ವಿಶ್ವ ಹಿಂದೂ ಪರಿಷತ್‌ ಮೇಲೆ ₹1,400 ಕೋಟಿ ದೇಣಿಗೆ ನುಂಗಿದ ಆರೋಪ

ಸಾವಿರಾರು ಕೋಟಿ ರು. ದೇಣಿಗೆಯಲ್ಲಿ ಒಂದೇ ಒಂದು ಪೈಸೆಯನ್ನೂ ರಾಮಮಂದಿರಕ್ಕಾಗಿ ಬಳಸಲಿಲ್ಲ. ರಾಮ ಮಂದಿರ ವಿಚಾರ ಮುಂದಿಟ್ಟು ಕೆಲ ಮುಖಂಡರು, ರಾಜಕಾರಣಿಗಳು ಹಣ ಮತ್ತು ಮತ ಗಳಿಸುವಲ್ಲಿ ಸಫಲರಾದರು ಎಂಬುದು ನಿರ್ಮೋಹಿ ಅಖಾಡ ಸಂಘಟನೆಯ ಆರೋಪವಾಗಿದೆ

ರಾಮಮಂದಿರ ಹೆಸರಿನಲ್ಲಿ ವಿಶ್ವ ಹಿಂದೂ ಪರಿಷತ್ ಸಾರ್ವಜನಿಕರಿಂದ ಸಂಗ್ರಹಿಸಿದ್ದ‌ 1,400 ಕೋಟಿ ರು. ದೇಣಿಗೆ ರೂಪದ ಹಣವನ್ನು ನುಂಗಿಹಾಕಿದೆ ಎಂದು ನಿರ್ಮೋಹಿ ಅಖಾಡ (ರಾಮ ಮಂದಿರ ಆಂದೋಲನದ ಹಿಂದಿನ ಪ್ರಮುಖ ಹಿಂದೂ ಸಂಘಟನೆ) ಆರೋಪ ಮಾಡಿದೆ. ನಿರ್ಮೋಹಿ ಅಖಾಡ ಸದಸ್ಯ ಸೀತಾರಾಮ್‌ ಅವರು, “ರಾಮಮಂದಿರ ಕಟ್ಟಿಸುವುದಾಗಿ ಸಾರ್ವಜನಿಕರಿಂದ ವಿಶ್ವ ಹಿಂದೂ ಪರಿಷತ್‌ ದೇಣಿಗೆ ಸಂಗ್ರಹಿಸಿತ್ತು. ರಾಮನ ಹೆಸರಿನಲ್ಲಿ ಸಂಗ್ರಹಿಸಿದ ದೇಣಿಗೆಯನ್ನು ರಾಮಮಂದಿರ ಕಟ್ಟಿಸುವ ಕಾರ್ಯಕ್ಕೆ ಬಳಸದೆ, ತಮ್ಮ ಮನೆಗಳನ್ನು ಕಟ್ಟಿಸಿಕೊಳ್ಳುವ ಕಾರ್ಯಕ್ಕೆ ವಿಶ್ವ ಹಿಂದೂ ಪರಿಷತ್‌ ಮುಖಂಡರು ಉಪಯೋಗಿಸಿಕೊಂಡರು. ರಾಮ ಮಂದಿರ ವಿಚಾರದಲ್ಲಿ ನ್ಯಾಯಯುತವಾಗಿ ಹೋರಾಟ ಮಾಡುತ್ತಿರುವ ನಿರ್ಮೋಹಿ ಅಖಾರ ಯಾವುದೇ ವ್ಯಕ್ತಿಯಿಂದ ಹಣ ಸಂಗ್ರಹಿಸಿಲ್ಲ,” ಎಂದು ಆರೋಪಿಸಿದ್ದಾರೆ.

“ರಾಮ ಮಂದಿರ ಹೋರಾಟ ರೂಪಿಸುವಲ್ಲಿ ನಿರ್ಮೋಹಿ ಅಖಾಡ ಸಂಘಟನೆ ಪ್ರಮುಖವಾಗಿದೆ. ಆದರೆ, ಪಕ್ಷವೊಂದರ ರಾಜಕಾರಣಿಗಳು ರಾಮ ಮಂದಿರವನ್ನು ತಮ್ಮ ರಾಜಕೀಯ ಲಾಭ ಹಾಗೂ ಸ್ವಹಿತಾಸಕ್ತಿಗಾಗಿ ಬಳಸಿಕೊಂಡರು. ರಾಮ ಮಂದಿರ ಹೆಸರಿನಲ್ಲಿ ಸಂಗ್ರಹಿಸಿದ ಹಣದಿಂದ ಸರ್ಕಾರವನ್ನು ರಚಿಸುವಲ್ಲಿಯೂ ಯಶಸ್ವಿಯಾದರು. ಸಂಗ್ರಹಿಸಿದ ಸಾವಿರಾರು ಕೋಟಿ ರು. ಹಣದಲ್ಲಿ ಒಂದೇ ಒಂದು ಪೈಸೆಯನ್ನೂ ರಾಮಮಂದಿರ ನಿರ್ಮಾಣಕ್ಕಾಗಿ ಬಳಸಿಲ್ಲ. ರಾಮ ಮಂದಿರ ವಿಚಾರ ಮುಂದಿಟ್ಟು ರಾಜಕಾರಣಿಗಳು ಹಣ ಮತ್ತು ಮತ ಗಳಿಸುವಲ್ಲಿ ಸಫಲರಾದರು. ಆದರೆ, ರಾಮ ಮಂದಿರಕ್ಕಾಗಿ ಯಾವುದೇ ಕೆಲಸ ಮಾಡಲು ಮುಂದೆ ಬರಲಿಲ್ಲ,” ಎಂದು ಸೀತಾರಾಮ್‌ ಅವರು ಗಂಭೀರ ಆರೋಪ ಮಾಡಿದ್ದಾರೆ.

ವಿಪರ್ಯಾಸ ಎಂದರೆ, ಹಿಂದುತ್ವದ ಹೆಸರು ಹೇಳಿಕೊಂಡು ಅಧಿಕಾರ ಹಿಡಿದ ಬಿಜೆಪಿಯು ಇತ್ತೀಚೆಗೆ ಹಿಂದೂ ವಿರೋಧಿಯಾಗಿ ಕಾಣುತ್ತಿದೆ. ದ್ವಾರಕಾ ಪೀಠದ ಶಂಕರಾಚಾರ್ಯರು ಸ್ವರೂಪಾನಂದ ಸರಸ್ವತಿಯವರು ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ಈ ಎರಡು ಸಂಘಟನೆಗಳು ಹಿಂದೂ ಧರ್ಮಕ್ಕೆ ದೊಡ್ಡ ಮಟ್ಟದ ಹಾನಿ ಮಾಡಿವೆ. ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರಿಗೆ ಹಿಂದುತ್ವದ ಬಗ್ಗೆ ಏನೂ ತಿಳಿದಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಹಿಂದೂಗಳಿಗೆ ಕೊಟ್ಟಿದ್ದ ಯಾವುದೇ ಭರವಸೆಯನ್ನು ಈಡೇರಿಸಿಲ್ಲ,” ಎಂದು ಹರಿಹಾಯ್ದಿದ್ದರು.

ಇದನ್ನೂ ಓದಿ : ಹಿಂದೂ ರಾಷ್ಟ್ರೀಯವಾದಿ ಆರೆಸ್ಸೆಸ್‌ಗೆ ಜಾತ್ಯತೀತತೆಯ ಪಾಠ ಮಾಡಿದ ಪ್ರಣಬ್‌

ಈ ಎಲ್ಲ ಬೆಳವಣಿಗೆಗಳ ನಡುವೆ, ಹಿಂದೂ ವಿರೋಧಿ ಬಿಜೆಪಿ #AntiHinduBij ಎಂಬ ಹ್ಯಾಶ್‌ಟ್ಯಾಗ್‌ ಟ್ವಿಟ‌ರ್‌ನಲ್ಲಿ ಟ್ರೆಂಡ್‌ ಆಗಿದೆ. ರಾಜಸ್ಥಾನದಲ್ಲಿ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರ್ಕಾರ ಹಿಂದೂ ದೇವಾಲಯಗಳನ್ನು ಕೆಡವಿದ ನಂತರ ಹಿಂದೂ ಸಂಘಟನೆಗಳ ಆಕ್ರೋಶ ಭುಗಿಲೆದ್ದಿದ್ದು, ಹಿಂದೂ ವಿರೋಧಿ ಬಿಜೆಪಿ ಎಂಬ ಘೋಷಣೆಯು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಲಿತಕ್ಕೆ ಬಂದಿದೆ.

ಪ್ರಧಾನಿ ನರೇಂದ್ರ ಮೋದಿಯವರು 2014ರ ಚುನಾವಣೆಗೂ ಮುನ್ನ ಗಂಗಾ ನದಿ ಸ್ವಚ್ಛಗೊಳಿಸುವುದಾಗಿ, ರಾಮ ಮಂದಿರ ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ಆದರೆ, ತಮ್ಮ ಅಧಿಕಾರಾವಧಿ ಪೂರ್ಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಯಾವುದೇ ಭರವಸೆ ಈಡೇರಿಸುವಲ್ಲಿ ಬಿಜೆಪಿ ಸಫಲವಾಗಿಲ್ಲವೆಂಬುದು ಹಿಂದೂ ಪರ ನಿಲುವಿನ ಮಂದಿಯ ಆಕ್ರೋಶಕ್ಕೆ ಕಾರಣವಾಗಿದೆ. ಇದು ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More