ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ 5 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು

ವಿಂಬಲ್ಡನ್‌ನಲ್ಲಿಂದು ನಡಾಲ್-ಜೊಕೊವಿಚ್ ಹಣಾಹಣಿ

ವಿಶ್ವ ಟೆನಿಸ್ ಪ್ರಿಯರು ಕೌತುಕದಿಂದ ಎದುರು ನೋಡುತ್ತಿರುವ ಮತ್ತೊಂದು ಮಹಾನ್ ಹಣಾಹಣಿಗೆ ವಿಂಬಲ್ಡನ್ ಸಜ್ಜಾಗಿದೆ. ವಿಶ್ವದ ನಂ ೧ ಆಟಗಾರ ರಾಫೆಲ್ ನಡಾಲ್ ಮತ್ತು ಹನ್ನೆರಡನೇ ಶ್ರೇಯಾಂಕಿತ ನೊವಾಕ್ ಜೊಕೊವಿಚ್ ನಡುವೆ ಇಂದು ವಿಂಬಲ್ಡನ್ ಸೆಮಿಫೈನಲ್ ನಡೆಯಲಿದೆ. ರೋಜರ್ ಫೆಡರರ್ ನಿರ್ಗಮನದ ನಂತರದಲ್ಲಿ ನಡಾಲ್ ಮತ್ತೊಂದು ವಿಂಬಲ್ಡನ್ ಗೆಲ್ಲುವ ಅವಕಾಶಗಳು ಹೆಚ್ಚಿದ್ದು, ಅವರಿಗೆ ಜೊಕೊವಿಚ್ ಪ್ರಬಲ ಸವಾಲಾಗಿ ಪರಿಣಮಿಸಿದ್ದಾರೆ. ಇನ್ನು, ಪುರುಷರ ಸಿಂಗಲ್ಸ್ ವಿಭಾಗದ ಗ್ರಾಂಡ್‌ಸ್ಲಾಮ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿರುವ ಅಮೆರಿಕದ ಜಾನ್ ಇಸ್ನೆರ್ ಮತ್ತು ದಕ್ಷಿಣ ಆಫ್ರಿಕಾದ ಕೆವಿನ್ ಆಂಡರ್ಸನ್ ಮುಖಾಮುಖಿಯಾಗಲಿದ್ದಾರೆ. ಫೆಡರರ್‌ಗೆ ಆಘಾತ ನೀಡಿದ ಆಂಡರ್ಸನ್ ಈಗಾಗಲೇ ಎಲ್ಲರ ಗಮನ ಸೆಳೆದಿದ್ದಾರೆ. ನಡಾಲ್-ಜೊಕೊ ಪಂದ್ಯ ರಾತ್ರಿ ೭.೩೦ರಿಂದ ಶುರುವಾಗಲಿದ್ದರೆ, ಆಂಡರ್ಸನ್ ಮತ್ತು ಇಸ್ನೆರ್ ಪಂದ್ಯ ಸಂಜೆ ೫.೩ರಿಂದ ಆರಂಭವಾಗುವ ನಿರೀಕ್ಷೆ ಇದೆ. ಸ್ಟಾರ್ ನೆಟ್ವರ್ಕ್‌ನಲ್ಲಿ ಪಂದ್ಯದ ನೇರಪ್ರಸಾರವಿದೆ.

ರಾಮೋಜಿ ರಾವ್ ಭೇಟಿ ಮಾಡಲಿರುವ ಅಮಿತ್ ಶಾ

ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಶುಕ್ರವಾರ ಹೈದರಾಬಾದ್‌ಗೆ ಭೇಟಿ ನೀಡಲಿದ್ದಾರೆ. ಪಕ್ಷದ ಮುಖಂಡರ ಜೊತೆ ಚರ್ಚಿಸಲಿರುವ ಅವರು, ಅನಂತರ ಪತ್ರಿಕೋದ್ಯಮಿ ರಾಮೋಜಿ ರಾವ್ ಅವರನ್ನು ಭೇಟಿ ಮಾಡಲಿದ್ದಾರೆ. ಹಿಂದಿನ ವೇಳಾಪಟ್ಟಿಯಂತೆ ಅಮಿತ್ ಶಾ ಅವರು ಶುಕ್ರವಾರದಿಂದ ಎರಡು ದಿನ ತವರು ರಾಜ್ಯವಾದ ಗುಜರಾತ್‌ಗೆ ಭೇಟಿ ನೀಡಬೇಕಿತ್ತು.

ನವಾಜ್ ಷರೀಫ್ ಬಂಧನ ಸಾಧ್ಯತೆ

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಇಂದು ಬಂಧಿಸುವ ಸಾಧ್ಯತೆ ಹೆಚ್ಚಿದೆ. ಭ್ರಷ್ಟಾಚಾರ ಹಗರಣವೊಂದರಲ್ಲಿ ಹತ್ತು ವರ್ಷ ಶಿಕ್ಷೆಗೆ ಗುರಿಯಾಗಿರುವ ನವಾಜ್ ಷರೀಫ್ ಶುಕ್ರವಾರ ಲಾಹೋರ್‌ಗೆ ಆಗಮಿಸುತ್ತಿದ್ದಾರೆ. ಲಾಹೋರಿಗೆ ಕಾಲಿಡುತ್ತಿದ್ದಂತೆ ಬಂಧಿಸಿ ಜೈಲಿಗೆ ಕರೆದೊಯ್ಯಲು ಹೆಲಿಕ್ಯಾಪ್ಟರ್ ಸಿದ್ಧಪಡಿಸಲಾಗಿದೆ. ಷರೀಫ್ ಮಗಳಾದ ಮರ್ಯಾಮ್ ಕೂಡ ಈ ಪ್ರಕರಣದಲ್ಲಿ ಏಳು ವರ್ಷ ಶಿಕ್ಷೆಗೆ ಗುರಿಯಾಗಿದ್ದು, ತಂದೆಯ ಜೊತೆ ಅವರ ಬಂಧನವಾಗುವ ಸಾಧ್ಯತೆಯೂ ಇದೆ.

ಬಾಬರಿ ಮಸೀದಿ ಭೂವಿವಾದ ಪ್ರಕರಣ ವಿಚಾರಣೆ ನಡೆಸಲಿದೆ ಸುಪ್ರೀಂ

ತಡೆಹಿಡಿಯಲಾಗಿದ್ದ ಬಾಬರಿ ಮಸೀದಿ ಭೂವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್‌ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ. ಕಳೆದ ಜುಲೈ ೬ರಂದು ಕೈಗೆತ್ತಿಕೊಂಡಿದ್ದ ವಿಚಾರಣೆಯನ್ನು ಮುಂದೂಡಲಾಗಿತ್ತು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಸ್ ಎ ನಝೀರ್ ಅವರಿದ್ದ ವಿಶೇಷ ಪೀಠವು, ಮೇ 17ರಂದು ಹಿಂದೂ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿತ್ತು.

ಇಂದು ವರ್ಷದ ಅತಿ ದೊಡ್ಡ ಸೂರ್ಯಗ್ರಹಣ

ಇಂದು ಸೂರ್ಯಗ್ರಹಣ ಸಂಭವಿಸಲಿದ್ದು, ಈ ಭಾಗಶಃ ಸೂರ್ಯಗ್ರಹಣ ಭಾರತದಲ್ಲಿ ಗೋಚರವಾಗುವುದಿಲ್ಲ.  ದಕ್ಷಿಣ ಆಸ್ಟ್ರೇಲಿಯಾ, ಪೆಸಿಫಿಕ್, ಹಿಂದೂ ಮಹಾಸಾಗರಗಳಲ್ಲಿ ಕಂಡುಬರಲಿದ್ದು, ಈ ಪ್ರಾಕೃತಿಕ ವೈಭವವನ್ನು ನೋಡಲು ವಿಜ್ಞಾನಿಗಳು ಕಾತರರಾಗಿದ್ದಾರೆ. ನಾಸಾ ವಿಜ್ಞಾನಿಗಳು ಹೇಳುವಂತೆ, ಡಿಸೆಂಬರ್ 13,1974ರಲ್ಲಿ ಶುಕ್ರವಾರದಂದು ಸೂರ್ಯಗ್ರಹಣ ನಡೆದಿತ್ತು. ವರ್ಷದ ಅತ್ಯಂತ ದೊಡ್ಡ ಸೂರ್ಯಗ್ರಹಣ ಇದಾಗಲಿದೆ. ಗ್ರಹಣ ಸಂಭವಿಸುತ್ತಿದ್ದಂತೆ ನಾಸಾದವರು ಟ್ವಿಟ್ಟರ್‌ ಹಾಗೂ ಯೂಟೂಬ್‌ನಲ್ಲಿ ನೇರಪ್ರಸಾರ ಮಾಡಲಿದ್ದು, ಆಸಕ್ತರು ನೋಡಬಹುದಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More