ಆರ್ಭಟಿಸುವ ನ್ಯಾಯಾಧೀಶರು, ಸ್ವತಂತ್ರ ಪತ್ರಕರ್ತರು ಇಂದಿನ ಅಗತ್ಯ: ನ್ಯಾ.ಗೋಗೊಯ್

“ಹೊಸ ವ್ಯವಸ್ಥೆ ಇದೆ ಎಂದು ನಂಬುವ ಭಾರತವೂ ಇದೆ; ಅದೇ ವೇಳೆ, ಅಸಂಬಂದ್ಧವಾಗಿ ಎಳೆದ ಬಡತನ ರೇಖೆಯ ಕೆಳಗೆ ಕನಿಷ್ಠ ಶಿಕ್ಷಣ, ಆರೋಗ್ಯದಿಂದಲೂ ವಂಚಿತರಾಗಿ ಬದುಕು ದೂಡುತ್ತಿರುವ ಭಾರತವೂ ಇದೆ,” ಎನ್ನುತ್ತಾರೆ ನ್ಯಾ.ಗೋಗೊಯ್. ಈ ಕುರಿತ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯ ಭಾವಾನುವಾದ ಇದು

ಆರ್ಭಟಿಸುವ ನ್ಯಾಯಾಧೀಶರು ಮತ್ತು ಸ್ವತಂತ್ರ ಪತ್ರಕರ್ತರು ಪ್ರಜಾಸತ್ತೆಯ ಮುಂಚೂಣಿ ರಕ್ಷರಾಗಿದ್ದಾರೆ; ನ್ಯಾಯಾಂಗವು ಸಮಾಜದಲ್ಲಿನ ಬದಲಾವಣೆಗಳಿಗೆ ಅನುಗುಣವಾಗಿ ಸ್ಪಂದಿಸುವ ಹಾಗೆ ಮಾಡುವುದಕ್ಕೆ ಕೇವಲ ಸುಧಾರಣೆ ಮಾತ್ರವಲ್ಲದೆ ಕ್ರಾಂತಿಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟಿನ ಎರಡನೆಯ ಅತಿ ಹಿರಿಯ ನ್ಯಾಯಮೂರ್ತಿ ರಂಜನ್ ಗೋಗೊಯ್ ಅಭಿಪ್ರಾಯಪಟ್ಟರು.

ಭಾರತದ ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ಅಲಂಕರಿಸಲಿರುವ ನ್ಯಾ.ಗೋಗೊಯ್, ದೆಹಲಿಯ ತೀನ್ ಮೂರ್ತಿ ಭವನದ ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ ಸಭಿಕರನ್ನುದ್ದೇಶಿಸಿ ‘ನ್ಯಾಯದ ಮುನ್ನೋಟ’ ಎಂಬ ವಿಷಯದ ಮೇಲೆ ಮೂರನೇ ರಾಮನಾಥ್ ಸ್ಮಾರಕ ಉಪನ್ಯಾಸ ನೀಡಿದರು.

‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯಲ್ಲಿ ‘ಪ್ರಜಾಸತ್ತೆ ಹೇಗೆ ಸಾಯುತ್ತದೆ?’ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟವಾದ ಲೇಖನವನ್ನು ಉದ್ಧರಿಸುತ್ತ ಅವರು, “ಆರ್ಭಟಿಸುವ ನಾಯಾಧೀಶರು ಮತ್ತು ಸ್ಪತಂತ್ರ ಪತ್ರಕರ್ತರು ಪ್ರಜಾಸತ್ತೆಯ ಮೊದಲ ಮುಂಚೂಣಿ ರಕ್ಷಕರಾಗಿದ್ದಾರೆ. ಪ್ರಜಾಸತ್ತೆಯ ಸಾವಿನ ಕುರಿತ ವರದಿಗಳು ಬಹಳ ಉತ್ಪ್ರೇಕ್ಷೆಯಾಗಿರುತ್ತವೆ. ಸರ್ಕಾರದ ಅತ್ಯಂತ ಕಡಿಮೆ ಕೆಟ್ಟಿರುವ ವ್ಯವಸ್ಥೆ ಕೂಡ ಅಪಾಯದಲ್ಲಿದೆ. ಅದಕ್ಕೆ ರಕ್ಷಕರ ಅಗತ್ಯವಿದೆ,” ಎಂದು ಅಭಿಪ್ರಾಯಪಟ್ಟರು.

“ಇಂದಿನ ಸನ್ನಿವೇಶದಲ್ಲಿ ಒಂದು ಸಣ್ಣ ಸಲಹೆ ನೀಡುತ್ತೇನೆ, ಸ್ವತಂತ್ರ ನ್ಯಾಯಾಧೀಶರು ಮತ್ತು ಆರ್ಭಟಿಸುವ ಪತ್ರಕರ್ತರು ಮಾತ್ರವಲ್ಲದೆ ಸ್ವತಂತ್ರ ಪತ್ರಕರ್ತರು ಮತ್ತು ಕೆಲವೊಮ್ಮೆ ಆರ್ಭಟಿಸುವ ನ್ಯಾಯಾಧೀಶರೂ ಅವಶ್ಯ,” ಎಂದು ಅವರು ಹೇಳಿದರು.

“ಸರಪಳಿಯೊಂದರಲ್ಲಿನ ಅತ್ಯಂತ ದುರ್ಬಲ ಕೊಂಡಿಯಷ್ಟೇ ಆ ಸರಪಳಿಯೂ ಗಟ್ಟಿಯಾಗಿರುತ್ತದೆ. ಒಂದು ಸಂಸ್ಥೆಯ ವಿಚಾರದಲ್ಲೂ ಇದು ಸತ್ಯ. ಆತ್ಮಾವಲೋಕನದಿಂದಲೇ ಪ್ರಾರಂಭಿಸುವುದಾದರೆ ಅಲ್ಲಿಂದಲೇ ಪ್ರಾರಂಭಿಸಬಹುದು. ನಮ್ಮನ್ನು ನಮ್ಮ ನಿಜವಾದ ನಿರ್ದೋಷತ್ವ ನಿಷ್ಕರ್ಷಿಸಬೇಕೇ ಹೊರತು ನಾವು ಮಾಡಿದ ತೀರ್ಮಾನಗಳಲ್ಲ. ಪ್ರಾಯಶಃ ಭವಿಷ್ಯದಲ್ಲಿ ನಾವು ಅದಕ್ಕಾಗಿ ಆಶಿಸಿ ಕಾರ್ಯಮಗ್ನವಾಗಬೇಕಿದೆ. ನ್ಯಾಯಾಂಗವು ಸಮಾಜದ ಅಪಾರ ವಿಶ್ವಾಸ ಗಳಿಸಿದೆ; ವಾಸ್ತವದಲ್ಲಿ ಅದರ ವಿಶ್ವಾಸರ್ಹತೆ ಮತ್ತು ನ್ಯಾಯಪರತೆಗೆ ಇದೇ ಕಾರಣ, ಇದು ಸಂಸ್ಥೆಯೊಂದಕ್ಕೆ ಸಿಕ್ಕ ಅಪೇಕ್ಷಣೀಯ ಸ್ಥಾನ,” ಎಂದು ಅಭಿಪ್ರಾಯಪಟ್ಟರು.

ಈ ವರ್ಷದ ಆರಂಭದಲ್ಲಿ, ಅಂದರೆ ಜನವರಿ 12ರಂದು, ನ್ಯಾ.ಗೋಗೊಯ್ ಅವರು ಸುಪ್ರೀಂ ಕೋರ್ಟಿನ ತಮ್ಮ ಮೂವರು ಹಿರಿಯ ಸಹೋದ್ಯೋಗಿಗಳಾದ ನ್ಯಾಯಮೂರ್ತಿ ಜೆ ಚೆಲಮೇಶ್ವರ್ (ಈಗ ನಿವೃತ್ತರು), ಮದನ್ ಬಿ ಲೋಕುರ್ ಮತ್ತು ಕುರಿಯನ್ ಜೋಸೆಫ್ ಅವರ ಜೊತೆಗೂಡಿ ಭಾರತದ ನ್ಯಾಯಾಂಗ ಚರಿತ್ರೆಯಲ್ಲಿ ಹಿಂದೆಂದೂ ನಡೆದಿರದಂತಹ ರೀತಿಯಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ, ಸುಪ್ರೀಂ ಕೋರ್ಟಿನ ಕಾರ್ಯನಿರ್ವಹಣೆಯ ಕುರಿತ ಅನೇಕ ಸಮಸ್ಯೆಗಳನ್ನು, ಅದರಲ್ಲೂ ನಿರ್ದಿಷ್ಟವಾಗಿ ಪ್ರಕರಣಗಳನ್ನು ವಿಚಾರಣೆಗಾಗಿ ನ್ಯಾಯಾಧೀಶರಿಗೆ ಹಂಚುವಲ್ಲಿರುವ ಸಮಸ್ಯೆಗಳನ್ನು ಕುರಿತು ಅವರೆಲ್ಲರೂ ಸೇರಿ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಗೆ ಬರೆದ ಪತ್ರವನ್ನು ಬಹಿರಂಗಗೊಳಿಸಿದ್ದರು. “ನಾವು ಮಾಡಿದ್ದು ದೇಶದ ತಲೆಯ ಮೇಲಿದ್ದ ಹೊರೆಯನ್ನು ಇಳಿಸುವ ಕೆಲಸ,” ಎಂದು ಆಗ ನ್ಯಾ.ಗೋಗೊಯ್ ಹೇಳಿದ್ದರು.

“ಇಂದಿನ ನ್ಯಾಯಾಂಗವು ತನ್ನ ಸಲಕರಣೆಗಳನ್ನು ದೂಷಿಸುವ ಬಡ ಕಾರ್ಮಿಕನಲ್ಲ, ಬದಲಿಗೆ ಸಲಕರಣೆಗಳೇ ಇಲ್ಲದ ಕಾರ್ಮಿಕ. ‘ಎಲ್ಲವನ್ನೂ ಈಗಾಗಲೇ ಹೇಳಿಯಾಗಿದೆ. ಆದರೆ, ಯಾರೂ ಕೇಳಿಸಿಕೊಳ್ಳಲಿಲ್ಲವಾದ್ದರಿಂದ ನಾವೀಗ ಮತ್ತೊಮ್ಮೆ ಹೇಳಬೇಕಾಗಿದೆ’ ಎಂದು ಫ್ರಾನ್ಸಿನ ಲೇಖಕ ಹಿಂದೊಮ್ಮೆ ಹೇಳಿದ್ದ. ನಾಯಕತ್ವದ ಚುಕ್ಕಾಣಿ ಹಿಡಿದಿರುವವರು ಅಂತಿಮವಾಗಿ ಕೇಳಿಸಿಕೊಳ್ಳಿ, ಕೇಳಿಸಿಕೊಂಡರೆ ಮತ್ತೆ ಮೊದಲಿನಿಂದ ಹೇಳಬೇಕಾದ ಅಗತ್ಯ ಬರುವುದಿಲ್ಲ ಎಂದಷ್ಟೇ ನಾನು ಹೇಳಬಯಸುತ್ತೇನೆ,” ಎಂದು ಅವರು ಹೇಳಿದರು.

ಸದ್ಯ ಇರುವುದು ಹೊಸ ವ್ಯವಸ್ಥೆ ಎಂದು ನಂಬುವ ಒಂದು ಭಾರತ ಮತ್ತು ಅಸಂಬಂದ್ಧವಾಗಿ ಎಳೆದ ಬಡತನ ರೇಖೆಯ ಕೆಳಗೆ ಬದುಕುತ್ತಿರುವ ಇನ್ನೊಂದು ಭಾರತ- ಇವುಗಳ ನಡುವಿನ ವಿಭಜನೆಯ ಬಗ್ಗೆ ಒತ್ತಿ ಹೇಳಿದ ಅವರು, ಬಹುಕಾಲದಿಂದ ಕಾಯುತ್ತಿರುವ ನ್ಯಾಯಾಂಗದ ಸಾಂವಿಧಾನಿಕ ಮಹತ್ವದ ಸಾಕಾರವಾಗಬೇಕೆಂದರು.

ಸರಣ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾ.ಗೋಗೊಯ್ ಅವರು, “ಚಂಚಲ ಸಾಮಾಜಿಕ ನೈತಿಕತೆಗಿಂತ ಊರ್ಜಿತವಾಗಬಲ್ಲ ಸಾಂವಿಧಾನಿಕ ನೈತಿಕತೆಯೇ ಹೆಚ್ಚು ಶ್ರೇಷ್ಠವಾದದ್ದು. ಇತ್ತೀಚೆಗೆ ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವಿನ ಪ್ರಕರಣದಲ್ಲಿ ಮತ್ತು ಐಪಿಸಿ ಸೆಕ್ಷನ್ 377ಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟು ನಡೆಸಿದ ವಿಚಾರಣೆಯಲ್ಲಿ ಈ ಸಾಂವಿಧಾನಿಕ ನೈತಿಕತೆಗೆ ನೀಡಿದ ಮಹತ್ವ ಗಮನಾರ್ಹವಾದುದು,” ಎಂದು ವಿಶ್ಲೇಷಿಸಿದರು.

ಸುಪ್ರೀಂ ಕೋರ್ಟು ವಿಕಾಸ ಹೊಂದುತ್ತ ಸಾಗಿರುವುದನ್ನು ಉಲ್ಲೇಖಿಸಿದ ಅವರು,”1970-1980ರ ನಡುವಿನ ಅವಧಿಯಲ್ಲಿ ಅದು ಸಂವಿಧಾನದ ಮೂಲ ಸಂರಚನೆಯ ಸಿದ್ಧಾಂತವನ್ನು (ಸಂವಿಧಾನದ ಕೆಲವು ಅಂಶಗಳು ಅನುಲ್ಲಂಘನೀಯವಾಗಿವೆ ಎಂಬುದನ್ನು ಹೇಳುವ) ನಿರೂಪಿಸಿದ ಕಾಲಘಟ್ಟವಾದರೆ, 1980ರ ದಶಕದಲ್ಲಿ ಅದು ಸಂವಿಧಾನದ 21ನೇ ವಿಧಿಯನ್ನು ವಿಸ್ತರಿಸಿದ (ಬದುಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ) ದಶಕವಾಗಿದೆ ಹಾಗೂ 1990ರ ದಶಕದಲ್ಲಿ ಅದು ಕಾರ್ಯಾಂಗ ಮತ್ತು ಶಾಸಕಾಂಗಗಳ ನಿಷ್ಕ್ರಿಯತೆಯ ಕಾರಣದಿಂದಾಗಿ ಉದ್ಭವಿಸಿದ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಸಂವಿಧಾನದ ಅಂಶಗಳನ್ನು ನವೀನ ಮಾದರಿಯಲ್ಲಿ ವ್ಯಾಖ್ಯಾನಿಸಿ “ಉತ್ತಮ ಆಡಳಿತದ ನ್ಯಾಯಾಲಯ”ವಾಗಿ ಪರಿವರ್ತನೆಯಾದ ದಶಕವಾಗಿದೆ,” ಎಂದು ವಿವರಿಸಿದರು.

“ನಮ್ಮ ಸ್ವಾತಂತ್ರ್ಯದ ಮೊದಲ ಐವತ್ತು ವರ್ಷಗಳಲ್ಲಿ ಈ ನ್ಯಾಯಾಲಯವು ಅತ್ಯಂತ ಬಲಿಷ್ಠ ನ್ಯಾಯಶಾಸ್ತ್ರವನ್ನು ಸೃಷ್ಟಿಸಿದ್ದು ಅದರ ಫಲವನ್ನು ನಾವು ಈಗಲೂ ಉಣ್ಣುತ್ತಿದ್ದೇವೆ. ಆದರೆ ಈಗಿರುವ ಪರಿಸ್ಥಿತಿಯನ್ನು ನೋಡಿದರೆ, ನಿಜವಾದ ವಿಚಾರಣೆ ಪ್ರಾರಂಭವಾಗುವ ಮೊದಲೇ ನ್ಯಾಯಾಲಯದ ಪ್ರಕ್ರಿಯೆಗಳೇ ವಿಚಾರಣೆಯಾಗಿಬಿಟ್ಟಿರುತ್ತವೆ. ಇದು ನಮ್ಮೆಲ್ಲರ ಸಮಷ್ಟಿ ವೈಫಲ್ಯ ಎಂದು ನಾನು ಹೇಳಲಾರೆ. ಆದರೆ, ನಾವು ಒಳಗೊಳ್ಳುವಿಕೆಯ ಆಲೋಚನೆಯನ್ನು ನಿರಾಕರಿಸುತ್ತಿದ್ದೇವೆ. ಕಾನೂನಿನ ಆಡಳಿತದಡಿಯಲ್ಲಿ ನಡೆಯುವ ದೇಶವೊಂದಕ್ಕೆ ಇದು ಕನಿಷ್ಠ ಮಟ್ಟದ ಕಾಳಜಿಯ ವಿಷಯವೂ ಆಗಿಲ್ಲವೇ? ತಳಮಟ್ಟದಲ್ಲಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವುದಕ್ಕೆ ನಾವು ಶಕ್ತರಾಗಬೇಕೆಂದರೆ ಹಾಗೂ ಈ ಸಂಸ್ಥೆ ಸಾಮಾನ್ಯ ವ್ಯಕ್ತಿಯ ಸೇವೆಯನ್ನು ಮಾಡುತ್ತ ದೇಶದಲ್ಲಿ ಔಚಿತ್ಯವಾಗಿ ಮುಂದುವರೆಯಬೇಕೆಂದರೆ ನಮಗೆ ಬೇಕಿರುವುದು ಬರೀ ಸುಧಾರಣೆಯಲ್ಲ, ಬದಲಿಗೆ ಕ್ರಾಂತಿ,” ಎಂದು ಅವರು ನುಡಿದರು.

“ನ್ಯಾಯಾಂಗವು ಖಂಡಿತವಾಗಿಯೂ ಇನ್ನಷ್ಟು ಕ್ರಿಯಾಶೀಲವಾಗಿರಬೇಕು ಮತ್ತು ಇನ್ನಷ್ಟು ಉತ್ಸಾಹಪೂರ್ಣವಾಗಿರಬೇಕು ಎಂದು ನಾನು ಗಟ್ಟಿಯಾಗಿ ಹೇಳುತ್ತೇನೆ. ಕಾನೂನುಗಳ ವ್ಯಾಖ್ಯಾನ ಮಾಡುವ ವಿಷಯದಲ್ಲಿ ನ್ಯಾಯಾಂಗವು ಎಲ್ಲ ಹಂತಗಳಲ್ಲೂ ಇನ್ನಷ್ಟು ಚುರುಕಾಗಿರಬೇಕು; ಸಾಂವಿಧಾನಿಕ ಮಹತ್ವ ಎಂದು ನಾನು ಹೇಳಿದುದರ ಅರ್ಥ ಇದೇ,” ಎಂದು ಅವರು ಹೇಳಿದರು.

ಇದನ್ನೂ ಓದಿ : ಕೇಂದ್ರದ ಆನ್‌ಲೈನ್ ಮಾಧ್ಯಮ ನಿಯಂತ್ರಣ ಯತ್ನ ಪ್ರಜಾಪ್ರಭುತ್ವ ವಿರೋಧಿ ನಡೆ

ರಾಮನಾಥ್ ಗೊಯೆಂಕಾ ಅವರನ್ನು ನೆನಪಿಸಿಕೊಂಡ ನ್ಯಾಯಮೂರ್ತಿ ಗೋಗೊಯ್, ಗೊಯೆಂಕಾ ಅವರು ಅಧಿಕಾರಕ್ಕೆ ಸತ್ಯವನ್ನು ಹೇಳುವ ದಿಟ್ಟ ವ್ಯಕ್ತಿಯಾಗಿದ್ದರು ಎಂದು ಬಣ್ಣಿಸಿದರು. “ಒತ್ತಡಕ್ಕೆ ಮಣಿಯದೆ ಸುದ್ದಿಯನ್ನು ಹೊರಗೆಡುಹುವುದನ್ನು ಕೆಲವರು ಹಠಮಾರಿತನ ಎಂದು ಕರೆದರೆ ಮತ್ತೆ ಕೆಲವರು ಬದ್ಧತೆ ಎನ್ನುತ್ತಾರೆ. ನಮಗೆ ನಾವೇ ಕೆಲವು ಪ್ರಶ್ನೆ ಕೇಳಿಕೊಳ್ಳಬೇಕು ಎಂದು ನನಗನ್ನಿಸುತ್ತದೆ; ನಮ್ಮಲ್ಲಿ ಗೊಯೆಂಕಾ ಎಲ್ಲಿದ್ದಾರೆ? ಅವರ ಆದರ್ಶಗಳು, ಅವರ ಮೌಲ್ಯಗಳು ಎಲ್ಲಿವೆ? ಅಂತಹ ಅಸಾಮಾನ್ಯ ವಿದ್ಯಮಾನವೊಂದು ಇಂದಿನ ಭಾರತದಲ್ಲಿ ಔಚಿತ್ಯ ಕಳೆದುಕೊಳ್ಳುತ್ತಿದೆಯೇ?”

ನ್ಯಾಯಾಂಗವು ಸರ್ಕಾರದ ಇತರ ಎರಡು ಅಂಗಗಳಲ್ಲಿ ಯಾವುದಾದರೋ ಒಂದರ ಜೊತೆ ಶಾಮೀಲಾದರೆ ಆಗುವ ಅಪಾಯದ ಬಗ್ಗೆ ಎಚ್ಚರಿಸಲು ನ್ಯಾಯಮೂರ್ತಿ ಗೋಗೊಯ್ ಅವರು ಅಮೆರಿಕದ ಸಂಸ್ಥಾಪಕ ಅಲೆಕ್ಸಾಂಡರ್ ಹ್ಯಾಮಿಲ್ಟನ್ ಅವರ ಮಾತುಗಳನ್ನು ಉದ್ಧರಿಸಿದರು. “ಕಾರ್ಯಾಂಗದ ಶಕ್ತಿಯೂ ಇಲ್ಲದೆ ಹಾಗೂ ಶಾಸಕಾಂಗದ ಅಧಿಕಾರವೂ ಇಲ್ಲದೆ ಕೇವಲ ತೀರ್ಪುನೀಡುವ ಕೆಲಸವನ್ನಷ್ಟೇ ಮಾಡುವ ನ್ಯಾಯಾಂಗವು ಮೂರೂ ಅಂಗಗಳ ಪೈಕಿ ಅತ್ಯಂತ ದುರ್ಬಲ ಅಂಗವಾಗಿದೆ ಎಂದು ಅಮೆರಿಕ ಸಂವಿಧಾನವನ್ನು ಅವಲೋಕಿಸುತ್ತ ಹ್ಯಾಮಿಲ್ಟನ್ ಹೇಳಿದ್ದರು. ನಾನು ಇದನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ನಾಗರಿಕ ಹಕ್ಕುಗಳಿಗೆ ನ್ಯಾಯಾಂಗದಿಂದ ಯಾವ ಬೆದರಿಕೆಯೂ ಇಲ್ಲ. ಆದರೆ, ನ್ಯಾಯಾಂಗವು ಇತರ ಎರಡು ಅಂಗಗಳಲ್ಲಿ ಯಾವುದಾದರೂ ಒಂದರ ಜೊತೆ ಶಾಮೀಲಾದರೆ ಎಲ್ಲ ಹೆದರಿಕೆಗಳೂ ಶುರುವಾಗುತ್ತವೆ,” ಎಂದರು.

ಇದಕ್ಕೂ ಮೊದಲು, ನ್ಯಾಯಮೂರ್ತಿ ಗೋಗೊಯ್ ಅವರನ್ನು ಸ್ವಾಗತಿಸುತ್ತ ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ಮುಖ್ಯ ಸಂಪಾದಕ ರಾಜ್ ಕಮಲ್ ಝಾ ಅವರು ಈ ರೀತಿ ಹೇಳಿದರು: “ನ್ಯಾಯ ಕೊಠಡಿ ಮತ್ತು ಸುದ್ದಿ ಕೊಠಡಿಗಳೆರಡೂ ಗುಣಸಾಮ್ಯತೆಯ ಜಾಗಗಳಾಗಿವೆ. ಏಕೆಂದರೆ, ನ್ಯಾಯಕ್ಕಾಗಿನ ಹುಡುಕಾಟ ಮತ್ತು ಸತ್ಯಕ್ಕಾಗಿನ ಹುಡುಕಾಟಗಳೆರಡೂ ಸಂಘರ್ಷದ ಪ್ರಕ್ರಿಯೆಗಳಾಗಿವೆ. ಒಂದೇ ವಿಷಯಕ್ಕೆ ಅಥವಾ ಪ್ರಕರಣಕ್ಕೆ ಎರಡು ಅಥವಾ ಹೆಚ್ಚಿನ ಮಗ್ಗಲುಗಳಿವೆ ಎಂಬುದನ್ನು ನ್ಯಾಯ ಕೊಠಡಿ ಮತ್ತು ಸುದ್ದಿ ಕೊಠಡಿಗಳೆರಡೂ ಒಪ್ಪಿಕೊಂಡು ಅಂಜಿಕೆ ಮತ್ತು ಪಕ್ಷಪಾತವಿಲ್ಲದೆ ಎಲ್ಲ ಮಗ್ಗುಲುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ.” ಎಂದರು.

ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಮದನ್ ಬಿ ಲೋಕೂರ್, ಎ ಕೆ ಸಿಕ್ರಿ, ಎನ್ ವಿ ರಾಮಣ್ಣ, ಡಿ ವೈ ಚಂದ್ರಚೂಡ್, ನವೀನ್ ಸಿನ್ಹಾ, ದೀಪಕ್ ಗುಪ್ತಾ ಮತ್ತು ಅಶೋಕ್ ಭೂಷಣ್, ಹೈಕೋರ್ಟ್‌ಗಳ ಕೆಲವರು ನ್ಯಾಯಮೂರ್ತಿಗಳು ಸಹ ವಿಶೇಷ ಉಪನ್ಯಾಸದಲ್ಲಿ ಉಪಸ್ಥಿತರಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More