ಗಾಂಧಿ ಹತ್ಯೆ ಸಂಚು | 15 | ಕೇತ್ಕರ್ ಮಾತುಗಳಿಂದ ಸಂಸತ್ತಿನಲ್ಲಿ ಕೋಲಾಹಲ

ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಆದ ನಿರ್ಲಕ್ಷ್ಯ ಮತ್ತು ಉದಾಸೀನಕ್ಕೆ ಮಹಾತ್ಮ ಬಲಿಯಾದರು ಎಂಬ ಭಾವನೆ ಕೂಡ ಆ ಕಾಲದಲ್ಲಿಯೇ ಇತ್ತು. ಅದಕ್ಕೆ ಪೂರಕವಾಗಿ ಕೇತ್ಕರ್ ಮೂಲಕ ಬಯಲಾಗಿದ್ದ ಹಲವು ಆಘಾತಕಾರಿ ವಿವರಗಳ ಬಗ್ಗೆ ಸಂಸದರು ಕಲಾಪದಲ್ಲಿ ಪ್ರಶ್ನಿಸಿದ್ದರು, ದೊಡ್ಡ ಚರ್ಚೆಯಾಗಿತ್ತು

ಗಾಂಧಿ ಹಂತಕರು ಜೈಲಿನಿಂದ ಬಿಡುಗಡೆಗೊಂಡ ಬಳಿಕ ಅವರಿಗೆ ಪೂನಾದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ್ದ ‘ಕೇಸರಿ’ ಪತ್ರಿಕೆಯ ಮಾಜಿ ಸಂಪಾದಕ ಹಾಗೂ ‘ತರುಣ್ ಭಾರತ್’ ಪತ್ರಿಕೆಯ ಅಂದಿನ ಹಾಲಿ ಸಂಪಾದಕ ಜಿ ವಿ ಕೇತ್ಕರ್, ಹತ್ಯೆಗೆ ಮೂರು ತಿಂಗಳ ಮೊದಲೇ ಸ್ವತಃ ನಾಥೂರಾಂ ತಮ್ಮ ಬಳಿ ಸಂಚಿನ ಬಗ್ಗೆ ಹೇಳಿಕೊಂಡಿದ್ದ ಎಂದಿದ್ದರು. ಆ ಕುರಿತ ವರದಿಗೆ ಕೇತ್ಕರ್ ನೀಡಿದ ಸ್ಪಷ್ಟನೆ ಪ್ರಕಟವಾದ ದಿನವೇ, ‘ದಿ ಇಂಡಿಯನ್ ಎಕ್ಸ್‌ಪ್ರೆಸ್’‌ನಲ್ಲಿ ಅವರ ವರ್ತನೆಯ ಕುರಿತ ವ್ಯತಿರಿಕ್ತ ವರದಿಯೊಂದು ಪ್ರಕಟವಾಗಿತ್ತು.

ಮಹಾತ್ಮ ಗಾಂಧಿ ಹತ್ಯೆಯ ಕುರಿತು ಕೇತ್ಕರ್ ಅವರಿಗೆ ಪೂರ್ಣ ಮಾಹಿತಿ ಇತ್ತು ಎಂಬುದು ಆ ಹತ್ಯೆಯ ಘಟನೆಗೆ ಕಾರಣವಾದ ಪರಿಸ್ಥಿತಿಗಳ ಕುರಿತ ರಹಸ್ಯಗಳಿಗೆ ಮತ್ತೊಂದು ಸೇರ್ಪಡೆ. ಅಂದರೆ, ತನ್ನ ಸಂಚಿನ ಯೋಜನೆಯ ಬಗ್ಗೆಯಲ್ಲದಿದ್ದರೂ, ಹತ್ಯೆಯ ಉದ್ದೇಶದ ಬಗ್ಗೆ ಸ್ವತಃ ಹಂತಕನೇ ಪೂನಾದ ಈ ಸಂಪಾದಕನಿಗೆ ಮೊದಲೇ ಹೇಳಿದ್ದ. ಆದರೆ, ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಕೇತ್ಕರ್, ಆ ಹತ್ಯೆಯನ್ನು ತಡೆಯುವ ತನ್ನ ಹೊಣೆಗಾರಿಕೆ ನಿಭಾಯಿಸಲಿಲ್ಲ. ಆ ಹಿನ್ನೆಲೆಯಲ್ಲಿ, ಪೂನಾದ ಈ ಸಂಪಾದಕರ ಕುರಿತು ಸಂಪೂರ್ಣ ವಾಸ್ತವಾಂಶಗಳನ್ನು ಜನರ ಮುಂದಿಡುವುದು ಸರ್ಕಾರದ ಹೊಣೆಗಾರಿಕೆ ಎಂದೂ ಆ ವರದಿಯಲ್ಲಿ ಹೇಳಲಾಗಿತ್ತು.

ಅದೇ ಹೊತ್ತಿಗೆ, ‘ಪೂನಾ ಡೈಲಿ ನ್ಯೂಸ್’ ಎಂಬ ಪತ್ರಿಕೆಯಲ್ಲೂ ಕೇತ್ಕರ್ ಅವರ ಒಂದು ಸ್ಪಷ್ಟನೆ ಪ್ರಕಟವಾಗಿತ್ತು. ೧೯೬೪ರ ನವೆಂಬರ್ ೧೬ರಂದು ಪ್ರಕಟವಾಗಿದ್ದ ಆ ಸ್ಪಷ್ಟನೆ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಅವರ ಸ್ಪಷ್ಟನೆಗಿಂತ ಭಿನ್ನವಾಗಿತ್ತು. ಆ ಹೇಳಿಕೆಯಲ್ಲಿ ಕೇತ್ಕರ್ ಅವರು, ೧೨೫ ವರ್ಷ ಬದುಕಬೇಕು ಎಂಬ ಗಾಂಧಿಯವರ ಇಚ್ಛೆಯ ಕುರಿತು ನಾಥೂರಾಂ ಗೋಡ್ಸೆ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡಿದ್ದನ್ನು ಪ್ರಸ್ತಾಪಿಸಿದ್ದರು. ಆ ಬಳಿಕ, ಗಾಂಧಿ ಹತ್ಯೆಯ ಕುರಿತ ನಾಥೂರಾಂ ಉದ್ದೇಶದ ಬಗ್ಗೆ ಬಾಲುಕಾಕಾ ಕಾನಿಟ್ಕರ್‌ಗೆ ತಾವು ಮಾಹಿತಿ ನೀಡಿದ್ದು, ಆ ವಿಷಯವನ್ನು ಅವರು ಬಿ ಜಿ ಖೇರ್ ಅವರಿಗೆ ತಲುಪಿಸಿದ್ದರು. ಒಟ್ಟಾರೆ, ಅನಾಹುತ (ಗಾಂಧಿ ಹತ್ಯೆ) ತಡೆಯುವ ನಿಟ್ಟಿನಲ್ಲಿ ಎಲ್ಲವನ್ನೂ ಮಾಡಲಾಗಿತ್ತು. “ರಾಜಕೀಯದಲ್ಲಿ ಇಂತಹ ಕೃತ್ಯಕ್ಕೆ ಕೈಹಾಕುವುದು ತಪ್ಪು. ಅಂತಹ ಕೃತ್ಯ ದೊಡ್ಡ ಪರಿಣಾಮಗಳನ್ನು ಉಂಟುಮಾಡಲಿದೆ. ತಪ್ಪು ಸಂದೇಶ ನೀಡಲಿದೆ ಎಂದು ನಾನು ಸ್ವತಃ ನಾಥೂರಾಮನಿಗೆ ಹೇಳಿದ್ದೆ,” ಎಂದೂ ಕೇತ್ಕರ್ ತಮ್ಮ ಸ್ಪಷ್ಟನೆಯಲ್ಲಿ ತಿಳಿಸಿದ್ದರು.

ಕೇತ್ಕರ್ ಅವರು ಗಾಂಧಿ ಹತ್ಯೆಯ ಸಂಚು ತಮಗೆ ಮೊದಲೇ ತಿಳಿದಿತ್ತು ಎಂಬ ಹೇಳಿಕೆ ನೀಡಿದ ಬಳಿಕ ಮತ್ತು ನಾಥೂರಾಂ ಗೋಡ್ಸೆಯ ವಾರ್ಷಿಕ ತಿಥಿ ಆಚರಣೆಯ ಸಮಾರಂಭಗಳ ಬಳಿಕ ಪೂನಾ ನಗರದಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ರಾಜಕೀಯ ಪಕ್ಷಗಳ ಮುಖಂಡರ ಸಕಾಲಿಕ ಮಧ್ಯಪ್ರವೇಶದಿಂದಾಗಿ ಹೆಚ್ಚಿನ ಅನಾಹುತಗಳು ತಪ್ಪಿದವು ಎಂದು ಜಿಲ್ಲಾಧಿಕಾರಿ ಬಾಂಬೆ ಸರ್ಕಾರಕ್ಕೆ ೧೯೬೪ರ ನವೆಂಬರ್ ೨೪ರಂದು ಬರೆದ ಪತ್ರದಲ್ಲಿ ಪ್ರಸ್ತಾಪಿಸಿದ್ದರು.

ಅದೇ ದಿನದ ಮತ್ತೊಂದು ಆದೇಶದಲ್ಲಿ ಜಿಲ್ಲಾಧಿಕಾರಿ, ಕೇತ್ಕರ್ ಸೇರಿದಂತೆ ಹಲವರನ್ನು ಆ ಗಲಭೆಗೆ ಕುಮ್ಮಕ್ಕು ನೀಡಿದ ಸಂಬಂಧ ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಆದೇಶಿಸಿದ್ದರು. ಈ ನಡುವೆ, ತಮ್ಮ ಹೇಳಿಕೆಯ ಕುರಿತು ‘ಇಂಡಿಯನ್ ಎಕ್ಸ್‌ಪ್ರೆಸ್‌’ನಲ್ಲಿ ಟೀಕೆ ಪ್ರಕಟವಾದ ಬಳಿಕ ಮತ್ತು ತಮ್ಮನ್ನು ವಶಕ್ಕೆ ಪಡೆಯುವಂತೆ ಜಿಲ್ಲಾಧಿಕಾರಿಗಳ ಆದೇಶ ಹೊರಬೀಳುವ ಮುನ್ನ, ನವೆಂಬರ್ ೨೩ರಂದೇ ಕೇತ್ಕರ್ ಪೂನಾದಿಂದ ಕಾಲ್ಕಿತ್ತಿದ್ದರು. ನವೆಂಬರ್ ೨೪ರಂದು ಮದ್ರಾಸಿಗೆ ಹೋಗಿದ್ದ ಅವರು, ಮಾರನೇ ದಿನ ನ.೨೫ರಂದು ಮದ್ರಾಸ್ ಪೊಲೀಸ್ ಕಮಿಷನರ್ ಎದುರು ಶರಣಾಗಿದ್ದರು. ಬಳಿಕ ಅವರನ್ನು ಪೂನಾಕ್ಕೆ ರೈಲಿನ ಮೂಲಕ ಕರೆತರಲಾಯಿತು. ರೈಲು ಮಹಾರಾಷ್ಟ್ರ ಗಡಿ ಪ್ರವೇಶಿಸಿದ ಬಳಿಕ ಅವರಿಗೆ ಬಂಧನದ ವಾರಂಟ್ ನೀಡಲಾಯಿತು ಮತ್ತು ಮೊದಲು ಯರವಾಡ ಜೈಲಿನಲ್ಲಿಟ್ಟು ಬಳಿಕ ಅಕೋಲ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು.

ಆ ಬಳಿಕ ತನ್ನ ಬಂಧನವನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೊರೆಹೋದರು. ಅಲ್ಲಿ, ಪ್ರಮುಖವಾಗಿ ತನ್ನ ವಿರುದ್ದದ ಆರೋಪಗಳನ್ನು ಅಲ್ಲಗಳೆಯುತ್ತ, ಬಾಲುಕಾಕಾ ಕಾನಿಟ್ಕರ್ ಅವರನ್ನು ತಾನು ಭೇಟಿಯಾಗಿ, ನಾಥೂರಾಮನ ಉದ್ದೇಶದ ಬಗ್ಗೆ ಹೇಳಿದ್ದೆ. ಅತನ ಸಾರ್ವಜನಿಕ ಭಾಷಣ ಮತ್ತು ಆತನೊಂದಿಗೆ ತಮ್ಮ ವೈಯಕ್ತಿಕ ಮಾತುಕತೆಯ ಮಾಹಿತಿಯನ್ನೂ ನೀಡಿದ್ದೆ. ಆ ಮಾಹಿತಿಯನ್ನು ಆಡಳಿತಕ್ಕೆ ತಿಳಿಸುವಂತೆಯೂ ಅವರನ್ನು ಕೋರಿದ್ದೆ. ಅದರಂತೆ ಅವರು ಆಡಳಿತಕ್ಕೆ ಆ ಬಗ್ಗೆ ಮಾಹಿತಿ ನೀಡಿದ್ದರು. ಅಷ್ಟಕ್ಕೂ ನಾಥೂರಾಮ್‌ನ ಸಂಚಿನ ಬಗ್ಗೆ ಮೊದಲೇ ತಿಳಿದಿತ್ತು ಎಂಬ ತಮ್ಮ ಹೇಳಿಕೆ ಹೊಸದೇನಲ್ಲ. ಆ ಕುರಿತು ಹಿಂದೆಯೇ ಮಹಾರಾಷ್ಟ್ರ ವಿಧಾನಸಭಾ ಉಪ ಸಭಾಪತಿಯಾಗಿರುವ ಆರ್ ಕೆ ಖಾದಿಲ್‌ಕರ್ ಅವರಿಗೆ ತಿಳಿಸಿದ್ದೆ ಎಂದು ಹೇಳಿದ್ದರು. ಆದರೆ, ನ್ಯಾ.ಕಪೂರ್ ಆಯೋಗದ ಮುಂದೆ ಹಾಜರಾಗಿದ್ದ ಉಪಸಭಾಪತಿ ಖಾದಿಲ್‌ಕರ್, ಅಂತಹ ಯಾವುದೇ ಮಾತುಕತೆ ನಡೆದ ಬಗ್ಗೆ ತಮಗೆ ಗೊತ್ತಿಲ್ಲ ಎಂದು ಹೇಳಿಕೆ ದಾಖಲಿಸಿದ್ದರು. ಹಾಗಾಗಿ, ಅಂತಹ ಗಹನ ವಿಷಯದ ಕುರಿತ ಮಾತುಕತೆ, ನಿಜವಾಗಿಯೂ ನಡೆದಿದ್ದರೆ ಅದನ್ನು ಮರೆಯುವುದು ಸಾಧ್ಯವಿಲ್ಲ ಎಂಬ ಹಿನ್ನೆಲೆಯಲ್ಲಿ ಈ ವಿಷಯದಲ್ಲಿ ಕೇತ್ಕರ್ ಮತ್ತು ಖಾದಿಲ್‌ಕರ್‌ ಪೈಕಿ ಯಾರ ಮಾತು ನಿಜ ಎಂಬುದು ಗೊಂದಲಕಾರಿಯಾಗೇ ಉಳಿಯಿತು.

ಈ ನಡುವೆ, ಗೋಪಾಲ್ ಗೋಡ್ಸೆ ಮತ್ತು ಕರ್ಕರೆಗೆ ನೀಡಿದ ಸ್ವಾಗತ ಮತ್ತು ಅಭಿನಂದನಾ ಕಾರ್ಯಕ್ರಮದ ಕುರಿತು ಮಹಾರಾಷ್ಟ್ರ ವಿಧಾನಸಭೆಯಲ್ಲಿ ೧೯೬೫ರ ಫೆಬ್ರವರಿ ೨೫ರಂದು ಬಿರುಸಿನ ಚರ್ಚೆ ನಡೆಯಿತು. ಸ್ವತಃ ಕೇತ್ಕರ್‌, ಆಯೋಗದ ಮುಂದೆ ನೀಡಿದ ಹೇಳಿಕೆಯ ಪ್ರಕಾರವೂ, ಆ ವಿಷಯದಲ್ಲಿ ಆಗ ಮಾಧ್ಯಮಗಳಲ್ಲಿಯೂ ಸಾಕಷ್ಟು ಚರ್ಚೆ ನಡೆದಿತ್ತು. ಆ ಹಿನ್ನೆಲೆಯಲ್ಲೇ ಅವರನ್ನು ವಶಕ್ಕೆ ಪಡೆಯುವಂತೆ ಆದೇಶಿಸಲಾಗಿತ್ತು. ಆ ಸಂಗತಿ ಸಂಸತ್ತಿನಲ್ಲೂ ಪ್ರತಿಧ್ವನಿಸಿತ್ತು. ಗಾಂಧಿ ಹಂತಕರನ್ನು ಸನ್ಮಾನಿಸಿದ ಈ ಘಟನೆ ಸಂಸದರ ಅಕ್ರೋಶಕ್ಕೆ ಕಾರಣವಾಗಿತ್ತು. ರಾಜ್ಯಸಭೆಯಲ್ಲಿ ಗಮನ ಸೆಳೆಯುವ ನಿಲುವಳಿ ಸೂಚನೆಯನ್ನೂ ಮಂಡಿಸಲಾಗಿತ್ತು. ಆ ಮೂಲಕ, ಸದನದ ವ್ಯಾಪಕ ಚರ್ಚೆಗೆ ಆ ಸಂಗತಿ ಕಾರಣವಾಗಿತ್ತು. ಸದನದಲ್ಲಿ ಆ ಬಗ್ಗೆ ವಿವರಣೆ ನೀಡಿದ್ದ ಗೃಹ ಸಚಿವ ಗುಲ್ಜಾರಿ ಲಾಲ್ ನಂದಾ ಅವರು, “ಕೇತ್ಕರ್ ಅವರು ಗೋಡ್ಸೆಯ ಸಂಚಿನ ಬಗ್ಗೆ ಬಾಲುಕಾಕಾ ಮೂಲಕ ಖೇರ್ ಅವರಿಗೆ ಮಾಹಿತಿ ನೀಡಿದ್ದಾಗಿ ಹೇಳಿದ್ದಾರೆ. ಆದರೆ, ಬಾಲುಕಾಕಾ ಮತ್ತು ಖೇರ್ ಈಗ ಜೀವಂತವಿಲ್ಲ. ಹಾಗಾಗಿ, ಮಹಾರಾಷ್ಟ್ರ ಸರ್ಕಾರಿ ದಾಖಲೆಗಳಲ್ಲಿ ಈ ಅಂಶ ದಾಖಲಾಗಿದೆಯೇ ಎಂಬ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಿದೆ,” ಎಂದು ಹೇಳಿದ್ದರು.

ಆ ಹೇಳಿಕೆಯ ಬಳಿಕ, ಎ ಡಿ ಮಣಿ ಎಂಬ ಸಂಸದರು, ಗೃಹ ಸಚಿವರನ್ನುದ್ದೇಶಿಸಿ, “ಪೂನಾದ ಅಂದಿನ ಸಮಾರಂಭದ ಬಗ್ಗೆ ವಿವರ ಮಾಹಿತಿ ಪಡೆಯಲಾಗಿದೆಯೇ? ವಾಸ್ತವವಾಗಿ ಅಲ್ಲಿ ಏನು ನಡೆಯಿತು ಮತ್ತು ಪತ್ರಿಕೆಗಳಲ್ಲಿ ಏನು ವರದಿಯಾಗಿದೆ ಎಂಬ ಬಗ್ಗೆ ಮಾಹಿತಿ ನಿಮ್ಮ ಬಳಿ ಇದೆಯೇ? ಕೇತ್ಕರ್ ಅವರಿಗೆ ಗಾಂಧಿ ಹತ್ಯೆಯ ಸಂಚಿನ ಬಗ್ಗೆ ತಿಳಿದಿರುವ ಎಲ್ಲ ಮಾಹಿತಿಯನ್ನು ಪಡೆಯಲು ಭಾರತ ಸರ್ಕಾರ ಯಾವುದಾದರೂ ಪ್ರಯತ್ನ ನಡೆಸಿದೆಯೇ?” ಎಂದು ಕೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ನಂದಾ, “ಅವರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ,” ಎಂದು ಹೇಳಿದ್ದರು.

ಇದನ್ನೂ ಓದಿ : ಗಾಂಧಿ ಹತ್ಯೆ ಸಂಚು |೧೪| ಪೂನಾ ಸಂಪಾದಕನಿಗೆ ಮೊದಲೇ ಗೊತ್ತಿತ್ತು ಇಡೀ ಸಂಚು!

ಮತ್ತೊಬ್ಬ ಸಂಸದ ಭೂಪೇಶ್ ಗುಪ್ತಾ ಎಂಬುವರು, ಒಟ್ಟಾರೆ ಕಲಾಪದ ಚರ್ಚೆಯ ಕುರಿತು ಪ್ರಸ್ತಾಪಿಸಿ, “ಒಟ್ಟಾರೆ ಚರ್ಚೆಯಲ್ಲಿ ಎರಡು ಸಂಗತಿಗಳು ಸ್ಪಷ್ಟವಾಗಿವೆ. ಒಂದು, ಕೇತ್ಕರ್ ಎಂಬುವರು ಗಾಂಧಿ ಹತ್ಯೆಯ ಕುರಿತ ಸಂಚನ್ನು ಬಹಿರಂಗಪಡಿಸಿದ್ದಾರೆ ಮತ್ತು ಎರಡನೆಯದು, ಹತ್ಯೆಯ ಸಂಚುಕೋರರು ಬಿಡುಗಡೆಗೊಂಡ ಬಳಿಕ ಅವರಿಗೆ ಪೂನಾದಲ್ಲಿ ಆಯೋಜಿಸಿದ್ದ ಸ್ವಾಗತ ಸಮಾರಂಭ. ಜೊತೆಗೆ, ಗಾಂಧಿ ಹತ್ಯೆಯ ವೇಳೆ ದೇಶದ ಜನರಲ್ಲಿ, ಮಹಾತ್ಮನಿಗೆ ಅಗತ್ಯವಾಗಿ ನೀಡಬೇಕಿದ್ದ ಪ್ರಮಾಣದ ಭದ್ರತೆಯನ್ನು ನೀಡಲಿಲ್ಲ. ಅವರ ಜೀವರಕ್ಷಣೆಗೆ ಬೇಕಾದ ಕ್ರಮಗಳನ್ನು ಗಂಭೀರವಾಗಿ ಕೈಗೊಳ್ಳಲಿಲ್ಲ ಎಂಬ ಭಾವನೆ ಇತ್ತು. ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಆದ ನಿರ್ಲಕ್ಷ್ಯ ಮತ್ತು ಉದಾಸೀನಕ್ಕೆ ಮಹಾತ್ಮ ಬಲಿಯಾದರು ಎಂಬ ಭಾವನೆ ಕೂಡ ಇತ್ತು. ಅದಕ್ಕೆ ಪೂರಕವಾಗಿ ಇದೀಗ ಕೇತ್ಕರ್ ಮೂಲಕ ಇಂತಹ ಹಲವು ಆಘಾತಕಾರಿ ವಿವರಗಳು ಬಯಲಾಗಿವೆ,” ಎಂದು ಹೇಳಿದ್ದರು.

ಅಲ್ಲದೆ, “ಆ ಮಹತ್ವದ ಸಂಗತಿಯ ಹಿನ್ನೆಲೆಯಲ್ಲಿ ಕೇತ್ಕರ್ ಬಹಿರಂಗಪಡಿಸಿದ ಸಂಗತಿಗಳ ಕುರಿತು ಉನ್ನತ ಮಟ್ಟದ ತನಿಖೆಯಾಗಬಾರದೇಕೆ? ಕೇತ್ಕರ್ ಅವರಿಗೆ ನಾಥೂರಾಮ್‌ ನಡೆಸಿದ ಸಂಚಿನ ಮಾಹಿತಿ ಹೇಗೆ ತಿಳಿಯಿತು? ಅದನ್ನು ಅವರು ಯಾರಿಗೆ ಹೇಳಿದ್ದರು? ಅವರು ಆ ಬಗ್ಗೆ ಯಾವ ಕ್ರಮ ಕೈಗೊಂಡರು ಇತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಈ ಬಗ್ಗೆ ಸಮಗ್ರ ತನಿಖೆಯಾಗಬೇಕಿದೆ. ಗಾಂಧಿ ಹತ್ಯೆಯ ತನ್ನ ಸಂಚಿನ ಬಗ್ಗೆ ಗೋಡ್ಸೆ ಕೇತ್ಕರ್ ಬಳಿ ಮಾತನಾಡಿದ್ದ ಎಂದರೆ, ಅದೊಂದು ಸಂಚಿನ ಭಾಗವೇ ಆಗಿದೆ ಎಂದರ್ಥ. ಹಾಗಾಗಿದ್ದರೆ, ಅಂದಿನ ಬಾಂಬೆ ಸರ್ಕಾರ ಏನು ಮಾಡುತ್ತಿತ್ತು? ಇಂತಹ ಸಂಚು ಅಷ್ಟೊಂದು ರಾಜಾರೋಷವಾಗಿ ನಡೆಯುತ್ತಿರುವಾಗ ಬಾಂಬೆ ಸರ್ಕಾರ, ಅಂದಿನ ಭಾರತ ಸರ್ಕಾರ ಮತ್ತು ಗುಪ್ತಚರ ಇಲಾಖೆಗಳು ಏನು ಮಾಡುತ್ತಿದ್ದವು? ಯಾಕೆ ಅವುಗಳು ಅಂತಹ ಅಗಾಧ ಅಪಾಯವನ್ನು ಊಹಿಸುವಲ್ಲಿ ವಿಫಲವಾದವು? ಎಂಬ ಬಗ್ಗೆ ತನಿಖೆಯಾಗಬೇಕು. ಅತ್ಯಂತ ಮಹತ್ವದ ಈ ವಿಷಯದಲ್ಲಿ ಯಾವುದೇ ಬಗೆಯ ನಿರ್ಲಕ್ಷ್ಯ ಮಾಡಕೂಡದು,” ಎಂದು ಸಂಸದ ಗುಪ್ತಾ ಆಗ್ರಹಿಸಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More