ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ಸಿಎಂ ಎಚ್‌ಡಿಕೆ ದೆಹಲಿ ಪ್ರವಾಸ ಇಂದಿನಿಂದ

ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಇಂದಿನಿಂದ ಮೂರು ದಿನ ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ, ರಾಜ್ಯದ ಅಭಿವೃದ್ಧಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕೇಂದ್ರದ ನಾನಾ ಸಚಿವರನ್ನುಭೇಟಿ ಮಾಡಲಿರುವ ಕುಮಾರಸ್ವಾಮಿ, ಎರಡನೇ ದಿನ ರಾಜ್ಯದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರ ಜೊತೆ ಸಭೆ ನಡೆಸಲಿದ್ದಾರೆ. ಮಂಗಳವಾರ ಮಧ್ಯಾಹ್ನ ಮೊದಲಿಗೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌, ಸಂಜೆ ಕೇಂದ್ರ ಹೆದ್ದಾರಿ ಹಾಗೂ ಜಲಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ.

ಐಪಿಸಿ ಸೆಕ್ಷನ್ 377 ನಿಷೇಧ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ

ಸೆಕ್ಷನ್ 377 ಕಾನೂನನ್ನು ರದ್ದುಗೊಳಿಸಬೇಕೆಂದು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ನ್ಯಾಯಮೂರ್ತಿಗಳ ಪೀಠ ವಿಚಾರಣೆಗೆ ಕೈಗೆತ್ತಿಕೊಂಡಿದ್ದು, ಇಂದು ಸ್ಪಷ್ಟ ನಿರ್ಧಾರ ಬರುವ ಸಾಧ್ಯತೆ ಇದೆ. ಕಳೆದ ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ್ದ ಪೀಠ, ಎಲ್‌ಜಿಬಿಟಿ ಸಮುದಾಯವರ ನಡುವಿನ ಸಂಬಂಧವನ್ನು ಅಪರಾಧದಿಂದ ಮುಕ್ತಿಗೊಳಿಸಿದರೆ ತಾರತಮ್ಯ ಹಾಗೂ ಸಮಾಜದಲ್ಲಿ ಅವರ ಬಗೆಗಿನ ಕೀಳು ಭಾವನೆ ಹೋಗುತ್ತದೆ ಎಂದು ಹೇಳಿ ವಿಚಾರಣೆ ಮುಂದೂಡಿತ್ತು. ಈ ಕುರಿತಾಗಿ ಇಂದು ಮತ್ತೆ ವಿಚಾರಣೆ ನಡೆಯಲಿದೆ. 2013ರಲ್ಲಿ ಸುಪ್ರೀಂ ಕೋರ್ಟ್ ಸಲಿಂಗಿಗಳ ನಡುವಿನ ಲೈಂಗಿಕತೆ ಅಪರಾಧ ಎಂದು ತೀರ್ಪು ನೀಡಿತ್ತು.

ವಿವಿಧ ರಾಜಕೀಯ ಪಕ್ಷಗಳ ಜೊತೆ ಸ್ಪೀಕರ್ ಸಭೆ

ಮುಂಗಾರು ಅಧಿವೇಶನ ಆರಂಭದ ಮುನ್ನಾದಿನವಾದ ಮಂಗಳವಾರ ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಜೊತೆ ಚರ್ಚೆ ನಡೆಸಲಿದ್ದಾರೆ. ಸದನದ ಕಲಾಪ ಸರಾಗವಾಗಿ ನಡೆಸಲು ಬೆಂಬಲ ನೀಡುವಂತೆ ಸ್ಪೀಕರ್‌ ಕೋರಲಿದ್ದು, ಬಾಕಿ ಇರುವ ವಿಧೇಯಕಗಳಿಗೆ ಒಪ್ಪಿಗೆ ನೀಡುವ ಮೂಲಕ ಸಹಕರಿಸುವಂತೆ ಕೋರಲಿದ್ದಾರೆ. ಸಂಸತ್‌ ಗ್ರಂಥಾಲಯ ಕಟ್ಟಡದಲ್ಲಿ ಮೊದಲಿಗೆ ಸಭೆ ನಡೆಯಲಿದೆ. ಆನಂತರ ಕೇಂದ್ರ ಸರ್ಕಾರವು ವಿರೋಧ ಪಕ್ಷಗಳ ಜೊತೆ ಮಾತುಕತೆ ನಡೆಸಲಿದೆ. ಸ್ಪೀಕರ್ ಆಯೋಜಿಸುವ ಭೋಜನಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುವ ಸಾಧ್ಯತೆ ಇದೆ.

ಕುಲಭೂಷಣ್ ಜಾಧವ್ ಗಲ್ಲು ಪ್ರಕರಣ; ಇಂದು ಪ್ರತಿವಾದ ಮಂಡಿಸಲಿದೆ ಪಾಕಿಸ್ತಾನ

ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಗಲ್ಲುಶಿಕ್ಷೆಗೆ ಸಂಬಂಧಿಸಿದಂತೆ ಪಾಕಿಸ್ತಾನವು ಅಂತಾರಾಷ್ಟ್ರೀಯ ಕೋರ್ಟ್‌ನಲ್ಲಿ ಇಂದು ಪ್ರತಿವಾದ ಮಂಡಿಸಲಿದೆ. ಗೂಢಾಚಾರಿಕೆ ಮಾಡಿದ ಆರೋಪದ ಮೇಲೆ ಪಾಕಿಸ್ತಾನ ಸೇನಾ ಕೋರ್ಟ್ ಜಾಧವ್ ಅವರಿಗೆ ಗಲ್ಲುಶಿಕ್ಷೆ ವಿಧಿಸಿದ ಪಾಕಿಸ್ತಾನದ ನಿಲುವನ್ನು ಈ ಹಿಂದೆ ಭಾರತ ಪ್ರಶ್ನಿಸಿತ್ತು. ಇದೀಗ ಪ್ರಕರಣ ಅಂತಾರಾಷ್ಟ್ರೀಯ ನ್ಯಾಯಾಲಯದ ಮುಂದಿದ್ದು, ಭಾರತ ಮೊದಲು ವಾದ ಮಂಡಿಸಿ, ಜಾಧವ್ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದೆ. ಪಾಕಿಸ್ತಾನ ಈ ಬಗ್ಗೆ ಯಾವ ನಿಲುವನ್ನು ತಳೆಯಲಿದೆ ಎಂಬುದನ್ನು ಕಾದುನೋಡಬೇಕಿದೆ.

ಹತ್ತನೇ ಸರಣಿ ಮೇಲೆ ಟೀಮ್ ಇಂಡಿಯಾ ಕಣ್ಣು

ಪ್ರವಾಸಿ ಭಾರತ ಹಾಗೂ ಆತಿಥೇಯ ಇಂಗ್ಲೆಂಡ್ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯ ಹೆಡಿಂಗ್ಲೆಯ ಲೀಡ್ಸ್‌ನಲ್ಲಿ ಇಂದು ನಡೆಯಲಿದೆ. ಸಂಜೆ ೫ ಗಂಟೆಗೆ ಆರಂಭವಾಗಲಿರುವ ಪಂದ್ಯ ಸರಣಿಯನ್ನು ನಿರ್ಧರಿಸಲಿದ್ದು, ಇತ್ತಂಡಗಳಿಗೂ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.ಮೊದಲ ಪಂದ್ಯದಲ್ಲಿ ಕೊಹ್ಲಿ ಪಡೆ ೮ ವಿಕೆಟ್ ಗೆಲುವು ಸಾಧಿಸಿದರೆ, ಎರಡನೇ ಪಂದ್ಯದಲ್ಲಿ ಜೋ ರೂಟ್ ಅಜೇಯ ಶತಕದ ನೆರವಿನಿಂದ ಇಂಗ್ಲೆಂಡ್ ೮೬ ರನ್ ಗೆಲುವು ಕಂಡಿತ್ತು. ಹೀಗಾಗಿ, ಮೂರನೇ ಮತ್ತು ಕೊನೆಯ ಪಂದ್ಯವು ಸರಣಿ ಯಾರದ್ದಾಗಿರಲಿದೆ ಎಂಬುದನ್ನು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಕೊಹ್ಲಿ ಮತ್ತು ಮಾರ್ಗನ್ ಪಡೆಗೆ ಮಹತ್ವಪೂರ್ಣವಾಗಿದೆ. ಹಾಗೆಯೇ ಈ ಸರಣಿಯನ್ನು ಭಾರತ ಗೆದ್ದಲ್ಲಿ ಹತ್ತನೇ ಸರಣಿಯನ್ನು ಗೆದ್ದಂತಾಗುತ್ತದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More