529 ಭೂಕುಸಿತ ಸೂಕ್ಷ್ಮ ಪ್ರದೇಶದಲ್ಲಿ ಚಾರ್‌ಧಾಮ್‌ ರಸ್ತೆ ಮಾಡಹೊರಟ ಕೇಂದ್ರ ಸರ್ಕಾರ!

ಕೇಂದ್ರ ಮತ್ತು ಉತ್ತರಾಖಂಡ ಸರ್ಕಾರಗಳು ಸೇರಿ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನಿರ್ಮಿಸಹೊರಟಿರುವ ರಸ್ತೆ ನಿರ್ಮಾಣ ಮತ್ತು ವಿಸ್ತರಣಾ ಯೋಜನೆ ಅತ್ಯಂತ ಅಪಾಯಕಾರಿ ಎನಿಸಿದೆ. ಯೋಜನೆ ಬಗ್ಗೆ ಪರಿಸರ ಸಚಿವಾಲಯಕ್ಕೆ ಮಾಹಿತಿ ಇಲ್ಲ ಎನ್ನಲಾಗಿದೆ. ಈ ಕುರಿತ ‘ವೈರ್’ ವಿಶ್ಲೇಷಣೆಯ ಭಾವಾನುವಾದ ಇಲ್ಲಿದೆ

ಯಮುನೋತ್ರಿ, ಗಂಗೋತ್ರಿ, ಬದರಿನಾಥ್ ಮತ್ತು ಕೇದಾರನಾಥ್ (ಚಾರ್‌ಧಾಮ್) ದರ್ಶನ ಮಾಡುವುದು ಹಿಂದೂಗಳಿಗೆ ಪವಿತ್ರ. ಆದರೆ, ಈ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಸಂಬಂಧ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಯೋಜನೆ ಮಾತ್ರ ಅಪಾಯಕಾರಿಯಾಗಿದೆ.

ಈ ನಾಲ್ಕು ಯಾತ್ರಸ್ಥಳಗಳಿಗೆ ದ್ವಿಪಥ ರಸ್ತೆ ಸಂಪರ್ಕ ಕಲ್ಪಿಸುವ ಯೋಜನೆ ಸಚಿವಾಲಯದ ಮುಂದಿದೆ. ಆದರೆ, 900 ಕಿಮೀ ಹೆಚ್ಚುವರಿ ರಸ್ತೆ ನಿರ್ಮಾಣ ಮಾಡುವ ಯೋಜನೆಯಲ್ಲಿ 529 ಭೂಕುಸಿತ ಸಂಭವಿಸುವ ಪ್ರದೇಶಗಳಿದ್ದು, ಪರಿಸರ ಪ್ರಭಾವವನ್ನು ಪರಿಗಣಿಸುವ ಕಡ್ಡಾಯ ಮಾನದಂಡಗಳನ್ನು (ಇಐಎ) ಅನುಸರಿಸದೆ ಯೋಜನೆಗೆ ಹಸಿರು ನಿಶಾನೆ ತೋರಲಾಗಿದೆ.

ಗಂಗಾನದಿಯ ಉಪನದಿಗಳಾದ ಭಾಗೀರಥಿ, ಅಲಕ್ ನಂದಾ ಹಾಗೂ ಮಂದಾಕಿನಿ ನದಿಗಳ ಜಲಾನಯನ ಪ್ರದೇಶದಲ್ಲೂ ಉದ್ದೇಶಿತ ರಸ್ತೆ ಹಾದುಹೋಗಲಿದ್ದು, ಜೈವಿಕ ಸೂಕ್ಷ್ಮ ಪ್ರದೇಶದ ಯಾವುದೇ ಸಂಚಿತ ಮೌಲ್ಯಮಾಪನಕ್ಕೂ ಸಚಿವಾಲಯ ಮುಂದಾಗಿಲ್ಲ.

ತೆಹ್ರಿಯ ತೋಟಗಾರಿಕೆ ಮತ್ತು ಅರಣ್ಯ ವಿಶ್ವವಿದ್ಯಾಲಯದ ಭೂವಿಜ್ಞಾನಿ ಎಸ್ ಪಿ ಸತಿ, “ದೇಶದಲ್ಲಿ ಮಳೆಗಾಲ ಈಗಷ್ಟೇ ಆರಂಭವಾಗಿದ್ದರೂ ಈಗಾಗಲೇ ಅಲಕ್ ನಂದಾ-ತೆಹ್ರಿ ಮಾರ್ಗಗಳಲ್ಲಿ ಭೂಕುಸಿತದ ಪರಿಣಾಮ ಭಾರಿ ಪ್ರಮಾಣದ ಮರಗಳು ಧರೆಗುರುಳಿವೆ. ಸರ್ಕಾರ ಇದನ್ನು ತಡೆಯಲು ಈವರೆಗೆ ಹಮ್ಮಿಕೊಂಡಿರುವ ಯೋಜನೆಗಳೆಲ್ಲ ಕೇವಲ ಕಣ್ಣೊರೆಸುವ ತಂತ್ರಗಳಾಗಿವೆ. ನದಿಗಳ ಮೇಲ್ದಂಡೆಯಲ್ಲಿ ಈಗ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಭಾರಿ ಮಳೆ ಸಂಭವಿಸಿದರೆ ಆ ತಡೆಗೋಡೆಗಳು ಯಾವುದಕ್ಕೂ ಲೆಕ್ಕವಿಲ್ಲದಂತಾಗಿ ಜೀವ ಹಾನಿಯಾಗಬಹುದು,” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸಿಟಿಜನ್ಸ್ ಫಾರ್ ಗ್ರೀನ್ ಡೂನ್ ಸಂಸ್ಥೆಯ ಹಿಮಾಂಶು ಅರೋರಾ ಈ ಸಂಬಂಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ದೂರು ನೀಡಿದ್ದು, ರಸ್ತೆ ನಿರ್ಮಾಣಕ್ಕಾಗಿ ಪಾಲಿಸಬೇಕಾದ ನಿಯಮಗಳ ಕುರಿತು ಪ್ರಸ್ತಾಪಿಸಿದಾರೆ. “ನಿಯಮಗಳ ಪ್ರಕಾರ, ನೂರು ಕಿಮೀಗಿಂತಲೂ ಹೆಚ್ಚಿನ ಉದ್ದದ ರಸ್ತೆ ನಿರ್ಮಿಸಬೇಕಾದರೆ ಇಐಎ ಮಾನದಂಡಗಳನ್ನು ಅನುಸರಿಸಬೇಕು. ಆದರೆ, ಸಚಿವಾಲಯ ರಂಗೋಲಿ ಕೆಳಗೆ ತೂರುವ ಯತ್ನ ಮಾಡಿದ್ದು, 900 ಕಿಮೀ ಉದ್ದದ ಒಂದೇ ರಸ್ತೆ ಎಂದು ಬಿಂಬಿಸುವ ಬದಲಿಗೆ ಈ ರಸ್ತೆಯನ್ನು 53 ವಿವಿಧ ಯೋಜನೆಗಳಡಿ ಪ್ರತ್ಯೇಕವಾಗಿ ಅಭಿವೃದ್ಧಿಪಡಿಸುವ ತಂತ್ರಕ್ಕೆ ಮುಂದಾಗಿದೆ,” ಎಂದು ಅವರು ಆರೋಪಿಸಿದ್ದಾರೆ.

ಯೋಜನೆಗೆ 13 ಸಾವಿರ ಕೋಟಿ ರು. ಖರ್ಚಾಗಲಿದ್ದು, ಅರೋರಾ ಅವರ ಪ್ರಕಾರ ಇದರಿಂದ ಕೇವಲ 300 ಕಿಮೀ ಉದ್ದದ ರಸ್ತೆಯನ್ನಷ್ಟೇ ನಿರ್ಮಿಸಲು ಸಾಧ್ಯ. ರಸ್ತೆಯ ಅಗಲ 10 ಮೀಟರಿನಷ್ಟು ಇರಲಿದೆ ಎಂದು ಯೋಜನೆ ಹೇಳುತ್ತದೆ. ಆದರೆ, ಕೆಲವು ಪ್ರದೇಶಗಳಲ್ಲಿ 30 ಮೀಟರಿನಷ್ಟು ಜಾಗವನ್ನು ರಸ್ತೆಗಾಗಿ ಕಡಿಯಲಾಗಿದೆ. ಇದರಿಂದ ಎಷ್ಟು ಪ್ರಮಾಣದಲ್ಲಿ ಪರ್ವತ ಪ್ರದೇಶಗಳನ್ನು ಒತ್ತುವರಿ ಮಾಡಲಾಗಿದೆ ಎನ್ನುವುದು ಅರಿವಾಗುತ್ತದೆ. ರಸ್ತೆ ನಿರ್ಮಾಣದಿಂದ ಉಂಟಾಗುವ ಟ್ರಾಫಿಕ್ ಸಮಸ್ಯೆ ಪರಿಹರಿಸಲು ಹಲವು ಸುರಂಗಗಳು, ಸೇತುವೆಗಳು, ಬೈಪಾಸ್ ರಸ್ತೆಗಳು, ಸಬ್ ವೇಗಳನ್ನೂ ನಿರ್ಮಿಸಲಾಗುತ್ತಿದೆ,” ಎಂದು ಅವರು ಹೇಳಿದ್ದಾರೆ.

ವಿಚಿತ್ರ ಎಂದರೆ, ಪರಿಸರ ಸಚಿವಾಲಯಕ್ಕೆ ಯೋಜನೆ ಸಂಬಂಧ ಸ್ವಲ್ಪವೂ ಮಾಹಿತಿ ಇಲ್ಲ! ಯೋಜನೆಯ ಹೆಸರಿನಲ್ಲಿ ಒಟ್ಟು 45 ಸಾವಿರ ಮರಗಳು ಉರುಳಲಿದ್ದು, ಅವುಗಳಲ್ಲಿ ಈಗಾಗಲೇ 30,000 ಮರಗಳನ್ನು ಕಡಿಯಲಾಗಿದೆ ಎಂದು ತಿಳಿದುಬಂದಿದೆ.

ಉತ್ತರಾಖಂಡ ಸರ್ಕಾರ 1980ರ ಅರಣ್ಯ ಸಂರಕ್ಷಣೆ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂಬ ಆರೋಪ ಕೇಳಿಬರುತ್ತಿದೆ. ಉತ್ತರಕಾಶಿ ಜಿಲ್ಲೆಯಲ್ಲಿ ಕೆಲಸ ಮಾಡುವ ಪರಿಸರ ಕಾರ್ಯಕರ್ತ ಮಲ್ಲಿಕಾ ಭನೋಟ್, "ಕಾಡಿನ ನಾಶ ಮುಚ್ಚಿಡಲು ಇಡೀ ಅರಣ್ಯ ಪ್ರದೇಶವನ್ನು ಬುದ್ಧಿವಂತಿಕೆಯಿಂದ 50.8 ಹೆಕ್ಟೇರ್‌ನಂತೆ ವಿಭಜಿಸಲಾಗಿದೆ. ಕಾಡಿನ ಹೊದಿಕೆ ಎಷ್ಟಿದೆ ಎಂಬ ಸಮಗ್ರ ಮಾಹಿತಿ ನೀಡುತ್ತಿಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಆದರೆ, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಓಂ ಪ್ರಕಾಶ್, “ಚಾರ್‌ಧಾಮ್ ರಸ್ತೆಗಳನ್ನು ಗಡಿಭದ್ರತಾ ಪಡೆಗಳು ಕೂಡ ಬಳಸುವುದರಿಂದ ವಿಸ್ತರಣೆ ಅನಿವಾರ್ಯವಾಗಿದೆ. ಒಮ್ಮೊಮ್ಮೆ ಚೀನಾ ಗಡಿಯತ್ತ 12 ಮೀಟರ್ ಅಗಲದ ಬೋಫೋರ್ಸ್ ಫಿರಂಗಿಗಳನ್ನು ಕೂಡ ಕೊಂಡೊಯ್ಯಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ರಸ್ತೆಯೇ ದೊಡ್ಡ ಸಮಸ್ಯೆಯಾಗಬಾರದು,” ಎನ್ನುತ್ತಾರೆ. ರಸ್ತೆ ಅಭಿವೃದ್ಧಿ ಆಗುವುದರಿಂದ ಪ್ರವಾಸೋದ್ಯಮ ಕೂಡ ಬೆಳೆಯುತ್ತದೆ ಎಂಬುದು ಅವರ ಪ್ರತಿಪಾದನೆ.

ಇದಲ್ಲದೆ, ಋಷಿಕೇಶದಿಂದ ಕರ್ಣಪ್ರಯಾಗದವರೆಗಿನ ಪ್ರಸ್ತಾವಿತ ರೈಲು ಯೋಜನೆಯನ್ನು ಮುಖ್ಯಮಂತ್ರಿಯವರು ಸೋನಾಪ್ರಯಾಗದವರೆಗೆ ವಿಸ್ತರಿಸಿ ಪ್ರವಾಸೋದ್ಯಮಕ್ಕೆ ಅನುವು ಮಾಡುವ ಉದ್ದೇಶ ಹೊಂದಿದ್ದಾರೆ. ಆದರೆ, ಇದಕ್ಕೆ ರಾಜ್ಯ ಪರಿಸರ ಸಚಿವಾಲಯ ಒಪ್ಪಿಗೆ ನೀಡಿಲ್ಲ ಎಂದು ತಿಳಿದುಬಂದಿದೆ. 2013ರಲ್ಲಿ ಮೇಘಸ್ಫೋಟ ಸಂಭವಿಸಿದ ಪರಿಣಾಮ 5,000 ಮಂದಿ ಸಾವನ್ನಪ್ಪಿದ್ದರು. ಹಾಗಾಗಿ, ಭಾರತೀಯ ಸರ್ವೇಕ್ಷಣಾ ಸಂಸ್ಥೆ ಕೂಡ ಹೆಚ್ಚು ಭೂಕುಸಿತ ಸಂಭವಿಸುವ ಚಾರ್‌ಧಾಮ್ ಪ್ರದೇಶದಲ್ಲಿ ನಗರೀಕರಣ, ರಸ್ತೆ ನಿರ್ಮಾಣದಂತಹ ಕೆಲಸಗಳನ್ನು ಮಾಡಬಾರದು ಎಂದು ಎಚ್ಚರಿಕೆ ನೀಡಿತ್ತು.

ಇದನ್ನೂ ಓದಿ : ವಿಶ್ವ ಪರಿಸರ ದಿನ ವಿಶೇಷ | ಕಲ್ಯಾಣಿಗಳ ಪುನಶ್ಚೇತನಕ್ಕೆ ಪ್ರೇರಣೆಯಾದ ‘ಪಾನಿ’

ಇದೆಲ್ಲದರ ನಡುವೆ ಅತಿ ಹೆಚ್ಚು ಭೂಕಂಪಗಳು ಸಂಭವಿಸುವ ರಾಜ್ಯವಾದ ಉತ್ತರಾಖಂಡದಲ್ಲಿ ಅದಕ್ಕೆ ತಕ್ಕಂತಹ ರಸ್ತೆಗಳ ನಿರ್ಮಾಣವಾಗುತ್ತಿಲ್ಲ ಎಂಬ ಆರೋಪಗಳೂ ಇವೆ. ಈ ಹಿಂದೆ ಇದ್ದ ಕಿರುಹಾದಿಗಳನ್ನೇ ಆಧರಿಸಿ ಅನೇಕ ರಸ್ತೆಗಳು ರೂಪುಗೊಂಡಿವೆ. ಅವುಗಳ ಅಕ್ಕಪಕ್ಕದಲ್ಲಿರುವ ಬಂಡೆ ಜಾರಿದರೆ ಯಾರು ಹೊಣೆ ಎಂಬ ಪ್ರಶ್ನೆ ಉದ್ಭವಿಸಿದೆ. ಅಲ್ಲದೆ, ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಾಣಕ್ಕೂ ಕ್ರಮ ಕೈಗೊಳ್ಳುತ್ತಿಲ್ಲ. ಮಳೆ ಬಿದ್ದಾಗ ಅಪಾರ ಪ್ರಮಾಣದ ನೀರು ರಸ್ತೆಯ ಮೇಲೆ ಹರಿಯುವ ಭೀತಿ ಇದೆ. ಈ ರೀತಿ ಮನಬಂದಂತೆ ನಿರ್ಮಾಣ ಕಾಮಗಾರಿಗಳು ನಡೆಯುವುದರಿಂದ ಬೇಸಿಗೆ ಸಮಯದಲ್ಲಿ ಹಿಮಾಲಯದ ಜಲಮೂಲಗಳು ಬತ್ತುವ ಆತಂಕವಿದೆ.

2013ರ ಮೇಘಸ್ಫೋಟ ದುರಂತದಿಂದ ಸರ್ಕಾರ ಇನ್ನೂ ಪಾಠ ಕಲಿತಂತಿಲ್ಲ. 2013ರಲ್ಲಿ ಒಟ್ಟು 13 ಲಕ್ಷ ಮಂದಿ ಚಾರುಧಾಮ್ ಪ್ರದೇಶಗಳಿಗೆ ಭೇಟಿ ನೀಡಿದ್ದರು. 2022ರ ಹೊತ್ತಿಗೆ ಸಮಗ್ರ ಪ್ರವಾಸೋದ್ಯಮ ಅಭಿವೃದ್ಧಿಗೆ ಯಾವುದೇ ಅಡೆತಡೆಗಳಿಲ್ಲದ ಯೋಜನೆಯನ್ನು ಮಾತ್ರ ಅದು ಹಾಕಿಕೊಂಡಂತಿದೆ. ಒಂದು ವೇಳೆ, ಪ್ರವಾಸೋದ್ಯಮ ಅಭಿವೃದ್ಧಿಯಿಂದ ಹೆಚ್ಚು ಯಾತ್ರಿಕರು ಇಲ್ಲಿನ ಪರ್ವತ ಪ್ರದೇಶಗಳಿಗೆ ಭೇಟಿ ನೀಡಿದರೆ ಅವರ ‘ಭಾರವನ್ನು’ ಹೊರುವ ಶಕ್ತಿ ಅವುಗಳಿಗೆ ಇದೆಯೇ ಎಂಬುದನ್ನಾದರೂ ಸರ್ಕಾರ ಯೋಚಿಸಬೇಕಿತ್ತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More