ಕನ್ನಡ ಸಾಹಿತ್ಯ ಪರಿಷತ್ತಿನ ಕೆಲಸ ಕನ್ನಡ ಕಟ್ಟುವುದೋ ಅಥವಾ ಕಟ್ಟಡ ಕಟ್ಟುವುದೋ?

ರಾಜ್ಯಾದ್ಯಂತ ಗ್ರಾಮೀಣ ಹಾಗೂ ತಾಲೂಕು ಮಟ್ಟದಲ್ಲಿ ಪ್ರಮುಖ ಸಾಹಿತಿ, ಕಲಾವಿದರು, ಐತಿಹಾಸಿಕ ವ್ಯಕ್ತಿಗಳ ನೆನಪಿಗಾಗಿ ಕನ್ನಡ ಸ್ಮಾರಕ ಭವನ ನಿರ್ಮಿಸಲು ಕಸಾಪ ಮುಂದಾಗಿದೆ. ಇದು ಚರ್ಚೆಗೆ ಗ್ರಾಸವಾಗಿದ್ದು, ಕನ್ನಡದ ಬದಲು ಕೇವಲ ಕಟ್ಟಡ ಕಟ್ಟುವ ಕೆಲಸ ಆಗುತ್ತಿದೆ ಎಂಬ ಆರೋಪ ಕೇಳಿಬಂದಿದೆ

ಕನ್ನಡ ಸಾಹಿತ್ಯ ಪರಿಷತ್ ಮತ್ತೊಮ್ಮೆ ಸುದ್ದಿಯಲ್ಲಿದೆ. ರಾಜ್ಯಾದ್ಯಂತ ಗ್ರಾಮೀಣ ಹಾಗೂ ತಾಲೂಕು ಮಟ್ಟದಲ್ಲಿ ಪ್ರಮುಖ ಸಾಹಿತಿಗಳ, ಕಲಾವಿದರ ಹಾಗೂ ಕರ್ನಾಟಕ ಚರಿತ್ರೆಯೊಳಗೆ ಪ್ರಮುಖ ಪಾತ್ರ ವಹಿಸಿದವರ ನೆನಪಿಗಾಗಿ ಕನ್ನಡ ಸ್ಮಾರಕ ಭವನ ನಿರ್ಮಿಸಲು ಕನ್ನಡ ಸಾಹಿತ್ಯ ಪರಿಷತ್ ಮುಂದಾಗಿದೆ. ಈಗಾಗಲೇ ಸರ್ಕಾರದ ಮುಂದೆ ೧೫ ಪ್ರಸ್ತಾವನೆಗಳನ್ನು ಕಸಾಪ ಸಲ್ಲಿಸಿದ್ದು, ಈ ಪೈಕಿ ಎರಡು ಪ್ರಸ್ತಾವನೆಗಳಿಗೆ ಹಿಂದಿನ ಸರ್ಕಾರ ತಲಾ ೨೦ ಲಕ್ಷ ರು. ಅನುದಾನ ಬಿಡುಗಡೆ ಮಾಡಿದೆ. ಕಸಾಪದ ಈ ನಡೆ ಚರ್ಚೆಗೆ ಗ್ರಾಸವಾಗಿದ್ದು, ಕನ್ನಡ ಕಟ್ಟುವ ಕೆಲಸವಾಗದೆ ಕೇವಲ ಕಟ್ಟಡ ಕಟ್ಟುವ ಕೆಲಸ ಕಸಾಪದಿಂದ ಆಗುತ್ತಿದೆ ಎನ್ನುವ ಆರೋಪಗಳು ಹೆಚ್ಚು ಕೇಳಿಬರುತ್ತಿವೆ.

ಕನ್ನಡ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯವನ್ನು ಪಸರಿಸುವ ಹಾಗೂ ಬೆಳೆಸುವ ಮಹತ್ತರ ಉದ್ದೇಶವನ್ನು ಕಸಾಪ ಹೊಂದಿದೆ. ಅದಕ್ಕೆ ಅನುಗುಣವಾಗಿ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿ ಕುರಿತ ಒಂದಿಷ್ಟು ಒಳ್ಳೆಯ ಕೆಲಸಗಳು ಪ್ರಾರಂಭದಲ್ಲಿ ನಡೆದಿವೆ. ಆದರೆ, ಇತ್ತೀಚಿನ ದಶಕದ ಬೆಳವಣಿಗೆ ಗಮನಿಸಿದರೆ, ಕಸಾಪ ಕೇವಲ ಸಾಹಿತ್ಯ ಜಾತ್ರೆ, ಪುಸ್ತಕ ಪ್ರಕಟಣೆ, ದತ್ತಿ ಕಾರ್ಯಕ್ರಮ, ಹೊರನಾಡು ಕನ್ನಡಿಗರ ಸಮಾವೇಶ ಹಾಗೂ ಸ್ಥಾವರಗಳ ನಿರ್ಮಾಣಕ್ಕೆ ತನ್ನನ್ನು ತಾನು ಸೀಮಿತಗೊಳಿಸಿಕೊಂಡಿದೆಯೇ ಎನ್ನುವ ಅನುಮಾನ ಮೂಡುತ್ತಿದೆ. ನೂರು ವರ್ಷಗಳ ಇತಿಹಾಸ ಹೊಂದಿರುವ ಕಸಾಪ, ಕನ್ನಡದ ವರ್ತಮಾನದ ಬಿಕ್ಕಟ್ಟುಗಳಿಗೆ ತನ್ನನ್ನು ತೆರೆದುಕೊಳ್ಳದೆ ಇರುವುದು ಈ ಅನುಮಾನಕ್ಕೆ ಕಾರಣ ಎನ್ನಲಾಗುತ್ತಿದೆ.

ರಾಜ್ಯಾದ್ಯಂತ ಕನ್ನಡ ಸ್ಮಾರಕ ಭವನ ನಿರ್ಮಾಣದ ಕುರಿತು ಹಿಂದಿನ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಸಚಿವರಾಗಿದ್ದ ಎಚ್ ಕೆ ಪಾಟೀಲ್ ಅವರ ಬಳಿ ಕಸಾಪ ಅಧ್ಯಕ್ಷ ಮನು ಬಳಿಗಾರ್ ಪ್ರಸ್ತಾವನೆ ಇಟ್ಟು, ಅದಕ್ಕೆ ತಾತ್ವಿಕ ಒಪ್ಪಿಗೆ ಕೂಡ ಪಡೆದುಕೊಂಡಿದ್ದರು. ಅದರಂತೆ, ಕಸಾಪದ ಎಲ್ಲ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಅವರವರ ಜಿಲ್ಲೆಯ ಪ್ರಸಿದ್ಧ ಸಾಹಿತಿಗಳು, ಕಲಾವಿದರು, ಸಂಶೋಧಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರರು ನೆಲೆಸಿದ್ದ ಅಥವಾ ಹುಟ್ಟಿದ ಗ್ರಾಮಗಳಲ್ಲಿ ಕನ್ನಡ ಸ್ಮಾರಕ ಭವನ ನಿರ್ಮಾಣದ ಪ್ರಸ್ತಾವನೆ ಕಳಿಸುವಂತೆ ಬಳಿಗಾರ್ ಕೋರಿದ್ದರು.

ಕನ್ನಡ ಸ್ಮಾರಕ ಭವನ ನಿರ್ಮಾಣದ ಕುರಿತು ಹೆಚ್ಚಿನ ಮಾಹಿತಿಗಾಗಿ ‘ದಿ ಸ್ಟೇಟ್’ ಕಸಾಪ ಗೌರವ ಕಾರ್ಯದರ್ಶಿ ವ ಚ ಚನ್ನೇಗೌಡ ಅವರನ್ನು ಸಂಪರ್ಕಿಸಿದಾಗ, “ಗ್ರಾಮೀಣ ಮಟ್ಟದಲ್ಲಿ ಕನ್ನಡ ಸ್ಮಾರಕ ಭವನಗಳನ್ನು ನಿರ್ಮಿಸಲು ಕಸಾಪ ಮುಂದಾಗಿರುವುದು ನಿಜ. ಅವುಗಳ ನಿರ್ಮಾಣಕ್ಕೆ ಕಸಾಪ ಹಣ ಕೊಡುವುದಿಲ್ಲ. ಹಿಂದಿನ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಚಿವರಾಗಿದ್ದ ಎಚ್ ಕೆ ಪಾಟೀಲ್ ಅವರು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಕಟ್ಟಡ ಕಟ್ಟಿಸಿಕೊಡುವುದಾಗಿ ಭರವಸೆ ನೀಡಿದ್ದರು. ಹೀಗಾಗಿ, ೧೫ ಪ್ರಸ್ತಾವನೆಗಳನ್ನು ಹಿಂದಿನ ಸರ್ಕಾರದಲ್ಲೇ ಸಲ್ಲಿಸಲಾಗಿದೆ. ಆ ಪೈಕಿ, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಷ್ಕೃತ ಚಂದ್ರಶೇಖರ್ ಕಂಬಾರರ ಹೆಸರಿನಲ್ಲಿ ಕನ್ನಡ ಸ್ಮಾರಕ ಭವನ ನಿರ್ಮಾಣಕ್ಕೆ ಹಾಗೂ ಶಿವಮೊಗ್ಗ ಜಿಲ್ಲೆಯ ಉಡುತಡಿ ಗ್ರಾಮದಲ್ಲಿ ಅಕ್ಕಮಹಾದೇವಿ ನೆನಪಿನ ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ತಲಾ ೨೦ ಲಕ್ಷ ರು. ಅನುದಾನವನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ನೀಡಿದೆ,” ಎಂದು ತಿಳಿಸಿದರು.

ಮುಂದುವರಿದು, “ಸಾಹಿತಿಗಳು, ಕಲಾವಿದರು ಹಾಗೂ ಸ್ವಾತಂತ್ರ್ಯ ಹೋರಾಟಗಾರರು ಹುಟ್ಟಿದ ಅಥವಾ ನೆಲೆಸಿದ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ಆಗಲಿ ಅಥವಾ ಆ ಗ್ರಾಮದ ನಾಗರಿಕರಾಗಲೀ, ಜಾಗವನ್ನು ಗುರುತು ಮಾಡಿ ಅದನ್ನು ಕಸಾಪ ಅಧ್ಯಕ್ಷರ ಹೆಸರಿನಲ್ಲಿ ನೋಂದಣಿ ಮಾಡಿದಲ್ಲಿ ಅಂಥ ಪ್ರಸ್ತಾವಣೆಗಳನ್ನು ಸರ್ಕಾರದ ಮುಂದೆ ಕಸಾಪ ಸಲ್ಲಿಸಲಿದೆ. ಅನುಮೋದನೆಗೆ ಒಳಪಟ್ಟ ಕನ್ನಡ ಸ್ಮಾರಕ ಭವನಗಳ ನಿರ್ಮಾಣದ ಹೊಣೆಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ನೋಡಿಕೊಳ್ಳಲಿದೆ. ನಂತರ ಅವುಗಳ ನಿರ್ವಹಣೆಯನ್ನು ಕಸಾಪ ನೋಡಿಕೊಳ್ಳಲಿದ್ದು, ಅದಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆಯೇ ಹಣ ಕೊಡಲಿದೆ,” ಎಂದು ವಿವರಿಸಿದರು.

ಕಸಾಪ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದರೂ ಅದು ಸರ್ಕಾರದ ಕೃಪಕಟಾಕ್ಷದಲ್ಲಿ ಮುನ್ನಡೆಯುತ್ತಿರುವ ಶ್ರೀಮಂತ ಸಂಸ್ಥೆ. ಕನ್ನಡವನ್ನು ಪಸರಿಸುವ ಹಾಗೂ ಬೆಳೆಸುವ ಉದ್ದೇಕ್ಕೆ ಹೆಚ್ಚು ಒತ್ತು ನೀಡದೆ ಕಟ್ಟಡ ಕಟ್ಟುವ ಕೆಲಸಕ್ಕೆ ಹೆಚ್ಚು ಉತ್ಸಾಹ ತೋರಿರುವ ಹಿನ್ನೆಲೆಯಲ್ಲಿ ಪ್ರಜ್ಞಾವಂತ ವಲಯವನ್ನು ಮಾತನಾಡಿಸಿದಾಗ ಕಸಾಪ ನಡೆಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗಿದೆ.

ಈ ಕುರಿತು ಮಾತನಾಡಿದ ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ ವೀರಣ್ಣ, “ಸಾಂಸ್ಕೃತಿಕ ದೃಷ್ಟಿಯಿಂದ ಇಂಥ ಐಡಿಯಾಗಳು ಮೇಲ್ನೋಟಕ್ಕೆ ಚೆನ್ನಾಗಿ ಕಾಣುತ್ತವೆ. ಆದರೆ, ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಕಡೆ ಸರ್ಕಾರ ಹಾಗೂ ಸಂಘ-ಸಂಸ್ಥೆಗಳು ಸಮುದಾಯ ಭವನಗಳನ್ನು ಕಟ್ಟಿವೆ. ಆದರೆ, ಇಂಥ ಬಹುತೇಕ ಭವನಗಳು ಅಕ್ರಮ ಚಟುವಟಿಕೆಗಳ ತಾಣಗಳಾಗಿದ್ದೇ ಹೆಚ್ಚು. ವಾಸ್ತವ ಹೀಗಿರುವಾಗ, ನಮ್ಮಲ್ಲಿ ಭವನಗಳನ್ನು ಕಟ್ಟಲು ಇರುವ ಆಸಕ್ತಿ ಅದನ್ನು ಮುಂದುವರಿಸಲು ಇರುವುದಿಲ್ಲ,” ಎಂದರು.

ಮುಂದುವರಿದು ಮಾತನಾಡಿದ ಅವರು, “ಸಾರ್ವಜನಿಕ ಆಸ್ತಿಯಲ್ಲಿ ಇಂಥ ಭವನಗಳನ್ನು ಕಟ್ಟಬೇಕೆಂಬ ಆಸಕ್ತಿ ಜನರಲ್ಲಿ ಕಡಿಮೆ. ಹೀಗಾಗಿ, ಜನರು ಆಸಕ್ತಿ ವಹಿಸದ ಇಂಥ ಭವನಗಳು ಹೇಗೆ ಚಾಲ್ತಿಯಲ್ಲಿರುತ್ತವೆ ಎಂಬುದರ ಬಗ್ಗೆ ನನಗೆ ಅನುಮಾನ ಇದೆ. ಇಂಥ ಭವನಗಳ ಪೈಕಿ ೧೦೦ರಲ್ಲಿ ೨೫ ಭವನಗಳು ಯಶಸ್ವಿಯಾದರೂ ತುಂಬಾ ಸಂತೋಷ. ಒಂದು ವೇಳೆ, ಸರ್ಕಾರವೇ ಇದನ್ನು ನಿಭಾಯಿಸಲು ಹಣ ಕೊಡುತ್ತದೆ ಎಂದಾದರೆ ಅದು ಇನ್ನೂ ಹದಗೆಡುತ್ತದೆ. ಅನೇಕ ಕಾರ್ಯಕ್ರಮಗಳ ಹೆಸರು ಹೇಳಿ ಹಣ ಪಡೆದುಕೊಳ್ಳುವ ಹಾದಿಯೂ ಸುಗಮವಾಗುತ್ತದೆ. ಮುಂದೆ ಸರ್ಕಾರದ ಹಣದ ಖರ್ಚನ್ನು ಹಾಳೆಗಳ ಮೇಲೆ ತೋರಿಸುವುದನ್ನು ಎಲ್ಲರೂ ಬಲ್ಲರು. ಹಾಗಾಗಿ ಇಂಥ ಭವನಗಳಿಂದ ಕನ್ನಡದ ಕೆಲಸಗಳು ಆಗುವುದು ಕಷ್ಟ,” ಎಂದರು.

“ಸ್ಮಾರಕ ಭವನಗಳು ಜನರ ಅರಿವಿನಿಂದ ಹುಟ್ಟಿಕೊಂಡಲ್ಲಿ ಅವುಗಳಿಗೆ ಒಂದು ಅರ್ಥವಿದೆ. ನಮ್ಮ ಸುತ್ತಲಿನ ವಾತಾವರಣ ಹದಗೆಟ್ಟಿರುವಾಗ ಇಂಥ ಭವನಗಳನ್ನು ಹೇಗೆ ಮುನ್ನಡೆಸಬೇಕೆಂಬ ವಿಚಾರ ಆಡಳಿತ ನಡೆಸುವವರಿಗೂ ಸರಿಯಾಗಿ ಗೊತ್ತಿರುವುದಿಲ್ಲ. ಅಂಥವರನ್ನೇ ಓಲೈಸುವ ಪ್ರಜಾವರ್ಗಕ್ಕೂ ಆ ಯೋಚನೆ ಇಲ್ಲವಾಗಿದೆ. ಹೀಗಿರುವಾಗ, ಈ ಕೆಲಸಗಳು ಕೇವಲ ಸಾಂಕೇತಿಕವಾಗಿ ದೊಡ್ಡದಾಗಿ ಕಾಣುತ್ತವೆಯೇ ಹೊರತು ಪ್ರಾಯೋಗಿಕವಾಗಿ ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತದೆ ಎಂಬುದು ಹೇಳುವುದು ಕಷ್ಟ,” ಎಂದು ವಿವರಿಸಿದರು.

ಭಾಷಾ ಪ್ರಾಧ್ಯಾಪಕ ಮೇಟಿ ಮಲ್ಲಿಕಾರ್ಜುನ ಅವರು ಸಿ ವೀರಣ್ಣ ಅವರ ಮಾತುಗಳನ್ನು ವಿಸ್ತರಿಸುತ್ತ, “ಚರಿತ್ರೆ ಹೊಂದಿರುವ ವ್ಯಕ್ತಿಯ ಹೆಸರಿನಲ್ಲಿ ಭವನಗಳನ್ನು ಕಟ್ಟುವ ಮೂಲಕ ಕನ್ನಡ ಸಾಹಿತ್ಯ, ಸಂಸ್ಕೃತಿ ಅಥವಾ ಕನ್ನಡ ಸಮುದಾಯಗಳನ್ನು ಬೆಳೆಸುತ್ತೇವೆ, ಜೊತೆಗೆ ಜನರಲ್ಲಿ ದೊಡ್ಡ ವೈಚಾರಿಕತೆ ಮೂಡಿಸುತ್ತೇವೆ ಎಂಬುದನ್ನು ಒಪ್ಪಲಾಗದು. ಕರ್ನಾಟಕ ಏಕೀಕರಣದ ಸಂದರ್ಭದ ಪರಿಸ್ಥಿತಿ ಈಗಿಲ್ಲ. ಇಂದಿನ ಬಿಕ್ಕಟ್ಟುಗಳು ಬೇರೆ ರೀತಿಯಲ್ಲಿದ್ದು, ನಾವು ಇಂದು ರೂಪಿಸಿಬೇಕಿರುವ ಕನ್ನಡ ಕೇಂದ್ರಿತ ವಿಚಾರಗಳು ಬೇರೆ ಸ್ವರೂಪದಲ್ಲಿವೆ. ಅವುಗಳನ್ನು ಕಂಡುಕೊಳ್ಳುತ್ತ ಸಾಹಿತಿ, ಕಲಾವಿದರನ್ನು ಜೀವಂತವಾಗಿಡಬೇಕೇ ಹೊರತು ಸ್ಮಾರಕ ಭವನ ಕಟ್ಟುವ ಮೂಲಕ ಅಲ್ಲ,” ಎಂದರು.

ಮುಂದುವರಿದು, “ಆಯ್ದ ಜನ, ಚಿಂತಕರು, ಸಾಹಿತಿಗಳು ಇಂಥ ಸ್ಮಾರಕ ಭವನ ನಿರ್ಮಾಣದ ಹಿಂದೆ ಇರುವುದನ್ನು ಅಲ್ಲಗಳೆಯಲಾಗದು. ಅವರಿಗೋಸ್ಕರ ಸ್ಥಾವರಗಳನ್ನು ನಿರ್ಮಾಣ ಮಾಡುವುದನ್ನು ವೈಯಕ್ತಿಕವಾಗಿ ಒಪ್ಪಲಾರೆ. ಕನ್ನಡ ಬೆಳೆಸುವುದು, ಉಳಿಸುವುದು ಸಾಂಸ್ಕೃತಿಕ ಹೆಜ್ಜೆಯಾಗಬೇಕಿದೆ. ಹಾಗಂತ ಅದನ್ನು ಸಾಂಸ್ಥಿಕ ರೂಪಕ್ಕೆ ತರುವುದಲ್ಲ. ಗಟ್ಟಿಯಾದ ಆಶಯಗಳನ್ನು ಹೊಂದಿರದ ಇಂಥ ಸ್ಮಾರಕ ಭವನಗಳು ನಿರ್ಮಾಣವಾದರೆ ಅವು ದಿರ್ಘಕಾಲ ಬಾಳಿಕೆ ಬರಲಾರವು. ಒಂದು ವೇಳೆ, ಅವು ಜನ ಸಮೂಹ ವಿವೇಕವಾಗಿದ್ದರೆ ಮಾತ್ರ ದೀರ್ಘಕಾಲ ಬಾಳುತ್ತವೆ,” ಎಂದು ತಿಳಿಸಿದರು.

“ಒಂದು ಕಿಮೀ ವ್ಯಾಪ್ತಿಯಲ್ಲಿರುವ ಹಾಗೂ ದಾಖಲಾತಿ ಕಡಿಮೆ ಇರುವ ೨೫ ಸಾವಿರಕ್ಕಿಂತ ಹೆಚ್ಚು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳನ್ನು ಹತ್ತಿರದ ಶಾಲೆಗಳಿಗೆ ವಿಲೀನಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇಂಥ ಸಂದಿಗ್ಧ ವಿಚಾರಗಳಲ್ಲಿ ಕಸಾಪ ಗಟ್ಟಿ ನಿಲುವನ್ನು ತಾಳಬೇಕಿದೆ. ಕಸಾಪಕ್ಕೆ ಕನ್ನಡದ ಬಗ್ಗೆ ನಿಜವಾಗಲೂ ಕಾಳಜಿ ಇದ್ದರೆ, ಭವನ ನಿರ್ಮಿಸುವ ಬದಲು ಮುಚ್ಚುತ್ತಿರುವ ಒಂದಿಷ್ಟು ಶಾಲೆಗಳನ್ನು ಸರ್ಕಾರದ ಅನುದಾನದಲ್ಲಿ ಅದು ಬೆಳೆಸಲು ಅವಕಾಶವಿದೆ. ಅಲ್ಲದೆ, ಈಗ ಸಮುದಾಯಗಳ ಮಧ್ಯೆ ವೈಚಾರಿಕ ಕಂದರ ಏರ್ಪಟ್ಟಿದೆ. ಅದನ್ನು ಹೇಗೆ ಸರಿದೂಗಿಸಬಹುದು ಎಂಬುದರೆಡೆಗೆ ಕಸಾಪ ಮುಂದಾದರೆ ಅದು ಚರಿತ್ರಾರ್ಹವಾಗುತ್ತದೆ,” ಎನ್ನುತ್ತಾರೆ ಮೇಟಿ ಮಲ್ಲಿಕಾರ್ಜುನ.

ಕನ್ನಡಪರ ಕಾಳಜಿಯುಳ್ಳ ಪ ಮಲ್ಲೇಶ್ ಮಾತನಾಡಿ, “ಕನ್ನಡ ಸಾಹಿತ್ಯ ಪರಿಷತ್ ಸಾಹಿತಿ ಹಾಗೂ ಕಲಾವಿದರ ಹೆಸರಿನಲ್ಲಿ ಸ್ಮಾರಕ ಭವನ ಕಟ್ಟುವ ಮೂಲಕ ಅವರನ್ನು ಜೀವಂತವಾಗಿರಿಸಲು ಹೊರಟಿರುವುದು ಸರಿಯಲ್ಲ. ಕಟ್ಟಡದ ಮೂಲಕ ಆ ವ್ಯಕ್ತಿಗಳನ್ನು ಜೀವಂತವಾಗಿಡಲು ಸಾಧ್ಯವೂ ಇಲ್ಲ. ಇದರಾಚೆಗೆ ಕಸಾಪ ತನ್ನನ್ನು ತೊಡಗಿಸಿಕೊಂಡು ಕನ್ನಡದ ಕೆಲಸಗಳನ್ನು ಮಾಡಬೇಕಿದೆ,” ಎಂದು ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ, ಸಾಹಿತಿ ಚಂದ್ರಶೇಖರ ಪಾಟೀಲ ಅವರು ಮಾತ್ರ ಈ ವಿಚಾರವಾಗಿ ಭಿನ್ನ ನಿಲುವು ವ್ಯಕ್ತಡಿಸಿದ್ದನ್ನು ಕಾಣಬಹುದು. ಕಸಾಪದ ನಡೆಯನ್ನು ಸ್ವಾಗತಿಸಿದ ಚಂಪಾ, “ಕರ್ನಾಟಕದ ಸಾಹಿತಿಗಳನ್ನು, ಕಲಾವಿದರನ್ನು ಕರ್ನಾಟಕದ ಚರಿತ್ರೆಯೊಳಗೆ ಪ್ರಮುಖ ಪಾತ್ರ ವಹಿಸಿದ ಮಹಾನುಭಾವರ ಹೆಸರಿನಲ್ಲಿ ಅವರವರ ಊರಿನೊಳಗ ಕನ್ನಡ ಭವನ ನಿರ್ಮಾಣ ಮಾಡಬೇಕು ಎಂಬುದು ಒಳ್ಳೆಯ ವಿಚಾರ. ನನ್ನ ನಿರೀಕ್ಷೆ ಎಂದರೆ, ಅದು ಇಡೀ ಊರನ್ನು ಒಳಗೊಂಡು ಆ ಭಾಗದ ಎಲ್ಲ ಗ್ರಾಮಗಳಿಗೆ ಒಂದು ಸಾಂಸ್ಕೃತಿಕ ಕೇಂದ್ರ ಆಗಬೇಕು. ಅದರಲ್ಲಿ ಒಂದು ಒಳ್ಳೆ ಸಭಾಭವನ, ಗ್ರಂಥಾಲಯ ಹಾಗೂ ಸಾಧ್ಯವಾದರೆ ಒಂದು ರಂಗಮಂದಿರ ನಿರ್ಮಾಣವಾಗಬೇಕು. ಇಂಥ ಸ್ಮಾರಕ ಭವನ ನಿರ್ಮಾಣಕ್ಕೆ ಮುಂದಾಗಿರುವ ಕಸಾಪದ ನಡೆ ಒಳ್ಳೆಯದು,” ಎಂದು ಹೇಳಿದರು.

ಇದನ್ನೂ ಓದಿ : ಸಮ್ಮೇಳನ ಅಂದ್ರೆ ಭಜನೆ, ದಾಸರ ಪದ ಹಾಡೋದಲ್ಲ, ಸಾಹಿತ್ಯದ ಪರಿಧಿ ವಿಸ್ತರಿಸಬೇಕು

“ಕಸಾಪ ಸರ್ಕಾರದ ಅನುದಾನ ಪಡೆಯುತ್ತಿರುವ ಸಾರ್ವಜನಿಕ ಸಂಸ್ಥೆ ಆಗಿರುವುದರಿಂದ ಗ್ರಾಮ ಪಂಚಾಯಿತಿ ಆಗಲೀ ಇಲ್ಲವೇ ಅಲ್ಲಿಯ ಜನರಾಗಲೀ, ಸಾಹಿತಿ ಅಥವಾ ಕಲಾವಿದನ ಹೆಸರಿನಲ್ಲಿ ಸ್ಮಾರಕ ಭವನ ನಿರ್ಮಾಣಕ್ಕೆ ಜಾಗವನ್ನು ಕೊಟ್ಟು ಕಸಾಪ ಅಧ್ಯಕ್ಷರ ಹೆಸರಿನಲ್ಲಿ ನೋಂದಣಿ ಮಾಡಿಸುವುದರಲ್ಲಿ ತಪ್ಪಿಲ್ಲ. ನಾಡಿಗಾಗಿ ದುಡಿದವರ ಹೆಸರಿನಲ್ಲಿ ಭವನ ಕಟ್ಟುವುದು ಪರಂಪರೆಯಿಂದಲೇ ನಡೆದುಬಂದಿದೆ. ಆ ದೃಷ್ಟಿಯಿಂದ ಒಬ್ಬ ಸಾಹಿತಿ ಅಥವಾ ಕಲಾವಿದ ನಾಡಿಗೆ ಹೆಸರು ತಂದಿದ್ದರೆ ಅವರ ನೆನಪಿಗಾಗಿ ಭವನ ಕಟ್ಟುವುದರಲ್ಲಿ ತಪ್ಪಿಲ್ಲ. ಅದನ್ನು ಚರ್ಚೆಮಾಡುವ ಅಗತ್ಯವೂ ಇಲ್ಲ,” ಎಂದರು ಚಂಪಾ.

ಆದರೆ, ವಾಸ್ತವಗಳು ಬೇರೆಯೇ ಇವೆ. ಹಿಂದಿಗಿಂತಲೂ ಹೆಚ್ಚು ಸಂಕೀರ್ಣ ಸವಾಲುಗಳನ್ನು ಇಂದು ಕನ್ನಡ ಭಾಷೆ ಎದುರಿಸುತ್ತಿದೆ. ಒಂದೆಡೆ, ಕನ್ನಡ ಭಾಷೆ ಬೇರೆ ಯಾವುದೇ ಪ್ರಾಂತೀಯ ಭಾಷೆಗಳಂತೆ ಆರ್ಥಿಕ ಪ್ರಾಬಲ್ಯ ಗಳಿಸಿಕೊಳ್ಳುವ ದಿಕ್ಕಿನಲ್ಲಿ ಹಿನ್ನೆಡೆ ಕಾಣುತ್ತಿದೆ; ಮತ್ತೊಂದೆಡೆ, ಇದರ ಪ್ರತಿಫಲನವೆನ್ನುವಂತೆ ಕನ್ನಡ ಶಾಲೆಗಳ ಸಂಖ್ಯೆಯೇ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕನ್ನಡವನ್ನು ಬಲಪಡಿಸುವ ಗುರುತರ ಜವಾಬ್ದಾರಿ ಕನ್ನಡ ಸಾಹಿತ್ಯ ಪರಿಷತ್‌ ಮೇಲೂ ಇದೆ. ಆದರೆ, ಕಸಾಪ ವಾಸ್ತವದ ಕನ್ನಡದ ಸವಾಲುಗಳಿಗೆ ಮುಖಾಮುಖಿಯಾಗದೆ ‘ಸ್ಥಾವರ ಕಟ್ಟುವ’ ಕಾಯಕವನ್ನೇ ಕನ್ನಡದ ಕೆಲಸವೆಂದು ಬಗೆದಂತೆ ವರ್ತಿಸುತ್ತಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More