ಜಿಯೊಗೆ ‘ಶ್ರೇಷ್ಠ ವಿದ್ಯಾಸಂಸ್ಥೆ’ ಮಾನ್ಯತೆ ಬೆನ್ನಲ್ಲೇ ಬಿಜೆಪಿಗೆ ೧,೨೦೦ ಕೋಟಿ ದೇಣಿಗೆ?

ಇನ್ನೂ ಜನ್ಮತಾಳದ ಜಿಯೊ ವಿವಿಗೆ ‘ಶ್ರೇಷ್ಠ ವಿದ್ಯಾಸಂಸ್ಥೆ’ ಮಾನ್ಯತೆ ನೀಡಲು ಕೇಂದ್ರ ನಿರ್ಧರಿಸಿರುವ ಬೆನ್ನಲ್ಲೇ ರಿಲಯನ್ಸ್ ಗ್ರೂಪ್ 1,200 ಕೋಟಿ ರು. ಮೊತ್ತದ ಎಲೆಕ್ಟೋರಲ್ ಬಾಂಡ್‌ ಅನ್ನು ಬಿಜೆಪಿಗೆ ದೇಣಿಗೆಯಾಗಿ ನೀಡಲಿದೆ. ಈ ಕುರಿತ ‘ಇಂಡಿಯಾ ಸ್ಕೂಪ್ಸ್.ಕಾಮ್’ ವರದಿಯ ಭಾವಾನುವಾದ ಇಲ್ಲಿದೆ

ಇನ್ನೂ ಕಣ್ಣೇ ಬಿಡದ ರಿಲಯನ್ಸ್ ಗ್ರೂಪ್‌ನ ಜಿಯೊ ವಿಶ್ವವಿದ್ಯಾಲಯಕ್ಕೆ ‘ಶ್ರೇಷ್ಠ ವಿದ್ಯಾಸಂಸ್ಥೆ’ ಮಾನ್ಯತೆ ನೀಡಲು ನಿರ್ಧರಿಸಿರುವ ಕೇಂದ್ರ ಸರ್ಕಾರದ ಕ್ರಮ ವಿವಾದಕ್ಕೆ ಈಡಾಗಿದೆ. ಬೆನ್ನಲ್ಲೇ, ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್ 1,200 ಕೋಟಿ ರು. ಮೊತ್ತದ ಎಲೆಕ್ಟೋರಲ್ ಬಾಂಡ್‌ ಅನ್ನು ಬಿಜೆಪಿ ಪಕ್ಷಕ್ಕೆ ದೇಣಿಗೆಯಾಗಿ ನೀಡಲಿದೆ.

ಈ ಕುರಿತು ದೇಶದ ರಾಜಕೀಯ ತಜ್ಞರು, ಪ್ರಮುಖ ಪತ್ರಕರ್ತರು ಹಾಗೂ ರಾಜಕೀಯ ಪಕ್ಷಗಳ ಪ್ರಮುಖರನ್ನು ಮಾತನಾಡಿಸಿ ಸಮೀಕ್ಷೆ ನಡೆಸಿದ ‘ಇಂಡಿಯಾ ಸ್ಕೂಪ್ಸ್.ಕಾಮ್‌’ ವೆಬ್‌ಸೈಟ್, ರಿಲಯನ್ಸ್ ಗ್ರೂಪ್ 1,200 ಕೋಟಿ ರು. ಮೊತ್ತವನ್ನು ಚುನಾವಣಾ ಬಾಂಡ್‌ ಮೂಲಕ ನೀಡಿಲಿದೆ ಎಂಬುದರ ಬಗ್ಗೆ ಸುದೀರ್ಘ ವರದಿ ಪ್ರಕಟಿಸಿದೆ.

ರಿಲಯನ್ಸ್‌ ಗ್ರೂಪ್ ನೀಡುತ್ತಿದೆ ಎನ್ನಲಾಗಿರುವ 1,200 ಕೋಟಿ ರು. ಮೊತ್ತದ ಎಲೆಕ್ಟೋರಲ್ ಬಾಂಡ್ ಅನ್ನು ನೇರವಾಗಿ ಹಣದ ರೂಪದಲ್ಲಿ ಬಿಜೆಪಿ ಪಕ್ಷ ಪಡೆಯುತ್ತಿಲ್ಲ. ಅಂದರೆ, ಶೇ.60ರಷ್ಟು ಹಣವನ್ನು ಸರಕು ಅಥವಾ ವಿನಿಮಯದ ಮೂಲಕ ಪಡೆದುಕೊಳ್ಳಲಿದೆ. ಇದನ್ನು ವಿವರಿಸುವುದಾದರೆ ವಿಮಾನ ಬಳಕೆ, ವಿಮಾನ ಟಿಕೆಟ್, ವಾಹನಗಳ ಬಳಕೆ, ಹೋಟೆಲ್ ವಾಸ್ತವ್ಯ, ಕಂಪ್ಯೂಟರ್ ಹಾಗೂ ಲ್ಯಾಪ್‌ಟಾಪ್‌ಗಳು, ಮೊಬೈಲ್ ಫೋನ್‌ಗಳು ಸೇರಿದಂತೆ ಇತರ ವಸ್ತುಗಳ ಮೂಲಕ ಪಕ್ಷ ಪಡೆದುಕೊಳ್ಳಲಿದೆ. ಉಳಿದ ಶೇ.40ರಷ್ಟು ಮೊತ್ತವನ್ನು ಹಣದ ರೂಪದಲ್ಲಿ ಪಡೆಯಲಿದೆ ಎನ್ನಲಾಗಿದೆ.

ದೇಶದ ನೂರಾರು ರಾಜಕೀಯ ತಜ್ಞರು, ಹಲವಾರು ಪಕ್ಷಗಳ ಹಿರಿಯ ರಾಜಕಾರಣಿಗಳು ಹಾಗೂ ಪ್ರಮುಖ ಪತ್ರಕರ್ತರ ಅಭಿಪ್ರಾಯಗಳನ್ನು ಒಳಗೊಂಡು ಈ ಸಮೀಕ್ಷೆ ನಡೆದಿದೆ. ಕಾಂಗ್ರೆಸ್ಸಿನ ಹಿರಿಯ ವಕ್ತಾರರೊಬ್ಬರು ಎಲೆಕ್ಟೋರಲ್ ಬಾಂಡ್ ಕುರಿತು ಮಾತನಾಡಿ, “ನಿರ್ದಿಷ್ಟವಾಗಿ ಒಬ್ಬ ವ್ಯಕ್ತಿಗಾಗಲೀ ಇಲ್ಲವೇ ಪಕ್ಷವಾಗಲೀ ಈ ಪ್ರಮಾಣದಲ್ಲಿ ಕೊಡುಗೆಯನ್ನು ಸ್ವೀಕರಿಸಲು ಸಿದ್ಧವಿರುವುದಿಲ್ಲ. ಆದರೆ, ಚುನಾವಣಾ ತಯಾರಿಗಾಗಿ ನಗದು ರೂಪದಲ್ಲಿ 300ರಿಂದ 500 ಕೋಟಿ ರು. ಹಣವನ್ನು ಪಕ್ಷಕ್ಕೆ ಪಡೆದುಕೊಳ್ಳಬಹುದು. ಉಳಿದಂತೆ ಇನ್ನಾವುದೋ ರೂಪದಲ್ಲಿ ಅದು ಪಕ್ಷಕ್ಕೆ ಬರುವ ಸಾಧ್ಯತೆ ಹೆಚ್ಚು,” ಎಂದಿದ್ದಾರೆ.

೧,೨೦೦ ಕೋಟಿ ಎಲೆಕ್ಟೋರಲ್ ಬಾಂಡ್ ಬಗ್ಗೆ ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಪ್ರಶಾಂತ ಭೂಷಣ್ ಮಾತನಾಡುತ್ತ, “ಬಿಜೆಪಿ ಸರ್ಕಾರದ ನೀತಿ ಹಾಗೂ ನಿರ್ಧಾರಗಳ ಮೂಲಕ ಅಂಬಾನಿ ಸಹೋದರರನ್ನು ಶ್ರೀಮಂತಗೊಳಿಸಿರುವುದನ್ನು ನೋಡಿದಾಗ ಅಂಬಾನಿ ಸಹೋದರರು ಬಿಜೆಪಿ ಸರ್ಕಾರಕ್ಕೆ ಸಾವಿರ ಕೋಟಿ ರೂಪಾಯಿ ನೀಡಿದರೂ ನನಗೆ ಆಶ್ಚರ್ಯವಾಗದು. ಸಹಜವಾಗಿಯೇ ಇದು ಒಂದು ರೀತಿಯಲ್ಲಿ ಕಪ್ಪಕಾಣಿಕೆ ಥರ ಪಕ್ಷಕ್ಕೆ ಹೋಗುತ್ತದೆ. 2019ರ ಚುನಾವಣಾ ವೆಚ್ಚಗಳಿಗೆ ರಿಲಯನ್ಸ್ ಗ್ರೂಪ್ ಇಂಥ ಮೊತ್ತವನ್ನು ದಾನ ಮಾಡಿರುವುದು ಅಚ್ಚರಿಯಲ್ಲ,” ಎಂದು ವಿವರಿಸಿದ್ದಾರೆ.

ಹೆಸರು ಹೇಳಲು ಇಚ್ಛಿಸದ ದೆಹಲಿಯ ಹಿರಿಯ ಎಎಪಿ (ಆಮ್ ಆದ್ಮಿ ಪಾರ್ಟಿ) ಮುಖಂಡ, "ಚುನಾವಣೆ ಮುಂಚಿತವಾಗಿ ಕನಿಷ್ಠ ೧೨ ತಿಂಗಳ ಅವಧಿಗೆ 1,500ರಿಂದ 1700 ಕೋಟಿ ರು. ವ್ಯಾಪ್ತಿಯಲ್ಲಿ ಆ ಮೊತ್ತ ಇರಬಹುದು ಎಂಬುದು ನನ್ನ ನಿರೀಕ್ಷೆ. ಅಂಬಾನಿ ಸಂಸ್ಥೆಗಳಿಗೆ ಬಿಜೆಪಿ ರಕ್ಷಣಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿರುವಾಗ ೨,೦೦೦ ಕೋಟಿ ದಾನ ಕೊಟ್ಟರೂ ಕಡಿಮೆಯೇ,” ಎಂದಿದ್ದಾರೆ.

ಚುನಾವಣಾ ಬಾಂಡ್‌ ಕುರಿತಾಗಿ ಬಿಸಿನೆಸ್ ಲೈನ್ ಆರ್‌ಟಿಐ ಮೂಲಕ ಹಣಕಾಸು ಸಚಿವಾಲಯದಿಂದ ಪಡೆದುಕೊಂಡ ಮಾಹಿತಿಯಂತೆ ೯೦೫ ಎಲೆಕ್ಟೋರಲ್ ಬಾಂಡ್‌ಗಳು ಮೂರು ಹಂತದಲ್ಲಿ ಖರೀದಿಯಾಗಿವೆ. ಇವುಗಳ ಒಟ್ಟು ಮೊತ್ತ ೪೩೮.೩ ಕೋಟಿ ರು. ಎಂದು ತಿಳಿದುಬಂದಿದೆ. ಈ ಪೈಕಿ, ರಿಲಯನ್ಸ್ ತನ್ನ ಅಂಗಸಂಸ್ಥೆಗಳೊಂದಿಗೆ ಸುಮಾರು ೨೫೦ ಕೋಟಿ ರು. ಮೌಲ್ಯದ ಎಲೆಕ್ಟೋರಲ್ ಬಾಂಡ್ ಖರೀದಿ ಮಾಡಿದೆ ಎನ್ನಲಾಗಿದೆ. ನಾಲ್ಕನೇ ಹಂತದ ಎಲೆಕ್ಟೋರಲ್ ಬಾಂಡ್ ಖರೀದಿ ಜು.೨ರಿಂದ ೧೧ರವರೆಗೂ ನಡೆದಿದ್ದು, ಈ ಅಂಕಿ-ಅಂಶ ಇನ್ನೂ ಲಭ್ಯವಾಗಿಲ್ಲ.

1,200 ಕೋಟಿ ರು. ಮೊತ್ತದ ಎಲೆಕ್ಟೋರಲ್ ಬಾಂಡ್ ವಿಚಾರವಾಗಿ ರಿಲಯನ್ಸ್ ಗ್ರೂಪ್ ವಕ್ತಾರರು ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಈ ಅನುಮಾನ ಇನ್ನೂ ಹೆಚ್ಚಾಗಿದೆ. ಆದರೆ, ಈ ಸಮೀಕ್ಷೆಯಿಂದ ಮತ್ತೊಂದು ಸಂಗತಿ ಬೆಳಕಿಗೆ ಬಂದಿದ್ದು, ಉಳಿದ ರಾಜಕೀಯ ಪಕ್ಷಗಳು ಸ್ವೀಕರಿಸುವ ಎಲೆಕ್ಟೋರಲ್ ಬಾಂಡ್‌ಗಳು‌ ರಿಲಯನ್ಸ್ ಗ್ರೂಪ್‌ ನೀಡುವ ದೇಣಿಗೆಗಿಂತ ಹತ್ತುಪಟ್ಟು ಕಡಿಮೆ ಇರಲಿವೆ.

ಇದನ್ನೂ ಓದಿ : ಲಾಭ ನಗದೀಕರಣದ ಒತ್ತಡಕ್ಕೆ ಕುಸಿದ ಷೇರುಪೇಟೆ, ಅನಿಲ್ ಅಂಬಾನಿ ಷೇರು ಜಿಗಿತ

‘ಎಕನಾಮಿಕ್ ಟೈಮ್ಸ್’ ವರದಿ ಪ್ರಕಾರ, ಮೊದಲ ಹಂತವಾಗಿ 222 ಕೋಟಿ ರು. ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿಸಲಾಗಿದೆ. ಈ ಬಾಂಡ್‌ಗಳು ಹಲವಾರು ರಾಜಕೀಯ ಪಕ್ಷಗಳಿಗೆ ಹೋಗಿದೆ. ರಿಲಯನ್ಸ್ ಗ್ರೂಪ್‌ ಒಂದೇ ತನ್ನ ಅಂಗಸಂಸ್ಥೆಗಳೊಂದಿಗೆ ೨೫೦ ಕೋಟಿ ರು. ಮೌಲ್ಯದ ಎಲೆಕ್ಟೋರಲ್ ಬಾಂಡ್ ಖರೀದಿಸಿದೆ ಎನ್ನಲಾಗುತ್ತಿದೆ.

‘ಇಂಡಿಯಾ ಟುಡೇ’ ವರದಿ ಹೇಳುವ ಹಾಗೆ, ಆರ್‌ಟಿಐ ಮಾಹಿತಿಯಂತೆ ೨೦೧೮ರ ಜೂ.೨೧ರೊಳಗೆ ಮೊದಲ ಮೂರು ತಿಂಗಳಿನಲ್ಲಿ ೨೧೩ ಕೋಟಿ ರು. ಮೌಲ್ಯದ ಚುನಾವಣಾ ಬಾಂಡ್‌ಗಳು ಮುಂಬೈ ಕೇಂದ್ರಿತವಾಗಿ ರಾಜಕೀಯ ಪಕ್ಷಗಳಿಗೆ ಹರಿದುಬಂದಿವೆ. ಉಳಿದ ನಗರಗಳನ್ನು ಗಮನಿಸುವುದಾದರೆ, ದೆಹಲಿಯಿಂದ ೭೩.೬ ಕೋಟಿ ರು., ಕೊಲ್ಕತ್ತಾ ಮೂಲದಿಂದ ೭೦.೦ ಕೋಟಿ ರು., ಬೆಂಗಳೂರು ಮೂಲದಿಂದ ೫೧,೮ ಕೋಟಿ ರು., ಚೈನ್ನೈ ಮೂಲದಿಂದ ೧೮.೦ ಕೋಟಿ ರು., ಗಾಂಧಿನಗರದಿಂದ ೧೨.೦ ಕೋಟಿ ರು. ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳು ಖರೀದಿಯಾಗಿವೆ. ಈ ಬಾಂಡ್ ಖರೀದಿದಾರರ ವಿವರವನ್ನು ಆರ್‌ಟಿಐನಡಿ ನೀಡಲು ಎಸ್‌ಬಿಐ ನಿರಾಕರಿಸಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More