ದಿ ಸ್ಟೇಟ್‌ ಅಭಿಯಾನ | ವಿಧಾನಸೌಧವನ್ನು ಪಾರಂಪರಿಕ ಕಟ್ಟಡವೆಂದು ಘೋಷಿಸಿ

ವಿಧಾನಸೌಧದ ಸೌಂದರ್ಯ, ವಿನ್ಯಾಸ ಉಳಿಸುವುದರೊಟ್ಟಿಗೆ ಅದಕ್ಕಿರುವ ಸಾಂವಿಧಾನಿಕ ಘನತೆ ಎತ್ತಿಹಿಡಿಯುವ ಸಲುವಾಗಿ ವಿಧಾನಸೌಧವನ್ನು ಪಾರಂಪರಿಕ ಕಟ್ಟಡವೆಂದು ಘೋಷಿಸುವ ತುರ್ತು ಅಗತ್ಯವಿದೆ. ಹಾಗಾದಾಗ ಮಾತ್ರ ಮುಂದಿನ ತಲೆಮಾರಿಗೆ ವಿಧಾನಸೌಧವನ್ನು ಉಳಿಸುವುದು ಸಾಧ್ಯ

ಬೆಂಗಳೂರಿನ ಹೆಗ್ಗುರುತೆಂದರೆ ಅದು ವಿಧಾನಸೌಧ. ಬೆಂಗಳೂರಿಗೆ ಇಂದು ಜಾಗತಿಕ ಸ್ತರದಲ್ಲಿ ಏನೆಲ್ಲ ಹಿರಿಮೆ, ಗರಿಮೆಗಳಿದ್ದರೂ ಇಂದಿಗೂ ಬೆಂಗಳೂರು ಎಂದೊಡನೆ ಮನದ ಭಿತ್ತಿಯಲ್ಲಿ ಮೂಡುವ ಚಿತ್ರ ವಿಧಾನಸೌಧದ್ದು. ದೇಶದ ಎಲ್ಲ ರಾಜ್ಯಗಳಲ್ಲಿಯೂ, ಅಲ್ಲಿನ ವಿಧಾನಸಭಾ ಅಧಿವೇಶಗಳನ್ನು ನಡೆಸಲು ಹಾಗೂ ಸಚಿವಾಲಯಗಳನ್ನು ಒಳಗೊಳ್ಳಲು ಕಟ್ಟಡಗಳಿವೆಯಾದರೂ ಅವು ಯಾವುವೂ ನಮ್ಮ ಹೆಮ್ಮೆಯ ವಿಧಾನಸೌಧದ ರೀತಿಯಲ್ಲಿ ಜನಮಾನಸದಲ್ಲಿ ಅಚ್ಚೊತ್ತಿಲ್ಲ. ಶಕ್ತಿಕೇಂದ್ರವಾಗಿ ಮಾತ್ರವಲ್ಲದೆ, ತನ್ನ ವಿಶಿಷ್ಟ ವಾಸ್ತು ವಿನ್ಯಾಸ, ಸೌಂದರ್ಯದಿಂದಾಗಿ ದೇಶ-ವಿದೇಶಿಗರ ಕಣ್ಮನಗಳನ್ನು ವಿಧಾನಸೌಧ ಸದಾ ಸೆಳೆದಿದೆ.

ಇಂತಹ ಭವ್ಯಸೌಧವನ್ನು ಪಾರಂಪರಿಕ ಕಟ್ಟಡವನ್ನಾಗಿ ಘೋಷಿಸಬೇಕು ಎನ್ನುವ ಚರ್ಚೆ ಬಜೆಟ್‌ ಅಧಿವೇಶನದ ವೇಳೆ ವಿಧಾನ ಪರಿಷತ್‌ನಲ್ಲಿ ನಡೆದಿದೆ. ವಿಧಾನಸೌಧದ ಸೌಂದರ್ಯ, ವಿನ್ಯಾಸಕ್ಕೆ ಧಕ್ಕೆ ತರುವಂತಹ ಕೆಲಸಗಳು ಸಚಿವರುಗಳಿಂದಲೇ ನಡೆಯುತ್ತಿರುವುದು ಸಮಸ್ಯೆಯ ಮೂಲ. ಪ್ರತಿ ಬಾರಿಯೂ ಹೊಸ ಸರ್ಕಾರಗಳು ರಚನೆಯಾದಾಗ, ಹೊಸ ಸಚಿವರು ಅಧಿಕಾರ ಗ್ರಹಣ ಮಾಡಿದಾಗ ದುರಸ್ತಿ, ಮರುವಿನ್ಯಾಸದ ನೆಪದಲ್ಲಿ ಕಟ್ಟಡದ ಮೂಲ ವಿನ್ಯಾಸಕ್ಕೆ ಧಕ್ಕೆ ತರುವಂತಹ ಚಟುವಟಿಕೆಗಳು ನಡೆಯುವುದು ಸಾಮಾನ್ಯವಾಗಿ ವರದಿ ಆಗುತ್ತಿರುತ್ತವೆ.

ಅಷ್ಟು ಮಾತ್ರವೇ ಅಲ್ಲದೆ, ದೇಶದ ಸಾಂವಿಧಾನಿಕ ಘನತೆಯನ್ನು ಎತ್ತಿಹಿಡಿಯಬೇಕಾದ ವಿಧಾನಸೌಧದಲ್ಲಿಯೇ ಮೌಢ್ಯವನ್ನು ಸಂಕೇತಿಸುವಂತೆ ವಾಸ್ತುವಿನ ಹೆಸರಿನಲ್ಲಿ ಕಟ್ಟಡದ ಅಂದಕ್ಕೆ, ವಿನ್ಯಾಸಕ್ಕೆ ಧಕ್ಕೆ ತರುವ ಕೆಲಸಗಳೂ ನಡೆದಿವೆ. ಇತ್ತೀಚಿನ ದಿನಗಳಲ್ಲಿ ಹೋಮ-ಹವನಗಳು ನಡೆದಿರುವುದೂ ವರದಿಯಾಗಿದ್ದು, ಇದು ಕಟ್ಟಡಕ್ಕಿರುವ ಸಾಂವಿಧಾನಿಕ ಘನತೆಗೆ ಹೊರತಾದ ನಡೆಯಾಗಿದೆ. ಇದೆಲ್ಲಕ್ಕೂ ಕಡಿವಾಣ ಹಾಕಿ ಕಟ್ಟಡದ ಸೌಂದರ್ಯ, ವಿನ್ಯಾಸವನ್ನು ಉಳಿಸುವುದರೊಟ್ಟಿಗೆ ಅದಕ್ಕಿರುವ ಸಾಂವಿಧಾನಿಕ ಘನತೆಯನ್ನು ಎತ್ತಿಹಿಡಿಯುವ ಸಲುವಾಗಿ ವಿಧಾನಸೌಧವನ್ನು ಪಾರಂಪರಿಕ ಕಟ್ಟಡವೆಂದು ಘೋಷಿಸುವ ತುರ್ತು ಅಗತ್ಯವಿದೆ. ಹಾಗಾದಾಗ ಮಾತ್ರ ಮುಂದಿನ ತಲೆಮಾರಿಗೆ ವಿಧಾನಸೌಧವನ್ನು ಉಳಿಸುವುದು ಸಾಧ್ಯ.

ವಿಧಾನಸೌಧವನ್ನು ಮೌಢ್ಯಗಳಿಂದ ದೂರಾಗಿಸುವ, ವಿರೂಪಗೊಳಿಸುವ ಪ್ರಯತ್ನಗಳಿಂದ ರಕ್ಷಿಸುವ ಹಾಗೂ ಮುಂದಿನ ತಲೆಮಾರಿಗೆ ಈ ಭವ್ಯ ವಾಸ್ತುಶಿಲ್ಪವನ್ನು ಉಳಿಸಿಕೊಡುವ ಸಲುವಾಗಿ ‘ದಿ ಸ್ಟೇಟ್‌’ #SaveVidhanaSoudha ಅಭಿಯಾನ ಅರಂಭಿಸುತ್ತಿದೆ. ನಮ್ಮ ಈ ಅಭಿಯಾನಕ್ಕೆ ನೀವೂ ಕೈಜೋಡಿಸುವ ಮೂಲಕ ಪ್ರಜಾಪ್ರಭುತ್ವದ ಹಿರಿಮೆಯನ್ನು ಸಾರುವ ಈ ದ್ಯೋತಕವನ್ನು ರಕ್ಷಿಸಲು ಬೆಂಬಲಿಸಿ.

ಅಭಿಯಾನದಲ್ಲಿ ಕೈಜೋಡಿಸಲು ಇಲ್ಲಿರುವ ಲಿಂಕ್‌ ಮೇಲೆ ಕ್ಲಿಕ್ ಮಾಡಿ, ಪಿಟಿಷನ್‌ಗೆ ಸಹಿ ಮಾಡಿ: #SaveVidhanaSoudha

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More