ರೈತರ ಸಾಲ ಮನ್ನಾ; ರಾಜ್ಯದ ಆರ್ಥಿಕತೆ ಮೇಲೆ ಹೊರೆ ಬೀಳಲಿದೆ ಎಂದ ಆರ್‌ಬಿಐ

ರಾಜ್ಯಗಳ ಆರ್ಥಿಕತೆ ಪರಿಸ್ಥಿತಿ ಕುರಿತಂತೆ ವಿಸ್ತೃತ ವರದಿ ಪ್ರಕಟಿಸಿರುವ ಆರ್‌ಬಿಐ, ರೈತರ ಸಾಲ ಮನ್ನಾ ಮಾಡುತ್ತಿರುವುದರಿಂದ ರೈತರ ಮೇಲಿನ ಆರ್ಥಿಕ ಹೊರೆ ಕೊಂಚ ತಗ್ಗಿದರೂ, ರಾಜ್ಯದ ಮೇಲಿನ ಹೊರೆ ಹಿಗ್ಗುತ್ತಿದೆ ಎಂದು ಹೇಳಿದೆ. ವಿತ್ತೀಯ ಕೊರತೆ ಮಿತಿ ಮೀರಲಿದೆ ಎಂದೂ ಎಚ್ಚರಿಸಿದೆ

ರಾಜ್ಯ ಸರ್ಕಾರಗಳು ರೈತರ ಸಾಲ ಮನ್ನಾ ಮಾಡುವುದರಿಂದ ರೈತರಿಗೆ ತಾತ್ಕಾಲಿಕವಾಗಿ ಆರ್ಥಿಕ ಹೊರೆ ತಗ್ಗಬಹುದಾದರೂ ರಾಜ್ಯದ ಆರ್ಥಿಕತೆ ಮೇಲಿನ ಹೊರೆ ಹೆಚ್ಚಲಿದೆ; ಇದು ರಾಜ್ಯದ ವಿತ್ತೀಯ ಕೊರತೆ ಹೆಚ್ಚಲು ಮತ್ತು ಸರ್ಕಾರದ ಸಾಲದ ಪ್ರಮಾಣ ಹೆಚ್ಚಲು ಕಾರಣವಾಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಸಾಲ ಮನ್ನಾದ ಫಲಾನುಭವ ಪಡೆದ ರೈತರಿಗೆ ಮತ್ತೆ ಸಾಂಸ್ಥಿಕ ವಲಯದಿಂದ ಸಾಲ ಪಡೆಯಲು ಕಷ್ಟವಾಗುತ್ತದೆ. ಸಾಲ ಮನ್ನಾ ಸೌಲಭ್ಯ ಪಡೆದ ರೈತರು ಮತ್ತೆ ಸಾಲ ಪಡೆಯಲು ಹೋದಾಗ ಅವರನ್ನು ಬ್ಯಾಂಕುಗಳು ಅವರನ್ನು ನಡೆಸಿಕೊಳ್ಳುವ ರೀತಿಯೇ ಬೇರೆ ಇರುತ್ತದೆ. ಸುಲಭವಾಗಿ ಸಾಲ ಸೌಲಭ್ಯ ಒದಗಿಸುವುದಿಲ್ಲ. ಹೀಗಾಗಿ, ರೈತರು ಅಸಂಘಟಿತ ವಲಯದಿಂದ ಸಾಲಕ್ಕೆ ಮೊರೆ ಹೋಗಬೇಕಾಗುತ್ತದೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದೆ.

ಸರ್ಕಾರಗಳು ಸಾಲ ಮನ್ನಾ ಘೋಷಣೆ ಮಾಡಿದ ಪ್ರಮಾಣದಷ್ಟು ಮೊತ್ತವನ್ನು ಬಜೆಟ್ ಅನುದಾನದಲ್ಲಿ ಮೀಸಲಿಡುವುದಿಲ್ಲ. ಹೀಗಾಗಿ, ಮುಂಬರುವ ವರ್ಷಗಳಲ್ಲೂ ರಾಜ್ಯ ಸರ್ಕಾರಗಳ ಮೇಲೆ ಈ ವಿತ್ತೀಯ ಹೊರೆ ಮುಂದುವರಿಯಲಿದೆ. ಸಾಲ ಮನ್ನಾದಿಂದಾಗಿ ಬಂಡವಾಳ ವಿನಿಯೋಗ ತಗ್ಗುವುದರಿಂದ ಅದು ಅಭಿವೃದ್ಧಿ ವೆಚ್ಚದ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಿದೆ.

ಕೃಷಿ ಸಾಲ ಮನ್ನಾ ಮತ್ತು ಸಾಲ ಪರಿಹಾರ ಯೋಜನೆಯ (2008) ಅನುಭವದ ಆಧಾರದ ಮೇಲೆ ಹೇಳುವುದಾದರೆ, ಸಾಲ ಮನ್ನಾ ಯೋಜನೆಯಿಂದ ಫಲಾನುಭವಿ ರೈತರ ಸಾಲದ ಹೊರೆ ತಗ್ಗಬಹುದು, ಆದರೆ, ಫಲಾನುಭವಿ ಕುಟುಂಬದ ಹೂಡಿಕೆ, ವಿನಿಯೋಜನೆ ಮತ್ತು ಉತ್ಪಾದಕತೆ ಹೆಚ್ಚಾದ ಬಗ್ಗೆ ಯಾವುದೇ ಆಧಾರಗಳಿಲ್ಲ. ಸಾಲ ಮನ್ನಾ ಫಲಾನುಭವಿಗೆ ಭವಿಷ್ಯದಲ್ಲಿ ಸಾಲ ಪಡೆಯುವುದಕ್ಕೆ ನಿರ್ಬಂಧಗಳು ಹೆಚ್ಚುತ್ತವೆ. ಬ್ಯಾಂಕುಗಳು ಸಾಲ ನೀಡಲು ಹಿಂದೇಟು ಹಾಕುತ್ತವೆ. ಹೀಗಾಗಿ, ರೈತರು ಮತ್ತೆ ಅಸಂಘಿಟತ ವಲಯದಲ್ಲೇ ದೊಡ್ಡ ಪ್ರಮಾಣದಲ್ಲಿ ಬಡ್ಡಿ ತೆತ್ತು ಸಾಲ ಪಡೆಯಬೇಕಾಗುತ್ತದೆ.

ಸಾಲ ಮನ್ನಾ ಮಾಡಿದ ವರ್ಷಗಳಲ್ಲಿ ಬ್ಯಾಂಕುಗಳು ಸಾಲ ಮನ್ನಾ ಸೌಲಭ್ಯ ಪಡೆದವರಿಗಿಂತ ಪಡೆಯದವರಿಗೆ ಹೆಚ್ಚಿನ ಸಾಲ ನೀಡುತ್ತವೆ. ಸಾಲ ಮನ್ನಾದಿಂದ ಬ್ಯಾಂಕುಗಳು ತಮ್ಮ ಬ್ಯಾಲೆನ್ಸ್ ಶೀಟ್ ಸರಿದೂಗಿಸಬಹುದು; ಆದರೆ, ದೀರ್ಘಕಾಲದಲ್ಲಿ ಬ್ಯಾಂಕುಗಳು ಕೃಷಿಕರಿಗೆ ಸಾಲ ನೀಡಲು ಹಿಂದೇಟು ಹಾಕುತ್ತವೆ. ಸಾಲ ಮನ್ನಾ ಮಾಡುವುದರಿಂದ ಗ್ರಾಮೀಣ ಸಾಲ ಸಂಸ್ಥೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದು ಸಾಲ ಮರುಪಾವತಿ ಶಿಸ್ತಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಸಾಲ ಮರುಪಾವತಿ ಮಾಡುವವರನ್ನೂ ಮರುಪಾವತಿ ಮಾಡದಂತೆ ಪ್ರೇರೇಪಿಸುತ್ತದೆ ಎಂದು ಆರ್‌ಬಿಐ ವರದಿ ಹೇಳಿದೆ.

ರೈತರ ಉತ್ಪನ್ನಗಳ ದರ ಕುಸಿತ, ಪ್ರಾಕೃತಿಕ ವಿಕೋಪಗಳಿಂದಾದ ನಷ್ಟ ಮತ್ತಿತರ ಕಾರಣಗಳನ್ನು ನೀಡಿ ಸಾಲ ಮನ್ನಾ ಮಾಡುವುದನ್ನು ಸಮರ್ಥಿಸಿಕೊಳ್ಳಲಾಗುತ್ತದೆ. 2014ರಲ್ಲಿ ಆಂಧ್ರಪ್ರದೇಶ 24,000 ಕೋಟಿ ಮತ್ತು ತೆಲಂಗಾಣ ರಾಜ್ಯಗಳು 17,000 ಕೋಟಿ ಸಾಲ ಮನ್ನಾ ಮಾಡಿದವು. ಇದು ಆ ರಾಜ್ಯಗಳ ರಾಜ್ಯದ ಒಟ್ಟು ಉತ್ಪನ್ನದ (ಜಿಎಸ್‌ಡಿಪಿ) ಶೇ.4.6 ಮತ್ತು ಶೇ.3.4ರಷ್ಟಿತ್ತು. 2016ರಲ್ಲಿ ತಮಿಳುನಾಡು 6,000 ಕೋಟಿ ಸಾಲ ಮನ್ನಾ ಮಾಡಿತು; ಅದು ಜಿಎಸ್‌ಡಿಪಿಯ ಶೇ.0.5ರಷ್ಟಿತ್ತು. 2017ರಲ್ಲಿ ಮಹಾರಾಷ್ಟ್ರ 34,000 ಕೋಟಿ (ಜಿಎಸ್‌ಡಿಪಿಯ ಶೇ.1.3) ಮತ್ತು ಉತ್ತರ ಪ್ರದೇಶ ರಾಜ್ಯಗಳು ಕ್ರಮವಾಗಿ 36,000 ಕೋಟಿ (ಜಿಎಸ್‌ಡಿಪಿಯ ಶೇ.2.7) ಪಂಜಾಬ್ 10,000 ಕೋಟಿ (ಜಿಎಸ್‌ಡಿಪಿಯ ಶೇ.2.1) ಸಾಲ ಮನ್ನಾ ಮಾಡಿದವು. ರಾಜಸ್ಥಾನ ಫೆಬ್ರವರಿಯಲ್ಲಿ 8,000 ಕೋಟಿಯಷ್ಟು (ಜಿಎಸ್‌ಡಿಪಿಯ ಶೇ.0.9) ಸಾಲ ಮನ್ನಾ ಮಾಡಿತು.

ಇದನ್ನೂ ಓದಿ : ಸಾಲ ಮಾಡಿ ರೈತರ ಸಾಲ ಮನ್ನಾ ಮಾಡುವ ಕಸರತ್ತಿಗೆ ಸಿಲುಕಿದ ಕುಮಾರಸ್ವಾಮಿ ಬಜೆಟ್ 

ಕರ್ನಾಟಕ 34,000 ಕೋಟಿ (ಜಿಎಸ್‌ಡಿಪಿಯ ಶೇ.2.4ರಷ್ಟು) ಸಾಲ ಮನ್ನಾ ಘೋಷಣೆ ಮಾಡಿದೆ. 2017-18ರಲ್ಲಿ ಸಾಲ ಮನ್ನಾ ಮಾಡಿದ ಮೊತ್ತವು ಜಿಎಸ್‌ಡಿಪಿಯ ಶೇ.0.27 ಎಂದು ಅಂದಾಜಿಸಿದ್ದರೂ, ಪರಿಷ್ಕೃತ ಮೊತ್ತವು ಜಿಎಸ್‌ಡಿಪಿಯ ಶೇ.0.32ಕ್ಕೆ ಏರಿತ್ತು. 2018-19ರಲ್ಲಿ ಜಿಎಸ್‌ಡಿಪಿಯ ಶೇ.0.2ರಷ್ಟು ಮಾತ್ರ ಅನುದಾನ ಮೀಸಲಿಡಲಾಗಿದೆ. ರಾಜ್ಯಗಳು ಹೀಗೆ ಹೆಚ್ಚಿನ ಸಾಲ ಮನ್ನಾ ಮಾಡಿ ಕಡಿಮೆ ಅನುದಾನ ಒದಗಿಸುತ್ತಿರುವುದರಿಂದ ಒಟ್ಟು ವಿತ್ತೀಯ ಕೊರತೆಯು ಹೆಚ್ಚುತ್ತಿದೆ.

ಈಗಿನ ಅಂಕಿ-ಅಂಶಗಳ ಪ್ರಕಾರ, ಒಟ್ಟು ವಿತ್ತೀಯ ಕೊರತೆಯು ತಮಿಳುನಾಡಿನದು ಶೇ.4.6ರಷ್ಟಿದ್ದರೆ, ಉತ್ತರ ಪ್ರದೇಶದ್ದು ಶೇ.6.9ರಷ್ಟಿದೆ. 2018-19ರಲ್ಲಿ ರಾಜ್ಯಗಳು ಸಾಲ ಮನ್ನಾ ಮಾಡಲು ಶೇ.0.1ರಿಂದ ಶೇ.0.8ರಷ್ಟು ಅನುದಾನ ಮೀಸಲಿಟ್ಟಿದ್ದು ಒಟ್ಟು ವಿತ್ತೀಯ ಕೊರತೆಯು ಶೇ.2ರಿಂದ 29.8ರಷ್ಟಾಗಬಹುದು ಎಂದು ಆರ್‌ಬಿಐ ವರದಿಯಲ್ಲಿ ತಿಳಿಸಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More