ದೊಂಬಿ ಹತ್ಯೆ ಅರಾಜಕತೆ ಸೂಚಿಸುತ್ತದೆ ಎಂದು ಕೇಂದ್ರಕ್ಕೆ ಎಚ್ಚರಿಸಿದ ಸುಪ್ರೀಂ ಕೋರ್ಟ್

‘ಒಂದು ಸಮೂಹವು ಒಂದು ಸಿದ್ಧಾಂತಕ್ಕಾಗಿ ಕಾನೂನನ್ನು ಕೈಗೆತ್ತಿಕೊಳ್ಳುವ ಹಾಗಿಲ್ಲ. ಅಂತಹ ಸ್ಥಿತಿ ಅರಾಜಕತೆ, ಗೊಂದಲ, ಅವ್ಯವಸ್ಥೆಯನ್ನು ಸೂಚಿಸುತ್ತದೆ ಮತ್ತು ಹಿಂಸಾತ್ಮಕ ಸಮಾಜಕ್ಕೆ ಪ್ರೇರೇಪಿಸುತ್ತದೆ’ ಎಂದು ಸುಪ್ರೀಂ ಕೋರ್ಟ್‌ ಖಡಕ್‌ ಮಾತುಗಳಲ್ಲಿ ಮೋದಿ ಸರ್ಕಾರವನ್ನು ಎಚ್ಚರಿಸಿದೆ

ಸುಪ್ರೀಂ ಕೋರ್ಟ್ ಮಂಗಳವಾರ (ಜು.೧೭) ನೀಡಿದ ಮಹತ್ತರವಾದ ತೀರ್ಪೊಂದರಲ್ಲಿ, ದೊಂಬಿ ಹತ್ಯೆಗಳಿಗೆ (ಲಿಂಚಿಂಗ್) ದೇಶಾದ್ಯಂತ ಅಮಾಯಕರು ಬಲಿಯಾಗುತ್ತಿರುವುದನ್ನು ಖಂಡಿಸಿದೆ. ಉದ್ರಿಕ್ತ ಗುಂಪುಗಳ ಹಿಂಸಾತ್ಮಕ ಕೃತ್ಯಗಳು ಅರಾಜಕತೆಗೆ ಕಾರಣವಾಗಲಿದೆ ಎನ್ನುವ ಎಚ್ಚರಿಕೆಯನ್ನು ನೀಡಿದ ನ್ಯಾಯಾಲಯ, ಹಿಂಸೆ ತಡೆಯಲು ವಿಫಲವಾಗಿರುವ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠವು, “ದೊಂಬಿ ಪ್ರಭುತ್ವದ (ಮೊಬೊಕ್ರಸಿ) ಕ್ರೂರ ಕೃತ್ಯಗಳು ದೇಶದಲ್ಲಿ ‘ಅತಿ ಸಾಮಾನ್ಯ ನಡೆ’ ಎನ್ನುವಂತೆ ಬದಲಾಗಲು ಬಿಡಬಾರದು,” ಎಂದು ಹೇಳಿದೆ.

“ದೊಂಬಿ ಪ್ರಭುತ್ವದ ಕ್ರೂರ ಚಹರೆಯು ರಾಷ್ಟ್ರದ ಕಾನೂನನ್ನು ಕೈಗೆತ್ತಿಕೊಂಡು ಮನಬಂದಂತೆ ಹತ್ಯೆಗಳನ್ನು ಮಾಡಲು ಅವಕಾಶ ಕೊಡಬಾರದು. ಉದ್ರಿಕ್ತ ಗುಂಪುಗಳ ಹಿಂಸಾತ್ಮಕ ನಡೆಗೆ ಪದೇಪದೇ ಅಮಾಯಕರು ಬಲಿಯಾಗದಂತೆ ರಕ್ಷಿಸಲು ದೃಢ ಹೆಜ್ಜೆಗಳನ್ನು ಸಾಧ್ಯವಾದಷ್ಟು ತ್ವರಿತವಾಗಿ ಇಡಬೇಕು. ಈ ಹಿಂಸೆ ದೇಶದ ಸಾಮಾನ್ಯ ಚಹರೆಯಾಗಲು ಬಿಡುವಂತಿಲ್ಲ. ದೇಶದ ಸಾಮಾನ್ಯ ಪ್ರಜೆಗಳು ಉದ್ರಿಕ ಗುಂಪುಗಳಿಗೆ ಬಲಿಯಾಗುವುದನ್ನು ಕಂಡು ರಾಷ್ಟ್ರ ಸುಮ್ಮನೆ ಕೂರಲು ಸಾಧ್ಯವಿಲ್ಲ. ಆಡಳಿತ ಸರ್ಕಾರ ಜನರ ಧ್ವನಿಗೆ ಕಿವಿಗೊಡಬೇಕು,” ಎಂದು ಮೋದಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕಿವಿಮಾತು ಹೇಳಿದೆ.

“ಯಾವುದೇ ಒಂದು ಜನಸಮೂಹವು ತಮ್ಮ ಒಂದು ಸಿದ್ಧಾಂತಕ್ಕಾಗಿ ಕಾನೂನನ್ನು ಕೈಗೆತ್ತಿಕೊಳ್ಳುವಂತಿಲ್ಲ. ಅಂತಹ ಸ್ಥಿತಿ ಅರಾಜಕತೆ, ಗೊಂದಲ, ಅವ್ಯವಸ್ಥೆಯನ್ನು ಸೂಚಿಸುತ್ತದೆ ಮತ್ತು ಹಿಂಸಾತ್ಮಕ ಸಮಾಜಕ್ಕೆ ಪ್ರೇರೇಪಿಸುತ್ತದೆ,” ಎಂದು ಗೋರಕ್ಷಣೆಯ ಹೆಸರಿನಲ್ಲಿ ನಡೆದ ಹತ್ಯೆಗಳನ್ನು ಸುಪ್ರೀಂ ಕೋರ್ಟ್ ವಿಶ್ಲೇಷಿಸಿದೆ. “ಕಾವಲು ಎನ್ನುವ ಶಬ್ದಕ್ಕೆ ರಕ್ಷಿಸುವುದು ಎನ್ನುವ ಅರ್ಥವಿದೆ. ಆದರೆ, ಗೋವು ಕಳ್ಳಸಾಗಣೆ ಮತ್ತು ಗೋವುಗಳ ಜೊತೆಗೆ ಕ್ರೂರವಾಗಿ ವರ್ತಿಸಲಾಗುತ್ತದೆ ಎನ್ನುವ ದೂರುಗಳನ್ನು ಕಾನೂನು ರಕ್ಷಕರು ಗಮನಿಸಿ ಕ್ರಮ ಕೈಗೊಳ್ಳಬೇಕು. ಗೋ ಕಳ್ಳಸಾಗಣೆಯಾಗದಂತೆ ತಡೆಯುವ ಹೊಣೆ ಸಂಪೂರ್ಣವಾಗಿ ಕಾನೂನು ರಕ್ಷಣೆಯ ಹೊಣೆ ಹೊತ್ತಿರುವ ಸಂಸ್ಥೆಗಳ ಮೇಲೆಯೇ ಇರಬೇಕು,” ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.

“ಸದ್ಯ ದೇಶದಲ್ಲಿ ದೊಂಬಿ ಪ್ರಭುತ್ವದ ವಿಚಾರವಾಗಿ ತುರ್ತು ಕ್ರಮದ ಅಗತ್ಯವಿರುವ ಪರಿಸ್ಥಿತಿ ಇದೆ,” ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, “ಎಲ್ಲರನ್ನೂ ಒಳಗೊಂಡ ಮತ್ತು ಎಲ್ಲರಿಗೂ ಅವಕಾಶವಿರುವ ಸಾಮಾಜಿಕ ವ್ಯವಸ್ಥೆಯನ್ನು ಬಲಪಡಿಸಿ ಸಂವಿಧಾನದ ಮೇಲೆ ಜನರ ವಿಶ್ವಾಸವನ್ನು ದೃಢಪಡಿಸಬೇಕು,” ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. “ಇದನ್ನು ಮೀರಿದ ಅಥವಾ ಇದಕ್ಕಿಂತ ಕಡಿಮೆಯಾಗಿರುವ ಕ್ರಮವನ್ನು ನ್ಯಾಯಾಲಯ ನಿರೀಕ್ಷಿಸುವುದಿಲ್ಲ,” ಎಂದು ಖಡಕ್ ಮಾತುಗಳಲ್ಲಿ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಎಚ್ಚರಿಸಿದೆ.

“ಕಾನೂನು ಮತ್ತು ಸುವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುವಂತೆ ಗಮನಿಸಿಕೊಂಡು ಶಾಂತಿ ಕಾಪಾಡುವುದು ಆಡಳಿತ ಸರ್ಕಾರದ ಕರ್ತವ್ಯ. ಆ ಮೂಲಕ ನಮ್ಮ ಜಾತ್ಯತೀತ ವಿಚಾರಧಾರೆ ಮತ್ತು ವಿವಿಧತೆಯಲ್ಲಿ ಏಕತೆಯ ಸಾಮಾಜಿಕ ಸ್ವರೂಪವನ್ನು ಒಂದು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಆಡಳಿತ ಕಾನೂನಿಗೆ ತಕ್ಕಂತೆ ನೆಲೆಗೊಳಿಸಬೇಕು,” ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. “ಗೊಂದಲ ಮತ್ತು ಅರಾಜಕತೆಯ ಸಂದರ್ಭದಲ್ಲಿ ರಾಷ್ಟ್ರವು ಸಕಾರಾತ್ಮಕವಾಗಿ ಮತ್ತು ಜವಾಬ್ದಾರಿಯುತವಾಗಿ ಸ್ಪಂದಿಸುವ ಮೂಲಕ ಸಂವಿಧಾನವು ಪ್ರಜೆಗಳಿಗೆ ನೀಡಿರುವ ಭರವಸೆಗಳನ್ನು ರಕ್ಷಿಸಬೇಕು,” ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ನೀಡಿದ ತೀರ್ಪು ಹೇಳಿದೆ.

ಇದನ್ನೂ ಓದಿ : ಲಿಂಚಿಂಗ್ ಕುರಿತು ಇಂದಿರಾ ಜೈಸಿಂಗ್ ಸುಪ್ರೀಂ ಕೋರ್ಟ್‌ಗೆ ಹೇಳಿದ್ದೇನು?

“ಒಬ್ಬ ವ್ಯಕ್ತಿ ಅಥವಾ ಒಂದು ಜನಸಮೂಹ ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಾರವನ್ನು ಹೊಂದಿದೆ ಎಂಬ ಅಭಿಪ್ರಾಯ ತಳೆದು, ಸ್ವತಃ ಕಾನೂನಾಗಿ ಬದಲಾಗಿ, ತಮ್ಮದೇ ಅಂದಾಜಿನ ಮೇಲೆ ತೋಚಿದಂತೆ ಅಮಾಯಕರನ್ನು ಶಿಕ್ಷಿಸುವುದನ್ನು ಕಾನೂನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನ್ಯಾಯ ತೀರ್ಮಾನವು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನಿಯೋಜನೆಗೊಂಡಿರುವ ಸಂಸ್ಥೆಗಳ ಜವಾಬ್ದಾರಿ ಎನ್ನುವುದನ್ನು ಉದ್ರಿಕ್ತ ಗುಂಪುಗಳು ಮರೆತಿವೆ. ಹೀಗೆ ನ್ಯಾಯ ತೀರ್ಮಾನದ ಉತ್ಸಾಹದಲ್ಲಿ ಯಾರಿಗೂ ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಾರ ನೀಡಲಾಗದು. ಪ್ರತಿಯೊಬ್ಬರಿಗೂ ತಮ್ಮ ಹಕ್ಕಿಗಾಗಿ ಹೋರಾಡುವ ಹಕ್ಕನ್ನು ಕಾನೂನು ನೀಡಿದೆ. ಯಾವುದೇ ವ್ಯಕ್ತಿಯನ್ನು ನ್ಯಾಯಾಲಯ ಅಪರಾಧಿ ಎಂದು ನಿರ್ಧರಿಸುವವರೆಗೂ ಆತ ಅಮಾಯಕನೇ ಆಗಿರುತ್ತಾನೆ. ಕಾನೂನು ರಕ್ಷಣೆಯ ಹೆಸರಿನಲ್ಲಿ ದೊಂಬಿ ನ್ಯಾಯವನ್ನು ನೀಡುವ ಅಧಿಕಾರ ಯಾವುದೇ ಸಮುದಾಯಕ್ಕೂ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಸೂಕ್ತ ನ್ಯಾಯ ಒದಗಿಸಲು ಕಾನೂನು ತನ್ನದೇ ವಿಧಾನದ ಮೂಲಕ ಕ್ರಮ ಕೈಗೊಳ್ಳಲಿದೆ,” ಎಂದು ನ್ಯಾಯಾಲಯ ಹೇಳಿದೆ.

“ಯಾವುದೇ ವ್ಯಕ್ತಿ ಅಥವಾ ಗುಂಪು ಎಂತಹುದೇ ಪರಿಸ್ಥಿತಿಯಲ್ಲಿಯೂ ಉದ್ರಿಕ್ತ ದೊಂಬಿ ಸಮೂಹವಾಗಿ ಪರಿವರ್ತನೆಗೊಂಡು ತನ್ನದೇ ರೀತಿಯಲ್ಲಿ ನ್ಯಾಯ ನೀಡುವ ಹಕ್ಕು ಪಡೆದಿಲ್ಲ ಮತ್ತು ಯಾವುದೇ ವ್ಯಕ್ತಿಯನ್ನು ಅಪರಾಧಿ ಎಂದು ಪರಿಗಣಿಸಿ ನಡೆದುಕೊಳ್ಳುವ ಹಾಗಿಲ್ಲ,” ಎಂದು ನ್ಯಾಯಪೀಠವು ಒತ್ತಿ ಹೇಳಿದೆ. “ಹೀಗೆ ಸ್ಥಳದಲ್ಲಿಯೇ ದೊಂಬಿ ನ್ಯಾಯ ನೀಡುವುದು ನಾಗರಿಕ ಸಮಾಜವು ಗೌರವಿಸುವ ದೇಶದ ಕಾನೂನು ವ್ಯವಸ್ಥೆಯ ಮೂಲತತ್ವಗಳಿಗೆ ವಿರುದ್ಧ. ಅಂತಹ ಕಲ್ಪನೆಗಳು ಮತ್ತು ನಿರೂಪಣೆಗಳು ಕಾನೂನಿನ ವರ್ಚಸ್ಸಿಗೆ ಕಪ್ಪು ಮಸಿ ಬಳಿಯಲಿವೆ ಮತ್ತು ರೇಜಿಗೆ ಸೃಷ್ಟಿಸುವ ಕ್ರಮವಾಗಲಿವೆ,” ಎಂದು ಹೇಳಿರುವ ಸುಪ್ರೀಂ ಕೋರ್ಟ್, “ಕಾನೂನು ಸುವ್ಯವಸ್ಥೆಯ ಹೊಣೆ ಹೊತ್ತಿರುವ ಸಂಸ್ಥೆಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಗೋಹತ್ಯೆಗಳು ಅಥವಾ ಇತರ ಯಾವುದೇ ರೀತಿಯ ಉದ್ರಿಕ್ತ ಗುಂಪುಗಳಿಂದ ನಡೆಯುವ ಸಾಮೂಹಿಕ ಹತ್ಯೆಗಳನ್ನು ತಡೆಯುವ ಜವಾಬ್ದಾರಿ ಸಂಸ್ಥೆಗಳ ಮೇಲಿದೆ,” ಎಂದು ಅಭಿಪ್ರಾಯಪಟ್ಟಿದೆ.

“ಯಾವುದೇ ವ್ಯಕ್ತಿಗೆ ಕಾನೂನು ರಕ್ಷಣೆಯ ಹೊಣೆ ತನ್ನ ಮೇಲಿದೆ ಎಂದು ಯೋಚಿಸುವ ಅಧಿಕಾರ ಇರುವುದಿಲ್ಲ. ಒಂದು ದೇಶದ ಕಾನೂನು ಅಂತಹ ಆಲೋಚನೆಗೆ ಅವಕಾಶ ನೀಡುವುದಿಲ್ಲ. ಅಂತಹ ಆಲೋಚನೆಗಳಿದ್ದಲ್ಲಿ ಅದನ್ನು ಬಿಡುವಂತೆ ತಕ್ಷಣವೇ ಕಾನೂನು ರಕ್ಷಕರು ಗಮನಹರಿಸಬೇಕು,” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಭವಿಷ್ಯದಲ್ಲಿ ಉದ್ರಿಕ್ತ ದೊಂಬಿ ಹತ್ಯೆಗಳನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ರಕ್ಷಣಾತ್ಮಕ ಮತ್ತು ಪರಿಹಾರಾತ್ಮಕ ಕ್ರಮಗಳನ್ನು ಕೈಗೊಳ್ಳುವಂತೆ ನ್ಯಾಯಾಲಯ ಸೂಚಿಸಿದೆ. ಈ ನಿಟ್ಟಿನಲ್ಲಿ ವಿವರವಾದ ಮಾರ್ಗದರ್ಶಿ ಸೂತ್ರಗಳನ್ನೂ ನ್ಯಾಯಾಲಯ ನೀಡಿದೆ. ಹೀಗೆ ದೊಂಬಿ ಹತ್ಯೆಗಳಲ್ಲಿ ಭಾಗವಹಿಸುವ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳಲು ಸಂಸತ್ತು ಪ್ರತ್ಯೇಕ ಕಾನೂನನ್ನು ತಂದು ಶಿಕ್ಷಿಸಬೇಕು,” ಎಂದೂ ನ್ಯಾಯಾಲಯ ಆದೇಶಿಸಿದೆ.

ಗೋವಿನ ಹೆಸರಿನಲ್ಲಿ ಹತ್ಯೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ತೆಹ್ಸೀನ್ ಪೂನಾವಾಲ ಮತ್ತು ಮಹಾತ್ಮ ಗಾಂಧಿ ಅವರ ಮರಿಮೊಮ್ಮಗ ತುಷಾರ್ ಗಾಂಧಿ ಅವರು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ಡಿ ವೈ ಚಂದ್ರಚೂಡ್ ಅವರಿದ್ದ ಪೀಠವು ಈ ತೀರ್ಪನ್ನು ನೀಡಿದೆ. ಹಿರಿಯ ವಕೀಲರಾದ ಇಂದಿರಾ ಜೈಸಿಂಗ್, ಕಾಲಿನ್ ಗೊನ್ಸಾಲ್ವೆಸ್ ಮತ್ತು ಸಂಜಯ್ ಹೆಗ್ಡೆ ಅವರು ಅರ್ಜಿದಾರರ ಪರವಾಗಿ ವಾದಿಸಿದ್ದರು. ಎಎಸ್‌ಜಿ ಪಿ ನರಸಿಂಹ ಮತ್ತು ಎ ಎಸ್ ನಾಡಕರ್ಣಿ ಅವರು ಸರ್ಕಾರದ ಪರವಾಗಿ ವಾದಿಸಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More