ಇಂದಿನ ಡೈಜೆಸ್ಟ್| ನೀವು ಗಮನಿಸಬೇಕಾದ ಇತರ ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಷ್ಟ್ರೀಯ, ಅಂತಾರಾಷ್ಟ್ರೀಯ, ಕ್ರೀಡೆ ಮತ್ತು ವಾಣಿಜ್ಯ ಸುದ್ದಿಗಳ ಸಂಕ್ಷಿಪ್ತ ನೋಟ  

ಸಿಎಂ ಕುಮಾರಸ್ವಾಮಿ ಭೇಟಿ ಮಾಡಿದ ಕೃಷಿತಜ್ಞ ಸ್ವಾಮಿನಾಥನ್‌

ಖ್ಯಾತ ಕೃಷಿ ತಜ್ಞ ಎಂ ಎಸ್‌ ಸ್ವಾಮಿನಾಥನ್‌ ಅವರು ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ರಾಜ್ಯದ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು. ರೈತರ ಆದಾಯ ಹೆಚ್ಚಿಸಲು ಕೈಗೊಳ್ಳಬೇಕಾದ ವಿಚಾರಗಳ ಬಗ್ಗೆ ಸಲಹೆ ನೀಡುವಂತೆ ಸಿಎಂ ಕುಮಾರಸ್ವಾಮಿ ಅವರು ಈ ವೇಳೆ ಎಂ ಎಸ್‌ ಸ್ವಾಮಿನಾಥನ್‌ ಅವರನ್ನು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ವಾಮಿನಾಥನ್‌ ಅವರು, ರಾಜ್ಯವು ಕರಾವಳಿ ಭಾಗ ಹೊಂದಿರುವುದರಿಂದ ಸಮುದ್ರ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

ಥಾಯ್ಲೆಂಡ್ ಓಪನ್ ಸೆಮಿಫೈನಲ್‌ಗೆ ಧಾವಿಸಿದ ಸಿಂಧು

ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿ ವಿ ಸಿಂಧು ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಇಂದು ನಡೆದ ವನಿತೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಸೆಣಸಾಟದಲ್ಲಿ ಮಲೇಷಿಯಾ ಆಟಗಾರ್ತಿ ಸೋನಿಯಾ ಚೀಹ್ ಎದುರು ೨೧-೧೭, ೨೧-೧೩ ಎರಡು ನೇರ ಗೇಮ್‌ಗಳಲ್ಲಿ ಗೆಲುವು ಪಡೆದರು.ವಿಶ್ವದ ಮೂರನೇ ಶ್ರೇಯಾಂಕಿತೆ ಸಿಂಧು ಮುಂದಿನ ಸುತ್ತಿನಲ್ಲಿ ಇಂಡೋನೇಷಿಯಾದ ಮರಿಸ್ಕಾ ಟುನ್‌ಜುಂಗ್ ವಿರುದ್ಧ ಕಾದಾಡಲಿದ್ದಾರೆ. ಮಲೇಷಿಯಾ ಹಾಗೂ ಇಂಡೋನೇಷಿಯಾ ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ಪ್ರಶಸ್ತಿ ಗೆಲ್ಲಲು ವಿಫಲವಾದ ಸಿಂಧು, ಥಾಯ್ಲೆಂಡ್ ಓಪನ್ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

ಐದು ವರ್ಷಗಳ ಗರಿಷ್ಠ ಮಟ್ಟಕ್ಕೆ ಹಿಗ್ಗಿದ ವ್ಯಾಪಾರ ಕೊರತೆ

ಭಾರತದ ಜೂನ್ ತಿಂಗಳ ವಹಿವಾಟು ಕೊರತೆಯು 16.6 ಬಿಲಿಯನ್ ಡಾಲರ್ ಗೆ ಏರಿದೆ. ಮೇ ತಿಂಗಳ ವ್ಯಾಪಾರ ಕೊರತೆಯು 14.62 ಬಿಲಿಯನ್ ಡಾಲರ್ ನಷ್ಟಿತ್ತು. ದೇಶ ರಫ್ತು ಮಾಡುವ ಮತ್ತು ಆಮದು ಮಾಡುವ ಒಟ್ಟು ಮೊತ್ತದ ನಡುವಿನ ಅಂತರವನ್ನು ವ್ಯಾಪಾರ ಕೊರತೆ ಎನ್ನಲಾಗುತ್ತಿದೆ. ಜೂನ್ ತಿಂಗಳ ನಮ್ಮ ಆಮದು ಮೌಲ್ಯವು 44.30 ಬಿಲಿಯನ್ ಡಾಲರ್ ಗೆ ಏರಿದೆ. ಆದರೆ, ರಫ್ತು 27.7 ಬಿಲಯನ್ ಡಾಲರ್ ಗಳಷ್ಟಿದೆ.ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ತೀವ್ರವಾಗಿ ಏರಿರುವುದು ಭಾರತದ ವ್ಯಾಪಾರ ಕೊರತೆಗೆ ಕಾರಣವಾಗಿದೆ. ಮೇ ತಿಂಗಳಲ್ಲಿ 11.5ಬಿಲಿಯನ್ ಡಾಲರ್ ಇದ್ದ ಕಚ್ಚಾ ತೈಲ ಆಮದು ಜೂನ್ ತಿಂಗಳಲ್ಲಿ 12.7 ಬಿಲಿಯನ್ ಡಾಲರ್ ಗೆಏರಿದೆ. ಜೂನ್ ತಿಂಗಳಲ್ಲಿ ಚಿನ್ನದ ಆಮದು 2.39 ಬಿಲಿಯನ್ ಡಾಲರ್ ನಷ್ಟಿದೆ.

ಇನ್ಫೊಸಿಸ್ ಮೊದಲ ತ್ರೈಮಾಸಿಕ ನಿವ್ವಳಲಾಭ ಶೇ.3.7ರಷ್ಟು ಹೆಚ್ಚಳ

ಐಟಿ ದೈತ್ಯ ಇನ್ಫೊಸಿಸ್ ಮೊದಲ ತ್ರೈಮಾಸಿಕದ ಫಲಿತಾಂಶ ಪ್ರಕಟಿಸಿದ್ದ ಶೇ.3.7ರಷ್ಟು ನಿವ್ವಳ ಲಾಭ ಹೆಚ್ಚಳವಾಗಿದೆ. ಈ ಅವಧಿಯಲ್ಲಿ 3612 ಕೋಟಿ ರುಪಾಯಿ ನಿವ್ವಳಲಾಭ ಗಳಿಸಿದೆ, ಕಳೆದ ವರ್ಷ ಇದೇ ಅವಧಿಯಲ್ಲಿ 3,483 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿತ್ತು. ಕಂಪನಿಯು ತನ್ನ ಷೇರುದಾರರಿಗೆ 1:1 ಬೋನಸ್ ಷೇರು ನೀಡುವುದಾಗಿ ಘೋಷಿಸಿದೆ. ಏಪ್ರಿಲ್-ಜೂನ್ ಅವಧಿಯಲ್ಲಿ 19,128 ಕೋಟಿ ರುಪಾಯಿ ಆದಾಯಗಳಿಸಿದ್ದು ಹಿಂದಿನ ವರ್ಷದ ಆದಾಯಕ್ಕಿಂತ ಶೇ.12ರಷ್ಟು ಹೆಚ್ಚಳ ಸಾಧಿಸಿದೆ. ಪ್ರಸಕ್ತ ವರ್ಷದಲ್ಲಿ ಶೇ.6-8ರಷ್ಟು ಆದಾಯ ಮತ್ತು ಕಾರ್ಯಾಚರಣೆ ಲಾಭ ಶೇ.22-24ರಷ್ಟು ನಿರೀಕ್ಷಿಸಿರುವುದಾಗಿ ಇನ್ಫೋಸಿಸ್ ಸಿಇಒ ಸಲೀಲ್ ಪಾರಿಖ್ ಹೇಳಿದ್ದಾರೆ.

ಬೆಳ್ಳಂದೂರು ಕೆರೆ ಸ್ಪಚ್ಛತೆ; ಸರ್ಕಾರದ ನಿರ್ಲಕ್ಷ್ಯಕ್ಕೆ ಹೈಕೋರ್ಟ್ ಬೇಸರ

ಬೆಳ್ಳಂದೂರು ಕೆರೆ ಸ್ಪಚ್ಛತೆ ಹಾಗೂ ನಿರ್ವಹಣೆ ಸಂಬಂಧ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಬೆಳ್ಳಂದೂರು ಕೆರೆ ಸ್ವಚ್ಛತೆಗೆ ಸಂಬಂಧಿಸಿದಂತೆ ನಮ್ಮ ಬೆಂಗಳೂರು ಪ್ರತಿಷ್ಠಾನ, ಸಂಸದರಾದ ರಾಜೀವ್ ಚಂದ್ರಶೇಖರ್ ಮತ್ತು ಕುಪೇಂದ್ರ ರೆಡ್ಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಕೆರೆಯಲ್ಲಿ ತುಂಬಿಕೊಂಡಿರುವ ತ್ಯಾಜ್ಯ ನಿರ್ವಹಣೆಗೆ ತೆಗೆದುಕೊಂಡಿರುವ ಕ್ರಮವೇನು ಎಂದು ಸರ್ಕಾರವನ್ನು ಪ್ರಶ್ನಿಸಿದೆ. ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಕ್ರಿಯಾಯೋಜನೆ ರೂಪಿಸಿ, ಬಿಡಿಎ ಆಯುಕ್ತ, ನಗರಾಭಿವೃದ್ದಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಇದಕ್ಕೆ ಸಂಬಂಧಿಸಿದ ಎಲ್ಲ ಹಿರಿಯ ಅಧಿಕಾರಿಗಳು ಹಾಜರಾಗಿ ಕೆರೆ ಶುದ್ಧೀಕರಣಕ್ಕೆ ಕೈಗೊಳ್ಳಬಹುದಾದ ಕೆಲಸಗಳ ಬಗ್ಗೆ ವಿವರಣೆ ನೀಡಬೇಕೆಂದು ಸೂಚಿಸಿದೆ.

ಅಮೆರಿಕ ನಿರ್ಬಂಧದ ನಡುವೆಯೂ ರಷ್ಯಾ ಜೊತೆ ಬಾಂಧವ್ಯ: ರಕ್ಷಣಾ ಸಚಿವೆ

ರಷ್ಯಾದೊಂದಿಗಿನ ಭಾರತದ ಮಿಲಿಟರಿ ಒಪ್ಪಂದಕ್ಕೆ ಸಂಬಂಧಿಸಿದಂತೆ (ಎಸ್-೪೦೦ ಏರ್ ಡಿಫೆನ್ಸ್ ಕ್ಷಿಪಣಿ ಒಪ್ಪಂದ) ಅಮೆರಿಕ ನಿರ್ಬಂಧ ಹೇರಿದ್ದರೂ ಮುಂದುವರೆಸಲಾಗುವುದು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಹೇಳಿಕೆ ನೀಡಿದ್ದಾರೆ. "ರಷ್ಯಾದೊಂದಿಗಿನ ನಮ್ಮ ರಕ್ಷಣಾ ಸಂಬಂಧವು ಹಲವಾರು ದಶಕಗಳವರೆಗೆ ಅಸ್ತಿತ್ವದಲ್ಲಿತ್ತು ಮತ್ತು ನಾವು ಅದನ್ನು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ಯುಎಸ್ ಕಾಂಗ್ರೆಷನಲ್ ನಿಯೋಗಕ್ಕೆ ತಿಳಿಸಿದ್ದೇವೆ,” ಎಂದು ಸೀತಾರಾಮನ್ ಹೇಳಿದ್ದಾರೆ.

ಆನ್‌ಲೈನ್ ಅಂಕಿ-ಅಂಶಗಳ ಮೇಲೆ ನಿಗಾ; ಕೇಂದ್ರದ ನಿರ್ಧಾರಕ್ಕೆ ಸುಪ್ರೀಂ ಆಕ್ಷೇಪ

ಆನ್‌ಲೈನ್ ಅಂಕಿ-ಅಂಶಗಳ ಮೇಲೆ ನಿಗಾ ಸಾಮಾಜಿಕ ಮಾಧ್ಯಮ ಕೇಂದ್ರವನ್ನು ಸ್ಥಾಪಿಸುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನಿರ್ಧಾರಕ್ಕೆ ಹಿನ್ನಡೆಯಾಗಿದೆ. ಕೇಂದ್ರದ ನಿರ್ಧಾರದ ಬಗ್ಗೆ ಸುಪ್ರೀಂ ಕೋರ್ಟ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿ,ಜನರ ವಾಟ್ಸಾಪ್ ಮೆಸೇಜ್ ಗಳನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಸಾಮಾಜಿಕ ಜಾಲತಾಣ ಕೇಂದ್ರವನ್ನು ಸ್ಥಾಪಿಸುವ ಕೇಂದ್ರ ಸರ್ಕಾರದ ಕ್ರಮ ಸದಾ ಕಣ್ಗಾವಲಿನ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದಂತೆ. ಇಂಥ ನಿರ್ಧಾರ ಸೂಕ್ತವಾಗಿಲ್ಲಎಂದಿದೆ. ಸಿಜೆಐ ದೀಪಕ್ ಮಿಶ್ರಾ ಹಾಗೂ ನ್ಯಾ. ಎ ಎಂ ಖನ್ವಿಲ್ಕರ್ ಮತ್ತು ನ್ಯಾ. ಡಿ ವೈ ಚಂದ್ರಾಚೂಡ್ ಅವರನ್ನೊಳಗೊಂಡ ನ್ಯಾಯಪೀಠ ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ನೊಟೀಸ್ ಕಳುಹಿಸಿ ೧೫ ದಿನಗಳೊಳಗೆ ಉತ್ತರಿಸುವಂತೆ ಸೂಚಿಸಿದೆ.

ರಹೀಂ ಬಯೋಪಿಕ್‌ನಲ್ಲಿ ಅಜಯ್ ದೇವಗನ್‌

ಭಾರತೀಯ ಫುಟ್‌ಬಾಲ್‌ ತಂಡದ ಮಾಜಿ ಕೋಚ್‌ ಸೈಯದ್‌ ಅಬ್ದುಲ್ ರಹೀಂ ಕುರಿತ ಬಯೋಪಿಕ್‌ ಹಿಂದಿ ಸಿನಿಮಾ ಸೆಟ್ಟೇರುತ್ತಿದೆ. ಆಡ್‌ ಫೀಲ್ಮ್ ಮೇಕರ್‌ ಅಮಿತ್ ಶರ್ಮಾ ನಿರ್ದೇಶನದ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಅಜಯ್ ದೇವಗನ್ ನಟಿಸಲಿದ್ದಾರೆ. ಝೀ ಸ್ಟುಡಿಯೋಸ್‌ ಈ ಸುದ್ದಿಯನ್ನು ಟ್ವೀಟ್ ಮಾಡಿ ಖಚಿತಪಡಿಸಿದೆ. ಸೈಯದ್‌ ಅಬ್ದುಲ್ ರಹೀಂ ಅವರು 1950-1962ರ ಅವಧಿಯವರೆಗೆ ಭಾರತೀಯ ಫುಟ್‌ಬಾಲ್‌ ತಂಡದ ಕೋಚ್ ಮತ್ತು ಮ್ಯಾನೇಜರ್‌ ಆಗಿ ಸೇವೆ ಸಲ್ಲಿಸಿದ್ದರು. ರಹೀಂ ನೇತೃತ್ವದಲ್ಲಿ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಫುಟ್‌ಬಾಲ್‌ ತಂಡ ಚಿನ್ನ ಗೆದ್ದಿತ್ತು. ಚಿತ್ರದ ಶೀರ್ಷಿಕೆಯಿನ್ನೂ ನಿಗದಿಯಾಗಿಲ್ಲ.

ಜಪಾನಿನಲ್ಲಿ ಪರಿಸರ ವಿಕೋಪ; ೨೦೦ಕ್ಕೂ ಅಧಿಕ ಜನರ ಸಾವು

ಜಪಾನ್‌ನಲ್ಲಿ ಹಲವೆಡೆ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಭೂಕುಸಿತ ಹಾಗೂ ಪ್ರವಾಹದಿಂದಾಗಿ ೨೦೦ ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ೩೬ ವರ್ಷಗಳ ಬಳಿಕ ಆದ ಭೀಕರ ಪರಿಸರ ವಿಕೋಪ ಇದಾಗಿದೆ. ಜಪಾನಿನ ಕೆಲವು ಕಡೆಗಳಲ್ಲಿ 30 ರಿಂದ 50ಸೆಂ.ಮೀ ಮಳೆಯಾಗಿದೆ. ಹಿರೋಶಿಮಾ, ಒಕಾಯಾಮಾ, ಹ್ಯೊಗೊ ಮೊದಲಾದ ಕಡೆಗಳಲ್ಲಿ ಭಾರಿಹಾನಿಯಾಗಿದೆ. ಕೆಲವು ನಗರಗಳು ಸಂಪೂರ್ಣ ಜಲಾವೃತಗೊಂಡಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸುಮಾರು 17 ಸಾವಿರ ಮನೆಗಳಿಗೆ ವಿದ್ಯುತ್ ಇಲ್ಲದಂತಾಗಿದ್ದು, ದೂರವಾಣಿ ಸಂಪರ್ಕಗಳು ಸ್ಥಗಿತಗೊಂಡಿವೆ. ಶೋಧ ಕಾರ್ಯಾಚರಣೆಗಾಗಿ ಸಾವಿರಾರು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More