ತಗ್ಗುತ್ತಿರುವ ರಾಜ್ಯದ ಆದಾಯ, 4ನೇ ರಾಜ್ಯ ಹಣಕಾಸು ಆಯೋಗದ ಕಳವಳ

ವೇತನ ಆಯೋಗದ ಶಿಫಾರಸು ಜಾರಿ ಹಾಗೂ ರೈತರ ಬೆಳೆ ಸಾಲಮನ್ನಾ ಹೊರತಾಗಿಯೂ ರಾಜ್ಯದ ಆರ್ಥಿಕ ಸ್ಥಿತಿ ಹದಗೆಡುವುದಿಲ್ಲ ಎಂದು ಸಿಎಂ ಎಚ್‌ಡಿಕೆ ಹೇಳಿದ್ದರು. ಆದರೆ ರಾಜ್ಯಕ್ಕೆ ಬರುವ ಆದಾಯದ ಪಾಲು ಇಳಿಕೆಯಾಗುತ್ತಿದೆ ಎಂದು ನಾಲ್ಕನೇ ರಾಜ್ಯ ಹಣಕಾಸು ಆಯೋಗ ಕಳವಳ ವ್ಯಕ್ತಪಡಿಸಿದೆ

ರಾಜ್ಯದ ಸ್ವಂತ ತೆರಿಗೆಯಲ್ಲಿ ರಾಜಸ್ವದ ಪಾಲು (ರಾಜ್ಯಕ್ಕೆ ಬರುವ ಆದಾಯ) ಕಳೆದ ೫ ವರ್ಷಗಳಲ್ಲಿ ಇಳಿಕೆಯಾಗಿದೆ. ಒಟ್ಟು ರಾಜ್ಯ ಆಂತರಿಕ ಉತ್ಪನ್ನದಲ್ಲಿ (ಜಿಎಸ್‌ಡಿಪಿ) ರಾಜ್ಯದ ಸ್ವಂತ ರಾಜಸ್ವ ತೆರಿಗೆ ಪ್ರಮಾಣ ಎಲ್ಲ ರಾಜ್ಯಗಳಿಗಿಂತಲೂ ಕರ್ನಾಟಕದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಇದೆಯಾದರೂ ಸ್ವಂತ ತೆರಿಗೆ ರಾಜಸ್ವದ ಪಾಲು ೨೦೧೬-೧೭ರಲ್ಲಿ ಶೇ.೬೨.೮೧ಕ್ಕೆ ಇಳಿದಿದೆ. ಇದು ಕಳವಳಕಾರಿ ಸಂಗತಿ ಎಂದು ೪ನೇ ರಾಜ್ಯ ಹಣಕಾಸು ಆಯೋಗ ಹೇಳಿದೆ.

ಸಿ ಜಿ ಚಿನ್ನಸ್ವಾಮಿ ಅಧ್ಯಕ್ಷತೆಯ ನಾಲ್ಕನೆಯ ರಾಜ್ಯ ಹಣಕಾಸು ಆಯೋಗ ಶುಕ್ರವಾರದಂದು (ಜು.೧೩) ವಿಧಾನಸಭೆಗೆ ಮಂಡಿಸಿರುವ ವರದಿಯಲ್ಲಿ ರಾಜ್ಯದ ಹಣಕಾಸು ಸ್ಥಿತಿ ಕುರಿತು ಬೆಳಕು ಚೆಲ್ಲಿದೆ. ಹಾಗೆಯೇ, ರಾಜ್ಯದ ಹಣಕಾಸಿನ ಸವಾಲುಗಳ ಕುರಿತು ಚರ್ಚಿಸಿದೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ (೨೦೧೭-೧೮) ೮,೧೬೨ ಕೋಟಿ ರು. ರೈತರ ಸಾಲಮನ್ನಾ ಮಾಡಿರುವ ಮೊತ್ತ ದೊಡ್ಡ ಮೊತ್ತವಾಗಿದೆ. ಸಾಲಮನ್ನಾದಿಂದ ರೈತರಿಗೆ ಅನುಕೂಲವಾಗುತ್ತೆದೆಂದು ೪ನೇ ಹಣಕಾಸು ಆಯೋಗ ಅಭಿಪ್ರಾಯಪಟ್ಟಿದೆಯಾದರೂ ಸಾಲಮನ್ನಾ ಕುರಿತು ಆಯೋಗ ವಿಸ್ತೃತವಾಗಿ ಚರ್ಚಿಸಿಲ್ಲ. ಅದೇ ರೀತಿ, ೬ನೇ ವೇತನ ಆಯೋಗದ ಶಿಫಾರಸುಗಳು ಮತ್ತು ಕೃಷ್ಣ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಭೂಸ್ವಾಧೀನ ವೆಚ್ಚವು ರಾಜ್ಯದ ಹಣಕಾಸು ಸ್ಥಿತಿಗತಿ ಮೇಲೆ ಪರಿಣಾಮ ಬೀರುತ್ತವೆಯಲ್ಲದೆ, ಬೊಕ್ಕಸಕ್ಕೆ ಹೊರೆಯಾಗಲಿದೆ ಎಂದು ತಿಳಿಸಿದೆ.

ರಾಜಸ್ವ ಸ್ವೀಕೃತಿಗಳಲ್ಲಿ ರಾಜ್ಯದ ಸ್ವಂತ ತೆರಿಗೆ ರಾಜಸ್ವದ ಪಾಲು ೨೦೧೨-೧೩ರಲ್ಲಿ ಶೇ.೬೮.೭೬ರಷ್ಟಿದ್ದರೆ, ೨೦೧೭-೧೮ರಲ್ಲಿ ಅದು ಶೇ.೬೨.೮೧ಕ್ಕೆ ಇಳಿದಿದೆ. ಅದೇ ರೀತಿ, ತೆರಿಗೆಯೇತರ ರಾಜಸ್ವದ ಪಾಲು ಸಹ ೨೦೧೨-೧೩ರಲ್ಲಿದ್ದ ಶೇ.೫.೦೭ರಿಂದ ೨೦೧೬-೧೭ರಲ್ಲಿ ಶೇ.೪.೬೮ಕ್ಕೆ ಇಳಿಕೆಯಾಗಿದೆ. ಹೀಗಾಗಿ, ರಾಜ್ಯದ ಸ್ವಂತ ರಾಜಸ್ವಗಳ ಸ್ವೀಕೃತಿಗಳ ಪಾಲು ೨೦೧೨-೧೩ರಲ್ಲಿ ರಾಜ್ಯದ ಒಟ್ಟು ರಾಜಸ್ವ ಸ್ವೀಕೃತಿಯಲ್ಲಿ ಶೇ.೭೩.೮೩ರಷ್ಟಿದ್ದರೆ, ೨೦೧೬-೧೭ರಲ್ಲಿ ಶೇ.೬೭.೪೯ಕ್ಕೆ ಇಳಿದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. “ಈ ರೀತಿ ಇಳಿಕೆಯಾಗುತ್ತಿರುವುದು ರಾಜ್ಯದ ಹಣಕಾಸು ಸ್ಥಿತಿಗತಿ ಮೇಲೆ ಒತ್ತಡದ ವಿಷಯವಾಗಿದೆ. ರಾಜ್ಯದ ಹಣಕಾಸಿನ ಸ್ಥಿತಿಯಲ್ಲಿರುವ ಒಂದು ಸಮಸ್ಯೆಯನ್ನು ಇದು ಸೂಚಿಸುತ್ತದೆ,” ಎಂದು ಅಭಿಪ್ರಾಯಪಟ್ಟಿದೆ.

ರಾಜ್ಯವನ್ನು ಸತತವಾಗಿ ಕಾಡುತ್ತಿರುವ ಬರಗಾಲದಿಂದಾಗಿ ಒಟ್ಟು ಆಂತರಿಕ ಉತ್ಪನ್ನ ಬೆಳವಣಿಗೆ ದರ (ಶೇ.೧೫.೬೨) ಕಡಿಮೆಯಾಗಿರುವ ಸಾಧ್ಯತೆ ಇದೆ. ಕಳೆದ ದಶಕದಲ್ಲಿ ರಾಜ್ಯದ ಆಂತರಿಕ ಉತ್ಪನ್ನದ ಸಾಧನೆ ಉತ್ತಮವಾಗಿದೆಯಾದರೂ ಸಮಾಧಾನಕರವಾಗಿಲ್ಲ.

ವೇತನ ಆಯೋಗದ ಪರಿಣಾಮ: ೬ನೇ ವೇತನ ಆಯೋಗದ ವರದಿ ಪ್ರಕಾರ, ವೇತನ ಪರಿಷ್ಕರಣೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಒಟ್ಟು ರಾಜಸ್ವ ವೆಚ್ಚ ೧,೬೨,೬೩೭ ಕೋಟಿಯ ಶೇ.೩೬.೪೪ರಷ್ಟಾಗುತ್ತದೆ. ಅಲ್ಲದೆ, ಅದೇ ವರ್ಷದ ರಾಜಸ್ವ ಸ್ವೀಕೃತಿಯಾದ ೧,೬೨,೭೬೫ ಕೋಟಿಯ ಶೇ.೩೬.೬೪ರಷ್ಟಾಗುತ್ತದೆ ಎಂದು ಹಣಕಾಸು ಆಯೋಗ ವರದಿಯಲ್ಲಿ ಹೇಳಲಾಗಿದೆ.

ವೇತನ, ನಿವೃತ್ತಿ ವೇತನ ಮತ್ತು ಅನುದಾನಿತ ಸಂಸ್ಥೆಗಳ ವೇತನದ ಒಟ್ಟು ಮೊತ್ತ ೨೦೧೬-೧೭ರಲ್ಲಿ ೪೧,೧೦೪ ಕೋಟಿಯಷ್ಟಿತ್ತು. ಇದು ೨೦೧೭-೧೮ರಲ್ಲಿ ೪೪,೯೩೬ ಕೋಟಿ ರೂ.ಗೆ ಏರುವ(ಶೇ.೯.೩೨) ಸಾಧ್ಯತೆ ಇದೆ. ನಿವೃತ್ತಿ ವೇತನ ಮತ್ತು ಅನುದಾನಿತ ಸಂಸ್ಥೆಗಳ ವೇತನಗಳ ಒಟ್ಟು ಮೊತ್ತವು ೨೦೧೮-೧೯ರಲ್ಲಿ ೪೯,೧೨೮ ಕೋಟಿ ರೂ.ಗಳಾಗಬಹುದು ಎಂದು ಅಂದಾಜಿಸಿದೆ. ವೇತನ ಪರಿಷ್ಕರಣೆಯಿಂದ ಅನುದಾನಿತ ಸಂಸ್ಥೆಗಳ ವೇತನದ ಮೊತ್ತವನ್ನೂ ಸೇರಿಸಿಕೊಂಡಲ್ಲಿ ಹೆಚ್ಚುವರಿಯಾಗಿ ೧೦,೫೦೮ ಕೋಟಿ ರೂ.ಗಳಾಗಬಹುದು. ಹೆಚ್ಚುವರಿ ಮೊತ್ತವನ್ನೂ ಸೇರಿಸಿದರೆ ೨೦೧೮-೧೯ರಲ್ಲಿನ ಒಟ್ಟು ವೇತನ, ನಿವೃತ್ತಿ ವೇತನ ಮತ್ತು ಅನುದಾನಿತ ಸಂಸ್ಥೆಗಳ ವೇತನದ ಒಟ್ಟು ಮೊತ್ತ ೫೯,೬೩೬ ಕೋಟಿಯಷ್ಟಾಗುತ್ತದೆ ಎಂದು ಆಯೋಗ ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ : ಸಂಕಲನ | ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ರಾಜ್ಯ ಬಜೆಟ್‌ನ ವಿಶ್ಲೇಷಣೆಗಳು

೨೦೧೧-೧೨ರಲ್ಲಿ ಸರ್ಕಾರದ ವೇತನ ಸಮಿತಿಯ ಶಿಫಾರಸುಗಳ ಅನುಷ್ಠಾನಕ್ಕೆ ಪೂರ್ವದಲ್ಲಿದ್ದ ವೇತನ ವೆಚ್ಚದ ಒಟ್ಟು ಮೊತ್ತ ೧೨,೮೨೮.೯೬ ಕೋಟಿಯಷ್ಟಿತ್ತು. ಸಮಿತಿಯ ಶಿಫಾರಸ್ಸಿನ ಅನುಷ್ಠಾನದ ನಂತರ ಅಂದರೆ ೨೦೧೨-೧೩ರಲ್ಲಿ ವೇತನದ ಮೊತ್ತ ೧೬,೦೮೪.೦೭ ಕೋಟಿ ರೂ.ಗಳಾಗಿದೆ. ವೇತನ ಮೊತ್ತದಲ್ಲಿ ಒಟ್ಟು ನಿವ್ವಳ ರೂಪದಲ್ಲಿ ೩,೨೫೫.೧೧ ಕೋಟಿ (ಶೇ.೨೫.೩೭) ರು.ಗಳಾಗಿದೆ.

ಮಾರ್ಚ್‌ ೨೦೧೭ರಲ್ಲಿ ೭,೭೩,೪೫೪ ಹುದ್ದೆಗಳು ಮಂಜೂರಾಗಿದ್ದರೆ, ೫,೨೦,೮೨೯ ಮಂದಿ ನೇಮಕವಾಗಿದ್ದರು. ಇಲ್ಲಿ ಖಾಲಿ ಹುದ್ದೆಗಳ ಪ್ರಮಾಣ ಶೇ.೩೩ರಷ್ಟಿತ್ತು. ಖಾಲಿ ಹುದ್ದೆಗಳನ್ನು ಭರ್ತಿ ಮಾಡದಿದ್ದರೆ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ ಕಾರ್ಯಕ್ರಮಗಳ ಅನುಷ್ಠಾನದ ಮೇಲೆ ದುಷ್ಪರಿಣಾಮ ಬೀರಲಿದೆ. ಹ ಈಗಾಗಿ ಸರ್ಕಾರವು ತನ್ನ ಪ್ರತಿ ಇಲಾಖೆಯಲ್ಲಿರುವ ನೌಕರರ ಸಂಖ್ಯೆಯನ್ನು ಪ್ರಸ್ತುತ ಕಾರ್ಯಗಳಿಗೆ ಮತ್ತು ಇತ್ತೀಚಿನ ತಂತ್ರಜ್ಞಾನ ಹಾಗೂ ಅದರ ಪ್ರಕ್ರಿಯೆಗಳನ್ನು ಗುರುತಿಸಿ ಪುನಾರಚನೆ ಮಾಡಬೇಕು ಎಂದು ಆಯೋಗ ಶಿಫಾರಸ್ಸು ಮಾಡಿದೆ.

ಕೃಷ್ಣ ಮೇಲ್ದಂಡೆ ಯೋಜನೆಯ ೩ನೇ ಹಂತದಲ್ಲಿ ಮುಳುಗಡೆಯಾಗುವ ಭೂಮಿಯ ಮಾಲೀಕರಿಗೆ ಕೊಡಬೇಕಾದ ಪರಿಹಾರವು ಕೇಂದ್ರ ಹಾಗೂ ರಾಜ್ಯದ ಕಾನೂನುಗಳ ಅನ್ವಯ ಗಮನಾರ್ಹವಾಗಿ ಅಧಿಕಗೊಂಡಿದೆ. ಇದು ರಾಜ್ಯದ ಹಣಕಾಸು ಸ್ಥಿತಿ ಮೇಲೆ ಪ್ರಮುಖವಾದ ಪರಿಣಾಮ ಬೀರುತ್ತದೆ ಎಂದು ಹೇಳಿದೆ.

ಕೇಂದ್ರದಿಂದ ಎರವಲು ಪಡೆದ ನಿಧಿಗಳನ್ನು ಆದಾಯ ತರುವ ಸ್ವತ್ತುಗಳನ್ನು ಕಲ್ಪಿಸಲು ವಿನಿಯೋಗಿಸದೆ, ಚಾಲ್ತಿ ವೆಚ್ಚಕ್ಕೆ ಬಳಸಿಕೊಂಡರೆ ಆಗ ರಾಜ್ಯವು ಹಣಕಾಸಿನ ಒತ್ತಡದ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಆಯೋಗ ಎಚ್ಚರಿಸಿದೆ. “ಸಾಮಾಜಿಕ ಸೇವೆ ವೆಚ್ಚದಲ್ಲಿ ಕಡಿತ ಮಾಡಬೇಕೆಂದು ಬಯಸಿದ್ದೇ ಆದಲ್ಲಿ ಅದು ಸಾಮಾಜಿಕ ನ್ಯಾಯದ ಉದ್ದೇಶವನ್ನು ಬಲಿ ಕೊಡಬೇಕಾಗುತ್ತದೆ. ಹೀಗಾಗಿ, ಸಾಮಾಜಿಕ ಮತ್ತು ಆರ್ಥಿಕ ಸೇವೆಗಳ ವೆಚ್ಚಗಳ ನಡುವೆ ಸಮತೋಲನ ಸಾಧಿಸಲೇಬೇಕು. ಆದರೆ ಈ ಎರಡೂ ವೆಚ್ಚಗಳಲ್ಲಿ ಸಮತೋಲನ ಸಾಧಿಸುವುದು ಅಷ್ಟೊಂದು ಸುಲಭವಲ್ಲ,” ಎಂದೂ ಹೇಳಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More