ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ 5 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು

ಕೈಲಾಶ್ ಸತ್ಯಾರ್ಥಿ, ಕಿರಣ್ ಮಜುಂದಾರ್‌ರನ್ನು ಭೇಟಿ ಮಾಡಲಿರುವ ಸಿಎಂ ಎಚ್‌ಡಿಕೆ

ನೊಬೆಲ್ ಪುರಸ್ಕೃತ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಅವರನ್ನು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಭೇಟಿ ಮಾಡಿ ಚರ್ಚಿಸಲಿದ್ದಾರೆ. ಮಕ್ಕಳ ಹಕ್ಕುಗಳು, ಶಿಕ್ಷಣ ಮತ್ತಿತರ ವಿಚಾರಗಳು ಚರ್ಚೆಗೆ ಬರುವ ಸಾಧ್ಯತೆ ಇದೆ. ಇದರ ನಡುವೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರನ್ನೂ ಭೇಟಿ ಮಾಡಲಿದ್ದಾರೆ. ಕಳೆದ ವಾರ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮೆಟ್ರೋ ಕಾಮಗಾರಿಗೆ 200 ಕೋಟಿ ರುಪಾಯಿ ದೇಣಿಗೆ ನೀಡುವುದಾಗಿ ಇನ್ಫೋಸಿಸ್ ಸಂಸ್ಥಾಪಕರಲ್ಲೊಬ್ಬರಾದ ಸುಧಾ ಮೂರ್ತಿ ಅವರು ಹೇಳಿದ್ದ ಹಿನ್ನೆಲೆಯಲ್ಲಿ ಕಿರಣ್ ಅವರ ಭೇಟಿಯು ಕುತೂಹಲಕ್ಕೆ ಕಾರಣವಾಗಿದೆ.

ಮೂರನೇ ಸ್ಥಾನಕ್ಕಾಗಿ ಬೆಲ್ಜಿಯಂ-ಇಂಗ್ಲೆಂಡ್ ಹಣಾಹಣಿ

ಫಿಫಾ ವಿಶ್ವಕಪ್ ಪಂದ್ಯಾವಳಿಯ ಫೈನಲ್ ತಲುಪುವಲ್ಲಿ ವಿಫಲವಾದ ಬೆಲ್ಜಿಯಂ ಹಾಗೂ ಇಂಗ್ಲೆಂಡ್ ಇಂದು ನಡೆಯಲಿರುವ ಪಂದ್ಯದಲ್ಲಿ ಮೂರನೇ ಸ್ಥಾನಕ್ಕಾಗಿ ಸೆಣಸಲಿವೆ. ಸೇಂಟ್ ಪೀಟರ್ಸ್‌ಬರ್ಗ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯವು ಹ್ಯಾರಿ ಕೇನ್ ಸಾರಥ್ಯದ ಇಂಗ್ಲೆಂಡ್ ಪಾಲಿಗೆ ಮಹತ್ವವಾಗಿದೆ. ಅಂತೆಯೇ ರೊಮೇಲು ಲುಕಾಕು, ನೆಸೆರ್ ಚಾಡ್ಲಿ ಬೆಲ್ಜಿಯಂ ಪರ ಕಟ್ಟಕಡೆಯ ಹೋರಾಟಕ್ಕೆ ಪಣ ತೊಟ್ಟಿದ್ದಾರೆ. ಈ ಎರಡೂ ತಂಡಗಳ ಪೈಕಿ ಯಾವುದೇ ತಂಡ ಗೆದ್ದರೂ, ಫಿಫಾ ವಿಶ್ವಕಪ್‌ನಲ್ಲಿ ಮೂರನೇ ಸ್ಥಾನ ಗಳಿಸಿದ ಯೂರೋಪ್‌ನ ೧೦ನೇ ತಂಡವೆನಿಸಿಕೊಳ್ಳಲಿದೆ. ಪಂದ್ಯ ಸಂಜೆ ೭-೩೦ರಿಂದ ಶುರುವಾಗಲಿದೆ.

ವಿಶ್ವ ದಾಖಲೆಯ ೨೪ನೇ ಗ್ರಾಂಡ್‌ಸ್ಲಾಮ್ ಕನಸಿನಲ್ಲಿ ಸೆರೆನಾ!

ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ವನಿತೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯ ಇಂದು ನಡೆಯಲಿದ್ದು, ಅಮೆರಿಕದ ಸೆರೆನಾ ವಿಲಿಯಮ್ಸ್, ವಿಶ್ವ ದಾಖಲೆಯ ೩೪ನೇ ಗ್ರಾಂಡ್‌ಸ್ಲಾಮ್ ಗೆಲುವಿನ ಕನಸಿನಲ್ಲಿದ್ದಾರೆ. ಸೆಂಟರ್ ಕೋರ್ಟ್‌ನಲ್ಲಿ ಸಂಜೆ ೫.೩೦ಕ್ಕೆ ಶುರುವಾಗಲಿರುವ ಪಂದ್ಯದಲ್ಲಿ ಜರ್ಮನಿಯ ಏಂಜಲಿಕ್ ಕೆರ್ಬರ್ ವಿರುದ್ಧ ಸೆರೆನಾ ಕಾದಾಡಲಿದ್ದಾರೆ. 36ರ ಹರೆಯದ ಹಾಗೂ ಓರ್ವ ಮಗುವಿನ ತಾಯಿಯಾಗಿರುವ ಸೆರೆನಾ ಒಂದೊಮ್ಮೆ ಕೆರ್ಬರ್ ಅವರನ್ನು ಮಣಿಸಿದ್ದೇ ಆದಲ್ಲಿ ಎಂಟು ವಿಂಬಲ್ಡನ್ ಗೆಲುವಿನೊಂದಿಗೆ ವಿಶ್ವ ಮಹಿಳಾ ಟೆನಿಸ್‌ನಲ್ಲಿ ಮತ್ತೊಂದು ದಾಖಲೆ ಬರೆಯಲಿದ್ದಾರೆ.

ಎಚ್‌ಎಂಟಿ ಜಮೀನು, ಇಸ್ರೋಗೆ ಹಸ್ತಾಂತರ

ನಷ್ಟದ ಕಾರಣಕ್ಕೆ 2016ರಲ್ಲಿ ಹಿಂದೂಸ್ತಾನ್ ಮಿಷನ್ ಟೂಲ್ಸ್ (ಎಚ್‌ಎಂಟಿ) ತುಮಕೂರು ಘಟಕವನ್ನು ಕೇಂದ್ರ ಸರ್ಕಾರ ಮುಚ್ಚಿತ್ತು. ಘಟಕ ಮುಚ್ಚಿದ ಬಳಿಕ ಖಾಲಿಯಾಗಿದ್ದ ಜಾಗವನ್ನು ಇಸ್ರೋಗೆ ನೀಡಬೇಕು ಎಂದು ಸರ್ಕಾರ ಮನವಿ ಮಾಡಿತ್ತು. ಇದೀಗ ಈ ಎಲ್ಲ ಪ್ರಕ್ರಿಯೆಗಳು ಮುಗಿದಿದ್ದು, ಸದ್ಯಕ್ಕೆ ಎಚ್‌ಎಂಟಿ ಒಡೆತನದಲ್ಲಿರುವ 109 ಎಕರೆ ಜಮೀನನ್ನು ಇಂದು ಅಧಿಕೃತವಾಗಿ ಇಸ್ರೋಗೆ ಹಸ್ತಾಂತರಿಸಲಾಗುವುದು. ಈ ಪ್ರದೇಶದಲ್ಲಿ ಇಸ್ರೋ ತನ್ನ ಘಟಕ ಆರಂಭಿಸಲಿದ್ದು, ತುಮಕೂರಿನಲ್ಲಿ ಸುಮಾರು ಐದು ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ಇಸ್ರೋ ಯಾವ ಘಟಕವನ್ನು ಇಲ್ಲಿ ಆರಂಭಿಸಲಿದೆ ಎಂಬುದನ್ನು ಇಂದು ಘೋಷಿಸಲಿದೆ.

ಮಧ್ಯಪ್ರದೇಶ ಸಿಎಂ ಚೌಹಾಣ್‌ರಿಂದ ಜನಾಶೀರ್ವಾದ ಯಾತ್ರೆ ಆರಂಭ

ವರ್ಷಾಂತ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಶನಿವಾರದಿಂದ ಜನಾಶೀರ್ವಾದ ಯಾತ್ರೆ ಆರಂಭಿಸಲಿದ್ದಾರೆ. ಸೆಪ್ಟೆಂಬರ್ 25ಕ್ಕೆ ಯಾತ್ರೆಗೆ ತೆರೆ ಬೀಳಲಿದೆ. ಉಜ್ಜಯಿನಿಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಯಾತ್ರೆಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಚಾಲನೆ ನೀಡಲಿದ್ದಾರೆ. ಚೌಹಾಣ್ 230 ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರವಾಸ ಕೈಗೊಳ್ಳಲಿದ್ದಾರೆ. ಸತತ ನಾಲ್ಕನೇ ಬಾರಿಗೆ ಅಧಿಕಾರ ಹಿಡಿಯಲು ಬಿಜೆಪಿ ಕಸರತ್ತು ಆರಂಭಿಸಿದೆ. ಆಡಳಿತ ವಿರೋಧಿ ಅಲೆಯ ಲಾಭ ಪಡೆಯಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್, 15 ವರ್ಷಗಳ ಬಳಿಕ ಅಧಿಕಾರ ಮರಳಿ ಪಡೆಯಲು ಕಾತರವಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More