ಲಿ ಮೊಬೈಲ್ ಮೂಲಕ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದರ ಹಿಂದೆಯೂ ಅಂತಹದ್ದೇ ಭೀತಿ ಹುಟ್ಟಿಸುವ ಲೆಕ್ಕಾಚಾರಗಳಿವೆ,” ಎಂದು ಉಲ್ಲೇಖಿಸಲಾಗಿದೆ.

“ಇದೀಗ ಭಾರತದ ಮಟ್ಟಿಗೆ ಹೇಳುವುದಾದರೆ, ೨೦೧೭ನೇ ವರ್ಷವನ್ನು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಕೂಡ ಭಾರತದ ದ್ವೇಷ-ಹಿಂಸೆಯ ವರ್ಷವೆಂದೇ ಬಣ್ಣಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ದೇಶದ ಬಹುತೇಕ ರಾಜ್ಯಗಳಲ್ಲಿ ಯಾವುದೇ ಕಾನೂನು ಭಯವಿಲ್ಲದೆ ಸಾಂಕ್ರಾಮಿಕದಂತೆ ಹಬ್ಬುತ್ತಿರುವ ಲಿಂಚಿಂಗ್‌ಗೆ ಕಡಿವಾಣ ಹಾಕಲು ಸಂವಿಧಾನದ ೨೫೬ನೇ ವಿ‍ಧಿಯನ್ವಯ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಆ ಮೂಲಕ, ಈ ಭೀಕರ ಕೊಲೆಗಳಿಗೆ ಸರ್ಕಾರವನ್ನು ಹೊಣೆಯಾಗಿಸಬೇಕು,” ಎಂದೂ ಇಂದಿರಾ ಅವರು ತಮ್ಮ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More